
ಕನ್ನಡಿಗರಿಗೆ ವಿದೇಶದಲ್ಲಿ ನೆರವಾದ ದುಬೈ ಕನ್ನಡಿಗರ ತಂಡ.
ಯುದ್ದದ ನಡುವೆಯೂ ತಮ್ಮವರ ರಕ್ಷಣೆಗೆ ನಿಂತು ತಾಯ್ನಾಡ ಸೇವೆ ಮಾಡಿದ ದುಬೈ ಕನ್ನಡಿಗರು
ವಿದೇಶದಲ್ಲಿ ಕನ್ನಡಿಗರು ಸಂಕಷ್ಟದಲ್ಲಿದ್ದಾಗ ಪ್ರತಿ ದಿನ ಮೂರು ಹೊತ್ತು ಊಟ, ಟಿಫಿನ್ ತಲುಪಿಸುವ ಕಾರ್ಯವನ್ನು ಮುಸ್ತಫಾ ಎನ್ನುವ ಪಾಕಿಸ್ತಾನಿ ಪ್ರಜೆ ಮಾಡಿರುವುದು ವಿಶೇಷ.
ಇಸ್ರೇಲ್ ಅಮೇರಿಕಾ ದೇಶಗಳು ಇರಾನ್ ಮೇಲೆ ದಾಳಿ ಮಾಡಿದ ಪರಿಣಾಮ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಇಡೀ ವಿಶ್ವವೇ ಒಂದಿಲ್ಲ ಒಂದು ರೀತಿ ಅದರ ಪರಿಣಾಮ ಎದುರಿಸುತ್ತಿದೆ.
ಏಕಾಏಕಿ ಯುದ್ದ ಆರಂಭವಾದ ಕೂಡಲೇ ದುಬೈ, ಅಬುಧಾಭಿ ಬಹರೇನ್ ಸೇರಿದಂತೆ ಅರಬ್ ರಾಷ್ಟ್ರಗಳಿಗೆ ಪ್ರವಾಸಕ್ಕೆ ತೆರಳಿದ್ದ ಭಾರತೀಯರು ವಿಶೇಷವಾಗಿ ಕನ್ನಡಿಗರು ಅಕ್ಷರಶಃ ದಿಕ್ಕೇ ತೋಚದಂತಾಗಿದ್ದು ಸುಳ್ಳಲ್ಲ. ಆದರೆ, 'ಕೊಲ್ಲುವವನೊಬ್ಬನಿದ್ದರೆ ಕಾಯೋನು ಒಬ್ಬ ಇದ್ದೇ ಇರುತ್ತಾನೆ' ಎನ್ನುವ ಮಾತಿನಂತೆ ದುಬೈನಲ್ಲಿ ಸಿಲುಕಿಕೊಂಡಿದ್ದ ನೂರಾರು ಕನ್ನಡಿಗರಿಗೆ ಆಪದ್ಭಾಂದವರಾಗಿ ರಕ್ಷಣೆಗೆ ನಿಂತವರು ಕರುನಾಡಿನಿಂದ ಉದ್ಯೋಗಕ್ಕೆ ಹೋಗಿ ನೆಲೆ ಕಂಡುಕೊಂಡಿರುವ ಕನ್ನಡಿಗರು.
ರಾಜ್ಯದ ಬೆಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ದುಬೈ ಪ್ರವಾಸಕ್ಕೆ ತೆರಳಿದ್ದ ಸುಮಾರು 250ಕ್ಕೂ ಹೆಚ್ಚು ಜನರು ಯುದ್ಧ ಆರಂಭವಾಗುತ್ತಿದ್ದಂತೆ ಅಲ್ಲಿರಲಾಗದೇ ಇಲ್ಲಿಗೆ ಬರಲೂ ಆಗದೇ ವಿಮಾನ ನಿಲ್ದಾಣದಲ್ಲಿ ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಾಗ ಅವರಿವರ ಮೂಲಕ ಸಂಕಷ್ಟದಲ್ಲಿ ಸಿಲುಕಿದವರನ್ನು ಸಂಪರ್ಕಿಸಿ ಅವರಿಗೆ ಸೂಕ್ತ ಆಶ್ರಯ ಮತ್ತು ಅಗತ್ಯ ಊಟೋಪಚಾರ ನೀಡಿ ಸುರಕ್ಷಿತವಾಗಿ ತಾಯಿ ನಾಡಿಗೆ ತಲುಪುವಂತೆ ಮಾಡಿದ್ದಾರೆ.
ದುಬೈನಲ್ಲಿ ಆಗಿದ್ದೇನು ?
ಬಳ್ಳಾರಿಯಿಂದ ಸುಮಾರು 50 ಜನರ ತಂಡ ಒಂದು ವಾರದ ಟ್ರಿಪ್ ಗೆ ಶಾರ್ಜಾಗೆ ಹೋಗಿದ್ದರು. ಶಾರ್ಜಾ ಹೊಟೆಲ್‌ನಲ್ಲಿ ಇದ್ದರು. ಫೆ. 28 ಕ್ಕೆ ವಾಪಸ್ ಬರಬೇಕು. ಅಂದು ಸಂಜೆ ಶಾರ್ಜಾ ಏರ್ ಪೋರ್ಟ್‌ಗೆ ತೆರಳಿದ್ದಾರೆ. ಆದರೆ, ಅಂದು ಮಧ್ಯಾಹ್ನವೇ ಯುದ್ಧ ಆರಂಭವಾಗಿದೆ ಎಂದು ಸ್ಥಳೀಯ ಸರ್ಕಾರ ಎಲ್ಲರಿಗೂ ಮೆಸೆಜ್ ಕಳಿಸಿತ್ತು. ಆದರೆ, ಅದರ ಬಗ್ಗೆ ಅರಿವಿಲ್ಲದೇ ಬಳ್ಳಾರಿಯಿಂದ ಬಂದ ತಂಡ ಸಂಜೆ ಏರ್ಪೊಟಿಗೆ ಹೋಗಿದ್ದಾರೆ. ಅದೇ ಸಂದರ್ಭದಲ್ಲಿ ಬಳ್ಳಾರಿ ಶಾಸಕ ನಾ.ರಾ. ಭರತ್ ರೆಡ್ಡಿ ಕೂಡ ದುಬೈನಲ್ಲಿಯೇ ಇದ್ದರು. ಅವರು ಭರತ್ ರೆಡ್ಡಿ ಅವರನ್ನು ಸಂಪರ್ಕಿಸಿದ್ದಾರೆ. ಅವರು ಒಂದು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಾಕುವಂತೆ ಸಲಹೆ ನೀಡಿದ್ದಾರೆ. ಅದು ಮಾಧ್ಯಮಗಳಲ್ಲಿ ಪ್ರಸಾರ ಆಗಿದೆ. ಇನ್ನೊಂದೆಡೆ ಡೋಣ್ ಪ್ರತಾಪ್ ಮತ್ತು ಮಾಧವ ಕಿರಣ್ ಅವರು ಬಿಜಿನೆಸ್ ಟ್ರಿ ಪ್ ಹೋದವರು ಅವರೂ ಅಲ್ಲಿಯೆ ಸಿಲುಕಿಕೊಂಡಿದ್ದರು. ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಬಳ್ಳಾರಿಯ ಜನರು ದುಬೈನಲ್ಲಿ ಸಿಲುಕಿರುವ ಮಾಹಿತಿ ತಿಳಿದು ನಜೀರ್ ಎನ್ನುವವರನ್ನು ಬಳ್ಳಾರಿ ತಂಡದ ಸುರಕ್ಷತೆಗೆ ಕಳುಹಿಸಿದರು. ಬರ್ ದುಬೈನಲ್ಲಿರುವ ಹೊಟೆಲ್ ಎಕ್ಸ್ ಕ್ಯೂಸಿವ್ ಮ್ಯಾಪಲ್ ಅಪಾರ್ಟ್ ಮೆಂಟ್ನಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದಾರೆ.
ಆದರೆ, ಪ್ರವಾಸಕ್ಕೆ ತೆರಳಿದವರ ಬಳಿ ದುಬೈ ಕರೆನ್ಸಿ ಖಾಲಿಯಾಗಿತ್ತು. ಮಾಧವ ಕಿರಣ್ ಅವರು ಹೊಟೆಲ್ 4 ಲಕ್ಷ ರೂ. ಹಣ ಕಟ್ಟಿದ್ದಾರೆ. ಅಷ್ಟೇ ಅಲ್ಲದೇ ಸಂಕಷ್ಟಕ್ಕೆ ಸಿಲುಕಿದ ಭಾರತದ ಯಾವುದೇ. ಮೂಲದವರಾದರೂ ಈ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿದ್ದರಿಂದ ಕೆಲವು ಉತ್ತರ. ಭಾರತದವರೂ ಇಲ್ಲಿ ಆಶ್ರಯ ಪಡೆದಿದ್ದಾರೆ.
ಊಟದ ವ್ಯವಸ್ಥೆ
ಅಂತಂತ್ರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರಿಗೆ ದುಬೈನಲ್ಲಿರುವ ಕನ್ನಡಿಗರ ಹೊಟೆಲ್ ಮಾಲಿಕರು ಊಟ, ಟಿಫಿನ್ ವ್ಯವಸ್ಥೆ ಮಾಡಿದ್ದಾರೆ. ದುಬೈನಲ್ಲಿರುವ ಬೆಂಗಳೂರು ಬಾಡೂಟ, ಬೆಂಗಳೂರು ಟಿಫಿನ್ಸ್, ಬೆಂಗಳೂರು ನಾಟಿ ಮನೆ, ಸ್ವಾದಿಸ್ಟ್ ನಾಲ್ಕು ಹೊಟೆಲ್‌ಗಳಿಂದ ಪ್ರತಿ ದಿನ ಊಟ, ಟಿಫಿನ್, ಮುದ್ದೆ, ಜೋಳದ ರೊಟ್ಟಿ ಎಲ್ಲವನ್ನೂ ಪೂರೈಕೆ ಮಾಡಿದ್ದಾರೆ.
ಐಸಿಯುನಲ್ಲಿ ಚಿಕಿತ್ಸೆ
ಬಳ್ಳಾರಿ ತಂಡದಲ್ಲಿ ಪ್ರವಾಸಕ್ಕೆ ತೆರಳಿದ್ದ ದ್ರಾಕ್ಷಾಯಿಣಿ ಎನ್ನುವವರಿಗೆ ಆರೋಗ್ಯ ಕೈಕೊಟ್ಟು ಬೆಳಿಗ್ಗೆಯಿಂದ ವಾಂತಿ, ಲೂಸ್ ಮೋಷನ್ ಆಗಿದೆ. ಆ ಸಂದರ್ಭದಲ್ಲಿ ಅವರನ್ನು ಕರ್ನಾಟಕ ಬ್ರಿಗೇಡ್ ತಂಡದ ಸದಸ್ಯರಾದ ಚೇತನ ಮತ್ತು ಮಂಜುಳಾ ಹೊಟೆಲ್ ನಿಂದ ಅಂಬ್ಯುಲೆನ್ ಕರೆಯಿಸಿಕೊಂಡು ಅವರನ್ನು ದುಬೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಐಸಿಯು ನಲ್ಲಿ ಅಡ್ಮಿಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಚೇತನ್ ದ್ರಾಕಾಯಿಣಿ ಅವರ ಪತಿ ಶರಣಪ್ಪ ಅವರನ್ನು ಒಂದು ವಾರ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಪ್ರತಿ ದಿನ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಾತ್ರಿ ಮನೆಗೆ ಕರೆದುಕೊಂಡು ಬರುವ ಕೆಲಸ ಮಾಡಿದ್ದಾರೆ. ಏಳು ದಿನ ಹಾಸ್ಪಿಟಲ್‌ನಲ್ಲಿಯೇ ಇದ್ದರು. ಚೇತನ್ ಬೆಳಿಗ್ಗೆ ನೋಡಿಕೊಳ್ಳುತ್ತಿದ್ದರೆ, ಮಧ್ಯಾಹ್ನದ ನಂತರ ಮಂಜುಳಾ ಆಸ್ಪತ್ರೆಯಲ್ಲಿ ನೋಡಿ ಕೊಳ್ಳುತ್ತಿದ್ದರು. ರಾತ್ರಿ ಆಸ್ಪತ್ರೆಯಲ್ಲಿ ಯಾರೂ ಇರಲು ಅವಕಾಶ ಇಲ್ಲದ್ದರಿಂದ ಮಧ್ಯ ರಾತ್ರಿವರೆಗೂ ಆಸ್ಪತ್ರೆಯಲ್ಲಿ ಇದ್ದು ಅವರನ್ನು ಆರೈಕೆ ಮಾಡುವ ಕೆಲಸ ಮಾಡಿದ್ದಾರೆ.
ಏಳು ಲಕ್ಷ ಬಿಲ್
ದ್ರಾಕ್ಷಾಯಿಣಿ ಅವರ ಒಂದು ವಾರದ ಚಿಕಿತ್ಸೆಗೆ ಆಸ್ಪತ್ರೆಯವರು ಏಳು ಲಕ್ಷ ಆಸ್ಪತ್ರೆ ಬಿಲ್ ಮಾಡಿದ್ದರೆನ್ನಲಾಗಿದ್ದು ಅಷ್ಟು ದೊಡ್ಡ ಮೊತ್ತವನ್ನು ಕಟ್ಟುವುದು ಹೇಗೆ ಎಂದು ದ್ರಾಕಾಯಿಣಿ ಹಾಗೂ ಅವರ ಪತಿ ಚಿಂತೆಗೊಳಗಾಗಿದ್ದಾಗ, ಮತ್ತೆ ಕರ್ನಾಟಕ ಬ್ರಿಗೇಡ್ ತಂಡದವರು ಅಲ್ಲಿಯೇ ವಾಸವಾಗಿರುವ ಕನ್ನಡದ ವೈದ್ಯರೊಬ್ಬರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಅವರು ಆಸ್ಪತ್ರೆಗೆ ಶರಣಪ್ಪ ಅವರನ್ನು ಕಳುಹಿಸಿ ಅವರು ತಾವು ಪ್ರವಾಸದ ಮೇಲೆ ಬಂದಿರೋದರಿಂದ ವಾಪಸ್ ಹೋಗುವ ಸಂದರ್ಭದಲ್ಲಿ ಯುದ್ಧ ಪ್ರಾರಂಭವಾಗಿರುವುದರಿಂದ ತಮ್ಮ ಬಳಿ ಬಿಲ್ ನೀಡಲು ಹಣ ಇಲ್ಲ ಎಂದು ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರಿಂದ ಆಸತ್ರೆಯವರು ಯಾವುದೇ ರೀತಿಯ ಹಣ ಪಡೆಯದೇ ಡಿಶ್ಚಾರ್ಜ್ ಮಾಡಿದ್ದಾರೆ ಎಂದು ಕರ್ನಾಟಕ ಬ್ರಿಗೇಡ್ ತಂಡದ ಸದಸ್ಯೆ ಮಂಜುಳಾ ತಿಳಿಸಿದ್ದಾರೆ.
ಕರ್ನಾಟಕ ಬ್ರಿಗೇಡ್ ತಂಡ
ಏಕಾಏಕಿ ಯುದ್ಧ ಆರಂಭವಾಗಿದ್ದರಿಂದ ಉಂಟಾದ ಸಮಸ್ಯೆಗೆ ತಕ್ಷಣ ತಮ್ಮ ಕೈಲಾದ ಸಹಾಯ ಮಾಡಲು ಒಟ್ಟಾಗಿ ಸೇವೆ ಮಾಡಲು ಕೈ ಜೋಡಿಸಿದ ದುಬೈನಲ್ಲಿರುವ ಕನ್ನಡಿಗರಾದ ದೀಪಕ್ ಸೋಮಶೇಖರ್, ಮಾಧವ ಕಿರಣ್, ಅರುಣ್ ಕುಮಾರ್ ಎಂ.ಕೆ. ಭಾರ್ಗವ್ ಶರ್ಮಾ, ಚೇತನ್ ಸುಬ್ರಮಣ್ಯ, ಅಶಿತ್ ಕುಮಾರ್, ಮಂಜುಳಾ ಹಾಗೂ ನಜೀರ್, ಕನ್ನಡಿಗರ ಹೆಲ್‌ಲೈನ್ ತಂಡದ ಡಾ. ರೋನಾಲ್ಡ್ ಕೊಲಾಸೊ ಯುದ್ಧದ ಅಬ್ಬರದ ನಡುವೆಯೇ ಮಾತೃಭೂಮಿ ಮೇಲಿನ ಅಭಿಮಾನದಿಂದ ಹೊರ ದೇಶದಲ್ಲಿದ್ದರೂ, ನಮ್ಮವರು ಸಂಕಷ್ಟದಲ್ಲಿದ್ದಾಗ ಅವರನ್ನು ಸುರಕ್ಷಿತವಾಗಿ ತಾಯಿನಾಡಿಗೆ ಕಳುಹಿಸುವಲ್ಲಿ ಎಲೆ ಮರೆ ಕಾಯಿಯಂತೆ ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೇ ಕೆಲಸ ಮಾಡಿದ್ದಾರೆ. ಈ ತಂಡ ಮುಂದೆಯೂ ಇದೇ ರೀತಿ ವಿಶ್ವದ ಯಾವುದೇ ಭಾಗದಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದಾಗ ಅವರ ರಕ್ಷಣೆಗೆ ತಮ್ಮ ಕೈಯಲ್ಲಿ ಆದ ಸಹಾಯ ಮಾಡಲು ಪಣ ತೊಟ್ಟಿದ್ದಾರೆ.
ಊಟ ತಲುಪಿಸಿದ ಪಾಕಿಸ್ತಾನಿ ಮುಸ್ತಫಾ
ಕನ್ನಡಿಗರು ಸಂಕಷ್ಟದಲ್ಲಿದ್ದಾಗ ಪ್ರತಿ ದಿನ ಮೂರು ಹೊತ್ತು ಊಟ, ಟಿಫಿನ್ ತಲುಪಿಸುವ ಕಾರ್ಯವನ್ನು ಮುಸ್ತಫಾ ಎನ್ನುವ ಪಾಕಿಸ್ತಾನಿ ಪ್ರಜೆ ಮಾಡಿರುವುದು ವಿಶೇಷ. ಹನ್ನೊಂದು ದಿನಗಳ ಕಾಲ ದುಬೈ ಕನ್ನಡಿಗರ ತಂಡದ ಜೊತೆ ನಿಂತು ದಿನದ 24 ಗಂಟೆಯಲ್ಲಿ ಯಾವುದೇ ಸಮಯದಲ್ಲಿ ಊಟವನ್ನು ತಲುಪಿಸುವ ಕಾರ್ಯ ಮಾಡಿದ್ದಾನೆ.
ದುಬೈ ಕನ್ನಡಿಗರ ಕೂಟದ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಯುದ್ದದ ಪರಿಣಾಮ ದುಬೈನಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರ ರಕ್ಷಣೆಗೆ ನಾವೆಲ್ಲ ತಂಡವಾಗಿ ನಮ್ಮ ಕೈಲಾದ ಕೆಲಸ ಮಾಡಿದ್ದೇವೆ. ಮಧವ್ ಕಿರಣ ಅವರ ಉದಾರತೆ ಮತ್ತು ಸರಳತೆ ಪ್ರತಿ ಕನ್ನಡಿಗನಿಗೂ ಹೆಮ್ಮೆ ತರುವಂತಹ ಸರಳ ಮತ್ತು ಪ್ರೇರಣಾದಾಯಕ. ಸಂಕಷ್ಟದ ಸಂದರ್ಭದಲ್ಲಿ ಮೊದಲಿಗರಾಗಿ ನೆರವಿಗೆ ಧಾವಿಸುವ ಡಾ. ರೋನಾಲ್ಡ್ ಕೊಲಾಸೊ ಅವರ ಪಾತ್ರವೂ ಮುಖ್ಯ ಎಂದು ಹೇಳಿದರು.
ಕರ್ನಾಟಕ ಬ್ರಿಗೇಡ್ ತಂಡದ ಮುಖ್ಯಸ್ಥ ಮಧವ್ ಕಿರಣ ಮಾತನಾಡಿ, "ಸಂಕಷ್ಟದಲ್ಲಿರುವ ಕನ್ನಡಿಗರ ಸೇವೆ ಮಾಡಲು ನಾವು ಯಾವಾಗಲೂ ಬದ್ದರಿದ್ದು ಸಂಕಷ್ಟದ ಸಮಯದಲ್ಲಿ ಕೈಜೋಡಿಸಿದ ಕನ್ನಡಿಗರ ಕೂಟ ದುಬೈ ಮತ್ತು ಡಾ. ರೋನಾಲ್ಡ್ ಕೊಲಾಸೊ ನೇತೃತ್ವದ ಕನ್ನಡಿಗರ ಹೆಲ್ಪ್‌ಲೈನ್ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಮುಂದೆಯೂ ಇಂತಹ ಪುಣ್ಯಕಾರ್ಯಗಳಲ್ಲಿ ತೊಡಗಿಕೊಳ್ಳುವುದಾಗಿ ಮತ್ತು 'ಕರ್ನಾಟಕ ಬ್ರಿಗೇಡ್' ಅನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮರ್ಪಣೆಯಿಂದ ಮುನ್ನಡೆಸಲಾಗುವುದು,'' ಎಂದು ಹೇಳಿದರು.
ಕರ್ನಾಟಕ ಬ್ರಿಗೇಡ್ ತಂಡದ ಸದಸ್ಯರು: ಮಧವ್ ಕಿರಣ (ಉದ್ಯಮಿ, ಬ್ರಿಗೇಡ್ ನಾಯಕ), ಅರುಣ್ ಕುಮಾರ್ MK (ಅಧ್ಯಕ್ಷರು, ಕನ್ನಡಿಗರ ಕೂಟ), ದೀಪಕ್ ಸೋಮಶೇಖರ್ (ಗಲ್ಫ್ ಕನ್ನಡ ಮೂವೀಸ್). ಚೇತನ್ ಸುಬ್ರಹ್ಮಣ್ಯ (ಇಂಪ್ರೆಸಿವ್ ರಿಯಲ್ ಎಸ್ಟೇಟ್), ಭಾರ್ಗವ್ ಶರ್ಮಾ (ಬ್ಯಾಂಕ್ ನಿರ್ದೇಶಕ) ಅಶ್ರಿತ್ ಕುಮಾರ್ (ಮಾಲೀಕರು ಬೆಂಗಳೂರು ಟಿಫಾನೀಸ್), ಮಂಜುಳಾ (ಐಟಿ ವೃತ್ತಿಪರರು).

