
Iran-Israel War Impact| ಗಲ್ಫ್ ರಾಷ್ಟ್ರಗಳಲ್ಲಿ ಸಂಘರ್ಷ; ಆತಂಕದಲ್ಲಿ ಕರ್ನಾಟಕದ ಐಟಿ-ಬಿಟಿ
ಪ್ರಸ್ತುತ, ಕರ್ನಾಟಕದಿಂದ ರಕ್ಷಣಾ ಸಾಮಗ್ರಿ, ಏರೋಸ್ಪೇಸ್, ಎಂಜಿನಿಯರಿಂಗ್, ಬೃಹತ್ ಯಂತ್ರಗಳು, ಎಲೆಕ್ಟ್ರಾನಿಕ್ ಸರಕು, ಮೊಬೈಲ್ ಉಪಕರಣಗಳು. ಕಾಫಿ, ಹಣ್ಣುಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಮಧ್ಯಪ್ರಾಚ್ಯ ರಾಷ್ಟ್ರಗಳು ಹಾಗೂ ಯೂರೋಪ್ ರಾಷ್ಟ್ರಗಳಿಗೆ ಪೂರೈಕೆ ಮಾಡಲಾಗುತ್ತಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಇರಾನ್-ಇಸ್ರೇಲ್ ಸಂಘರ್ಷದ ಬಿಸಿ ಇದೀಗ ಕರ್ನಾಟಕದ ಐಟಿ ವಲಯಕ್ಕೂ ತಟ್ಟುತ್ತಿದೆ. ಐಟಿ, ಏರೋಸ್ಪೇಸ್, ಎಂಜಿನಿಯರಿಂಗ್ ಹಾಗೂ ಆಹಾರ ಪದಾರ್ಥಗಳ ರಫ್ತಿನಲ್ಲಿ ತೀವ್ರ ಬಿಕ್ಕಟ್ಟು ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಇರಾನ್ ತನ್ನ ಹರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ನಿರ್ಬಂಧಿಸಿದ ಬಳಿಕ ತೈಲ ಹಾಗೂ ಅನಿಲ ಪೂರೈಕೆ ಸ್ಥಗಿತಗೊಂಡು, ವಿಶ್ವದ ಹಲವು ದೇಶಗಳಲ್ಲಿ ತೈಲ ಹಾಗೂ ಅನಿಲದ ಬೆಲೆ ಗಗನಕ್ಕೇರಿದೆ. ಅದೇ ರೀತಿ ಐಟಿ ಉತ್ಪನ್ನಗಳ ಆಮದು ಹಾಗೂ ರಫ್ತಿನ ಮೇಲೂ ಇರಾನ್-ಇಸ್ರೇಲ್ ಸಂಘರ್ಷವು ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಕರ್ನಾಟಕದಿಂದ ಸೌದಿ ಅರೆಬಿಯಾ, ಯುಎಇ, ಕತಾರ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ವಾರ್ಷಿಕ ಅಂದಾಜು 3 ಲಕ್ಷ ಕೋಟಿ ಮೌಲ್ಯದ ಐಟಿ ಉತ್ಪನ್ನಗಳು ಹಾಗೂ ಸೇವೆಗಳು ರಫ್ತಾಗುತ್ತಿವೆ. ಈಗ ಯುದ್ಧದ ಭೀತಿಯಿಂದಾಗಿ ಗಲ್ಫ್ ರಾಷ್ಟ್ರಗಳಿಗೆ ಐಟಿ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆಗೊಮ್ಮೆ ಯುದ್ಧವು ಸುದೀರ್ಘ ಅವಧಿಯವರೆಗೆ ಮುಂದುವರಿದರೆ ಅಥವಾ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದರೆ ರಾಜ್ಯದ ಐಟಿ ವಲಯವು ದೊಡ್ಡ ನಷ್ಟ ಅನುಭವಿಸಲಿದೆ. ಕ್ರಮೇಣ ಉದ್ಯೋಗ ಕಡಿತಕ್ಕೂ ಕಾರಣವಾಗಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ, ಮಧ್ಯಪ್ರಾಚ್ಯದ ದೇಶಗಳಿಗೆ ಸಾಫ್ಟ್‌ವೇರ್ ಉತ್ಪನ್ನಗಳ ರಫ್ತು ಅಷ್ಟೇನೂ ದೊಡ್ಡ ಪ್ರಮಾಣದಲ್ಲಿ ಇಲ್ಲ. ಒಂದು ವೇಳೆ ಯುದ್ಧದ ಅವಧಿ ವಿಸ್ತರಣೆಯಾದರೆ ಉದ್ಯಮವು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಲಿದೆ ಎಂದು ಎಸ್‌ಟಿಪಿಐ (ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ) ಹಾಗೂ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ (ವಿಟಿಪಿಸಿ) ಅಧಿಕಾರಿಗಳು ಹೇಳುತ್ತಾರೆ.
ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ
ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಯುದ್ಧದ ಭೀತಿಯಿಂದ ಪೆಟ್ರೋಲಿಯಂ ಹಾಗೂ ಅನಿಲ ಪೂರೈಕೆ ಹೊರತುಪಡಿಸಿ ಬೇರಾವ ವಸ್ತುಗಳ ರಫ್ತಿಗೆ ಸಮಸ್ಯೆಯಾಗಿಲ್ಲ. ಕರ್ನಾಟಕದಿಂದ ಸಾಫ್ಟ್‌ವೇರ್ ರಫ್ತಾಗುತ್ತಿದೆ. ಆದರೆ, ಅದರ ಪ್ರಮಾಣ ಕಡಿಮೆ. ಬಹುತೇಕ ತಂತ್ರಜ್ಞಾನ, ಅಭಿವೃದ್ಧಿಪಡಿಸಿದ ತಂತ್ರಾಂಶಗಳನ್ನು ಆನ್‌ಲೈನ್ ಮೂಲಕವೇ ರಫ್ತು ಮಾಡಲಾಗುತ್ತದೆ. ಸೆಮಿಕಂಡಕ್ಟರ್, ಚಿಪ್ ಸೇರಿದಂತೆ ಇತರೆ ಐಟಿ ಸಂಬಂಧಿತ ಉತ್ಪನ್ನಗಳನ್ನು ಏರ್ ಕಾರ್ಗೋದಲ್ಲಿ ರಫ್ತು ಮಾಡಲಾಗುತ್ತಿದೆ ಎಂದು ವಿಶ್ವೇಶ್ವರಯ್ಯ ರಫ್ತು ಉತ್ತೇಜನ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಚೀನಾದಿಂದ ಕಚ್ಛಾ ವಸ್ತುಗಳನ್ನು ಇಲ್ಲಿಗೆ ತಂದು ಸಾಫ್ಟ್‌ವೇರ್ ಉತ್ಪನ್ನಗಳನ್ನು ಸಿದ್ಧಪಡಿಸಿ ಮಧ್ಯಪ್ರಾಚ್ಯ, ಯುರೋಪ್ ಹಾಗೂ ಅಮೆರಿಕಾಗೆ ರಫ್ತು ಮಾಡಲಾಗುತ್ತಿದೆ ಎಂದು ಹೇಳಿದರು.
ಐಟಿ ಉದ್ಯಮಿ ಯತೀಂದ್ರನಾಥ ತರೀಕೆರೆ ಮಾತನಾಡಿ, "ಕರ್ನಾಟಕದ ಬಹಳಷ್ಟು ಐಟಿ ಕಂಪನಿಗಳು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿವೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಐಟಿ ಉತ್ಪನ್ನಗಳ ರಫ್ತು ಪ್ರಮಾಣ ಕಡಿಮೆ ಇದ್ದರೂ ಯುದ್ಧದಿಂದ ಪರೋಕ್ಷವಾಗಿ ಹೊಡೆತ ಬೀಳುತ್ತಿದೆ. ಮೇಲ್ನೋಟಕ್ಕೆ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಕಾಡಲಿದೆ. ಯುದ್ಧದಿಂದ ಐಟಿ ಮೇಲೆ ಅಷ್ಟೇನೂ ಪರಿಣಾಮ ಬೀರುತ್ತಿಲ್ಲ. ಆದರೆ, ರಕ್ಷಣಾ ಕ್ಷೇತ್ರದ ಸಂಶೋಧನೆಗಳಿಗೆ ಅನ್ವಯಿಸಿದರೆ ಯುದ್ಧವು ಗಂಭೀರ ಸ್ವರೂಪದ ಪರಿಣಾಮ ಬೀರಲಿದೆ ಎಂದು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಪೂರೈಕೆ ಸರಪಳಿ ಅಡ್ಡಿಪಡಿಸುವಂತಿಲ್ಲ
ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಆಹಾರ ಪದಾರ್ಥಗಳ ಪೂರೈಕೆ ಸರಪಳಿಗೆ ಅಡ್ಡಿಪಡಿಸುವಂತಿಲ್ಲ. ಆದರೆ, ಹರ್ಮುಜ್ ಜಲಸಂಧಿ ಬಳಸದಂತೆ ಇರಾನ್ ನಿರ್ಬಂಧ ವಿಧಿಸಿರುವ ಕಾರಣ ಮಧ್ಯಪ್ರಾಚ್ಯದ ರಾಷ್ಟ್ರಗಳಿಗೆ ಕಳುಹಿಸುವ ಆಹಾರ ಪದಾರ್ಥಗಳ ರಫ್ತಿಗೆ ತೊಂದರೆಯಾಗಿದೆ. ಸದ್ಯಕ್ಕೆ ಅಷ್ಟೇನೂ ಪರಿಣಾಮ ಬೀರದೇ ಹೋದರೂ ಪರಿಸ್ಥಿತಿ ಮುಂದುವರಿದರೆ ವಿಷಮ ಸ್ಥಿತಿ ತಲುಪಲಿದೆ ಎಂದು ಶಿವಕುಮಾರ್ ಕಳವಳ ವ್ಯಕ್ತಪಡಿಸಿದರು.
ಪ್ರಸ್ತುತ, ಕರ್ನಾಟಕದಿಂದ ರಕ್ಷಣಾ ಸಾಮಗ್ರಿ, ಏರೋಸ್ಪೇಸ್, ಎಂಜಿನಿಯರಿಂಗ್, ಬೃಹತ್ ಯಂತ್ರಗಳು, ಎಲೆಕ್ಟ್ರಾನಿಕ್ ಸರಕು, ಮೊಬೈಲ್ ಉಪಕರಣಗಳು. ಕಾಫಿ, ಹಣ್ಣುಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಮಧ್ಯಪ್ರಾಚ್ಯ ರಾಷ್ಟ್ರಗಳು ಹಾಗೂ ಯೂರೋಪ್ ರಾಷ್ಟ್ರಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಆದರೆ, ಸಾಫ್ಟ್ವೇರ್ಗೆ ಸಂಬಂಧಿತ ಉತ್ಪನ್ನಗಳನ್ನು ದುಬೈ ಮೂಲಕ ಕಳುಹಿಸಲಾಗುತ್ತಿತ್ತು. ಫ್ರಾಂಕ್ಪರ್ಟ್, ಪ್ಯಾರೀಸ್ ಮೂಲಕ ಅಮೆರಿಕಗೆ ರಫ್ತು ಮಾಡಲಾಗುತ್ತಿದೆ. ಯಾವ ರಾಷ್ಟ್ರಕ್ಕೂ ಸಮಸ್ಯೆಯಾಗದಂತೆ ಸಮಸ್ಯೆಯನ್ನು ಇತ್ಯರ್ಥಪಡಿಸುವುದು ಉತ್ತಮ ಎಂದು ಹೇಳಿದರು.
ಬೆಂಗಳೂರಿನ ಪ್ರೇಮ್ ಕಂಪ್ಯೂಟರ್ ಟೆಕ್ನಾಲಜೀಸ್ ಸಂಸ್ಥೆಯ ಶರಣು ಮುಗಳಿ ಮಾತನಾಡಿ, ಇರಾನ್-ಇಸ್ರೇಲ್ ಸಂಘರ್ಷದಿಂದ ಐಟಿ ವಲಯದ ಮೇಲೆ ಕಡಿಮೆ ಪರಿಣಾಮ ಬೀರಿದೆ. ನಾವು ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ನೇರವಾಗಿ ಆನ್‌ಲೈನ್ ಮೂಲಕವೇ ಕಳುಹಿಸುತ್ತಿರುವುದರಿಂದ ಯಾವುದೇ ಸಮಸ್ಯೆ ಆಗಿಲ್ಲ ಎಂದು ಹೇಳಿದರು.
ಹೊಸ ಆರ್ಡರ್ ಪಡೆಯುತ್ತಿಲ್ಲ
ಹರ್ಮುಜ್ ಜಲಸಂಧಿ ಮೂಲಕವೇ ಮಧ್ಯಪ್ರಾಚ್ಯದ ರಾಷ್ಟ್ರಗಳು ಹಾಗೂ ಜಗತ್ತಿನ ಇತರೆ ರಾಷ್ಟ್ರಗಳಿಗೆ ತೈಲ ಉತ್ಪನ್ನಗಳು ಹಾಗೂ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಹರ್ಮುಜ್ ಜಲಸಂಧಿ ನಿರ್ಬಂಧಿಸಿರುವ ಹಿನ್ನೆಲೆ ಆಹಾರ ಪದಾರ್ಥಗಳ ರಫ್ತು ಇಳಿಕೆಯಾಗಿದೆ. ಕೆಲ ರಾಷ್ಟ್ರಗಳು ಮುಂಗಡವಾಗಿ ಆಹಾರ ಪದಾರ್ಥ, ಇನ್ನಿತರೆ ಉತ್ಪನ್ನ ಹಾಗೂ ಸೇವೆಗಳನ್ನು ಕರ್ನಾಟಕದಿಂದ ಆಮದು ಮಾಡಿಕೊಂಡಿವೆ. ಯುದ್ಧ ಆರಂಭವಾದ ನಂತರದಲ್ಲಿ ಯಾವುದೇ ಹೊಸ ಆರ್ಡರ್ ನೀಡುತ್ತಿಲ್ಲ. ಈಗಾಗಲೇ ತೆರಳಿರುವ ಹಡಗುಗಳು ಸಮುದ್ರದಲ್ಲೇ ಸಿಲುಕಿಕೊಂಡಿವೆ. ವಿಶ್ವೇಶ್ವರಯ್ಯ ರಫ್ತು ಉತ್ತೇಜನ ಕೇಂದ್ರವು ನೇರವಾಗಿ ಯಾವುದೇ ಉತ್ಪನ್ನ ಅಥವಾ ಸೇವೆಯನ್ನು ರಫ್ತು ಮಾಡುವುದಿಲ್ಲ. ಬದಲಾಗಿ ರಫ್ತುದಾರರಿಗೆ ರಫ್ತು ಕುರಿತಂತೆ ಜ್ಞಾನ, ಮಾರ್ಗೋಪಾಯ ಹಾಗೂ ಸಂದಿಗ್ಧ ಸಂದರ್ಭಗಳಲ್ಲಿ ನೆರವು ನೀಡಲಾಗುತ್ತದೆ ಎಂದು ಶಿವಕುಮಾರ್ ವಿವರಿಸಿದರು.

