Iva Nammava Bill| ಹುಬ್ಬಳ್ಳಿಯ ಮಾನ್ಯಾ ಪಾಟೀಲ್ ಹತ್ಯೆಯಂತಹ ಭೀಕರ ಘಟನೆಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಬಸವಣ್ಣನವರ ತತ್ವಾದರ್ಶದಡಿ 'ಇವ ನಮ್ಮವ' ಎಂಬ ಐತಿಹಾಸಿಕ ವಿಧೇಯಕವನ್ನು ಜಾರಿಗೆ ತಂದಿದೆ. ಈ ಕಾಯ್ದೆಯು ಅಂತರ್ಜಾತಿ ಮತ್ತು ಅಂತರ್ಧರ್ಮೀಯ ದಂಪತಿಗಳಿಗೆ ಹೇಗೆ ರಕ್ಷಣೆ ನೀಡಲಿದೆ?
ಹೆತ್ತು ಹೊತ್ತು ಬೆಳೆಸಿದ ಮಕ್ಕಳ ಸುಖ-ನೆಮ್ಮದಿ, ನಗುಗಿಂತಲೂ 'ಜಾತಿ ಮರ್ಯಾದೆಯೇ' ದೊಡ್ಡದಾದಾಗ, ಪ್ರೀತಿಗಿಂತಲೂ 'ಕುಲದ ಹಮ್ಮು' ಮೇಲಾದಾಗ ಹುಟ್ಟಿಕೊಳ್ಳುವ ಕ್ರೂರ ರೂಪವೇ ಮರ್ಯಾದೆಗೇಡು ಹತ್ಯೆ. ತನ್ನದೇ ರಕ್ತವನ್ನು ಹರಿಸುವ ಮೂಲಕ ಸಮಾಜದಲ್ಲಿ ಗೌರವ ಉಳಿಸಿಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿರುವ ಈ ಅನಿಷ್ಟ ಪದ್ಧತಿ, ಆಧುನಿಕ ಜಗತ್ತಿಗೂ ಅಂಟಿದ ದೊಡ್ಡ ಶಾಪ. ಪ್ರೀತಿ ಹಸಿರಾಗಬೇಕಾದ ಜಾಗದಲ್ಲಿ ರಕ್ತದ ಕೆಂಪು ಚೆಲ್ಲುವ ಈ ಅಮಾನವೀಯ ಕೃತ್ಯಗಳಿಗೆ ಕೊನೆ ಹಾಡಲೆಂದೇ ಇದೀಗ ಕರ್ನಾಟಕ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಪ್ರೀತಿಗೆ ಜಾತಿ ಇಲ್ಲ, ನೀತಿಗೆ ಕುಲವಿಲ್ಲ ಎಂಬ ಮಾತನ್ನು ಕೇವಲ ಘೋಷಣೆಯಾಗಿಸದೆ, ಕ್ರಾಂತಿಕಾರಿ ಕಾನೂನನ್ನಾಗಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಬಸವಣ್ಣನವರ 'ಇವ ನಮ್ಮವ' ಎಂಬ ಸಮಾನತೆಯ ಮಂತ್ರವನ್ನೇ ಹೆಸರಾಗಿಸಿಕೊಂಡು, ಮರ್ಯಾದೆಗೇಡು ಹತ್ಯೆಯಂತಹ ಅನಿಷ್ಟ ಪದ್ಧತಿಗೆ ಮರಣಶಾಸನ ಬರೆಯುವ ಐತಿಹಾಸಿಕ ವಿಧೇಯಕಕ್ಕೆ ಈಗ ವಿಧಾನ ಪರಿಷತ್ತಿನಲ್ಲೂ ಮೊಹರು ಬಿದ್ದಿದೆ. ಪ್ರೀತಿಯ ಹೆಸರಲ್ಲಿ ರಕ್ತ ಹರಿಸುವವರಿಗೆ ಇನ್ನುಳಿಗಾಲವಿಲ್ಲ ಎಂಬ ಸಂದೇಶವನ್ನು ಈ ಕಾಯ್ದೆ ಸಾರುತ್ತಿದೆ.
ಕಳೆದ 5 ವರ್ಷಗಳಲ್ಲಿ 15ಪ್ರಕರಣಗಳು
ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 15 ಮರ್ಯಾದೆಗೇಡು ಹತ್ಯೆಗಳು ನಡೆದಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನಪರಿಷತ್ತಿನಲ್ಲಿ ಬಹಿರಂಗಪಡಿಸಿದ್ದಾರೆ. ಬಿಜೆಪಿ ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಸಾಮಾಜಿಕ ಪಿಡುಗನ್ನು ಹತ್ತಿಕ್ಕಲು ಸರ್ಕಾರವು ಬದ್ಧವಾಗಿದೆ ಎಂದು ತಿಳಿಸಿದ್ದರು.
'ಇವ ನಮ್ಮವ ಇವ ನಮ್ಮವ' ವಿಧೇಯಕಕ್ಕೆ ಮುದ್ರೆ
ಹುಬ್ಬಳ್ಳಿಯಲ್ಲಿ ಕೆಲವು ತಿಂಗಳ ಹಿಂದೆ ಗರ್ಭಿಣಿ ಮನ್ಯಾ ಪಾಟೀಲ್ ಅವರ ಬರ್ಬರ ಹತ್ಯೆಯ ಘಟನೆಯು ಇಡೀ ಕರ್ನಾಟಕವನ್ನು ಬೆಚ್ಚಿಬೀಳಿಸಿತ್ತು ಮತ್ತು ಸರ್ಕಾರದ ಮೇಲೆ ತಕ್ಷಣದ ಕಾನೂನು ಕ್ರಮಕ್ಕಾಗಿ ಭಾರೀ ಒತ್ತಡ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ರಾಜ್ಯ ಸರ್ಕಾರವು 'ಇವ ನಮ್ಮವ' (Iva Nammava Bill, 2026) ಎಂಬ ಮಹತ್ವದ ಕಾಯ್ದೆ ಜಾರಿಗೆ ತರಲು ಮುಂದಾಯಿತು.
ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯ ಎತ್ತಿಹಿಡಿಯಲು ಮತ್ತು ಮರ್ಯಾದೆ ಹೆಸರಿನಲ್ಲಿ ನಡೆಯುವ ಅಮಾನವೀಯ ಕೃತ್ಯಗಳಿಗೆ ಕಡಿವಾಣ ಹಾಕಲು ಉದ್ದೇಶಿಸಿರುವ 'ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕ-2026'ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಮುದ್ರೆ ಬಿದ್ದಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು ಮಂಡಿಸಿದ ಈ ವಿಧೇಯಕದ ಮೇಲೆ ಸುಮಾರು ಐದು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದ ನಂತರ, ಮೇಲ್ಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ವಿಧೇಯಕದ ಪ್ರಮುಖ ಉದ್ದೇಶಗಳು:
12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಇವ ನಮ್ಮವ ಇವ ನಮ್ಮವ ಎಂಬ ಸಮಾನತೆಯ ಸಂದೇಶದಿಂದ ಪ್ರೇರಿತವಾಗಿರುವ ಈ ಕಾಯ್ದೆಯು ಪ್ರಮುಖ ಅಂಶಗಳನ್ನು ಒಳಗೊಂಡಿದೆ:
• ಆಯ್ಕೆಯ ಸ್ವಾತಂತ್ರ್ಯ: ವಯಸ್ಕರಾದ ಇಬ್ಬರು ವ್ಯಕ್ತಿಗಳು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗುವ ಸಾಂವಿಧಾನಿಕ ಹಕ್ಕನ್ನು ಎತ್ತಿಹಿಡಿಯುವುದು. ಇದಕ್ಕೆ ಪೋಷಕರ ಅಥವಾ ಸಮಾಜದ ಪೂರ್ವಾನುಮತಿ ಅಗತ್ಯವಿಲ್ಲ ಎಂದು ವಿಧೇಯಕ ಸ್ಪಷ್ಟಪಡಿಸುತ್ತದೆ.
• ಕಠಿಣ ಶಿಕ್ಷೆ: 'ಮರ್ಯಾದೆ'ಯ ಹೆಸರಿನಲ್ಲಿ ನಡೆಯುವ ಹತ್ಯೆಗಳಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧೇಯಕವು ಪ್ರಸ್ತಾಪಿಸಿದೆ. ಗಂಭೀರ ಗಾಯಗೊಳಿಸುವ ಅಥವಾ ದೈಹಿಕ ಹಿಂಸೆ ನೀಡುವ ಅಪರಾಧಗಳಿಗೆ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
• ರಕ್ಷಣೆ ಮತ್ತು ಭದ್ರತೆ: ಬೆದರಿಕೆ ಎದುರಿಸುತ್ತಿರುವ ಅಂತರ್ಜಾತಿ ಅಥವಾ ಅಂತರ್ಧರ್ಮೀಯ ದಂಪತಿಗಳಿಗೆ ದೂರು ನೀಡಿದ 6 ಗಂಟೆಗಳ ಒಳಗಾಗಿ ಪೊಲೀಸ್ ರಕ್ಷಣೆ ಒದಗಿಸಲು ಕಾಯ್ದೆ ಕಡ್ಡಾಯಗೊಳಿಸುತ್ತದೆ.
• ಇವ ನಮ್ಮವ ವೇದಿಕೆ: ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ವೇದಿಕೆಗಳನ್ನು ರಚಿಸಿ, ಅಂತಹ ದಂಪತಿಗಳಿಗೆ ಕಾನೂನು ನೆರವು, ಕೌನ್ಸಿಲಿಂಗ್ ಮತ್ತು ಪುನರ್ವಸತಿ ಸೌಲಭ್ಯಗಳನ್ನು ಒದಗಿಸಲಾಗುವುದು.
• ಸಾಮಾಜಿಕ ಬಹಿಷ್ಕಾರಕ್ಕೆ ನಿಷೇಧ: ಮದುವೆಯಾದ ದಂಪತಿಗಳನ್ನು ಅಥವಾ ಅವರ ಕುಟುಂಬವನ್ನು ಗ್ರಾಮದಿಂದ ಅಥವಾ ಸಮುದಾಯದಿಂದ ಬಹಿಷ್ಕರಿಸುವುದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ.
• ಜಿಲ್ಲಾ ದಂಡಾಧಿಕಾರಿಗಳ ಜವಾಬ್ದಾರಿ: ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು (DC) ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು (SP) ಅಂತರ್ಜಾತಿ/ಅಂತರ್ಧರ್ಮೀಯ ದಂಪತಿಗಳ ರಕ್ಷಣೆಗೆ ವಿಶೇಷ ಘಟಕವನ್ನು ರಚಿಸಬೇಕು.
• ಸಹಾಯವಾಣಿ: ದಂಪತಿಗಳು ತೊಂದರೆಯಲ್ಲಿದ್ದಾಗ ತಕ್ಷಣ ಕರೆ ಮಾಡಲು 24/7 ಮೀಸಲಾದ ಸಹಾಯವಾಣಿ ಸಂಖ್ಯೆಯನ್ನು ಸರ್ಕಾರ ನೀಡಲಿದೆ.
• ಸೇಫ್ ಹೌಸ್: ಬೆದರಿಕೆ ಇರುವ ದಂಪತಿಗಳಿಗೆ ಸರ್ಕಾರಿ ವೆಚ್ಚದಲ್ಲಿ ಸುರಕ್ಷಿತ ವಸತಿ (Safe Houses) ವ್ಯವಸ್ಥೆಯನ್ನು ಒಂದು ತಿಂಗಳ ಕಾಲ ಅಥವಾ ಅಪಾಯ ಇರುವವರೆಗೆ ಒದಗಿಸಲಾಗುತ್ತದೆ.
• ತ್ವರಿತಗತಿ ನ್ಯಾಯಾಲಯ: ಈ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಗಳ ಮೂಲಕ 6 ತಿಂಗಳ ಒಳಗಾಗಿ ವಿಲೇವಾರಿ ಮಾಡಬೇಕು.
• ಸಮಾಜದ ಮೇಲೆ ಹೊಣೆಗಾರಿಕೆ: ಯಾವುದೇ ಗುಂಪು ಅಥವಾ ಸಮುದಾಯದ ಮುಖಂಡರು 'ಗೌರವ'ದ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡರೆ, ಆ ಇಡೀ ಗುಂಪನ್ನು ಅಪರಾಧಕ್ಕೆ ಪ್ರಚೋದನೆ ನೀಡಿದವರು ಎಂದು ಪರಿಗಣಿಸಲಾಗುತ್ತದೆ.
ರಾಜ್ಯದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣಗಳು
ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ (2020-2025) ಹಲವಾರು ಮರ್ಯಾದೆಗೇಡು ಹತ್ಯೆ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಪ್ರಮುಖವಾಗಿ ಅಂತರ್ಜಾತಿ ಅಥವಾ ಅನ್ಯಧರ್ಮದ ಪ್ರೇಮ ಸಂಬಂಧಗಳನ್ನು ವಿರೋಧಿಸಿ ಪೋಷಕರು ಅಥವಾ ಸಂಬಂಧಿಕರೇ ಈ ಕೃತ್ಯ ಎಸಗಿರುವುದು ಕಂಡುಬಂದಿದೆ. ಕಳೆದ ಐದು ವರ್ಷಗಳಲ್ಲಿ ನಡೆದ ಕೆಲವು ಪ್ರಮುಖ ಪ್ರಕರಣಗಳ ವಿವರ ಇಲ್ಲಿವೆ.
*ಗರ್ಭಿಣಿಯನ್ನು ಬರ್ಬರವಾಗಿ ಕೊಂದ ತಂದೆ(ಡಿಸೆಂಬರ್ 2025 ) ಮನುಕುಲವೇ ತಲೆ ತಗ್ಗಿಸುವಂತಹ ಮರ್ಯಾದಾ ಹತ್ಯೆ ಪ್ರಕರಣವೊಂದು ಹುಬ್ಬಳ್ಳಿಯಲ್ಲಿ 2025ರ ಡಿಸೆಂಬರ್‌ನಲ್ಲಿ ನಡೆದಿತ್ತು. ದಲಿತ ಯುವಕನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಏಳು ತಿಂಗಳ ಗರ್ಭಿಣಿ ಮಾನ್ಯಾ ಪಾಟೀಲ್ ಎಂಬಾಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಈ ಹೀನ ಕೃತ್ಯ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದಿತ್ತು. *ಕಲಬುರಗಿ ಪ್ರಕರಣ (ಆಗಸ್ಟ್ 2025) ಕಲಬುರಗಿಯ ಮೇಳಕುಂದಾ (ಬಿ) ಗ್ರಾಮದಲ್ಲಿ ಅನ್ಯಜಾತಿಯ ಯುವಕನನ್ನು (ಕುರುಬ ಸಮುದಾಯ) ಪ್ರೀತಿಸಿದ ಕಾರಣಕ್ಕೆ ಕವಿತಾ ಕೊಳ್ಳೂರ್ ಎಂಬ ಯುವತಿಯನ್ನು ಆಕೆಯ ತಂದೆ ಶಂಕರ್ ಕೊಳ್ಳೂರ್ ಮತ್ತು ಸಂಬಂಧಿಕರು ಕತ್ತು ಹಿಸುಕಿ ಕೊಂದಿದ್ದ. ನಂತರ ಇದು ಆತ್ಮಹತ್ಯೆ ಎಂದು ಬಿಂಬಿಸಲು ಶವಕ್ಕೆ ಕ್ರಿಮಿನಾಶಕ ಸುರಿದು ಪೊಲೀಸರಿಗೆ ತಿಳಿಸದ ಹೊಲದಲ್ಲಿ ಸುಟ್ಟು ಹಾಕಿದ್ದ. *ಕೋಲಾರ ಪ್ರಕರಣ (ಡಿಸೆಂಬರ್ 2023) ಮುಳಬಾಗಲು ತಾಲೂಕಿನ ಮುನ್ನೂರು ಗ್ರಾಮದಲ್ಲಿ ತನ್ನ ಸೋದರ ಸಂಬಂಧಿಯನ್ನು ಪ್ರೀತಿಸುತ್ತಿದ್ದ 17 ವರ್ಷದ ಅಪ್ರಾಪ್ತ ಮಗಳನ್ನು ತಂದೆ ರವಿ ಹತ್ಯೆ ಮಾಡಿ ಸುಟ್ಟು ಹಾಕಿದ್ದ ನಂತರ ಮಗಳು ಕಾಣೆಯಾಗಿದ್ದಾಳೆ ಎಂದು ತಂದೆಯೇ ದೂರು ನೀಡಿದ್ದ. ಆದರೆ ತನಿಖೆಯ ನಂತರ ಇದು ಮರ್ಯಾದಾ ಹತ್ಯೆ ಎಂದು ಬೆಳಕಿಗೆ ಬಂತು. *ಕೆಜಿಎಫ್ ಪ್ರಕರಣ (ಜೂನ್ 2023) ಬಂಗಾರಪೇಟೆಯ ಕಾಮಸಮುದ್ರದಲ್ಲೂ ಇಂತಹದ್ದೂ ಒಂದು ಘಟನೆ 2023ರಲ್ಲಿ ನಡೆದಿತ್ತು. ಅನ್ಯಜಾತಿಯ ಯುವಕ ಗಂಗಾಧರ್ ಎಂಬುವವರನ್ನು ಪ್ರೀತಿಸುತ್ತಿದ್ದ ಕೀರ್ತಿ (19) ಎಂಬ ಯುವತಿಯನ್ನು ಆಕೆಯ ತಂದೆ ಕೃಷ್ಣಮೂರ್ತಿ ಕತ್ತು ಹಿಸುಕಿ ಕೊಂದಿದ್ದ. ಈ ವಿಷಯ ತಿಳಿದ ಪ್ರಿಯಕರ ಗಂಗಾಧರ್ ಕೂಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನು. *ದೇವನಹಳ್ಳಿ ಪ್ರಕರಣ (ಜೂನ್ 2023) ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳೆಂದು (Love) ಮಗಳ ಕತ್ತು ಕೊಯ್ದು ಕೊಲೆ ಮಾಡಿರುವ ತಂದೆ, ತಾನೇ ಪೊಲೀಸರಿಗೆ ಶರಣಾದ ಘಟನೆ 2023ರಲ್ಲಿ ದೇವನಹಳ್ಳಿ (Devanahalli) ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿತ್ತು. ಯುವತಿ ಕವನ (20) ಮೃತ ದುರ್ದೈವಿ, ಮಂಜುನಾಥ್ (47) ಕೊಲೆ ಮಾಡಿ ಪೋಲಿಸರಿಗೆ ಶರಣಾಗಿರುವ ತಂದೆ. |
ಕಾನೂನಿನ ಜೊತೆಗೆ ಮನಸ್ಥಿತಿಯೂ ಬದಲಾಗಲಿ
ನಮ್ಮ ಸಮಾಜ ಎಷ್ಟು ಪ್ರಗತಿ ಸಾಧಿಸಿದೆ ಎಂದು ನಾವು ಹೇಳಿಕೊಂಡರೂ, ವಾಸ್ತವದಲ್ಲಿ ಜಾತಿಯ ಅಮಲು ಮತ್ತು ಅಂತಸ್ತಿನ ಪ್ರತಿಷ್ಠೆ ಮನುಷ್ಯ ಸಂಬಂಧಗಳಿಗಿಂತ ದೊಡ್ಡದಾಗಿ ನಿಂತಿರುವುದು ವಿಷಾದನೀಯ. ಈ ಬಗ್ಗೆ ಮಂಡ್ಯ ಜಿಲ್ಲೆಯ ಕಾರ್ಮಿಕ ಸಂಘಟನೆ CITU ರಾಜ್ಯ ಪ್ರಧಾನ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತೆ ಸಿ.ಕುಮಾರಿ ʻದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ್ದು, ಇವ ನಮ್ಮವ ಇವ ನಮ್ಮವ ಕಾನೂನನ್ನು ಸ್ವಾಗತಿಸಿದ್ದಾರೆ. ಕುಮಾರಿ ಅವರು ಮಂಡ್ಯ ಜಿಲ್ಲೆಯ ಅಬಲವಾಡಿಯಲ್ಲಿ2010-11ರಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಮತ್ತು 2012ರ ತಿಮ್ಮನ ಹೊಸೂರು ಘಟನೆಗಳನ್ನು ಉಲ್ಲೇಖಿಸಿದ್ದು, “ಕಾನೂನು ಇರಬೇಕು, ಅದು ತ್ವರಿತವಾಗಿ ಜಾರಿಯಾಗಬೇಕು. ಆದರೆ ಅದಕ್ಕಿಂತ ಮುಖ್ಯವಾಗಿ ಮನಸ್ಥಿತಿ ಬದಲಾಗಬೇಕು. ಸಮಾಜದಲ್ಲಿ ಜಾತಿಗ್ರಸ್ತ ಮನಸ್ಸುಗಳು ಇರುವವರೆಗೆ ಅನಾಹುತಗಳು ನಿಲ್ಲುವುದಿಲ್ಲ” ಎಂದರು.
“ಸಮಾಜದಲ್ಲಿ ಆರ್ಥಿಕವಾಗಿ ಸಮಾನ ಅಂತಸ್ತಿನವರಾಗಿದ್ದರೆ ಅಂತರಜಾತಿ ವಿವಾಹಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಸ್ವಲ್ಪ ಮಟ್ಟಿಗಿದೆ. ಆದರೆ, ಶ್ರೀಮಂತ ಅಥವಾ ಪ್ರಭಾವಿ ಸಮುದಾಯದ ಹುಡುಗಿ ಒಬ್ಬ ಬಡ ಅಥವಾ ದಲಿತ ಕೂಲಿ ಕಾರ್ಮಿಕನ ಮಗನನ್ನು ಪ್ರೀತಿಸಿದರೆ, ಅದನ್ನು 'ಮರ್ಯಾದೆ'ಯ ಪ್ರಶ್ನೆಯನ್ನಾಗಿ ಮಾಡಿಕೊಳ್ಳಲಾಗುತ್ತದೆ. ಸಮಾಜ ಏನು ಅಂದುಕೊಂಡೀತು? ಎಂಬ ಭೀತಿ ಮತ್ತು ತಮ್ಮ ಜಾತಿ ಗೌರವ ಮಣ್ಣುಪಾಲಾಯಿತು ಎಂಬ ಅಹಂಕಾರ ಹೆತ್ತವರನ್ನು ಅಂಧರನ್ನಾಗಿಸುತ್ತಿದೆ” ಎಂದು ಅಭಿಪ್ರಾಯಪಟ್ಟರು.
“ಇತ್ತೀಚಿನ ವರ್ಷಗಳಲ್ಲಿ ಜಾತಿವಾರು ಮಠಗಳು, ಸಂಘಗಳು ಮತ್ತು ಐಡೆಂಟಿಟಿ ಪಾಲಿಟಿಕ್ಸ್ ಪ್ರಬಲವಾಗುತ್ತಿರುವುದು ಸಮಾಜದಲ್ಲಿ ಒಡಕು ಉಂಟುಮಾಡುತ್ತಿದ್ದು, ಇದಕ್ಕೆ ಪರಿಹಾರವಾಗಿ ಶಾಲಾ-ಕಾಲೇಜು ಹಂತದಲ್ಲೇ ಮೌಢ್ಯದ ವಿರುದ್ಧ ವೈಜ್ಞಾನಿಕ ಶಿಕ್ಷಣ ಮತ್ತು ವೈಚಾರಿಕ ಪ್ರಜ್ಞೆಯನ್ನು ಮೂಡಿಸುವ ಅವಶ್ಯಕತೆಯಿದೆ. ಇದರೊಂದಿಗೆ, ರಕ್ಷಣೆ ಕೋರಿ ಬರುವ ಪ್ರೇಮಿಗಳಿಗೆ ಸೂಕ್ತ ಕೌನ್ಸೆಲಿಂಗ್ ಹಾಗೂ ಭದ್ರತೆ ನೀಡುವಲ್ಲಿ ಪೊಲೀಸ್ ವ್ಯವಸ್ಥೆಯು ಹೆಚ್ಚು ಸಂವೇದನಾಶೀಲವಾಗಿ ಕೆಲಸ ಮಾಡಬೇಕು ಮತ್ತು ಯಾವುದೇ ಒತ್ತಡಕ್ಕೆ ಮಣಿಯದೆ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬೇಕು” ಎಂದು ಕುಮಾರಿ ಕರೆ ನೀಡಿದ್ದಾರೆ.
ಮರಣದಂಡನೆಯೊಂದೇ ಪರಿಹಾರ
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ತಂದೆಯಿಂದಲೇ ಬರ್ಬರವಾಗಿ ಹತ್ಯೆಯಾದಂತಹ ಮಾನ್ಯಾ ಪಾಟೀಲ್ ಅವರ ಪತಿ ಪತಿ ವಿವೇಕಾನಂದ ದೊಡ್ಡಮಣಿ ʻದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ್ದು, “ಸಂವಿಧಾನದ ಅಡಿಯಲ್ಲಿ ಬದುಕುವ ದೇಶದಲ್ಲಿ, ಪ್ರೀತಿಸಿ ಮದುವೆಯಾದ ಏಕೈಕ ಕಾರಣಕ್ಕೆ ಗರ್ಭಿಣಿ ಹೆಣ್ಣೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದರೆ ನಮ್ಮ ಕಾನೂನು ವ್ಯವಸ್ಥೆ ಯಾರ ಪರವಾಗಿದೆ ಎಂಬ ಪ್ರಶ್ನೆ ಏಳುತ್ತದೆ. ನನ್ನ ಹೆಂಡತಿಯನ್ನು ಕೊಡಲಿಯಿಂದ ಇರಿದು ಕೊಲ್ಲುವಂತಹ ಧೈರ್ಯ ಅವರಿಗೆ ಎಲ್ಲಿಂದ ಬಂತು?” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
“ಪ್ರೀತಿಸಿದ ಮಗಳು ಅಥವಾ ಸಹೋದರಿಯನ್ನೇ ಕಡಿಯುವ ಈ 'ಮರ್ಯಾದೆಗೇಡು ಹತ್ಯೆ'ಗಳು ಸಮಾಜದಲ್ಲಿ ಇನ್ನೂ ಜೀವಂತವಾಗಿವೆ ಎಂದರೆ ಅದು ನಾಗರಿಕ ಸಮಾಜಕ್ಕೆ ದೊಡ್ಡ ಅವಮಾನ. ಅಂತರಜಾತಿ ವಿವಾಹಿತರಿಗೆ ಸೂಕ್ತ ಪೊಲೀಸ್ ಭದ್ರತೆ ಸಿಗದಿರುವುದೇ ಇಂತಹ ಘಟನೆಗಳಿಗೆ ಮುನ್ನುಡಿಯಾಗುತ್ತಿದೆ. ಬರ್ಬರ ಹಂತಕರಿಗೆ ಜೀವಾವಧಿ ಶಿಕ್ಷೆ ಸಾಲದು. ಕೇಸ್ ಕೋರ್ಟ್‌ನಲ್ಲಿ ದಶಕಗಳ ಕಾಲ ಎಳೆಯಬಾರದು. ತ್ವರಿತ ಕಾನೂನು ಪ್ರಕ್ರಿಯೆಯ ಮೂಲಕ ಅಪರಾಧಿಗಳಿಗೆ ಶಿಕ್ಷೆಯಾಗಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಗರ್ಭಿಣಿ ಹೆಣ್ಣನ್ನು ಮತ್ತು ಪ್ರಪಂಚವನ್ನು ನೋಡುವ ಮುನ್ನವೇ ನನ್ನ ಪುಟ್ಟ ಕಂದಮ್ಮನನ್ನು ಕೊಂದವನಿಗೆ ಗಲ್ಲು ಶಿಕ್ಷೆಯಾಗಬೇಕು. ಊರಿನಲ್ಲಿ ಬಹಿಷ್ಕಾರದಂತೆ ಬದುಕುತ್ತಿದ್ದೇವೆ" ಎಂಬ ಮಾತು ಇಂದಿಗೂ ಗ್ರಾಮೀಣ ಭಾಗದಲ್ಲಿ ಜಾತಿ ವ್ಯವಸ್ಥೆ ಎಷ್ಟು ಪ್ರಬಲವಾಗಿದೆ ಎಂಬುದನ್ನು ತೋರಿಸುತ್ತದೆ.
ಸರ್ಕಾರ ಜಾರಿಗೆ ತಂದಿರುವ ಕಾನೂನು ಕೇವಲ ಹೆಸರಿಗೆ ಸೀಮಿತವಾಗಬಾರದು. ಅದು ಅದು ಎಷ್ಟು ಪ್ರಬಲವಾಗಿರಬೇಕು ಎಂದರೆ ಅಂತರಜಾತಿ ವಿವಾಹವಾದ ತಕ್ಷಣ ದಂಪತಿಗಳಿಗೆ ಪೂರ್ಣ ಪ್ರಮಾಣದ ರಕ್ಷಣೆ ಸಿಗಬೇಕು. ಜಾತಿ ಪ್ರತಿಷ್ಠೆಯ ಹೆಸರಲ್ಲಿ ಹಿಂಸೆ ನೀಡುವವರ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಆಗ್ರಹಿಸಿದ್ದಾರೆ.
ಇವ ನಮ್ಮವ ಕಾಯ್ದೆಯನ್ನು ಕರ್ನಾಟಕ ದಲಿತ ವಿಮೋಚನಾ ಸಮಿತಿಯ ಧಾರವಾಡ ಜಿಲ್ಲಾ ಘಟಕವು ಸ್ವಾಗತಿಸಿದ್ದು, ಸತತ ಹೋರಾಟಕ್ಕೆ ಸಂದ ಜಯ ಎಂದಿದ್ದಾರೆ. ಈ ಬಗ್ಗೆ ದಲಿತ ಸಂಘಟನೆ ಮುಖಂಡ ಸುರೇಶ ಖಾನಾಪೂರ ಅವರು ಮಾತನಾಡಿದ್ದು, "ಸಂವಿಧಾನದಲ್ಲಿ ಅಂತರ್ಜಾತಿ ವಿವಾಹಕ್ಕೆ ಅವಕಾಶವಿದ್ದರೂ, ಸಮಾಜದ ಕೀಳು ಮನಸ್ಥಿತಿಯಿಂದಾಗಿ ಹೆತ್ತ ಮಕ್ಕಳನ್ನೇ ಕೊಲ್ಲುವ ಕ್ರೌರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಕಾನೂನಿನ ಅಗತ್ಯವನ್ನು ನಾವು ಪ್ರತಿಪಾದಿಸಿದ್ದೆವು. ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್, ಸಚಿವರಾದ ಎಚ್.ಸಿ. ಮಹದೇವಪ್ಪ, ಆರ್.ಬಿ. ತಿಮ್ಮಾಪುರ ಹಾಗೂ ಎಚ್.ಕೆ. ಪಾಟೀಲರು ಸದನದಲ್ಲಿ ಈ ಮಸೂದೆಯನ್ನು ಅಂಗೀಕರಿಸಿದ್ದಾರೆ," ಎಂದು ತಿಳಿಸಿದರು.
ಕಾನೂನು ಜಾಗೃತಿಯ ಅಗತ್ಯ:
ಕೇವಲ ಕಾನೂನು ತರುವುದರಿಂದ ಬದಲಾವಣೆ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಪೋಕ್ಸೋ (POCSO) ಕಾಯ್ದೆಯ ಬಗ್ಗೆ ಇರುವ ಅರಿವು ಮತ್ತು ಭಯವು ಎಸ್ಸಿ/ಎಸ್ಟಿ ಅಟ್ರಾಸಿಟಿ ಕಾಯ್ದೆಯ ಬಗ್ಗೆ ಇಲ್ಲದಿರುವುದು ಜಿಲ್ಲಾಡಳಿತದ ವೈಫಲ್ಯವಾಗಿದೆ. ಹೊಸ ಕಾನೂನುಗಳು ಜನಸಾಮಾನ್ಯರಿಗೆ, ವಿಶೇಷವಾಗಿ ಅನಕ್ಷರಸ್ಥರಿಗೆ ಮುಟ್ಟುವಂತೆ ಜಿಲ್ಲಾಡಳಿತ ಜಾಗೃತಿ ಮೂಡಿಸಬೇಕು. ಅಂದಾಗ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ," ಎಂದರು.
ಮಾನ್ಯ ಪಾಟೀಲರ ಕೊಲೆ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಈ ಪ್ರಕರಣದ ಶೀಘ್ರ ವಿಲೇವಾರಿಗಾಗಿ 'ಫಾಸ್ಟ್ ಟ್ರ್ಯಾಕ್' (ಶೀಘ್ರಗತಿ) ನ್ಯಾಯಾಲಯ ಸ್ಥಾಪಿಸಬೇಕೆಂದು ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವವರೆಗೂ ಕಾನೂನು ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದರು.
ಸದ್ಯ ನೊಂದ ಕುಟುಂಬದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, "ಕಾನೂನಿನ ಜೊತೆಗೆ ನಾವು ನೊಂದ ಕುಟುಂಬಕ್ಕೆ ಪ್ರೀತಿ ಮತ್ತು ವಿಶ್ವಾಸದ ಮೂಲಕ ಆತ್ಮಬಲ ತುಂಬುವ ಕೆಲಸ ಮಾಡುತ್ತಿದ್ದೇವೆ. ಜಾತಿ ವ್ಯವಸ್ಥೆಯ ಅಹಂಕಾರವನ್ನು ಪ್ರೀತಿ ಮತ್ತು ಸಂವಿಧಾನದ ಬಲದಿಂದ ಗೆಲ್ಲುತ್ತೇವೆ," ಎಂದು ಭರವಸೆ ನೀಡಿದರು.
ಮರ್ಯಾದೆಗೇಡು ಹತ್ಯೆ ವಿರುದ್ಧ ಸಿಡಿದೆದ್ದ ʻಶಕ್ತಿ ವಾಹಿನಿʼ
2014ರವರೆಗೆ ಭಾರತದ ಅಧಿಕೃತ ಅಪರಾಧ ದಾಖಲೆಗಳಲ್ಲಿ ಇಂತಹ ಕೊಲೆಗಳಿಗೆ ಪ್ರತ್ಯೇಕ ವರ್ಗೀಕರಣವೇ ಇರಲಿಲ್ಲ. ಇವುಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಸಾಮಾನ್ಯ ಕೊಲೆಗಳೆಂದೇ ಪರಿಗಣಿಸಲಾಗುತ್ತಿತ್ತು. ಇದರಿಂದಾಗಿ ಈ ಕೃತ್ಯಗಳ ಹಿಂದಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳು ಮರೆಯಾಗುತ್ತಿದ್ದವು ಹಾಗೂ ಪ್ರತ್ಯೇಕ ಕಾನೂನು ಇಲ್ಲದ ಕಾರಣ ಅಪರಾಧಿಗಳು ತಾಂತ್ರಿಕ ಅಂಶಗಳನ್ನು ಬಳಸಿ ಸುಲಭವಾಗಿ ತಪ್ಪಿಸಿಕೊಳ್ಳಲು ದಾರಿಯಾಗುತ್ತಿತ್ತು.
ಈ ನಿಟ್ಟಿನಲ್ಲಿ ದೆಹಲಿಯ 'ಶಕ್ತಿ ವಾಹಿನಿ' ಎಂಬ ಎನ್‌ಜಿಒ ಸಲ್ಲಿಸಿದ ಅರ್ಜಿಯು ಒಂದು ದೊಡ್ಡ ಮೈಲಿಗಲ್ಲಾಯಿತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಯಾವುದೇ ಇಬ್ಬರು ವಯಸ್ಕರು ಪರಸ್ಪರ ಒಪ್ಪಿಗೆಯಿಂದ ವಿವಾಹವಾದರೆ ಅಥವಾ ಜೊತೆಯಾಗಿ ಬಾಳಲು ನಿರ್ಧರಿಸಿದರೆ ಅದರಲ್ಲಿ ಮಧ್ಯಪ್ರವೇಶಿಸಲು ಪೋಷಕರಿಗಾಗಲಿ ಅಥವಾ ಸಮಾಜಕ್ಕಾಗಲಿ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿತು. ಅಷ್ಟೇ ಅಲ್ಲದೆ, ಅಂತರಜಾತಿ ಅಥವಾ ಅಂತರ್ಧರ್ಮೀಯ ವಿವಾಹವಾಗುವ ಜೋಡಿಗಳಿಗೆ ರಕ್ಷಣೆ ನೀಡಲು ವಿಶೇಷ ಸೆಲ್ ರಚಿಸುವುದು ಮತ್ತು ಬೆದರಿಕೆ ಇರುವ ಜೋಡಿಗಳಿಗಾಗಿ 24/7 ಸಹಾಯವಾಣಿ ಆರಂಭಿಸಬೇಕು ಎಂದು ಸರ್ಕಾರಗಳಿಗೆ ನಿರ್ದೇಶನ ನೀಡಿತು.
ಕರ್ನಾಟಕದಲ್ಲಿ ಮರ್ಯಾದೆಗೇಡು ಹತ್ಯೆ ಬಗ್ಗೆ ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಬರೆದಿದ್ದ ಶಿವಮೊಗ್ಗ ಪತ್ರಕರ್ತ ರವಿ ಕುಮಾರ್ ಟೆಲೆಕ್ಸ್ ಮಾತನಾಡಿದ್ದು,” ಉತ್ತರ ಭಾರತದ ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶಗಳಲ್ಲಿ 'ಖಾಪ್ ಪಂಚಾಯ್ತಿ'ಗಳು ಸಮಾಂತರ ನ್ಯಾಯಾಂಗದಂತೆ ಕಾರ್ಯನಿರ್ವಹಿಸುತ್ತಾ, ಬೇರೆ ಜಾತಿಯವರೊಂದಿಗೆ ವಿವಾಹವಾದರೆ ಅಂತಹ ಜೋಡಿಗಳಿಗೆ ಮರಣದಂಡನೆ ವಿಧಿಸುವ ಅಘೋಷಿತ ಅಧಿಕಾರವನ್ನು ಚಲಾಯಿಸುತ್ತಿವೆ. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಹತ್ಯೆಗಳ ಪ್ರಮಾಣ ವಿಪರೀತವಾಗಿದೆ. ಆದರೆ, ದಕ್ಷಿಣ ಭಾರತದ ಕರ್ನಾಟಕವು ಈ ಪಟ್ಟಿಯಿಂದ ಹೊರತಾಗಿಲ್ಲ ಎಂಬುದು ಆತಂಕಕಾರಿ ಸಂಗತಿ. ಕರ್ನಾಟಕದಲ್ಲಿ ಅಧಿಕೃತವಾಗಿ 2011ರಿಂದ ಈವರೆಗೆ ಕೇವಲ 17 ಪ್ರಕರಣಗಳು ದಾಖಲಾಗಿರಬಹುದು, ಆದರೆ ವಾಸ್ತವದಲ್ಲಿ ಇಂತಹ ನೂರಾರು ಪ್ರಕರಣಗಳು ಸಾಮಾಜಿಕ ಒತ್ತಡದಿಂದಾಗಿ ಬೆಳಕಿಗೆ ಬಾರದೆ ಮುಚ್ಚಿಹೋಗಿವೆ” ಎಂದಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಪ್ರಕರಣ
ಕರ್ನಾಟಕದ ಹಳೆ ಮೈಸೂರು ಭಾಗದಲ್ಲಿ ಇಂತಹ ಹತ್ಯೆಗಳು ಹೆಚ್ಚು ವರದಿಯಾಗುತ್ತಿವೆ. ವಿಶೇಷವಾಗಿ ರಾಮನಗರ ಮತ್ತು ಮಂಡ್ಯ ಭಾಗದಲ್ಲಿ ಜಾತಿ ಪ್ರತಿಷ್ಠೆ ಹೆಚ್ಚಾಗಿದ್ದು, ದಲಿತ ಯುವಕರು ಮೇಲ್ಜಾತಿ ಯುವತಿಯರನ್ನು ಪ್ರೀತಿಸಿದಾಗ ಭೀಕರ ಹತ್ಯೆಗಳು ನಡೆದಿವೆ. ಈ ಬಗ್ಗೆ ಮಾತನಾಡಿದ ಅವರು, “ಮೈಸೂರು ಮತ್ತು ತುಮಕೂರು ಗ್ರಾಮೀಣ ಭಾಗಗಳಲ್ಲಿ ಕುಟುಂಬದ ಕುಲದ ಗೌರವ ಎಂಬ ಭ್ರಮೆಯಡಿ ಹೆಣ್ಣುಮಕ್ಕಳನ್ನು ಬಲಿ ಪಡೆಯಲಾಗುತ್ತಿದೆ. ಕೋಲಾರದಲ್ಲಿಯೂ ಅಂತರ್ಧರ್ಮೀಯ ಮತ್ತು ಅಂತರ್ಜಾತಿ ವಿವಾಹಗಳಿಗೆ ಸಂಬಂಧಿಸಿದಂತೆ ಅನೇಕ ಹಿಂಸಾತ್ಮಕ ಘಟನೆಗಳು ನಡೆದಿವೆ. ಹೆಚ್ಚಿನ ಪ್ರಕರಣಗಳಲ್ಲಿ ದಲಿತ ಯುವಕ ಮೇಲ್ಜಾತಿ ಹುಡುಗಿಯನ್ನು ವಿವಾಹವಾದಾಗ, ಆಕೆಯ ಕುಟುಂಬದವರು ಇದನ್ನು ತಮ್ಮ ಸಾಮಾಜಿಕ ಸ್ಥಾನಮಾನಕ್ಕೆ ಉಂಟಾದ ಧಕ್ಕೆ ಎಂದು ಭಾವಿಸುತ್ತಾರೆ” ಎಂದಿದ್ದಾರೆ.
ಇನ್ನು ಜಾತಿ ವಿಚಾರಗಷ್ಟೇ ಅಲ್ಲ ಅಂತಸ್ತಿನ ಕಾರಣಕ್ಕೂ ಮರ್ಯಾದೆಗೇಡು ಹತ್ಯೆ ನಡೆಯುತ್ತಿವೆ. ಈ ಬಗ್ಗೆ ನಿವೃತ ಪೊಲೀಸ್ ಅಧಿಕಾರಿ ಎನ್.ನಾಗರಾಜ್ ಅವರು ತಾವು ಬೆಂಗಳೂರು ಗ್ರಾಮಾಂತರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಹೆಬ್ಬಾಳದಲ್ಲಿ ನಡೆದ ಪ್ರಕರಣವೊಂದನ್ನು ನೆನಪಿಸಿಕೊಂಡಿದ್ದಾರೆ.
“1988ರ ನವೆಂಬರ್ ತಿಂಗಳಿನಲ್ಲಿ ನಡೆದ ಮೀನಾ ಮರ್ಡರ್ ಕೇಸ್ ಕೇವಲ ಜಾತಿ ಮೀರಿ ನಡೆದ ಪ್ರೇಮ ವಿವಾಹದ ಕಥೆಯಲ್ಲ, ಬದಲಾಗಿ ಶ್ರೀಮಂತಿಕೆ ಮತ್ತು ಸಾಮಾಜಿಕ ಅಂತಸ್ತಿನ ಅಹಂಕಾರದಿಂದ ನಡೆದ ಭೀಕರ ಮರ್ಯಾದೆಗೇಡು ಹತ್ಯೆಯಾಗಿದೆ. ಕೊಡವ ಮೂಲದ ಯುವತಿ ಮೀನಾ ಅವರು ಶ್ರೀಮಂತ ಗೌಡ ಕುಟುಂಬದ ಮತ್ತು ರಾಜ್ಯದ ಮೊದಲ ಶಿಕ್ಷಣ ಸಚಿವರ ಮೊಮ್ಮಗನಾದ ನಿರುದ್ಯೋಗಿ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು”.
“ಆದರೆ ಈ ಸಂಬಂಧ ಹುಡುಗನ ತಂದೆಗೆ (ಕಾಲೇಜು ಪ್ರೊಫೆಸರ್) ತಮ್ಮ ಪ್ರತಿಷ್ಠೆಗೆ ಕುಂದ ತರುವಂತೆ ಕಂಡಿತು. ತಮ್ಮ ಅಂತಸ್ತಿಗೆ ಈ ಕುಟುಂಬ ಸರಿಸಾಟಿಯಲ್ಲ ಎಂಬ ಕಾರಣಕ್ಕೆ ಸಂಚು ರೂಪಿಸಿದ ಅವರು, ಮೀನಾ ಅವರನ್ನು ಅತ್ಯಂತ ಕ್ರೂರವಾಗಿ ಕೊಂದು, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹೆಬ್ಬಾಳ ಮತ್ತು ಜಿಕೆವಿಕೆ ಆವರಣದಲ್ಲಿ ಎಸೆದಿದ್ದರು. ಸುಮಾರು ಒಂದು ತಿಂಗಳ ನಂತರ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆದಾಗ, ಅಂತಿಮವಾಗಿ ಅಪರಾಧಿಗಳಿಗೆ ಶಿಕ್ಷೆಯಾಯಿತು. ಇಂದಿನ ಗ್ಲೋಬಲ್ ವಿಲೇಜ್ ಯುಗದಲ್ಲಿಯೂ ಇಂತಹ ಮರ್ಯಾದೆಗೇಡು ಹತ್ಯೆಗಳ ವಿರುದ್ಧ ಕಾನೂನುಗಳು ಬರುತ್ತಿದ್ದರೂ, ಸಮಾಜದಲ್ಲಿ ಜಾತಿ, ಹಣ ಮತ್ತು ಅಂತಸ್ತಿನ ಅಮಲು ಜನರ ತಲೆಯಿಂದ ಹೋಗದೇ ಅಥವಾ ಮನೋಭಾವ ಬದಲಾಗದ ಹೊರತು ಕೇವಲ ಕಾನೂನು ಜಾರಿಯಿಂದ ಮಾತ್ರ ಬದಲಾವಣೆ ತರುವುದು ಕಷ್ಟ” ಎಂಬುದು ಅವರ ಅಭಿಪ್ರಾಯ.
ಹಂತಕರನ್ನು ಹೀರೋಗಳಂತೆ ಬಿಂಬಿಸುವ ಜನ
ಮತ್ತೊಂದೆಡೆ ಮರ್ಯಾದೆಗೇಡು ಹತ್ಯೆಯಂತಹ ಕೃತ್ಯ ಎಸಗುವವರನ್ನು ಸಮಾಜವು 'ಹೀರೋ'ಗಳಂತೆ ಬಿಂಬಿಸುತ್ತಿದೆ. ಈ ಬಗ್ಗೆ ಹಿರಿಯ ವಕೀಲ ಬಾಲನ್ ಅವರು ʻದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ್ದು, “ಬಂಗಾರಪೇಟೆಯ ಗೊಲ್ಲ ಸಮುದಾಯಕ್ಕೆ ಸೇರಿದ ಇಂಜಿನಿಯರಿಂಗ್ ಓದುತ್ತಿದ್ದ ಯುವತಿಯೊಬ್ಬಳು ದಲಿತ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ತಂದೆ (ಜನ್ಮತಃ ಕೈ ಬೆರಳುಗಳಿಲ್ಲದ ಅಂಗವಿಕಲ ವ್ಯಕ್ತಿ), ಮಧ್ಯರಾತ್ರಿ ಮಗಳು ಮಲಗಿದ್ದಾಗ ಅವಳ ಕುತ್ತಿಗೆ ಹಿಸುಕಿ ಭೀಕರವಾಗಿ ಕೊಲೆ ಮಾಡಿದ್ದನು. ಈ ಕೃತ್ಯ ನಡೆದಾಗ ಮನೆಯಲ್ಲೇ ಇದ್ದ ತಾಯಿ ಮತ್ತು ಸಹೋದರ ಪ್ರತ್ಯಕ್ಷದರ್ಶಿಗಳಾಗಿದ್ದರು. ಘಟನೆ ನಡೆದರೂ ಪೊಲೀಸರು ಮೂರು ದಿನಗಳ ಕಾಲ ಎಫ್‌ಐಆರ್ ದಾಖಲಿಸಿರಲಿಲ್ಲ. ದಲಿತ ಸಂಘಟನೆಗಳ ಪ್ರತಿಭಟನೆಯ ನಂತರವಷ್ಟೇ ಕೇಸ್ ದಾಖಲಾಗಿತ್ತು. ಕುತ್ತಿಗೆ ಹಿಸುಕಿ ಕೊಂದಿದ್ದರೂ ಡಿಎನ್‌ಎ (DNA) ಪರೀಕ್ಷೆ ಅಥವಾ ಫಿಂಗರ್ ಪ್ರಿಂಟ್ ತಜ್ಞರನ್ನು ಸ್ಥಳಕ್ಕೆ ಕರೆಸಲಿಲ್ಲ. ಯಾವುದೇ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸದೆ ಕೇವಲ ಔಪಚಾರಿಕ ಚಾರ್ಜ್‌ಶೀಟ್ ಸಲ್ಲಿಸಲಾಯಿತು” ಎಂದರು.
"ಬಂಗಾರಪೇಟೆಯ ಸಂಘಟನೆಗಳು ಮತ್ತು ರಾಜಕೀಯ ನಾಯಕರು ಆರೋಪಿಯನ್ನು ರಕ್ಷಿಸಿದರು. ಅಂತಿಮವಾಗಿ ಸಾಕ್ಷಿಗಳ ಕೊರತೆಯಿಂದ ಆತ ಖುಲಾಸೆಗೊಂಡಾಗ, ಇಡೀ ಸಮಾಜ ಆತನನ್ನು ಸಂಭ್ರಮಿಸಿತು. ಇದು ಮರ್ಯಾದೆಗೇಡು ಹತ್ಯೆಯನ್ನು ಸಮುದಾಯವೇ ಪ್ರೋತ್ಸಾಹಿಸುತ್ತಿರುವುದಕ್ಕೆ ಸಾಕ್ಷಿ," ಎಂದು ಅವರು ಕಳವಳ ವ್ಯಕ್ತಪಡಿಸಿದರು.
ತನಿಖಾ ವ್ಯವಸ್ಥೆಯಲ್ಲಿನ ವೈಫಲ್ಯದ ಬಗ್ಗೆ ಉಲ್ಲೇಖಿಸಿದ ಅವರು, "ಮರ್ಯಾದೆಗೇಡು ಹತ್ಯೆಗಳು ನಡೆದಾಗ ಪೊಲೀಸರು ಕೂಡ ಜಾತಿವಾದಿಗಳಂತೆ ವರ್ತಿಸುತ್ತಾರೆ. ಎಫ್‌ಐಆರ್ ದಾಖಲಿಸಲು ವಿಳಂಬ ಮಾಡುವುದು, ಫೋರೆನ್ಸಿಕ್ ಎವಿಡೆನ್ಸ್ ಸಂಗ್ರಹಿಸದಿರುವುದು ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಕಡೆಗಣಿಸುವುದರಿಂದ ಆರೋಪಿಗಳು ಸುಲಭವಾಗಿ ಪಾರಾಗುತ್ತಿದ್ದಾರೆ. ಹೊಸದಾಗಿ ಜಾರಿಗೆ ಬಂದಿರುವ ಕಾಯ್ದೆಯಲ್ಲಿ ಪೊಲೀಸರಿಗೆ ಕಡ್ಡಾಯ ನಿರ್ದೇಶನವಿರಬೇಕು. ಪ್ರತಿಯೊಂದು ಪ್ರಕರಣದಲ್ಲೂ ವಿಡಿಯೋಗ್ರಫಿ ಮತ್ತು ಫೋರೆನ್ಸಿಕ್ ತನಿಖೆ ಕಡ್ಡಾಯವಾಗಬೇಕು," ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ 'ಇವ ನಮ್ಮವ ಇವ ನಮ್ಮವ' ವಿಧೇಯಕವು ಮರ್ಯಾದೆಗೇಡು ಹತ್ಯೆಗಳಂತಹ ಅನಿಷ್ಟ ಪದ್ಧತಿಯ ವಿರುದ್ಧದ ಹೋರಾಟದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು. ಆದರೆ, ಕಾನೂನು ಕೇವಲ ಒಂದು ಆಯುಧವಷ್ಟೇ. ವಕೀಲ ಬಾಲನ್ ಮತ್ತು ಸಾಮಾಜಿಕ ಕಾರ್ಯಕರ್ತೆ ಕುಮಾರಿ ಅವರು ಹೇಳಿದಂತೆ, ಸಮಾಜದ ರಕ್ತದಲ್ಲಿ ಇಂಜೆಕ್ಟ್ ಆಗಿರುವ 'ಜಾತಿ ಅಹಂಕಾರ' ಮತ್ತು 'ಅಂತಸ್ತಿನ ಹಮ್ಮು' ಕೇವಲ ಪೊಲೀಸ್ ಲಾಠಿಯಿಂದ ಅಳಿಸಿಹೋಗುವುದಿಲ್ಲ. 'ಮರ್ಯಾದೆ' ಎಂಬುದು ಕೊಲೆಯಲ್ಲಿಲ್ಲ, ಬದಲಾಗಿ ಮನುಷ್ಯತ್ವವನ್ನು ಗೌರವಿಸುವುದರಲ್ಲಿದೆ ಎಂಬುದು ಅರ್ಥವಾದರೆ ಮಾತ್ರ ಇಂಥಹ ಹೀನ ಕೃತ್ಯಗಳಿಗೆ ಕಡಿವಾಣ ಬೀಳಬಹುದು.

