
Recruitment Delay| ಸ್ಪರ್ಧಾರ್ಥಿಗಳ ಪ್ರತಿಭಟನೆಗೆ ಸರ್ಕಾರ ಬ್ರೇಕ್; ಹೈಕೋರ್ಟ್ ಮೆಟ್ಟಿಲೇರಲು ಸಂಘಟನೆಗಳ ನಿರ್ಧಾರ!
ಬಜೆಟ್ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಒಂದು ತಿಂಗಳೊಳಗೆ 56,432 ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿದ್ದರು. ಈಗ ತಿಂಗಳು ಕಳೆದರೂ ಅಧಿಸೂಚನೆ ಹೊರಡಿಸಿಲ್ಲ ಎಂಬುದು ಸ್ಪರ್ಧಾರ್ಥಿಗಳ ಆಕ್ರೋಶ.
ರಾಜ್ಯದಲ್ಲಿ ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಭರವಸೆ ನೀಡಿ ತಿಂಗಳು ಕಳೆದರೂ ನೇಮಕಾತಿ ಅಧಿಸೂಚನೆ ಆರಂಭಿಸದ ರಾಜ್ಯ ಸರ್ಕಾರದ ವಿರುದ್ಧ ಸ್ಪರ್ಧಾರ್ಥಿಗಳು ಮತ್ತೆ ಪ್ರತಿಭಟನೆಗೆ ಇಳಿದಿದ್ದಾರೆ. ಆದರೆ, ಧಾರವಾಡದಲ್ಲಿ ಕರೆ ನೀಡಿದ್ದ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ ಹಿನ್ನೆಲೆ ವಿದ್ಯಾರ್ಥಿ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿವೆ.
ಖಾಲಿ ಹುದ್ದೆಗಳ ಭರ್ತಿ, ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರೀಕ್ಷೆಯ ಫಲಿತಾಂಶದ ಅಕ್ರಮ ಸೇರಿದಂತೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ(ಕೆಪಿಎಸ್‌ಸಿ) ನಡೆದಿರುವ ಎಲ್ಲಾ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ಬುಧವಾರ (ಏ.8) ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದವು.
ಬಜೆಟ್ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಒಂದು ತಿಂಗಳೊಳಗಾಗಿ 56,432 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಈಗ ತಿಂಗಳು ಕಳೆದರೂ ಯಾವುದೇ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿಲ್ಲ. ಸರ್ಕಾರ ಕೇವಲ ಸ್ಪರ್ಧಾರ್ಥಿಗಳಿಗೆ ಭರವಸೆಯನ್ನಷ್ಟೇ ನೀಡುತ್ತಿದೆ. ಕಾರ್ಯರೂಪಕ್ಕೆ ತರುತ್ತಿಲ್ಲ. ಆದ್ದರಿಂದ ಪ್ರತಿಭಟನೆ ಅನಿವಾರ್ಯವಾಗಿದೆ ಎಂಬುದು ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸೇರಿ ವಿವಿಧ ಸಂಘಟನೆಗಳ ಆರೋಪ.
ನೇಮಕಾತಿ ಕ್ಯಾಲೆಂಡರ್ ಸಿದ್ದಪಡಿಸಲಿ
ʼಅಕ್ಸಾʼ ಸಂಘಟನೆ ಅಧ್ಯಕ್ಷ ಆರ್. ಕಾಂತಕುಮಾರ್ ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿ, "ಸರ್ಕಾರದಲ್ಲಿ ಖಾಲಿ ಇರುವ 2.80 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಧಾರವಾಡದಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಐದು ಸಲ ಹೋರಾಟ ಮಾಡಿದ್ದೇವೆ. ಫೆಬ್ರವರಿಯಲ್ಲಿ ನಡೆದ ಬೃಹತ್ ಹೋರಾಟದ ಫಲವಾಗಿ ಸಿಎಂ ಸಿದ್ದರಾಮಯ್ಯ ಒಂದು ತಿಂಗಳಲ್ಲಿ 56,432 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ನೇಮಕಾತಿ ಸಂಸ್ಥೆಗಳಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹಾಗೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ(ಕೆಪಿಎಸ್‌ಸಿ) ತಾವು ಅಧಿಸೂಚನೆ ಹೊರಡಿಸುವ ನೇಮಕದ ಬಗ್ಗೆ ಕ್ಯಾಲೆಂಡರ್ ತಯಾರಿ ಮಾಡಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸೂಚನೆ ನೀಡಬೇಕು" ಎಂದು ಆಗ್ರಹಿಸಿದರು.
ಮುಂದುವರಿದು, "ಪ್ರಮುಖವಾಗಿ ಕೆಪಿಎಸ್‌ಸಿಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹುದ್ದೆಗಳು ಶ್ರೀಮಂತರ ಪಾಲಾಗಲಿದ್ದು, ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಸರ್ಕಾರ ಒಂದು ಬಾರಿಗೆ ಐದು ವರ್ಷ ವಯೋಮಿತಿ ಹೆಚ್ಚಳ ಮಾಡಿದೆ. ಇದನ್ನು ಖಾಯಂಗೊಳಿಸಬೇಕು" ಎಂದು ಆಗ್ರಹಿಸಿದರು.
ಯುವಕರಿಗೆ ನಿರುದ್ಯೋಗ ಭಾಗ್ಯ
"ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಒಂದು ತಿಂಗಳಿಗೆ ಕನಿಷ್ಠ 6 ಸಾವಿರ ರೂ. ಹಣ ಬೇಕು. ಸರ್ಕಾರ ಶೀಘ್ರವೇ ಅಧಿಸೂಚನೆ ಹೊರಡಿಸಬಹುದು ಎಂಬ ಆಶಾಭಾವನೆಯಿಂದ ತರಬೇತಿ ಪಡೆಯಲು ಬಂದೆ. ಆದರೆ, ಸರ್ಕಾರ ಒಳ ಮೀಸಲಾತಿ ಕಾರಣ ನೀಡಿ ಇದುವರೆಗೂ ಅಧಿಸೂಚನೆ ಹೊರಡಿಸಿಲ್ಲ. ನನ್ನಂತೆ ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಸರ್ಕಾರ ಮಾತ್ರ ಯುವಕರಿಗೆ ನಿರುದ್ಯೋಗ ಭಾಗ್ಯ ನೀಡಿದೆ" ಎಂದು ಧಾರವಾಡದಲ್ಲಿ ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಂಜುನಾಥ್ ದಂಡಿಕೆರೆ ಬೇಸರ ವ್ಯಕ್ತಪಡಿಸಿದರು.
ಸರ್ಕಾರದಿಂದ ಸುಳ್ಳು ಭರವಸೆ
ಕೃಷಿ ಉಪನಿರ್ದೇಶಕ ಹುದ್ದೆ ಆಕಾಂಕ್ಷಿ ಪ್ರಕಾಶ್ ಎಚ್.ಕೆ. ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿ, "ಸ್ಪರ್ಧಾರ್ಥಿಗಳೆಂದರೆ ರಾಜಕಾರಣಿಗಳಿಗೆ ಅಸಡ್ಡೆಯಾಗಿದೆ. ಹೋರಾಟ ಮಾಡಿದಾಗ ಮಾತ್ರ ನೀಡುವ ಸುಳ್ಳು ಭರವಸೆಗಳನ್ನು ನಾವು ನಂಬುವುದಿಲ್ಲ. ಇವರ ಹೇಳಿಕೆಗಳಲ್ಲಿ ಸತ್ಯಾಂಶವಿಲ್ಲ. ಸರ್ಕಾರ ಅಧಿಸೂಚನೆ ಮಾಡುತ್ತದೆ ಎಂದು ಧಾರವಾಡದಲ್ಲಿ ಕಳೆದ ಐದು ವರ್ಷಗಳಿಂದ ಓದುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಅಧಿಸೂಚನೆ ಹೊರಡಿಸದೇ ಸರ್ಕಾರ ಸ್ಪರ್ಧಾರ್ಥಿಗಳ ಬಾಳಲ್ಲಿ ಆಟವಾಡುತ್ತಿದೆ. ಬಹುತೇಕ ಉತ್ತರ ಕರ್ನಾಟಕದ ವಿದ್ಯಾರ್ಥಿಗಳೇ ಹೆಚ್ಚಾಗಿದ್ದು, ಒಂದು ದಿನ ಕಳೆಯುವುದು ಇಲ್ಲಿ ದುಸ್ಥರವಾಗಿದೆ" ಎಂದರು.
ಮುಂದುವರಿದು, "ಎಷ್ಟೋ ವಿದ್ಯಾರ್ಥಿಗಳು ಹೊಟೇಲ್‌ಗಳಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಓದುತ್ತಿದ್ದಾರೆ. ಕೆಲವರಿಗೆ ವಯೋಮಿತಿ ಮೀರುವ ಭಯವೂ ಕಾಡುತ್ತಿದೆ. ನಮ್ಮ ಮೇಲೆ ಭರವಸೆ ಇಟ್ಟು ಪೋಷಕರು ಕಾಯುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಯಾವುದೇ ಅಧಿಸೂಚನೆ ಮಾಡುತ್ತಿಲ್ಲ. ಹೋರಾಟ, ಪ್ರತಿಭಟನೆ ಮಾಡಲು ನಾವಿಲ್ಲಿಗೆ ಬಂದಿಲ್ಲ. ನಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಂದಿದ್ದೇವೆ. ಕಳೆದ ಮೂರು ವರ್ಷದಿಂದ ನೇಮಕಾತಿಗಳು ಸ್ಥಗಿತವಾಗಿರುವುದರಿಂದ ಇದೀಗ ಹೋರಾಟ ಅನಿವಾರ್ಯ" ಎಂದು ಅಭಿಪ್ರಾಯಪಟ್ಟರು.
ರಾಜಕಾರಣಿಗಳಿಗೆ ಬದ್ಧತೆ ಇರಲಿ
ಕಳೆದ ಕೆಲವು ದಿನಗಳ ಹಿಂದೆ ರಾಜ್ಯಾದ್ಯಂತ ನಡೆದ ಹೋರಾಟ ಹಾಗೂ ಪ್ರಮುಖವಾಗಿ ಧಾರವಾಡದಲ್ಲಿ ನಡೆದ ಬೃಹತ್ ಪ್ರತಿಭಟನೆ ನಂತರ ಸಿಎಂ ಸಿದ್ದರಾಮಯ್ಯ ಬಿಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಣ ಎಂದು 56,432 ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಸ್ವತಃ ಹೇಳಿಕೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಇಲಾಖೆಗಳು ಅಧಿಸೂಚನೆಗೆ ಸಿದ್ದತೆ ನಡೆಸಿಲ್ಲ. ರಾಜಕಾರಣಿಗಳೆಗೆ ಬದ್ಧತೆ ಇದ್ದರೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಿತ್ತು. ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಆಡಳಿತ ಯಂತ್ರವೂ ಕುಸಿಯುತ್ತಿದೆ. ಇಲ್ಲಿಯವರೆಗೂ ಸರ್ಕಾರ ಅನೇಕ ಕಾರಣಗಳನ್ನು ನೀಡುತ್ತಾ ಅಧಿಸೂಚನೆಗಳನ್ನು ಮುಂದೂಡುತ್ತಲೇ ಇದೆ. ಆದಷ್ಟು ಶೀಘ್ರವಾಗಿ ಅಧಿಸೂಚನೆ ಹೊರಡಿಸದಿದ್ದರೆ ವಿದ್ಯಾರ್ಥಿಗಳು ನಿರಂತರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾರ್ಥಿ ಅಂಕೇಶ್ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಅನಿವಾರ್ಯ
ಹಾವೇರಿಯ ಚಿತ್ರಾ ಆರ್. ಮಾತನಾಡಿ, "ಕಳೆದ ಒಂದು ವರ್ಷದಿಂದ ಗ್ರೂಪ್ ʼಸಿʼ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಆದರೆ ರಾಜ್ಯ ಸರ್ಕಾರ ಹಲವು ಕಾರಣಗಳನ್ನು ನೀಡಿ ವಿದ್ಯಾರ್ಥಿಗಳ ದಾರಿ ತಪ್ಪಿಸುತ್ತಿದೆ. ನುಡಿದಂತೆ ನಡೆಯು ಸರ್ಕಾರ ಎಂದು ಹೇಳಿಕೊಳ್ಳುವ ಸಿಎಂ ಸಿದ್ದಾರಮಯ್ಯ ಅವರು ಯುವ ಜನತೆಗೆ ಉದ್ಯೋಗ ನೀಡುವಲ್ಲಿ ಮಾತು ತಪ್ಪಿದ್ದಾರೆ. ಸರ್ಕಾರ ನಿಗದಿತ ಅವಧಿಯಲ್ಲಿ ನೇಮಕಾತಿ ಮಾಡದಿದ್ದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ" ಎಂದರು.

