
Women’s Day 2026: ಮಹಿಳಾ ಸ್ವಾವಲಂಬನೆಗೆ ಹಾದಿ ಮಾಡಿದ 'ಮಲ್ಲಿಗೆ': ಹೆಣ್ಣುಮಕ್ಕಳ ಸ್ವಾಭಿಮಾನದ ಬದುಕಿಗೆ ಸುವಾಸನೆ
ಹೂವಿನ ಹಡಗಲಿ, ಮೈಸೂರು ಮತ್ತು ಉಡುಪಿ ಮಲ್ಲಿಗೆ ಕೃಷಿಯು ಕರ್ನಾಟಕದ ಗ್ರಾಮೀಣ ಮಹಿಳೆಯರಿಗೆ ಹೇಗೆ ಆರ್ಥಿಕ ಸ್ವತಂತ್ರ ನೀಡಿದೆ? GI Tag ಮಾನ್ಯತೆ ಪಡೆದ ಈ ಸುವಾಸಿತ ಉದ್ಯಮದ ಸವಾಲುಗಳು ಮತ್ತು ಯಶೋಗಾಥೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಳ್ಳಂಬೆಳಗ್ಗೆ ಮಂಜಿನ ಹನಿಗಳ ನಡುವೆ, ಹಸಿರು ಎಲೆಗಳ ಸಂದಿನಿಂದ ಇಣುಕುವ ಬಿಳಿ ಮೊಗ್ಗುಗಳು ಕೇವಲ ಸುಗಂಧವನ್ನಷ್ಟೇ ಪಸರಿಸುತ್ತಿಲ್ಲ. ಬದಲಿಗೆ ಕರ್ನಾಟಕದ ಸಾವಿರಾರು ಗ್ರಾಮೀಣ ಮಹಿಳೆಯರ ಬದುಕಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಸುವಾಸನೆಯನ್ನು ನೀಡುತ್ತಿವೆ. ಅತಿ ಕಡಿಮೆ ಜಾಗದಲ್ಲಿ ಕೈತುಂಬಾ ಆದಾಯ ತಂದುಕೊಡುವ ಮಲ್ಲಿಗೆ ಕೃಷಿ ಇಂದು ಮಹಿಳೆಯರ ಪಾಲಿಗೆ ಬದುಕನ್ನು ಕಟ್ಟಿಬೆಳೆಸುವ 'ಸುವಾಸಿತ ಉದ್ಯಮ'ವಾಗಿ ಬದಲಾಗಿದೆ.
ಮಲ್ಲಿಗೆ ಕೃಷಿ ಮಹಿಳೆಯರನ್ನು ಕೇವಲ ಆರ್ಥಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಸಬಲರನ್ನಾಗಿಸಿದೆ. ಸ್ವಂತ ಜಮೀನು ಇಲ್ಲದಿದ್ದರೂ ಪರವಾಗಿಲ್ಲ, ಹೂವು ಕೀಳುವ ಮತ್ತು ಅದನ್ನು ಅಚ್ಚುಕಟ್ಟಾಗಿ ನೂಲಿನಿಂದ ಕಟ್ಟುವ ಕೌಶಲ್ಯದಿಂದಲೇ ಅನೇಕ ಮಹಿಳೆಯರು ಸ್ವತಂತ್ರವಾಗಿ ಜೀವನ ಸಾಗಿಸುತ್ತಿದ್ದಾರೆ. ಸ್ವಂತ ದುಡಿಮೆಯ ಹಣ ಕೈಯಲ್ಲಿರುವುದರಿಂದ ಅವರಲ್ಲಿ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ಆರ್ಥಿಕವಾಗಿ ಸ್ವತಂತ್ರರಾದ ಕಾರಣ, ಕುಟುಂಬದ ಪ್ರಮುಖ ನಿರ್ಧಾರಗಳಲ್ಲೂ ಮಹಿಳೆಯರು ಇಂದು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಹೂವುಗಳನ್ನು ನೂಲಿನಿಂದ ಅಚ್ಚುಕಟ್ಟಾಗಿ ಕಟ್ಟುವುದು ಒಂದು ಅದ್ಭುತ ಕಲೆ. ಇದರಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ನೈಪುಣ್ಯತೆ ಹೊಂದಿರುವುದರಿಂದ, ಕೃಷಿ ಮಾಡದಿದ್ದರೂ ಕೇವಲ 'ಹೂವು ಕಟ್ಟಿ' ಕೂಲಿ ಪಡೆಯುವ ಮೂಲಕವೂ ಅನೇಕ ಮಹಿಳೆಯರು ಜೀವನ ನಡೆಸುತ್ತಿದ್ದಾರೆ. ಸ್ವಂತ ದುಡಿಮೆಯ ಹಣ ಕೈಯಲ್ಲಿರುವುದರಿಂದ ಅವರಲ್ಲಿ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ಆರ್ಥಿಕವಾಗಿ ಸ್ವತಂತ್ರರಾದ ಕಾರಣ, ಕುಟುಂಬದ ಪ್ರಮುಖ ನಿರ್ಧಾರಗಳಲ್ಲೂ ಮಹಿಳೆಯರು ಇಂದು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅನೇಕ ಗ್ರಾಮಗಳಲ್ಲಿ ಮಹಿಳೆಯರೇ ಮಲ್ಲಿಗೆ ಬೆಳೆಯುವ ಜಮೀನಿನ ಉಸ್ತುವಾರಿ ವಹಿಸಿಕೊಳ್ಳುತ್ತಿರುವುದು ಬಹುದೊಡ್ಡ ಸಕಾರಾತ್ಮಕ ಬದಲಾವಣೆಯಾಗಿದೆ.
ಮಲ್ಲಿಗೆ ಹೂವು ಕೀಳುತ್ತಿರುವ ಹಡಗಲಿಯ ಮಹಿಳೆಯರು(ಸಂಗ್ರಹ ಚಿತ್ರ)
ಗುಳೆ ತಪ್ಪಿಸಿ, ಸ್ವಗ್ರಾಮದಲ್ಲೇ ಉದ್ಯೋಗ ನೀಡಿದ 'ಹಡಗಲಿ ಮಲ್ಲಿಗೆ'
ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಉದ್ಯೋಗವಿಲ್ಲದೆ ಜನರು ಗುಳೆ ಹೋಗುವುದು ಸಾಮಾನ್ಯ. ಆದರೆ ಹೂವಿನ ಹಡಗಲಿಯಲ್ಲಿ ಆ ಪರಿಸ್ಥಿತಿ ಇಲ್ಲ. ಇಲ್ಲಿ ಮಹಿಳೆಯರು ಉದ್ಯೋಗರಸಿ ಬೇರೆಡೆಗೆ ಹೋಗದೆ, ತಮ್ಮ ಊರಿನಲ್ಲೇ ಸ್ವ-ಉದ್ಯೋಗ ಕಂಡುಕೊಂಡಿದ್ದಾರೆ. ಮಲ್ಲಿಗೆ ಕೃಷಿ ಮಹಿಳೆಯರ ಸಬಲೀಕರಣಕ್ಕೆ ಹೇಗೆ ಕಾರಣವಾಗಿದೆ ಎಂಬುದರ ಕುರಿತು ಹೂವಿನ ಹಡಗಲಿ ತಾಲೂಕಿನ ಮಲ್ಲಿಗೆ ಬೆಳೆಗಾರರಾದ ಗಂಗಮ್ಮ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
“ಕಾರ್ಮಿಕರ ಸಮಸ್ಯೆ ಇದ್ದರೂ, ಈ ಕೃಷಿಯು 8-10 ಹಳ್ಳಿಗಳ ನೂರಾರು ಕುಟುಂಬಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಸ್ವಗ್ರಾಮದಲ್ಲೇ ದುಡಿಮೆಯ ಮೂಲವಾಗಿದೆ. ಉದ್ಯೋಗಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ಹೂವಿನ ಹಡಗಲಿ ಮಹಿಳೆಯರಿಗಿಲ್ಲ. ಹೂವು ಕೀಳುವುದು, ಹೂವು ಕಟ್ಟುವುದೇ ಮಹಿಳೆಯರಿಗೆ ಪೂರ್ಣ ಪ್ರಮಾಣದ ವೃತ್ತಿಯಾಗಿದೆ. ಅದೇ ಈಗ ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿ ದೀಪವಾಗಿದೆ. ಹೂವು ಕೀಳುವ, ಬಿಡಿಸುವ ಕಾರ್ಯಕ್ಕೆ ಮಹಿಳೆಯರೇ ಬೇಕು. ಅವರು ದಿನದಲ್ಲಿ ಆರು ತಾಸು ಕೆಲಸ ಮಾಡಿ ಸುಮಾರು 300 ರೂ.ಗಳಷ್ಟು ಗಳಿಸುತ್ತಿದ್ದಾರೆ. ಆ ಮೂಲಕ ತಮ್ಮ ಸಂಸಾರಕ್ಕೆ ಹೆಗಲು ಕೊಟ್ಟಿದ್ದಾರೆ” ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ವರ್ಷದ ಐದು ತಿಂಗಳುಗಳ ಕಾಲ ಇತರ ಕೂಲಿ ಕೆಲಸಗಳು ಕ್ಷೀಣಿಸಿರುವಾಗ, ಮಹಿಳೆಯರ ಕೈ ಹಿಡಿದು ಆರ್ಥಿಕ ಆಸರೆಯಾಗಿ ನಿಂತಿರುವುದೇ ಮಲ್ಲಿಗೆ ಕೃಷಿ. ಈ ಬಗ್ಗೆ ಮಾತನಾಡಿರುವ ಹೂವಿನ ಹಡಗಲಿಯ ಹೂವಿನ ಬೆಳೆಗಾರರ ಸಂಘದ ಖಜಾಂಚಿ ಕೆ.ಎಂ ಶಿವಪ್ರಕಾಶ ಹನಕನಹಳ್ಳಿ, ಮಹಿಳೆಯರ ಆರ್ಥಿಕತೆಯ ಸ್ಪಷ್ಟ ಚಿತ್ರಣ ನೀಡಿದ್ದಾರೆ. "ಪ್ರತಿ ದಿನ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಲ್ಲಿಗೆ ಬಿಡಿಸುವ ಕೆಲಸದಲ್ಲಿ ನಿರತರಾಗುವ ಮಹಿಳೆಯರು, ಸರಾಸರಿ 3 ರಿಂದ 4 ಕೆಜಿ ಹೂವು ಬಿಡಿಸುತ್ತಾರೆ. ಒಂದು ಕೆಜಿ ಹೂವು ಬಿಡಿಸಿದರೆ 100 ರೂ. ಕೂಲಿ ಸಿಗುವುದರಿಂದ ದಿನಕ್ಕೆ 300-400 ರೂ. ವರೆಗೆ ಆದಾಯ ಗಳಿಸುತ್ತಾರೆ. ಕೇವಲ ಹೂವು ಬಿಡಿಸುವುದು ಮಾತ್ರವಲ್ಲದೆ, ಒಂದು ಕೆಜಿ ಹೂವು ಕಟ್ಟಿದರೆ 60 ರೂ. ಹಾಗೂ ವಿಶೇಷವಾಗಿ ಮೊಗ್ಗಿನ ಜಡೆ ಹೆಣೆದರೆ 150 ರಿಂದ 300 ರೂ.ವರೆಗೆ ಸಂಭಾವನೆ ದೊರೆಯುತ್ತದೆ. ಈ ಭಾಗದ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆ ಹಾಗೂ ಸ್ವಸಹಾಯ ಸಂಘಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲು ಸಂಪೂರ್ಣವಾಗಿ ಈ ಮಲ್ಲಿಗೆ ಬೆಳೆಯನ್ನೇ ಅವಲಂಬಿಸಿದ್ದಾರೆ" ಎಂದು ವಿವರಿಸಿದ್ದಾರೆ.
ಮನೆಗೆಲಸದ ನಡುವೆಯೂ ಆದಾಯ ತರುವ 'ಮೈಸೂರು ಮಲ್ಲಿಗೆ'
ಮೈಸೂರು ಭಾಗದಲ್ಲಿ ಮಲ್ಲಿಗೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದ್ದರೂ, ಮಹಿಳೆಯರ ಪಾಲಿಗೆ ಇದು ಬಹುದೊಡ್ಡ ಆಸರೆ. ಪ್ರಸ್ತುತ ಮೈಸೂರಿನಲ್ಲಿ ಕೇವಲ 15-20 ರೈತರು ಮಾತ್ರ ಈ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ, ಇದರಲ್ಲಿ ಅರ್ಧದಷ್ಟು ಮಹಿಳೆಯರೇ ಇರುವುದು ವಿಶೇಷ.
ಈ ಕುರಿತು ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಬಿ.ಎನ್. ಜ್ಞಾನೇಶ್ ಅವರು ವಿವರಿಸುತ್ತಾ, "ಹಿಂದೆಲ್ಲ ಮುಂಜಾನೆ ಹೂವು ಬಿಡಿಸುವುದರಿಂದ ಹಿಡಿದು, ಅದನ್ನು ಮಾರುಕಟ್ಟೆಗೆ ಸಿದ್ಧಪಡಿಸುವವರೆಗೆ ಮಹಿಳೆಯರ ಪಾತ್ರ ದೊಡ್ಡದು. ಮನೆಯ ಕೆಲಸಗಳ ನಡುವೆಯೂ ಮಹಿಳೆಯರು ತಮ್ಮ ಹಿತ್ತಲಿನಲ್ಲಿ ಅಥವಾ ಸಣ್ಣ ಜಮೀನಿನಲ್ಲಿ ಮಲ್ಲಿಗೆ ಬೆಳೆಯುವ ಮೂಲಕ ಹೆಚ್ಚುವರಿ ಆದಾಯ ಗಳಿಸುತ್ತಿದ್ದರು. ಇದು ಅವರ ಸ್ವಾವಲಂಬಿ ಬದುಕಿಗೆ ಆಸರೆಯಾಗಿತ್ತು" ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಕುಂಠಿತಗೊಂಡಿರುವ ಈ ಕೃಷಿಯನ್ನು ಮತ್ತೆ ಉತ್ತೇಜಿಸಿ ಮಹಿಳೆಯರಿಗೆ ಆರ್ಥಿಕ ಬಲ ತುಂಬುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.
ಮೈಸೂರು ಮಲ್ಲಿಗೆ(ಸಂಗ್ರಹ ಚಿತ್ರ)
ಕರಾವಳಿಯ ಹೆಮ್ಮೆ ಶಂಕರಪುರ ಮಲ್ಲಿಗೆ
ಕರ್ನಾಟಕದ ಮಲ್ಲಿಗೆಗಳಲ್ಲಿ ಮೈಸೂರು ಮಲ್ಲಿಗೆಯಷ್ಟೇ ಖ್ಯಾತಿ ಪಡೆದಿರುವುದು ಉಡುಪಿಯ ಶಂಕರಪುರ ಮಲ್ಲಿಗೆ. ಇದು ಕೇವಲ ಒಂದು ಹೂವಲ್ಲ, ಕರಾವಳಿ ಜನರ ಭಾವನೆ ಮತ್ತು ಆರ್ಥಿಕತೆಯ ಬೆನ್ನೆಲುಬು. 2008ರಲ್ಲಿ ಭೌಗೋಳಿಕ ಸೂಚ್ಯಂಕ (GI Tag) ಪಡೆದ ಈ ಮಲ್ಲಿಗೆ ತನ್ನದೇ ಆದ ವಿಶಿಷ್ಟ ಸಂಪ್ರದಾಯವನ್ನು ಹೊಂದಿದೆ. ಆಧುನಿಕ ಯುಗದಲ್ಲೂ ಕರಾವಳಿ ಭಾಗದಲ್ಲಿ ಮಲ್ಲಿಗೆ ಕೃಷಿಯನ್ನೇ ಆಧರಿಸಿಕೊಂಡು ಬದುಕು ಸಾಗಿಸುತ್ತಿರುವ ಕುಟುಂಬಗಳು ಬಹಳಷ್ಟಿವೆ.
ಈ ಬಗ್ಗೆ ಶಂಕರಾಪುರದ ಮಲ್ಲಿಗೆ ಬೆಳೆಗಾರರಾದ ಜಾನ್ ಡಿಸೋಜಾ ದ ಫಡರಲ್ ಕರ್ನಾಟಕದ ಜೊತೆ ಮಾತನಾಡಿದ್ದು, “ಶಂಕರಪುರ ಮಲ್ಲಿಗೆಯು ಸೂರ್ಯನ ಶಾಖಕ್ಕೆ ಹೆಚ್ಚು ಸ್ಪಂದಿಸುವ ಬೆಳೆ. ಬೇಸಿಗೆಯ ಸೆಖೆಯ ಸಮಯದಲ್ಲಿ ಇದರ ಉತ್ಪಾದನೆ ಗರಿಷ್ಠ ಮಟ್ಟದಲ್ಲಿರುತ್ತದೆ. ಗಿಡಗಳು ಸದೃಢವಾಗಿದ್ದರೆ ಮತ್ತು ಸರಿಯಾದ ಪೋಷಣೆ ನೀಡಿದರೆ ವರ್ಷಪೂರ್ತಿ ಫಸಲು ಪಡೆಯಲು ಸಾಧ್ಯವಿದೆ. ಅತಿಯಾದ ಚಳಿ ಮತ್ತು ಮಳೆಯ ಸಮಯದಲ್ಲಿ ಹೂವಿನ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ” ಎಂದಿದ್ದಾರೆ.
ಮಾರುಕಟ್ಟೆ ಮತ್ತು ದರ ನಿರ್ಧಾರ
ಶಂಕರಪುರ ಮಲ್ಲಿಗೆಯ ಮಾರುಕಟ್ಟೆ ವ್ಯವಸ್ಥೆ ಅತ್ಯಂತ ವಿಶಿಷ್ಟವಾಗಿದೆ. ಇದು ಇಲ್ಲಿಯವರೆಗೆ ಸರ್ಕಾರದ ಯಾವುದೇ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಬೆಳೆಗಾರರು ತಾವು ಬೆಳೆದ ಹೂವನ್ನು ಏಜೆಂಟ್‌ಗಳ ಮೂಲಕ 'ಶಂಕರಪುರ ಕಟ್ಟೆ'ಗೆ ತಲುಪಿಸುತ್ತಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ಜಾನ್ ಡಿಸೋಜಾ ಅವರು,” ಮಾರುಕಟ್ಟೆಯ ಬೇಡಿಕೆಯನ್ನು ಗಮನಿಸಿ 'ಕಟ್ಟೆ ಮುಖ್ಯಸ್ಥರು' ಪ್ರತಿದಿನ ಬೆಲೆ ನಿಗದಿಪಡಿಸುತ್ತಾರೆ. ವಿಶೇಷವೆಂದರೆ, ಬೆಲೆ ನಿರ್ಧರಿಸುವವರೂ ಬೆಳೆಗಾರರೇ ಆಗಿರುವುದರಿಂದ ರೈತರ ಹಿತಾಸಕ್ತಿಗೆ ಪೂರಕವಾಗಿಯೇ ದರ ನಿರ್ಧಾರವಾಗುತ್ತದೆ. ಬೇಡಿಕೆ ಹೆಚ್ಚಿದ್ದಾಗ ಒಂದು 'ಅಟ್ಟಿ' (ಹೂವಿನ ಅಳತೆ) ಹೂವಿಗೆ ಸುಮಾರು 2,200 ರೂ.ಗಳವರೆಗೆ ಗರಿಷ್ಠ ಬೆಲೆ ಸಿಗುತ್ತದೆ” ಎಂದಿದ್ದಾರೆ.
ಉಡುಪಿಯ ಶಂಕರಪುರ ಮಲ್ಲಿಗೆ(ಸಂಗ್ರಹ ಚಿತ್ರ)
ಮಕ್ಕಳ ಭವಿಷ್ಯ ರೂಪಿಸಿದ ಶಂಕರಪುರ 'ಬಿಳಿ ಚಿನ್ನ'
ಕರಾವಳಿಯ ಉಡುಪಿ ಭಾಗದಲ್ಲಿ ಮಲ್ಲಿಗೆ ಕೃಷಿಯೇ ಹಲವು ಕುಟುಂಬಗಳಿಗೆ ಜೀವನಾಧಾರ. ಈ ಭಾಗದ ಮಹಿಳೆಯರಂತೂ ಮಲ್ಲಿಗೆ ಕೃಷಿಯನ್ನೇ ತಮ್ಮ ಪೂರ್ಣ ಪ್ರಮಾಣದ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಮೂರೂವರೆ ದಶಕಗಳಿಂದ ಮಲ್ಲಿಗೆ ಕೃಷಿಯನ್ನೇ ನಂಬಿ ಬದುಕುತ್ತಿರುವ ಗ್ರೇಸಿ ಮಾತೈಸ್ ಅವರ ಯಶೋಗಾಥೆ ಮಹಿಳಾ ಸಬಲೀಕರಣಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
ತಮ್ಮ ಯಶಸ್ಸಿನ ಹಾದಿಯನ್ನು ಮೆಲುಕು ಹಾಕಿರುವ ಗ್ರೇಸಿ, "ನಾವು ಕಳೆದ 35 ವರ್ಷಗಳಿಂದ ಮಲ್ಲಿಗೆ ಕೃಷಿ ಮಾಡುತ್ತಿದ್ದೇವೆ. ಕೇವಲ 10 ಸೆಂಟ್ಸ್ ಜಾಗದಲ್ಲಿ ಆರಂಭವಾದ ಈ ಕೃಷಿ ಇಂದು ನಮ್ಮ ಇಡೀ ಕುಟುಂಬಕ್ಕೆ ಆಸರೆಯಾಗಿದೆ. ಇದೇ ಮಲ್ಲಿಗೆಯನ್ನು ಮಾರಿ ಬಂದ ಹಣದಿಂದಲೇ ನನ್ನ ಮೂವರು ಮಕ್ಕಳನ್ನು ಚೆನ್ನಾಗಿ ಓದಿಸಿ, ಇಂದು ಅವರು ವಿದೇಶದಲ್ಲಿ ನೆಲೆಸುವಂತೆ ಮಾಡಿದ್ದೇನೆ. ಈ ಹೂವು ನಮ್ಮ ಬದುಕನ್ನೇ ಕಟ್ಟಿಕೊಟ್ಟಿದೆ" ಎಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಒಂದು ಕಾಲದಲ್ಲಿ ವಾರಕ್ಕೆ 15 ಸಾವಿರದವರೆಗೆ ಆದಾಯ ಗಳಿಸುತ್ತಿದ್ದ ಅವರು, ಈಗ ವಯಸ್ಸಾಗಿರುವುದರಿಂದ ಕೃಷಿಯ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ. ಆದರೂ, ಶ್ರಮಜೀವಿಯಾಗಿರುವ ಅವರು ಈಗಲೂ ದಿನಕ್ಕೆ 1-2 ಅಟ್ಟಿ ಹೂವು ಬೆಳೆಯುತ್ತಿದ್ದಾರೆ. ಪ್ರಸ್ತುತ ಮಲ್ಲಿಗೆಯಿಂದ ವಾರಕ್ಕೆ ಸರಾಸರಿ 4 ರಿಂದ 5 ಸಾವಿರ ರೂಪಾಯಿಗಳನ್ನು ಗಳಿಸುತ್ತಾ, ತಮ್ಮ ಇಳಿ ವಯಸ್ಸಿನಲ್ಲೂ ಯಾರಿಗೂ ಹೊರೆಯಾಗದೆ, ಯಾರ ಮುಂದೆಯೂ ಕೈಚಾಚದೆ ಸಂಪೂರ್ಣ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಮಲ್ಲಿಗೆ ಕೇವಲ ದೇವರಿಗೆ ಏರಿಸುವ ಅಥವಾ ಮುಡಿಯುವ ಹೂವಲ್ಲ, ಅದು ಮಹಿಳೆಯರ ಬೆವರಿನ ಹನಿಗಳಿಗೆ ಸಿಕ್ಕ ತಕ್ಕ ಪ್ರತಿಫಲ, ಹೆಣ್ಣುಮಕ್ಕಳ ಸ್ವಾಭಿಮಾನದ ಸಂಕೇತ. ಪುರುಷ ಪ್ರಧಾನ ಕೃಷಿ ವಲಯದಲ್ಲಿ, ಮಹಿಳೆಯರು ತಮ್ಮದೇ ಆದ ಸ್ವತಂತ್ರ ಸಾಮ್ರಾಜ್ಯವನ್ನು ಕಟ್ಟಿಕೊಳ್ಳಲು ಮಲ್ಲಿಗೆ ದಾರಿ ಮಾಡಿಕೊಟ್ಟಿದೆ. ತನ್ನ ಪರಿಮಳದ ಮೂಲಕ ಜಗತ್ತನ್ನು ಸೆಳೆಯುವ ಮಲ್ಲಿಗೆ, ಅದೇ ಹೊತ್ತಿಗೆ ಸಾವಿರಾರು ಮಹಿಳೆಯರ ಬದುಕಿನ ಆರ್ಥಿಕ ಕತ್ತಲನ್ನು ಹೋಗಲಾಡಿಸಿ ಬೆಳಕು ನೀಡುತ್ತಿರುವ ನಿಜವಾದ 'ಬಿಳಿ ಚಿನ್ನ'ವಾಗಿ ಕಂಗೊಳಿಸುತ್ತಿದೆ.

