Human-Elephant Conflict| ನಾಡಿಗೆ ನುಗ್ಗುತ್ತಿರುವ ಮಕ್ನಾ, ಒಂಟಿಸಲಗ: ಸೆರೆಗೆ ಹೆಣ್ಣಾನೆಗಳ ಹನಿಟ್ರ್ಯಾಪ್‌!
x
ಚನ್ನಪಟ್ಟಣದ ತೆಂಗಿನಕಲ್ಲು ಅರಣ್ಯಪ್ರದೇಶದಲ್ಲಿ ಸೋಮವಾರ ಸೆರೆಹಿಡಿಯಲಾದ ಮಕ್ನಾ ಆನೆ.

Human-Elephant Conflict| ನಾಡಿಗೆ ನುಗ್ಗುತ್ತಿರುವ ಮಕ್ನಾ, ಒಂಟಿಸಲಗ: ಸೆರೆಗೆ ಹೆಣ್ಣಾನೆಗಳ ಹನಿಟ್ರ್ಯಾಪ್‌!

ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನೇ ಮೀರಿಸುವ ಹಾಗೂ ಎದಿರೇಟು ನೀಡುವ ಮಕ್ನಾ ಮತ್ತು ಬಲದಲ್ಲಿ ಭೀಮನಂತಿರುವ ಒಂಟಿಸಲಗಗಳ ಸೆರೆಗೆ ಅರಣ್ಯ ಇಲಾಖೆ ಕುಮ್ಕಿ ಆನೆಗಳ ಮೂಲಕ ಹರಸಾಹಸ ಪಟ್ಟರೂ ಅದು ವ್ಯರ್ಥ.


ದೇಶದಲೇ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಕರ್ನಾಟಕದಲ್ಲಿ, ಗ್ರಾಮಸ್ಥರಿಗೆ ಕಾಡಾನೆಗಳ ಉಪಟಳ ಹೆಚ್ಚುತಲೇ ಇದೆ. ಅದರಲ್ಲೂ"ಆನೆ-ಮಾನವ ಸಂಘರ್ಷ" ನಿರಂತರವಾಗಿರುವ ಕಾರಣಕ್ಕೆ, ಕೆಲವೆಡೆ ಆನೆ ಸೆರೆ ಕಾರ್ಯಚರಣೆಗಳು ನಡೆಯುತ್ತಿವೆ.

ಆದರೆ, ಕಾಡಿನಿಂದ ನಾಡಿಗೆ ನುಗ್ಗಿ ಗ್ರಾಮಸ್ಥರಿಗೆ, ರೈತರಿಗೆ ಉಪಟಳ ನೀಡುತ್ತಿರುವ ಒಂಟಿಸಲಗ (ಟಸ್ಕರ್‌) ಹಾಗೂ ಮಕ್ನಾ (ಹೆಣ್ಣಾನೆ ದೇಹ ಹೊಂದಿರುವ ಗಂಡಾನೆ) ಆನೆಗಳ ಸೆರೆ ಕಾರ್ಯಚರಣೆಯಲ್ಲಿ ಪಾಲ್ಗೊಳ್ಳುವ ಬಲಭೀಮನಂತಿರುವ (ಕುಮ್ಕಿ) ಸಾಕಾನೆಗಳು ಸುಸ್ತಾಗುತ್ತಿವೆ. ಅಷ್ಟೇ ಅಲ್ಲ, ನಾಡಿನತ್ತ ದಾಂಗುಡಿಯಿಡುತ್ತಿರುವ ಕಾಡಿನ ಹೆಣ್ಣಾನೆಗಳನ್ನೂ ಸುತ್ತುವರಿದು ಸೆರೆಹಿಡಿಯಲು ಪರದಾಡುತ್ತಿವೆ!

ಅದರಲ್ಲೂ ಮಕ್ನಾ ಆನೆಗಳ ಕಾರುಬಾರು ಇನ್ನೂ ಜೋರು. ಆರರಿಂದ ಏಳು ಕುಮ್ಕಿ ಆನೆಗಳು ಸೇರಿದರೂ, ಒಂದು ಮಕ್ನಾ ಆನೆಯನ್ನು ಕೆಡವಲು ಅಗದೆ ನೀರು ಕುಡಿಯುತ್ತಿವೆ ! ಹಾಗಾಗಿ ಅರಣ್ಯ ಇಲಾಖೆ ಹೊಸ ದಾರಿಯೊಂದನ್ನು ಪತ್ತೆ ಹಚ್ಚಿದೆ. ಅದೆಂದರೆ ಆನೆಗಳ ʼಹನಿ ಟ್ರ್ಯಾಪ್‌ʼ!!

ಕಾಡಿನಿಂದ ನಾಡಿಗೆ ನುಗ್ಗುವ ಒಂಟಿಸಲಗ ಮತ್ತು ಮಕ್ನಾಗಳನ್ನು, ಸಾಕಿದ ಹೆಣ್ಣಾನೆಗಳ ಮೂಲಕ ʼಹನಿ ಟ್ರ್ಯಾಪ್‌ʼ ನಡೆಸಿ ಸೆರೆಹಿಡಿಯುವ ತಂತ್ರಗಾರಿಕೆಗೆ ಅರಣ್ಯ ಇಲಾಖೆ ಮುಂದಾಗಿದೆ ಎನ್ನಲಾಗಿದೆ. "ಬೇರೆ ಬೇರೆ ತಂತ್ರಗಳ ಮೂಲಕ ಜನರಿಗೆ ಉಪಟಳ ನೀಡುವ ಕಾಡಾನೆಗಳನ್ನು ಸೆರೆಹಿಡಿಯಲಾಗುತ್ತದೆ. ಪ್ರಮುಖವಾಗಿ ಸಾಕು ಹೆಣ್ಣಾನೆಗಳ ಮೂಲಕ ಒಂಟಿ ಸಲಗ- ಮಕ್ನಾಗಳನ್ನು ಆಕರ್ಷಿಸಿ ಬಳಿಕ ಸೆರೆಹಿಡಿಯುವ ʼಹನಿ ಟ್ರ್ಯಾಪ್‌ʼ ತಂತ್ರ ಹೆಣೆಯಲಾಗುತ್ತದೆ," ಎಂದು ಹೆಸರು ಹೇಳಲಿಚ್ಛಿಸದ ಅರಣ್ಯಾಧಿಕಾರಿಯೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

"ಒಂಟಿಸಲಗವನ್ನು ಬಹುತೇಕ ಸಲ ಹೆಣ್ಣಾನೆಗಳ ಮೂಲಕ "ಹನಿಟ್ರ್ಯಾಪ್‌" ನಡೆಸಿಯೇ, ಸೆರೆಹಿಡಿಯಲಾಗುತ್ತದೆ. ಮಕ್ನಾ ಆನೆಗಳು ಮಾತ್ರ ಅತಿ ಬುದ್ಧಿವಂತ ಆನೆಗಳಾಗಿದ್ದು, ಕೆಲವು ಬಾರಿ ʼಹನಿಟ್ರ್ಯಾಪ್‌ʼ ಆಗುತ್ತದೆ. ಆದರೆ, ಅರಣ್ಯ ಇಲಾಖೆಯ ತಂತ್ರಗಳನ್ನು ನೆನಪಿಟ್ಟುಕೊಂಡು ಮುಂದಿನ ಬಾರಿ ಅದಕ್ಕೆ ತಕ್ಕಂತೆ ಎಚ್ಚರ ವಹಿಸುವ ಮಕ್ನಾ ಆನೆಯನ್ನು ಸೆರೆಹಿಡಿಯಲು, ಇಲಾಖೆಯು ಪ್ರತಿಬಾರಿ ಹೊಸ ದಾರಿ ಹುಡುಕಬೇಕಾಗುತ್ತದೆ," ಎಂದೂ ಅವರು ವಿವರಿಸಿದ್ದಾರೆ.

ಹೇಗೆ ಹನಿಟ್ರ್ಯಾಪ್‌?

ಒಂಟಿ ಸಲಗ ಅಥವಾ ಮಕ್ನಾ ದಾಳಿ ಮಾಡಿರುವ ಪ್ರದೇಶದಲ್ಲಿ ಅರಣ್ಯ ಇಲಾಖೆ ಡ್ರೋನ್‌ ಹಾರಿಸಿ ಆನೆ ಇರುವ ಸ್ಥಳವನ್ನು ಗುರುತಿಲಾಗುತ್ತದೆ. ಬಳಿಕ ಇಲಾಖೆಯ ಪಳಗಿದ ಹೆಣ್ಣಾನೆಯನ್ನು (ಕುಮ್ಕಿ ಆನೆ) ಕಳುಹಿಸಲಾಗುತ್ತದೆ. ಆ ಸಲಗ ಹೆಣ್ಣಾನೆಯ ಆಕರ್ಷಣೆಗೆ ಒಳಗಾಗಿ ಅದರ ಜತೆ ಆಪ್ತವಾದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕುಮ್ಕಿ ಗಂಡಾನೆಗಳ ಮೇಲೆ ಸಾಗಿ ಅರವಳಿಕೆ ಮದ್ದನ್ನು ದೂರದಿಂದಲೇ ಶೂಟ್‌ ಮಾಡುತ್ತಾರೆ. ಬಳಿಕ ಹಂತಹಂತವಾಗಿ ಅದು ಅರೆಪ್ರಜ್ಞಾವಸ್ಥೆ ತಲುಪಿದ ಬಳಿಕ ಗಂಡಾನೆಗಳು ಸುತ್ತುವರಿದು ಸೆರೆಹಿಡಿಯಲಾಗುತ್ತದೆ.

ಈ ಬಗ್ಗೆ ರಾಮನಗರ ಪ್ರಾದೇಶಿಕ ವಿಭಾಗದ ಡಿಸಿಎಫ್‌ ಕೆ. ರಾಮಕೃಷ್ಣಪ್ಪ "ದ ಫೆಡರಲ್‌ ಕರ್ನಾಟಕ"ದೊಂದಿಗೆ ಮಾತನಾಡಿ, ಆನೆಗಳು ಅತ್ಯಂತ ಬುದ್ದಿವಂತಿಕೆ ಹೊಂದಿವೆ. ಅವುಗಳ ಗಾತ್ರ, ನಡಿಗೆ, ದಂತ..ಹೀಗೆ ಎಲ್ಲವು ಭಿನ್ನ. ಅದರಲ್ಲೂ ಒಂಟಿಸಲಗ, ಮಕ್ನಾ ಆನೆಗಳನ್ನು ಬಲೆಗೆ ಬೀಳಿಸಿಕೊಳ್ಳಲು ಬಹಳ ಕಷ್ಟವಿದೆ. ಒಂಟಿ ಸಲಗಗಳ ಪುಂಡಾಟವನ್ನು ತಡೆಯಲು ಮತ್ತೊಂದು ಹೆಣ್ಣಾನೆಯನ್ನೇ ಬಳಸಿ, ಪ್ರೇಮ ಬಾಣ ಪ್ರಯೋಗಿಸಬೇಕು," ಎಂದರು.

ಎಲ್ಲೆಲ್ಲಿ ಒಂಟಿ ಸಲಗ, ಮಕ್ನಾಗಳ ಉಪಟಳ?

ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ಮತ್ತು ಯಸಳೂರು ವಲಯಗಳಲ್ಲಿ ಮಕ್ನಾ ಹಾಗೂ ಒಂಟಿ ಸಲಗಗಳ ಹಾವಳಿ ಅತಿ ಹೆಚ್ಚಾಗಿದೆ. ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಕಾಫಿ ತೋಟಗಳಿಗೆ ನುಗ್ಗಿ ರೈತರ ಮೇಲೆ ದಾಳಿ ಮಾಡುತ್ತಿರುವ ಆನೆಗಳಲ್ಲಿ ಮಕ್ನಾ ಆನೆಗಳೇ ಹೆಚ್ಚಿವೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಒಂಟಿ ಸಲಗ ಮತ್ತು ಮಕ್ನಾ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮತ್ತು ಬಿಆರ್‌ಟಿ (ಮಲೆ ಮಹದೇಶ್ವರ ಬೆಟ್ಟ) ಅರಣ್ಯ ವ್ಯಾಪ್ತಿಯಲ್ಲಿ ಮಕ್ನಾ ಆನೆಗಳು ಸಹಜವಾಗಿ ಕಂಡುಬರುತ್ತವೆ. ಈ ಭಾಗದ ಕಾಡಿನ ಅಂಚಿನ ಗ್ರಾಮಗಳಾದ ಗುಂಡ್ಲುಪೇಟೆ ಮತ್ತು ಹನೂರು ಭಾಗದಲ್ಲಿ ಇವು ಆಗಾಗ್ಗೆ ನಾಡಿಗೆ ಬರುತ್ತವೆ. ಕೊಡಗಿನ ಪೊನ್ನಂಪೇಟೆ, ವಿರಾಜಪೇಟೆ ಮತ್ತು ಕುಶಾಲನಗರ ಭಾಗದ ಎಸ್ಟೇಟ್‌ಗಳಲ್ಲಿ ಮಕ್ನಾ ಆನೆಗಳು ಬೀಡುಬಿಟ್ಟಿವೆ. ಮೈಸೂರು ಜಿಲ್ಲೆಯ ನಾಗರಹೊಳೆ ಅಭಯಾರಣ್ಯ ಮತ್ತು ಎಚ್.ಡಿ. ಕೋಟೆ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಿದೆ. ಇಲ್ಲಿನ ಕಬಿನಿ ಹಿನ್ನೀರಿನ ಭಾಗದಲ್ಲಿ ಮಕ್ನಾ ಆನೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಬನ್ನೇರುಘಟ್ಟ ಮತ್ತು ಕನಕಪುರ ಅರಣ್ಯ ವಲಯದಲ್ಲಿ ಮಾತ್ರವೇ ಮಕ್ನಾ ಆನೆಗಳು ಕಾಣಿಸುತ್ತಿಲ್ಲ. ಇಲ್ಲಿ ಒಂಟಿಸಲಗಗಳು ಹೆಚ್ಚಾಗಿವೆ. ಮಕ್ನಾ ಕಾಣಿಸಿಕೊಳ್ಳುವ ಎಲ್ಲ ಭಾಗಗಳಲ್ಲಿ ಸಹಜವಾಗಿ ಒಂಟಿ ಸಲಗ ಇದ್ದೆ ಇರುತ್ತವೆ.ಕಳೆದ ವರ್ಷ ಕೇರಳದಿಂದ ಕರ್ನಾಟಕದ ಗುಂಡ್ಲುಪೇಟೆ ಮತ್ತು ನಂತರ ಹಾಸನಕ್ಕೆ ಬಂದಿದ್ದ 'ಬೆಳೂರು ಮಕ್ನಾ' ಎಂಬ ಆನೆಯ ಸೆರೆಗೆ ಇನ್ನೂ ಅರಣ್ಯ ಇಲಾಖೆ ತ್ರಾಸಪಡುತ್ತಿದೆ.

ಚನ್ನಪಟ್ಟಣ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ಮಕ್ನಾ ಆನೆಯನ್ನು ಕಳೆದ ವರ್ಷ ಸೆರೆಹಿಡಿದು, ಮಲೆಮಹದೇಶ್ವರ ಬೆಟ್ಟದ ಅರಣ್ಯಕ್ಕೆ ಸ್ಥಳಾಂತರಿಸಿದರೂ, ತಿಂಗಳೊಳಗೆ ಈ ಮಕ್ನಾ ಆನೆ ಮತ್ತೆ ಚನ್ನಪಟ್ಟಣದ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇದೀಗ ಮತ್ತೊಮ್ಮೆ ಬೆಂಗಳೂರು ದಕ್ಷಿಣ (ರಾಮನಗರ) ಚನ್ನಪಟ್ಟಣದ ತೆಂಗಿನಕಲ್ಲು ಅರಣ್ಯಪ್ರದೇಶದಲ್ಲಿ ಮಕ್ನಾ ಆನೆಯೊಂದನ್ನು ಸೋಮವಾರ (ಮಾ. 2) ಸೆರೆ ಹಿಡಿಯಲಾಗಿದೆ.

ಈ ಆನೆಗಳಲ್ಲಿ ಒಟ್ಟು ಮೂರು ವಿಧಗಳಿವೆ. ಗಂಡಾನೆ, ಹೆಣ್ಣಾನೆ ಹಾಗೂ ಮಕ್ನಾ ಆನೆಗಳು. ಇವುಗಳಲ್ಲಿ ಗಂಡು ಆನೆಗಳ ಪ್ರಮಾಣ ಸುಮಾರು ಶೇ. 15 ರಿಂದ 20ರಷ್ಟು ಇದ್ದರೆ, ಏಷ್ಯನ್ ಗಂಡು ಆನೆಗಳಲ್ಲಿ ಸುಮಾರು ಶೇ. 2 ರಿಂದ ೫ ರಷ್ಟು ಆನೆಗಳು ಮಕ್ನಾ ಆಗಿರುವ ಸಾಧ್ಯತೆಗಳಿವೆ. ಉಳಿದಂತೆ ಶೇ.75 ರಿಂದ ಶೇ.78 ರಷ್ಟು ಹೆಣ್ಣಾನೆಗಳಿವೆ.

ಚನ್ನಪಟ್ಟಣ ಅರಣ್ಯ ಪ್ರದೇಶದಲ್ಲಿ ಸೆರೆಯಾದ ಮಕ್ನಾ

ಅರಣ್ಯ ಇಲಾಖೆಗೆ ಅವಸರ?

ಇತ್ತಿಚೆಗೆ ನಾಡಿನೊಳಗೆ ಹೆಚ್ಚಾಗುತ್ತಿರುವ ಆನೆಗಳ ಉಪಟಳಗಳನ್ನು ಕಡಿತಗೊಳ್ಳಿಸುವ ನಿಟ್ಟಿನಲ್ಲಿ"ಆನೆ ಸೆರೆ" ಕಾರ್ಯಚರಣೆ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ. ಆದರೆ, ಈ ವೇಳೆ ಅತೀ ಹೆಚ್ಚು ಉಪಟಳ ನೀಡುತ್ತಿರುವ ಟಸ್ಕರ್‌ ಹಾಗೂ ಮಕ್ನಾ ಆನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ. ಆದರೆ, ಈ ಎರಡು ಜಾತಿಯ ಆನೆಗಳನ್ನು ಸೆರೆ ಹಿಡಿಯುವುದು ಅಷ್ಟು ಸುಲಭದ ಕೆಲಸವಲ್ಲ. ಆನೆ ಸೆರೆ ಕಾರ್ಯಚರಣೆಗೆ ಆನೆ ಶಿಬಿರಗಳಲ್ಲಿ ತರಬೇತಿ ಹೊಂದಿರುವ ಸಾಕಾನೆಗಳ ಸಹಕಾರ ಬೇಕು. ಜತಗೆ ಅರವಳಿಕೆ ತಜ್ಞರು, ಡ್ರೋನ್‌ ಸಹಾಯ, ಅರಣ್ಯ ಇಲಾಖೆ ಸಿಬ್ಬಂದಿ, ಅವರಿಗೆಲ್ಲ ಬಿಡಾರ, ಊಟ, ತಿಂಡಿ ವ್ಯವಸ್ಥೆಗಳು ಅರಣ್ಯ ಇಲಾಖೆ ಹೊರೆಯನ್ನು ಹೆಚ್ಚಿಸಿದೆ.

ಹೀಗಾಗಿ ಆದಷ್ಟು ಶೀಘ್ರದಲ್ಲಿ ಆನೆ ಸರೆ ಕಾರ್ಯಚರಣೆ ನಡೆಸುವ ಧಾವಂತ ಅರಣ್ಯ ಇಲಾಖೆಗಿದೆ. ಆದರೆ, ಟಸ್ಕರ್‌ , ಮಕ್ನಾ ಆನೆಗಳಷ್ಟು ಬಲಾಢ್ಯರನ್ನು ಸಾಕಾನೆಗಳು ಸೆರೆಹಿಡಿಯುವುದು ಒಂದು ದಿನದಲ್ಲಿ ಆಗುವ ಕೆಲಸವಲ್ಲ. ಕನಿಷ್ಟ 15 ದಿನವಾದರೂ ಕಾಲವಕಾಶ ಬೇಕು. ಕೆಲ ಕಾರ್ಯಚರಣೆಗಳು ತಿಂಗಳು ದಾಟಿರುವ ಉದಾಹರಣೆಗಳಿವೆ.

ಒಂಟಿ ಸಲಗ (ಟಸ್ಕರ್‌)

ಆನೆಗಳ ಸಮೂಹದಲ್ಲಿ ಒಂಟಿ ಸಲಗಳ ಸ್ವಾಭಾವವೆ ವಿಭಿನ್ನ. ಮಕ್ನಾ ಆನೆಗಳನ್ನು ಬಿಟ್ಟರೆ, ಅತೀ ಹೆಚ್ಚಿನ ಬಲ ಹೊಂದಿರುವ ಈ ಟಸ್ಕರ್‌ಗಳನ್ನು ಮಣ್ಣುಮುಕ್ಕಿಸಲು ಕನಿಷ್ಟ ಆರರಿಂದ ಏಳು ಸಾಕಾನೆಗಳು ಹರಸಾಹಸ ಪಡಬೇಕು. 15 ವರ್ಷದೊಳಗಿನ ಗಂಡಾನೆಯೇ ಬೇರೆ. ಇದೇ ಗಂಡಾನೆ 15 ವರ್ಷ ತುಂಬಿದ ಬಳಿಕ ಒಂಟಿ ಸಲಗ (ಟಸ್ಕರ್) ವಾಗಿ ಬದಲಾಗುತ್ತದೆ.

ಗಂಡು ಆನೆಗಳು ಸುಮಾರು 12 ರಿಂದ 15 ವರ್ಷ ವಯಸ್ಸಾದ ಮೇಲೆ ತಮ್ಮ ತಾಯಿ ಇರುವ ಹಿಂಡಿನಿಂದ ಹೊರಬಂದು ಒಂಟಿಯಾಗಿ ಅಥವಾ ಸಣ್ಣ 'ಬ್ಯಾಚುಲರ್' ಗುಂಪುಗಳಲ್ಲಿ ಇರುತ್ತವೆ. ಹೀಗೆ ಒಂಟಿಯಾಗಿ ತಿರುಗುವ ಆನೆಗಳನ್ನೇ 'ಒಂಟಿಸಲಗ' ಎನ್ನಲಾಗುತ್ತದೆ. ಈ ಒಂಟಿಸಲಗಗಳಲ್ಲಿ 'ದಂತವಿರುವ ಗಂಡು ಆನೆಗಳು' ನೋಡಲು ಅತ್ಯಂತ ಗಂಭೀರ. ಅವುಗಳ ಹೆಜ್ಜೆಗೆ ಸಿಲುಕಿದವರು ಬದುಕುಳಿದ ಇತಿಹಾಸವೇ ಇಲ್ಲ. ಅತೀ ಉದ್ದವಾದ ದಂತಗಳನ್ನು ಹೊಂದಿರುವ ಗಂಡಾನೆಯನ್ನು 'ಗಜರಾಜ' ಅಥವಾ ಸೂಪರ್‌ ಟಸ್ಕರ್ (Super Tusker ) ಎಂದು ಕರೆಯಲಾಗುತ್ತದೆ.

ಒಂಟಿ ಸಲಗಗಳ ಹಾರ್ಮೋನ್ ಮಟ್ಟ (ಟೆಸ್ಟೋಸ್ಟಿರಾನ್) ವಿಪರೀತವಾಗಿ ಹೆಚ್ಚಾಗುವ ಸಮಯ‌ದಲ್ಲಿ ಆಕ್ರಮಣಶೀಲವಾಗಿದ್ದು ಮದಗಜಗಳೆಂದು ಕರೆಯಲಾಗುತ್ತದೆ. ಆನೆಯ ಕಿವಿಯ ಪಕ್ಕದಲ್ಲಿರುವ ಗ್ರಂಥಿಗಳಿಂದ (Temporal glands) ಒಂದು ರೀತಿಯ ದ್ರವ ಸ್ರವಿಸುತ್ತದೆ. ಈ ಸಮಯದಲ್ಲಿ ಅವು ಹೆಣ್ಣಾನೆಗಳ ಸಾಮೀಪ್ಯಕ್ಕಾಗಿ ಹಂಬಲಿಸುತ್ತವೆ. ಈ ಹಂತದಲ್ಲಿ ಅವು ಅತೀ ಹೆಚ್ಚು ಆಕ್ರಮಣಕಾರಿಯಾಗಿರುತ್ತವೆ ಮತ್ತು ತಮ್ಮ ದಾರಿಗೆ ಅಡ್ಡ ಬರುವ ಯಾವುದೇ ಅಡೆತಡೆಗಳನ್ನು (ಮರಗಳು, ವಾಹನಗಳು ಅಥವಾ ಇತರ ಆನೆಗಳು) ನಾಶಪಡಿಸಲು ಹಿಂಜರಿಯುವುದಿಲ್ಲ.

ಇಂತಹ ಆನೆಗಳನ್ನು ಸೆರೆಹಿಡಿಯುವುದು ಅರಣ್ಯ ಇಲಾಖೆ ಸಾಕಿದ ಹೆಣ್ಣಾನೆಗಳ ಹನಿ ಟ್ರ್ಯಾಪ್‌ನಿಂದಲೇ ಸಾಧ್ಯ ಎನ್ನುತ್ತಾರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಬಹಳ ದಿನಗಳಿಂದ ಹಸಿವು ಅಥವಾ ದಾಹದಿಂದ ಬಳಲುತ್ತಿರುವಾಗ, ದೂರದಿಂದಲೇ ನೀರಿನ ವಾಸನೆ ಅಥವಾ ತಾಜಾ ಕಬ್ಬಿನ ಗದ್ದೆಗಳ ವಾಸನೆ ಬಂದಾಗ ಆನೆಗಳು ತಮ್ಮ ಹತೋಟಿ ಕಳೆದುಕೊಳ್ಳುತ್ತವೆ. ಈ ಸಂದರ್ಭದಲ್ಲಿ ಅವು ಯಾವುದೇ ಅಪಾಯವನ್ನೂ ಲೆಕ್ಕಿಸದೆ ಆ ಕಡೆಗೆ ಧಾವಿಸುತ್ತವೆ. ಮದವೇರಿದ ಗಂಡಾನೆಗಳು ತಮ್ಮ ಶಕ್ತಿಯ ಪ್ರದರ್ಶನ ಮಾಡಲು ದೊಡ್ಡ ಮರಗಳನ್ನು ಬುಡಸಮೇತ ಕಿತ್ತೆಸೆಯುತ್ತವೆ. ಇದನ್ನು ಕಂಡು ಹೆಣ್ಣಾನೆಗಳು ಪ್ರಭಾವಿತಗೊಳ್ಳುತ್ತವೆ ಎಂದು ಸಂಶೋಧನೆಗಳು ಹೇಳುತ್ತವೆ ! ಇಂತಹ ಆನೆಗಳಿಂದಲೇ ರೈತಾಪಿ ವರ್ಗ, ಗ್ರಾಮಸ್ಥರು ಕಷ್ಟ ಅನುಭವಿಸಬೇಕಾಗುತ್ತದೆ.

ಹೀಗಾಗಿ ಒಂಟಿ ಸಲಗವನ್ನು ಸಾಕು ಹೆಣ್ಣಾನೆಗಳೇ ಮೋಹಿಸಿ, ಖೆಡ್ಡಾಗೆ ಕೆಡವಬೇಕು. ಹೀಗಾಗಿ ಇಂತಹ ಒಂಟಿ ಸಲಗಗಳ ಉಪಟಳಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆಯಿಂದಲೂ ಸಾಧ್ಯವಾಗುವುದಿಲ್ಲ. ಇವುಗಳನ್ನು ಸೆರೆ ಹಿಡಿಯಲು ಹೆಣ್ಣಾನೆಗಳ ಪ್ರೀತಿಯ ಬಲೆ ಹನಿಟ್ರ್ಯಾಪ್‌ ನಡೆಸಬೇಕು.

ಇತ್ತೀಚಿನ ವರ್ಷಗಳಲ್ಲಿ ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೆಲವು ನಿರ್ದಿಷ್ಟ ಒಂಟಿಸಲಗಗಳು ತಮ್ಮ ಗಾತ್ರ ಅಥವಾ ಅಕ್ರಮಣಕಾರಿ ಸ್ವಭಾವದಿಂದಾಗಿ ಸುದ್ದಿಯಲ್ಲಿವೆ. ಅರಣ್ಯ ಇಲಾಖೆಯು ಇಂತಹ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಪ್ರತ್ಯೇಕವಾಗಿ ಗಮನ ಹರಿಸುತ್ತದೆ.

ಬಲ ಹಾಗೂ ಬುದ್ಧಿವಂತಿಕೆಯ ಮಕ್ನಾ

ಒಂಟಿ ಸಲಗದ ಮಾದರಿಯಲ್ಲಿಯೇ ಇರುವ ಮಕ್ನಾ ಆನೆ (Makna Elephant - ಆನೆ)ಯಷ್ಟು ಬಲಶಾಲಿ ಇನ್ಯಾವುದೇ ಪ್ರಾಣಿಗಳಿಲ್ಲ. ಇವುಗಳಷ್ಟು ಬುದ್ಧಿವಂತಿಕೆಯೂ ಇತರೆ ಆನೆಗಳಿಗಿಲ್ಲ. ದಂತಗಳಿಲ್ಲದ ಗಂಡು ಆನೆಯಾಗಿರುವ ಮಕ್ನಾ ಆನೆಗಳು ನೋಡಲು ಹೆಣ್ಣು ಆನೆಗಳಂತೆಯೇ ಕಾಣುತ್ತವೆ (ಏಕೆಂದರೆ ಹೆಣ್ಣು ಆನೆಗಳಿಗೂ ದಂತ ಇರುವುದಿಲ್ಲ). ಆದರೆ ಇವುಗಳ ದೇಹದ ಗಾತ್ರ ಮತ್ತು ಶಕ್ತಿ ದಂತವಿರುವ ಗಂಡು ಆನೆಗಳಿಗಿಂತ ದುಪ್ಪಟ್ಟಿರುತ್ತವೆ. ದಕ್ಷಿಣ ಭಾರತದಲ್ಲಿ ಮಾತ್ರವೇ ಈ ಆನೆಗಳು ಹೆಚ್ಚಾಗಿ ಕಾಣಿಸುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

ದಂತಗಳಿಲ್ಲದ ಕಾರಣ ಇವುಗಳ ಸೊಂಡಿಲು ಮತ್ತು ಕುತ್ತಿಗೆಯ ಭಾಗ ಬಹಳ ಬಲವಾಗಿರುತ್ತದೆ. ಕಾಡಿನ ಸಂಘರ್ಷಗಳಲ್ಲಿ ಇವು ದಂತವಿರುವ ಆನೆಗಳಿಗಿಂತಲೂ ಹೆಚ್ಚು ಆಕ್ರಮಣಕಾರಿಯಾಗಿರುತ್ತವೆ . ಇದು ಒಂದು ವಂಶವಾಹಿ ಬದಲಾವಣೆಯಾಗಿದ್ದು, ತಂದೆ ಅಥವಾ ತಾಯಿ ಆನೆಯಿಂದ ಈ ಲಕ್ಷಣ ಮುಂದಿನ ಪೀಳಿಗೆಗೆ ಹರಡಬಹುದು.

ಮಕ್ನಾ ಆನೆಗಳು ಹಿಂಡಿನ ನಾಯಕತ್ವವನ್ನೂ ವಹಿಸುತ್ತವೆ. ದಂತವಿಲ್ಲದಿದ್ದರೂ ತಮ್ಮ ಗಂಭೀರತೆ ಮತ್ತು ಬುದ್ಧಿವಂತಿಕೆಯಿಂದ ಇಡೀ ಹಿಂಡನ್ನು ಅಪಾಯದಿಂದ ಪಾರು ಮಾಡುವ ಸಾಮರ್ಥ್ಯ ಇವುಗಳಿಗಿರುತ್ತದೆ. ನೋಡಲು ದಂತವಿಲ್ಲದ ಕಾರಣ ಸೌಮ್ಯವಾಗಿ ಕಂಡರೂ, ಅವುಗಳ ಗುಣಲಕ್ಷಣಗಳು ಮತ್ತು ಸಾಮರ್ಥ್ಯಗಳು ದಂತವಿರುವ ಆನೆಗಳಿಗಿಂತ ವಿಭಿನ್ನ. ದಂತದ ಮಾದರಿಯಲ್ಲಿಯೇ ಮಕ್ನಾ ಆನೆಗಳ ಬಾಯಿಯ ಒಳಗೆ ಸಣ್ಣದಾದ 'ಟಶಸ್' (Tushes) ಎಂಬ ಹಲ್ಲುಗಳಿವೆ. ಇತರೆ ಆನೆಗಳಿಗಿಂತ ಹೆಚ್ಚು ಎತ್ತರ ಮತ್ತು ಬಲವಾದ ದೇಹವನ್ನು ಹೊಂದಿರುವ ಇವುಗಳ ತಲೆ ಮತ್ತು ಸೊಂಡಿಲಿನ ಭಾಗ ಬಹಳ ವಿಸ್ತಾರವಾಗಿರುತ್ತದೆ.

ದಂತಗಳಿಲ್ಲದ ಕೊರತೆಯನ್ನು ನೀಗಿಸಲು ಪ್ರಕೃತಿಯು ಇವುಗಳಿಗೆ ಅತ್ಯಂತ ಬಲವಾದ ಸೊಂಡಿಲನ್ನು ನೀಡಿರುತ್ತದೆ. ಇವು ದಂತವಿರುವ ಆನೆಗಳಿಗಿಂತ ವೇಗವಾಗಿ ಮತ್ತು ಬಲವಾಗಿ ಸೊಂಡಿಲನ್ನು ಬಳಸಬಲ್ಲವು. ಮಕ್ನಾ ಆನೆಗಳು ದಂತವಿರುವ ಆನೆಗಳಿಗಿಂತ ಹೆಚ್ಚು ಆಕ್ರಮಣಕಾರಿ. ಕಾಡಿನಲ್ಲಿ ಬೇರೆ ಗಂಡಾನೆಗಳ ಜೊತೆಗಿನ ಕಾಳಗದಲ್ಲಿ ಇವು ದಂತವಿಲ್ಲದಿದ್ದರೂ ತಮ್ಮ ಭಾರಿ ದೇಹದ ತೂಕ ಮತ್ತು ಸೊಂಡಿಲಿನ ಹೊಡೆತದಿಂದ ಎದುರಾಳಿಯನ್ನು‌ ಸೋಲಿಸುತ್ತವೆ. ಎದುರಾಳಿ ಆನೆಯ ದಂತಗಳನ್ನು ತನ್ನ ಸೊಂಡಿಲಿನಿಂದಲೇ ಹಿಡಿದು ತಿರುಗಿಸುವ ಅಥವಾ ಜಗ್ಗುವ ತಾಕತ್ತು ಇವುಗಳಿಗಿರುತ್ತದೆ. ಇವುಗಳು ತಮ್ಮ ಹಣೆಯಿಂದ (Forehead) ಎದುರಾಳಿಯನ್ನು ಜೋರಾಗಿ ಗುದ್ದುತ್ತವೆ. ಇವುಗಳ ತಲೆ ಬುರುಡೆ ತುಂಬಾ ಗಟ್ಟಿಯಾಗಿರುತ್ತದೆ. ದಂತವಿರುವ ಆನೆಗಳು ದಂತದಿಂದ ಚುಚ್ಚಲು ಪ್ರಯತ್ನಿಸಿದರೆ, ಮಕ್ನಾ ಆನೆಗಳು ತಮ್ಮ ಭಾರಿ ವೇಗ ಮತ್ತು ತೂಕದಿಂದ ಎದುರಾಳಿಯನ್ನು ಕೆಡವುತ್ತವೆ.

ಇವು ಬಹಳ ಚತುರ ಆನೆಗಳು. ಇವು ಮರಗಳನ್ನು ಉರುಳಿಸಲು ಅಥವಾ ಆಹಾರ ಹುಡುಕಲು ತಮ್ಮ ಇಡೀ ದೇಹದ ಬಲ ಮತ್ತು ಕಾಲುಗಳನ್ನು ವಿಭಿನ್ನವಾಗಿ ಬಳಸುವುದನ್ನು ಕಲಿತಿರುತ್ತವೆ. ದಂತವಿರುವ ಆನೆಗಳನ್ನು ಎದುರಿಸುವಾಗ ಇವುಗಳಿಗೆ ಯಾವುದೇ ಭಯವಿರುವುದಿಲ್ಲ. ಬದಲಾಗಿ, ಇವುಗಳ ಗುದ್ದಾಟದ ಶಕ್ತಿಹೆಚ್ಚಿರುತ್ತದೆ. ಹಾಗಾಗಿ ಮಕ್ನಾ ಆನೆಗಳು ಕಾಡಿನಿಂದ ನಾಡಿಗೆ ನುಗ್ಗಿದರೆ ಇನ್ನೂ ತೊಂದರೆ ಹೆಚ್ಚು ಎನ್ನಲಾಗಿದೆ.

ಆನೆಗಳು ಮಾನಸಿಕವಾಗಿ ಹೆಚ್ಚು ಧೈರ್ಯಶಾಲಿಗಳು. ಇವುಗಳು ತಮ್ಮ ಮಿತಿ ಅರಿತುಕೊಂಡು ಬದುಕುವ ರೀತಿ ಅದ್ಭುತ. ದಂತವಿಲ್ಲದ ಕಾರಣ ಇವು ಆಹಾರಕ್ಕಾಗಿ ಹೊಸ ದಾರಿಗಳನ್ನು ಕಂಡುಕೊಳ್ಳುತ್ತವೆ. ಜನವಸತಿ ಪ್ರದೇಶಕ್ಕೆ ನುಗ್ಗಿದಾಗ ಇವುಗಳನ್ನು ಸೆರೆಹಿಡಿಯುವುದು ಕೂಡ ಕಷ್ಟ, ಏಕೆಂದರೆ ಇವು ಬೇಗನೆ ಕಣ್ಣಿಗೆ ಬೀಳದಂತೆ ಅಡಗಿಕೊಳ್ಳುವ ಕಲೆ ಅರಿತಿರುತ್ತವೆ.

ಮಕ್ನಾ ಆನೆಗಳು ಮದವೇರಿದಾಗ (Musth) ಅತ್ಯಂತ ಅಪಾಯಕಾರಿಯಾಗುತ್ತವೆ. ದಂತವಿಲ್ಲದ ಕಾರಣ ಅವುಗಳನ್ನು ನಿಯಂತ್ರಿಸುವುದು ಅರಣ್ಯ ಇಲಾಖೆಯ ಸಿಬ್ಬಂದಿಗೂ ದೊಡ್ಡ ಸವಾಲಾಗಿರುತ್ತದೆ. ಇವುಗಳನ್ನು ಸೆರೆ ಹಿಡಿದು, ಇತರೆ ಅರಣ್ಯಕ್ಕೆ ಸ್ಥಳಾಂತರಿಸಿದರೂ, ಮತ್ತೆ ತಮ್ಮ ಮೂಲ ಸ್ಥಾನಕ್ಕೆ ವಾಪಸ್ಸಾಗುವಷ್ಟೆ ಬುದ್ದಿವಂತಿಕೆ ಇವುಗಳಿವೆ. ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ 2022 ರಲ್ಲಿ ಮಕ್ನಾ ಆನೆಯನ್ನು ಸೆರೆಹಿಡಿದು, ಮಲೆಮಹದೇಶ್ವರ ಬೆಟ್ಟಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಲಾರಿಯಲ್ಲಿ ಕರೆದುಕೊಂಡು ಹೋಗಿದ್ದ, ಆದೇ ದಾರಿಯಲ್ಲಿ 200 ಕಿ.ಮೀ ದೂರ ನಡೆದು, ವಾರದೊಳಗೆ ಈ ಆನೆ ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ವಾಪಸ್ಸಾಗಿತ್ತು. ಹೀಗಾಗಿ, ಇಂತಹ ಬುದ್ದಿವಂತ ಆನೆಗಳನ್ನು ಸೆರೆ ಹಿಡಿಯುವುದು ಅರಣ್ಯ ಇಲಾಖೆಗೆ ಸುಲಭದ ಮಾತಲ್ಲ.

ಈ ಬಗ್ಗೆ ವನ್ಯಜೀವಿ ವೈದ್ಯ ಡಾ.ಸುರೇಂದ್ರ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, "ಆನೆಗಳು ಅತೀ ಬುದ್ದಿವಂತಿಕೆ ಹೊಂದಿರುತ್ತವೆ. ಅದರಲ್ಲೂ ಮಕ್ನಾ ಆನೆ, ಇತರೆ ಆನೆಗಳಿಗಿಂತ ಒಂದು ಕೈ ಹೆಚ್ಚಿನ ಬುದ್ದಿ ಹೊಂದಿರುತ್ತವೆ. ಜೊತೆಗೆ ಅತೀ ಹೆಚ್ಚಿನ ಬಲ ಹೊಂದಿರುವ ಈ ಮಕ್ನಾ ಆನೆಗಳನ್ನು ಅಷ್ಟು ಸುಲಭಕ್ಕೆ ಸೆರೆ ಹಿಡಿಯಲು ಸಾಧ್ಯವಿಲ್ಲ. ಅವುಗಳಿಗೆ ಕೋಪ ಬಂದರೆ, ಅನಾಹುತಗಳು ಹೆಚ್ಚಾಗುತ್ತವೆ. ಪಟಾಕಿ ಸಿಡಿಸಿ, ಅವುಗಳಿಗೆ ಇನ್ನಷ್ಟು ಕಿರಿಕಿರಿ ಮಾಡಿದರೆ, ಅವುಗಳನ್ನು ನಿಯಂತ್ರಿಸುವುದು ಕಷ್ಟ. ನಾವು ಚಾಪೆ ಕೆಳಗೆ ತೂರಿದರೆ, ಅವುಗಳು ರಂಗೋಲಿ ಕೆಳಗೆ ತೂರುತ್ತವೆ" ಎಂದರು.

ವಿದ್ಯುತ್‌ ಬೇಲಿಗಳನ್ನೂ ದಾಟುವ ಮಕ್ನಾ!

ಇವು ಅರಣ್ಯ ಇಲಾಖೆ ಅಥವಾ ರೈತರು ನಿರ್ಮಿಸುವ ವಿದ್ಯುತ್ ಬೇಲಿಗಳನ್ನು (Solar Fencing) ದಾಟಲು ಒಣ ಮರದ ಕೊಂಬೆಗಳನ್ನು ಬೇಲಿಯ ಮೇಲೆ ಹಾಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಷ್ಟು ಬುದ್ಧಿವಂತಿಕೆ ಹೊಂದಿವೆ. ಇಲ್ಲವೆ ಮರದ ತುಂಡುಗಳಿಂದ ಬೇಲಿಯನ್ನು ತಳ್ಳಿ ಹಳ್ಳಿಗೆ ನುಗ್ಗಲು ಯತ್ನಿಸುತ್ತವೆ. ಈ ಹಿಂದೆ ಸಂಕಲೇಶಪುರ ಭಾಗದಲ್ಲಿ ಸೋಲಾರ್‌ ವಿದ್ಯುತ್ ತಂತಿಯನ್ನು ದಾಟಲು, ಇಡೀ ಮರವನ್ನೆ ಕಿತ್ತು, ಬೇಲಿಗೆ ಅಡ್ಡಲಾಗಿ ಹಾಕಿ, ಸುಲಭವಾಗಿ ತೋಟಕ್ಕೆ ನುಗಿದ್ದವು. ಆನೆಗಳನ್ನು ತಡೆಯಲು ಅರಣ್ಯ ಇಲಾಖೆ ತೋಡಿರುವ ಕಂದಕ (ಖೆಡ್ಡಾ)ಕ್ಕೆ ಮಣ್ಣು ಹಾಕಿ ಮುಚ್ಚಿ ಅಥವಾ ಪಕ್ಕದ ಮಣ್ಣನ್ನು ಕುಸಿಯುವಂತೆ ಮಾಡಿ ದಾರಿ ಮಾಡಿಕೊಳ್ಳುತ್ತವೆ.

ದಶಕಗಳ ಹಿಂದೆ ತಾವು ಹೋಗಿದ್ದ ನೀರಿನ ಮೂಲಗಳು ಅಥವಾ ಆಹಾರದ ತಾಣಗಳನ್ನು ಇವು ನೆನಪಿಟ್ಟುಕೊಂಡಿರುತ್ತವೆ. ಒಮ್ಮೆ ಅರಣ್ಯ ಇಲಾಖೆಯವರು ತಮ್ಮನ್ನು ಓಡಿಸಿದ ರೀತಿ ಅಥವಾ ಬಳಸಿದ ತಂತ್ರಗಳನ್ನು ಇವು ನೆನಪಿಟ್ಟುಕೊಂಡು ಮುಂದಿನ ಬಾರಿ ಅದಕ್ಕೆ ತಕ್ಕಂತೆ ಎಚ್ಚರ ವಹಿಸುತ್ತವೆ. ಹಾಸನ ಭಾಗದಲ್ಲಿ ಸೆರೆಹಿಡಿಯಲಾದ ಕೆಲವು ಮಕ್ನಾ ಆನೆಗಳು, ತಾವು ಹಾಕಿಕೊಂಡಿದ್ದ 'ರೇಡಿಯೋ ಕಾಲರ್' (Radio Collar) ಅನ್ನು ಮರಕ್ಕೆ ಉಜ್ಜುವ ಮೂಲಕ ಅಥವಾ ಕೆಸರಿನಲ್ಲಿ ಹೊರಳಾಡುವ ಮೂಲಕ ಹಾಳು ಮಾಡಲು ಪ್ರಯತ್ನಿಸಿದ್ದವು ! ಇದು ಅವುಗಳ ಉನ್ನತ ಮಟ್ಟದ ಬುದ್ಧಿವಂತಿಕೆಗೆ ಸಾಕ್ಷಿ ಎನ್ನಬಹುದು.

Read More
Next Story