
IPL 2026| ಕಾಲ್ತುಳಿತ ಸಂತ್ರಸ್ತರಿಗೆ ಶಾಶ್ವತ ಆಸನ ಗೌರವ! ಚಿನ್ನಸ್ವಾಮಿ ಸ್ಟೇಡಿಯಂ ಪಾಲಿಸಿದ ಇಂಗ್ಲೆಂಡ್ ಲಿವರ್‌ಪೂಲ್ ಮಾದರಿಯೇನು?
ಹಿಲ್ಸ್‌ಬರೋ ದುರಂತದ ಸಂತ್ರಸ್ತರಿಗೆ ನೀಡುವ ಗೌರವದ ಮಾದರಿಯಲ್ಲೇ, ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತಕ್ಕೆ ಒಳಗಾದ 11 ಅಭಿಮಾನಿಗಳ ಹೆಸರಿನಲ್ಲಿಆಸನಗಳನ್ನು ಶಾಶ್ವತವಾಗಿ ಕಾಯ್ದಿರಿಸಿದೆ.
ಇಂಗ್ಲೆಂಡ್‌ನ ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್ ತನ್ನ ಹಿಲ್ಸ್‌ಬರೋ ದುರಂತದ ಸಂತ್ರಸ್ತರಿಗೆ ನೀಡುವ ಗೌರವದ ಮಾದರಿಯಲ್ಲೇ, ಚಿನ್ನಸ್ವಾಮಿ ಸ್ಟೇಡಿಯಂ- ಕಾಲ್ತುಳಿತ ದುರಂತಕ್ಕೆ ಒಳಗಾದ 11 ಅಭಿಮಾನಿಗಳ ಹೆಸರಿನಲ್ಲಿ ಪ್ರಮುಖ ಸ್ಟ್ಯಾಂಡ್‌ನಲ್ಲಿರುವ 11 ಆಸನಗಳನ್ನು ಶಾಶ್ವತವಾಗಿ ಕಾಯ್ದಿರಿಸಲಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ನಡೆದಾಗಲೆಲ್ಲಾ ಈ ಗೌರವ ಸಲ್ಲಿಸಲಾಗುತ್ತದೆ! ಆದರೆ, ಕಳೆದ ವರ್ಷದ ಜೂನ್ 4 ರಂದು ಇದೇ ಕ್ರೀಡಾಂಗಣದ ಅಂಗಳದಲ್ಲಿ ಕಂಡ ವಿಜಯೋತ್ಸವದ ಸಂಭ್ರಮವು, ಅನಿರೀಕ್ಷಿತವಾಗಿ ಕಣ್ಣೀರಿನ ಮಡುವಿನಲ್ಲಿ ಅಂತ್ಯವಾಗಿತ್ತು. ಆಗ ನಡೆದ ಕಾಲ್ತುಳಿತದಲ್ಲಿ ದುರಂತ ಸಂಭವಿಸಿತ್ತು.
ಹದಿನೆಂಟು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅಹಮದಾಬಾದ್‌ನಲ್ಲಿ ಪಂಜಾಬ್ ಕಿಂಗ್ ಇಲೆವನ್ ತಂಡವನ್ನು ಮಣಿಸಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡವನ್ನು ಬರಮಾಡಿಕೊಳ್ಳಲು ಅಂದು ಇಡೀ ಬೆಂಗಳೂರೇ ಬೀದಿಗಿಳಿದಿತ್ತು.
ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಹರಿದಿದ್ದ ಅಭಿಮಾನಿಗಳ ಸಾಗರವು ನಿಯಂತ್ರಣ ಮೀರಿತ್ತು. ಸುರಕ್ಷತಾ ಕ್ರಮ ಕೈಗೊಳ್ಳಲು ಸರ್ಕಾರವೂ ವಿಫಲವಾಗಿತ್ತು. ದುರದೃಷ್ಟವಶಾತ್, ಅತಿಯಾದ ನೂಕುನುಗ್ಗಲು ಮತ್ತು ಕಾರ್ಯಕ್ರಮ ಆಯೋಜನಾ ಲೋಪಗಳಿಂದ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 13 ವರ್ಷದ ಬಾಲಕಿ ದಿವ್ಯಾಂಶಿ ಸೇರಿದಂತೆ ಒಟ್ಟು 11 ಮಂದಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಸಂಭ್ರಮಿಸಬೇಕಿದ್ದ ಆ ದಿನವು ಕನ್ನಡಿಗರ ಪಾಲಿಗೆ ಕರಾಳ ದಿನವಾಗಿ ಇತಿಹಾಸದ ಪುಟ ಸೇರಿತು.
ಈ ದುರಂತ ಸಂಭವಿಸಿ ಒಂದು ವರ್ಷ ಕಳೆಯುತ್ತಿದ್ದರೂ, ಮೃತಪಟ್ಟ ಅಭಿಮಾನಿಗಳ ಕುಟುಂಬದ ನೋವು ಮಾತ್ರ ಮಾಸಿಲ್ಲ. ಭೂಮಿಕ್, ಸಹನ, ಶ್ರವಣ್ ಸೇರಿದಂತೆ ಉಸಿರು ಚೆಲ್ಲಿದ 11 ಜೀವಗಳ ಸ್ಮರಣಾರ್ಥವಾಗಿ ಈ ಬಾರಿ ಕೆಎಸ್‌ಸಿಎ ಮತ್ತು ಆರ್‌ಸಿಬಿ ಫ್ರಾಂಚೈಸಿಯು ಅತ್ಯಂತ ಭಾವುಕ ಮತ್ತು ಐತಿಹಾಸಿಕ ತೀರ್ಮಾನವೊಂದನ್ನು ಕೈಗೊಂಡಿವೆ.
ಲಿವರ್‌ಪೂಲ್ ಮಾದರಿಯಲ್ಲಿ ಮೃತ ಅಭಿಮಾನಿಗಳಿಗೆ ಕಾಯ್ದಿರಿಸಿದ ಆಸನಗಳು!
ತಂಡದ ಗೆಲುವಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಆ ಅಭಿಮಾನಿಗಳನ್ನು ಸದಾ ಜೀವಂತವಾಗಿರಿಸುವ ಉದ್ದೇಶದಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರಮುಖ ಸ್ಟ್ಯಾಂಡ್‌ನಲ್ಲಿರುವ 11 ಆಸನಗಳನ್ನು ಶಾಶ್ವತವಾಗಿ ಕಾಯ್ದಿರಿಸಲಾಗಿದೆ.
ಅಂದರೆ, ಇನ್ನು ಮುಂದೆ ಕ್ರೀಡಾಂಗಣದಲ್ಲಿ ನಡೆಯುವ ಯಾವುದೇ ಐಪಿಎಲ್ ಅಥವಾ ಅಂತರರಾಷ್ಟ್ರೀಯ ಪಂದ್ಯಗಳಿಗೂ ಈ 11 ಸೀಟುಗಳಿಗೆ ಟಿಕೆಟ್ ಮಾರಾಟ ಮಾಡಲಾಗುವುದಿಲ್ಲ. ಇಂಗ್ಲೆಂಡ್‌ನ ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್ ತನ್ನ ಹಿಲ್ಸ್‌ಬರೋ ದುರಂತದ ಸಂತ್ರಸ್ತರಿಗೆ ನೀಡುವ ಗೌರವದ ಮಾದರಿಯಲ್ಲೇ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಈ ಖಾಲಿ ಆಸನಗಳು 11 ಅಭಿಮಾನಿಗಳ ಮೃತರ ಮೌನ ಉಪಸ್ಥಿತಿಯನ್ನು ಸಾರಲಿವೆ.
ಇಂಗ್ಲೆಂಡ್ ಹಿಲ್ಸ್‌ಬರೋ ಫುಟ್‌ಬಾಲ್ ದುರಂತದಲ್ಲಿ ನೂರಾರು ಮಂದಿ ಅಭಿಮಾನಿಗಳು ಸಾವನ್ನಪ್ಪಿದಾಗ ಅವರ ಸಂಬಂಧಿಕರು ಪರದಾಡುತ್ತಿರುವ ದೃಶ್ಯ
ಏನಿದು ಲಿವರ್‌ಪೂಲ್ ಮಾದರಿ
ಇಂಗ್ಲೆಂಡ್‌ನ ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್ ಇತಿಹಾಸದಲ್ಲಿ 'ಹಿಲ್ಸ್‌ಬರೋ ದುರಂತ' ಎಂಬುದು ಎಂದಿಗೂ ಮಾಸದ ಕಪ್ಪು ಚುಕ್ಕೆಯಾಗಿ ಉಳಿದಿದೆ. ಈ ಭೀಕರ ಘಟನೆಯು 1989ರ ಏಪ್ರಿಲ್ 15ರಂದು ಶೆಫೀಲ್ಡ್‌ನ ಹಿಲ್ಸ್‌ಬರೋ ಕ್ರೀಡಾಂಗಣದಲ್ಲಿ ನಡೆದ ಲಿವರ್‌ಪೂಲ್ ಮತ್ತು ನಾಟಿಂಗ್‌ಹ್ಯಾಮ್ ಫಾರೆಸ್ಟ್ ತಂಡಗಳ ನಡುವಿನ ಎಫ್‌ಎ ಕಪ್ ಸೆಮಿಫೈನಲ್ ಪಂದ್ಯದ ವೇಳೆ ಸಂಭವಿಸಿತು. ಕ್ರೀಡಾಂಗಣದ ಪ್ರವೇಶ ದ್ವಾರದ ಬಳಿ ಜಮಾಯಿಸಿದ್ದ ಸಾವಿರಾರು ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಒಮ್ಮೆಲೇ ದೊಡ್ಡ ಗೇಟ್ ಅನ್ನು ತೆರೆದಿದ್ದೇ ಈ ದುರಂತಕ್ಕೆ ನಾಂದಿಯಾಯಿತು. ಆ ಕಿರಿದಾದ ದಾರಿಯ ಮೂಲಕ ಒಳ ನುಗ್ಗಿದ ಜನಸಾಗರವು ನೇರವಾಗಿ ಕ್ರೀಡಾಂಗಣದ ಮುಂಭಾಗದ ಆವರಣಕ್ಕೆ ನುಗ್ಗಿತು. ಅಲ್ಲಿ ಈಗಾಗಲೇ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜನರು ತುಂಬಿದ್ದರೂ, ಹಿಂದಿನಿಂದ ಬರುತ್ತಿದ್ದವರ ಒತ್ತಡಕ್ಕೆ ಸಿಲುಕಿ ಮುಂಭಾಗದ ಕಬ್ಬಿಣದ ಬೇಲಿಗೆ ಅಂಟಿಕೊಂಡಿದ್ದ ಅಭಿಮಾನಿಗಳು ಉಸಿರುಗಟ್ಟಿ ಸಾವು ಕಂಡರು.
ಈ ಕಾಲ್ತುಳಿತದಲ್ಲಿ ಒಟ್ಟು 97 ಮಂದಿ ಲಿವರ್‌ಪೂಲ್ ಅಭಿಮಾನಿಗಳು ಪ್ರಾಣ ಕಳೆದುಕೊಂಡರು. ಮೃತರಲ್ಲಿ ಹೆಚ್ಚಿನವರು ಹದಿಹರೆಯದವರು ಮತ್ತು ಯುವಜನತೆಯಾಗಿದ್ದು, ಈ ಘಟನೆಯು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಈ ದುರಂತದ ನಂತರ ಲಿವರ್‌ಪೂಲ್ ಕ್ಲಬ್ ತನ್ನ ಮೃತ ಅಭಿಮಾನಿಗಳನ್ನು ಸದಾ ಜೀವಂತವಾಗಿರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕ್ರೀಡಾಂಗಣದ ಹೊರಗೆ ಮೃತರ ಹೆಸರಿರುವ ಶಾಶ್ವತ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಪ್ರತಿ ಪಂದ್ಯದ ವೇಳೆಯೂ ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಆಟಗಾರರ ಜೆರ್ಸಿಯ ಹಿಂಭಾಗದಲ್ಲಿ ಮೃತರ ಸಂಖ್ಯೆಯನ್ನು (97) ಮುದ್ರಿಸುವ ಮೂಲಕ ತಂಡವು ಅವರನ್ನು ಸದಾ ಸ್ಮರಿಸುತ್ತದೆ.
ಈಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಸೀಟುಗಳನ್ನು ಖಾಲಿ ಬಿಡುವ ನಿರ್ಧಾರಕ್ಕೆ ಈ ಹಿಲ್ಸ್‌ಬರೋ ದುರಂತದ ನಂತರ ಲಿವರ್‌ಪೂಲ್ ಕ್ಲಬ್ ತೋರುತ್ತಿರುವ ಭಾವುಕ ಗೌರವವೇ ಪ್ರಮುಖ ಸ್ಫೂರ್ತಿಯಾಗಿದೆ ಎನ್ನಲಾಗಿದೆ. ಹಿಲ್ಸ್‌ಬರೋ ಘಟನೆಯ ನಂತರವೇ ವಿಶ್ವದಾದ್ಯಂತ ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರು ನಿಂತು ಪಂದ್ಯ ನೋಡುವ ಪದ್ಧತಿಯನ್ನು ರದ್ದುಪಡಿಸಿ, ಕಡ್ಡಾಯವಾಗಿ ಆಸನಗಳ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.
ನಿಮ್ಮನ್ನು ನಾವು ಮರೆತಿಲ್ಲ
ಮಾರ್ಚ್ 28ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಈ ಸೀಸನ್‌ನ ಮೊದಲ ಪಂದ್ಯವು ಕೇವಲ ಆಟವಾಗಿ ಉಳಿದಿಲ್ಲ. ಅದು ಮೃತರಿಗೆ ಸಲ್ಲಿಸುವ ಶ್ರದ್ಧಾಂಜಲಿಯೂ ಆಗಲಿದೆ. ಈ ವಿಶೇಷ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದ ಪ್ರವೇಶ ದ್ವಾರದ ಬಳಿ ಮೃತರ ಹೆಸರಿರುವ ಸ್ಮಾರಕ ಫಲಕವನ್ನು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅನಾವರಣಗೊಳಿಸಲಿದ್ದಾರೆ. ಪಂದ್ಯದ ಆರಂಭದ ಮುನ್ನ ಆಟಗಾರರು ಕಪ್ಪು ತೋಳುಪಟ್ಟಿ ಧರಿಸಿ ಮೌನಾಚರಣೆ ಮಾಡಲಿದ್ದಾರೆ. ವಿಶೇಷವಾಗಿ, ಕ್ರಿಕೆಟ್ ಅಭ್ಯಾಸದ ವೇಳೆ ಆರ್‌ಸಿಬಿ ಆಟಗಾರರೆಲ್ಲರೂ ಜೆರ್ಸಿ ಸಂಖ್ಯೆ 11 ಧರಿಸುವ ಮೂಲಕ "ನಿಮ್ಮನ್ನು ನಾವು ಮರೆತಿಲ್ಲ" ಎಂಬ ಸಂದೇಶವನ್ನು ರವಾನಿಸಲಿದ್ದಾರೆ.
ಅಭಿಮಾನಿಗಳು ಕೇವಲ ಪ್ರೇಕ್ಷಕರಲ್ಲ, ಅವರು ತಂಡದ ಅವಿಭಾಜ್ಯ ಅಂಗ ಎಂಬುದನ್ನು ಆರ್‌ಸಿಬಿ ಫ್ರಾಂಚೈಸಿಯು ಈ ಮೂಲಕ ಸಾಬೀತುಪಡಿಸಿದೆ. ಆ ಮೂಲಕ ತನ್ನ ಮೇಲಿರುವ ಕಳಂಕವನ್ನು ತೊಡೆದುಹಾಕುವ ಪ್ರಯತ್ನವನ್ನೂ ನಡೆಸಿದೆ!
ಚಿನ್ನಸ್ವಾಮಿ ಸ್ಟೇಡಿಯಂ ದುರಂತದ ವೇಳೆ ಮೃತ ಅಭಿಮಾನಿಗಳ ಸಂಬಂಧಿಕರು ಗೋಳಾಡುತ್ತಿರುವ ದೃಶ್ಯ
ಕಳೆದ ವರ್ಷದ ಕಹಿ ಘಟನೆಯಿಂದ ಪಾಠ ಕಲಿತಿರುವ ಆಡಳಿತ ಮಂಡಳಿಯು ಈ ಬಾರಿ ಸುರಕ್ಷತೆಗೆ ಅಗ್ರ ಆದ್ಯತೆ ನೀಡಿದೆ. ಅಂದು ಜನಸಂದಣಿ ನಿಯಂತ್ರಿಸಲು ವಿಫಲವಾಗಿದ್ದ ಪೊಲೀಸರು ಮತ್ತು ಆಯೋಜಕರು ಈ ಬಾರಿ ಎಚ್ಚೆತ್ತುಕೊಂಡಿದ್ದಾರೆ. ಸುಮಾರು 7 ಕೋಟಿ ರೂ., ವೆಚ್ಚದಲ್ಲಿ ಕ್ರೀಡಾಂಗಣದ ಭದ್ರತೆಯನ್ನು ಮೇಲ್ದರ್ಜೆಗೇರಿಸಲಾಗಿದ್ದು, 'ಜಾರ್ವಿಸ್' ಎಂಬ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಪ್ರತಿಕ್ಷಣದ ಚಲನವಲನವನ್ನು ಗಮನಿಸಲಾಗುತ್ತಿದೆ. ನೂಕುನುಗ್ಗಲು ತಡೆಯಲು ಡಿಜಿಟಲ್ ಟಿಕೆಟ್ ಕಡ್ಡಾಯಗೊಳಿಸಲಾಗಿದೆ ಮತ್ತು ಜನಪ್ರಿಯ 'ಅನ್‌ಬಾಕ್ಸ್' ಈ ವೆಂಟ್ ಅನ್ನು ಸಹ ರದ್ದುಗೊಳಿಸುವ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ಆಟಕ್ಕಿಂತ ಅಭಿಮಾನಿಗಳ ಜೀವ ದೊಡ್ಡದು ಎಂಬ ಅರಿವು ಈ ಬದಲಾವಣೆಗಳಿಗೆ ಕಾರಣವಾಗಿದೆ.
ಹೀಗೆ, ಒಂದು ವರ್ಷದ ಹಿಂದೆ ಸಂಭವಿಸಿದ ಆ ಭೀಕರ ದುರಂತವು ಇಂದಿಗೂ ಆರ್‌ಸಿಬಿ ಪಾಳಯದಲ್ಲಿ ಮೌನ ಆವರಿಸಿದೆ. ಮೃತಪಟ್ಟ 11 ಅಭಿಮಾನಿಗಳ ಕುಟುಂಬಗಳಿಗೆ ಈ ಸ್ಮರಣಾರ್ಥ ಆಸನಗಳು ಅಲ್ಪ ಮಟ್ಟದ ಸಮಾಧಾನ ನೀಡಬಹುದು. ಅಂದು ಟ್ರೋಫಿ ಗೆದ್ದ ಸಂಭ್ರಮದಲ್ಲಿ ಹರಿಸಿದ ರಕ್ತದ ಕಲೆಗಳು ಇಂದು ಗೌರವದ ಸಂಕೇತಗಳಾಗಿ ಬದಲಾಗಿವೆ. ಚಿನ್ನಸ್ವಾಮಿ ಕ್ರೀಡಾಂಗಣದ 11 ಖಾಲಿ ಆಸನಗಳು ಮುಂದಿನ ಪೀಳಿಗೆಗೆ ಆ ಕರಾಳ ನೆನಪನ್ನು ಮತ್ತು ಅಭಿಮಾನಿಗಳು ತೋರುವ ಅತಿರೇಕದ ಪ್ರೀತಿಯ ಜೊತೆಗೆ ಸುರಕ್ಷತೆಯ ಪಾಠವನ್ನೂ ಸದಾ ನೆನಪಿಸುತ್ತಲೇ ಇರುತ್ತವೆ.

