
ಉಪನಗರಗಳಿಗೆ ಬಿಎಂಟಿಸಿ ಬಲ: 80 ಕಿ.ಮೀ.ವರೆಗೆ ಸೇವೆ ವಿಸ್ತರಣೆ, ನಿತ್ಯ 2 ಲಕ್ಷ ಜನರಿಗೆ ಅನುಕೂಲ
ಬೆಂಗಳೂರಿಗೆ ಸೀಮಿತವಾಗಿದ್ದ ಬಿಎಂಟಿಸಿ ಬಸ್ ಸೇವೆಯನ್ನು ಈಗ 80 ಕಿ.ಮೀ ವ್ಯಾಪ್ತಿಗೆ ವಿಸ್ತರಿಸಲಾಗಿದ್ದು, ರಾಮನಗರ, ಕನಕಪುರ ಮತ್ತು ದೊಡ್ಡಬಳ್ಳಾಪುರದಂತಹ ಸುತ್ತಲಿನ ನಗರಗಳ ನೇರ ಸಂಪರ್ಕ ಕಲ್ಪಿಸಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಸುತ್ತಲಿನ ಜಿಲ್ಲೆಗಳ ಉಪನಗರಗಳಿಗೂ ಈಗ ಬಿಎಂಟಿಸಿ ಸೇವೆ ಆರಂಭಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಿಗಾಗಿ ಕಾದು ಸುಸ್ತಾಗಿದ್ದವರು ಇಂದಿನಿಂದ ಬಿಎಂಟಿಸಿ ಮೂಲಕ ಸುಲಭವಾಗಿ ಬೆಂಗಳೂರಿಗೆ ಪ್ರಯಾಣಿಸಬಹುದಾಗಿದೆ.
ಈವರೆಗೂ ಕೇವಲ 40 ಕಿ.ಮೀ ದೂರದವರೆಗೂ ಸೇವೆ ಒದಗಿಸುತ್ತಿದ್ದ ಬಿಎಂಟಿಸಿ ಬಸ್‌ಗಳ ಸಂಚಾರ ವ್ಯಾಪ್ತಿಯನ್ನು ಈಗ 80 ಕಿ.ಮೀ ವರೆಗೂ ವಿಸ್ತರಿಸಲಾಗಿದೆ. ಹೀಗಾಗಿ ಬೆಂಗಳೂರಿನ ಸುತ್ತಲಿನ ಜಿಲ್ಲೆಗಳಿಗೂ ಬಿಎಂಟಿಸಿ ಸೇವೆ ಲಭ್ಯವಾಗಲಿದೆ. ಇದರಿಂದ ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ಸಂಪರ್ಕ ಬಲಪಡಿಸಿದಂತಾಗಿದೆ.
ಸುಮಾರು 7 ಸಾವಿರಕ್ಕೂ ಹೆಚ್ಚು ಬಸ್‌ಗಳ ಸಮೂಹ ಹೊಂದಿರುವ ಬಿಎಂಟಿಸಿ, ಹಂತ ಹಂತವಾಗಿ ಬೆಂಗಳೂರಿನ ಸುತ್ತಲಿನ ಹೊಸ ಮಾರ್ಗಗಳಲ್ಲಿ ಸಂಚಾರ ಆರಂಭಿಸಿವೆ. ಮೆಜೆಸ್ಟಿಕ್, ಬನಶಂಕರಿ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮುಂದಿನ 80 ಕಿ.ಮೀ ವರೆಗೂ ಬಸ್‌ಗಳು ಸಂಚರಿಸುತ್ತಿವೆ. ಹೀಗಾಗಿ ನಿತ್ಯ ಅಂದಾಜು 2 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.
ದಿನಕ್ಕೆ ಸರಾಸರಿ 13 ಲಕ್ಷ ಕಿಲೋಮೀಟರ್‌ಗಳಷ್ಟು ಸಂಚಾರ ಮಾಡುತ್ತಿರುವ ಬಿಎಂಟಿಸಿ ಬಸ್‌ಗಳು, ತನ್ನ ಜಾಲ ವಿಸ್ತರಿಸಿಕೊಳ್ಳುವುದರಿಂದ ಟ್ರಾಫಿಕ್ ಜಾಮ್‌ನ ಕಿರಿಕಿರಿ ತಪ್ಪಲಿದೆ. ಅಲ್ಲದೇ ಸಂಚಾರವು 14 ಲಕ್ಷ ಕಿಲೋಮೀಟರ್‌ಗೆ ಹೆಚ್ಚಾಗಲಿದೆ. ಸಾರಿಗೆ ಸಂಸ್ಥೆಯ ಆದಾಯವು ಶೇ. 30 ರಷ್ಟು ಏರಿಕೆಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿರುವಂತೆ "ಪಿಎಂ ಇ-ಡ್ರೈವ್" (PM e-DRIVE) ಯೋಜನೆಯಡಿ ಬೆಂಗಳೂರಿಗೆ ಒಟ್ಟು 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳು ಸೇರ್ಪಡೆಗೊಳ್ಳಲಿವೆ. ಇದರೊಂದಿಗೆ ರಾಜ್ಯ ಸರ್ಕಾರವು ಸಹ ಕಳೆದ ಬಜೆಟ್‌ನಲ್ಲಿ ಬಿಎಂಟಿಸಿಗೆ ಹೊಸದಾಗಿ 9 ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಘೋಷಿಸಿದೆ. ಹೀಗಾಗಿ ಬಿಎಂಟಿಸಿ ಬಸ್‌ಗಳ ಸಂಖ್ಯೆ ಭವಿಷ್ಯದಲ್ಲಿ ಗಣನೀಯವಾಗಿ ಏರಿಕೆಯಾಗಲಿದೆ.
ಈ ನಿಟ್ಟಿನಲ್ಲಿ ಬಿಎಂಟಿಸಿ ಬಸ್‌ಗಳ ಮೂಲಕ ಬೆಂಗಳೂರಿನ ಸುತ್ತಲಿನ ಜಿಲ್ಲೆಗಳಿಗೂ ಸಂಪರ್ಕ ಸಾಧಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ಬಿಎಂಟಿಸಿ ಸುಮಾರು 1,500ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಿದೆ. 2025ರ ಜುಲೈ ತಿಂಗಳಿನಲ್ಲಿ 148 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಫ್ಲ್ಯಾಗ್ ಆಫ್ ಮಾಡಲಾಗಿದ್ದು, ಉಳಿದ ಬಸ್‌ಗಳು 2026ರ ಅವಧಿಯಲ್ಲಿ ಹಂತ ಹಂತವಾಗಿ ಬರಲಿವೆ. ಈ ವರ್ಷ 2,000 ಹಳೆಯ ಡೀಸೆಲ್ ಬಸ್‌ಗಳನ್ನು ಸ್ಕ್ರ್ಯಾಪ್ (ತೆಗೆದುಹಾಕುವುದು) ಮಾಡಿ, ಅವುಗಳ ಬದಲಿಗೆ 2,000 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ.
ನೂತನ ಸೇವೆ ಮಾರ್ಗಗಳು
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ರಾಮನಗರ, ಬನಶಂಕರಿ ಬಸ್ ನಿಲ್ದಾಣದಿಂದ ಕನಕಪುರ, ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಿಂದ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ಕಡೆಗೆ ಬಸ್‌ಗಳು ಸಂಚರಿಸುತ್ತಿವೆ. ವಿಸ್ತರಣೆಯು ಪ್ರಯಾಣಿಕರ ಸಮಯ ಹಾಗೂ ವೆಚ್ಚ ಉಳಿತಾಯಕ್ಕೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಬಿಎಂಟಿಸಿ ಬಸ್ ಸೇವೆಯ ಈ ಹೊಸ ಹೆಜ್ಜೆ ಗ್ರಾಮಾಂತರ ಪ್ರದೇಶಗಳ ಜನರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಣ ಮಾಡಲು ಬೇರೆ ಬೇರೆ ಜಿಲ್ಲೆಗಳಿಗೆ ಬಿಎಂಟಿಸಿ ಬಸ್‌ಗಳ ಸೇವೆಯನ್ನು ಒದಗಿಸಲಾಗುತ್ತದೆ. ಇದರಿಂದ ದಟ್ಟಣೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುವುದಲ್ಲದೆ, ಪ್ರಯಾಣಿಕರಿಗೂ ಕೂಡ ಹೆಚ್ಚು ಅನುಕೂಲವಾಗಲಿದೆ. ಅದರಲ್ಲೂ ದೀಪಾವಳಿ, ಚುನಾವಣೆಗಳ ಸಮಯ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಬಿಎಂಟಿಸಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಬಂದಿದೆ. ಇದೇ ಮಾದರಿಯಲ್ಲಿ ಈವರೆಗೂ ಸೀಮಿತವಾಗಿದ್ದ ಬಸ್ ಸೇವೆಯನ್ನು ಇದೀಗ ಬೆಂಗಳೂರು ಗ್ರಾಮಾಂತರ ಭಾಗಗಳಿಗೂ ವಿಸ್ತರಣೆಯಾಗಿದೆ. ಈ ಕ್ರಮದಿಂದ ಸಾರ್ವಜನಿಕರಿಗೆ ಅಷ್ಟೇ ಅಲ್ಲದೆ, ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ನಗರಕ್ಕೆ ಬರುತ್ತಿರುವವರು ಹಾಗೂ ಚಿಕಿತ್ಸಾ ಅಗತ್ಯಗಳಿಗೆ ಪ್ರಯಾಣಿಸುವ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈ ಯೋಜನೆಯು ಬೆಂಗಳೂರು ನಗರ ಮತ್ತು ಅದರ ಸುತ್ತಮುತ್ತಲಿನ ಉಪನಗರಗಳ ನಡುವಿನ ಆರ್ಥಿಕ ಮತ್ತು ಸಾಮಾಜಿಕ ಸಂಪರ್ಕವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಈ ಮೊದಲು ಗ್ರಾಮಾಂತರ ಭಾಗದಿಂದ ಬರುವವರು ನಗರಕ್ಕೆ ಬರಲು ಕೆಎಸ್‌ಆರ್‌ಟಿಸಿ (KSRTC) ಬಸ್ ಇಳಿದು ಮತ್ತೆ ಬಿಎಂಟಿಸಿ ಹತ್ತಬೇಕಿತ್ತು. ಈಗ ನೇರ ಬಸ್ ಸೌಲಭ್ಯ ದೊರೆಯಲಿದೆ. ಹಂತ ಹಂತವಾಗಿ ಬಸ್ ಬದಲಿಸುವ ಕಿರಿಕಿರಿ ತಪ್ಪುವುದರಿಂದ ಪ್ರಯಾಣದ ಸಮಯ ಮತ್ತು ಟಿಕೆಟ್ ದರದಲ್ಲಿ ಉಳಿತಾಯವಾಗಲಿದೆ. ಪ್ರತಿದಿನ ಶಿಕ್ಷಣ ಮತ್ತು ಕೆಲಸಕ್ಕಾಗಿ ನಗರಕ್ಕೆ ಬರುವ ಲಕ್ಷಾಂತರ ಜನರಿಗೆ ಇದು ಸಹಕಾರಿಯಾಗಲಿದೆ.
ಬೇಡಿಕೆಯೂ ಇತ್ತು
ಬೆಂಗಳೂರಿನಿಂದ ಬಿಡದಿಯವರೆಗೂ ಬಿಎಂಟಿಸಿ ಸೇವೆ ನೀಡುತ್ತಿತ್ತು. ಅಲ್ಲಿಂದ 12 ಕಿ.ಮೀ ದೂರದಲ್ಲಿರುವ ರಾಮನಗರದವರೆಗೂ ಬಿಎಂಟಿಸಿ ಸೇವೆ ವಿಸ್ತರಿಸಬೇಕು ಎಂದು ಸಾರ್ವಜನಿಕರು ಅನೇಕ ಬಾರಿ ಮನವಿ ಮಾಡಿದ್ದರು. ಆದರೆ, 40 ಕಿ.ಮೀ ವ್ಯಾಪ್ತಿಗಷ್ಟೇ ಸೀಮಿತಗೊಂಡಿದ್ದ ಬಿಎಂಟಿಸಿ ಸೇವೆಯಿಂದಾಗಿ ಈ ಸೌಲಭ್ಯ ದೊರೆತಿರಲಿಲ್ಲ. ಇದೇ ರೀತಿ ಬೆಂಗಳೂರಿನ ಸುತ್ತಲಿನ ಜಿಲ್ಲೆಗಳಿಂದ ನಿತ್ಯ ಸಾವಿರಾರು ಮಂದಿ ಕಾಲೇಜು, ಉದ್ಯೋಗಕ್ಕಾಗಿ ಬೆಂಗಳೂರಿಗೆ ಓಡಾಡುತ್ತಿದ್ದಾರೆ. ಇವರೆಲ್ಲರ ಪರವಾಗಿ ಬಿಎಂಟಿಸಿ ಬಸ್ ಸೇವೆಯನ್ನು ವಿಸ್ತರಿಸುವ ಬಗ್ಗೆ ಅನೇಕ ಬೇಡಿಕೆಗಳು ಸಲ್ಲಿಕೆಯಾಗಿದ್ದವು.
ತಾಂತ್ರಿಕ ಸುಧಾರಣೆಗಳು
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, ಬಸ್‌ಗಳು ಎಲ್ಲಿವೆ ಎಂದು ತಿಳಿಯಲು (Live Tracking) ಸಾರ್ವಜನಿಕರು ಆ್ಯಪ್ ಬಳಸಬಹುದು. ಯುಪಿಐ (UPI) ಮೂಲಕ ಟಿಕೆಟ್ ಪಡೆಯುವ ಸೌಲಭ್ಯವನ್ನು ಹೆಚ್ಚಿನ ಬಸ್‌ಗಳಲ್ಲಿ ವಿಸ್ತರಿಸಲಾಗಿದೆ. ಬಿಎಂಟಿಸಿ ಸೇವೆಯು ಈಗ 80 ಕಿ.ಮೀಗೆ ವಿಸ್ತರಣೆಯಾಗಿದ್ದು, ಇದರಿಂದ ನಿತ್ಯ ಬೆಂಗಳೂರು ನಗರಕ್ಕೆ ಸಂಚರಿಸುವವರಿಗೆ ಅನುಕೂಲವಾಗಲಿದೆ ಎಂದರು.
ಪ್ರಯಾಣಿಕ ರಮೇಶ್ ಕುಮಾರ್ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, ಕನಕಪುರದಿಂದ ನಿತ್ಯ ನೂರಾರು ಮಂದಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಸಂಚರಿಸುತ್ತಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನಿಲ್ಲಲು ಸಹ ಬೆಳಗ್ಗೆ, ಸಂಜೆ ಜಾಗ ಸಿಗುವುದಿಲ್ಲ, ವಾರಂತ್ಯದಲ್ಲಿ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಈಗ ಬಿಎಂಟಿಸಿ ಬಸ್‌ಗಳು ಸಂಚಾರ ಆರಂಭಿಸಿದರೆ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದರು.
ಬಿಎಂಟಿಸಿಗೆ ಚಾಲನೆ
ರಾಮನಗರ - ಬೆಂಗಳೂರಿನ ಕೇಂಪೇಗೌಡ ಬಸ್ ನಿಲ್ದಾಣಕ್ಕೆ ವಜ್ರ ವಿಸ್ತಾರ ಹವಾನಿಯಂತ್ರಿತ ಬಿಎಂಟಿಸಿ ಬಸ್ ಸಂಚಾರಕ್ಕೆ ಸಚಿವ ರಾಮಲಿಂಗರೆಡ್ಡಿ ಅವರು ಬುಧವಾರ (ಮಾ.4)ಚಾಲನೆ ನೀಡಿದರು. ಇದೇ ರೀತಿ ಕನಕಪುರ ಬಸ್ ನಿಲ್ದಾಣದಲ್ಲಿಯು ಬಿಎಂಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಬಿಎಂಟಿಸಿಯ ನೂತನ ಮಾರ್ಗದ ವಿವರ
ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಒಟ್ಟು 6 ಬಸ್‌ಗಳು ಬುಧವಾರದಿಂದ ಕಾರ್ಯಾಚರಣೆ ನಡೆಸಲಿದ್ದು, ದಿನಕ್ಕೆ 36 ಸುತ್ತುಗಳನ್ನು ಹಾಕಲಿವೆ. ರಾಮನಗರದಿದ ಮಜೆಸ್ಟಿಕ್‌ಗೆ 95 ರೂ.,ಗಳ ಟಿಕೆಟ್ ದರ ಇದ್ದು, ನಾಯಂಡನಹಳ್ಳಿ, ರಾಜರಾಜೇಶ್ವರಿನಗರ ಗೇಟ್, ಕೆಂಗೇರಿ, ನೈಸ್ ರಸ್ತೆ ಜಂಕ್ಷನ್ ಗಳಲ್ಲಿ ಬಸ್ ಗಳು ನಿಲುಗಡೆಯಾಗಲಿವೆ.
ಬನಶಂಕರಿಯಿಂದ ಕನಕಪುರ ಮಾರ್ಗದಲ್ಲಿ ಒಟ್ಟು 8 ಬಸ್‌ಗಳು ಸಂಚರಿಸಲಿದ್ದು, ದಿನಕ್ಕೆ 48 ಸುತ್ತುಗಳನ್ನು ನೀಡಲಿವೆ. ಒಂದು ಕಡೆಯ ಸಂಪೂರ್ಣ ಪ್ರಯಾಣ ದರ 90 ರೂ,ಗಳಿವೆ. ಕೋಣನಕುಂಟೆ ಕ್ರಾಸ್, ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣ, ಕಗ್ಗಲಿಪುರ, ಹಾರೋಹಳ್ಳಿ, ಜೈನ ಯೂನಿವರ್ಸಿಟಿ ಗೇಟ್ ನಲ್ಲಿ ಬಸ್‌ಗಳು ನಿಲುಗಡೆಯಾಗಲಿವೆ. ಜತಗೆ ಈ ಎರಡು ಮಾರ್ಗಗಳಲ್ಲಿಯು ವಿಶೇಷ ಬಸ್ ಪಾಸ್‌ಗಳ ದರಪಟ್ಟಿಯನ್ನು ಸಾರಿಗೆ ಇಲಾಖೆ ಬಿಡುಗಡೆಗೊಳಿಸಿದೆ.

