
ಧೂಳು ತುಂಬಿದ ಮೈದಾನದಲ್ಲೇ ಹೂವಿನ ವ್ಯಾಪಾರ ನಡೆಸುತ್ತಿರುವ ವರ್ತಕರು(ಫೋಟೋ:ರಘು ಆರ್.ಡಿ)
Reality Check| ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆ: ಕೋಟಿ ಕೋಟಿ ವಹಿವಾಟು ನಡೆದರೂ ಮೂಲಸೌಕರ್ಯ ಶೂನ್ಯ
ದೇಶ-ವಿದೇಶಕ್ಕೆ ಸುಗಂಧ ಪಸರಿಸುವ ಚಿಕ್ಕಬಳ್ಳಾಪುರದ ಹೂವುಗಳಿಗೆ ತವರಲ್ಲೇ ನೆಲೆ ಇಲ್ಲದಂತಾಗಿದೆ. ಧೂಳು-ಕೆಸರಿನಲ್ಲೇ ಬದುಕು ಸವೆಸುತ್ತಿರುವ ರೈತರ ಕುರಿತಾದ ವಿಶೇಷ ವರದಿ ಇಲ್ಲಿದೆ.
ದೇಶ-ವಿದೇಶಗಳ ಶುಭ ಸಮಾರಂಭಗಳಿಗೆ ಸೌಂದರ್ಯ ನೀಡುವ, ಪ್ರೇಮಿಗಳ ಹಸ್ತಗಳಲ್ಲಿ ಪ್ರೀತಿಯ ಸುಗಂಧ ಪಸರಿಸುವ ಚಿಕ್ಕಬಳ್ಳಾಪುರದ ಹೂವುಗಳಿಗೆ ಇಂದು ತವರಲ್ಲೇ ನೆಲೆ ಇಲ್ಲದಂತಾಗಿದೆ. ದಿನವೊಂದಕ್ಕೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ, ರಾಜ್ಯದ ಅತಿದೊಡ್ಡ ಹೂವಿನ ಮಾರುಕಟ್ಟೆಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ಈ ಕೇಂದ್ರಕ್ಕೆ ಇಂದು ಕನಿಷ್ಠ ಮೂಲಭೂತ ಸೌಕರ್ಯಗಳ ಭಾಗ್ಯವೂ ಇಲ್ಲದಂತಾಗಿದೆ. ಬೇಸಿಗೆಯಲ್ಲಿ ಧೂಳಿನ ಅಭಿಷೇಕ, ಮಳೆಗಾಲದಲ್ಲಿ ಮಂಡಿಯುದ್ದ ಕೆಸರಿನಲ್ಲಿ ಸರ್ಕಸ್ ಮಾಡುತ್ತಲೇ ಬದುಕು ಸವೆಸುತ್ತಿರುವ ಇಲ್ಲಿನ ರೈತರು ಮತ್ತು ವರ್ತಕರ ಸಂಕಷ್ಟಗಳ ಬಗ್ಗೆ 'ದ ಫೆಡರಲ್ ಕರ್ನಾಟಕ' ನಡೆಸಿದ ವಿಶೇಷ 'ರಿಯಾಲಿಟಿ ಚೆಕ್' ವರದಿ ಇಲ್ಲಿದೆ.
ಶುಭ ಸಮಾರಂಭಗಳು, ಮದುವೆ ಹಾಗೂ ಪ್ರೇಮಿಗಳ ದಿನಾಚರಣೆಗೆ ಗುಣಮಟ್ಟದಲ್ಲಿ ಶ್ರೇಷ್ಠವಾಗಿರುವ ಚಿಕ್ಕಬಳ್ಳಾಪುರದ ಹೂವುಗಳನ್ನೇ ಎಲ್ಲರೂ ಬಯಸುತ್ತಾರೆ. ಆದರೆ, ಜಿಲ್ಲೆಯಲ್ಲಿ ಸೂಕ್ತ ಹೂವಿನ ಮಾರುಕಟ್ಟೆ ಇಲ್ಲದ ಕಾರಣ ವರ್ತಕರು ಮತ್ತು ರೈತರು ಖಾಸಗಿ ಮೈದಾನದಲ್ಲೇ ವ್ಯಾಪಾರ ನಡೆಸುವಂತಾಗಿದೆ. ಬೇಸಿಗೆಯಲ್ಲಿ ಈ ಮೈದಾನ ಧೂಳಿನಿಂದ ತುಂಬಿದ್ದರೆ, ಮಳೆಗಾಲದಲ್ಲಿ ಮಂಡಿಯುದ್ದ ಕೆಸರಿನಲ್ಲಿ ವ್ಯಾಪಾರ ಮಾಡಬೇಕಾದ ದಯನೀಯ ಸ್ಥಿತಿ ಇದೆ ಎಂಬುದು ಇಲ್ಲಿನ ವ್ಯಾಪಾರಿಗಳ ಅಳಲು. ನಗರದ ಹೊರವಲಯದಲ್ಲಿರುವ ಈ ತಾತ್ಕಾಲಿಕ ಮಾರುಕಟ್ಟೆಗೆ ಬರಲು ರೈತರು ಪ್ರತಿದಿನ ಹರಸಾಹಸ ಪಡುತ್ತಿದ್ದಾರೆ.
ಹೂವಿನ ಮಾರುಕಟ್ಟೆಗಾಗಿಯೇ ಜಿಲ್ಲಾಡಳಿತವು ನಗರದ ಹೊರವಲಯದಲ್ಲಿ 20 ಎಕರೆ ಜಾಗ ಮೀಸಲಿಟ್ಟಿದ್ದರೂ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಯಾವುದೇ ಕಾಮಗಾರಿ ನಡೆದಿಲ್ಲ. ಖಾಸಗಿ ಮೈದಾನಕ್ಕೆ ಬಾಡಿಗೆ ಪಾವತಿಸುತ್ತಾ ಇನ್ನೆಷ್ಟು ವರ್ಷ ಧೂಳು-ಕೆಸರಿನಲ್ಲಿ ವ್ಯಾಪಾರ ಮಾಡಬೇಕು ಎಂದು ವರ್ತಕರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು 'ದ ಫೆಡರಲ್ ಕರ್ನಾಟಕ' ರಿಯಾಲಿಟಿ ಚೆಕ್ ನಡೆಸಿದ್ದು, ರೈತರು ಮತ್ತು ಸ್ಥಳೀಯರು ಪ್ರತಿದಿನ ಅನುಭವಿಸುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಮಾರುಕಟ್ಟೆಗೆ ಬಂದಿರುವ ಉತ್ತಮ ಗುಣಮಟ್ಟದ ಮಾರಿಗೋಲ್ಡ್ ಹಾಗೂ ಬಟನ್ ರೋಸ್(ಫೋಟೋ:ರಘು ಆರ್.ಡಿ.)
ಹೂವಿನ ಗುಣಮಟ್ಟದಲ್ಲಿ ರಾಜಿ ಇಲ್ಲ
ವ್ಯಾಪಾರಿ ಹಾಗೂ ರೈತ ಸಾಯಿಪ್ರಶಾಂತ್ ಎಸ್.ಪಿ. 'ದ ಫೆಡರಲ್ ಕರ್ನಾಟಕ' ದ ಜತೆ ಮಾತನಾಡಿ, "ಮಾರುಕಟ್ಟೆಗೆ ಪ್ರತಿದಿನ 40 ಟನ್ಗೂ ಹೆಚ್ಚು ಹೂವು ಬರುತ್ತದೆ. ಈಗ ಬೇಸಿಗೆಯಾದ್ದರಿಂದ ಹೂವಿನ ಪ್ರಮಾಣ ಸ್ವಲ್ಪ ಕಡಿಮೆಯಿದೆ. ಹಬ್ಬ ಮತ್ತು ಶುಭ ಸಮಾರಂಭಗಳ ಸಂದರ್ಭದಲ್ಲಿ ಫಸಲು ಅಧಿಕವಾಗಿರುತ್ತದೆ. ಇದು ರಾಜ್ಯದ ಅತಿದೊಡ್ಡ ಹೂವಿನ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದ್ದು, ಇಲ್ಲಿ ಬೆಳೆಯುವ ಹೂವಿನ ಗುಣಮಟ್ಟದಲ್ಲಿ ಯಾವುದೇ ರಾಜೀ ಇಲ್ಲ. ಆದ್ದರಿಂದಲೇ ಹೈದರಾಬಾದ್, ಮುಂಬೈ, ಕೋಲ್ಕತ್ತಾ ಸೇರಿದಂತೆ ದೇಶದ ನಾನಾ ಭಾಗಗಳಿಗೆ ಇಲ್ಲಿಂದ ಹೂವು ಸರಬರಾಜಾಗುತ್ತದೆ. ಆದರೆ, ಸರ್ಕಾರ ಇಲ್ಲಿ ವ್ಯಾಪಾರಕ್ಕೆ ಪೂರಕವಾದ ವಾತಾವರಣ ನಿರ್ಮಿಸಿಕೊಡಬೇಕಿದೆ" ಎಂದರು.
ಹೂವಿನ ವ್ಯಾಪಾರಿಗಳ ಸಂಘದ ಅಧ್ಯಕ್ಷ ರವೀಂದ್ರ 'ದ ಫೆಡರಲ್ ಕರ್ನಾಟಕ' ದ ಜತೆ ಮಾತನಾಡಿ, "ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತವು ಕೆವಿಕೆ ಕ್ಯಾಂಪಸ್ ಬಳಿ ತಾತ್ಕಾಲಿಕವಾಗಿ ಹೂವಿನ ಮಾರುಕಟ್ಟೆ ನಿರ್ಮಿಸಿಕೊಟ್ಟಿತ್ತು. ಅಂದಿನಿಂದ ಇಂದಿನವರೆಗೂ ಇಲ್ಲಿಯೇ ಮಾರಾಟ ನಡೆಯುತ್ತಿದೆ. ಜಿಲ್ಲಾ ಉಸ್ತವಾರಿ ಸಚಿವ ಎಂ.ಸಿ. ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ಅವರು ನಂದಿ ಕ್ರಾಸ್ ಬಳಿ ಮಾರುಕಟ್ಟೆಗಾಗಿ 20 ಎಕರೆ ಜಾಗ ಮೀಸಲಿಟ್ಟಿದ್ದಾರೆ. ಸರ್ಕಾರದಿಂದ ಹಣ ಬಿಡುಗಡೆಯಾದ ನಂತರ ಟೆಂಡರ್ ಕರೆದು ಶೀಘ್ರವಾಗಿ ಮಾರುಕಟ್ಟೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ವರ್ತಕರು ಖಾಸಗಿ ಮೈದಾನಕ್ಕೆ ಬಾಡಿಗೆ ಪಾವತಿಸಿ ವ್ಯಾಪಾರ ನಡೆಸುತ್ತಿದ್ದಾರೆ. ವಿಜಯವಾಡ, ರಾಜಮಂಡ್ರಿ, ಗುಂಟೂರು ಮತ್ತು ಹೈದರಾಬಾದ್ಗೆ ನಿರಂತರವಾಗಿ ಹೂವು ಸರಬರಾಜಾಗುತ್ತಿದೆ. ಆದರೆ, ಈಗ ಅಲ್ಲಿ ಯಾವುದೇ ಸಮಾರಂಭಗಳಿಲ್ಲದ ಕಾರಣ ಬೆಲೆಯಲ್ಲಿ ಇಳಿಮುಖವಾಗಿದೆ" ಎಂದು ವಿವರಿಸಿದರು.
ಮಳೆ ಬಂದರೆ ಇಲ್ಲಿನ ಪರಿಸ್ಥಿತಿ ತೀರಾ ಹದಗೆಡುತ್ತದೆ. ಮೈದಾನದಲ್ಲೇ ವ್ಯಾಪಾರ ಮಾಡುವುದರಿಂದ ಇಡೀ ಪ್ರದೇಶ ಕೆಸರುಮಯವಾಗಿರುತ್ತದೆ. ರೈತರ ವಾಹನಗಳ ಓಡಾಟದಿಂದಾಗಿ ಈ ಭಾಗದಲ್ಲಿ ಸಂಚಾರ ದಟ್ಟಣೆ (Traffic) ಹೆಚ್ಚಾಗಿದ್ದು, ಶಾಲಾ ಮಕ್ಕಳಿಗೂ ತೊಂದರೆಯಾಗುತ್ತಿದೆ. "ನೂತನ ಮಾರುಕಟ್ಟೆ ನಿರ್ಮಿಸುವಂತೆ ಜಿಲ್ಲಾ ಉಸ್ತವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮಾಸಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆದರೂ ಮೂಲಸೌಕರ್ಯ ಇಲ್ಲದಿರುವುದು ಖೇದಕರ. ಸರ್ಕಾರ ಆದಷ್ಟು ಶೀಘ್ರ ಮಾರುಕಟ್ಟೆ ಆರಂಭಿಸಬೇಕು" ಎಂದು ಅವರು ಒತ್ತಾಯಿಸಿದರು.
ಬೆಲೆ ಇಲ್ಲದೆ ಮೈದಾನದಲ್ಲೇ ಹೂವನ್ನು ಸುರಿದಿರುವ ರೈತರು (ಫೋಟೋ: ರಘು ಆರ್.ಡಿ)
ಕುಡಿಯಲು ನೀರಿಲ್ಲ, ಶೌಚಾಲಯವಿಲ್ಲ
ರೈತ ಚಂದ್ರಶೇಖರ್ ಆರ್. 'ದ ಫೆಡರಲ್ ಕರ್ನಾಟಕ' ದ ಜತೆ ಮಾತನಾಡಿ, "ಹಲವಾರು ವರ್ಷಗಳಿಂದ ಹೂವು ಬೆಳೆಯುತ್ತಿದ್ದೇವೆ. ಕೋವಿಡ್ ಸಮಯದಲ್ಲಿ ಮಾರುಕಟ್ಟೆಯನ್ನು ಇಲ್ಲಿಗೆ ಸ್ಥಳಾಂತರಿಸಿದ ಮೇಲೆ ರೈತರಿಗೆ ವಾಹನ ಬಾಡಿಗೆಯ ಹೊರೆ ಹೆಚ್ಚಾಗಿದೆ. ಕೆಲವು ಸಂದರ್ಭದಲ್ಲಿ ಲಾಭ ದೊರೆತರೂ, ಹೆಚ್ಚಿನ ಬಾರಿ ನಷ್ಟವೇ ಅನುಭವಿಸುತ್ತಿದ್ದೇವೆ. ಕೆಲವೊಮ್ಮೆ ಕೂಲಿ ಹಣವೂ ದೊರೆಯುತ್ತಿಲ್ಲ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆಯಲ್ಲಿ ಕುಡಿಯುವ ನೀರು ಮತ್ತು ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳೂ ಇಲ್ಲ. ವಾಹನಗಳು ಮಾರುಕಟ್ಟೆಯ ಒಳಕ್ಕೆ ಬರಲಾಗದೆ, ರೈತರು ರಸ್ತೆಯಿಂದಲೇ ಹೂವಿನ ಮೂಟೆಗಳನ್ನು ಹೊತ್ತು ತರಬೇಕಾದ ಪರಿಸ್ಥಿತಿ ಇದೆ. "ನಗರದ ಎಪಿಎಂಸಿಯಲ್ಲಿ ಆರು ಎಕರೆ ಜಾಗವಿದ್ದು, ಅಲ್ಲಿನ ಹಳೆಯ ಉಗ್ರಾಣಗಳನ್ನು ನೆಲಸಮ ಮಾಡಿ ಹೊಸ ಮಾರುಕಟ್ಟೆ ನಿರ್ಮಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ" ಎಂದು ರೈತ ಶ್ರೀನಿವಾಸ್ ಸಿ. ದ ಫೆಡರಲ್ ಕರ್ನಾಟಕದ ಜತೆ ಅಳಲು ತೋಡಿಕೊಂಡರು.
ಕೋಲಾರ, ಶ್ರೀನಿವಾಸಪುರ, ದೇವನಹಳ್ಳಿ, ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರು ಸೇರಿದಂತೆ ಬೆಂಗಳೂರು ಗ್ರಾಮಾಂತರದ ವಿವಿಧ ಭಾಗಗಳಿಂದ ರೈತರು ಗುಲಾಬಿ, ಚೆಂಡು ಹೂವು, ಸುಗಂಧರಾಜ ಸೇರಿದಂತೆ ವಿವಿಧ ತಳಿಯ ಹೂವುಗಳನ್ನು ಇಲ್ಲಿಗೆ ತರುತ್ತಾರೆ. ಈ ಸಮಸ್ಯೆಗಳನ್ನು ಮುಂಬರುವ ಮಳೆಗಾಲದ ವೇಳೆಗೆ ಸರ್ಕಾರ ಬಗೆಹರಿಸಬೇಕೆಂದು ರೈತರು ಆಕ್ರೋಶದಿಂದ ಆಗ್ರಹಿಸಿದ್ದಾರೆ.
Ground Report: ಪ್ರತ್ಯಕ್ಷ ವರದಿಯ ವಿವರ ಈ ವಿಡಿಯೋದಲ್ಲಿದೆ.

