
ಚಿತೆಯಾಗುತ್ತಿದೆ ಅರಣ್ಯ, ಮುರಿಯುತ್ತಿದೆ ಆಹಾರ ಸರಪಳಿ: ಕಾಡ್ಗಿಚ್ಚಿಗೆ ವನ್ಯಜೀವಿಗಳ ರೋದನ
ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ 7 ಸಾವಿರಕ್ಕೂ ಹೆಚ್ಚು ಕಾಡ್ಗಿಚ್ಚಿನ ಪ್ರಕರಣಗಳು ದಾಖಲಾಗಿದ್ದು, ಮನುಷ್ಯನ ಹಸ್ತಕ್ಷೇಪದಿಂದಾಗಿ ಅರಣ್ಯದ ಆಹಾರ ಸರಪಳಿ ಮತ್ತು ಜೈವಿಕ ವೈವಿಧ್ಯತೆ ಅಪಾಯದಲ್ಲಿದೆ.
ಬೇಸಿಗೆಯ ಆಗಮನವೆಂದರೆ ಪ್ರಕೃತಿಯ ಒಡಲಿನಲ್ಲಿ ಒಂದು ಬಗೆಯ ಆತಂಕ. ಹಸಿರಿನಿಂದ ಕಂಗೊಳಿಸಬೇಕಾದ ಅರಣ್ಯಗಳು ಒಣಗಿ ನಿಂತಿರುವಾಗ, ಸಣ್ಣದೊಂದು ಕಿಡಿ ಸಾಕು, ಇಡೀ ಅರಣ್ಯವನ್ನೇ ಕ್ಷಣಮಾತ್ರದಲ್ಲಿ ಭಸ್ಮ ಮಾಡಲು. ಪ್ರತಿ ವರ್ಷ ಸಾವಿರಾರು ಎಕರೆ ಅರಣ್ಯ ಪ್ರದೇಶವು ಕಾಡ್ಗಿಚ್ಚಿಗೆ ಆಹುತಿಯಾಗುತ್ತಿರುವುದು ಕೇವಲ ಮರ-ಗಿಡಗಳ ನಾಶದ ಕಥೆಯಲ್ಲ, ಬದಲಾಗಿ ಇಡೀ ಜೀವಸಂಕುಲದ ಆಹಾರ ಸರಪಳಿಯ ಕೊಂಡಿಯೇ ಕಡಿತಗೊಳ್ಳುತ್ತಿರುವ ಭೀಕರ ದುರಂತ.
ಕಾಡ್ಗಿಚ್ಚು ಅರಣ್ಯದ ಸೂಕ್ಷ್ಮ ಸಮತೋಲನವನ್ನು ಏರುಪೇರು ಮಾಡುವುದು ನಿಶ್ಚಿತ. ಒಣಗಿದ ಎಲೆಗಳು ಮತ್ತು ಬಿದಿರು ಮೆಳೆಗಳು ಬೆಂಕಿಗೆ ತುಪ್ಪ ಸುರಿದಂತಾಗಿ, ಬೀಸುವ ಗಾಳಿಯ ವೇಗಕ್ಕೆ ಕಿಲೋಮೀಟರ್‌ಗಟ್ಟಲೆ ಬೆಂಕಿ ವ್ಯಾಪಿಸುತ್ತದೆ. ಕೇವಲ ಆರು ತಿಂಗಳ ಅಂತರದಲ್ಲಿ ರಾಜ್ಯದಲ್ಲಿ ೭ ಸಾವಿರಕ್ಕೂ ಹೆಚ್ಚು ಬೆಂಕಿ ಅನಾಹುತದ ಪ್ರಕರಣಗಳು (Fire Alerts) ದಾಖಲಾಗಿದ್ದು, ಇದರಿಂದಾಗಿ ಸುಮಾರು ಮೂರು ಸಾವಿರ ಎಕರೆಗೂ ಹೆಚ್ಚು ಬೆಲೆಬಾಳುವ ಅರಣ್ಯ ಭೂಮಿ ಆಹುತಿಯಾಗಿದೆ. ಇದೇ ರೀತಿ, ಕಳೆದ ಎರಡು ತಿಂಗಳಲ್ಲೇ 1,800 ಪ್ರಕರಣಗಳು ವರದಿಯಾಗಿರುವುದು ಅರಣ್ಯದ ಮೂಕ ರೋದನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಇಂತಹ ಭಯಾನಕ ಕಾಡ್ಗಿಚ್ಚಿನಿಂದಾಗಿ ಅರಣ್ಯ ಭೂಮಿ ಮಾತ್ರವಲ್ಲದೆ, ನೂರಾರು ಮುಗ್ಧ ವನ್ಯಜೀವಿಗಳು ಸಹ ಸಜೀವ ದಹನವಾಗುತ್ತಿರುವ ಹೃದಯವಿದ್ರಾವಕ ಘಟನೆಗಳು ನಡೆಯುತ್ತಿವೆ. ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನವು ದಿನೇ ದಿನೇ ಕಿರಿದಾಗುತ್ತಿದ್ದು, ಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಮುಖ ಮಾಡುತ್ತಿರುವುದಕ್ಕೂ ಇದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಮತ್ತೊಂದೆಡೆ, ಕಾಳ್ಗಿಚ್ಚಿನ ಶಾಖಕ್ಕೆ ಅಸಂಖ್ಯಾತ ಸೂಕ್ಷ್ಮಜೀವಿಗಳು ಮಾರಣಹೋಮಕ್ಕೆ ತುತ್ತಾಗುತ್ತಿದ್ದು, ಇದರಿಂದಾಗಿ ಅರಣ್ಯ ಭೂಮಿಯ ನೈಸರ್ಗಿಕ ಫಲವತ್ತತೆಯೇ ನಶಿಸಿಹೋಗುತ್ತಿದೆ.
ಕಾಡ್ಗಿಚ್ಚಿನ ಭೀತಿ ಅತಿ ಹೆಚ್ಚಾಗಿರುವುದು ಚಾಮರಾಜನಗರ (ಬಂಡೀಪುರ ಮತ್ತು ಬಿಆರ್‌ಟಿ), ಬೆಳಗಾವಿ, ರಾಮನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ. ಅರಣ್ಯ ಇಲಾಖೆಯ ಆತಂಕಕಾರಿ ವರದಿಯ ಪ್ರಕಾರ, ರಾಜ್ಯದ ಒಟ್ಟು ಅರಣ್ಯ ಪ್ರದೇಶದಲ್ಲಿ ಸುಮಾರು 22,178 ಚದರ ಕಿ.ಮೀ (ಶೇ. 99) ನಷ್ಟು ಭೂಮಿಯು ಕಾಳ್ಗಿಚ್ಚಿಗೆ ತುತ್ತಾಗುವ ಅತಿ ಹೆಚ್ಚಿನ ಅಪಾಯವಿರುವ 'ಅತೀ ಸಂವೇದನಾಶೀಲ' (Highly Vulnerable) ವಲಯ ಎಂದು ಗುರುತಿಸಲ್ಪಟ್ಟಿದೆ.
ಮೂಕ ಪ್ರಾಣಿ-ಪಕ್ಷಿಗಳ ಕರುಣಾಜನಕ ರೋಧನೆ
ಬೆಂಕಿ ಹರಡುವ ವೇಗಕ್ಕೆ ಚಿರತೆ ಅಥವಾ ಜಿಂಕೆಯಂತಹ ಚುರುಕಿನ ಪ್ರಾಣಿಗಳು ಹೇಗೋ ಪ್ರಾಣ ಉಳಿಸಿಕೊಳ್ಳಲು ಓಡಿ ಪರಾರಿಯಾಗಬಹುದು. ಆದರೆ, ಮಣ್ಣಿನ ಸಂದುಗಳಲ್ಲಿ, ಮರದ ಪೊಟರೆಗಳಲ್ಲಿ ನಿಧಾನವಾಗಿ ಬದುಕುವ ಆಮೆಗಳು, ಮುಳ್ಳುಹಂದಿಗಳು ಮತ್ತು ಹಲ್ಲಿಗಳ ಪಾಡೇನು? ಬೆಂಕಿಯ ಕೆನ್ನಾಲಗೆ ಮೈಮೇಲೆ ಹರಿದಾಗ ಅವುಗಳಿಗೆ ಅಡಗಿಕೊಳ್ಳಲು ಸುರಕ್ಷಿತ ಜಾಗವಿರುವುದಿಲ್ಲ, ತಪ್ಪಿಸಿಕೊಂಡು ಓಡಲು ಶಕ್ತಿಯೂ ಇರುವುದಿಲ್ಲ. ಬೆಂಕಿಯ ಝಳಕ್ಕೆ ಅವು ಅಲ್ಲೇ ಬೆಂದು ಬೂದಿಯಾಗುವ ಕರುಣಾಜನಕ ಸ್ಥಿತಿ ಹೇಳತೀರದು. ಬೇಸಿಗೆಯೆಂದರೆ ಅದು ಪಕ್ಷಿಗಳ ಸಂತಾನೋತ್ಪತ್ತಿಯ ಮಹತ್ವದ ಕಾಲ. ಮರದ ಕೊಂಬೆಗಳ ಮೇಲಿರುವ ಗೂಡುಗಳಲ್ಲಿ ಇನ್ನು ರೆಕ್ಕೆ ಮೂಡದ, ಹಾರಲಾರದ ಪುಟ್ಟ ಮುಗ್ಧ ಮರಿಗಳಿರುತ್ತವೆ. ಬೆಂಕಿ ಇಡೀ ಮರವನ್ನು ಆವರಿಸಿದಾಗ, ಹಾರಬಲ್ಲ ತಾಯಿ ಹಕ್ಕಿ ಸುಲಭವಾಗಿ ಹಾರಿ ಹೋಗಬಹುದು. ಆದರೆ, ತನ್ನ ಕಣ್ಣೆದುರೇ ತನ್ನ ಮರಿಗಳು ಬೆಂಕಿಗೆ ಆಹುತಿಯಾಗುವುದನ್ನು ಕಂಡು ಆ ತಾಯಿ ಹಕ್ಕಿ ಪಡುವ ವೇದನೆ ಅಕ್ಷರಗಳಿಗೆ ನಿಲುಕದ್ದು. ಎಷ್ಟೋ ಬಾರಿ ತನ್ನ ಮರಿಗಳನ್ನು ಬಿಟ್ಟುಹೋಗಲಾರದೆ, ಮರುಗುವ ತಾಯಿ ಹಕ್ಕಿಗಳು ಕೂಡ ಅದೇ ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಪ್ರಾಣ ತ್ಯಜಿಸುತ್ತವೆ.
ಚಾರ್ಮಾಡಿ ಘಾಟ್‌ನ ಮಲಯ ಮಾರುತ ಪ್ರವಾಸಿ ತಾಣದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಫೆಬ್ರವರಿ 2 ರಂದು ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ತೀವ್ರವಾದ ಗಾಳಿಯ ಜೊತೆಗೆ ಬೆಂಕಿ ವೇಗವಾಗಿ ಹರಡಿ, ಅಪಾರ ಪ್ರಮಾಣದ ಹಸಿರು ಹುಲ್ಲುಗಾವಲು ಮತ್ತು ಅಪರೂಪದ ಔಷಧೀಯ ಸಸ್ಯಗಳು ಕರಕಲಾಗಿದ್ದವು. ರಸ್ತೆಯ ಪಕ್ಕದಲ್ಲೇ ಬೆಂಕಿ ಹೊತ್ತಿಕೊಂಡಿದ್ದರಿಂದ ವಾಹನ ಸವಾರರು ದಟ್ಟ ಹೊಗೆಯಿಂದಾಗಿ ಉಸಿರುಗಟ್ಟಿ ಪರದಾಡಿದ್ದರು. ಇತ್ತ ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿಯೂ ಸಣ್ಣಪುಟ್ಟ ಬೆಂಕಿಯ ಘಟನೆಗಳು ವರದಿಯಾಗಿದ್ದು, ಇಲಾಖೆಯು ಹದ್ದಿನ ಕಣ್ಣಿಟ್ಟಿದೆ. ವಿಶೇಷವಾಗಿ ಈ ಭಾಗಗಳಲ್ಲಿ ಸಫಾರಿ ಪುನಾರಂಭಗೊಂಡಿರುವುದರಿಂದ ಪ್ರವಾಸಿಗರ ಅಜಾಗರೂಕತೆ ಅಥವಾ ಸ್ಥಳೀಯರ ಅಚಾತುರ್ಯದಿಂದ ಕಾಳ್ಗಿಚ್ಚು ಇನ್ನಷ್ಟು ವ್ಯಾಪಿಸುವ ಸಾಧ್ಯತೆಗಳಿವೆ. ಮುಂದಿನ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ತಾಪಮಾನ ಇನ್ನೂ ಹೆಚ್ಚಾಗುವುದರಿಂದ ಈ ದುರಂತಗಳ ಸಂಖ್ಯೆ ಏರಿಕೆಯಾಗುವ ಆತಂಕವಿದೆ.
ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರು "ದ ಫೆಡರಲ್ ಕರ್ನಾಟಕ"ದೊಂದಿಗೆ ಈ ಗಂಭೀರ ವಿಚಾರವನ್ನು ಹಂಚಿಕೊಂಡಿದ್ದಾರೆ. "ಕಾಡ್ಗಿಚ್ಚು ಸೃಷ್ಟಿಯಾಗುವುದರ ಹಿಂದೆ ಬಹುತೇಕ ಮಾನವನ ಮೂರ್ಖತನದ ಹಸ್ತಕ್ಷೇಪಗಳೇ ಕಾರಣ. ಕೇವಲ ಬೆರಳೆಣಿಕೆಯಷ್ಟು ಮಾತ್ರವೇ ನೈಸರ್ಗಿಕ ವಿಕೋಪಗಳಿಂದ ಸೃಷ್ಟಿಯಾಗುತ್ತವೆ. 'ಕಾಡ್ಗಿಚ್ಚಿನಿಂದ ಏನೂ ಆಗುವುದಿಲ್ಲ, ಕೇವಲ ಅರಣ್ಯ ನಾಶವಾಗಿ ಮತ್ತೆ ಹೊಸದಾಗಿ ಸೃಷ್ಟಿಯಾಗುತ್ತದೆ' ಎಂಬುದೆಲ್ಲ ಶುದ್ಧ ಸುಳ್ಳು. ಒಂದು ಕಾಡ್ಗಿಚ್ಚಿನಿಂದ ಇಡೀ ಆಹಾರ ಸರಪಳಿ ಕಡಿತಗೊಳ್ಳುವುದು ಮಾತ್ರವಲ್ಲ, ಪರಿಸರದ ಸೂಕ್ಷ್ಮ ಸಮತೋಲನವು ಹಂತಹಂತವಾಗಿ ಸಂಪೂರ್ಣವಾಗಿ ಏರುಪೇರುಗೊಳ್ಳುತ್ತದೆ. ಒಮ್ಮೆ ಕಾಡ್ಗಿಚ್ಚು ಕಾಣಿಸಿಕೊಂಡರೆ, ಅಸಂಖ್ಯಾತ ಕ್ರಿಮಿಕೀಟಗಳು ಹೊತ್ತಿ ಉರಿಯುತ್ತವೆ. ನೆಲದಲ್ಲಿ ಬಿದ್ದಿರುವ ತರಗೆಲೆಗಳು ಸುಟ್ಟು ಬೂದಿಯಾಗುತ್ತವೆ. ವಾಸ್ತವದಲ್ಲಿ ಈ ತರಗೆಲೆಯಿಂದಲೇ ಭೂಮಿಗೆ ಫಲವತ್ತತೆ ಸೃಷ್ಟಿಯಾಗುವುದು. ಇಂತಹ ಮೂಲ ತರಗೆಲೆಗಳೇ ನಾಶಗೊಂಡರೆ, ಭೂಮಿಯ ಫಲವತ್ತತೆಯ ಕಥೆಯೇನು? ವೇಗವಾಗಿ ಚಲಿಸಲು ಸಾಧ್ಯವಾಗದ ಸಣ್ಣ ಪ್ರಾಣಿಗಳು, ಹಕ್ಕಿಗಳು ಮತ್ತು ಸರೀಸೃಪಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತವೆ," ಎಂದು ಅವರು ವಿವರಿಸಿದರು.
"ಕಾಡಿನ ಮಿಂಚುಹುಳಗಳು ಇದೇ ತರಗೆಲೆಯಲ್ಲಿ ಎರಡು ವರ್ಷಗಳ ಕಾಲ ವಾಸಿಸುತ್ತವೆ; ಆ ಬಳಿಕವಷ್ಟೇ ಅವು ಮರಿ ಮಾಡುತ್ತವೆ. ಇಂತಹ ಅಮೂಲ್ಯ ಕೀಟಗಳೆಲ್ಲವೂ ಕಾಡ್ಗಿಚ್ಚಿಗೆ ಬಲಿಯಾಗುತ್ತಿವೆ. ದಪ್ಪನೆಯ ತೊಗಟೆ (Thick Bark) ಹೊಂದಿರುವ ಮರಗಳು, ಮರಗಳ ಬುಡದ ಭಾಗ ಅಥವಾ ಭೂಮಿಯ ಅಡಿಯಲ್ಲಿ ಗಟ್ಟಿಯಾಗಿರುವ ಬೇರುಗಳು, ಮೇಲ್ಭಾಗ ಸುಟ್ಟುಹೋದರೂ ಭೂಮಿಯ ಒಳಗಿರುವ ಈ ಭಾಗದಿಂದ ಹೊಸ ಚಿಗುರುಗಳು ಮೂಡುವ ಲಿಗ್ನೋಟ್ಯೂಬರ್‌ಗಳು (Lignotubers) ಹಾಗೂ ಕಾಳ್ಗಿಚ್ಚಿನ ನಂತರ ಮರದ ಕಾಂಡದ ಮೇಲೆ ಅಡಗಿರುವ ಸುಪ್ತ ಮೊಗ್ಗುಗಳು ಸಕ್ರಿಯಗೊಂಡು ಹೊಸ ಎಲೆಗಳು ಬರಲು ಪ್ರಾರಂಭವಾಗುವ 'ಎಪಿಕಾರ್ಮಿಕ್ ಬಡ್ಸ್' (Epicormic Buds) ಮರಗಳಷ್ಟೇ ಕಾಡ್ಗಿಚ್ಚಿನಿಂದ ಹೇಗೋ ಬದುಕುಳಿಯುತ್ತವೆ. ಹೀಗಾದರೆ ಭವಿಷ್ಯದಲ್ಲಿ ಕಾಡಿನಲ್ಲಿ ಕೇವಲ ಏಕ ಜಾತಿಯ ಮರಗಳಷ್ಟೇ ಉಳಿದುಕೊಳ್ಳುವ ಅಪಾಯವಿದೆ. ಒಣಗಿರುವ ಮರಗಳಲ್ಲಿರುವ ಗೆದ್ದಲನ್ನು ಕರಡಿ ಮತ್ತು ಚಿಪ್ಪುಹಂದಿಗಳು ತಮ್ಮ ಆಹಾರದಲ್ಲಿ ಶೇಕಡಾ ೪೦ರಷ್ಟು ಬಳಕೆ ಮಾಡುತ್ತವೆ. ಕಾಡ್ಗಿಚ್ಚಿನ ಬಳಿಕ ಅವುಗಳ ಆಹಾರ ಸರಪಳಿಯೇ ಸಂಪೂರ್ಣ ತುಂಡಾಗುತ್ತದೆ. ಮರಗಳ ಪೊಟರೆಯಲ್ಲಿ ಕರಡಿ, ಚಿರತೆಗಳು ತಮ್ಮ ಮರಿಗಳನ್ನು ಸುರಕ್ಷಿತವಾಗಿ ಸಾಕುತ್ತವೆ. ಬೆಂಕಿಯ ಕೆನ್ನಾಲಗೆಗೆ ಈ ಮರಿಗಳು ಬೆಂದುಹೋದರೆ, ಭವಿಷ್ಯದಲ್ಲಿ ನಾವು ಈ ಪ್ರಾಣಿಗಳನ್ನು ಕೇವಲ ಚಿತ್ರಗಳಲ್ಲಷ್ಟೇ ನೋಡಬೇಕಾಗುತ್ತದೆ. ದಟ್ಟವಾದ ಹೊಗೆಯಿಂದಾಗಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತದೆ ಮತ್ತು ಇದು ಜಾಗತಿಕ ತಾಪಮಾನ ಹೆಚ್ಚಳಕ್ಕೂ (Global Warming) ಕಾರಣವಾಗುತ್ತದೆ," ಎಂದು ಅವರು ತೀವ್ರ ಆತಂಕ ವ್ಯಕ್ತಪಡಿಸಿದರು.
ಜನರಲ್ಲಿ ಜಾಗೃತಿ ಮೂಡುವುದು ಅತ್ಯಗತ್ಯ
ಹಸು ಮತ್ತು ದನಗಳಿಗೆ ಕಾಡಿನಲ್ಲಿ ಹೊಸ ಹುಲ್ಲು ಬೆಳೆಯಲಿ ಎಂಬ ಸ್ವಾರ್ಥ ಉದ್ದೇಶದಿಂದಲೇ ಬಹುತೇಕರು ಕಾಡಿಗೆ ಬೆಂಕಿ ಹಾಕುತ್ತಾರೆ. ಅರಣ್ಯ ಇಲಾಖೆ ಸಿಬ್ಬಂದಿಯ ಮೇಲಿನ ವೈಯಕ್ತಿಕ ಕೋಪಕ್ಕೆ ಇಡೀ ಕಾಡಿಗೆ ಬೆಂಕಿ ಹಾಕಿರುವ ಅನೇಕ ವಿಕೃತ ನಿದರ್ಶನಗಳು ನಮ್ಮ ಮುಂದಿವೆ. ಇದರೊಂದಿಗೆ ಜಾತ್ರೆಯ ನೆಪದಲ್ಲಿ ಅರಣ್ಯ ಪ್ರವೇಶಿಸುವ ಕಿಡಿಗೇಡಿಗಳು ಬೆಂಕಿ ಹಾಕುವ ಸಾಧ್ಯತೆಗಳಿವೆ. ಕಾಡಂಚಿನಲ್ಲಿರುವ ರೈತರು ತಮ್ಮ ಜಮೀನು ಸ್ವಚ್ಛಗೊಳಿಸಲು ಹಚ್ಚುವ ಬೆಂಕಿ ನಿಯಂತ್ರಣ ತಪ್ಪಿ ಕಾಡಿಗೆ ಹರಡುವುದು ಸಾಮಾನ್ಯವಾಗಿದೆ. ಇದರ ಜೊತೆಗೆ, ಪ್ರವಾಸಿಗರು ಕ್ಯಾಂಪ್ ಫೈರ್, ಮೋಜು-ಮಸ್ತಿಯ ನೆಪದಲ್ಲಿ ಕಾಡಿನೊಳಗೆ ಅಕ್ರಮವಾಗಿ ತಂಬಾಕು ಸೇವಿಸುವ ಹುಚ್ಚಾಟದಿಂದ ಬೇಸಿಗೆಯಲ್ಲಿ ಇನ್ನಷ್ಟು ಅಗ್ನಿ ಅವಘಡಗಳು ಸೃಷ್ಟಿಯಾಗುತ್ತಿವೆ. ಅರಣ್ಯ ಇಲಾಖೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, ಶೇಕಡಾ ೯೦ಕ್ಕೂ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ಮಾನವ ನಿರ್ಮಿತ ಎನ್ನುವುದು ವಿಪರ್ಯಾಸ. ಇಂತಹ ಮಾನವ ನಿರ್ಮಿತ ದುರಂತಗಳನ್ನು ತಪ್ಪಿಸಲು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಬೇಕಿದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು.
ವನ್ಯಜೀವಿ ಛಾಯಾಗ್ರಾಹಕ ರಮೇಶ್ ಅವರು "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, "ಕಾಡ್ಗಿಚ್ಚು ತಡೆಗಟ್ಟುವುದು ಕೇವಲ ಅರಣ್ಯ ಇಲಾಖೆಯ ಸಿಬ್ಬಂದಿಯ ಕೆಲಸವಲ್ಲ, ಇದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಆದ್ಯ ಕರ್ತವ್ಯ. ಬೆಂಕಿ ಒಂದು ಬದಿಯಿಂದ ಇನ್ನೊಂದು ಬದಿಗೆ ಹರಡದಂತೆ ಕಾಡಿನ ಮಧ್ಯೆ ಗಿಡಗಂಟಿಗಳನ್ನು ತೆರವುಗೊಳಿಸಿ ನಿರ್ಮಿಸುವ 'ಫೈರ್ ಲೈನ್'ಗಳ ಸಂಖ್ಯೆಯನ್ನು ಸಮರೋಪಾದಿಯಲ್ಲಿ ಹೆಚ್ಚಿಸಬೇಕು. ವಾಚ್ ಟವರ್‌ಗಳ ಮೂಲಕ ಹಗಲಿರುಳು ಸದಾ ನಿಗಾ ವಹಿಸಬೇಕು. ಉಪಗ್ರಹ ಆಧಾರಿತ ಮುನ್ಸೂಚನಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ಸಣ್ಣ ಬೆಂಕಿ ಕಾಣಿಸಿಕೊಂಡ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತ ಸಂದೇಶ ಹೋಗುವಂತೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು," ಎಂದು ಸಲಹೆ ನೀಡಿದರು.
ಸಚಿವರ ಭರವಸೆಗಳೇನು?
ಈ ವರ್ಷ ಕಾಡ್ಗಿಚ್ಚಿನ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಲು ಎಲ್ಲ ಅಗತ್ಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಬೆಂಕಿಯನ್ನು ತ್ವರಿತವಾಗಿ ಪತ್ತೆಹಚ್ಚಲು ಅತ್ಯಾಧುನಿಕ ಡ್ರೋನ್ ಮತ್ತು ಸ್ಯಾಟಲೈಟ್ ಆಧಾರಿತ ವ್ಯವಸ್ಥೆಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಸಿಬ್ಬಂದಿಯ ಕಾಲಿನ ನಡಿಗೆಯ ಗಸ್ತನ್ನು (Foot Patrolling) ತಕ್ಷಣದಿಂದಲೇ ಹೆಚ್ಚಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಇತ್ತೀಚೆಗೆ ಭರವಸೆ ನೀಡಿದ್ದಾರೆ.
ಕಾಡ್ಗಿಚ್ಚು ತಡೆಗೆ ಏನೆಲ್ಲ ಯೋಜನೆಗಳಿವೆ?
ದಟ್ಟ ಅರಣ್ಯದಲ್ಲಿ ಕಾಡ್ಗಿಚ್ಚು (Forest Fire) ತಡೆಗಟ್ಟುವುದು ಅತ್ಯಂತ ಸವಾಲಿನ ಹಾಗೂ ಸಾಹಸದ ಕೆಲಸ. ಇದಕ್ಕಾಗಿ ಅರಣ್ಯ ಇಲಾಖೆಯು ತಾಂತ್ರಿಕ ಮತ್ತು ಸಾಂಪ್ರದಾಯಿಕ ಎರಡೂ ರೀತಿಯ ಮಾರ್ಗಗಳನ್ನು ಅಳವಡಿಸಿಕೊಂಡಿದೆ. ಕಾಡಿನ ಮಧ್ಯೆ ನಿರ್ದಿಷ್ಟ ಅಗಲದ ಜಾಗದಲ್ಲಿ ಬೆಳೆದಿರುವ ಗಿಡ-ಗಂಟೆಗಳನ್ನು ಕಡಿದು, ನೆಲವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಕೃತಕ 'ಬೆಂಕಿ ರೇಖೆ' (ಫೈರ್ ಲೈನ್) ನಿರ್ಮಿಸಲಾಗುತ್ತದೆ. ಇದರಿಂದ ಕಾಡಿನ ಒಂದು ಭಾಗದಲ್ಲಿ ಹತ್ತಿದ ಬೆಂಕಿ, ಮತ್ತೊಂದು ಭಾಗಕ್ಕೆ ಹರಡದಂತೆ ತಡೆಯಲು ಸಾಧ್ಯವಾಗುತ್ತದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯದ ಅಂಚಿನಲ್ಲಿರುವ ಒಣಗಿದ ಹುಲ್ಲು ಮತ್ತು ಎಲೆಗಳನ್ನು ಇಲಾಖೆಯ ಉಸ್ತುವಾರಿಯಲ್ಲೇ ನಿಯಂತ್ರಿತವಾಗಿ ಸುಡಲಾಗುತ್ತದೆ. ಇದರಿಂದ ಆಕಸ್ಮಿಕ ಬೆಂಕಿ ಹರಡಲು ಬೇಕಾದ 'ಇಂಧನ'ವೇ ಸಿಗದಂತಾಗುತ್ತದೆ. ಬೇಸಿಗೆಯ ೪ ರಿಂದ ೫ ತಿಂಗಳುಗಳ ಕಾಲ ಕಾಡಿನ ಪರಿಚಯವಿರುವ ಸ್ಥಳೀಯ ಬುಡಕಟ್ಟು ಜನರನ್ನು ಅಥವಾ ಯುವಕರನ್ನು 'ಫೈರ್ ವಾಚರ್ಸ್' ಆಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗುತ್ತದೆ. ಇವರು ಕಾಡಿನ ಎತ್ತರದ ಪ್ರದೇಶಗಳಲ್ಲಿ ನಿರ್ಮಿಸಿರುವ ಗೋಪುರಗಳಿಂದ (Watch Towers) ಎಲ್ಲಾದರೂ ಹೊಗೆ ಕಾಣಿಸುತ್ತದೆಯೇ ಎಂದು ಹದ್ದಿನ ಕಣ್ಣಿಡುತ್ತಾರೆ. ಭಾರತೀಯ ಅರಣ್ಯ ಸಮೀಕ್ಷೆ (FSI) ಉಪಗ್ರಹಗಳ ಮೂಲಕ ನಿರಂತರ ಕಣ್ಗಾವಲು ಇರಿಸಿದ್ದು, ಕಾಡಿನ ಎಲ್ಲಾದರೂ ತಾಪಮಾನ ದಿಢೀರ್ ಹೆಚ್ಚಾದರೆ ಅಥವಾ ಬೆಂಕಿ ಕಾಣಿಸಿಕೊಂಡರೆ ತಕ್ಷಣವೇ ಆಯಾ ವಲಯ ಅರಣ್ಯಾಧಿಕಾರಿಗಳ ಮೊಬೈಲ್‌ಗೆ ಅಲರ್ಟ್ ಕಳುಹಿಸುತ್ತದೆ. ಮನುಷ್ಯರು ಕಾಲ್ನಡಿಗೆಯಲ್ಲಿ ತಲುಪಲಾಗದ ಕಡಿದಾದ ಗುಡ್ಡಗಾಡು ಪ್ರದೇಶಗಳಲ್ಲಿ ಬೆಂಕಿಯ ತೀವ್ರತೆ ಮತ್ತು ಅದು ಹರಡುವ ದಿಕ್ಕನ್ನು ನಿಖರವಾಗಿ ತಿಳಿಯಲು ಆಧುನಿಕ ಡ್ರೋನ್‌ಗಳನ್ನು ಬಳಸಲಾಗುತ್ತಿದೆ.
ಬೆಂಕಿ ನಂದಿಸುವ ಕಾರ್ಯಾಚರಣೆ ಹೇಗೆ?
ಅರಣ್ಯದೊಳಗೆ ಬೆಂಕಿ ಕಾಣಿಸಿಕೊಂಡ ತಕ್ಷಣ ಬ್ಲೋಯರ್ ಯಂತ್ರಗಳ ಮೂಲಕ ಶಕ್ತಿಯುತವಾಗಿ ಗಾಳಿ ಬೀಸಿ, ಒಣ ಎಲೆಗಳನ್ನು ರಸ್ತೆಯಿಂದ ದೂರ ತಳ್ಳಿ ಬೆಂಕಿ ಹರಡುವುದನ್ನು ತಡೆಯಲು ಈ ಯಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ಬೆಂಕಿಯು ಸಂಪೂರ್ಣವಾಗಿ ನಿಯಂತ್ರಣಕ್ಕೆ ಸಿಗದಷ್ಟು ಭೀಕರ ಸ್ವರೂಪ ಪಡೆದುಕೊಂಡಾಗ, ಹೆಲಿಕಾಪ್ಟರ್‌ಗಳ ಮೂಲಕ ಹತ್ತಿರದ ಕೆರೆ ಅಥವಾ ಜಲಾಶಯಗಳಿಂದ ಬೃಹತ್ ಪ್ರಮಾಣದಲ್ಲಿ ನೀರನ್ನು ತಂದು ಉರಿಯುತ್ತಿರುವ ಕಾಡಿನ ಮೇಲೆ ಸುರಿಯಲಾಗುತ್ತದೆ (ಉದಾಹರಣೆಗೆ: ೨೦೧೯ರ ಭೀಕರ ಬಂಡೀಪುರ ಕಾಡ್ಗಿಚ್ಚಿನ ಘಟನೆಯಲ್ಲಿ ಬಳಸಿದ ಬ್ಯಾಂಬಿ ಬಕೆಟ್ ಮಾದರಿಯ ಕಾರ್ಯಾಚರಣೆ).
ನೆನಪಿನಿಂದ ಮಾಸದ ಪ್ರಮುಖ ದುರಂತಗಳು
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಇತಿಹಾಸದಲ್ಲೇ ೨೦೧೯ರ ಕಾಡ್ಗಿಚ್ಚು ಒಂದು ಅಳಿಸಲಾಗದ ಕಪ್ಪು ಚುಕ್ಕೆಯಾಗಿ ಉಳಿದಿದೆ. ಅಂದು ಬರೋಬ್ಬರಿ ೧೦,೦೦೦ ಎಕರೆಗಿಂತಲೂ ಹೆಚ್ಚು ಹಚ್ಚಹಸಿರಿನ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿ ಭಸ್ಮವಾಗಿತ್ತು. ಬೆಂಕಿ ನಂದಿಸಲು ರಾಜ್ಯ ಸರ್ಕಾರದ ಯತ್ನಗಳು ವಿಫಲವಾದಾಗ ಅನಿವಾರ್ಯವಾಗಿ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್‌ಗಳನ್ನು (Bambi Buckets) ಬಳಸಬೇಕಾಯಿತು. ಈ ಭೀಕರ ದುರಂತ ಇಡೀ ದೇಶದ ಗಮನ ಸೆಳೆದಿತ್ತು. ಅದಕ್ಕೂ ಮುನ್ನ, ೧೯೯೨ರ ನಾಗರಹೊಳೆ ಕಾಡ್ಗಿಚ್ಚು, ನಾಗರಹೊಳೆ ಅರಣ್ಯದ ಇತಿಹಾಸದಲ್ಲಿ ಮತ್ತೊಂದು ದೊಡ್ಡ ದುರಂತ ಎನ್ನಬಹುದು. ಆ ದುರ್ಘಟನೆಯಲ್ಲಿ ಸುಮಾರು ೬,೦೦೦ ದಿಂದ ೧೦,೦೦೦ ಎಕರೆ ಅರಣ್ಯ ಸಂಪೂರ್ಣ ನಾಶವಾಗಿತ್ತು. ಏಷ್ಯಾದಲ್ಲೇ ಅತಿ ದೊಡ್ಡ ಪರ್ಣಪಾತಿ ಅರಣ್ಯ ಎಂಬ ಹೆಗ್ಗಳಿಕೆಯ ಹೆಸರುಳ್ಳ ನಾಗರಹೊಳೆಗೆ ಇದು ಯಾವತ್ತೂ ತುಂಬಲಾರದ ನಷ್ಟವಾಗಿತ್ತು. ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯರ ನಡುವಿನ ಆಂತರಿಕ ಸಂಘರ್ಷದ ಹಿನ್ನೆಲೆಯಲ್ಲಿ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿಯೇ ಕಾಡಿಗೆ ಬೆಂಕಿ ಹಚ್ಚಿದ್ದರು. ೨೦೧೪ರಲ್ಲಿ ಏಕಕಾಲಕ್ಕೆ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಭಯಾನಕ ಬೆಂಕಿ ಕಾಣಿಸಿಕೊಂಡಿತ್ತು. ಪರಿಣಾಮ, ಸುಮಾರು ೧,೬೦೦ ಎಕರೆಗೂ ಹೆಚ್ಚು ಪ್ರದೇಶ ಕ್ಷಣಾರ್ಧದಲ್ಲಿ ನಾಶವಾಗಿತ್ತು. ಈ ಎರಡು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ವಿಪರೀತವಾಗಿ ಬೆಳೆದು ಒಣಗಿದ ಲಂಟಾನಾ ಮತ್ತು ಪಾರ್ಥೇನಿಯಂ ಕಳೆ ಗಿಡಗಳ ಕಾರಣದಿಂದ ಬೆಂಕಿ ಅತ್ಯಂತ ವೇಗವಾಗಿ ಹರಡುತ್ತಿದೆ. ಕಳೆದ ವಾರವಷ್ಟೇ ಬಂಡೀಪುರದ ಗುಂಡ್ಲುಪೇಟೆ ವಲಯದಲ್ಲಿ ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಪಶ್ಚಿಮ ಘಟ್ಟದ ಪಾದದಂತಿರುವ ಬೆಳಗಾವಿ ಮತ್ತು ಖಾನಾಪುರ ಅರಣ್ಯ ಪ್ರದೇಶಗಳಲ್ಲಿಯೂ ಮನುಷ್ಯ ನಿರ್ಮಿತ ಕಾಡ್ಗಿಚ್ಚು ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿವೆ. ಇತ್ತ ಕೊಡಗು ಮತ್ತು ಚಿಕ್ಕಮಗಳೂರಿನ ಕಾಫಿ ತೋಟಗಳ ಪಕ್ಕದಲ್ಲಿರುವ ಸೂಕ್ಷ್ಮ ಅರಣ್ಯ ಪ್ರದೇಶಗಳಿಗೂ ಬೆಂಕಿ ವ್ಯಾಪಿಸುತ್ತಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಮೂಲ್ಯವಾದ ಮರಮಟ್ಟುಗಳು ಮತ್ತು ಜೀವಸಂಕುಲ ನಾಶವಾಗುತ್ತಿವೆ.

