
Devadasi Survey 2026| ದೇವದಾಸಿ ಪದ್ಧತಿ; ‘ಮೂರನೇ ತಲೆಮಾರು’ ನಿರ್ಲಕ್ಷ್ಯ ಆರೋಪ; ಮರು ಸಮೀಕ್ಷೆಗೆ ಒತ್ತಡ
ಸಮೀಕ್ಷೆಯಲ್ಲಿ ಕೇವಲ ಜೀವಂತವಿರುವ ದೇವದಾಸಿಯರ ಮಾಹಿತಿ ಮಾತ್ರ ಪಡೆಯಲಾಗಿದೆ. ಮರಣ ಹೊಂದಿದ ದೇವದಾಸಿಯರ ಮಕ್ಕಳು ಸಮಾಜದಲ್ಲಿ ದೇವದಾಸಿಯರಷ್ಟೇ ಶೋಷಣೆ ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಅವರನ್ನು ಸಮೀಕ್ಷೆಗೆ ಪರಿಗಣಿಸಿಲ್ಲ.
ರಾಜ್ಯದಲ್ಲಿ ದೇವದಾಸಿ ಪದ್ಧತಿ ನಿಷೇಧಿಸಿ ದಶಕಗಳೇ ಕಳೆದರೂ ಇಂದಿಗೂ ಬೇರೆ ಬೇರೆ ರೂಪಗಳಲ್ಲಿ ಆಚರಣೆಯಲ್ಲಿದೆ. ಈ ಅನಿಷ್ಟ ಪದ್ಧತಿ ನಿರ್ಮೂಲನೆಗಾಗಿ ರಾಜ್ಯ ಸರ್ಕಾರವು ಕಠಿಣ ಕಾನೂನು ಜಾರಿಗೆ ತಂದರೂ ಪರಿಣಾಮಕಾರಿ ಅನುಷ್ಠಾನದ ಕೊರತೆಯಿಂದ ದೇವದಾಸಿ ಕುಟುಂಬಗಳಿಗೆ ಅಂಟಿರುವ ಕಳಂಕ ಹಾಗೂ ಆರ್ಥಿಕ ಸಂಕಷ್ಟ ದೂರವಾಗಿಲ್ಲ. ರಾಜ್ಯ ಸರ್ಕಾರ ಈಚೆಗೆ ಕೈಗೊಂಡ ದೇವದಾಸಿ ಮಹಿಳೆಯರ ಸಮೀಕ್ಷೆಯ ಬಗ್ಗೆ ಆ ಕುಟುಂಬಗಳಲ್ಲೇ ಅಪಸ್ವರಗಳು ಎದುರಾಗಿವೆ. ತಾಯಿ ಕಳೆದುಕೊಂಡ ಮಕ್ಕಳು ಹಾಗೂ ಮೂರನೇ ತಲೆಮಾರಿನ ಕುಟುಂಬಗಳನ್ನು ಸಮೀಕ್ಷೆಯಿಂದ ದೂರವಿಟ್ಟಿರುವ ಆರೋಪಗಳು ಕೇಳಿಬಂದಿವೆ.
ಸಮೀಕ್ಷೆಗೆ ಅಪಸ್ವರ ಏಕೆ?
2007-08ರ ಬಳಿಕ ರಾಜ್ಯದಲ್ಲಿ ಆಡಳಿತ ನಡೆಸಿದ ಯಾವುದೇ ಸರ್ಕಾರಗಳು ದೇವದಾಸಿಯರ ಸಮಗ್ರ ಸಮೀಕ್ಷೆ ನಡೆಸಿಲ್ಲ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 46,660 ಮಾಜಿ ದೇವದಾಸಿಯರು ಇದ್ದರು. ಆದರೆ, 2026ರಲ್ಲಿ ನಡೆಸಲಾದ ಕರ್ನಾಟಕ ದೇವದಾಸಿಯರ ಸಮೀಕ್ಷೆ ಪ್ರಕಾರ 15 ಜಿಲ್ಲೆಗಳಲ್ಲಿ 23,395 ಮಾಜಿ ದೇವದಾಸಿಯರನ್ನು ಗುರುತಿಸಲಾಗಿದೆ. 2007-08ರ ಸಮೀಕ್ಷೆಯ ಅಂಕಿ ಅಂಶಗಳಿಗೆ ಹೋಲಿಸಿದರೆ ಶೇ.50ರಷ್ಟು ಮಾಜಿ ದೇವದಾಸಿಯರ ಸಂಖ್ಯೆ ಕಡಿಮೆಯಾಗಿದೆ. ಅಗತ್ಯ ಪುನರ್ವಸತಿ ಮತ್ತು ಮಾಸಾಶನ ವಿತರಣೆ ಸಲುವಾಗಿ ಕೈಗೊಂಡ ಸಮೀಕ್ಷೆ ಸಂಪೂರ್ಣ ದೋಷಪೂರಿತವಾಗಿವೆ ಎಂದು ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಆರೋಪಿಸಿದೆ.
ಸಮೀಕ್ಷೆಯಲ್ಲಿ ಕೇವಲ ಜೀವಂತವಿರುವ ದೇವದಾಸಿಯರ ಮಾಹಿತಿ ಮಾತ್ರ ಪಡೆಯಲಾಗಿದೆ. ಮರಣ ಹೊಂದಿದ ದೇವದಾಸಿಯರ ಮಕ್ಕಳು ಸಮಾಜದಲ್ಲಿ ದೇವದಾಸಿಯರಷ್ಟೇ ಶೋಷಣೆ ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಅವರನ್ನು ಸಮೀಕ್ಷೆಗೆ ಪರಿಗಣಿಸಿಲ್ಲ.
ದೇವದಾಸಿ ಪದ್ಧತಿಯು ಬಾಧಿತ ಮಹಿಳೆಯ ಮಕ್ಕಳು, ಮೊಮ್ಮಕ್ಕಳ ಜೀವನದ ಮೇಲೂ ಗಂಭೀರ ಪರಿಣಾಮ ಬೀರಿದೆ. ಹೀಗಿರುವಾಗ ಕಾಟಾಚಾರಕ್ಕೆ ಸಮೀಕ್ಷೆ ನಡೆಸಿರುವುದು ಸರಿಯಲ್ಲ, ರಾಜ್ಯ ಸರ್ಕಾರ ಕೂಡಲೇ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ನಡೆಸಬೇಕು ಎಂದು ವೇದಿಕೆಯ ಗೌರವ ಸಲಹೆಗಾರ ಚಂದಲಿಂಗ ಕಲಾಲಬಂಡಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಆಶಯ ಕಳೆದುಕೊಂಡ ಪ್ರೋತ್ಸಾಹಧನ
ದೇವದಾಸಿಯರ ಮಕ್ಕಳ ಬದುಕು ಹಸನಾಗಲಿ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ 2017-18ರಿಂದ 'ಶಾದಿ ಭಾಗ್ಯ' ಯೋಜನೆಯಡಿ 5 ಲಕ್ಷ ರೂ. ಪ್ರೋತ್ಸಾಹಧನ ಘೋಷಿಸಿತು. ಅಧಿಕಾರಿಗಳ ಅವೈಜ್ಞಾನಿಕ ಆದೇಶದಿಂದಾಗಿ ಯೋಜನೆಗೆ ಅಲ್ಪಸಂಖ್ಯಾತ ಸಮುದಾಯಗಳು ಸೇರ್ಪಡೆಯಾದವು. ಇದರ ವಿರುದ್ಧ ಸಾಕಷ್ಟು ಹೋರಾಟ ನಡೆಸಿ ಮನವರಿಕೆ ಮಾಡಿಕೊಟ್ಟ ನಂತರ ದೇವದಾಸಿಯರ ಮಕ್ಕಳ ಮದುವೆಗೆ 3 ರಿಂದ 5 ಲಕ್ಷ ರೂ. ಪ್ರತ್ಯೇಕ ಪ್ರೋತ್ಸಾಹಧನ ನಿಗದಿಪಡಿಸಲಾಯಿತು. ಸದ್ಯ ಈ ಯೋಜನೆಯಡಿ ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ 2,500ಕ್ಕೂ ಹೆಚ್ಚು ಮಾಜಿ ದೇವದಾಸಿಯರ ಕುಟುಂಬಗಳು ಅರ್ಜಿ ಸಲ್ಲಿಸಿವೆ. ಕೊಪ್ಪಳ ಜಿಲ್ಲೆ ಒಂದರಲ್ಲೇ ಸುಮಾರು 4 ಕೋಟಿ ರೂ. ಅನುದಾನ ಬರಬೇಕಿದೆ. ಸರ್ಕಾರ ಈವರೆಗೂ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡದ ಕಾರಣ ಸಾಲ ಸೋಲ ಮಾಡಿ ಮದುವೆ ಮಾಡಿರುವ ಕುಟುಂಬಗಳು ಇಂದು ಬಡ್ಡಿ ಕಟ್ಟಲಾಗದೆ ಕಂಗಾಲಾಗಿವೆ ಎಂದು ಚಂದಲಿಂಗ ಕಲಾಲಬಂಡಿ ದೂರಿದರು.
ಹೋರಾಟಗಾರರ ಆಗ್ರಹವೇನು?
ದೇವದಾಸಿ ಪದ್ಧತಿಯು ಕೇವಲ ದೈಹಿಕ ಶೋಷಣೆಯಲ್ಲ, ಅದೊಂದು ಸಾಮಾಜಿಕ ಪಿಡುಗು. ಸರ್ಕಾರ ಕೇವಲ ಅಂಕಿ-ಅಂಶಗಳಲ್ಲಿ ಆಟವಾಡದೇ ಸಮಗ್ರವಾಗಿ ಮರು ಸಮೀಕ್ಷೆ ನಡೆಸಬೇಕು. ಪ್ರತಿ ಕುಟುಂಬದ ಮೂರನೇ ತಲೆಮಾರಿನವರೆಗೂ ಸೌಲಭ್ಯಗಳು ಸಿಗುವಂತೆ ಹೊಸ ನೀತಿ ರೂಪಿಸಬೇಕು. ರಾಜ್ಯ ಸರ್ಕಾರ ಕೂಡಲೇ ಬಾಕಿ ಮಾಜಿ ದೇವದಾಸಿ ಕುಟುಂಬಗಳಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಅಲ್ಲದೇ ಮರು ಸಮೀಕ್ಷೆಗೆ ಆದೇಶಿಸಬೇಕು, ಇಲ್ಲದಿದ್ದರೆ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಸಂತ್ರಸ್ತ ಕುಟುಂಬಗಳು ಎಚ್ಚರಿಸಿವೆ.
ಮೂರನೇ ತಲೆಮಾರಿನ ಮಕ್ಕಳಿಗೂ ಇಂದಿಗೂ ಸಮಾಜದಲ್ಲಿ ಗೌರವದ ಬದುಕು ಸಿಗುತ್ತಿಲ್ಲ. ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಮತ್ತು ಉದ್ಯೋಗದ ವೇಳೆ ತಾರತಮ್ಯ ಎದುರಿಸುತ್ತಿದ್ದಾರೆ. ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ವಸತಿ ಯೋಜನೆ ಫಲಾನುಭವಿಗಳ ಪಟ್ಟಿಯಲ್ಲೂ ದೇವದಾಸಿಯರಿಗೆ ಮನೆ ನೀಡುತ್ತಿಲ್ಲ. ಪ್ರಸ್ತುತ, ಸರ್ಕಾರ ನೀಡುತ್ತಿರುವ 2000 ರೂ. ಮಾಶಾಸನದಿಂದ ಇಂದಿನ ಬೆಲೆ ಏರಿಕೆ ಕಾಲದಲ್ಲಿ ಜೀವನ ನಡೆಸಲು ಸಾಲುತ್ತಿಲ್ಲ. ಅನೇಕರಿಗೆ ಈ ಸೌಲಭ್ಯವೂ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ವೇದಿಕೆಯ ಸಂಘಟನಅ ಕಾರ್ಯದರ್ಶಿ ಜಿ.ಎಸ್. ಶರಣು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಹೊಸ ರೂಪದಲ್ಲಿ ಅನಿಷ್ಠ ಆಚರಣೆ
ಈ ಹಿಂದೆ ದೇವಸ್ಥಾನಗಳಲ್ಲಿ ಸಾರ್ವಜನಿಕವಾಗಿ ನಡೆಯುತ್ತಿದ್ದ ದೇವದಾಸಿ ಮಹಿಳೆಯರ ಸಮರ್ಪಣೆ ಕಾರ್ಯಕ್ರಮಗಳು ಈಗ ಕಾನೂನಿನ ಭಯದಿಂದಾಗಿ ರಹಸ್ಯವಾಗಿ ನಡೆಯುತ್ತಿವೆ. ಹಬ್ಬಗಳು ಅಥವಾ ಜಾತ್ರೆಗಳ ಸಂದರ್ಭದಲ್ಲಿ ಮನೆಗಳಲ್ಲೇ ಅಥವಾ ಸಣ್ಣ ಗುಡಿಗಳಲ್ಲಿ ಯಾರಿಗೂ ತಿಳಿಯದಂತೆ ಹೆಣ್ಣುಮಕ್ಕಳನ್ನು ದೇವರಿಗೆ ಬಿಡುವ ಆಚರಣೆ ನಡೆಯುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಬಳ್ಳಾರಿ, ಕೊಪ್ಪಳ, ವಿಜಯನಗರ, ರಾಯಚೂರು ಮತ್ತು ಬಾಗಲಕೋಟೆಗಳಲ್ಲಿ ಇಂದಿಗೂ ಸಕ್ರಿಯವಾಗಿದೆ ಎಂದು ವೇದಿಕೆಯ ಮುಖಂಡರು ಆರೋಪಿಸಿದ್ದಾರೆ.
ಮಾಜಿ ದೇವದಾಸಿಯರ ಆರ್ಥಿಕ ಸ್ಥಿತಿ
ದೇವದಾಸಿ ಪದ್ಧತಿಗೆ ಬಲಿಯಾಗುತ್ತಿರುವವರು ಬಹುತೇಕ ದಲಿತ ಮತ್ತು ಹಿಂದುಳಿದ ವರ್ಗದ ಬಡ ಕುಟುಂಬದವರಾಗಿದ್ದಾರೆ. ದೇವದಾಸಿಯರ ಮಕ್ಕಳು ಮತ್ತು ಮೊಮ್ಮಕ್ಕಳು ಇಂದಿಗೂ 'ಸಾಮಾಜಿಕ ಕಳಂಕ' ಎದುರಿಸುತ್ತಿದ್ದಾರೆ. ಶಾಲೆಯಲ್ಲಿ ತಂದೆಯ ಹೆಸರಿನ ಜಾಗದಲ್ಲಿ ತೊಂದರೆ ಅನುಭವಿಸುವುದು, ಮದುವೆ ಸಂಬಂಧ ಕುದುರದಿರುವುದು ಸಾಮಾನ್ಯವಾಗಿದೆ.
ದೇವದಾಸಿ ಕುಟುಂಬದ ಮಕ್ಕಳ ಉನ್ನತ ಶಿಕ್ಷಣ ಹಾಗೂ ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು ನೀಡುವುದಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಕಳೆದ ಮೂರು ವರ್ಷದಿಂದ ಇದೇ ಘೋಷಣೆ ಮಾಡುತ್ತಿದೆ ಹೊರತು ಅನುದಾನ ಬಿಡುಗಡೆ ಮಾಡುತ್ತಿಲ್ಲ. 1986 ರಿಂದ ಇಲ್ಲಿಯವರೆಗೆ ಬರೀ 10ಸಾವಿರ ಮಾಜಿ ದೇವದಾಸಿಯರ ಕುಟುಂಬಗಳಿಗೆ ಮನೆ ನೀಡಲಾಗಿದೆ. ಘಟಕ ವೆಚ್ಚ ಮೊದಲು 1ಲಕ್ಷ ರೂ. ಇತ್ತು, ಇತ್ತೀಚೆಗೆ 1.60 ಲಕ್ಷ ರೂ.ಗೆ ಏರಿಸಲಾಗಿದೆ. ಆದರೆ, ಹೊಸದಾಗಿ ಯಾವುದೇ ಮನೆಗಳನ್ನು ನೀಡುತ್ತಿಲ್ಲ. ಬಹುತೇಕ ಭಾಗಗಳಲ್ಲಿ ಮನೆ ಕಟ್ಟಿರುವವರಿಗೆ ಪೂರ್ಣ ಪ್ರಮಾಣದ ಅನುದಾನವನ್ನೂ ನೀಡಲ್ಲ ಎಂದು ಶರಣು ಆರೋಪಿಸಿದರು.

