ಅಗ್ಗದ ಆಮದಿನ ಇಬ್ಬಂದಿ ನೀತಿ: ಡೇರಿ ಉದ್ಯಮಕ್ಕೆ ಜೀವ, ಸೋಯಾ ರೈತರಿಗೆ ಕಾದಿದೆ ಸಂಕಷ್ಟ
x

ಅಗ್ಗದ ಆಮದಿನ ಇಬ್ಬಂದಿ ನೀತಿ: ಡೇರಿ ಉದ್ಯಮಕ್ಕೆ ಜೀವ, ಸೋಯಾ ರೈತರಿಗೆ ಕಾದಿದೆ ಸಂಕಷ್ಟ

ಅಮೆರಿಕದಿಂದ ಸುಂಕವಿಲ್ಲದ ಧಾನ್ಯ ಆಧಾರಿತ ಮೇವು ಆಮದಿಗೆ ಅನುಮತಿ ನೀಡುವುದು ನಮ್ಮ ರೈತರಿಗೆ ಮಾಡುವ ಅನ್ಯಾಯ. ಯಾಕೆಂದರೆ, ಇದರ ಲಾಭ ಅಕ್ಕಿ ಮತ್ತು ಗೋಧಿ ಬೆಳೆಗಾರರಿಗೆ ಮಾತ್ರ ದೊರೆಯುತ್ತಿದೆ.


ಭಾರತ ಮತ್ತು ಅಮೆರಿಕ ನಡುವಿನ ಹೊಸ ಸುಂಕ ಒಪ್ಪಂದದಿಂದ ಪರಿಷ್ಕರಣೆ ಒಳಗಾಗಿರುವ ಸುಂಕದ ಲಾಭಗಳು ಭಾರತದ ಹಾಲು ಮತ್ತು ಮಾಂಸದ ಉದ್ಯಮಗಳಿಗೆ ದೊರೆಯಲಿದೆ. ಆದರೆ ಈಗ ಆಗಿರುವ ಬದಲಾವಣೆಯಿಂದ ಸೋಯಾಬೀನ್ ಬೆಳೆಗಾರರಿಗೆ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗಿದೆ.

ಅಮೆರಿಕದಿಂದ ಕಡಿಮೆ ಅಥವಾ ಶೂನ್ಯ ಸುಂಕದ ಮೂಲಕ ಡ್ರೈಯ್ಡ್ ಡಿಸ್ಟಿಲರ್ಸ್ ಗ್ರೇನ್ಸ್ ವಿದ್ ಸಾಲ್ಯುಬಲ್ಸ್ (ಕರಗಬಹುದಾದ ಪದಾರ್ಥಗಳನ್ನು ಹೊಂದಿರುವ ಒಣಗಿಸಿ ಬಟ್ಟಿ ಇಳಿಸಲಾದ ಧಾನ್ಯಗಳು -DDGS) ಆಮದು ಮಾಡಿಕೊಳ್ಳುವುದರಿಂದ ಭಾರತದ ಹಾಲು ಮತ್ತು ಮಾಂಸ ಉದ್ಯಮಗಳ ಉತ್ಪಾದನಾ ವೆಚ್ಚ ತಗ್ಗಲಿದೆ. ಆದರೆ ಸೋಯಾಬೀನ್ ಬೆಳೆಗಾರರು ಈ ಬದಲಾವಣೆಗೆ ಹೊಂದಿಕೊಳ್ಳಬೇಕಾಗುತ್ತದೆ. ಅದಕ್ಕೆ ಸಮಯ ನೀಡದೇ ಹೋದರೆ ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಪಿಟಿಐ ಸುದ್ದಿ ಸಂಸ್ಥೆಯ ಪ್ರಕಾರ ಮೊದಲ ಹಂತದಲ್ಲಿ 0.5 ದಶಲಕ್ಷ ಟನ್ ಡಿಡಿಜಿಎಸ್ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದು ದೇಶೀಯವಾಗಿ ಉತ್ಪಾದನೆಯಾಗುವ ಡಿಡಿಜಿಎಸ್-ನ ಸುಮಾರು ಐದನೇ ಒಂದು ಭಾಗದಷ್ಟಿದೆ.

ಡಿಡಿಜಿಎಸ್ ಎಂಬುದು ಮೆಕ್ಕೆಜೋಳ, ಜೋಳ ಮತ್ತು ಅಕ್ಕಿಯಿಂದ ಮದ್ಯವನ್ನು ತಯಾರಿಸುವ ಸಂದರ್ಭದಲ್ಲಿ ಸಿಗುವ ಒಂದು ಉಪ ಉತ್ಪನ್ನ. ಪಿಷ್ಟವನ್ನು ಮದ್ಯವಾಗಿ ಪರಿವರ್ತಿಸಲು ಯೀಸ್ಟ್ ಅಥವಾ ಕಿಣ್ವಗಳನ್ನು ಇಲ್ಲಿ ಬಳಕೆ ಮಾಡಲಾಗುತ್ತದೆ. ಇದು ಭರಪೂರ ಪ್ರೋಟೀನ್ ಮತ್ತು ಶಕ್ತಿಯಿಂದ ತುಂಬಿದ್ದು ದನಕರುಗಳು, ಹಂದಿ, ಕೋಳಿ ಮತ್ತು ಮೀನುಗಳಿಗೆ ಪೌಷ್ಟಿಕ ಆಹಾರವಾಗಿ ಆದ್ಯತೆ ಪಡೆದಿದೆ.

ಡಿಡಿಜಿಎಸ್-ಗೆ ಅಪಾರ ಬೇಡಿಕೆ

ತಳಿ ಪರಿವರ್ತನೆಯನ್ನು ಹೊಂದಿದ ಉತ್ಪನ್ನಗಳ ನಿಯಂತ್ರಕ ಸಂಸ್ಥೆಯಾದ ಜೆನೆಟಿಕ್ ಎಂಜಿನಿಯರಿಂಗ್ ಅಪ್ರೈಸಲ್ ಕಮಿಟಿ (GEAC)ಗೆ ಸಲ್ಲಿಕೆಯಾಗಿರುವ ಆಮದು ಮತ್ತು ದೇಶೀಯ ಉತ್ಪಾದನೆಗೆ ಸಂಬಂಧಿಸಿದ ಅರ್ಜಿಗಳ ಸಂಖ್ಯೆಯನ್ನು ಗಮನಿಸಿದರೆ ಡಿಡಿಜಿಎಸ್-ಗೆ ಎಷ್ಟರ ಮಟ್ಟಿಗೆ ಬೇಡಿಕೆಯಿದೆ ಎಂಬುದು ಸ್ಪಷ್ಟವಾಗುತ್ತದೆ. ಆಮದು ಮಾಡಿಕೊಳ್ಳುವ ಡಿಡಿಜಿಎಸ್-ನ್ನು ತಳಿಪರಿವರ್ತಿತ ಮೆಕ್ಕೆಜೋಳದಿಂದ ತಯಾರಿಸಲಾಗುವುದರಿಂದ ಈ ಸಂಸ್ಥೆಯ ಅನುಮತಿ ಪಡೆಯುವುದು ಅನಿವಾರ್ಯ.

ಭಾರತದಲ್ಲಿ ತಳಿ ಪರಿವರ್ತನೆ (ಜಿಎಂ) ಮಾಡಿದ ಮೆಕ್ಕೆಜೋಳದ ದೇಶೀಯ ಉತ್ಪಾದನೆಗೆ ಯಾವುದೇ ಅವಕಾಶವಿರುವುದಿಲ್ಲ. ಆದರೆ ಮೆಕ್ಕೆಜೋಳ ಅಥವಾ ಅಕ್ಕಿಯಿಂದ ಹೆಚ್ಚು ಪರಿಣಾಮಕಾರಿಯಾದ ಮದ್ಯವನ್ನು ತಯಾರಿಸಲು (ಪೆಟ್ರೋಲ್ ಬೆರೆಸಲು) ಜಿಎಂ ಯೀಸ್ಟ್ ತಳಿಗಳನ್ನು ಬಳಸಲು ಅರ್ಜಿಗಳನ್ನು ಸಲ್ಲಿಸಲಾಗುತ್ತದೆ. ತಳಿ ಪರಿವರ್ತನೆ ವಿಚಾರದಲ್ಲಿ ಭಾರತವು ಅತ್ಯಂತ ಕಟ್ಟುನಿಟ್ಟಾದ ನೀತಿಯನ್ನು ಅನುಸರಿಸುತ್ತಿದೆ. ಜಿಎಂ ಯೀಸ್ಟ್ ತಳಿಗಳ ಬಳಕೆಗೆ ಅನುಮತಿಯನ್ನು ನೀಡಲಾಗಿದೆಯಾದರೂ ಡಿಡಿಜಿಎಸ್ ಆಮದಿಗೆ ಸಂಬಂಧಿಸಿ 2017ರಲ್ಲಿ ಕರಡು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಯಿತು ಮತ್ತು 2018ರಲ್ಲಿ GEAC ಅದಕ್ಕೆ ಅಂಗೀಕಾರದ ಮುದ್ರೆ ಒತ್ತಿತು.

ಕಳೆದ ವರ್ಷ ಜುಲೈನಲ್ಲಿ ನಡೆದ ಸಭೆಯಲ್ಲಿ ಈ ಮಾರ್ಗಸೂಚಿಗಳನ್ನು ನವೀಕರಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಈಗ ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟಿನ ಹಿನ್ನೆಲೆಯಲ್ಲಿ ಇವುಗಳನ್ನು ಶೀಘ್ರದಲ್ಲಿಯೇ ಪ್ರಕಟಿಸುವ ಸಾಧ್ಯತೆ ಇದೆ.

ಅಮೆರಿಕದ ಡಿಡಿಜಿಎಸ್ ಗುಣಮಟ್ಟಕ್ಕೆ ಮೆಚ್ಚುಗೆ

ಅಮೆರಿಕದಲ್ಲಿರುವ ಡಿಡಿಜಿಎಸ್ ಗುಣಮಟ್ಟ ಅತ್ಯುತ್ತಮವಾಗಿದೆ ಎಂದು ವೆಂಕಟೇಶ್ವರ ಹ್ಯಾಚರೀಸ್ ಜನರಲ್ ಮ್ಯಾನೇಜರ್ ಮತ್ತು ನ್ಯಾಷನಲ್ ಎಗ್ ಕೋಅರ್ಡಿನೇಷನ್ ಕಮಿಟಿಯ ಸಿಇಒ ಕೆ.ಜಿ.ಆನಂದ್ ಅವರು ಮೆಚ್ಚುಗೆಯ ಮಾತನ್ನಾಡುತ್ತಾರೆ.

ಅಮೆರಿಕದ ನಿಯೋಗವು ತೋರಿಸಿದ ಮಾದರಿಗಳು ಅತ್ಯುತ್ತಮ ಗುಣಮಟ್ಟ ಹೊಂದಿದ್ದವು. ಅವುಗಳಲ್ಲಿ ಅಫ್ಲಾಟಾಕ್ಸಿನ್ (ಒಂದು ಬಗೆಯ ವಿಷಕಾರಿ ಅಂಶ) ಪ್ರಮಾಣ ಕಡಿಮೆಯಿತ್ತು. ಇದು ಭಾರತೀಯ ಡಿಡಿಜಿಎಸ್-ಗೆ ಹೋಲಿಸಿದರೆ ಉತ್ತಮ ಎಂದು ಅವರು ಹೇಳುತ್ತಾರೆ. ಇನ್ನೂ ಒಂದು ವ್ಯತ್ಯಾಸವೆಂದರೆ ಅಮೆರಿಕದ ಮೆಕ್ಕೆಜೋಳವನ್ನು ಯಂತ್ರಗಳ ಮೂಲಕ ಒಣಗಿಸಲಾಗುತ್ತದೆ. ಆದರೆ ಭಾರತದ ಮೆಕ್ಕೆಜೋಳವನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ ಎಂದು ವಿವರಿಸಿದರು.

ಆಮದು ಮಾಡಿಕೊಳ್ಳುವ ಈ ಮೇವು ಸೋಯಾಬೀನ್-ನಿಂದ ತಯಾರಿಸಿದ ಹಿಂಡಿಗಿಂತ ಅಗ್ಗವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಉತ್ಪಾದಕತೆಯ ಪ್ರಮಾಣ. ಅಮೆರಿಕದಲ್ಲಿ ಪ್ರತಿ ಹೆಕ್ಟೇರ್-ಗೆ ಹನ್ನೊಂದು ಟನ್ ಮೆಕ್ಕೆಜೋಳ ಬೆಳೆಯುತ್ತಾರೆ. ಆದರೆ ಭಾರತದಲ್ಲಿ ಸರಾಸರಿ ಉತ್ಪಾದಕತೆ ಕೇವಲ 3.4 ಟನ್ ಆಗಿದೆ. (ತಮಿಳು ನಾಡಿನಲ್ಲಿ ಈ ಪ್ರಮಾಣ 6.7 ಟನ್ ಇದೆ).

ಅಮೆರಿಕದ ಮೆಕ್ಕೆಜೋಳ ತಳಿಪರಿವರ್ತಿತ ಬೆಳೆ. ಮೆಕ್ಕೆಜೋಳವನ್ನು ಧಾನ್ಯದ ರೂಪದಲ್ಲಿ ಆಮದು ಮಾಡಿಕೊಳ್ಳಲು ಅನುಮತಿಯನ್ನು ನೀಡದೇ ಇದ್ದರೂ ಅದರಿಂದ ತಯಾರಿಸಿದ ಮೇವಿಗೆ ಅನುಮತಿ ನೀಡಲಾಗುತ್ತದೆ ಎಂದು ಭಾರತ-ಅಮೆರಿಕದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದಕ್ಕೆ ಪೂರ್ವಸಿದ್ಧತೆಯಾಗಿ ಭಾರತವು ಜಿಎಂ ಧಾನ್ಯ ಉತ್ಪನ್ನಗಳ ಆಮದು ಮೇಲಿರುವ ಸುಂಕೇತರ ತಡೆಗೋಡೆಗಳನ್ನು ಅಥವಾ ನಿಷೇಧವನ್ನು ಸಡಿಲಗೊಳಿಸಲಿದೆ.

ಸೋಯಾಬೀನ್ ಮುಖ್ಯವಾಗಿ ಪ್ರಾಣಿಗಳಿಗೆ ಮೇವಾಗಿ ಬಳಸುವ ಬೆಳೆಯಾಗಿದೆ. ಆದರೆ ಇದರಿಂದ ಎಣ್ಣೆಯನ್ನೂ ತೆಗೆಯಬಹುದಾಗಿದೆ. ಸೋಯಾಬೀನ್-ನಲ್ಲಿ ಇರುವ ಪ್ರೋಟೀನ್ ಅಂಶ-ಶೇ. 38 ರಿಂದ 55ರಷ್ಟು. ಎಣ್ಣೆಯ ಅಂಶ ಕೇವಲ ಶೇ. 18 ರಿಂದ 22ರಷ್ಟು. ಶೇ. 45ರಷ್ಟು ಪ್ರೋಟೀನ್ಯುಕ್ತವಾದ ಎಣ್ಣೆ ರಹಿತ ಸೋಯಾಬೀನ್ ಹಿಂಡಿ ಪ್ರತಿ ಕೇಜಿಗೆ ಸುಮಾರು 43 ರೂ.ಗೆ ಮಾರಾಟವಾಗುತ್ತದೆ.

ಆದರೆ ದೇಶೀಯ ಮೆಕ್ಕೆಜೋಳದಿಂದ ತಯಾರಿಸಿದ ಮತ್ತು ಶೇ. 27ರಷ್ಟು ಪ್ರೋಟೀನ್ಯುಕ್ತವಾಗಿರುವ ಡಿಡಿಜಿಎಸ್ ಪ್ರತಿ ಕೇಜಿಗೆ 24 ರೂ.ಗೆ ಲಭ್ಯ. ಪ್ರಾಣಿಗಳಿಗೆ ಬೇಕಾದ ಅದೇ ಪ್ರಮಾಣದ ಪ್ರೋಟೀನ್ ಪೂರೈಸಲು ಹೆಚ್ಚಿನ ಪ್ರಮಾಣದ ಡಿಡಿಜಿಎಸ್ ಬಳಸಿದರೂ ಇದು ಸೋಯಾಬೀನ್ ಹಿಂಡಿಗಿಂತ ಅಗ್ಗವಾಗಲಿದೆ. ಅಮೆರಿಕದ ಡಿಡಿಜಿಎಸ್ ಅದಕ್ಕೂ ಅಗ್ಗದ ದರದಲ್ಲಿ ಲಭ್ಯವಾಗಲಿದೆ.

ಆಮದು ಮಾಡಿಕೊಂಡ ಡಿಡಿಜಿಎಸ್ ರೈತರಿಗೆ ಭಾರೀ ಹೊಡೆತ ನೀಡುವುದು ಖಚಿತ ಎಂದು ಮಹಾರಾಷ್ಟ್ರದ ವ್ಯಾಪಾರಿಗಳ ಪರ ಸಂಘಟನೆಯಾದ ʼಶೇತ್ಕಾರಿ ಸಂಘಟನೆʼಯ ಮಾಜಿ ಅಧ್ಯಕ್ಷ ಅನಿಲ್ ಘನ್ವತ್ ಹೇಳುತ್ತಾರೆ. ಇದಕ್ಕೆ ಅವರು ಕಾರಣವನ್ನು ಕೂಡ ನೀಡುತ್ತಾರೆ; ಎಣ್ಣೆಯ ಅಂಶವನ್ನು ಹೊಂದಿರದ ಸೋಯಾಬೀನ್ ಹಿಂಡಿ ಸೋಯಾಬೀನ್ ಬೆಲೆಯನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸೋಯಾಬೀನ್-ನಲ್ಲಿ ಎಣ್ಣೆ ಮತ್ತು ಹಿಂಡಿಯ ಪ್ರಮಾಣ 20:30ರ ಅನುಪಾತದಲ್ಲಿ ಇರುತ್ತದೆ. 2020ರಿಂದ 2024ರ ನಡುವಿನ ಅವಧಿಯಲ್ಲಿ ಬಹುತೇಕ ಸಂದರ್ಭಗಳಲ್ಲಿ ಭಾರತೀಯ ಸೋಯಾಬೀನ್ ಬೆಲೆ ಜಾಗತಿಕ ಬೆಲೆಗಳಿಗಿಂತ ಅಧಿಕವಾಗಿತ್ತು.

2021ರ ನಾಲ್ಕನೇ ತ್ರೈಮಾಸಿಕದಲ್ಲಿ, ದೇಶೀಯ ಕೊರತೆಯನ್ನು ನೀಗಿಸಲು ಭಾರತವು ಜಿಎಂ ಸೋಯಾಬೀನ್ ಹಿಂಡಿಯ ಆಮದಿಗೆ ಅವಕಾಶ ನೀಡಿತು. ಆಗ ಬೆಲೆಗಳಲ್ಲಿ ತೀವ್ರ ಕುಸಿತ ಉಂಟಾಯಿತು.

ಭಾರತೀಯ ರೈತರಿಗೆ ಹೇಗೆ ಹಾನಿ?

ಡಿಡಿಜಿಎಸ್ ಆಮದಿನ ಪರಿಣಾಮವಾಗಿ ಹಿಂಡಿಯ ಬೆಲೆಯಲ್ಲಿ ಕುಸಿತ ಉಂಟಾಗುವುದರಿಂದ ಸೋಯಾಬೀನ್ ಕೃಷಿಯು ಲಾಭದ ಪ್ರಮಾಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಇದು ಮುಖ್ಯವಾಗಿ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಸುಮಾರು 13 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯುವ ರೈತರ ಮೇಲೆ ಭಾರಿ ಪರಿಣಾಮ ಬೀರುವುದು ನಿಶ್ಚಿತ. ಅತ್ಯಂತ ದಕ್ಷ ರೈತರು ಮಾತ್ರ ಈ ಪರಿಸ್ಥಿತಿಯನ್ನು ಎದುರಿಸಿ ಉಳಿಯುವ ಸಾಮರ್ಥ್ಯ ಹೊಂದಿದ್ದಾರೆ.

ಅಮೆರಿಕದಿಂದ ಶೂನ್ಯ ಅಥವಾ ಅತ್ಯಂತ ಕಡಿಮೆ ಸುಂಕದೊಂದಿಗೆ ಸೋಯಾಬೀನ್ ಎಣ್ಣೆಯನ್ನು ಆಮದು ಮಾಡಿಕೊಳ್ಳುವ ಕ್ರಮದಿಂದಲೂ ಸೋಯಾಬೀನ್ ಬೆಲೆಗಳ ಮೇಲೆ ಪರಿಣಾಮ ಬೀರಲಿದೆ. ಸದ್ಯ ಸೋಯಾಬೀನ್ ಎಣ್ಣೆಯ ಮೇಲೆ ಶೇ. 16.5 ರಷ್ಟು ಆಮದು ಸುಂಕವಿದೆ. ಕಳೆದ ತೈಲ ವರ್ಷದಲ್ಲಿ (ನವೆಂಬರ್ನಿಂದ ಅಕ್ಟೋಬರ್), ಭಾರತದ ಒಟ್ಟು ಖಾದ್ಯ ತೈಲ ಆಮದಿನಲ್ಲಿ ಸೋಯಾಬೀನ್ ಎಣ್ಣೆಯ ಪಾಲು ಶೇ. 34 ರಷ್ಟಿತ್ತು (ಅದಕ್ಕೂ ಹಿಂದಿನ ವರ್ಷ ಇದು ಶೇ. 22 ಇತ್ತು). ಪಾಮ್ ಆಯಿಲ್ ಮೇಲೆ ಹೆಚ್ಚಿನ ಆಮದು ಸುಂಕವಿದ್ದರೂ ಅದು ಅಗ್ಗವಾಗಿರುವ ಕಾರಣ ಅದನ್ನು ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಜಾರಿಗೆ ಬಂದ ನಂತರ ಅಡುಗೆ ಎಣ್ಣೆ ಆಮದಿನಲ್ಲಿ ಸೋಯಾ ಎಣ್ಣೆಯ ಪಾಲು ಖಂಡಿತವಾಗಿಯೂ ಹೆಚ್ಚಾಗಲಿದೆ.

ಒಂದು ಅನ್ಯಾಯದ ಒಪ್ಪಂದ

ಅಮೆರಿಕದಿಂದ ಕಡಿಮೆ ಅಥವಾ ಸುಂಕವಿಲ್ಲದ ಧಾನ್ಯ ಆಧಾರಿತ ಮೇವನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡುವುದು ನಮ್ಮ ರೈತರಿಗೆ ಮಾಡುವ ದೊಡ್ಡ ಅನ್ಯಾಯವಾಗಿದೆ. ಏಕೆಂದರೆ, ಅಮೆರಿಕವು ತನ್ನ ಕೃಷಿ ವಲಯಕ್ಕೆ ವಿವಿಧ ರೂಪಗಳಲ್ಲಿ ಸಬ್ಸಿಡಿಗಳನ್ನು ನೀಡುತ್ತದೆ (ಇವು ವ್ಯಾಪಾರಕ್ಕೆ ಅಡ್ಡಿಯಾಗುವುದಿಲ್ಲ ಎಂದು ಅದು ವಾದಿಸುತ್ತದೆ). ಭಾರತವು ಕನಿಷ್ಠ ಬೆಂಬಲ ಬೆಲೆಯ ಮೂಲಕ ರೈತರಿಗೆ ಬೆಂಬಲ ನೀಡುತ್ತದೆ ಎಂಬುದು ನಿಜವಾದರೂ, ಇದರ ಲಾಭವು ಮುಖ್ಯವಾಗಿ ಅಕ್ಕಿ ಮತ್ತು ಗೋಧಿ ಬೆಳೆಗಾರರಿಗೆ ಮಾತ್ರ ದೊರೆಯುತ್ತಿದೆ. ಯೂರಿಯಾ, ವಿದ್ಯುತ್ ಮತ್ತು ನೀರಿನಂತಹ ಇನ್ಪುಟ್ಗಳಿಗೆ ಸಬ್ಸಿಡಿ ನೀಡಲಾಗುತ್ತದೆಯಾದರೂ, ಅವು ಅಮೆರಿಕವು ತನ್ನ ಕೃಷಿ ಕ್ಷೇತ್ರಕ್ಕೆ ನೀಡುವ ಭಾರಿ ಬೆಂಬಲಕ್ಕೆ ಸರಿಸಮಾನವಾಗುವ ಸಾಧ್ಯತೆ ಕಡಿಮೆ.

ರೈತರು ಆಮದಾಗುವ ಸೋಯಾಬೀನ್ ಜೊತೆ ಪೈಪೋಟಿ ನಡೆಸಲು, ಸರ್ಕಾರವು ಅವರಿಗೆ ತಳಿ ಪರಿವರ್ತಿತ ಸೋಯಾಬೀನ್ ಬೆಳೆಯಲು ಅವಕಾಶ ನೀಡಬೇಕಾಗುತ್ತದೆ. ಅಮೆರಿಕದ ಸೋಯಾಬೀನ್-ನ್ನು ತಳಿಪರಿವರ್ತನೆ ಮಾಡುವಾಗ ಅದು ಕಾಂಡಕೊರಕ ಹುಳುಗಳಿಗೆ ವಿಷಕಾರಿಯಾಗುವಂತೆ ಮತ್ತು ಗ್ಲೈಫೋಸೇಟ್ ಎಂಬ ಕಳೆನಾಶಕವನ್ನು ಸಹಿಸಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ.

ಕೀಟಗಳಿಂದ ಉಂಟಾಗುವ ನಷ್ಟವನ್ನು ತಡೆಯುವ ಮೂಲಕ ಮತ್ತು ಬೆಳೆಯು ಕಳೆಗಳೊಂದಿಗೆ ಪೋಷಕಾಂಶಗಳನ್ನು ಹಂಚಿಕೊಳ್ಳುವ ಬದಲು ತಾನೇ ಸಂಪೂರ್ಣವಾಗಿ ಹೀರಿಕೊಳ್ಳುವಂತೆ ಮಾಡುವ ಮೂಲಕ, ಉತ್ಪಾದಕತೆ ಸುಧಾರಿಸುತ್ತದೆ ಮತ್ತು ಉತ್ಪಾದನಾ ವೆಚ್ಚವು ಕಡಿಮೆಯಾಗುತ್ತದೆ.

ಪೇಟೆಂಟ್ (ಸ್ವಾಮ್ಯದ ಹಕ್ಕು) ಸಮಸ್ಯೆಗಳ ಕಾರಣದಿಂದಾಗಿ ಖಾಸಗಿ ವಲಯವು ತಳಿಪರಿವರ್ತಿತ ಸೋಯಾಬೀನ್ ಬೀಜಗಳನ್ನು ಉತ್ಪಾದಿಸಲು ಆಸಕ್ತಿ ತೋರಿಸದೇ ಇರಬಹುದು. ಅಂತಹ ಸಂದರ್ಭದಲ್ಲಿ ಸಾರ್ವಜನಿಕ ವಲಯವು (ಸರ್ಕಾರಿ ಸಂಸ್ಥೆಗಳು) ಈ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ.

Read More
Next Story