
Women's Day 2026| ಅಕ್ಷರ ಗೆದ್ದ 'ಕಾಡಿನ ಮಹಿಳೆ'; ಸೋಲಿಗರ ಮೊದಲ ಪಿಎಚ್‌ಡಿ ಪದವೀಧರೆ ಡಾ.ಎಸ್.ರತ್ನಮ್ಮ
ಡಾ. ಎಸ್. ರತ್ನಮ್ಮಆರಂಭದಲ್ಲಿ ಶಾಲೆಗೆ ಹೋಗಿದ್ದು ಜ್ಞಾನ ಸಂಪಾದನೆಗಾಗಿ ಅಲ್ಲ, ಬದಲಿಗೆ ಹಸಿವು ನೀಗಿಸಿಕೊಳ್ಳಲು..! ಶಾಲೆಯಲ್ಲಿ ಸಿಗುವ ಅನ್ನಕ್ಕಾಗಿ ಅವರು ಗಿರಿಜನ ಆಶ್ರಯಕ್ಕೆ ಹೋಗಲಾರಂಭಿಸಿದರು.
ನಿಸರ್ಗದ ಮಡಿಲಲ್ಲಿ, ಹಸಿರು ಹೊದ್ದ ಬೆಟ್ಟಗಳ ನಡುವೆ ವಾಸಿಸುವ ಸೋಲಿಗ ಸಮುದಾಯದ ಬದುಕು ಹೊರಜಗತ್ತಿಗೆ ಅಷ್ಟಾಗಿ ಪರಿಚಿತವಲ್ಲ. ಆದರೆ, ಅದೇ ಕಾಡಿನ ಮಡಿಲಿನಿಂದ ಬಂದು, ಅಕ್ಷರದ ಮೂಲಕ ಹೊಸ ಇತಿಹಾಸ ಬರೆದವರು ಡಾ. ಎಸ್. ರತ್ನಮ್ಮ. ಬಂಡೀಪುರ ಕಾಡಂಚಿನಲ್ಲಿ ಜನ್ಮ ತಳೆದ ಇವರು ಕೇವಲ ಒಬ್ಬ ಮಹಿಳೆಯಲ್ಲ; ಬದಲಿಗೆ ಸಾವಿರಾರು ಬುಡಕಟ್ಟು ಮಕ್ಕಳಿಗೆ ಆಶಾಕಿರಣ. ತಮಗೆ ತಾವೇ ಹೆಮ್ಮೆಯಿಂದ ಕಾಡಿನ ಹೆಣ್ಣುಮಗಳು ಎಂದು ಕರೆದುಕೊಳ್ಳುವ ರತ್ನಮ್ಮನವರ ಬದುಕು ಸುಗಮ ಹಾದಿಯಲ್ಲ, ಅದು ಹಸಿವು, ಅವಮಾನ, ಬಡತನ ಮತ್ತು ಕಠಿಣ ಪರಿಶ್ರಮದಿಂದ ನಿರ್ಮಾಣವಾದ ಅದ್ಭುತ ಕಥೆ. ಅವರು ಸೋಲಿಗ ಸಮುದಾಯದ ಪ್ರಥಮ ಪಿಎಚ್‌ಡಿ ಪದವೀಧರೆಯಾಗಿದ್ದು, ಅವರ ಸ್ಪೂರ್ತಿದಾಯಕ ಪಯಣ.
ತಂದೆ ಶಂಕ್ರಯ್ಯ ಅವರಿಂದ ಡಾ.ರತ್ನಮ್ಮ ಅವರ ಬದುಕಿನ ದಿಕ್ಕು ಬದಲಿಸಿತು. ಅವರಿಗೆ ಎರಡು ಕಣ್ಣು ಕಾಣದಿದ್ದರೂ ಅಂತರಂಗದ ಕಣ್ಣು ಜಗತ್ತನ್ನೇ ನೋಡುವಷ್ಟು ವಿಶಾಲವಾಗಿತ್ತು. ಅಕ್ಷರವನ್ನೇ ಅರಿಯದ ಅಂಧ ತಂದೆ ಮಗಳಿಗೆ ಅಕ್ಷರದ ಬೆಳಕನ್ನು ಕೊಡಿಸಲು ಶ್ರಮಪಟ್ಟರು. ತಾಯಿ ವರ್ಷವಿಡೀ ಜೀತದ ಕೆಲಸ ಮಾಡುತ್ತಿದ್ದರು.
ಒಂದು ದಿನ ಅವರ ಪುಟ್ಟ ಮನೆಗೆ ಒಂದು ರೇಡಿಯೋ ಪ್ರವೇಶಿಸಿತು. ಆ ರೇಡಿಯೋ ಆ ಇಡೀ ಕುಟುಂಬದ ಆಲೋಚನಾ ಕ್ರಮವನ್ನೇ ಬದಲಿಸಿತು. ರೇಡಿಯೋದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಬಗ್ಗೆ ಬರುತ್ತಿದ್ದ ಸುದ್ದಿಗಳು ಶಂಕ್ರಯ್ಯ ಅವರ ಮನಸ್ಸನ್ನು ತಟ್ಟಿದವು. ʼನನ್ನ ಮಗಳೂ ಎಂದಾದರೂ ಒಂದು ದಿನ ಇಂದಿರಾಗಾಂಧಿಯಂತೆ ದೊಡ್ಡ ವ್ಯಕ್ತಿಯಾಗಬೇಕು, ಸಮಾಜಕ್ಕೆ ಏನಾದರೂ ಮಾಡಬೇಕುʼ ಎಂಬ ಕನಸನ್ನು ಕಂಡರು. ಅಕ್ಷರವನ್ನೇ ಅರಿಯದ ಒಬ್ಬ ಅಂಧ ತಂದೆ, ತನ್ನ ಮಗಳಿಗೆ ಅಕ್ಷರದ ಬೆಳಕನ್ನು ಕೊಡಿಸಲು ನಿರ್ಧರಿಸಿದ್ದು ರತ್ನಮ್ಮನವರ ಬದುಕಿನ ಮೊದಲ ಗೆಲುವು.
ಶಾಲೆಗೆ ಹೋಗಿದ್ದು ಅರಿವಿಗಲ್ಲ, ಅನ್ನಕ್ಕಾಗಿ..!
ರತ್ನಮ್ಮ ಅವರು ಆರಂಭದಲ್ಲಿ ಶಾಲೆಗೆ ಹೋಗಿದ್ದು ಜ್ಞಾನ ಸಂಪಾದನೆಗಾಗಿ ಅಲ್ಲ, ಬದಲಿಗೆ ಹಸಿವು ನೀಗಿಸಿಕೊಳ್ಳಲು..! ಮನೆಯಲ್ಲಿ ತೀವ್ರ ಬಡತನವಿದ್ದ ಕಾರಣ, ಶಾಲೆಯಲ್ಲಿ ಸಿಗುವ ಅನ್ನಕ್ಕಾಗಿ ಅವರು ಗಿರಿಜನ ಆಶ್ರಯಕ್ಕೆ ಹೋಗಲಾರಂಭಿಸಿದರು. ಅವರ ಶಾಲಾ ಪಯಣ ಅಷ್ಟು ಸುಲಭವಾಗಿರಲಿಲ್ಲ. ಪ್ರತಿದಿನ ಮೂರು ಕಿಲೋಮೀಟರ್ ದಟ್ಟ ಕಾಡಿನೊಳಗೆ ನಡೆಯಬೇಕಿತ್ತು. ಕಾಡು ಪ್ರಾಣಿಗಳ ಭಯ ನಿರಂತರವಾಗಿತ್ತು. ಒಮ್ಮೆ ಕುಟುಂಬದ ಫೋಟೋ ತೆಗೆಸಲು ಹೋಗುವಾಗ ಎದುರಾದ ಹುಲಿ, ಮರುದಿನ ಕಂಡ ಆನೆ ಇಂದಿಗೂ ಅವರ ಕಣ್ಣಮುಂದೆ ಕವಿದಂತಿದೆ. 4ನೇ ತರಗತಿಯವರೆಗೆ ಅಲ್ಲಿಯೇ ಓದಿದ ಅವರು, 5ನೇ ತರಗತಿಗಾಗಿ ಗುಂಡ್ಲುಪೇಟೆಗೆ ಪ್ರಯಾಣ ಬೆಳೆಸಿದರು. ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಮುಂದೇನು ಎಂಬ ಪ್ರಶ್ನೆ ಎದುರಾದಾಗ, ಅವರಿಗೆ ನೆರವಾಗಿದ್ದು ಒಂದು ಎನ್‌ಜಿಒ ಸಂಸ್ಥೆ. ಹಳ್ಳಿಗಳಿಗೆ ಭೇಟಿ ನೀಡಿ ಓದುವ ಹಂಬಲವುಳ್ಳವರನ್ನು ಹುಡುಕುತ್ತಿದ್ದ ಆ ಸಂಸ್ಥೆಯ ಕಣ್ಣಿಗೆ ರತ್ನಮ್ಮ ಬಿದ್ದರು. ಅಲ್ಲಿಂದ ಅವರ ಪಯಣ ಮೈಸೂರಿನ ಮಹಾರಾಣಿ ಕಾಲೇಜಿಗೆ ಸಾಗಿತು.
ಮೊದಲ ಹೊಸ ಬಟ್ಟೆ, ಚಪ್ಪಲಿಯ ಸಂಭ್ರಮ
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪಿಯುಸಿ ಉತ್ತೀರ್ಣಗೊಂಡಾಗ ಅವರಿಗೆ270 ರೂ. ವಿದ್ಯಾರ್ಥಿ ವೇತನ ಬಂದಿತ್ತು. ಆ ಹಣ ಇಂದಿಗೆ ಸಣ್ಣದಾಗಿ ಕಾಣಬಹುದು, ಆದರೆ ಅಂದು ರತ್ನಮ್ಮನವರಿಗೆ ಅದು ಬದುಕಿನ ದೊಡ್ಡ ನಿಧಿ. ತಮ್ಮ ಜೀವನದಲ್ಲೇ ಮೊದಲ ಬಾರಿಗೆ ಸ್ವಂತಕ್ಕೆ ಹೊಸ ಬಟ್ಟೆ ಹಾಗೂ ಒಂದು ಜೊತೆ ಚಪ್ಪಲಿಯನ್ನು ಆ ಹಣದಿಂದ ಖರೀದಿಸಿದರು. ಅಲ್ಲಿಯವರೆಗೆ ಬರಿಗಾಲಲ್ಲಿ ನಡೆದಿದ್ದ ಆ ಪಾದಗಳಿಗೆ ಚಪ್ಪಲಿಯ ಸ್ಪರ್ಶ ಸಿಕ್ಕಿದ್ದು ಅಕ್ಷರದ ಶಕ್ತಿಯಿಂದಲೇ. ತಾಯಿ ಗೌಡರ ಮನೆಯಲ್ಲಿ ಜೀತ ಮಾಡುತ್ತಿದ್ದ ವೇಳೆ ಅವರು ನೀಡುತ್ತಿದ್ದ ಬಟ್ಟೆಗಳೇ ರತ್ನಮ್ಮ ಅವರು ತೊಡುತ್ತಿದ್ದರು. ವಿದ್ಯಾರ್ಥಿ ವೇತನದ ಮೂಲಕ ಬಂದ ಹಣದಲ್ಲಿ ಬಟ್ಟೆ ಖರೀದಿಸಿದಾಗ ಉಂಟಾದ ಸಂಭ್ರಮ ಅಷ್ಟಿಷ್ಟಲ್ಲ ಎಂದು ದ ಫೆಡರಲ್ ಕರ್ನಾಟಕಕ್ಕೆ ತಮ್ಮ ಸಂತಸವನ್ನು ಹಂಚಿಕೊಂಡರು. ನಂತರ ಮೈಸೂರಿನಲ್ಲಿಯೇ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು.
ಸೋಲಿಗ ಮಹಿಳೆಯ ಜತೆ ರತ್ನಮ್ಮ ಸಮಾಲೋಚನೆ
ಸಮುದಾಯದ ಅವಮಾನ, ಸವಾಲುಗಳು
ಬಿ.ಆರ್.ಹಿಲ್ಸ್‌ನಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ವೃತ್ತಿ ಆರಂಭಿಸಿದ ರತ್ನಮ್ಮ ಅವರಿಗೆ ಕೈ ಬೀಸಿ ಕರೆದಿದ್ದ ಬೆಂಗಳೂರು. ಹೊಸಕೋಟೆಯ ಬಳಿ ಇರುವ ಎಂ.ವಿ.ಜೆ.ವೈದ್ಯಕೀಯ ಕಾಲೇಜಿನಲ್ಲಿ ಹತ್ತು ವರ್ಷಗಳ ಕಾಲ ಸುಖವಾಗಿ ಕೆಲಸ ಮಾಡಿದ ನಂತರ, ರತ್ನಮ್ಮನವರಿಗೆ ತಮ್ಮ ಹುಟ್ಟಿದ ನೆಲ ಮತ್ತು ಸಮುದಾಯಕ್ಕಾಗಿ ಏನಾದರೂ ಮಾಡಬೇಕೆಂಬ ಹಂಬಲ ಉಂಟಾಯಿತು. ಆದರೆ, ವಾಪಸ್ ತಮ್ಮ ಸಮುದಾಯಕ್ಕೆ ಹೋದಾಗ ಅವರಿಗೆ ಕಾದಿದ್ದು ಹೂವಿನ ಹಾರಗಳಲ್ಲ, ಬದಲಿಗೆ ಹೀಯಾಳಿಕೆ ಮತ್ತು ಅವಮಾನ. "ಓದಿ ದೊಡ್ಡ ಕೆಲಸ ಸಿಕ್ಕಿದ್ದರೂ ಇಲ್ಲಿಗೆ ಯಾಕೆ ಬಂದೆ? ಇಲ್ಲಿ ನಿನಗೆ ಏನು ಸಿಗುತ್ತದೆ?" ಎಂದು ಸ್ವಂತ ಸಮುದಾಯದವರೇ ಅವಮಾನಿಸಿದರು. ಆದರೆ ರತ್ನಮ್ಮ ಎದೆಗುಂದದೆ ತಮ್ಮ ಸಮುದಾಯದ ಏಳ್ಗೆಗೆ ಶ್ರಮಿಸಲು ಮುಂದಾದರು. ಕಾರಣಾಂತರಗಳಿಂದ ಅರ್ಧಕ್ಕೆ ಶಾಲಾ-ಕಾಲೇಜುಗಳನ್ನು ತೊರೆದ ಸಮುದಾಯದ ಮಕ್ಕಳನ್ನು ಗುರುತಿಸಿದರು. ೩೪ ಮಕ್ಕಳನ್ನು ಗುರುತಿಸಿ ಮೈಸೂರಿನಲ್ಲಿನ ಸಂಸ್ಥೆಯೊಂದರಲ್ಲಿ ವೃತ್ತಿಪರ ತರಬೇತಿಗೆ ದಾಖಲು ಮಾಡಿದರು. ಬಳಿಕ ಅವರೆಲ್ಲಾ ಜೀವನ ಕಂಡುಕೊಂಡರು.
ಸೋಲಿಗ ಸಮುದಾಯದ ಮೊದಲ ಪಿಎಚ್‌ಡಿ ಪಡೆದ ಮಹಿಳೆ
ರತ್ನಮ್ಮ ಕೇವಲ ಪದವೀಧರೆಯಾಗಿ ಉಳಿಯಲಿಲ್ಲ. ಸೋಲಿಗ ಜನಾಂಗದ ಸಂಸ್ಕೃತಿ, ಬದುಕು ಮತ್ತು ಆ ಜನಾಂಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ನಿರ್ಧರಿಸಿದರು. ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ನಡೆದ ಸೆಮಿನಾರ್ ಒಂದರಲ್ಲಿ, ಒಬ್ಬ ಸಂಶೋಧಕಿ ಸೋಲಿಗ ಮಕ್ಕಳ ಬಗ್ಗೆ ಪ್ರಬಂಧ ಮಂಡಿಸುತ್ತಿದ್ದರು. ಅದರಲ್ಲಿ ರತ್ನಮ್ಮನವರ ಫೋಟೋವನ್ನೇ ಬಳಸಲಾಗಿತ್ತು. ಆದರೆ ಆ ಸಂಶೋಧಕಿ ರತ್ನಮ್ಮನವರನ್ನು ಒಮ್ಮೆಯೂ ಭೇಟಿಯಾಗಿರಲಿಲ್ಲ! ಇದನ್ನು ಕಂಡ ರತ್ನಮ್ಮನವರಿಗೆ ಗಾಬರಿಯಾಯಿತು. "ನಮ್ಮ ಬಗ್ಗೆ ನಮಗೇ ತಿಳಿಯದಂತೆ ಬೇರೆಯವರು ಸಂಶೋಧನೆ ಮಾಡಿ ಸುಳ್ಳು ಮಾಹಿತಿ ನೀಡುವುದು ಸಮುದಾಯಕ್ಕೆ ಮಾಡುವ ಅನ್ಯಾಯ ಎಂದು ಅರಿತ ಅವರು, ತಾವೇ ಸಂಶೋಧನೆಗೆ ಇಳಿಯಲು ನಿರ್ಧರಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೂಲಕ ಸೋಲಿಗ ಜನಾಂಗದ ಸಂಸ್ಕೃತಿ, ಬದುಕು ಮತ್ತು ಸವಾಲುಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದರು. ವಿವಾಹದ ನಂತರದ ಜವಾಬ್ದಾರಿಗಳ ನಡುವೆಯೂ ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ೧೨೪ಕ್ಕೂ ಹೆಚ್ಚು ಹಾಡಿಗಳಿಗೆ (ಬುಡಕಟ್ಟು ಹಳ್ಳಿಗಳು) ಭೇಟಿ ನೀಡಿದರು. ಕಾಡು-ಮೇಡು ಅಲೆದಾಡಿ, ತಮ್ಮ ಜನಾಂಗದವರ ನಾಡಿಮಿಡಿತವನ್ನು ಅರಿತು ಪ್ರಬಂಧ ಮಂಡಿಸಿದರು. ಈ ಮೂಲಕ ಸೋಲಿಗ ಸಮುದಾಯದಲ್ಲಿ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು
ಸಾಯಿ ಪ್ರಗತಿ ಫೌಂಡೇಶನ್ ಮೂಲಕ ಸಮಾಜ ಸೇವೆ
ರತ್ನಮ್ಮ ಅವರು ಕೇವಲ ಒಬ್ಬ ಸಂಶೋಧಕಿಯಲ್ಲ, ಒಬ್ಬ ಸಮಾಜ ಸುಧಾರಕಿಯಾಗಿದ್ದಾರೆ. ಅವರು 'ಸಾಯಿ ಪ್ರಗತಿ ಫೌಂಡೇಶನ್' ಸ್ಥಾಪಿಸಿ, ಅದರ ಅಧ್ಯಕ್ಷೆಯಾಗಿ ಬುಡಕಟ್ಟು ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಮನೆ ಮನೆಗೆ ತೆರಳಿ ಪೋಷಕರಿಗೆ ಶಿಕ್ಷಣದ ಮಹತ್ವ ತಿಳಿಸುತ್ತಿದ್ದಾರೆ. ಬುಡಕಟ್ಟು ಮಹಿಳೆಯರ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಮತ್ತು ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳುವುದು ಅವರ ಪ್ರಮುಖ ಆದ್ಯತೆಯಾಗಿದೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸಿಗದ ಬುಡಕಟ್ಟು ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಸೇತುವೆಯಾಗಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅವರ ಹೋರಾಟ ನಿರಂತರವಾಗಿದೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಅವರು, ತಾವು ಕಾಡಿನ ಮಹಿಳೆ ಎಂಬುದಾಗಿ ಹೇಳಿಕೊಳ್ಳಲು ಸಂತಸವಾಗುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಇದೇ ಲಿಂಗ ಸಮಾನತೆ ಮೊದಲು ಮನೆಯಿಂದಲೇ ಆರಂಭವಾಗಬೇಕು ಎಂಬುದು ನನ್ನ ಬಲವಾದ ನಂಬಿಕೆ. ಗಂಡು-ಹೆಣ್ಣು ಎಂಬ ತಾರತಮ್ಯ ತೊರೆದು ಅಕ್ಷರ ಕಲಿತರೆ ಮಾತ್ರ ಬುಡಕಟ್ಟು ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಅವರಂತಹ ಸಮಾನತೆವಾದಿಗಳ ಆಶಯ ಇಂದಿಗೂ ಈಡೇರಿಲ್ಲ. ಸಮಾನತೆ ಬಂದಲಾಗಲೇ ಸಮಾಜ ಅಭಿವೃದ್ಧಿಯಾಗಲಿದೆ. ಕಾಡಿನಂಚಿನಲ್ಲಿ ಮತ್ತು ಅರಣ್ಯ ಪ್ರದೇಶದಲ್ಲಿ ಸುಮಾರು ೫೦ ಬುಡಕಟ್ಟು ಜನಾಂಗಗಳು ನೆಲೆಸಿದ್ದು, ಇವುಗಳ್ಲಲಿ ೧೨ ಬುಡಕಟ್ಟು ಜನಾಂಗದವರು ಅರಣ್ಯದಲ್ಲಿ ನೆಲೆಸುತ್ತಾರೆ. ಪೋಷಕರ ಆಶಯದಂತೆ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಸುಶಿಕ್ಷಿತಳಾಗಿದ್ದೇನೆ. ನನ್ನ ಸಮುದಾಯದವರು ಸಹ ಏಳ್ಗೆಯಾಗಬೇಕು ಎಂಬ ಉದ್ದೇಶದಿಂದ ಶ್ರಮಿಸುತ್ತಿದ್ದೇನೆ. ಇದು ನಾನು ನನ್ನ ಸಮುದಾಯ ಮತ್ತು ಸಮಾಜಕ್ಕೆ ನೀಡುವ ಕೊಡುಗೆ ಎಂದು ಹೇಳಿದರು.

