Hippopotamus Attack| ಡಾ. ಸಮೀಕ್ಷಾ ದುರಂತ: ಬಯಲಾಯ್ತು ಸತ್ಯ! ರಾಜ್ಯ ಮೃಗಾಲಯಗಳಲ್ಲಿ ವೈದ್ಯರಿಗೆ ಎಸ್‌ಒಪಿಯೇ ಇಲ್ಲ!
x

Hippopotamus Attack| ಡಾ. ಸಮೀಕ್ಷಾ ದುರಂತ: ಬಯಲಾಯ್ತು ಸತ್ಯ! ರಾಜ್ಯ ಮೃಗಾಲಯಗಳಲ್ಲಿ ವೈದ್ಯರಿಗೆ ಎಸ್‌ಒಪಿಯೇ ಇಲ್ಲ!

ರಾಜ್ಯದಲ್ಲಿ ಒಟ್ಟು 9 ಅಧಿಕೃತ ಮೃಗಾಲಯಗಳಿದ್ದು, ಮೈಸೂರು ಮೃಗಾಲಯ 134ನೇ ವರ್ಷಕ್ಕೆ ಕಾಲಿಟ್ಟಿದೆ. ಆದರೂ ಪ್ರಾಣಿಗಳನ್ನು ನೋಡಿಕೊಳ್ಳುವ ವೈದ್ಯರಿಗೆ ಸುರಕ್ಷತೆಯೇ ಇಲ್ಲ!


Click the Play button to hear this message in audio format

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ಚಿಕಿತ್ಸೆ ನೀಡುವ ವೇಳೆ ಯುವ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಅವರು ನೀರಾನೆಯ ದಾಳಿಗೆ ಸಿಲುಕಿ ದಾರುಣವಾಗಿ ಮೃತ ಪಟ್ಟಿದ್ದ ಪ್ರಕರಣ ಅರಣ್ಯ ಇಲಾಖೆಯ ತಪ್ಪುಗಳನ್ನು ಎತ್ತಿತೋರಿಸಿವೆ. ಆ ತಪ್ಪುಗಳು ಅಮಾಯಕಿಯ ಪ್ರಾಣಹರಣ ಮಾಡಿರುವುದೂ ಈಗ ಬಯಲಾಗಿದೆ.

ರಾಜ್ಯದಲ್ಲಿ 9 ಅಧಿಕೃತ ಮೃಗಾಲಯಗಳಿದ್ದರೂ, ಶತಮಾನ ಕಂಡ ಮೈಸೂರು ಮೃಗಾಲಯ ಸೇರಿ ರಾಜ್ಯದ 9 ಅಧಿಕೃತ ಮೃಗಾಲಯಗಳಲ್ಲಿ ಪಶುವೈದ್ಯರ ಕಾರ್ಯಸೂಚಿ, ಸುರಕ್ಷತಾ ವಿಧಾನ ಸೇರಿದಂತೆ ಯಾವುದೇ ಪ್ರಮಾಣಿತ ಮಾನದಂಡ (ಎಸ್‌ಒಪಿ- Standard Operating Procedure) ಇಲ್ಲದಿರುವುದು ಸಮೀಕ್ಷಾ ಸಾವಿನ ಬಳಿಕ ಗೊತ್ತಾಗಿದೆ.

ಎಸ್‌ಒಪಿ ಪಾಲನೆಯಾಗದ ಕಾರಣಕ್ಕೆ ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಅವರು ನೀರಾನೆ ದಾಳಿಗೆ ಬಲಿಯಾಗಿದ್ದಾರೆ ಎಂಬೆಲ್ಲ ವಾದಗಳ ನಡುವೆಯೇ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೆ ಪ್ರಾಣಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಲ್ಲಿ ಈ ವರೆಗೆ ಯಾವುದೇ ಲಿಖಿತ ಪ್ರಮಾಣಿತ ಮಾನದಂಡ (SOP) ಇಲ್ಲ ಎಂದಿರುವುದು ಪಶುವೈದ್ಯರ ಆಕ್ರೋಶದ ನಡುವೆ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ.

ಡಾ. ಸಮೀಕ್ಷಾ ದುರಂತ ನಡೆದಾಗ ಸ್ವತಃ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಎಸ್‌ಒಪಿ ಪಾಲನೆಯಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದರು. ಮಂಗಳವಾರ ನೀಡಿದ ಹೇಳಿಕೆಯಲ್ಲಿ ಅವರು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. "ಮೃಗಾಲಯದಲ್ಲಿ ವನ್ಯಜೀವಿಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಲ್ಲಿ ಯಾವುದೇ ಲಿಖಿತ ಪ್ರಮಾಣಿತ ಮಾನದಂಡ ಇಲ್ಲ. ಈ ನಿಟ್ಟಿನಲ್ಲಿ ಮಹಿಳಾ ಪಶುವೈದ್ಯರಿಗೆ ಹಾಗೂ ವೈದ್ಯರಿಗೆ ಸುರಕ್ಷತೆ ಕಲ್ಪಿಸುವುದೂ ಸೇರಿದಂತೆ ಕೂಡಲೇ ಸೂಕ್ತ ಎಸ್.ಓ.ಪಿ. ರೂಪಿಸುವಂತೆ ಹಾಗೂ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗುವುದು," ಎಂದು ಹೇಳಿಕೆ ನೀಡಿದ್ದರು.

ಏನಿದು ಎಸ್‌ಒಪಿ

ಎಸ್‌ಒಪಿಯನ್ನು 'ಪ್ರಮಾಣಿತ ಕಾರ್ಯಾಚರಣೆ ವಿಧಾನ' ಅಥವಾ ಪ್ರಮಾಣಿತ ಮಾನದಂಡ ಎಂದು ಕರೆಯಲಾಗುತ್ತದೆ. ಮೂಲಭೂತವಾಗಿ, ಒಂದು ನಿರ್ದಿಷ್ಟ ಕೆಲಸವನ್ನು ಹೇಗೆ ಮಾಡಬೇಕು, ಯಾರು ಮಾಡಬೇಕು ಮತ್ತು ಯಾವ ಹಂತಗಳಲ್ಲಿ ಮಾಡಬೇಕು ಎಂಬುದನ್ನು ವಿವರಿಸುವ ಲಿಖಿತ ಮಾರ್ಗಸೂಚಿ. ಇದು ಒಬ್ಬ ವ್ಯಕ್ತಿಯ ವೈಯಕ್ತಿಕ ನಿರ್ಧಾರಗಳಿಗಿಂತ ಹೆಚ್ಚಾಗಿ, ವೈಜ್ಞಾನಿಕವಾಗಿ ಸಾಬೀತಾದ ಮತ್ತು ಸುರಕ್ಷಿತವಾದ ಹಂತಗಳನ್ನು ಅನುಸರಿಸುವಂತೆ ಒತ್ತಿ ಹೇಳುತ್ತದೆ.

ಯಾವುದೇ ಒಂದು ಸಂಸ್ಥೆಯಲ್ಲಿ ಅಥವಾ ಸರ್ಕಾರಿ ಇಲಾಖೆಯಲ್ಲಿ ಕೆಲಸಗಳು ಸುಗಮವಾಗಿ ಸಾಗಬೇಕಾದರೆ ಅಲ್ಲಿ ಏಕರೂಪತೆ ಇರಬೇಕಾತ್ತದೆ. ಉದಾಹರಣೆಗೆ, ಅರಣ್ಯ ಇಲಾಖೆಯಲ್ಲಿ ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭವನ್ನು ಗಮನಿಸಿದರೆ, ಅಲ್ಲಿ ವೈದ್ಯರು ಬದಲಾಗಬಹುದು ಅಥವಾ ಸ್ಥಳ ಬದಲಾಗಬಹುದು. ಆದರೆ, ಪ್ರಾಣಿಗೆ ಅರಿವಳಿಕೆ ನೀಡುವ ಕ್ರಮ ಅಥವಾ ತುರ್ತು ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು ಬದಲಾಗಬಾರದು. ಇಂತಹ ಸಂದರ್ಭಗಳಲ್ಲಿ ಎಸ್‌ಒಪಿ ಒಂದು ಕೈಪಿಡಿಯಂತೆ ಕೆಲಸ ಮಾಡುತ್ತದೆ. ಇದು ಕೆಲಸದಲ್ಲಿ ಉಂಟಾಗಬಹುದಾದ ಗೊಂದಲಗಳನ್ನು ನಿವಾರಿಸಿ, ಪ್ರತಿಯೊಬ್ಬ ಸಿಬ್ಬಂದಿಗೂ ಅವರ ಜವಾಬ್ದಾರಿಯ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತದೆ. ಇದರಿಂದಾಗಿ ಮಾನವ ಸಹಜ ತಪ್ಪುಗಳು ಕಡಿಮೆಯಾಗಿ, ಕೆಲಸದ ಗುಣಮಟ್ಟ ಮತ್ತು ನಿಖರತೆ ಹೆಚ್ಚಾಗುತ್ತದೆ.

ಸುರಕ್ಷತೆಯ ದೃಷ್ಟಿಯಿಂದ ಎಸ್‌ಒಪಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಅಪಾಯಕಾರಿ ಸನ್ನಿವೇಶಗಳಲ್ಲಿ ಅಥವಾ ತುರ್ತು ಆರೋಗ್ಯ ಸೇವೆಗಳ ಸಮಯದಲ್ಲಿ ಸಣ್ಣ ತಪ್ಪು ಕೂಡ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಎಸ್‌ಒಪಿ ಅಡಿಯಲ್ಲಿ ಪ್ರತಿಯೊಂದು ಹಂತವನ್ನೂ ಮೊದಲೇ ಪರೀಕ್ಷಿಸಿ, ಅದರಲ್ಲಿರುವ ಅಪಾಯಗಳನ್ನು ಗುರುತಿಸಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿರುತ್ತದೆ.

ಇದು ಕೇವಲ ಕೆಲಸವನ್ನು ಮುಗಿಸುವುದಕ್ಕೆ ಮಾತ್ರ ಸೀಮಿತವಾಗಿರದೆ, ಆ ಕೆಲಸ ಮಾಡುವ ವ್ಯಕ್ತಿಯ ಜೀವ ರಕ್ಷಣೆಗೂ ಆದ್ಯತೆ ನೀಡುತ್ತದೆ. ವಿಶೇಷವಾಗಿ ಮಹಿಳಾ ಉದ್ಯೋಗಿಗಳ ಸುರಕ್ಷತೆ ಅಥವಾ ರಾತ್ರಿ ಅವಧಿಯ ಕಾರ್ಯಾಚರಣೆಗಳಂತಹ ಸೂಕ್ಷ್ಮ ವಿಷಯಗಳಲ್ಲಿ ಎಸ್‌ಒಪಿ ಒಂದು ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುತ್ತದೆ.

ಕಾಲಕಾಲಕ್ಕೆ ಎದುರಾಗುವ ಹೊಸ ಸವಾಲುಗಳು, ತಂತ್ರಜ್ಞಾನದ ಬದಲಾವಣೆಗಳು ಮತ್ತು ಹಿಂದಿನ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಈ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗುತ್ತದೆ. ಇದರಿಂದಾಗಿ ವ್ಯವಸ್ಥೆಯು ಹೆಚ್ಚು ಪಾರದರ್ಶಕವಾಗುತ್ತದೆ ಮತ್ತು ಯಾವುದೇ ಅಚಾತುರ್ಯ ನಡೆದಾಗ ಹೊಣೆಗಾರಿಕೆಯನ್ನು ನಿಗದಿಪಡಿಸುವುದು ಸುಲಭವಾಗುತ್ತದೆ. ಹೀಗೆ, ಎಸ್‌ಒಪಿ ಎನ್ನುವುದು ಶಿಸ್ತುಬದ್ಧ ಕಾರ್ಯನಿರ್ವಹಣೆ ಮತ್ತು ಸುರಕ್ಷಿತ ಕೆಲಸದ ವಾತಾವರಣದ ನಡುವಿನ ಪ್ರಮುಖ ಕೊಂಡಿಯಾಗಿದೆ.

ವೈದ್ಯರಿಗೆ ಸಂಕಷ್ಟ

ಪಶುವೈದ್ಯಕೀಯ ಇಲಾಖೆಯಲ್ಲಿನ ವೈದ್ಯರು ತಮ್ಮ ಮೂಲ ಹುದ್ದೆಬಿಟ್ಟು, ವನ್ಯಜೀವಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಈ ಘಟನೆಯಿಂದಾಗಿ ಆಂತಕಕ್ಕೊಳಗಾಗಿದ್ದಾರೆ. ಯಾವುದೇ ಎಸ್‌ಒಪಿಗಳಿಲ್ಲದೇ, ಕೆಲಸ ಮಾಡುವುದಾದರೂ ಹೇಗೆ? ಈ ವೇಳೆ ಸಂಭವಿಸಿದ ಅವಘಡಗಳಿಗೆ ಯಾರು ಹೊಣೆ? ಯಾವ ಮಾನದಂಡಗಳ ಆಧಾರದ ಮೇಲೆ ಸರಕಾರ ಪರಿಹಾರ ನೀಡಲಿದೆ? ಅವಘಡಕ್ಕೆ ಯಾರನ್ನು ಹೊಣೆ ಮಾಡಲಿದೆ ಎಂಬೆಲ್ಲ ಚರ್ಚೆಗಳು ಈಗ ಗರಿಗೆದರಿವೆ.

ಪಶುವೈದ್ಯಕೀಯ ಇಲಾಖೆಯ ದೃಷ್ಟಿಕೋನದಲ್ಲಿ ವನ್ಯಜೀವಿಗಳ ಚಿಕಿತ್ಸೆ ಎನ್ನುವುದು ಕೇವಲ ವೈದ್ಯಕೀಯ ಸೇವೆ ಮಾತ್ರವಲ್ಲ, ಅದು ಜೀವದ ಹಂಗು ತೊರೆದು ಮಾಡುವ ಕೆಲಸ. ಸಾಕಾಣಿಕೆ ಪ್ರಾಣಿಗಳಿಗಿಂತ ಭಿನ್ನವಾಗಿರುವ ವನ್ಯಜೀವಿಗಳು ಅನಿರೀಕ್ಷಿತವಾಗಿ ವರ್ತಿಸುತ್ತವೆ. ಇಲಾಖೆಯ ಪ್ರಕಾರ, ಸೂಕ್ತ ಸುರಕ್ಷಾ ಸಾಧನಗಳು ಮತ್ತು ನುರಿತ ಸಿಬ್ಬಂದಿಗಳ ನೆರವಿಲ್ಲದೆ ವೈದ್ಯರನ್ನು ನೇರವಾಗಿ ಪ್ರಾಣಿಗಳ ಸನಿಹಕ್ಕೆ ಕಳುಹಿಸುವುದು ಅಪಾಯಕಾರಿ. ವಿಶೇಷವಾಗಿ ವನ್ಯಜೀವಿ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಪಶುವೈದ್ಯರಿಗೆ ರಾತ್ರಿ ಅವಧಿಯ ತುರ್ತು ಚಿಕಿತ್ಸೆ ಮತ್ತು ಕಾಡಿನೊಳಗಿನ ಕಾರ್ಯಾಚರಣೆ ವೇಳೆ ಹೆಚ್ಚಿನ ಭದ್ರತೆ ಅಗತ್ಯವಿದೆ ಎಂಬುದು ಇಲಾಖೆಯ ಪ್ರಬಲ ನಿಲುವು.

ಅರಣ್ಯ ಇಲಾಖೆಯು ಸದ್ಯದ ಮಟ್ಟಿಗೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ವನ್ಯಜೀವಿಗಳನ್ನು ನಿರ್ವಹಿಸುತ್ತಿದೆ. ಆದರೆ, ಪ್ರಾಣಿಗಳಿಗೆ ಅರಿವಳಿಕೆ ನೀಡುವುದು, ಗಾಯಗೊಂಡ ಪ್ರಾಣಿಗಳನ್ನು ಸೆರೆಹಿಡಿಯುವುದು ಅಥವಾ ಪಂಜರದ ಒಳಗೆ ಚಿಕಿತ್ಸೆ ನೀಡುವ ಸಮಯದಲ್ಲಿ ವೈದ್ಯರು ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಸ್ಪಷ್ಟವಾದ ಲಿಖಿತ ಆದೇಶಗಳ ಕೊರತೆಯಿದೆ. ಈಗಿನ ಹೊಸ ಸೂಚನೆಯನ್ವಯ, ಅರಣ್ಯ ಇಲಾಖೆಯು ಪಶುವೈದ್ಯಕೀಯ ವಿಭಾಗದೊಂದಿಗೆ ಸಮನ್ವಯ ಸಾಧಿಸಿ, ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರಿಗೆ ಪೂರಕವಾದ ಮೂಲಸೌಕರ್ಯ ಹಾಗೂ ತುರ್ತು ನಿರ್ಗಮನ ದಾರಿಗಳನ್ನು ಕಲ್ಪಿಸಬೇಕಿದೆ ಎನ್ನುತ್ತಾರೆ ಪಶು ವೈದ್ಯರು.

ನೀರಾನೆ ಪಕ್ಕದಲ್ಲಿ ಡಾ. ಸಮೀಕ್ಷಾ (ಸಂಗ್ರಹ ಚಿತ್ರ)

ಇಲಾಖೆಗೆ ಪ್ರತ್ಯೇಕ ವೈದ್ಯರೇ ಇಲ್ಲ !

ಅರಣ್ಯ ಇಲಾಖೆಗೆ ಪ್ರತ್ಯೇಕ ವ್ಯದ್ಯರಿಲ್ಲ. ಹೀಗಾಗಿ, ಕಾಡಿನ ವನ್ಯಜೀವಿಗಳಿಗೆ ಹಾಗೂ ಅಭಯಾರಣ್ಯಗಳಲ್ಲಿನ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು, ಪಶುವೈದ್ಯಕೀಯ ಇಲಾಖೆಯಲ್ಲಿನ ವೈದ್ಯರನ್ನೆ ಅರಣ್ಯ ಇಲಾಖೆ ಅವಲಂಭಿಸಿದೆ. ಬಹುತೇಕ ವೈದ್ಯರು ಗುತ್ತಿಗೆ ಆಧಾರದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ವೈದ್ಯರ ಮೂಲಕ ಪಶುವೈದ್ಯಕೀಯ ಇಲಾಖೆಯಾದರೂ, ಅರಣ್ಯ ಇಲಾಖೆಗೂ ಸೇರದೆ, ಪಶುವೈದ್ಯಕೀಯ ಇಲಾಖೆ ವ್ಯಾಪ್ತಿಗೂ ಸೇರದೆ ಅಡ್ಡಕತ್ತರಿಯಲ್ಲಿ ಸಿಲುಕಿದ್ದಾರೆ. ಇತ್ತೀಚೆಗಷ್ಟೆ ಮೃತ ಪಟ್ಟ ಡಾ.ಸಮೀಕ್ಷಾ ರೆಡ್ಡಿ ಅವರ ಸಾವು ಪ್ರಕರಣದ ಬಳಿಕ ಇಂತಹದೊಂದು ಗಂಭೀರ ಚರ್ಚೆಗಳು ಹುಟ್ಟುಕೊಂಡಿವೆ.

ಹಿಂದೆಯೂ ದುರಂತಗಳು ಸಂಭವಿಸಿವೆ!

ಪಶುವೈದ್ಯರ ಸುರಕ್ಷತೆಯ ಬಗ್ಗೆ ಇಷ್ಟೊಂದು ಗಂಭೀರ ಚರ್ಚೆ ನಡೆಯಲು ಹಿಂದೆ ನಡೆದ ದುರಂತಗಳೇ ಸಾಕ್ಷಿ. ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದ ವಿವಿಧೆಡೆ ವನ್ಯಜೀವಿಗಳ ದಾಳಿಗೆ ಸಿಲುಕಿ ಕೆಲವು ದಕ್ಷ ಪಶುವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ.

ಬಂಡೀಪುರ -ನಾಗರಹೊಳೆ ಭಾಗದ ಕಾರ್ಯಾಚರಣೆಗಳ ವೇಳೆ ಆನೆಗಳ ದಾಳಿಗೆ ಪಶುವೈದ್ಯರು ಬಲಿಯಾದ ಘಟನೆಗಳು ಇಡೀ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸಿದ್ದವು. ಅರಿವಳಿಕೆ ನೀಡಿದ ನಂತರವೂ ಪ್ರಾಣಿ ಜಾಗೃತಗೊಂಡು ದಾಳಿ ಮಾಡಿದಾಗ ತಕ್ಷಣಕ್ಕೆ ರಕ್ಷಿಸಿಕೊಳ್ಳಲು ಬೇಕಾದ ತಾಂತ್ರಿಕ ಬೆಂಬಲ ಆ ಸಂದರ್ಭಗಳಲ್ಲಿ ಲಭ್ಯವಿರಲಿಲ್ಲ. ಇಂತಹ ಸಾವುಗಳು ಕೇವಲ ವೈಯಕ್ತಿಕ ನಷ್ಟವಲ್ಲ, ಬದಲಿಗೆ ವನ್ಯಜೀವಿ ಸಂರಕ್ಷಣಾ ಕ್ಷೇತ್ರದ ಅಪಾರ ಜ್ಞಾನದ ನಷ್ಟವೂ ಆಗುತ್ತಿದೆ ಎಂದು ನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ.

ಇಲ್ಲಿ ಎಸ್‌ಒಪಿ ಇಲ್ಲ

ಮೃಗಾಲಯದಲ್ಲಿ ವನ್ಯಜೀವಿಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಲ್ಲಿ ಯಾವುದೇ ಲಿಖಿತ ಪ್ರಮಾಣಿತ ಮಾನದಂಡಗಳಿಲ್ಲ. ಹೀಗಾಗಿ ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಸೂಕ್ತ ಎಸ್‌ಒಪಿಗಾಗಿ ಪಟ್ಟು ಹಿಡಿದಿದ್ದಾರೆ. ಈ ಬೆನ್ನಲ್ಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ ನೀಡಿದ್ದು, ಮಹಿಳಾ ಪಶುವೈದ್ಯರಿಗೆ ಹಾಗೂ ವೈದ್ಯರಿಗೆ ಸುರಕ್ಷತೆ ಕಲ್ಪಿಸುವುದೂ ಸೇರಿದಂತೆ ಕೂಡಲೇ ಸೂಕ್ತ ಎಸ್ಓಪಿ ರೂಪಿಸುವಂತೆ ಹಾಗೂ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.

ವನ್ಯಜೀವಿ ತಜ್ಞರು ಹೇಳುವುದೇನು?

ಈ ಕುರಿತು ವನ್ಯಜೀವಿ ತಜ್ಞರು ಸಹ ಪೂರಕವಾದ ನಿಲುವು ತಳೆದಿದ್ದಾರೆ. ಕಾಡು ಮತ್ತು ಪ್ರಾಣಿಗಳ ಸಂರಕ್ಷಣೆ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಪ್ರಾಣಿಗಳನ್ನು ರಕ್ಷಿಸುವ ವೈದ್ಯರ ಜೀವ ಎಂದು ವಾದಿಸುತ್ತಿದ್ದಾರೆ. ವೈಜ್ಞಾನಿಕ ಎಸ್‌ಒಪಿ ಇಲ್ಲದಿದ್ದರೆ ಆತುರದ ನಿರ್ಧಾರಗಳಿಂದ ಪ್ರಾಣಿಗಳಿಗೂ ತೊಂದರೆಯಾಗಬಹುದು ಮತ್ತು ಮಾನವ ಜೀವಕ್ಕೂ ಸಂಚಕಾರ ಬರಬಹುದು. ಚಿಕಿತ್ಸೆಯ ಸಮಯದಲ್ಲಿ ಕನಿಷ್ಠ ಅಂತರ ಕಾಯ್ದುಕೊಳ್ಳುವುದು, ಆಧುನಿಕ ಡ್ರೋನ್ ತಂತ್ರಜ್ಞಾನ ಬಳಸಿ ಪ್ರಾಣಿಗಳ ಚಲನವಲನ ಗಮನಿಸುವುದು ಮತ್ತು ರಕ್ಷಣಾ ತಂಡದಲ್ಲಿ ಹೆಚ್ಚಿನ ಶಿಸ್ತು ತರುವ ಅಗತ್ಯವಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ವನ್ಯಜೀವಿ ತಜ್ಞ ಜೋಸೆಫ್‌ ಹೂವರ್‌ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಯಾವುದೇ ಸುರಕ್ಷಿತಗಳಿಲ್ಲ. ಸೂಕ್ತ ಎಸ್‌ಒಪಿಗಳು ಇಲ್ಲ. ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ವನ್ಯಜೀವಿಗಳಿಗೆ ನೀಡುವ ಆಧ್ಯತೆಯನ್ನೆ ಅವುಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಲಿಖಿತ ರೂಪದ ಎಸ್‌ಒಪಿ ಜಾರಿಗೆ ಬಂದರೆ, ಅದು ಪಶುವೈದ್ಯರಿಗೆ ಕೇವಲ ಕೆಲಸದ ಮಾರ್ಗದರ್ಶಿಯೊಂದಿಗೆ, ಅವರ ಪಾಲಿನ 'ಜೀವ ವಿಮೆ' ಮಾದರಿಯಲ್ಲಿಯೇ ಕೆಲಸ ಮಾಡಲಿದೆ.

ಎಷ್ಟು ಮೃಗಾಲಯಗಳಿವೆ?

ರಾಜ್ಯದಲ್ಲಿ ಒಟ್ಟು 9 ಅಧಿಕೃತ ಮೃಗಾಲಯಗಳಿದ್ದು, ಅವುಗಳಲ್ಲಿ ಕೆಲವು ಶತಮಾನಗಳ ಇತಿಹಾಸವನ್ನು ಹೊಂದಿದ್ದರೆ, ಇನ್ನು ಕೆಲವು ಆಧುನಿಕ ಸಂರಕ್ಷಣಾ ಕೇಂದ್ರಗಳಾಗಿ ಹೊರಹೊಮ್ಮಿವೆ. ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 1892ರಲ್ಲಿ ಸ್ಥಾಪನೆಯಾದ ಇದು ಈಗ 134ನೇ ವರ್ಷಕ್ಕೆ (133 ವರ್ಷ ಪೂರೈಸಿ) ಕಾಲಿಟ್ಟಿದೆ.

ಇದರೊಂದಿಗೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೂ 55 ವರ್ಷಗಳ ಇತಿಹಾಸವಿದೆ. ಹಂಪಿಯ (ಹೊಸಪೇಟೆ) ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನವು ತುಲನಾತ್ಮಕವಾಗಿ ಹೊಸದಾಗಿದ್ದು, ಇದು ಸುಮಾರು ಏಳು ವರ್ಷಗಳ ಹಿಂದೆ (2017ರಲ್ಲಿ) ಅಧಿಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಯಿತು. ಇದೇ ಭಾಗದ ಹಳೆಯ ಮೃಗಾಲಯವೆಂದರೆ ಬೆಳಗಾವಿಯ ಭೂತರಾಮನಹಟ್ಟಿ ಮೃಗಾಲಯವಾಗಿದ್ದು, ಇದು 1980ರ ದಶಕದ ಮಧ್ಯಭಾಗದಲ್ಲಿ ಆರಂಭವಾಗಿ ಸುಮಾರು ನಾಲ್ಕು ದಶಕಗಳ ಇತಿಹಾಸವನ್ನು ಹೊಂದಿದೆ.

ಕರಾವಳಿ ಭಾಗದಲ್ಲಿ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನವು 1996ರಿಂದ ಕಾರ್ಯನಿರ್ವಹಿಸುತ್ತಿದ್ದು, ಸರಿಸುಮಾರು 30 ವರ್ಷಗಳ ಹರೆಯದಲ್ಲಿದೆ. ಇದು ಪಶ್ಚಿಮ ಘಟ್ಟಗಳ ಅಪರೂಪದ ಪ್ರಾಣಿಗಳ ಸಂರಕ್ಷಣೆಗೆ ಹೆಸರಾಗಿದೆ. ಇನ್ನು ಹಳೆಯ ಮೃಗಾಲಯಗಳ ಸಾಲಿಗೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮವೂ ಸೇರುತ್ತದೆ. 1988ರಲ್ಲಿ ಪ್ರಾರಂಭವಾದ ಈ ಕೇಂದ್ರವು ಈಗ 38 ವರ್ಷಗಳನ್ನು ಪೂರೈಸಿದೆ. ದಾವಣಗೆರೆಯ ಅಣಬೇರು ಮೃಗಾಲಯ, ಕಲಬುರಗಿಯ ಜೈವಿಕ ಉದ್ಯಾನವನ ಮತ್ತು ಗದಗಿನ ಬಿಂಕದಕಟ್ಟಿ ಮೃಗಾಲಯಗಳು ಸಹ ಕಳೆದ ಮೂರರಿಂದ ನಾಲ್ಕು ದಶಕಗಳಿಂದ ಆಯಾ ಭಾಗದ ಪರಿಸರ ಶಿಕ್ಷಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ.

ಹೀಗೆ, ರಾಜ್ಯದ ಮೃಗಾಲಯಗಳು ಕೇವಲ ಪ್ರಾಣಿಗಳನ್ನು ನೋಡುವ ಸ್ಥಳಗಳಾಗಿ ಉಳಿಯದೆ, ವನ್ಯಜೀವಿಗಳ ಸಂತಾನೋತ್ಪತ್ತಿ ಮತ್ತು ಗಾಯಗೊಂಡ ಪ್ರಾಣಿಗಳ ಪುನರ್ವಸತಿ ಕೇಂದ್ರಗಳಾಗಿಯೂ ಬೆಳೆದಿವೆ. ಮೈಸೂರಿನಂತಹ ಶತಮಾನದ ಹಳೆಯ ಸಂಸ್ಥೆಯಿಂದ ಹಿಡಿದು ಹಂಪಿಯಂತಹ ಆಧುನಿಕ ಉದ್ಯಾನವನಗಳವರೆಗೆ, ಈ ಎಲ್ಲಾ ಕೇಂದ್ರಗಳು ಕರ್ನಾಟಕದ ನೈಸರ್ಗಿಕ ಪರಂಪರೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಈ ಮೃಗಾಲಯಗಳ ವಯಸ್ಸು ಹೆಚ್ಚಾದಂತೆ ಅವುಗಳ ನಿರ್ವಹಣೆ ಮತ್ತು ಪಶುವೈದ್ಯಕೀಯ ಸವಾಲುಗಳು ಸಹ ಹೆಚ್ಚಾಗುತ್ತಿದ್ದು, ಇವುಗಳಿಗೆ ಹೊಸ ಎಸ್‌ಒಪಿಗಳ (SOP) ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.

Read More
Next Story