What are the Political Calculations Behind the Utsavas? A Strategy for the ‘Vokkaliga Corridor’?
x

ಕನಕೋತ್ಸವದಲ್ಲಿ ಮಹಿಳೆಯರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕಾಣಿಸಿಕೊಂಡಿದ್ದು ಹೀಗೆ

ಕನಕೋತ್ಸವ, ರಾಮೋತ್ಸವ, ಕೇಂಪೇಗೌಡ ಉತ್ಸವ! ಒಕ್ಕಲಿಗರ ʼಕಾರಿಡಾರ್‌ʼಗೆ ಡಿಕೆ ಸೋದರರ ಲೆಕ್ಕಾಚಾರ?

ರಾಮನಗರದತ್ತ ಎಚ್‌.ಡಿ. ಕುಮಾರಸ್ವಾಮಿಕಣ್ಣಿಟ್ಟಿದ್ದು, ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲದಿಂದ ಸಿಎಂ ಆಗುವಯೋಚನೆಯಿದೆ. ಹಾಗಾಗಿ ರಾಜಕೀಯ ವೈರಿ ಪ್ರವೇಶ ಕಠಿಣಗೊಳಿಸುವುದು ಉದ್ದೇಶವೇ?


ಮುಖ್ಯಮಂತ್ರಿಗಳ ರೇಸ್ ನಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗ ಉತ್ಸವಗಳ ಮೂಲಕ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಕಾರಿಡಾರ್ ನಿರ್ಮಿಸಿಕೊಳ್ಳುತ್ತಿದ್ದಾರೆಯೇ ? ಮುಂದಿನ ಚುನಾವಣೆಗೆ ಈಗಲೇ ಅಖಾಡ ಸಿದ್ದಪಡಿಸಿಕೊಳ್ಳುತ್ತಿದ್ದಾರೆಯೇ ? ಉತ್ಸವಗಳ ಮೂಲಕ ತಮ್ಮ ಕೋಟೆಯನ್ನು ಇನ್ನಷ್ಟು ಭದ್ರಪಡಿಸಿಕೊಂಡು, ಸಹೋದರ ಡಿ.ಕೆ.ಸುರೇಶ್ ಗಾಗಿ ಲೋಕಸಭಾ ಕ್ಷೇತ್ರದಲ್ಲಿನ ಮತಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆಯೇ? ಹೀಗೊಂದು, ಚರ್ಚೆಗೆ ಕಾರಣವಾಗಿರುವುದು ಡಿ.ಕೆ.ಸಹೋದರರು ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲ ತಾಲೂಕುಗಳೊಂದಿಗೆ ಪಕ್ಕದ ಕುಣಿಗಲ್ ಕ್ಷೇತ್ರದಲ್ಲಿಯು ನಡೆಸಿರುವ ಉತ್ಸವಗಳು. ಅದ್ಧೂರಿ ರಸಮಂಜರಿ ಕಾರ್ಯಕ್ರಮ , ಭರ್ಜರಿ ಉಡುಗೊರೆಗಳು.

ಏನಿದು ಉತ್ಸವಗಳ ಸಾಲು

ಕಳೆದ ಅನೇಕ ವರ್ಷಗಳಿಂದಲೂ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರವೇ ಡಿ.ಕೆ.ಸಹೋದರರ ಅಧ್ಯಕ್ಷತೆಯಲ್ಲಿ ಕನಕೋತ್ಸವ ಆಯೋಜಿಸಲಾಗುತ್ತಿತ್ತು. ಆದರೆ, ಇದೇ ಮೊದಲ ಭಾರಿಗೆ ಕನಕಪುರ ಮಾತ್ರವಲ್ಲದೇ ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳೊಂದಿಗೆ ತುಮಕೂರಿನ ಕುಣಿಗಲ್ ಕ್ಷೇತ್ರದಲ್ಲಿಯು ಉತ್ಸವಗಳನ್ನು ಆಯೋಜಿಸಲಾಗಿದೆ. ಈ ಎಲ್ಲ ಉತ್ಸವಗಳಿಗೂ ಡಿ.ಕೆ.ಸಹೋದರರೆ ರಾಯಭಾರಿಗಳಾಗಿರುವುದು ವಿಶೇಷ.

ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆಯಲ್ಲಿ "ರಾಮೋತ್ಸವ" ಆಯೋಜನೆಗೊಂಡಿದ್ದರೆ , ಚನ್ನಪಟ್ಟಣದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ "ಬೊಂಬೆನಾಡ ಗಂಗೋತ್ಸವ" ನಡೆದಿದೆ. ಮಾಗಡಿಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಅಧ್ಯಕ್ಷತೆಯಲ್ಲಿ "ಕೆಂಪೇಗೌಡ ಉತ್ಸವ" ನಡೆದರೆ, ಪಕ್ಕದ ಕುಣಿಗಲ್‌ನಲ್ಲಿ ಶಾಸಕ ರಂಗನಾಥ್ ಅವರಿಂದ "ಕುಣಿಗಲ್ ಉತ್ಸವ"ಗಳು ಮೊದಲ ಭಾರಿಗೆ ಆಯೋಜನೆಗೊಂಡಿವೆ. ಈ ಎಲ್ಲ ಉತ್ಸವಗಳ ಬಳಿಕ ಜಿಲ್ಲಾ ಮಟ್ಟದ ಉತ್ಸವ ಎಂಬಂತೆ ಕನಕಪುರದಲ್ಲಿ ಅದ್ಧೂರಿಯಾಗಿ "ಕನಕೋತ್ಸವ" ನಡೆಸಲಾಗಿದೆ.

ಥ್ರೋಬಾಲ್‌ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ಈ ಎಲ್ಲ ಉತ್ಸವಗಳಲ್ಲಿಯು ಎಲ್ಲ ವರ್ಗ ಹಾಗೂ ವಯೋಮಾನದವರನ್ನು ಆಕರ್ಷಿಸಲು ವಿಭಿನ್ನ ಕಾರ್ಯಕಮಗಳನ್ನು ಆಯೋಜಿಸಲಾಗಿತ್ತು. ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್, ವಾಲಿಬಾಲ್, ಥ್ರೋಬಾಲ್ ...ಹೀಗೆ ಯುವಕರಿಗೆ ಕ್ರೀಡೆಗಳ ಹೆಸರಿನಲ್ಲಿಆರ್ಕಷಿಸಿದರೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲಾ ಸ್ಫರ್ಧೆ...ಹೀಗೆ ಎಲ್ಲರನ್ನು ಒಳಗೊಂಡ ಕಾರ್ಯಕ್ರಮ ರೂಪಿಸಲಾಗಿತ್ತು. ಜತೆಗೆ ವಿಜೇತರಿಗೆ ಬಹುಮಾನ, ಸ್ಪರ್ಧಿಸಿದ್ದವರಿಗೂ ಉಡುಗೊರೆಗಳನ್ನು ಹಂಚಲಾಗಿದೆ. ಪ್ರತಿ ಉತ್ಸವಗಳಲ್ಲಿಯು "ಸಂಗೀತ ಸಂಜೆ" ಮೂಲಕ ತಾರೆಯರ ಸಮಾಗಮ ನಡೆಸಿರುವುದು ವಿಶೇಷ.

ಅವರ ಉತ್ಸವಗಳು ರಾಜಕೀಯ ಲಾಭಕ್ಕಾಗಿ ಎಂಬುದು ಜೆಡಿಎಸ್​ ಪಕ್ಷದ ಆರೋಪ. ''ರಾಜಕೀಯ ಲಾಭಕ್ಕಾಗಿಯೆ ಈ ಉತ್ಸವಗಳನ್ನು ನಡೆಸಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅಷ್ಟೊಂದು ಹಣ ಖರ್ಚು ಮಾಡಿ, ಸುಖಾಸುಮ್ಮನೆ ಯಾರು ತಾನೇ ಉತ್ಸವ ನಡೆಸುತ್ತಾರೆ. ಇದೆಲ್ಲ ಡಿ.ಕೆ. ಸಹೋದರರ ಚುನಾವಣೆ ಲೆಕ್ಕಾಚಾರ ಎಂದು ಕನಕಪುರ ತಾಲೂಕು ಜೆಡಿಎಸ್ ಅಧ್ಯಕ್ಷ ನಾಗರಾಜು "ದ ಫೆಡರಲ್ ಕರ್ನಾಟಕ" ದೊಂದಿಗೆ ಮಾತನಾಡುತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ, ಕಾಂಗ್ರೆಸ್​ ಪಕ್ಷದ ನಾಯಕರು ರಾಜಕೀಯ ಮಾಡಿದರೆ ತಪ್ಪೇನು ಎಂದು ಕೇಳುತ್ತಿದ್ದಾರೆ. "ದ ಫೆಡರಲ್ ಕರ್ನಾಟಕ" ದೊಂದಿಗೆ ಮಾತನಾಡಿದ ಹೆಸರೇಳಲು ಇಚ್ಚಿಸದ ಕಾಂಗ್ರೆಸ್ ಮನನ ಮುಖಂಡರೊಬ್ಬರು, ''ಜನರಿಗಾಗಿ ಈ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. ಕನಕಪುರದಲ್ಲಿ ಈ ಹಿಂದಿನಿಂದಲೂ ಕನಕೋತ್ಸವ ನಡೆಸಲಾಗುತ್ತಿತು. ಉಳಿದೆಡೆ ಇದೇ ಮೊದಲ ಭಾರಿಗೆ ಉತ್ಸವಗಳನ್ನು ನಡೆಸಲಾಗಿದೆ. ಸ್ವಾಮಿ ಕಾರ್ಯ, ಸ್ವಕಾರ್ಯಗಳು ಎರಡು ಇವುಗಳಲ್ಲಿ ಇದ್ದರೆ ತಪ್ಪೇನು ? ರಾಜಕೀಯ ಮಾಡುವುದರಲ್ಲಿ ಸಮಸ್ಯೆ ಏನು ? ಎಲ್ಲ ಪಕ್ಷಗಳು ಅದೇ ಕೆಲಸ ತಾನೆ ಮಾಡುತ್ತಿರುವುದು,'' ಎಂದು ಪ್ರಶ್ನಿಸಿದ್ದಾರೆ.

ಪಂಚ-ಗ್ಯಾರಂಟಿಗಳ ಬಗ್ಗೆಯೂ ಭರ್ಜರಿ ಪ್ರಚಾರ

ಈ ಉತ್ಸವಗಳಲ್ಲಿ ವಿಜೇತರಾದವರನ್ನು ಜಿಲ್ಲಾ ಮಟ್ಟದ ಉತ್ಸವ ಎಂಬಂತೆ ಕನಕಪುರದ (ಡಿಕೆಶಿ ತವರು) "ಕನಕೋತ್ಸವ"ಕ್ಕೆ ಕಳುಹಿಸಲಾಗಿತ್ತು. ಇನ್ನೂ ಕನಕೋತ್ಸವದಲ್ಲಿ ಪ್ರತಿ ಹಳ್ಳಿಗಳ ಮನೆಮನೆಗೂ ಸ್ಪರ್ಧೆಗಳ ಹೆಸರಿನಲ್ಲಿ ಉಡುಗೊರೆ ಹಂಚಲಾಗಿದ್ದ ಎಲ್ಲ ಮಾದರಿಯ ಸ್ಪರ್ಧೆಗಳು, ರಾಜ್ಯ ಸರಕಾರದ ಯೋಜನೆಗಳು, ಪಂಚ-ಗ್ಯಾರಂಟಿಗಳ ಬಗ್ಗೆಯೂ ಭರ್ಜರಿ ಪ್ರಚಾರ ನಡೆಸಲಾಗಿದೆ.

ಮತ್ಸ್ಯ ಲೋಕ, ಉಚಿತವಾಗಿ ಅಮ್ಯೂಸ್ಮೆಂಟ್ ಪಾರ್ಕ್ ಮೂಲಕ ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಮೂರು ದಿನಗಳ ವೇದಿಕೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿಗೆ ಪುರಸ್ಕಾರ, ಸನ್ಮಾನಗಳನ್ನು ನಡೆಸಲಾಗಿದೆ. ಶಾಲಾ-ಕಾಲೇಜುಗಳ ಮಕ್ಕಳಿಗೂ ಪ್ರತಿಭಾ ಪುರಸ್ಕಾರ, ಗ್ರಾಮ ದೇವತೆಗಳ ಮೆರವಣಿಗೆ, ಬಿಗ್ ಬಾಸ್ ಖ್ಯಾತಿಯ ಗಿಲ್ಲಿನಟ, ನಟ ಉಪೇಂದ್ರ, ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ ಸೇರಿದಂತೆ ಹಲವಾರು ತಾರೆಯರ ಮೂಲಕ ಸಂಭ್ರಮದ ಕಾರ್ಯಕ್ರಮ ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ ಕೋಟಿಗಟ್ಟಲೇ ಹಣವನ್ನು ಲೆಕ್ಕವಿಲ್ಲದೆ ಖರ್ಚು ಮಾಡಲಾಗಿದೆ. ಮೂರು ದಿನಗಳ ಕನಕೋತ್ಸವದೊಂದಿಗೆ ಎಲ್ಲ ಉತ್ಸವಗಳಲ್ಲಿಯು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾಣಿಸಿಕೊಂಡಿದ್ದು ಮತ್ತೊಂದು ವಿಶೇಷ.

ನಟ ಉಪೇಂದ್ರ ಅವರೊಂದಿಗೆ ಕಾಣಿಸಿಕೊಂಡ ಡಿಸಿಎಂ ಡಿ.ಕೆ.ಶಿವಕುಮಾರ್‌

ಉತ್ಸವಗಳಿಗೂ ಇದೇ ಕಾರಣ…

ಸಿಎಂ ರೇಸ್‌ ನಲ್ಲಿರುವ ಡಿ.ಕೆ.ಶಿವಕುಮಾರ್, ತನ್ನ ಬಲ ಹೆಚ್ಚಿಸಿಕೊಳ್ಳಲು ಈ ಮಾದರಿಯ ಉತ್ಸವಗಳನ್ನು ಆಯೋಜಿಸಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಈ ಹಿಂದೆ ಜಿಡಿಎಸ್ ವಶದಲ್ಲಿದ್ದ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಈ ಭಾರಿ ಕೈ ಪಾರುಪತ್ಯ ಸಾಧಿಸಿದೆ. ಹೀಗಾಗಿ ಇದೇ ಸಂಸ್ಕೃತಿಯನ್ನು ಮುಂದುವರಿಸುವ ಸಲುವಾಗಿ ಉತ್ಸವಗಳ ಮೂಲಕ ಮತದಾರರ ಮನದಲ್ಲಿ ಉಳಿದುಕೊಳ್ಳುವ ಕಸರತ್ತು ನಡೆಸಲಾಗುತ್ತಿದೆ. ಸಧ್ಯದಲ್ಲೇ ಗ್ರಾಮ ಪಂಚಾಯತಿ, ಜಿಪಂ, ತಾಪಂನೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಕೈ ಮೇಲಾಗಬೇಕೆಂಬ ಉದ್ದೇಶದಿಂದ ಉತ್ಸವಗಳ ಮೂಲಕ ವೇದಿಕೆ ಸಿದ್ದಪಡಿಸಿಕೊಳ್ಳುವ ಕೆಲಸ ನಡೆದಿದೆ. ರಾಮನಗರದಲ್ಲಿ ರಾಮೋತ್ಸವ ಹಾಗೂ ಚನ್ನಪಟ್ಟಣಕ್ಕೆ ಬೊಂಬೆಗಳ ಗಂಗೋತ್ಸವ, ಮಾಗಡಿಗೆ ಕೆಂಪೇಗೌಡ ಉತ್ಸವ ಎಂಬ ಹೆಸರಿಡುವ ಮೂಲಕ ಭಾವನಾತ್ಮಕವಾಗಿಯು ಮತದಾರರನ್ನು ಕಟ್ಟಿಹಾಕುವ ಕೆಲಸವನ್ನು ಡಿ.ಕೆ.ಸಹೋದರರು ಯಶ್ವಸಿಗೊಳಿಸಿದ್ದಾರೆ ಎನ್ನಬಹುದು.

ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ 5 ವಿಧಾನಸಭಾ ಕ್ಷೇತ್ರದಲ್ಲಿಯು ಉತ್ಸವ ಆಯೋಜಿಸಿ, ಪ್ರತಿ ಮನೆಗಳಿಗೂ ಉಡುಗೊರೆ ನೀಡಿದ್ದಾರೆ. ಈ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರಿಗೆ ಲಾಭ ಮಾಡಿಕೊಡುವ ಕೆಲಸವು ಸದ್ದಿಲ್ಲದೆ ನಡೆದಿದೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಎಲ್ಲ ಉತ್ಸವಗಳಿಗೂ ಡಿ.ಕೆ.ಸಹೋದದರೆ ಉಸ್ತುವಾರಿಗಳಾಗಿದ್ದರು. ಇದರೊಂದಿಗೆ ಮುಖ್ಯಮಂತ್ರಿಗಳ ಕನವರಿಕೆಯಲ್ಲಿಯುವ ಡಿ.ಕೆ.ಶಿವಕುಮಾರ್, ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸಿ, ತಮ್ಮ ಬಲಾಬಲ ಪ್ರದರ್ಶಿಸುವ ವೇದಿಕೆಯನ್ನು ಅಂತಿಮಗೊಳಿಸಿಕೊಂಡಿದ್ದಾರೆ ಎಂದೇ ವಿಶ್ಲೇಷಿಸಬಹುದಾಗಿದೆ.

ಕುಣಿಗಲ್ ನಲ್ಲಿ ಏಕೆ?

ಕುಣಿಗಲ್ ಶಾಸಕ ರಂಗನಾಥ್ ಗೆ ಡಿ .ಕೆ.ಸಹೋದರರು ಹತ್ತಿರದ ಸಂಬಂಧಿ. ಜತೆಗೆ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಣಿಗಲ್ ತಾಲೂಕು ವೀಲಿನಗೊಳಿಸಬೇಕೆಂಬ ಚರ್ಚೆಗಳು ನಡೆಯುತ್ತಿದೆ. ತುಮಕೂರಿನಿಂದ ಹೇಮಾವತಿ ನದಿ ನೀರನ್ನು ಗುರುತ್ವಾಕರ್ಷಣೆ ಮೂಲಕ ಮಾಗಡಿ ಕೆರೆಗಳಿಗೆ ಹರಿಸಬೇಕೆಂಬ ಯೋಜನೆಗೆ ತುಮಕೂರಿನಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಅಲ್ಲಿನ ಮತದಾರರನ್ನು ಸಮಧಾನಗೊಳಿಸುವುದರೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಕುಣಿಗಲ್ ವಿಧಾನಸಭಾ ಕ್ಷೇತ್ರವು ಸೇರಿದೆ. ಹೀಗಾಗಿ "ಒಂದೇ ಕಲ್ಲಿನಲ್ಲಿ ಅನೇಕ ಹಕ್ಕಿಗಳನ್ನು ಹೊಡೆದುರುಳಿಸುವ" ಸಲುವಾಗಿ ಕುಣಿಗಲ್ ಉತ್ಸವಕ್ಕೂ ಡಿ.ಕೆ.ಸಹೋದರರೆ ರಾಯಭಾರಿಗಳಾಗಿದ್ದರು.

ಒಕ್ಕಲಿಗರ ಕಾರಿಡಾರ್‌ನಲ್ಲಿಯೇ ತಂತ್ರ!

ಹಳೆ ಮೈಸೂರು ಭಾಗದಲ್ಲಿ ಹೆಚ್ಚಾಗಿರುವ ಒಕ್ಕಲಿಗರನ್ನು ಸೆಳೆಯುವುದು ಮಾತ್ರವಲ್ಲದೇ ತನ್ನದೇ ಆದ "ಒಕ್ಕಲಿಗರ ಕಾರಿಡಾರ್" ನಿರ್ಮಿಸಿಕೊಳ್ಳುವ ಯೋಜನೆಯಲ್ಲಿರುವ ಡಿ.ಕೆ.ಶಿವಕುಮಾರ್, ಈಗಾಗಲೇ ಅನೇಕ ಕಸರತ್ತುಗಳನ್ನು ನಡೆಸಿದ್ದಾರೆ. ಮಂಡ್ಯದ ಕೆಆರ್ ಎಸ್ ಡ್ಯಾಂನಲ್ಲಿ ಗಂಗಾರತಿ ಮಾದರಿಯಲ್ಲಿಯೇ 'ಕಾವೇರಿ ಆರತಿ', "ಅಮ್ಯೂಸ್ ಮೆಂಟ್ ಪಾರ್ಕ್" ನಿರ್ಮಾಣದ ಭರವಸೆ, ಬೆಂಗಳೂರು ದಕ್ಷಿಣದಲ್ಲಿ "ಉತ್ಸವಗಳ ಆಯೋಜನೆ", ಈ ಹಿಂದೆ ಮೇಕೆದಾಟು ಯೋಜನೆಗೆ ಆಗ್ರಹಿಸಿ 'ಪಾದಯಾತ್ರೆ', ಕರ್ನಾಟದಲ್ಲಿ ಕುಂಭಮೇಳ ನಡೆಸುವ ರೀತಿ ಟಿ.ನರಸೀಪುರದಲ್ಲಿಯು 'ಕುಂಭ ಮೇಳ' ನಡೆಸಿದ್ದು ಮಾತ್ರವಲ್ಲದೇ ಬೆಂಗಳೂರಿನಿಂದ ಮೈಸೂರಿನವರೆಗೂ ಬಿಜೆಪಿ ವಿರುದ್ಧ 'ಪಾದಯಾತ್ರೆ' ನಡೆಸಿದ್ದರು.

ಹಳೆ ಮೈಸೂರು ಭಾಗದಲ್ಲಿ ಭದ್ರವಾಗಿರುವ ಜೆಡಿಎಸ್ ಗೆ ಟಕ್ಕರ್ ನೀಡುವುದರೊಂದಿಗೆ ನಾನು ಸಹ ಒಕ್ಕಲಿಗ ನಾಯಕನೆಂದು ಗುರುತಿಸಿಕೊಳ್ಳುವ ಸಲುವಾಗಿ ಈಗಾಗಲೇ ಮೊದಲ ಹಂತದ ತಯಾರಿ ಪೂರ್ಣಗೊಳಿಸಿರುವ ಡಿ.ಕೆ.ಸಹೋದರರು, ಭವಿಷ್ಯದಲ್ಲಿ ಯಾವೆಲ್ಲ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ರಾಮನಗರದತ್ತ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸಕ್ತ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮತ್ತೆ ಕಣ್ಣಿಟ್ಟಿದ್ದು, ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ , ಬಿಜೆಪಿ ಮೈತ್ರಿಕೂಟದ ಬೆಂಬಲದಿಂದ ಮುಖ್ಯಮಂತ್ರಿ ಆಗುವ ಮಹದಾಸೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ವೈರಿ ಕುಮಾರಸ್ವಾಮಿ ಅವರ ಕನಸಿಗೆ ಕೊಳ್ಳಿ ಇಡುವುದೂ ಡಿ.ಕೆ. ಸೋದರರ ಲೆಕ್ಕಾಚಾರ ಇರಬಹುದು ಎಂಬ ಚರ್ಚೆಯೂ ಅವರ ಆಪ್ತಬಳಗದಿಂದ ವ್ಯಕ್ತವಾಗಿದೆ.

ರಾಜಕೀಯ ಲಾಭವಷ್ಟೆ

ವನ್ಯಜೀವಿಗಳ ಹಾವಳಿಯಿಂದ ರೈತರ ಬೆಳೆಗಳು ನಾಶಗೊಂಡಿವೆ. ಟೌನ್ ಶಿಪ್‌ ಗಾಗಿ ಭೂಮಿ ಕಳೆದುಕೊಳ್ಳುತ್ತಿರುವ ರೈತರು ಹೋರಾಟ ನಡೆಸುತ್ತಿದ್ದಾರೆ. ಭೂ ಸ್ವಾಧೀನದ ಸಮಸ್ಯೆಗಳಿವೆ. ಇಂತಹ ಸಮಸ್ಯೆಗಳಿಗೆ ಸ್ಪಂಧಿಸಿ, ಕ್ಷೇತ್ರದ ಅಭಿವೃದ್ಧಿ ಪಡಿಸಬೇಕಿರುವ ಶಾಸಕರುಗಳು ಉತ್ಸವದ ಮೂಲಕ ಮೋಜು ಮಾಡುತ್ತಿದ್ದಾರೆ ಎಂದು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರ ಸ್ವಾಮಿ “ದ ಫೆಡರಲ್ ಕರ್ನಾಟಕ”ದೊಂದಿಗೆ ಆಕ್ರೋಶ ವ್ಯಕ್ತ ಪಡಿಸಿದರು.

Read More
Next Story