
ಗಡಿ ದಾಟಿದ 'ಸಿದ್ದು' ವರ್ಚಸ್ಸು: ತ. ನಾಡಿನಲ್ಲಿ ಕನ್ನಡಿಗರ, ಅಹಿಂದ ಮತಬೇಟೆಗೆ ʼರಾಮಯ್ಯʼ?
ತಮಿಳುನಾಡಿನ ಗಡಿ ಭಾಗದ ಜಿಲ್ಲೆಗಳಲ್ಲಿ ನೆಲೆಸಿರುವ ಲಕ್ಷಾಂತರ ಕನ್ನಡಿಗರು, ಕುರುಬ ಸಮುದಾಯದ ಜನರಿಗೆ ಸಿದ್ದರಾಮಯ್ಯ ಒಬ್ಬ ಪ್ರಮುಖ ನಾಯಕ. ಈ ಹಿನ್ನೆಲೆಯಲ್ಲಿ, ಚುನಾವಣಾ ಅಖಾಡದಲ್ಲಿ ಪ್ರಚಾರ ಕೈಗೊಳ್ಳುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಕೇವಲ ಕನ್ನಡಿಗರಿಗಷ್ಟೇ ಸೀಮಿತವಾಗಿಲ್ಲ. ಅಹಿಂದ ವರ್ಗಗಳ ಧ್ವನಿಯಾಗಿ, ಸಾಮಾಜಿಕ ನ್ಯಾಯದ ಹರಿಕಾರನಾಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ನೆರೆರಾಜ್ಯ ತಮಿಳುನಾಡಿನಲ್ಲೂ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ವಿಶೇಷವಾಗಿ ತಮಿಳುನಾಡಿನ ಗಡಿ ಭಾಗದ ಜಿಲ್ಲೆಗಳಲ್ಲಿ ನೆಲೆಸಿರುವ ಲಕ್ಷಾಂತರ ಕನ್ನಡಿಗರು ಮತ್ತು ಕುರುಬ ಸಮುದಾಯದ ಜನರಿಗೆ ಸಿದ್ದರಾಮಯ್ಯ ಒಬ್ಬಪ್ರಮುಖ ನಾಯಕ. ಈ ಹಿನ್ನೆಲೆಯಲ್ಲಿ, ತಮಿಳುನಾಡು ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಪರವಾಗಿ ಸಿದ್ದರಾಮಯ್ಯ ಪ್ರಚಾರ ಕೈಗೊಳ್ಳುವ ಸಾಧ್ಯತೆ ಇದೆ.
ಈ ಹಿಂದೆ ತಮಿಳುನಾಡು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನಡೆಸಿದ ಪ್ರಚಾರ ಸಣ್ಣ ಮಟ್ಟದ ಸಂಚಲನವನ್ನೇನೂ ಮೂಡಿಸಿರಲಿಲ್ಲ. ವಿಶೇಷವಾಗಿ ಕೃಷ್ಣಗಿರಿ ಜಿಲ್ಲೆಯ ಥಳಿ ಮತ್ತು ಹೊಸೂರು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಭಾಷಣಗಳು ಮತದಾರರ ಮೇಲೆ ಗಾಢ ಪ್ರಭಾವ ಬೀರಿದ್ದವು.
ಕನ್ನಡ ಮತ್ತು ತಮಿಳು ಭಾಷೆಗಳ ಭಾವನಾತ್ಮಕ ಬೆಸುಗೆಯನ್ನು ಬಳಸಿಕೊಂಡು ಅವರು ಮತಯಾಚಿಸಿದ್ದರು. ಸಿದ್ದರಾಮಯ್ಯ ನಡೆಸಿದ ರೋಡ್ ಶೋಗಳಿಗೆ ಹರಿದುಬಂದ ಜನಸಾಗರವು ಅವರ ವರ್ಚಸ್ಸಿಗೆ ಸಾಕ್ಷಿಯಾಗಿತ್ತು. ರಾಜ್ಯದ ಐದು ಗ್ಯಾರಂಟಿ ಯೋಜನೆಗಳು ಇಡೀ ದೇಶದ ಗಮನ ಸೆಳೆದಿವೆ. ತಮಿಳುನಾಡಿನ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಿದ್ದರಾಮಯ್ಯ ಅಂದರೆ 'ನುಡಿದಂತೆ ನಡೆಯುವ ನಾಯಕ' ಎಂದು ಬಿಂಬಿತವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ರಾಷ್ಟ್ರೀಯ ಮಟ್ಟದ 'ಸ್ಟಾರ್ ಪ್ರಚಾರಕ' ಎಂದು ಪರಿಗಣಿಸಿದೆ. ದ್ರಾವಿಡ ರಾಜಕಾರಣದ ಹಿನ್ನೆಲೆ ಇರುವ ತಮಿಳುನಾಡಿನಲ್ಲಿ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ವೈಯಕ್ತಿಕ ಸ್ನೇಹವು ಮೈತ್ರಿಕೂಟಕ್ಕೆ ಆನೆಬಲ ತಂದಿದೆ.
ಕುರುಬ - ಕನ್ನಡಿಗರ ಮತಗಳ ಧ್ರುವೀಕರಣ
ತಮಿಳುನಾಡಿನ ಹೊಸೂರು, ಥಳಿ, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಮತ್ತು ನೀಲಗಿರಿ ಭಾಗಗಳಲ್ಲಿ ಕನ್ನಡಿಗರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಕುರುಬ ಸಮುದಾಯವು ಈ ಭಾಗದ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸೋಲು-ಗೆಲುವನ್ನು ನಿರ್ಧರಿಸುವ ಶಕ್ತಿ ಹೊಂದಿದೆ. ಸಿದ್ದರಾಮಯ್ಯ ಅವರು ಕುರುಬ ಸಮುದಾಯದ ಅತಿ ಎತ್ತರದ ನಾಯಕರಾಗಿರುವುದರಿಂದ, ತಮಿಳುನಾಡಿನ ಕುರುಂಬ ಜನಾಂಗದವರು ಅವರನ್ನು ತಮ್ಮ ಸಮಾಜದ ಮಾರ್ಗದರ್ಶಕ ಎಂದು ಭಾವಿಸುತ್ತಾರೆ. ಅಲ್ಲದೇ, ಸಿದ್ದರಾಮಯ್ಯ ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೊಂದಿರುವ ಬದ್ಧತೆ ಗಡಿ ಕನ್ನಡಿಗರಲ್ಲಿ ವಿಶ್ವಾಸ ಮೂಡಿಸಿದೆ.
ಹೊಸೂರು, ಥಳಿಯಲ್ಲಿ ಕನ್ನಡಿಗರು ಸಿದ್ದರಾಮಯ್ಯ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಗೂಡಲೂರು, ಪಂದಲೂರು ಭಾಗದಲ್ಲಿ ಕೇರಳ ಮತ್ತು ಕರ್ನಾಟಕದ ಮೂಲದ ಮತದಾರರು ಹೆಚ್ಚಿದ್ದು, ಸಿದ್ದರಾಮಯ್ಯ ಪ್ರಭಾವ ಇಲ್ಲಿ ಕೆಲಸ ಮಾಡಲಿದೆ. ಈರೋಡ್ ಹಾಗೂ ಚಾಮರಾಜನಗರ ಗಡಿ ಭಾಗದಲ್ಲಿನ ತಾಳವಾಡಿಯಂತಹ ಪ್ರದೇಶಗಳಲ್ಲಿ ಕನ್ನಡಿಗರೇ ಹೆಚ್ಚಾಗಿದ್ದು, ಇಲ್ಲಿ ಸಿದ್ದು ಭಾಷಣ ಮತಗಳನ್ನು ಸೆಳೆಯುವ ಶಕ್ತಿ ಹೊಂದಿದೆ ಎಂದು ಹೇಳಲಾಗಿದೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ದ್ರಾವಿಡರ್ ಕಳಗಂ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ಗುಣವೆಂದನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮಿಳುನಾಡಿನ ಕೆಲವು ಭಾಗದಲ್ಲಿ ಅಭಿಮಾನಿಗಳು ಇದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ಕುರುಬ ಜನಾಂಗ ಹೆಚ್ಚಿರುವ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ್ದರು. ಈ ಬಾರಿಯೂ ತೆರಳುವ ಸಾಧ್ಯತೆ ಇದೆ. ಕುರುಬ ಜನಾಂಗದ ಮತಗಳನ್ನು ಸೆಳೆಯಲು ಸಿದ್ದರಾಮಯ್ಯ ವರ್ಚಸ್ಸು ತಂತ್ರಗಾರಿಕೆ ನಡೆಯಲಿದೆ ಎಂದು ಹೇಳಿದರು.
ಸಿದ್ದರಾಮಯ್ಯಗೆ ಎದುರಾಗುವ ಸವಾಲುಗಳು
ತಮಿಳುನಾಡಿನಲ್ಲಿ ಪ್ರಚಾರ ಮಾಡುವುದು ಸಿದ್ದರಾಮಯ್ಯ ಅವರಿಗೆ ಅಷ್ಟು ಸುಲಭದ ಹಾದಿಯಲ್ಲ. ಇಲ್ಲಿ ಕೆಲವು ಸೂಕ್ಷ್ಮ ಸವಾಲುಗಳಿವೆ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ವಿವಾದವು ಅತ್ಯಂತ ಸೂಕ್ಷ್ಮವಾಗಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ತಮಿಳುನಾಡಿನಲ್ಲಿ ನಿಂತು ಮಾತನಾಡುವಾಗ ಅವರು ಅತ್ಯಂತ ಜಾಗರೂಕತೆಯಿಂದ ಇರಬೇಕಾಗುತ್ತದೆ. ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಮೈತ್ರಿಕೂಟದ ಪರವಾಗಿ ಮತ ಕೇಳುವ ಕಲೆ ಬೇಕು. ಅದು ಸಿದ್ದರಾಮಯ್ಯ ಅವರಿಗೆ ಸಿದ್ದಿಸಿದೆ ಎಂಬ ಮಾತುಗಳು ಕೇಳಿಬಂದಿವೆ. ಡಿಎಂಕೆ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೂ, ಸ್ಥಳೀಯವಾಗಿ ಕೆಲವು ಕನ್ನಡ ಸಂಘಟನೆಗಳು ಮತ್ತು ಸಣ್ಣ ಪಕ್ಷಗಳು ತಮ್ಮದೇ ಆದ ಅಜೆಂಡಾ ಹೊಂದಿರಬಹುದು. ಅವರನ್ನು ಒಗ್ಗೂಡಿಸುವುದು ಸಿದ್ದರಾಮಯ್ಯ ಮುಂದಿರುವ ದೊಡ್ಡ ಕೆಲಸವಾಗಿದೆ.
ಸಿದ್ದರಾಮಯ್ಯ ಅವರ ಪ್ರಚಾರ ವೈಖರಿ ನೇರ ಮತ್ತು ನಿಷ್ಠುರವಾಗಿರುತ್ತದೆ. ತಮಿಳುನಾಡಿನಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ, ಧರ್ಮದ ಆಧಾರಿತ ರಾಜಕಾರಣಕ್ಕಿಂತ ಸಾಮಾಜಿಕ ನ್ಯಾಯದ ರಾಜಕಾರಣ ಮೇಲು ಎಂಬ ಸಿದ್ದರಾಮಯ್ಯ ಅವರ ವಾದವು ಡಿಎಂಕೆ-ಕಾಂಗ್ರೆಸ್ ಮೈತ್ರಿಗೆ ದೊಡ್ಡ ಬಲ ನೀಡುವ ಸಾಧ್ಯತೆ ಇದೆ.

