
ಆಸ್ತಿ ತೆರಿಗೆ ಕಟ್ಟದವರ ಮನೆ, ಕಟ್ಟಡ ಹರಾಜು; ಜಿಬಿಎ ವಿರುದ್ಧ ಭುಗಿಲೆದ್ದ ಆಕ್ರೋಶ
ಆಸ್ತಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಬಿಡ್ದಾರರು ಸ್ಥಳದಲ್ಲೇ ಶೇ.15 ರಷ್ಟು ಮೊತ್ತ ಪಾವತಿಸಬೇಕು. 45 ದಿನಗಳ ಒಳಗೆ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಜಿಬಿಎ ಹೇಳಿದೆ.
ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವವರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ತನ್ನ ಐದು ನಗರ ಪಾಲಿಕೆಗಳಲ್ಲಿ ತೆರಿಗೆ ಬಾಕಿ ಉಳಿಸಿಕೊಂಡವರ ಆಸ್ತಿ ಹರಾಜು ಪ್ರಕ್ರಿಯೆ ಆರಂಭಿಸಿದೆ. ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ಪಕ್ಷಪಾತ ಧೋರಣೆ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಬೆಂಗಳೂರಿನಲ್ಲಿ 7000 ಆಸ್ತಿ ಮಾಲೀಕರು ಅಂದಾಜು 437ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈಗಾಗಲೇ ತೆರಿಗೆ ಪಾವತಿಗೆ ಸಾಕಷ್ಟು ಗಡುವು ಹಾಗೂ ನೋಟಿಸ್ ನೀಡಿದ್ದರೂ ಇನ್ನು ಸಾವಿರಾರು ಆಸ್ತಿ ಮಾಲೀಕರು ತೆರಿಗೆ ಪಾವತಿಸಿಲ್ಲ. ಹಾಗಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು ತೆರಿಗೆ ಬಾಕಿ ಉಳಿಸಿಕೊಂಡವರ ಆಸ್ತಿ ಹರಾಜು ಆರಂಭಿಸಿದೆ.
ಎಷ್ಟಿವೆ ವಾಣಿಜ್ಯ ಕಟ್ಟಡಗಳು?
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಒಟ್ಟು 3,876 ಐಟಿ ಕಂಪೆನಿಗಳು, 103 ಬಿಟಿ ಕಂಪೆನಿಗಳು, 89 ಟೆಕ್ ಪಾರ್ಕ್ಗಳು, 447 ಮಾಲ್ ಹಾಗೂ ಮಲ್ಟಿಪ್ಲೆಕ್ಸ್ಗಳು, 1,10,000 ಕೈಗಾರಿಕಾ ಕಟ್ಟಡಗಳು, 857 ಸ್ಟಾರ್ ಹೋಟೆಲ್ಗಳು, 1,485 ಕಲ್ಯಾಣ ಮಂಟಪಗಳು, 3,155 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳು, 3,180 ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಇವುಗಳ ಪೈಕಿ ಬಹುತೇಕ ಕಟ್ಟಡಗಳು ಆಸ್ತಿ ತೆರಿಗೆಗಳನ್ನು ಬಾಕಿ ಉಳಿಸಿಕೊಂಡಿವೆ.
"ಜಿಬಿಎ ಕೇಂದ್ರ ಕಚೇರಿಯ ಕಂದಾಯ ಇಲಾಖೆ ಅಧಿಕಾರಿಗಳ ಕಾರಣದಿಂದ ಬೃಹತ್ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿದಿದೆ. ಕೆಲ ಅಧಿಕಾರಿ ಹಾಗೂ ಸಿಬ್ಬಂದಿಗಳು ನಿಖರವಾದ ವಾಣಿಜ್ಯ ಕಟ್ಟಡಗಳ ಮಾಹಿತಿ ನೀಡುತ್ತಿಲ್ಲ. ಈ ಹಿಂದೆ ಬಿಬಿಎಂಪಿ ಆಡಳಿತಾವಧಿಯಲ್ಲಿ ಇದ್ದಂತಹ ಕಡತಗಳನ್ನು ಕೇಂದ್ರ ಕಚೇರಿಗೆ ತರಿಸಿಕೊಂಡು ಪರಿಶೀಲನೆಯನ್ನೂ ಮಾಡುತ್ತಿಲ್ಲ." ಎಂದು ಪಾಲಿಕೆಯ ಮಾಜಿ ಸದಸ್ಯ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
40 ಸಾವಿರ ತೆರಿಗೆ ಬಾಕಿಗೆ ಮನೆ ಹರಾಜು?
ಗ್ರೇಟರ್ ಬೆಂಗಳೂರು ಪ್ರಾಧಿಕಾರವು 40 -50 ಸಾವಿರ ರೂ.ತೆರಿಗೆ ಬಾಕಿ ಉಳಿಸಿಕೊಂಡ ಮಧ್ಯಮ ಮತ್ತು ಬಡವರ ಆಸ್ತಿಗಳನ್ನು ಹರಾಜು ಹಾಕಲು ಪಟ್ಟಿ ಸಿದ್ಧಪಡಿಸಿದೆ. ಫೆ.21 ರಿಂದಲೇ ಹರಾಜು ಪ್ರಕ್ರಿಯೆ ಆರಂಭಿಸಿದೆ. ದೊಡ್ಡ ಬಿಲ್ಡರ್ಗಳು ಮತ್ತು ಪ್ರಭಾವಿ ರಾಜಕಾರಣಿಗಳಿಗೆ ಸೇರಿದ ಆಸ್ಪತ್ರೆಗಳು ರಾಜಕಾಲುವೆ ಮೇಲೆ ನಿರ್ಮಿಸಿದ್ದರೂ ಅವುಗಳಿಗೆ ಅಡ್ವಾನ್ಸ್ ನೋಟಿಸ್ ನೀಡಿ ಕೋರ್ಟ್ ಮೆಟ್ಟಿಲೇರಲು ಅಧಿಕಾರಿಗಳೇ ದಾರಿ ಮಾಡಿಕೊಟ್ಟಿದ್ದಾರೆ ಎಂದು ದೂರಲಾಗಿದೆ.
2016 ರಲ್ಲಿ ಆವನಿ ಶೃಂಗೇರಿ ಬಡಾವಣೆ ಮತ್ತು ದೊಡ್ಡ ಬೊಮ್ಮಸಂದ್ರದಲ್ಲಿ ಬಡವರ ಮನೆಗಳನ್ನು ಮುಲಾಜಿಲ್ಲದೇ ನೆಲಸಮ ಮಾಡಲಾಯಿತು. 350ಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿಪಾಲು ಮಾಡಿದರು. ಈಗ ಬಾಕಿ ತೆರಿಗೆ ಕಟ್ಟದವರ ಮನೆಗಳನ್ನು ಹರಾಜು ಹಾಕಿ, ಅವರ ಜೀವನವನ್ನೇ ಹೊಸಕಿ ಹಾಕಲು ಮುಂದಾಗಿದೆ ಎಂದು ಎನ್.ಆರ್.ರಮೇಶ್ ದೂರಿದ್ದಾರೆ.
1876ರಲ್ಲಿ ಬೆಂಗಳೂರು ಮುನಿಸಿಪಲ್ ಕಾರ್ಪೊರೇಷನ್ ಸ್ಥಾಪನೆ ಮಾಡಿದ್ದು ನಗರದ ಸರ್ವತೋಮುಖ ಅಭಿವೃದ್ಧಿಗಾಗಿಯೇ ಹೊರತು ಬಡವರನ್ನು ಶೋಷಿಸಲು ಅಲ್ಲ. ಅಧಿಕಾರಿಗಳು ತಮ್ಮ 'ಕಾನೂನು ಕೋಶ'ವನ್ನು ಪ್ರಭಾವಿಗಳ ರಕ್ಷಣೆಗೆ ಬಳಸುವುದನ್ನು ನಿಲ್ಲಿಸಬೇಕು. ಹಳೆಯ ಕಡತಗಳನ್ನು ಮರುಪರಿಶೀಲಿಸಿದರೆ ಅಧಿಕಾರಿಗಳ ಮತ್ತು ಬೃಹತ್ ಕಂಪನಿಗಳ ನಡುವಿನ ಅಕ್ರಮ ಮೈತ್ರಿ ಬಯಲಾಗಲಿದೆ ಎಂದು ಹೇಳಿದ್ದಾರೆ.
14 ಆಸ್ತಿಗಳ ಹರಾಜು
ಜಿಬಿಎ ವ್ಯಾಪ್ತಿಯ ಪೂರ್ವ ಮತ್ತು ಉತ್ತರ ವಲಯಗಳಲ್ಲಿ 7 ಆಸ್ತಿಗಳನ್ನು ಹರಾಜು ಮಾಡಲಾಗಿದೆ. ಇದರಿಂದ 7 ಕೋಟಿಗಿಂತಲೂ ಅಧಿಕ ಆದಾಯ ಬಂದಿದೆ. ಪೂರ್ವ ವಲಯದಲ್ಲಿ 5 ಆಸ್ತಿಗಳ ಹರಾಜು ಪೂರ್ಣಗೊಂಡಿದೆ. ಉತ್ತರ ವಲಯದಲ್ಲಿ 2 ಆಸ್ತಿಗಳ ಹರಾಜು ನಡೆದಿದೆ. ಕೇಂದ್ರ ವಲಯದಲ್ಲಿ ಬಿಡ್ದಾರರು ಇಲ್ಲದ ಕಾರಣ ಕೆಲ ಆಸ್ತಿಗಳ ಹರಾಜು ಪೂರ್ಣಗೊಂಡಿಲ್ಲ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಹರಾಜು ಪ್ರಕ್ರಿಯೆ ನಡೆಯುವ ಮೊದಲು ಬಾಕಿ ಇರುವ ಪೂರ್ಣ ತೆರಿಗೆ ಹಣವನ್ನು ಆನ್ಲೈನ್ ಮೂಲಕ ಪಾವತಿಸಿದರೆ, ಅಂತಹ ಆಸ್ತಿಗಳನ್ನು ಹರಾಜಿನಿಂದ ಕೈಬಿಡಲಾಗುವುದು.60 ದಿನಗಳ ಕಾಲಾವಕಾಶ ನೀಡಿದ ನಂತರವೂ ತೆರಿಗೆ ಕಟ್ಟದ ಆಸ್ತಿಗಳ ಮೇಲೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ರ ಅಡಿ ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಆಸ್ತಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಬಿಡ್ದಾರರು ಸ್ಥಳದಲ್ಲೇ ಶೇ.15 ರಷ್ಟು ಮೊತ್ತ ಪಾವತಿಸಬೇಕು. 45 ದಿನಗಳ ಒಳಗೆ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸರ್ಕಾರದ ಹುಚ್ಚಾಟ ಎಂದ ಜೆಡಿಎಸ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ(ಈಗ ಜಿಬಿಎ) ತೆರಿಗೆ ಪಾವತಿಸದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿಯಮ ಈ ಹಿಂದೆ ಇರಲಿಲ್ಲ. ತೆರಿಗೆ ಪಾವತಿಸುವಾಗ ಹಳೆಯ ಬಾಕಿಯನ್ನು ಬಡ್ಡಿ ಸಮೇತ ಕಟ್ಟಿಸಿಕೊಳ್ಳುತ್ತಿದ್ದರು. ಆದರೆ, ಬಿಬಿಎಂಪಿಯು ಜಿಬಿಎ ಆದ ಬಳಿಕ ಸರ್ಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರು ಹೊಸ ಕಾಯ್ದೆ ತಂದು ಬಡವರ ರಕ್ತ ಹೀರಲು ಮುಂದಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿರುವಾಗಲೇ ಹೊಸ ಕಾಯ್ದೆ ತಂದು ತೆರಿಗೆ ಕಟ್ಟದವರ ಮನೆಗಳನ್ನು ಹರಾಜು ಹಾಕಲು ಆದೇಶ ಮಾಡಿರುವುದನ್ನು ಖಂಡಿಸುತ್ತೇವೆ ಎಂದು ಜೆಡಿಎಸ್ ಬೆಂಗಳೂರು ನಗರಾಧ್ಯಕ್ಷ ಎಚ್.ಎಂ.ರಮೇಶ್ಕುಮಾರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಜಿಬಿಎ ಅಧಿಕಾರಿಗಳು ಮನೆಗಳನ್ನು ಹರಾಜಿಗಿಟ್ಟರೆ ಅದನ್ನು ಉಳಿಸಿಕೊಳ್ಳಲು ಜನಸಾಮಾನ್ಯರು ಕೋರ್ಟ್ಗೆ ಅಲೆಯಬೇಕು. ವಕೀಲರಿಗೆ ಶುಲ್ಕ ಕಟ್ಟಲು ಪರದಾಡಬೇಕು. ಜೀವನ ಮಾಡುವುದೇ ಕಷ್ಟವಾಗಿರುವಾಗ ಸರ್ಕಾರದ ಈ ನಿಲುವು ಸರಿಯಲ್ಲ. ಇದು ಬ್ರಿಟೀಷ್ ಆಳ್ವಿಕೆಯೋ ಅಥವಾ ನಾಗರಿಕ ಸರ್ಕಾರ ಆಡಳಿತವೋ ಎಂಬುದು ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.
ಇಡೀ ಬೆಂಗಳೂರು ನಗರದಲ್ಲಿ ಸಾಕಷ್ಟು ಮಾಲ್, ಟೆಕ್ಪಾರ್ಕ್, ಬಹುಮಹಡಿ ಕಟ್ಟಡಗಳಿವೆ. ಖಾಲಿ ಸೈಟುಗಳ ಮೇಲೂ ತೆರಿಗೆ ಹಾಕುವುದನ್ನು ಒಪ್ಪುವುದಿಲ್ಲ. ಇದನ್ನು ಜೆಡಿಎಸ್ ಖಂಡಿಸಲಿದೆ. ಕಾಂಗ್ರೆಸ್ ಪಕ್ಷವು 140 ಶಾಸಕರ ಬಹುಮತದೊಂದಿಗೆ ಹುಚ್ಚಾಟವಾಡುತ್ತಿದೆ. ಸರ್ಕಾರದ ಅಸಂವಿಧಾನಿಕ ಕ್ರಮ ಖಂಡಿನೀಯ. ಇದನ್ನು ಖಂಡಿಸಿ ಈಗಾಗಲೇ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮಾಡಿದ್ದೇವೆ. ಈಗ ಮತ್ತೆ ಜಿಬಿಎ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸುತ್ತೇವೆ ಎಂದರು.

