
Human-Elephant Conflict| 'ಕಾಫಿ ನಾಡಿನ ಆನೆ'ಗಳ ಸಿಟ್ಟಿಗೆ ಏಳು ಅಮಾಯಕರ ಬಲಿ! ಮಲೆನಾಡಿಗರ ಆಕ್ರೋಶ
ಕಾಫಿನಾಡಿನ ಅನೆಗಳ ಆವಾಸದ ಬಳಿ ರೆಸಾರ್ಟ್‌ಗಳು, ಲೇಔಟ್‌ಗಳು ತಲೆ ಎತ್ತುತ್ತಿವೆ. ಆನೆಗಳೂ ಮನುಷ್ಯ ವಾಸದೆಡೆಗೆ ನುಗ್ಗುತ್ತಿವೆ. ಕೊಡಗಿನಲ್ಲಿ ಹತ್ತೇ ದಿನದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಕಾಡಾನೆ ಮತ್ತು ಪಳಗಿದ ಆನೆಗಳ ನಡುವೆ 'ಕಾಫಿ ನಾಡಿನ ಆನೆಗಳು' ಎಂಬ ಹೊಸ ತಳಿಯೊಂದು ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಕಾಫಿ ತೋಟಗಳು ಕಾಂಕ್ರೀಟ್ ಕಾಡುಗಳಾಗುವತ್ತ ದಾಪುಗಾಡಲಿಡುತ್ತಿರುವುದು ʼಕಾಫಿನಾಡಿನ ಆನೆಗಳʼ ಆವಾಸ ಸ್ಥಾನಕ್ಕೇ ಕಂಟಕವಾಗಿದೆ! ಇದು ಸ್ಥಳೀಯ ಕಾಫಿ ತೋಟಗಳ ಮಾಲೀಕರು, ಕಾರ್ಮಿಕರ ಜೀವಕ್ಕೂ ಮಾರಕವಾಗುತ್ತಿದೆ !
ಕಾಫಿನಾಡಿನ ಅನೆಗಳ ಆವಾಸಕ್ಕೆ ತೊಂದರೆಯಾದರೆ ಏನಾಗುತ್ತದೆ ಎನ್ನುವುದಕ್ಕೆ ಕೊಡಗು ಜಿಲ್ಲೆಯೊಂದರಲ್ಲೇ ಕೇವಲ ಹತ್ತು ದಿನಗಳಲ್ಲಿ ಮೂವರು ಅಮಾಯಕರು ಆನೆಗಳ ದಾಳಿಯಿಂದ ಪ್ರಾಣ ಕಳೆದುಕೊಂಡಿರುವುದು ಕೆಟ್ಟ ಉದಾಹರಣೆಯಾಗಿವೆ. ಒಟ್ಟಾರೆಯಾಗಿ ಕಾಫಿನಾಡಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ವರ್ಷದ ಜನವರಿ ಬಳಿಕ ಒಟ್ಟು ಏಳು ದುರ್ಘಟನೆಗಳು ಸಂಭವಿಸಿವೆ.
ಕೊಡಗು ಜಿಲ್ಲೆಯ ವಿರಾಜಪೇಟೆಯ ವ್ಯಕ್ತಿಯೊಬ್ಬರು ಇತ್ತೀಚೆಗೆ ಆನೆದಾಳಿಗೆ ಒಳಗಾಗಿ ಮೃತಪಟ್ಟ ಬಳಿಕ ಈ ವಿಷಯ ಮುನ್ನೆಲೆಗೆ ಬಂದಿದೆ. ಕಾಫಿನಾಡನ್ನು ರೆಸಾರ್ಟ್, ವಸತಿ ಬಡಾವಣೆಗಳಾಗಿ ಬದಲಾಯಿಸುತ್ತಿರುವುದು ʼದಿಕ್ಕುತಪ್ಪಿದ ಆನೆʼಗಳು ದಿಕ್ಕಾಪಾಲಾಗಿ ಮನುಷ್ಯನಿಗೇ ಮಾರಕವಾಗುತ್ತಿರುವ ಘಟನೆ ಇದಾಗಿದೆ!
ಗಮನಸೆಳೆದ ಘಟನೆ!
ಆನೆ ದಾಳಿಯಿಂದಾಗಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ 49 ವರ್ಷದ ಚೌರೀರ ಗಣಪತಿ (ಗಪ್ಪಣ್ಣ) ದಾರುಣವಾಗಿ ಮೃತಪಟ್ಟಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಗಣಪತಿ ಮಾ.12ರಂದು ಬೆಳಗ್ಗೆ ಸುಮಾರು 11 ಗಂಟೆಯ ಸಮಯದಲ್ಲಿ ತಮ್ಮ ಕಾಫಿ ತೋಟಕ್ಕೆ ತೆರಳಿದ್ದಾಗ ಏಕಾಏಕಿ ಆನೆಯೊಂದು ಎದುರಾಗಿದೆ. ಪ್ರಾಣ ಭಯದಿಂದ ಓಡಲು ಯತ್ನಿಸಿದ ಗಣಪತಿ ಅವರು ಆಯತಪ್ಪಿ ಕೆಳಗೆ ಬಿದ್ದಾಗ, ಆನೆ ಅವರನ್ನು ತುಳಿದು ಸಾಯಿಸಿದೆ. ಈ ಘಟನೆಯಿಂದ ಅವರ ತೋಟದ ಮೇಲ್ವಿಚಾರಕ ನೌಶಾದ್ ಅವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ನಂತರ ರೊಚ್ಚಿಗೆದ್ದ ಸ್ಥಳೀಯರು, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದ ಮುಂದೆ ತೀವ್ರ ಪ್ರತಿಭಟನೆ ನಡೆಸಿದ್ದರು. ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಅಮಾಯಕರ ಸಾವಿಗೆ ಕಾರಣ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಈ ಘಟನೆಯ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆಯು, ನೂರಕ್ಕೂ ಹೆಚ್ಚು ಸಿಬಂದಿ ಮತ್ತು ಸಾಕಾನೆಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ, ಹುಂಡಿ ಗ್ರಾಮದ ಕ್ರೇಗ್‌ಮೋರ್ ತೋಟದಲ್ಲಿ ಬೀಡುಬಿಟ್ಟಿದ್ದ ಆನೆಯನ್ನು ಸೆರೆಹಿಡಿದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ಕ್ಯಾಂಪ್‌ಗೆ ಸ್ಥಳಾಂತರಿಸಿದೆ.
ಈ ಹಿಂದೆಯೂ ಆನೆ ದಾಳಿ!
ಕೇವಲ ಹತ್ತು ದಿನಗಳ ಅಂತರದಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮೂವರು ಬಲಿಯಾಗಿದ್ದಾರೆ. ಫೆ.28 ರಂದು ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ 17 ವರ್ಷದ ಪಿಯುಸಿ ವಿದ್ಯಾರ್ಥಿನಿ ಪೂಜಾ ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಳು. ಅದಾದ ಕೆಲವೇ ದಿನಗಳಲ್ಲಿ, ಮಾ.9 ರಂದು ಕುಶಾಲನಗರ ತಾಲೂಕಿನ ವಾಲ್ನೂರು ಸಮೀಪದ ಬಾಳೆಗುಂಡಿ ಬಳಿ 55 ವರ್ಷದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಜಲಜಾಕ್ಷಿ ಅವರನ್ನು ಕಾಡಾನೆ ತುಳಿದು ಸಾಯಿಸಿತ್ತು. ಇದೀಗ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ 49 ವರ್ಷದ ಚೌರೀರ ಗಣಪತಿ (ಗಪ್ಪಣ್ಣ) ಬಲಿಯಾಗಿದ್ದಾರೆ.
ಜನವರಿ 29 ರಂದು ಸಿದ್ದಾಪುರ ಸಮೀಪದ ಬಡಗ-ಬಾಣಂಗಾಲ ಗ್ರಾಮದ ಕಾಫಿ ಎಸ್ಟೇಟ್‌ನಲ್ಲಿ ವಾಚ್‌ಮ್ಯಾನ್ ಆಗಿದ್ದ ಅಬ್ದುಲ್ ಲತೀಫ್ (72) ಮಧ್ಯಾಹ್ನದ ವೇಳೆ ಆನೆ ದಾಳಿಯಿಂದ ಸಾವನ್ನಪ್ಪಿದ್ದರು. ಈ ಘಟನೆ ಸೇರಿದರೆ, ಜನವರಿಯಿಂದ ಇದುವರೆಗೆ ಕೊಡಗಿನಲ್ಲಿಯೇ ನಾಲ್ವರು ಆನೆ ದಾಳಿಗೆ ಈಡಾಗಿ ಮೃತರಾಗಿದ್ದಾರೆ!
ಚಿಕ್ಕಮಗಳೂರು, ಹಾಸನದಲ್ಲೂ ಕಾಫಿನಾಡಿನ ಆನೆಗಳ ದಾಳಿ!
ಫೆಬ್ರವರಿ 21 ರಂದು ಚಿಕ್ಕಮಗಳೂರು ಭಾಗದಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬಳು ಬಲಿಯಾಗಿದ್ದರು. ಫೆಬ್ರವರಿ 16 ರಂದು ಕಾಡನೆ ದಾಳಿಗೆ 50 ವರ್ಷದ ಕಾರ್ಮಿಕ ಮಹಿಳೆ ಮೃತ ಪಟ್ಟಿದ್ದಳು.
ಜನವರಿ 13 ರಂದು ಸಕಲೇಶಪುರ ತಾಲೂಕಿನಲ್ಲಿ ಕಾಫಿ ತೋಟದ ಕಾರ್ಮಿಕರಾಗಿದ್ದ ಶೋಭಾ (42 ) ಎನ್ನುವವರು ಕಾಡಾನೆ ದಾಳಿಯಿಂದ ಮೃತಪಟ್ಟರು. ಇವರಲ್ಲದೆ, ಬೆಳ್ಳಾವರ ಹಾಗೂ ಬೇಲೂರು ತಾಲೂಕಿನ ವಿವಿಧೆಡೆ ಆನೆ ದಾಳಿಯ ಘಟನೆಗಳು ವರದಿಯಾಗಿದ್ದು, ಜನವರಿಯಲ್ಲಿ ಓರ್ವ ಮಹಿಳೆಯ ಸಾವಿಗೆ ಕಾರಣವಾಗಿದ್ದ ಆನೆಯನ್ನು ಸೆರೆಹಿಡಿಯಲಾಗಿತ್ತು. ಆದರೆ, ಈ ಎಲ್ಲ ದಾಳಿಗಳು ಕಾಫಿ ತೋಟದ ಬಳಿಯೇ ನಡೆದಿರುವುದು, ವಿಶೇಷ. ಹೀಗಾಗಿ, ಕಾಫಿ ನಾಡಿನ ಆನೆಗಳೆ ಈ ಕೃತ್ಯ ನಡೆಸಿವೆ ಎನ್ನಲಾಗಿದೆ.
ಕಾಫಿ ತೋಟಗಳಿಲ್ಲದೇ ದಾಳಿ!
ಈ ಹಿಂದೆ ಸುಮಾರು 2,400 ಎಕರೆಗಳಷ್ಟು ವಿಸ್ತಾರವಾಗಿದ್ದ ಬೃಹತ್ ಕಾಫಿ ತೋಟವು ನೂರಾರು ಕಾಡಾನೆಗಳಿಗೆ ನೈಸರ್ಗಿಕ ಆಶ್ರಯ ತಾಣವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ನಿತ್ಯಹರಿದ್ವರ್ಣದ ಕಾಫಿ ತೋಟವನ್ನು ಪರಿಸರವಾದಿಗಳ ವಿರೋಧದ ನಡುವೆಯೂ ವಸತಿ ಬಡಾವಣೆಗಳು ಹಾಗೂ ರೆಸಾರ್ಟ್ ನಿವೇಶನಗಳಾಗಿ ಪರಿವರ್ತಿಸಲಾಗಿದೆ. ಸಾವಿರಾರು ಮರಗಳನ್ನು ಕಡಿದು ಅಲ್ಲಿನ ಜೀವ ವೈವಿಧ್ಯತೆಯನ್ನು ನಾಶಪಡಿಸಿರುವುದರಿಂದ, ವರ್ಷಾನುಗಟ್ಟಲೆ ಅಲ್ಲಿ ಆಶ್ರಯ ಪಡೆದಿದ್ದ ಕಾಡಾನೆಗಳ ಹಿಂಡುಗಳು ದಿಕ್ಕುತಪ್ಪಿವೆ. ತಮ್ಮ ನೈಸರ್ಗಿಕ ಆವಾಸಸ್ಥಾನ ಕಳೆದುಕೊಂಡ ಆನೆಗಳು ಆಹಾರ ಮತ್ತು ಆಶ್ರಯ ಅರಸಿ ಅನಿವಾರ್ಯವಾಗಿ ಸಮೀಪದ ಜನವಸತಿ ಪ್ರದೇಶಗಳು ಮತ್ತು ಸಣ್ಣ ಬೆಳೆಗಾರರ ತೋಟಗಳಿಗೆ ನುಗ್ಗುತ್ತಿವೆ. ಬೃಹತ್ ಕಾಫಿ ಎಸ್ಟೇಟ್‌ಗಳು ನೈಸರ್ಗಿಕ ಸಂಪನ್ಮೂಲಗಳನ್ನು ವಾಣಿಜ್ಯೀಕರಣಗೊಳಿಸುತ್ತಿರುವುದೇ ಗಣಪತಿ ಅವರಂತಹ ಅಮಾಯಕರ ಬಲಿಗೆ ಪ್ರಮುಖ ಕಾರಣವಾಗಿದೆ ಎಂಬುದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಆರೋಪಿಸಿದೆ.
ಸರ್ಕಾರವು ಇನ್ನಾದರೂ ಎಚ್ಚೆತ್ತುಕೊಂಡು, ಮನುಷ್ಯರು ಮತ್ತು ವನ್ಯಜೀವಿಗಳ ನಡುವಿನ ಈ ಗಂಭೀರ ಸಮಸ್ಯೆಯನ್ನು ಕೇವಲ ಕಾನೂನಿನ ಚೌಕಟ್ಟಿನಲ್ಲಿ ನೋಡದೆ, ಅತ್ಯಂತ ಸೂಕ್ಷ್ಮ ಹಾಗೂ ಮಾನವೀಯ ದೃಷ್ಟಿಕೋನದಿಂದ ಪರಿಹರಿಸಲು ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಒತ್ತಾಯಿಸಿದ್ದಾರೆ.
ಏನಿದು ಕಾಫಿ ನಾಡಿನ ಆನೆ
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಗಳು ಮತ್ತೆ ಕಾಡಿಗೆ ಮರಳದೆ ಕಾಫಿ ತೋಟಗಳಲ್ಲೇ ಬೀಡುಬಿಟ್ಟಿದ್ದು, ಅಲ್ಲೇ ಮರಿ ಹಾಕುತ್ತಿವೆ. ಈ ಮರಿಗಳಿಗೆ ಕಾಡಿನ ಪರಿಚಯವೇ ಇಲ್ಲದೆ, ಕೇವಲ ಕಾಫಿ ತೋಟಗಳನ್ನೇ ತಮ್ಮ ಆವಾಸಸ್ಥಾನವನ್ನಾಗಿ ಮಾಡಿಕೊಂಡು ಬೆಳೆಯುತ್ತಿರುವುದು ಪಶ್ಚಿಮ ಘಟ್ಟ ಪ್ರದೇಶಗಳಾದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕರಾವಳಿಯ ಕೆಲವು ಭಾಗಗಳಲ್ಲಿ ಅರಣ್ಯ ಇಲಾಖೆ ಹಾಗೂ ಬೆಳೆಗಾರರಿಗೆ ಹೊಸ ಸವಾಲಾಗಿ ಪರಿಣಮಿಸಿದೆ !
ಹೀಗಾಗಿ, ಈ ಭಾಗದ ಕಾಫಿ ನಾಡಿನ ಆನೆಗಳು ಸಾಮಾನ್ಯವಾಗಿ ಕಾಫಿ ಬೆಳೆ ತಿನ್ನುವ ಮೂಲಕವೇ ನಾಡಿನಲ್ಲಿಯೇ ಉಳಿದುಕೊಳ್ಳುತ್ತಿವೆ. ಹೀಗಾಗಿ ವನ್ಯಜೀವಿ-ಮಾನವ ಸಂಘರ್ಷಗಳು ಇನ್ನಷ್ಟು ಹೆಚ್ಚಾಗುತ್ತಿದೆ. 2023ರಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ನಡೆಸಿದ ಆನೆ ಗಣತಿಯ ಪ್ರಕಾರ, ಕರ್ನಾಟಕವು 6,395 ಆನೆಗಳೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 2017ರ ಗಣತಿಗೆ ಹೋಲಿಸಿದರೆ ರಾಜ್ಯದಲ್ಲಿ ಆನೆಗಳ ಸಂಖ್ಯೆ 346ರಷ್ಟು ಹೆಚ್ಚಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶದ ಹೊರಗಿರುವ 935 ಆನೆಗಳ ಪೈಕಿ ಸುಮಾರು 161 ಆನೆಗಳು ನೇರವಾಗಿ ಕಾಫಿ ಎಸ್ಟೇಟ್‌ಗಳಂತಹ ಖಾಸಗಿ ಜಮೀನುಗಳಲ್ಲಿಯೇ ಪತ್ತೆಯಾಗಿವೆ. ಇವು ಕಾಫಿ ತೋಟಗಳನ್ನೇ ತಮ್ಮ ಖಾಯಂ ನೆಲೆಯಾಗಿಸಿಕೊಂಡುಬಿಟ್ಟಿವೆ.
ಈ ಆನೆಗಳು ಕಾಫಿ ತೋಟಗಳಲ್ಲಿಯೆ ನೆಲೆಸುತ್ತವೆ. ಹೀಗಾಗಿ, ಹಿಂದೆಂದೂ ಕಾಡನ್ನು ನೋಡಿಯೇ ಇರದ ಇಂತಹ ಆನೆಗಳನ್ನು ಎಷ್ಟೇ ಪ್ರಯತ್ನಿಸಿದರೂ, ಅವುಗಳನ್ನು ಅಲ್ಲಿಂದ ಓಡಿಸಲು ಸಾಧ್ಯವಾಗುತ್ತಿಲ್ಲ. ಅವುಗಳನ್ನು ಕಾಡಿಗೆ ಅಟ್ಟಿದರೂ ಮತ್ತೆ ತಮ್ಮ 'ಮೂಲ ನೆಲೆ'ಯಾದ ಕಾಫಿ ತೋಟಗಳಿಗೇ ಹಿಂತಿರುಗುತ್ತವೆ. ಈ ಆನೆಗಳು ಕಾಫಿ ತೋಟಗಳಲ್ಲಿ ಸಿಗುವ ಹಲಸು, ತೆಂಗು, ಬಿದಿರು, ಬಾಳೆ ಮತ್ತು ಕಬ್ಬು ತಿನ್ನಲು ಹಾಗೂ ಅಲ್ಲಿನ ಕೆರೆ ಕುಂಟೆಗಳ ನೀರಿಗೆ ಒಗ್ಗಿಕೊಂಡಿವೆ. ಪ್ರಮುಖವಾಗಿ ಕಾಫಿ ಸೀಸನ್‌ನಲ್ಲಿ ಇತರ ಆಹಾರ ಸಿಗದಿದ್ದಾಗ ಅವು ಕಾಫಿ ಹಣ್ಣುಗಳನ್ನೇ ತಿನ್ನುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಆನೆಗಳ ಲದ್ದಿಯಲ್ಲಿ ಕಾಫಿ ಬೀಜಗಳು ಹೇರಳವಾಗಿ ಪತ್ತೆಯಾಗುತ್ತಿವೆ.
ಕಾಫಿ ನಾಡಿನ ಆನೆಯಿಂದಲೂ ದಾಳಿ
ಈ 'ಕಾಫಿ ನಾಡಿನ ಆನೆಗಳು' ಕಾಡಾನೆಗಳಷ್ಟು ಅಪಾಯಕಾರಿಯಲ್ಲ. ಅವು ಮನುಷ್ಯರ ವಾಸನೆ ಮತ್ತು ಸಾಮೀಪ್ಯಕ್ಕೆ ಒಗ್ಗಿಕೊಂಡಿವೆ. ಆದರೆ, ಬೆದರಿಸಿದಾಗ, ಪಟಾಕಿ ಸಿಡಿಸಿದಾಗ ಅಥವಾ ಅವುಗಳ ಗುಂಪಿಗೆ ತೊಂದರೆಯಾದಾಗ ಮಾತ್ರ ರಕ್ಷಣೆಗಾಗಿ ಹೆದರಿ ದಾಳಿ ಮಾಡುತ್ತವೆ ಎನ್ನುತ್ತಾರೆ ಎನ್ನುತ್ತಾರೆ ಅಧಿಕಾರಿಗಳು.
ಆದರೆ, ಅವುಗಳನ್ನು ಓಡಿಸಲು ಪಟಾಕಿ ಸಿಡಿಸಿದಾಗ ಗಾಬರಿಗೊಂಡು ಓಡುವ ಭರದಲ್ಲಿ ಗಿಡಮರಗಳನ್ನು ಬೇರುಸಹಿತ ಕಿತ್ತು ಹಾಕುತ್ತವೆ. ಈ ವೇಳೆ ದಾಳಿ ಮಾಡುವ ಸಾಧ್ಯತೆಗಳಿವೆ. ಇದರೊಂದಿಗೆ ಆನೆಗಳ ಆವಾಸ ಸ್ಥಾನವಾಗಿದ್ದ ಕಾಫಿ ತೋಟಗಳು ಕ್ಷೀಣಿಸಿದರೂ, ಸಹ ನೆಲೆ ಕಳೆದುಕೊಳ್ಳುವ ಕಾಫಿನಾಡಿನ ಆನೆಗಳು ದಿಕ್ಕೆಟ್ಟು ದಾಳಿ ಮಾಡುವ ಸಾಧ್ಯತೆಗಳಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಈ ಬಗ್ಗೆ ಮಡಿಕೇರಿಯ ರೈತ ಸಂಘದ ಮನು ಸೋಮಯ್ಯ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, ಈ ಹಿಂದೆ ಹಲಸಿನಹಣ್ಣು ಹಣ್ಣಾಗುವ ವೇಳೆಯಷ್ಟು ಆನೆಗಳು ನಾಡಿನತ್ತ ಬರುತ್ತಿದ್ದವು. ಆದರೀಗ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಆನೆಗಳ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಇಂತಹ ವಿಚಾರಗಳು ಜೀವಂತವಾಗಿರಿಸುವ ಮೂಲಕ ಸರಕಾರದ ಖಜಾನೆ ಲೂಟಿ ಮಾಡಲಾಗುತ್ತಿದೆ. ಕಾಡಂಚಿನ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ರೆಸಾರ್ಟ್‌ಗಳಿಂದಾಗಿ ಕೊಡಗಿನ ಆನೆಗಳ ಸಹ ಆವಾಸ ಸ್ಥಾನ ಕಳೆದುಕೊಳ್ಳುತ್ತಿದೆ. ಕಾಫಿ ತೋಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಆನೆಗಳಿಗೆ ಈಗ ಕಾಫಿ ತೋಟಗಳ ಸಂಖ್ಯೆಯೇ ಕಡಿಮೆಯಾಗಿ, ರಸ್ತೆಗಿಳಿದಿವೆ. ಮೊದಲು ಅರಣ್ಯ ಟೂರಿಸಂ ಎನ್ನುವುದನ್ನು ನೂರಕ್ಕೆ ನೂರರಷ್ಟು ಸ್ಥಗಿತಗೊಳಿಸಬೇಕು. ಆಗಷ್ಟೆ ಆನೆಗಳು ಜನವಸತಿ ಪ್ರದೇಶಕ್ಕೆ ಲಗ್ಗೆ ಇಡುವುದನ್ನು ತಪ್ಪಿಸಬಹುದಾಗಿದೆ ಎಂದಿದ್ದಾರೆ.

