Tungabhadra Dam Overhaul: 24th Crest Gate Cutting Underway; Stoplog Removal After Dec 30 Expected
x
ತುಂಗಭದ್ರಾ ಜಲಾಶಯದ ಒಡೆದು ಹೋಗಿದ್ದ ಕ್ರೆಸ್ಟ್‌ಗೇಟ್‌ (ಸಂಗ್ರಹ ಚಿತ್ರ).

ರಾಜ್ಯದ ಅಣೆಕಟ್ಟುಗಳಿಗೆ ತುಂಬುತ್ತಿದೆ ಹೂಳು; ಗೋಡೆ, ಗೇಟ್‌ಗಳಿಗೂ ಕಂಟಕ!

ಶೇಖರಣೆಯಾದ ಹೂಳು ಅಣೆಕಟ್ಟಿನ ಗೋಡೆಗಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತದೆ. ಹೂಳು ತುಂಬುವುದರಿಂದ ಉಂಟಾಗುವ ಹೆಚ್ಚುವರಿ ಒತ್ತಡವು ಗೋಡೆಗಳಲ್ಲಿ ಬಿರುಕು ಮೂಡಲು ಕಾರಣವಾಗಬಹುದು.


ರಾಜ್ಯದ ಕೃಷಿ, ಕುಡಿಯುವ ನೀರು, ಕೈಗಾರಿಕೆಗಳ ಭವಿಷ್ಯವನ್ನು ನಿರ್ಧರಿಸುವ ರಾಜ್ಯದ ಜಲಾಶಯಗಳ ಪೈಕಿ ಹಲವು ಜಲಾಶಯಗಳು ಅರ್ಧ ಶತಮಾನದ ಸಂಭ್ರಮ ದಾಟಿದ್ದು, ಹೂಳಿನ ಸಮಸ್ಯೆ ಭೀತಿ ಎದುರಾಗಿದೆ.

ಕೆಆರ್‌ಎಸ್, ತುಂಗಭದ್ರಾ, ಆಲಮಟ್ಟಿಯಂತಹ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಅಧಿಕವಿದ್ದರೂ ವಾಸ್ತವದಲ್ಲಿ ನೀರಿನ ಪ್ರಮಾಣ ಕುಗ್ಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹೂಳು ಎತ್ತುವ ಸವಾಲು ಮತ್ತು ಅಣೆಕಟ್ಟುಗಳ ದೃಢತೆಯ ಬಗ್ಗೆ ತಜ್ಞರ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ.‌

ಹೂಳು ತುಂಬಿರುವುದರಿಂದ ಅಣೆಕಟ್ಟು ಬೇಗನೆ ಭರ್ತಿಯಾಗುತ್ತದೆ. ಆದರೆ ಅಲ್ಲಿರುವುದು ನೀರಿಗಿಂತ ಹೂಳೇ ಹೆಚ್ಚು. ಇದು ಪ್ರವಾಹದ ಸಮಯದಲ್ಲಿ ಹೆಚ್ಚುವರಿ ನೀರನ್ನು ಹೊರಹಾಕಲು ತೊಂದರೆ ಉಂಟುಮಾಡಬಹುದು ಎನ್ನಲಾಗಿದೆ. ಹೂಳಿನ ಮಟ್ಟ ಹೆಚ್ಚಾದಂತೆ ಅಣೆಕಟ್ಟಿನ ಕ್ರೆಸ್ಟ್ ಗೇಟ್‌ಗಳ ಕಾರ್ಯಾಚರಣೆಗೆ ಅಡ್ಡಿಯಾಗಲಿದೆ. ಇತ್ತೀಚೆಗೆ ತುಂಗಭದ್ರಾ ಅಣೆಕಟ್ಟಿನ ಗೇಟ್ ಚೈನ್ ಲಿಂಕ್ ತುಂಡಾದ ಘಟನೆಯು ಇದಕ್ಕೆ ಉದಾಹರಣೆ ಎಂದು ಹೇಳಬಹುದು.

ಕೃಷ್ಣರಾಜ ಸಾಗರ, ಆಲಮಟ್ಟಿ, ತುಂಗಭದ್ರಾ ಸೇರಿದಂತೆ ರಾಜ್ಯದ 230ಕ್ಕೂ ಹೆಚ್ಚು ಅಣೆಕಟ್ಟುಗಳಲ್ಲಿ ಅರ್ಧ ಶತಮಾನ ದಾಟಿರುವ ಬಹುತೇಕ ಜಲಾಶಯಗಳ ಸಾಮರ್ಥ್ಯ ಕುಗ್ಗುತ್ತಿದ್ದು, ಸುರಕ್ಷತೆಯ ಬಗ್ಗೆ ಆತಂಕ ಸ್ಥಿತಿಯನ್ನು ಎದುರಿಸುತ್ತಿವೆ. ಕೃಷ್ಣಾ, ಕಾವೇರಿ, ತುಂಗಭದ್ರಾ, ಮಲಪ್ರಭಾ ಮತ್ತು ಘಟಪ್ರಭಾದಂತಹ ನದಿಗಳು ರಾಜ್ಯದ ಕೃಷಿ, ಕುಡಿಯುವ ನೀರು ಮತ್ತು ಕೈಗಾರಿಕೆಗಳ ಜೀವನಾಡಿಯಾಗಿವೆ.

ಈ ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾದ ಅಣೆಕಟ್ಟುಗಳು ರಾಜ್ಯದ ಸಮೃದ್ಧಿಯ ಸಂಕೇತಗಳಾಗಿವೆ. ರಾಜ್ಯದಲ್ಲಿ ಸುಮಾರು 230ಕ್ಕೂ ಹೆಚ್ಚು ಅಣೆಕಟ್ಟುಗಳಿವೆ. ಆದರೆ, ಇವುಗಳಲ್ಲಿ ಬಹುತೇಕ ಅಣೆಕಟ್ಟುಗಳು ಅರ್ಧ ಶತಮಾನಕ್ಕೂ ಹೆಚ್ಚು ಹಳೆಯದಾಗಿದ್ದು, ಹೂಳು ತುಂಬುವ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿವೆ. ಇದು ಅಣೆಕಟ್ಟುಗಳ ಸಾಮರ್ಥ್ಯವನ್ನು ಕುಗ್ಗಿಸುವುದಲ್ಲದೆ, ಅವುಗಳ ಸುರಕ್ಷತೆಯ ಬಗ್ಗೆಯೂ ಆತಂಕ ಮೂಡಿಸಿದೆ.

ರಾಜ್ಯದಲ್ಲಿರುವ 230ಕ್ಕೂ ಹೆಚ್ಚಿನ ಅಣೆಕಟ್ಟುಗಳ ಪೈಕಿ ಬಹಳಷ್ಟು ಅಣೆಕಟ್ಟುಗಳು ಬ್ರಿಟಿಷರ ಕಾಲದಲ್ಲಿ ಅಥವಾ ಸ್ವಾತಂತ್ರ್ಯ ನಂತರದ ಮೊದಲ ಎರಡು ದಶಕಗಳಲ್ಲಿ ನಿರ್ಮಾಣಗೊಂಡಿವೆ. ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಅಣೆಕಟ್ಟು ನಿರ್ಮಾಣವಾಗಿ 90 ವರ್ಷಗಳಿಗಿಂತಲೂ ಹೆಚ್ಚಾಗಿದೆ. ತುಂಗಭದ್ರಾ ಅಣೆಕಟ್ಟು ನಿರ್ಮಾಣವಾಗಿ 70 ವರ್ಷಗಳಾಗಿವೆ. ಅಣೆಕಟ್ಟುಗಳಿಗೆ ಹೂಳು ಬರುವುದು ಒಂದು ನೈಸರ್ಗಿಕ ಪ್ರಕ್ರಿಯೆಯಾದರೂ, ಇತ್ತೀಚಿನ ದಶಕಗಳಲ್ಲಿ ಇದರ ವೇಗ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಇದರಿಂದ ನೀರಿನ ಮಟ್ಟ ಅಧಿಕ ತೋರಿಸಿದರೂ ಆ ಪ್ರಮಾಣದಲ್ಲಿ ಇರುವುದಿಲ್ಲ. ಅಣೆಕಟ್ಟಿನ ಮೂಲ ಸಂಗ್ರಹಣಾ ಸಾಮರ್ಥ್ಯದದಲ್ಲಿ ಶೇ.25ರಷ್ಟು ಹೂಳು ತುಂಬಿರುವ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.

ಹೂಳು ತುಂಬಲು ಕಾರಣಗಳು

ನದಿಗಳ ಜಲಾನಯನ ಪ್ರದೇಶಗಳಲ್ಲಿ ಅರಣ್ಯ ನಾಶವಾಗುತ್ತಿರುವುದರಿಂದ ಮಣ್ಣಿನ ಸವಕಳಿ ಹೆಚ್ಚುತ್ತಿದೆ. ಮಳೆಯ ನೀರು ಈ ಮಣ್ಣನ್ನು ನೇರವಾಗಿ ಅಣೆಕಟ್ಟಿಗೆ ತರುತ್ತಿದೆ. ಕಾಡಿನ ಮರಗಳು, ಸಸ್ಯವರ್ಗವು ಮಳೆಯ ಹನಿಗಳು ನೇರವಾಗಿ ಮಣ್ಣಿಗೆ ಅಪ್ಪಳಿಸುವುದನ್ನು ತಡೆಯುತ್ತವೆ. ಇದರಿಂದ ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ಕಾಡು ನಾಶವಾದಾಗ, ಮಳೆಯ ನೀರು ವೇಗವಾಗಿ ಹರಿಯುತ್ತಾ ಮೇಲ್ಪದರದ ಫಲವತ್ತಾದ ಮಣ್ಣನ್ನು ತನ್ನೊಂದಿಗೆ ಕೊಂಡೊಯ್ಯುತ್ತದೆ. ಸಸ್ಯಗಳ ಬೇರುಗಳು ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತವೆ. ಅರಣ್ಯ ನಾಶವಾದ ಜಾಗದಲ್ಲಿ ಮಣ್ಣು ಸಡಿಲಗೊಂಡು, ಸಣ್ಣ ಮಳೆಯೂ ದೊಡ್ಡ ಪ್ರಮಾಣದ ಕೆಸರನ್ನು ನದಿಗೆ ಸೇರಿಸುವಂತೆ ಮಾಡುತ್ತದೆ. ಈ ಕೆಸರು ಅಂತಿಮವಾಗಿ ಅಣೆಕಟ್ಟಿನ ತಳದಲ್ಲಿ ಹೂಳಾಗಿ ಕುಳಿತುಕೊಳ್ಳುತ್ತದೆ.

ಅಲ್ಲದೇ, ನದಿ ಪಾತ್ರಗಳಲ್ಲಿ ನಡೆಯುವ ಗಣಿಗಾರಿಕೆ ಮತ್ತು ಕೃಷಿ ಚಟುವಟಿಕೆಗಳು ಸಡಿಲವಾದ ಮಣ್ಣನ್ನು ಅಣೆಕಟ್ಟಿನೊಳಗೆ ಸೇರಿಸುತ್ತಿವೆ. ಅಣೆಕಟ್ಟುಗಳನ್ನು ನಿರ್ಮಿಸುವಾಗ ಹೂಳನ್ನು ಹೊರಹಾಕುವ ವ್ಯವಸ್ಥೆಗಳು ಸಮರ್ಪಕವಾಗಿಲ್ಲದಿರುವುದು ಸಮಸ್ಯೆಯನ್ನು ಜಟಿಲಗೊಳಿಸಿದೆ. ನದಿ ಪಾತ್ರಗಳಲ್ಲಿ ಹಾಗೂ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ನಡೆಯುವ ಕಲ್ಲು ಹಾಗೂ ಮರಳು ಗಣಿಗಾರಿಕೆಯು ಪರಿಸರವನ್ನು ಅಸ್ಥಿರಗೊಳಿಸುತ್ತದೆ. ಸ್ಫೋಟಗಳು ಮತ್ತು ಬೃಹತ್ ಯಂತ್ರಗಳ ಬಳಕೆಯಿಂದ ಭೂಮಿ ಸಡಿಲಗೊಳ್ಳುತ್ತದೆ. ಇಲ್ಲಿನ ಕಣಗಳು ಮಳೆಯ ನೀರಿನೊಂದಿಗೆ ಬೆರೆತು ಮಣ್ಣು ಕುಸಿತಗೊಂಡು ಅಣೆಕಟ್ಟನ್ನು ಸೇರುತ್ತವೆ.

ನದಿ ದಂಡೆಗಳ ತೀರದವರೆಗೂ ಕೃಷಿ ಚಟುವಟಿಕೆಗಳು ವಿಸ್ತರಿಸಿವೆ. ರೈತರು ಭೂಮಿಯನ್ನು ಉಳುಮೆ ಮಾಡಿದಾಗ ಮಣ್ಣು ಸಡಿಲಗೊಳ್ಳುತ್ತದೆ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ನೈಸರ್ಗಿಕ ರಚನೆ ಹಾಳಾಗಿ, ಅದು ಸುಲಭವಾಗಿ ನೀರಿನಲ್ಲಿ ಕೊಚ್ಚಿಹೋಗುವಂತಾಗುತ್ತದೆ. ನದಿ ದಂಡೆಯಲ್ಲಿರುವ ಬಫರ್ ವಲಯಗಳು ನಾಶವಾಗಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ ಎಂಬುದು ನೀರಾವರಿ ತಜ್ಞರ ಅಭಿಪ್ರಾಯವಾಗಿದೆ.

ಯಾವ ಅಣೆಕಟ್ಟಿನಲ್ಲಿ ಎಷ್ಟು ಹೂಳು?

ರಾಜ್ಯದ ತುಂಗಭದ್ರಾ ಅಣೆಕಟ್ಟು ಹೂಳಿನ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಈ ಅಣೆಕಟ್ಟಿನ ಮೂಲ ಸಂಗ್ರಹಣಾ ಸಾಮರ್ಥ್ಯ ಸುಮಾರು 133 ಟಿಎಂಸಿ ಇದ್ದು, ಸುಮಾರು 30 ಟಿಎಂಸಿಯಷ್ಟು ಹೂಳು ತುಂಬಿದೆ. ಕೆಆರ್‌ಎಸ್ ಜಲಾಶಯದಲ್ಲಿ ಹೂಳಿನ ಪ್ರಮಾಣ ಶೇ. 6.7ರಷ್ಟು ಸಂಗ್ರಹವಾಗಿದೆ. ನಾರಾಯಣಪುರದಲ್ಲಿ 10.55 ಟಿಎಂಸಿ ಅಡಿ, ಆಲಮಟ್ಟಿಯಲ್ಲಿ 7.5 ಟಿಎಂಸಿ ಅಡಿ ಮತ್ತು ಘಟಪ್ರಭಾದಲ್ಲಿ 4.9 ಟಿಎಂಸಿ ಅಡಿ ಹೂಳು ಇದೆ ಎಂದು ಜಲಸಂಪನ್ಮೂಲ ಇಲಾಖೆ ಹೇಳಿದೆ. ಹೂಳು ತುಂಬುವುದರಿಂದ ಹೂಳು ತುಂಬಿರುವುದರಿಂದ ರೈತರಿಗೆ ನೀಡಬೇಕಾದ ನೀರಿನ ಪ್ರಮಾಣದಲ್ಲಿ ಕೊರತೆಯನ್ನು ಎದುರಿಸಬೇಕಾಗುತ್ತದೆ.

ಹೂಳಿನಿಂದ ಎದುರಾಗುವ ಸಮಸ್ಯೆಗಳು

ಅಣೆಕಟ್ಟುಗಳಲ್ಲಿ ಹೂಳು ತುಂಬುವುದು ಕೇವಲ ಮಣ್ಣು ಶೇಖರಣೆಯಾಗುವ ಪ್ರಕ್ರಿಯೆಯಲ್ಲ, ಇದು ಅಣೆಕಟ್ಟಿನ ಜೀವಿತಾವಧಿ ಮತ್ತು ಕಾರ್ಯಕ್ಷಮತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೂಳು ತುಂಬುವುದರಿಂದ ಅಣೆಕಟ್ಟಿನ ಒಳಗೆ ಮಣ್ಣು ಮತ್ತು ಕಲ್ಲುಗಳು ಶೇಖರಣೆಯಾದಂತೆ, ನೀರು ನಿಲ್ಲಲು ಇರುವ ಜಾಗ ಕಡಿಮೆಯಾಗುತ್ತದೆ. ಇದರಿಂದ ಅಣೆಕಟ್ಟು ಪೂರ್ಣ ಮಟ್ಟ ತಲುಪಿದರೂ, ವಾಸ್ತವದಲ್ಲಿ ಅಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಮೊದಲಿನಂತಿರದೆ ಗಣನೀಯವಾಗಿ ಕುಸಿದಿರುತ್ತದೆ. ಇದು ಬೇಸಿಗೆಯಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ತೊಂದರೆಯುಂಟುಮಾಡುತ್ತದೆ. ಶೇಖರಣೆಯಾದ ಹೂಳು ಅಣೆಕಟ್ಟಿನ ಗೋಡೆಗಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತದೆ. ಹೂಳು ತುಂಬುವುದರಿಂದ ಉಂಟಾಗುವ ಹೆಚ್ಚುವರಿ ಒತ್ತಡವು ಗೋಡೆಗಳಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಅಣೆಕಟ್ಟಿನ ಸಾಮರ್ಥ್ಯ ಕಡಿಮೆಯಾದಾಗ, ಮಳೆಗಾಲದಲ್ಲಿ ಅಲ್ಪ ಪ್ರಮಾಣದ ಮಳೆಯಾದರೂ ಅಣೆಕಟ್ಟು ಬೇಗನೆ ಭರ್ತಿಯಾಗುತ್ತದೆ. ಇದರಿಂದಾಗಿ ಅನಿವಾರ್ಯವಾಗಿ ಹೆಚ್ಚಿನ ಪ್ರಮಾಣದ ನೀರನ್ನು ಒಮ್ಮೆಲೇ ಹೊರಬಿಡಬೇಕಾಗುತ್ತದೆ. ಇದು ನದಿ ಪಾತ್ರದ ಕೆಳಭಾಗದ ಗ್ರಾಮಗಳಲ್ಲಿ ದಿಢೀರ್ ಪ್ರವಾಹ ಉಂಟಾಗಲು ಕಾರಣವಾಗುತ್ತದೆ. ಇದಲ್ಲದೇ, ಹೂಳಿನಲ್ಲಿರುವ ಮರಳು ಮತ್ತು ಸಣ್ಣ ಕಲ್ಲುಗಳು ಜಲವಿದ್ಯುತ್ ಘಟಕದ ಟರ್ಬೈನ್ ಒಳಗೆ ಪ್ರವೇಶಿಸಿದಾಗ ಯಂತ್ರಗಳು ಸವೆಯುತ್ತವೆ ಅಥವಾ ಹಾಳಾಗುತ್ತವೆ. ಇದರಿಂದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ ಮತ್ತು ದುರಸ್ತಿ ವೆಚ್ಚ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಹೂಳು ತೆಗೆಯುವುದು ದುಬಾರಿ ವೆಚ್ಚ

ಒಂದು ಟಿಎಂಸಿ ಹೂಳು ತೆಗೆಯಲು ಮಾರುಕಟ್ಟೆ ದರದಲ್ಲಿ ಸುಮಾರು 300 ರಿಂದ 500 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ತುಂಗಭದ್ರಾ ಅಣೆಕಟ್ಟಿನ 30 ಟಿಎಂಸಿ ಹೂಳು ತೆಗೆಯಬೇಕೆಂದರೆ ಅದಕ್ಕೆ ಸುಮಾರು 10 ಸಾವಿರ ದಿಂದ 15 ಸಾವಿರ ಕೋಟಿ ರೂಪಾಯಿಗಳು ಬೇಕಾಗುತ್ತವೆ. ಇದರ ಜತೆಗೆ ತೆಗೆದ ಕೋಟ್ಯಂತರ ಟನ್ ಹೂಳನ್ನು ಎಲ್ಲಿ ಸುರಿಯಬೇಕು? ಅದನ್ನು ಸಾಗಿಸಲು ಎಷ್ಟು ಸಾವಿರಾರು ಲಾರಿಗಳು ಬೇಕು? ಈ ಪ್ರಕ್ರಿಯೆಯಲ್ಲಿ ಪರಿಸರಕ್ಕೆ ಆಗುವ ಹಾನಿ ಎಷ್ಟು? ಎಂಬ ಪ್ರಶ್ನೆಗಳು ಸಹ ಉದ್ಭವಿಸುತ್ತವೆ.

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಯೊಬ್ಬರು, ಹೂಳು ತೆಗೆಯುವುದಕ್ಕೆ ಮಾಡುವ ವೆಚ್ಚಕ್ಕಿಂತ ಹೊಸದಾದ ಸಮಾನಾಂತರ ಅಣೆಕಟ್ಟು ಅಥವಾ ಬದಲಿ ಜಲಾಶಯವನ್ನು ನಿರ್ಮಿಸುವುದು ಆರ್ಥಿಕವಾಗಿ ಲಾಭದಾಯಕ ಎಂದು ಹೇಳಿದ್ದಾರೆ.

ಹೂಳು ತೆಗೆಯಲು ಮಾರ್ಗಸೂಚಿ ಇಲ್ಲ : ಡಿ.ಕೆ.ಶಿವಕುಮಾರ್‌

ಹೂಳು ಸಮಸ್ಯೆ ಕುರಿತು ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಲಾಶಯಗಳಿಂದ ಹೂಳು ತೆಗೆಯಲು ಯಾವುದೇ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಕಾರ್ಯಕ್ರಮವೂ ಇಲ್ಲ ಕೃಷ್ಣ ಭಾಗ್ಯ ಜಲ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ ಮತ್ತು ಇತರ ಜಲಾಶಯಗಳ ವ್ಯಾಪ್ತಿಗೆ ಬರುವ ಜಲಾಶಯಗಳನ್ನು ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರವು ಸಮೀಕ್ಷೆ ನಡೆಸುತ್ತದೆ. ಆದರೆ ಅದನ್ನು ತೆಗೆಯಲು ಯಾವುದೇ ಮಾರ್ಗಸೂಚಿ ಇಲ್ಲದಂತಾಗಿದೆ. ಹೂಳು ಸಂಗ್ರಹಿಸಿದರೆ ನೀರಿನ ಶೇಖರಣಾ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದ ನೀರು ಉಕ್ಕಿ ಹರಿಯುತ್ತದೆ ಎಂದು ತಿಳಿಸಿದ್ದರು.

ದ ಫೆಡರಲ್‌ ಕರ್ನಾಟಕ ಜತೆ ನೀರಾವರಿ ತಜ್ಞ ಕ್ಯಾಪ್ಟನ್‌ ರಾಜಾರಾವ್ ಮಾತನಾಡಿ, ಹೂಳು ಸಂಗ್ರಹವು ನೈಸರ್ಗಿಕ ಪ್ರಕ್ರಿಯೆಯಾಗಿದ್ದು ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಹೂಳು ತೆಗೆಯುವ ಮೊದಲು ನೀರನ್ನು ಪಂಪ್ ಮಾಡಬೇಕಾಗುತ್ತದೆ. ಹೂಳು ಸುರಿಯಲು, ಎಕರೆಗಟ್ಟಲೆ ಭೂಮಿ ಬೇಕು. ಅದು ಅಣೆಕಟ್ಟುಗಳ ಸುತ್ತಲೂ ಲಭ್ಯ ಇರುವುದಿಲ್ಲ. ಈ ಹಿಂದೆ ಒಡಿಶಾ ಸರ್ಕಾರವು ಹಿರಾಕುಡ್ ಜಲಾಶಯದಲ್ಲಿ ಇದನ್ನು ಪ್ರಯತ್ನಿಸಿತಾದರೂ ವಿಫಲವಾಯಿತು ಎಂದರು.

ಚೆಕ್‌ಡ್ಯಾಂನಿಂದಾಗಿ ಹೂಳು ಇಲ್ಲ

ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಜಲಾಶಯದಲ್ಲಿ ಹೂಳು ತುಂಬಿಕೊಂಡಿದೆ ಎನ್ನಲಾಗುತ್ತದೆ. ಆದರೆ, ಇದು ಸತ್ಯಕ್ಕೆ ದೂರವಾದುದು ಎಂಬುದು ಜಲಸಂಪನ್ಮೂಲ ಇಲಾಖೆಯ ಸ್ಪಷ್ಟನೆಯಾಗಿದೆ. ಜಲಾಶಯ ಹಿಂಭಾಗ ಹಲವಾರು ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿರುವುದರಿಂದ ಮಳೆ ನೀರು ನೇರವಾಗಿ ಕೆಆರ್‌ಎಸ್‌ ಅಣೆಕಟ್ಟೆಯನ್ನು ತಲುಪುವುದಿಲ್ಲ. ಚೆಕ್‌ ಡ್ಯಾಂಗಳಲ್ಲಿ ತುಂಬಿದ ನಂತರವೇ ನೀರು ಕೆಆರ್‌ಎಸ್‌ ಜಲಾಶಯ ತಲುಪುತ್ತದೆ ಎಂದು ಹೇಳಲಾಗಿದೆ.

ಇದಕ್ಕೆ ಪೂರಕವಾಗಿ ಜಲ ತಜ್ಞ ಕ್ಯಾಪ್ಟನ್‌ ರಾಜಾರಾವ್‌ ಮಾತನಾಡಿ, ಅವರು ಕೃಷ್ಣಾ ಜಲಾನಯನ ಪ್ರದೇಶಕ್ಕೆ ಹೋಲಿಸಿದರೆ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಹೂಳು ಸಂಗ್ರಹವಾಗುವುದು ಕಡಿಮೆ. ಯಾಕೆಂದರೆ, ಕಾವೇರಿ ಜಲಾಶಯಗಳು ಹತ್ತಿರದಲ್ಲಿ ಕಾಡುಗಳು ಅಥವಾ ಅನೇಕ ಮರಗಳನ್ನು ಹೊಂದಿವೆ. ಇದು ಅಣೆಕಟ್ಟುಗಳಿಗೆ ಹೂಳು ಸೇರುವುದನ್ನು ತಡೆಯುತ್ತದೆ. ಆದರೆ ಕೃಷ್ಣಾ ಜಲಾನಯನ ಪ್ರದೇಶಗಳ ಜಲಾಶಯಗಳ ಬಳಿ ಕಡಿಮೆ ಮರಗಳಿವೆ. ಅಲ್ಲದೆ, ಗಣಿಗಾರಿಕೆ ಅಲ್ಲಿ ಒಂದು ಪ್ರಮುಖ ಸಮಸ್ಯೆಯಾಗಿದೆ. ಅಣೆಕಟ್ಟು ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಮರಗಳನ್ನು ಬೆಳೆಸುವ ಅವಶ್ಯಕತೆಯಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಹೂಳು ಸಂಗ್ರಹವಾಗುವುದನ್ನು ತಡೆಯಬಹುದು ಎಂದರು.

Read More
Next Story