Womens Day 2026: ಕೃಷಿ ಕ್ರಾಂತಿಯ ಮೂಲಕ ವಿಶ್ವಸಂಸ್ಥೆ ಗಮನ ಸೆಳೆದ ಧಾರವಾಡದ ಬೀಬಿ ಫಾತಿಮಾ ಮಹಿಳಾ ಸಂಘ
x
ಬೀಬಿಜಾನ್

Women's Day 2026: ಕೃಷಿ ಕ್ರಾಂತಿಯ ಮೂಲಕ ವಿಶ್ವಸಂಸ್ಥೆ ಗಮನ ಸೆಳೆದ ಧಾರವಾಡದ 'ಬೀಬಿ ಫಾತಿಮಾ' ಮಹಿಳಾ ಸಂಘ

ಕೋವಿಡ್ ಕಾಲದಲ್ಲಿ ಗಾರ್ಮೆಂಟ್ಸ್‌ಗಳು ಮುಚ್ಚಿದಾಗ ಮರಳಿ ಗ್ರಾಮಕ್ಕೆ ಬಂದ ಮಹಿಳೆಯರನ್ನು ಸಂಘಟಿಸಿ ಬೀಬಿಜಾನ್ ಹಳೆಮನೆ ಅವರು ಬೀಜ ಸಂರಕ್ಷಣೆ ಮತ್ತು ಸಾವಯವ ಕೃಷಿ ಕ್ರಾಂತಿ ಮಾಡಿ ವಿಶ್ವದ ಗಮನ ಸೆಳೆದಿದ್ದಾರೆ.


ವಿಶ್ವದಾದ್ಯಂತ ಮಹಿಳಾ ದಿನಾಚರಣೆಯ ಸಂಭ್ರಮ ಮನೆಮಾಡಿದೆ. ಮಹಿಳೆಯರ ಸಾಧನೆಗಳನ್ನು ಕೊಂಡಾಡುವ ಈ ಹೊತ್ತಿನಲ್ಲಿ, ಉತ್ತರ ಕರ್ನಾಟಕದ ಒಣಭೂಮಿಯಲ್ಲಿ ಅಕ್ಷರಶಃ ಕೃಷಿ ಕ್ರಾಂತಿಯನ್ನೇ ಸೃಷ್ಟಿಸಿ, ಜಾಗತಿಕ ಮಟ್ಟದಲ್ಲಿ ಕರುನಾಡಿನ ಕೀರ್ತಿ ಪತಾಕೆ ಹಾರಿಸಿದ ಗ್ರಾಮೀಣ ಮಹಿಳೆಯರ ಯಶೋಗಾಥೆಯೊಂದು ನಮ್ಮ ಮುಂದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ 'ಬೀಬಿ ಫಾತಿಮಾ ಮಹಿಳಾ ಸಂಘ' ಹಾಗೂ ಅದರ ರೂವಾರಿ ಬೀಬಿಜಾನ್ ಹಳೆಮನೆ ಅವರ ಸಾಧನೆ ಇಂದು ವಿಶ್ವಸಂಸ್ಥೆಯ ಮೆಚ್ಚುಗೆಗೆ ಪಾತ್ರವಾಗಿದ್ದು, ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.

ಕೂಲಿ ಕಾರ್ಮಿಕರಾಗಿದ್ದ ಹೆಣ್ಣುಮಕ್ಕಳನ್ನು ಒಗ್ಗೂಡಿಸಿ, ನಾಟಿ ಬೀಜಗಳ ಸಂರಕ್ಷಣೆ ಮತ್ತು ಸಾವಯವ ಕೃಷಿಯ ಮೂಲಕ ಅವರನ್ನು 'ಕೃಷಿ ಉದ್ಯಮಿ'ಗಳನ್ನಾಗಿ ಪರಿವರ್ತಿಸಿದ ಬೀಬಿಜಾನ್ ಅವರ ಪಯಣ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಇವರ ಈ ಸಾಧನೆಗೆ ವಿಶ್ವಸಂಸ್ಥೆಯು ಜೀವ ವೈವಿಧ್ಯತೆಯ ನೊಬೆಲ್ ಎಂದೇ ಪರಿಗಣಿಸಲಾಗುವ ಪ್ರತಿಷ್ಠಿತ 'ಈಕ್ವೇಟರ್ ಇನಿಶಿಯೇಟಿವ್' ಪ್ರಶಸ್ತಿ ನೀಡಿ ಗೌರವಿಸಿದೆ.

ಉತ್ತರ ಕರ್ನಾಟಕದ ಒಣಭೂಮಿಯ ಕೃಷಿ ಸಂಸ್ಕೃತಿಯಲ್ಲಿ 'ಬೀಬಿ ಫಾತಿಮಾ' ಎಂಬ ಹೆಸರು ಧಾರ್ಮಿಕ ದೋಸ್ತರಿಕೆಯ ಸಂಕೇತ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ತೀರ್ಥ ಗ್ರಾಮದಲ್ಲಿ ಉದಯಿಸಿದ 'ಬೀಬಿ ಫಾತಿಮಾ ಮಹಿಳಾ ಸಂಘ'ವು ಇಂದು ವಿಶ್ವಸಂಸ್ಥೆಯ ಗಮನ ಸೆಳೆದಿದೆ. ಸಾಮಾನ್ಯ ಮಹಿಳೆಯಾಗಿದ್ದ ಬೀಬಿಜಾನ್‌ ಹಳೆಮನೆ ಈ ಸಂಘದ ಮೂಲಕ ವಿಶ್ವಸಂಸ್ಥೆಯ ಮೆಚ್ಚುಗೆಗೆ ಪಾತ್ರರಾಗಿದ್ದು, ಇದು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಮಹಿಳಾ ಸಂಘದ ಮೂಲಕ ಅವರು ಕೈಗೊಂಡ ಬೀಜ ಸಂರಕ್ಷಣೆ ಮತ್ತು ಸಾವಯವ ಕೃಷಿ ಇಂದು ಕ್ರಾಂತಿಯನ್ನೇ ಸೃಷ್ಟಿಸಿದೆ. ಅಲ್ಲದೇ, 'ಈಕ್ವೇಟರ್ ಇನಿಶಿಯೇಟಿವ್' ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಸಂಘ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿದೆ.

ಬೀಬಿ ಫಾತಿಮಾ ಮಹಿಳಾ ಸಂಘಟನೆಯ ಯಶಸ್ಸಿನ ಬೇರುಗಳು ಉತ್ತರ ಕರ್ನಾಟಕದ ಮೊಹರಂ ಸಂಸ್ಕೃತಿಯಲ್ಲಿವೆ. ಕರ್ಬಲಾದ ಚರಿತ್ರೆಯಲ್ಲಿ ಪೈಗಂಬರರ ಪುತ್ರಿ ಬೀಬಿ ಫಾತೀಮಾ ತ್ಯಾಗ ಮತ್ತು ಸಹನದ ಸಂಕೇತವಾಗಿದ್ದಾರೆ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ 'ಬೀಬಿ ಫಾತಿಮಾಕಿ ದೋಸ್ತರಾ ದೀನ್' ಎಂಬ ಕೂಗು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ. ತೀರ್ಥ ಗ್ರಾಮದ ಬೀಬಿಜಾನ್ ಹಳೆಮನೆ ತಮ್ಮ ಸಂಘಟನೆಗೆ ಇದೇ ಹೆಸರನ್ನು ಇಡುವ ಮೂಲಕ, ಧರ್ಮಗಳನ್ನು ಮೀರಿದ ಗೆಳೆತನದ ಆಶಯವನ್ನು ಕೃಷಿ ರಂಗಕ್ಕೆ ತಂದಿದ್ದಾರೆ. ಇದು ಕೇವಲ ಒಂದು ಹೆಸರಲ್ಲ, ಬದಲಿಗೆ ಸಮುದಾಯದ ನಂಬಿಕೆಯನ್ನು ಗಳಿಸುವ ಒಂದು ಮಾರ್ಗವೂ ಹೌದು.

ವಿದೇಶಿ ನಿಯೋಗವನ್ನು ಸ್ವಾಗತಿಸಿದ ಬೀಬಿಜಾನ್‌

ಕೋವಿಡ್‌ ಸಮಯದಲ್ಲಿ ಆರಂಭವಾದ ಉದ್ಯಮ

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಉತ್ತರ ಕರ್ನಾಟಕದ ಅನೇಕ ಕೃಷಿ ಕಾರ್ಮಿಕ ಮಹಿಳೆಯರು ಕೆಲಸವಿಲ್ಲದೆ ಕಂಗಾಲಾಗಿದ್ದರು. ಈ ಹಿಂದೆ ಸಿದ್ಧ ಉಡುಪು (ಗಾರ್ಮೆಂಟ್ಸ್) ಉದ್ದಿಮೆಗಳಲ್ಲಿ ಕೂಲಿಗಳಾಗಿ ಕೆಲಸ ಮಾಡುತ್ತಿದ್ದ ಇವರೆಲ್ಲರೂ, ಕೋವಿಡ್ ಕಾಲದಲ್ಲಿ ಗಾರ್ಮೆಂಟ್ಸ್‌ಗಳು ಮುಚ್ಚಿದಾಗ ಮರಳಿ ಗ್ರಾಮಕ್ಕೆ ಬಂದರು. ಈ ಸಮಯದಲ್ಲಿ ಬೀಬಿಜಾನ್ ಹಳೆಮನೆ ಅವರು ಈ ಮಹಿಳೆಯರನ್ನು ಸಂಘಟಿಸಿ, "ನಾವು ಕೂಲಿಗಳಾಗುವ ಬದಲು ನಮ್ಮ ಮಣ್ಣಿನಲ್ಲೇ ಉದ್ಯಮಿಗಳಾಗೋಣ" ಎಂಬ ಕಿಚ್ಚು ಹಚ್ಚಿದರು. ಇದೇ 'ಬೀಬಿ ಫಾತಿಮಾ ಮಹಿಳಾ ಸಂಘ'ದ ಯಶಸ್ಸಿನ ಮೊದಲ ಹೆಜ್ಜೆಯಾಯಿತು.

ಬೀಜ ಬ್ಯಾಂಕ್ ಮತ್ತು ಸಾವಯವ ಕೃಷಿ

ಸಂಘದ ಅತ್ಯಂತ ಪ್ರಮುಖ ಸಾಧನೆಯೆಂದರೆ 'ಸಮುದಾಯ ಬೀಜ ಬ್ಯಾಂಕ್'. ಆಧುನಿಕ ಕೃಷಿಯಲ್ಲಿ ಹೈಬ್ರಿಡ್ ಬೀಜಗಳ ಹಾವಳಿಯಿಂದ ನಾಟಿ ಬೀಜಗಳು ನಾಶವಾಗುತ್ತಿರುವ ಈ ಕಾಲದಲ್ಲಿ, ಇವರು ಸುಮಾರು 120ಕ್ಕೂ ಹೆಚ್ಚು ತಳಿಯ ನಾಟಿ ಬೀಜಗಳನ್ನು ಸಂರಕ್ಷಿಸಿದ್ದಾರೆ. ಅಳಿವಿನ ಅಂಚಿನಲ್ಲಿರುವ ಸಿರಿಧಾನ್ಯಗಳು, ರಾಗಿ ಮತ್ತು ಸ್ಥಳೀಯ ತಳಿಗಳ ಬೀಜಗಳನ್ನು ಸಂಗ್ರಹಿಸಿ, ಅವುಗಳನ್ನು ರೈತರಿಗೆ ವಿತರಿಸುವ ಮೂಲಕ ಕೃಷಿ ವೈವಿಧ್ಯತೆಯನ್ನು ಕಾಪಾಡುತ್ತಿದ್ದಾರೆ. ಪರಿಸರ ಸ್ನೇಹಿ ತತ್ವಗಳನ್ನು ಪಾಲಿಸುವ ಇವರು, ಕೇವಲ ಧಾನ್ಯ ಬೆಳೆಯುವುದಲ್ಲದೆ, ಅವುಗಳಿಂದ ರೊಟ್ಟಿ, ಹಿಟ್ಟು ಮತ್ತು ಇತರ ಖಾದ್ಯಗಳನ್ನು ತಯಾರಿಸಿ ಮಾರುಕಟ್ಟೆಗೆ ತಲುಪಿಸುವ ಮೂಲಕ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ತಂದುಕೊಟ್ಟಿದ್ದಾರೆ.

ಸಮುದಾಯ ಗ್ರಾಮೀಣ ಬ್ಯಾಂಕ್‌ ಸದಸ್ಯರೊಂದಿಗೆ ಬೀಬಿಜಾನ್‌

ಸಹಜ ಸಮೃದ್ಧ ನೆರವಿನೊಂದಿಗೆ ಕಾರ್ಯ

'ಸಹಜ ಸಮೃದ್ದಿ' ಎಂಬ ಎನ್‌ಜಿಒ ಸಂಸ್ಥೆಯ ಮಾರ್ಗದರ್ಶನ ಹಾಗೂ ಹೈದರಾಬಾದಿನ 'ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ'ಯ ನೆರವಿನೊಂದಿಗೆ ತೀರ್ಥ ಗ್ರಾಮದಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಈ ಘಟಕವನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿರುವುದು ವಿಶೇಷ. ಜತೆಗೆ, ಸೆಲ್ಕೋ ಕಂಪನಿಯ ನೆರವಿನಿಂದ ಇಡೀ ಮಿಲ್ಲಿಂಗ್ ಯಂತ್ರಗಳು ಮತ್ತು ಸಂಸ್ಕರಣಾ ಘಟಕವು ಸಂಪೂರ್ಣವಾಗಿ ಸೌರಶಕ್ತಿ ಆಧಾರಿತವಾಗಿ ಕಾರ್ಯನಿರ್ವಹಿಸುತ್ತಿರುವುದು ಸುಸ್ಥಿರ ಅಭಿವೃದ್ಧಿಗೆ ದೊಡ್ಡ ಮಾದರಿಯಾಗಿದೆ. ಕೇವಲ ತಮ್ಮ ಹಳ್ಳಿಗಷ್ಟೇ ಸೀಮಿತವಾಗದೆ, ಶಿಗ್ಗಾಂವ ತಾಲೂಕಿನ 10 ಮತ್ತು ಕುಂದಗೋಳ ತಾಲೂಕಿನ 12 ಹಳ್ಳಿಗಳನ್ನು ಒಳಗೊಂಡಂತೆ ಸುತ್ತಮುತ್ತಲಿನ 22 ಹಳ್ಳಿಗಳ 52 ಸಂಘಗಳೊಂದಿಗೆ ಸೇರಿ ಬೀಜೋತ್ಪಾದನೆ ಮಾಡುತ್ತಾ, 5 ಜಿಲ್ಲೆಗಳಿಗೆ ನಾಟಿ ಬೀಜಗಳನ್ನು ಈ ಸಂಘ ಪೂರೈಸುತ್ತಿದೆ.

ಅಡೆತಡೆಗಳನ್ನು ಮೆಟ್ಟಿ ನಿಂತ ಬೀಬಿಜಾನ್

ಯಾವುದೇ ದೊಡ್ಡ ಬದಲಾವಣೆಯ ಹಿಂದೆ ಒಬ್ಬ ದೃಢಸಂಕಲ್ಪದ ವ್ಯಕ್ತಿ ಇರುತ್ತಾರೆ. ಬಯಲಾಟ ಕಲಾವಿದರಾದ ಭಾಷಾಸಾಬ್ ಸವಣೂರು ಅವರ ಪುತ್ರಿಯಾದ ಬೀಬಿಜಾನ್, ತಮ್ಮ ಸಮುದಾಯದ ವಿರೋಧದ ನಡುವೆಯೂ ಶಿಕ್ಷಣ ಪಡೆದವರು. ತೀರ್ಥ ಗ್ರಾಮದ ಮೌಲಾಸಾಬ್ ಎಂಬುವವರನ್ನು ವಿವಾಹವಾದ ನಂತರ ಕೃಷಿ ಕಾರ್ಮಿಕರಾಗಿ ಬದುಕು ಆರಂಭಿಸಿದ ಇವರು, ಕೃಷಿಯನ್ನು ಉದ್ಯಮವನ್ನಾಗಿ ಪರಿವರ್ತಿಸಲು ಹೊರಟ ಹಾದಿ ಸುಲಭವಾಗಿರಲಿಲ್ಲ. ಮುಸ್ಲಿಂ ಸಮುದಾಯದ ಮಹಿಳೆಯರು ಮನೆಯಿಂದ ಹೊರಬಂದು ಸಂಘಟನೆ ಕಟ್ಟುವುದು ಆರಂಭದಲ್ಲಿ ಬಹುದೊಡ್ಡ ಸವಾಲಾಗಿತ್ತು.

ಆರಂಭದಲ್ಲಿ ಸಂಘಟನೆಗೆ ಸೇರಲು ಮಹಿಳೆಯರು ಹಿಂದೇಟು ಹಾಕುತ್ತಿದ್ದರು ಹಾಗೂ ಮಹಿಳೆಯರು ಮಾಡುವ ಕಾರ್ಯದಲ್ಲಿ ಯಶಸ್ಸು ಸಾಧಿಸುವುದಿಲ್ಲ ಎಂಬ ಭಾವನೆ ಇತ್ತು. "ಆದರೂ ಎದೆಗುಂದದೆ ನಾವು ನಮ್ಮ ಕೆಲಸವನ್ನು ಮಾಡಿದೆವು. ನಾವು ಮುಸ್ಲಿಮರು ಎಂಬ ಕಾರಣಕ್ಕೆ ಬಹಳಷ್ಟು ಹಿಂದೂ ವರ್ಗದವರು ನಮ್ಮ ಸಂಘಟನೆಗೆ ಸೇರಲು ಹಿಂದೇಟು ಹಾಕುತ್ತಿದ್ದರು. ಆದರೆ, ಮಹಿಳೆಯರು ಮತ್ತು ರೈತರ ಸಬಲೀಕರಣಕ್ಕಾಗಿ ಕಾರ್ಯ ಮುಂದುವರಿಸಿದ್ದರಿಂದ, ಇದೀಗ ಎಲ್ಲಾ ವರ್ಗದವರೂ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಸಂಘಟನೆ ಯಶಸ್ವಿಯತ್ತ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೋ-ಆಪರೇಟಿವ್‌ ಸೊಸೈಟಿ ಆರಂಭಿಸುವ ಉದ್ದೇಶ ಹೊಂದಿದ್ದೇವೆ" ಎಂದು ಬೀಬಿಜಾನ್ 'ದ ಫೆಡರಲ್‌ ಕರ್ನಾಟಕ'ಕ್ಕೆ ತಿಳಿಸಿದ್ದಾರೆ. 2019 ರಲ್ಲಿ 'ಬೀಬಿ ಫಾತಿಮಾ ಮಹಿಳಾ ಸಂಘ' ಅಸ್ತಿತ್ವಕ್ಕೆ ಬಂದಾಗ, ಅದು ಕೇವಲ ಮಹಿಳೆಯರ ಗುಂಪಾಗದೆ ಒಂದು ಆರ್ಥಿಕ ಶಕ್ತಿಯಾಗಿ ರೂಪಾಂತರಗೊಂಡಿತು.

ಮೊದಲ ಬಾರಿಗೆ 'ಡೆಕ್ಕನ್ ಹೆರಾಲ್ಡ್' ಪತ್ರಿಕೆಯು 2023 ರಲ್ಲಿ ಬೀಬಿಜಾನ್ ಅವರ ಈ ಸಾಧನೆಯನ್ನು ಗಮನಿಸಿ 'ಚೇಂಜ್ ಮೇಕರ್' ಎಂದು ಗುರುತಿಸಿತು. ಅವರ ಬಗೆಗೊಂದು ಕಿರುಚಿತ್ರವನ್ನು ನಿರ್ಮಿಸಿತು. ವಿಶ್ವಸಂಸ್ಥೆಯ ಗಮನ ಸೆಳೆಯಲು ಈ ಕಿರುಚಿತ್ರವೂ ಸಹಾಯಕವಾಗಿದೆ. ಅಲ್ಲದೇ, ಇವರಿಗೆ 'ಸ್ಪೂರ್ತಿಧಾಮ' ನೀಡುವ ಬೌದ್ಧವರ್ಧನ ಪ್ರಶಸ್ತಿಯೂ ಲಭಿಸಿದೆ.

ವಸ್ತುಪ್ರದರ್ಶನದಲ್ಲಿ ಬೀಬಿಜಾನ್‌

ಜೀವ ವೈವಿಧ್ಯತೆಯ ನೊಬೆಲ್

ವಿಶ್ವಸಂಸ್ಥೆಯು ನೀಡುವ 'ಈಕ್ವೇಟರ್ ಇನಿಶಿಯೇಟಿವ್' ಪ್ರಶಸ್ತಿಯು ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ಅತ್ಯುನ್ನತ ಗೌರವವಾಗಿದೆ. ಅರ್ಜೆಂಟೀನಾ, ಬ್ರೆಜಿಲ್ ಸೇರಿದಂತೆ 103 ದೇಶಗಳ 700 ಕ್ಕೂ ಹೆಚ್ಚು ಸ್ಪರ್ಧಿಗಳ ನಡುವೆ ತೀರ್ಥ ಗ್ರಾಮದ ಈ ಪುಟ್ಟ ಸಂಘವು ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ನಿಸರ್ಗ ಆಧಾರಿತ ಹವಾಮಾನ ನಿಯಂತ್ರಣಕ್ಕೆ ಮಹಿಳಾ ನಾಯಕತ್ವ ಎಂಬ ಮಾನದಂಡದ ಮೇಲೆ ಈ ಪ್ರಶಸ್ತಿ ಸಂದಿದೆ. ಮಳೆಯಾಶ್ರಿತ ಜಮೀನಿನಲ್ಲಿ ಸಿರಿಧಾನ್ಯಗಳ ಮಿಶ್ರಬೆಳೆ ಬೆಳೆಯುವ ಮೂಲಕ ಇವರು ಹವಾಮಾನ ಬದಲಾವಣೆಯ ಸವಾಲಿಗೆ ಪರಿಹಾರ ಕಂಡುಕೊಂಡಿದ್ದಾರೆ. ಇದು ಗ್ರಾಮೀಣ ಮಹಿಳೆಯರ ಜ್ಞಾನಕ್ಕೆ ದೊರೆತ ಜಾಗತಿಕ ಮನ್ನಣೆಯಾಗಿದೆ.

ಸಾಮಾಜಿಕ ಸಾಮರಸ್ಯದ ಸಂಕೇತ

ಈ ಸಂಘಟನೆಯ ಮತ್ತೊಂದು ಗಮನಾರ್ಹ ಅಂಶವೆಂದರೆ ಅಲ್ಲಿನ ಕೋಮು ಸೌಹಾರ್ದತೆ. ಮುಸ್ಲಿಂ ಮಹಿಳೆಯರು ಕಟ್ಟಿದ ಈ ಸಂಘದಲ್ಲಿ ಹಿಂದೂ ಮಹಿಳೆಯರೂ ಸಹೋದರಿಯರಂತೆ ಸಕ್ರಿಯರಾಗಿದ್ದಾರೆ. ಧರ್ಮಗಳನ್ನು ಮೀರಿ, ಮಣ್ಣಿನ ಗುಣ ಮತ್ತು ಮಾನವೀಯತೆಯ ಆಧಾರದ ಮೇಲೆ ಈ ಸಂಘಟನೆ ಕಟ್ಟಲ್ಪಟ್ಟಿದೆ.

ಇದು ಕೇವಲ ಕಾಗದದ ಮೇಲಿನ ಸೌಹಾರ್ದತೆಯಲ್ಲ, ಬದಲಿಗೆ ದಿನನಿತ್ಯದ ಶ್ರಮದಲ್ಲಿ ವ್ಯಕ್ತವಾಗುವ ಸಹಬಾಳ್ವೆಯಾಗಿದೆ. ರಾಗಿ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುವಾಗ ಅಥವಾ ಬೀಜ ಬ್ಯಾಂಕ್‌ನಲ್ಲಿ ತಳಿಗಳನ್ನು ಬೇರ್ಪಡಿಸುವಾಗ ಅಲ್ಲಿ ಯಾರು ಮುಸ್ಲಿಂ, ಯಾರು ಹಿಂದೂ ಎಂಬ ಭೇದವಿಲ್ಲ; ಸುಸ್ಥಿರ ಕೃಷಿ ಮತ್ತು ಕುಟುಂಬದ ಆರ್ಥಿಕ ಭದ್ರತೆಯಷ್ಟೇ ಅವರ ಗುರಿಯಾಗಿದೆ. ತೀರ್ಥ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಹಿಂದೂಗಳು ಸಂಭ್ರಮದಿಂದ ಆಚರಿಸಿದರೆ, ಹಿಂದೂಗಳ ಹಬ್ಬಗಳಲ್ಲಿ ಮುಸ್ಲಿಂ ಕುಟುಂಬಗಳು ಪಾಲ್ಗೊಳ್ಳುತ್ತವೆ. ಈ ಗ್ರಾಮದ ಸಂಸ್ಕೃತಿಯೇ ಬೀಬಿ ಫಾತಿಮಾ ಸಂಘದ ಬಲವಾಗಿದೆ.

ಬೀಬಿಜಾನ್ ಅವರು ಕಾಣುತ್ತಿರುವ 'ಕೋ-ಆಪರೇಟಿವ್ ಸೊಸೈಟಿ'ಯ ಕನಸು ನನಸಾದರೆ, ಉತ್ತರ ಕರ್ನಾಟಕದ ರೈತ ಮಹಿಳೆಯರ ಬದುಕು ಮತ್ತಷ್ಟು ಹಸನಾಗುವುದರಲ್ಲಿ ಸಂಶಯವಿಲ್ಲ. ಅವರ ಈ ಹಾದಿಯು ಎಲ್ಲ ಮಹಿಳಾ ಸಂಘಟನೆಗಳಿಗೂ ಮಾದರಿಯಾಗಿದೆ.

ರಾಗಿ ಹೊಲದಲ್ಲಿ ಕೃಷಿ ಕಾಯಕದಲ್ಲಿ ತೊಡಗಿರುವ ಬೀಬಿಜಾನ್‌

Read More
Next Story