Womens Day 2026|ಹಿಮೋಫಿಲಿಯಾ ಪೀಡಿತರಿಗಾಗಿ ತಾಯ್ತನ ತ್ಯಾಗ ಮಾಡಿದ ಮೀರಾ ಹನಗವಾಡಿ
x
ಡಾ. ಮೀರಾ ಹನಗವಾಡಿ

Women's Day 2026|ಹಿಮೋಫಿಲಿಯಾ ಪೀಡಿತರಿಗಾಗಿ ತಾಯ್ತನ ತ್ಯಾಗ ಮಾಡಿದ ಮೀರಾ ಹನಗವಾಡಿ

ದಾವಣಗೆರೆಯಲ್ಲಿ ಹಿಮೋಫಿಲಿಯಾ ಚಿಕಿತ್ಸಾ ಕೇಂದ್ರ ಸ್ಥಾಪನೆಯ ಹಿಂದೆ ಒಂದು ರೋಚಕ ಹಾಗೂ ಶ್ರಮದ ಇತಿಹಾಸವಿದೆ. ಈ ಸಂಸ್ಥೆಯ ಸ್ಥಾಪಕರು ಡಾ. ಸುರೇಶ್‌ ಹನಗವಾಡಿ ಅವರಾದರೂ, ಅವರಿಗೆ ಬೆನ್ನೆಲುಬಾಗಿ ನಿಂತವರು ಪತ್ನಿ ಡಾ. ಮೀರಾ ಹನಗವಾಡಿ.


ತ್ಯಾಗ ಅಂದರೆ ಅದು ಅಂತಿಂಥ ತ್ಯಾಗವಲ್ಲ; ಪ್ರತಿ ಹೆಣ್ಣಿಗೂ ಕರುಳಬಳ್ಳಿಯ ಸಂಬಂಧ ಬೆಸೆಯುವ ತಾಯ್ತನದ ತ್ಯಾಗ. ಮಕ್ಕಳಿಲ್ಲದೇ ಮರುಗುವವರು ಇವರ ತ್ಯಾಗದ ಕಥೆ ಕೇಳಿದರೆ ಸಾಕು, ಕಣ್ಣಾಲಿಗಳು ಒದ್ದೆಯಾಗಲಿವೆ. ಹಿಮೋಫಿಲಿಯಾ ಬಾಧಿತರನ್ನೇ ಮಕ್ಕಳಂತೆ ಸಲಹುತ್ತಿರುವ ಈ ಮಹಾತಾಯಿ ಬೇರಾರೂ ಅಲ್ಲ, ಪದ್ಮಶ್ರೀ ಪುರಸ್ಕೃತ ಡಾ. ಸುರೇಶ್‌ ಹನಗವಾಡಿ ಅವರ ಸಹಧರ್ಮಿಣಿ ಡಾ. ಮೀರಾ ಹನಗವಾಡಿ.

ದಾವಣಗೆರೆಯಲ್ಲಿ ದೇಶದ ಮೊದಲ ಹಿಮೋಫಿಲಿಯಾ ಚಿಕಿತ್ಸಾ ಕೇಂದ್ರ ಕಟ್ಟಿರುವ, ಸ್ವತಃ ಹಿಮೋಫಿಲಿಯಾ ಬಾಧಿತರೂ ಆಗಿರುವ ಡಾ. ಸುರೇಶ್‌ ಹನಗವಾಡಿ ಅವರ ಕೈಂಕರ್ಯಕ್ಕೆ ಹೆಗಲಾದವರು ಡಾ. ಮೀರಾ. ಪತಿಯ ಸಾಧನೆ ಹಾಗೂ ಅಶಕ್ತರ ಸೇವೆಗಾಗಿ ತನ್ನ ತಾಯ್ತನವನ್ನೇ ತ್ಯಾಗ ಮಾಡಿದ ಧೀಮಂತೆ ಇವರು. ಇಂದು ಹಿಮೋಫಿಲಿಯಾ ಪೀಡಿತರಿಗೆ ಒಂದೇ ಸೂರಿನಡಿ ಉಚಿತ ಚಿಕಿತ್ಸೆ ಒದಗಿಸುತ್ತಿರುವ ಈ ದಂಪತಿ, ಬಾಧಿತರ ಸೇವೆಯಲ್ಲೇ ನೆಮ್ಮದಿ ಕಾಣುತ್ತಿದ್ದಾರೆ.

ಹಿಮೋಫಿಲಿಯಾ ಬಾಧಿತ ಮಕ್ಕಳು ಹಾಗೂ ತಾಯಂದಿರ ಸೇವೆಗಾಗಿ ಬದುಕು ಮುಡುಪಾಗಿಟ್ಟಿರುವ ಡಾ. ಮೀರಾ ಹನಗವಾಡಿ ಅವರ ಸಾಧನೆ ಮತ್ತು ಸೇವೆಯನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ 'ದ ಫೆಡರಲ್ ಕರ್ನಾಟಕ' ಅಭಿನಂದಿಸುತ್ತದೆ.

ಗ್ರಾಮವೊಂದರಲ್ಲಿ ಮಕ್ಕಳೊಂದಿಗೆ ಡಾ. ಮೀರಾ ಹನಗವಾಡಿ

ದಾವಣಗೆರೆಯಲ್ಲಿ ಹಿಮೋಫಿಲಿಯಾ ಚಿಕಿತ್ಸಾ ಕೇಂದ್ರ ಸ್ಥಾಪನೆಯ ಹಿಂದೆ ಒಂದು ರೋಚಕ ಹಾಗೂ ಶ್ರಮದ ಇತಿಹಾಸವಿದೆ. ಈ ಸಂಸ್ಥೆಯ ಸ್ಥಾಪಕರು ಡಾ. ಸುರೇಶ್‌ ಹನಗವಾಡಿ ಅವರಾದರೂ, ಅವರಿಗೆ ಬೆನ್ನೆಲುಬಾಗಿ ನಿಂತವರು ಪತ್ನಿ ಡಾ. ಮೀರಾ ಹನಗವಾಡಿ. ಹಿಮೋಫಿಲಿಯಾಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸುರೇಶ್‌ ಅವರು ಅಂಗವಿಕಲತೆಗೆ ತುತ್ತಾದರೂ ತಮ್ಮ ಸ್ಥಿತಿಗೆ ಮರುಗಲಿಲ್ಲ. ಅದೇ ರೀತಿ ಸುರೇಶ್‌ ಅವರು ಹಿಮೋಫಿಲಿಯಾ ಬಾಧಿತರೆಂದು ತಿಳಿದಿದ್ದರೂ ಡಾ. ಮೀರಾ ಮದುವೆಗೆ ಹಿಂದೇಟು ಹಾಕಲಿಲ್ಲ. ಈ ಇಬ್ಬರ ಅಶಕ್ತರೆಡೆಗಿನ ಅದಮ್ಯ ಪ್ರೀತಿಯಿಂದಲೇ ಇಂದು ಸಾವಿರಾರು ಮಕ್ಕಳಿಗೆ ಈ ವೈದ್ಯ ದಂಪತಿ ಆಶಾಕಿರಣವಾಗಿದ್ದಾರೆ.

ಬಾಧಿತರ ವೇದನೆಯೇ 'ಜೋಡಿ'ಯಾಗಿಸಿತು

ಡಾ. ಮೀರಾ ಅವರ ಮದುವೆ ಮಾತುಕತೆಯ ಪ್ರಸ್ತಾವ ಆರಂಭವಾಗಿದ್ದೇ ಡಾ. ಸುರೇಶ್‌ ಹನಗವಾಡಿ ಅವರಿಂದ. ತಾವು ಹಿಮೋಫಿಲಿಯಾ ಬಾಧಿತರಾಗಿರುವ ಬಗ್ಗೆ ಸುರೇಶ್‌ ಮುಕ್ತವಾಗಿ ಹೇಳಿದ್ದರು. "ತಮ್ಮ ಮೌಲ್ಯಗಳನ್ನು ಮತ್ತು ಆರೋಗ್ಯದ ಸ್ಥಿತಿಯನ್ನು ಯಾವುದನ್ನೂ ರಹಸ್ಯವಾಗಿ ಇಡದೆ ಮುಕ್ತವಾಗಿ ಮಾತನಾಡಿದ ಕಾರಣಕ್ಕೇ ನಮ್ಮ ತಂದೆ-ತಾಯಿಯಿಂದ ಮದುವೆಗೆ ಒಪ್ಪಿಗೆ ದೊರೆಯಿತು" ಎನ್ನುತ್ತಾರೆ ಮೀರಾ.

ಮದುವೆಯಾದ ಬಳಿಕ ಪತಿ ಸುರೇಶ್‌ ಅವರು ಹಿಮೋಫಿಲಿಯಾ ಬಾಧಿತರಿಗೆ ನೀಡುತ್ತಿದ್ದ ಚಿಕಿತ್ಸೆಯನ್ನು ಮೀರಾ ಗಮನಿಸುತ್ತಿದ್ದರು. ಹಿಮೋಫಿಲಿಯಾ ಪೀಡಿತರ ಕುಟುಂಬಸ್ಥರ ನೋವು ಅವರನ್ನು ಹೆಚ್ಚು ಬಾಧಿಸಿತು. "ನಾನು ಖಿನ್ನತೆಗೆ ಒಳಗಾದವರನ್ನು, ಮದುವೆ ಮಾಡಿಕೊಳ್ಳದವರನ್ನು ನೋಡಿದ್ದೆ. ಆದರೆ ಇಲ್ಲಿ ಕುಟುಂಬದಲ್ಲಿ ಮಹಿಳೆಯರು ಅನುಭವಿಸುತ್ತಿದ್ದ ವೇದನೆ, ಸಂಕಷ್ಟವನ್ನು ನೋಡಲು ಆಗಲಿಲ್ಲ. ಹಿಮೋಫಿಲಿಯಾ ಪೀಡಿತ ಮಕ್ಕಳ ತಾಯಂದಿರು ಸಮಾಜ ಹಾಗೂ ಕುಟುಂಬದಲ್ಲಿ ಅನುಭವಿಸುತ್ತಿದ್ದ ಮಾನಸಿಕ ವೇದನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಾನು ಮಕ್ಕಳ ಮನೋವಿಜ್ಞಾನದ (Child Psychology) ಕೋರ್ಸ್‌ ಓದಿದೆ. ನಂತರ ಹಿಮೋಫಿಲಿಯಾ ಸೊಸೈಟಿಯಲ್ಲಿ ಮಹಿಳಾ ವಿಭಾಗ ಆರಂಭಿಸಿದೆವು" ಎಂದು ಡಾ. ಮೀರಾ ಹನಗವಾಡಿ ಮನದಾಳ ಹಂಚಿಕೊಂಡರು.

ಹಿಮೋಫಿಲಿಯಾ ಮಕ್ಕಳ ತಾಯಂದಿರನ್ನು ಮಾನಸಿಕವಾಗಿ ಕುಗ್ಗಲು ಬಿಡಬಾರದು ಎಂಬ ಉದ್ದೇಶದಿಂದ ವಿಶೇಷ ಸಮಾಲೋಚನೆ ಆರಂಭಿಸಲಾಯಿತು. ಮಹಿಳೆಯರ ಸಮಸ್ಯೆಗಳನ್ನು ಶಾಂತವಾಗಿ ಕೇಳಿ ಧೈರ್ಯ ತುಂಬುವ ಕೆಲಸ ನಡೆಯಿತು. ಈಗಲೂ ಮಹಿಳಾ ವಿಭಾಗದಲ್ಲಿ ಪ್ರತಿ ತಿಂಗಳು ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ.

"ಹಿಮೋಫಿಲಿಯಾ ಮಕ್ಕಳ ತಾಯಂದಿರು ಮಾನಸಿಕವಾಗಿ ಕುಗ್ಗಿರುತ್ತಾರೆ. ಇಂತಹವರನ್ನು ಮನೆಯಲ್ಲಿ ಕಡೆಗಣಿಸಿ ಹೊರಹಾಕಿದ ಉದಾಹರಣೆಗಳೂ ಇವೆ. ಮತ್ತೆ ಕೆಲವೆಡೆ ವಿಚ್ಛೇದನ ನೀಡಿರುವ ಪ್ರಸಂಗಗಳೂ ಇವೆ. ಇಂತಹ ಪ್ರಕರಣಗಳಲ್ಲಿ ನಾವು ಸಮಾಲೋಚನೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸಿದ್ದೇವೆ" ಎನ್ನುತ್ತಾರೆ ಡಾ. ಮೀರಾ.

ಹಿಮೋಫಿಲಿಯಾ ಕುರಿತು ಜಾಗೃತಿ ಮೂಡಿಸುತ್ತಿರುವ ಡಾ. ಮೀರಾ ಹನಗವಾಡಿ

ಮನೆಗಳಿಗೆ ಭೇಟಿ ನೀಡಿ ಸಮಾಲೋಚನೆ

ಕೆಲವು ಪ್ರಕರಣಗಳಲ್ಲಿ ನೇರವಾಗಿ ಮನೆಗೆ ಭೇಟಿ ನೀಡಿ ಕುಟುಂಬದವರ ಜೊತೆ ಮಾತನಾಡಲಾಗಿದೆ. ಇದರಿಂದ ಹಲವು ಸಮಸ್ಯೆಗಳು ಬಗೆಹರಿದಿವೆ. ಇನ್ನು ಕೆಲವು ಪ್ರಕರಣಗಳಲ್ಲಿ ಹಿಮೋಫಿಲಿಯಾ ಪೀಡಿತ ಮಕ್ಕಳ ತಾಯಂದಿರನ್ನು ಮನೆಯವರು ಸಂಪೂರ್ಣ ನಿರ್ಲಕ್ಷ್ಯ ಮಾಡಿರುತ್ತಾರೆ. ಅಂತಹವರ ಮನವೊಲಿಸುವುದು ಸಾಹಸದ ಕೆಲಸ. ಅದನ್ನೂ ಮಾಡಿರುವ ಸಂತೃಪ್ತಿ ಈ ದಂಪತಿಗಿದೆ.

"ನಮ್ಮ ಸೊಸೈಟಿಯಿಂದಲೇ ಪುನರ್ವಸತಿ ಶಿಬಿರಗಳನ್ನು ಆಯೋಜಿಸುತ್ತೇವೆ. ಈ ಶಿಬಿರಗಳಿಗೆ ತಾಯಿಯು ಮಗುವಿನ ಜೊತೆ ಬರುವಂತೆ ಪ್ರೇರೇಪಿಸುತ್ತೇವೆ. ಮಗುವನ್ನು ಹೇಗೆ ಬೆಳೆಸಬೇಕು, ರಕ್ತಸ್ರಾವವಾದಾಗ ಪ್ರಾಥಮಿಕ ಚಿಕಿತ್ಸೆ ಹೇಗೆ ನೀಡಬೇಕು ಎಂದು ಕಲಿಸಿಕೊಡುತ್ತೇವೆ. ಚಿಕಿತ್ಸೆಯಲ್ಲಿ ವಿಳಂಬ ಮಾಡಿದರೆ ಆಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುತ್ತೇವೆ" ಎಂದು ಡಾ. ಮೀರಾ ವಿವರಿಸಿದರು.

ಚಿಕ್ಕಮ್ಮನಿಂದ ಪ್ರೇರಣೆ

ಡಾ. ಮೀರಾ ಅವರ ಈ ಸಾಧನೆಗೆ ಅವರ ಚಿಕ್ಕಮ್ಮನೇ ಪ್ರೇರಣೆ. ಚಿಕ್ಕಮ್ಮ ಸ್ತ್ರೀರೋಗ ತಜ್ಞರಾಗಿದ್ದರಿಂದ ಬಾಲ್ಯದಿಂದಲೇ ಸಮಾಜ ಸೇವೆಯ ಪ್ರಭಾವ ಮೀರಾರ ಮೇಲಿತ್ತು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಚಿಕ್ಕಮ್ಮ, ಬಡವರು ಬಂದರೆ ಚಿಕಿತ್ಸೆ ನೀಡುವುದಲ್ಲದೆ ಅವರಿಗೆ ಬಸ್ ಚಾರ್ಜಿಗೂ ಹಣ ಕೊಟ್ಟು ಕಳುಹಿಸುತ್ತಿದ್ದರು. ಇದನ್ನು ನೋಡಿದ ಮೀರಾ ಅವರಿಗೆ ಸಮಾಜ ಸೇವೆ ಮಾಡಬೇಕೆಂಬ ಛಲ ಹುಟ್ಟಿತ್ತು.

ನವೀನ್ ಗೆ ತಂದೆ ತಾಯಿ ಪ್ರೀತಿ ನೀಡಿರುವ ಡಾ. ಮೀರಾ ಹಾಗೂ ಡಾ.ಸುರೇಶ್ ಹನಗವಾಡಿ ಚಿತ್ರ : ರಘು ಆರ್.ಡಿ.

'ಲಾಭ'ದ ಪದ ಸುಳಿಯದಂತೆ ಎಚ್ಚರಿಕೆ

ಡಾ. ಸುರೇಶ್‌ ಹನಗವಾಡಿ ಅವರ ಸೋದರಮಾವ ಚಿಕಿತ್ಸೆ ಸಿಗದೆ ಅಸಹಾಯಕರಾಗಿದ್ದನ್ನು ಈ ದಂಪತಿ ಕಂಡಿದ್ದರು. ಎಷ್ಟೋ ಬಡ ಮಕ್ಕಳು ಹಣವಿಲ್ಲದೆ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದರು. ಇವೆಲ್ಲವನ್ನೂ ಗಮನಿಸಿ ಹಿಮೋಫಿಲಿಯಾ ಕೇಂದ್ರ ಆರಂಭಿಸಲಾಯಿತು. ಆರಂಭದಲ್ಲಿ ಕೇವಲ 100 ರೂ. ಸೇವಾ ಶುಲ್ಕ ಪಡೆಯಲಾಗುತ್ತಿತ್ತು. ಆದರೆ ಗದಗಿನ ಒಂದು ಕುಟುಂಬದ ಘಟನೆ ಇವರ ನಿರ್ಧಾರವನ್ನೇ ಬದಲಿಸಿತು. ಆ ಕುಟುಂಬದವರು ಆಸ್ಪತ್ರೆಗೆ ಬಂದಾಗ ಹೋಟೆಲ್‌ನಲ್ಲಿ ಊಟ ಮಾಡಲು ಹಣವಿಲ್ಲದೆ ಒಣರೊಟ್ಟಿ ಹಾಗೂ ಈರುಳ್ಳಿ ತಿನ್ನುತ್ತಿದ್ದರು. ಇದನ್ನು ಕಂಡ ದಂಪತಿ ಅಂದೇ ಸೇವಾ ಶುಲ್ಕ ಪಡೆಯುವುದನ್ನು ನಿಲ್ಲಿಸಿದರು. ಅಂದಿನಿಂದ ಇಂದಿನವರೆಗೆ ಯಾವುದೇ ಹಣ ಪಡೆಯದೆ ಉಚಿತ ಸೇವೆ ನೀಡುತ್ತಿದ್ದಾರೆ.

ಮೊಬೈಲ್ ಯೂನಿಟ್ ಆಂಬುಲೆನ್ಸ್ ಸೇವೆ

ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗಾಗಿ ಮೊಬೈಲ್ ಯೂನಿಟ್ ಮೂಲಕ ಮನೆಬಾಗಿಲಿಗೆ ತೆರಳಿ ಸೇವೆ ನೀಡಲಾಗುತ್ತಿದೆ. ಅವಶ್ಯಕತೆ ಇದ್ದವರನ್ನು ಆಂಬುಲೆನ್ಸ್ ಮೂಲಕ ಕರೆತಂದು ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇಲ್ಲಿದೆ. ಇಂತಹ ಸೇವೆಯ ನಡುವೆಯೇ ಅವರು 'ತಾಯ್ತನ'ವನ್ನು ತ್ಯಾಗ ಮಾಡುವ ಮಹತ್ವದ ನಿರ್ಧಾರ ತಳೆದರು.

ಮಕ್ಕಳು ಬೇಡ ಎಂಬ ಗಟ್ಟಿ ತೀರ್ಮಾನ

ಮದುವೆಯಾದ ಒಂದೆರಡು ವರ್ಷದ ಬಳಿಕ ದಂಪತಿಗಳಲ್ಲಿ ಮಕ್ಕಳ ಆಸೆ ಸಹಜ. ಆದರೆ ಡಾ. ಸುರೇಶ್‌ ಹಾಗೂ ಡಾ. ಮೀರಾ ದಂಪತಿ ತೆಗೆದುಕೊಂಡ ನಿರ್ಧಾರ ಕುಟುಂಬವನ್ನೇ ಬೆರಗುಗೊಳಿಸಿತು. "ನಾವು ಸ್ವಂತ ಮಕ್ಕಳನ್ನು ಮಾಡಿಕೊಳ್ಳುವುದು ಬೇಡ; ಹಿಮೋಫಿಲಿಯಾ ಬಾಧಿತ ಮಕ್ಕಳನ್ನೇ ನಮ್ಮ ಮಕ್ಕಳೆಂದು ಭಾವಿಸೋಣ ಎಂದು ನಿರ್ಧರಿಸಿದೆವು. ಈ ಬಗ್ಗೆ ನನ್ನ ತಾಯಿಯ ಬಳಿ ಹೇಳಿದಾಗ, ಅವರು 'ಯಾರು ಬೇಕಾದರೂ ಮಕ್ಕಳನ್ನು ಮಾಡಿಕೊಳ್ಳುತ್ತಾರೆ, ಆದರೆ ನೀವು ಬೇರೆಯವರ ಮಕ್ಕಳಿಗೆ ತಂದೆ-ತಾಯಿಯಾಗುತ್ತೇವೆ ಎಂದು ಹೇಳಿದ್ದು ನಮಗೆ ಹೆಮ್ಮೆ ತಂದಿದೆ' ಎಂದು ಧೈರ್ಯ ತುಂಬಿದರು. ನಮಗೆ ಸ್ವಂತ ಮಕ್ಕಳಾದರೆ ಹಣ ಗಳಿಸಬೇಕು, ಆಸ್ತಿ ಮಾಡಬೇಕು ಎಂಬ ಸ್ವಾರ್ಥ ಬರುತ್ತದೆ. ಅಂತಹ ಭಾವನೆ ಬರಬಾರದು ಎಂದು ನಮ್ಮ ಜೀವನವನ್ನೇ ಈ ಮಕ್ಕಳಿಗಾಗಿ ಮುಡುಪಿಟ್ಟೆವು" ಎಂದು ಭಾವುಕರಾಗಿ ನುಡಿದರು.

ಕಣ್ಣಲ್ಲಿ ನೀರು ತಂದ ಹಾವೇರಿಯ ಘಟನೆ

ಹಾವೇರಿಯ ಹಳ್ಳಿಯೊಂದರ ಮಗುವಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. ಚಿಕಿತ್ಸೆ ನೀಡಿ ಕಳುಹಿಸಿದ ನಂತರ ಫಾಲೋಅಪ್‌ಗಾಗಿ ಕರೆ ಮಾಡಿದಾಗ, ಮಗುವಿನ ತಾಯಿ ಅಳುತ್ತಾ "ಮಗುವಿಗೆ ತೊಂದರೆಯಾಗಿದೆ, ಆಸ್ಪತ್ರೆಗೆ ಕರೆತರಲು ಹಣವಿಲ್ಲದೆ ಬೇರೆಯವರ ಬಳಿ ಸಾಲ ಕೇಳುತ್ತಿದ್ದೇನೆ" ಎಂದರು. ತಕ್ಷಣವೇ ತಂಡದೊಂದಿಗೆ ಅಲ್ಲಿಗೆ ಹೋದಾಗ, ಸಗಣಿ ಮೆತ್ತಿದ ನೆಲದ ಮೇಲೆ ಹರಿದ ಸೀರೆಯನ್ನೇ ಹಾಸಿಗೆಯನ್ನಾಗಿಸಿ ಮಗುವನ್ನು ಮಲಗಿಸಲಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಆ ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ. ಈ ಘಟನೆ ಮೀರಾರ ಮನಸ್ಸನ್ನು ತೀವ್ರವಾಗಿ ಕಲಕಿತು. ಅಂದಿನಿಂದ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಅರಿವು ಮೂಡಿಸುವ ಕೆಲಸವನ್ನು ಅವರು ಚುರುಕುಗೊಳಿಸಿದರು.

ದ ಫೆಡರಲ್‌ ಕರ್ನಾಟಕಕ್ಕೆ ಸಂದರ್ಶನ ನೀಡಿದ ಡಾ. ಮೀರಾ ಹನಗವಾಡಿ ಚಿತ್ರ: ಆರ್‌.ಡಿ,ರಘು

'ಮಕ್ಕಳಿಗೆ ಒಂಚೂರು ಹಲೋ ಎನ್ನಿ'

"ಕೆಲವು ತಾಯಂದಿರು ರಾತ್ರಿ 2 ಗಂಟೆಗೆ ಕರೆ ಮಾಡಿ 'ಮೇಡಂ, ಮಗುವಿಗೆ ಒಮ್ಮೆ ಹಲೋ ಎನ್ನಿ, ನಿಮ್ಮ ಧ್ವನಿ ಕೇಳಿದರೆ ಸಾಕು ಮಗು ಮಲಗುತ್ತದೆ' ಎಂದು ಕೇಳಿಕೊಳ್ಳುತ್ತಾರೆ. ನಾನು ಮಾತನಾಡಿದಾಗ ಆ ಮಕ್ಕಳು ನಗುವ ನಗು ನನಗೆ ಅಪಾರ ಸಂತೋಷ ನೀಡುತ್ತದೆ" ಎನ್ನುತ್ತಾರೆ ಡಾ. ಮೀರಾ.

ಬಡ ಕುಟುಂಬದ ತಾಯಂದಿರಿಗೆ ನೆರವಾಗಲು ಕಾರದಪುಡಿ ತಯಾರಿಕೆ, ಮ್ಯಾಟ್ ಮಾಡುವುದು ಸೇರಿದಂತೆ ಸಣ್ಣ ಉದ್ಯೋಗಗಳಿಗೆ 'ಮೈಕ್ರೋ ಎಂಟರ್‌ಪ್ರೈಸಸ್ ಗ್ರಾಂಟ್' ಮೂಲಕ ನೆರವು ನೀಡಲಾಗುತ್ತಿದೆ. ಅಲ್ಲದೆ ಹಿಮೋಫಿಲಿಯಾ ಬಾಧಿತ ಮಕ್ಕಳ ಶಿಕ್ಷಣಕ್ಕೂ ಸಹಾಯ ಮಾಡಲಾಗುತ್ತಿದ್ದು, ಇಂದು ಇಲ್ಲಿ ಚಿಕಿತ್ಸೆ ಪಡೆದವರು ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಪತ್ರಿಕೋದ್ಯಮದಂತಹ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ.

'ಹಿಮೋಫಿಲಿಯಾ ಇರುವವರನ್ನು ಮದುವೆಯಾಗಿ'

"ಹಿಮೋಫಿಲಿಯಾ ಬಾಧಿತರು ಮದುವೆಯಾಗಲು ಹಿಂಜರಿಯಬಾರದು. ಅವರನ್ನು ಮದುವೆಯಾಗುವ ಹೆಣ್ಣುಮಕ್ಕಳು ಧೈರ್ಯಗೆಡಬಾರದು. ಅವರಿಗೆ ಹುಟ್ಟುವ ಗಂಡು ಮಕ್ಕಳು ಆರೋಗ್ಯವಂತರಾಗಿಯೇ ಇರುತ್ತಾರೆ. ಈಗ ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರಿದಿದೆ, ಆಧುನಿಕ ಚಿಕಿತ್ಸೆಗಳು ಲಭ್ಯವಿವೆ. ಯಾವುದೇ ಅನುಮಾನವಿದ್ದರೂ ನನ್ನನ್ನು ಬಂದು ಭೇಟಿ ಮಾಡಿ" ಎಂದು ಡಾ. ಮೀರಾ ಧೈರ್ಯ ತುಂಬುತ್ತಾರೆ.

Read More
Next Story