ಡೀಪ್‌ಫೇಕ್ ಹಾವಳಿಗೆ ಬ್ರೇಕ್: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು 3 ಗಂಟೆಯಷ್ಟೇ ಗಡುವು!
x

ಡೀಪ್‌ಫೇಕ್ ಹಾವಳಿಗೆ ಬ್ರೇಕ್: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು 3 ಗಂಟೆಯಷ್ಟೇ ಗಡುವು!

ಕೃತಕವಾಗಿ ಸೃಷ್ಟಿಸಿದ ನಕಲಿ ವಿಡಿಯೋ, ಫೋಟೋಗಳ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಯಲು ಕೇಂದ್ರ ಸರ್ಕಾರವು ಹಳೆಯ ಐಟಿ ನಿಯಮಗಳಿಗೆ ತಿದ್ದುಪಡಿ ತಂದಿದೆ. ಫೆ.20ರಿಂದ ದೇಶಾದ್ಯಂತ ಅಧಿಕೃತವಾಗಿ ಜಾರಿಗೊಳಿಸಲಾಗಿದೆ.


Click the Play button to hear this message in audio format

ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಎಕ್ಸ್ (X) ನಂತಹ ಸಾಮಾಜಿಕ ಜಾಲತಾಣಗಳು ಇಂದಿನ ಬದುಕಿನ ಅವಿಭಾಜ್ಯ ಅಂಗವಾಗಿವೆ. ಆದರೆ, ತಂತ್ರಜ್ಞಾನ ಬೆಳೆದಂತೆ 'ಡೀಪ್‌ಫೇಕ್' ಹಾಗೂ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸುವ ನಕಲಿ ವಿಡಿಯೋ-ಫೋಟೋಗಳ ಹಾವಳಿ ಮಿತಿಮೀರಿದೆ. ಈ ಅಪಾಯಕಾರಿ ಟ್ರೆಂಡ್‌ಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಹಳೆಯ ಮಾಹಿತಿ ತಂತ್ರಜ್ಞಾನ (IT) ನಿಯಮಗಳಿಗೆ ಮಹತ್ವದ ತಿದ್ದುಪಡಿ ತಂದಿದ್ದು, ಜಾಲತಾಣಗಳ ಹೊಣೆಗಾರಿಕೆಯನ್ನು ಹೆಚ್ಚಿಸಿದೆ.

'ಮಾಹಿತಿ ತಂತ್ರಜ್ಞಾನ ತಿದ್ದುಪಡಿ ನಿಯಮಗಳು 2026' ಹೆಸರಿನಲ್ಲಿ ಫೆಬ್ರವರಿ 20ರಿಂದಲೇ ದೇಶಾದ್ಯಂತ ಈ ಹೊಸ ನಿಯಮಗಳು ಅಧಿಕೃತವಾಗಿ ಜಾರಿಗೆ ಬಂದಿವೆ. ಈ ಕಠಿಣ ನಿಯಮಗಳನ್ನು ರಾಜ್ಯದಲ್ಲೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಕರ್ನಾಟಕ ಸರ್ಕಾರ ಪೊಲೀಸ್‌ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದೆ.

36 ಗಂಟೆಗಳ ಗಡುವು ಕೇವಲ 3 ಗಂಟೆಗೆ ಇಳಿಕೆ!

ಹೊಸ ತಿದ್ದುಪಡಿಯ ಅತ್ಯಂತ ಮಹತ್ವದ ಬದಲಾವಣೆಯೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಹಾನಿಕಾರಕ ಅಥವಾ ಆಕ್ಷೇಪಾರ್ಹ ಮಾಹಿತಿಗಳನ್ನು ತೆಗೆದುಹಾಕಲು (Take down) ಈ ಮೊದಲು ಕಂಪನಿಗಳಿಗೆ 36 ಗಂಟೆಗಳ ಕಾಲಾವಕಾಶವಿತ್ತು. ಆದರೆ, ಈಗ ಸರ್ಕಾರ ಅಥವಾ ಪೊಲೀಸ್ ಇಲಾಖೆ ಆದೇಶಿಸಿದ ಕೇವಲ 3 ಗಂಟೆಯೊಳಗೆ ಆ ಪೋಸ್ಟ್‌ಗಳನ್ನು ಡಿಲೀಟ್ ಮಾಡುವುದು ಕಡ್ಡಾಯವಾಗಿದೆ. ಜೊತೆಗೆ, ಬಳಕೆದಾರರ ದೂರುಗಳನ್ನು ಬಗೆಹರಿಸಲು ಇದ್ದ 15 ದಿನಗಳ ಕಾಲಾವಕಾಶವನ್ನು 7 ದಿನಗಳಿಗೆ ಇಳಿಸಲಾಗಿದೆ.

ಡೀಪ್‌ಫೇಕ್ ತಡೆಗೆ ಎಐ 'ಲೇಬಲಿಂಗ್' ಕಡ್ಡಾಯ

ಹೊಸ ನಿಯಮದಲ್ಲಿ 'ಸಿಂಥೆಟಿಕ್ ಮಾಹಿತಿ' (ಕಂಪ್ಯೂಟರ್, ಎಐ ಅಥವಾ ಅಲ್ಗಾರಿದಮ್‌ ಬಳಸಿ ಸೃಷ್ಟಿಸಿದ ಅಸಲಿಯಂತೆಯೇ ಕಾಣುವ ನಕಲಿ ಕಂಟೆಂಟ್) ಬಗ್ಗೆ ಕಟ್ಟುನಿಟ್ಟಿನ ನಿಯಮ ತರಲಾಗಿದೆ. ಎಐ ಬಳಸಿ ಫೋಟೋ ಅಥವಾ ವಿಡಿಯೋ ಸೃಷ್ಟಿಸಿದ್ದರೆ, ಆ ವಿಡಿಯೋ/ಫೋಟೋ ಮೇಲೆ 'ಇದು ಕೃತಕವಾಗಿ ಸೃಷ್ಟಿಸಲ್ಪಟ್ಟಿದೆ' (Artificially Generated) ಎಂಬ ಲೇಬಲ್ ಸ್ಪಷ್ಟವಾಗಿ ಕಾಣುವಂತಿರಬೇಕು. ಕೇವಲ ಆಡಿಯೋ ಆಗಿದ್ದರೆ, ಆರಂಭದಲ್ಲೇ ಆ ಕುರಿತು ಧ್ವನಿಯ ಮೂಲಕ ಎಚ್ಚರಿಕೆ ನೀಡಬೇಕು.

ಪ್ರತಿಯೊಂದು ಎಐ ಕಂಟೆಂಟ್‌ನ ಹಿಂದೆ ಅದನ್ನು ಯಾರು ಸೃಷ್ಟಿಸಿದರು ಮತ್ತು ಎಲ್ಲಿಂದ ಬಂತು ಎಂಬ 'ತಾಂತ್ರಿಕ ಗುರುತು' (Metadata/Watermark) ಇರಲೇಬೇಕು. ಇದನ್ನು ಯಾರೂ ಅಳಿಸಲು ಸಾಧ್ಯವಾಗದಂತೆ ಭದ್ರಪಡಿಸಬೇಕು.

ಬಳಕೆದಾರರಿಗೆ ಎಚ್ಚರಿಕೆ, ನಿಯಮ ಉಲ್ಲಂಘಿಸಿದರೆ ಅಕೌಂಟ್ ರದ್ದು

ಸಾಮಾಜಿಕ ಜಾಲತಾಣ ಕಂಪನಿಗಳು ಕೇವಲ ವೇದಿಕೆಯಾಗಿ ಉಳಿಯದೆ ಜವಾಬ್ದಾರಿ ಹೊರಬೇಕು. ಪ್ರತಿ 3 ತಿಂಗಳಿಗೊಮ್ಮೆ ಕಂಪನಿಗಳು ತಮ್ಮ ಬಳಕೆದಾರರಿಗೆ ನಿಯಮಗಳು, ಗೌಪ್ಯತೆ ನೀತಿ ಮತ್ತು 'ಯಾವುದನ್ನು ಅಪ್‌ಲೋಡ್ ಮಾಡಬಾರದು' ಎಂಬುದನ್ನು ಪ್ರಾದೇಶಿಕ ಭಾಷೆಗಳಲ್ಲಿ ನೆನಪಿಸುತ್ತಿರಬೇಕು. ನಿಯಮ ಉಲ್ಲಂಘಿಸಿ ನಕಲಿ ದಾಖಲೆ ಸೃಷ್ಟಿಸುವುದು, ಬೇರೆಯವರ ಮುಖ-ಧ್ವನಿ ಬಳಸಿ ವಂಚಿಸಿದರೆ ತಕ್ಷಣವೇ ಅಂತಹವರ ಖಾತೆಯನ್ನು ಅಮಾನತು ಅಥವಾ ಶಾಶ್ವತವಾಗಿ ರದ್ದುಗೊಳಿಸುವ ಅಧಿಕಾರ ಕಂಪನಿಗಳಿಗೆ ನೀಡಲಾಗಿದೆ.

ತಿದ್ದುಪಡಿಯ ಲಾಭಗಳೇನು?

ಚುನಾವಣೆ ಅಥವಾ ಗಲಭೆಯಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಕ್ಷಣಮಾತ್ರದಲ್ಲಿ ಹರಡುವ ನಕಲಿ ವಿಡಿಯೋಗಳಿಗೆ ತ್ವರಿತ ಬ್ರೇಕ್ ಬೀಳಲಿದೆ. ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡುವ ವಿಕೃತ ಕೃತ್ಯಗಳಿಗೆ ಕಡಿವಾಣ ಬೀಳಲಿದೆ. ತಾವು ನೋಡುತ್ತಿರುವ ವಿಡಿಯೋ-ಫೋಟೋ ಅಸಲಿಯೋ ಅಥವಾ ಕೃತಕವೋ ಎಂಬುದು ಜನರಿಗೆ ಸುಲಭವಾಗಿ ತಿಳಿಯಲಿದೆ.

ಕರ್ನಾಟಕ ಸರ್ಕಾರದ ಕಟ್ಟುನಿಟ್ಟಿನ ಹೆಜ್ಜೆ: ಪೊಲೀಸರಿಗೆ ಹೈಟೆಕ್ ಸಾಧನ

ಹೊಸ ನಿಯಮಾವಳಿಗಳ ಜಾರಿಗೆ ಕರ್ನಾಟಕ ಸರ್ಕಾರ ಕೂಡ ಸಜ್ಜಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿರುವ ಸಿಇಎನ್ (CEN - ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್) ಪೊಲೀಸ್ ಠಾಣೆಗಳಿಗೆ ಅತ್ಯಾಧುನಿಕ ಡೀಪ್‌ಫೇಕ್ ಪತ್ತೆಹಚ್ಚುವ ಸಾಧನಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಕೇವಲ 3 ಗಂಟೆಯ ಗಡುವು ಇರುವುದರಿಂದ ಸಾಮಾಜಿಕ ಮಾಧ್ಯಮ ಕಂಪನಿಗಳೊಂದಿಗೆ ಪೊಲೀಸರು ನೇರ ಮತ್ತು ತ್ವರಿತ ಸಂಪರ್ಕ ವ್ಯವಸ್ಥೆ ಹೊಂದಿರಬೇಕು ಎಂದು ಸೂಚಿಸಲಾಗಿದೆ.

ಜೊತೆಗೆ, ಬೆಂಗಳೂರಿನಲ್ಲಿರುವ ನೂರಾರು ಎಐ ಸ್ಟಾರ್ಟ್‌ಅಪ್‌ಗಳು ತಾವು ಅಭಿವೃದ್ಧಿಪಡಿಸುವ ಸಾಫ್ಟ್‌ವೇರ್‌ಗಳಲ್ಲಿ ಮೆಟಾಡೇಟಾ ಮತ್ತು ಮೂಲ ಪತ್ತೆಹಚ್ಚುವ ತಂತ್ರಜ್ಞಾನವನ್ನು ಕಡ್ಡಾಯವಾಗಿ ಅಳವಡಿಸಬೇಕಿದೆ. ನಿಯಮ ಪಾಲಿಸದ ಸಾಮಾಜಿಕ ಜಾಲತಾಣ ಸಂಸ್ಥೆಗಳ ಮೇಲೆ ದಂಡ ವಿಧಿಸುವ ಪ್ರಕ್ರಿಯೆಯನ್ನೂ ಬಿಗಿಗೊಳಿಸಲು ಸರ್ಕಾರ ಮುಂದಾಗಿದೆ.

Read More
Next Story