ಚಿತ್ರದುರ್ಗದ 90 ಕೆರೆಗಳಿಗೆ ಭದ್ರೆಯ ಅಭಯ; 20 ವರ್ಷಗಳ ರೈತ ಹೋರಾಟಕ್ಕೆ ಕೊನೆಗೂ ಜಯ
x

ಚಿತ್ರದುರ್ಗದ 90 ಕೆರೆಗಳಿಗೆ ಭದ್ರೆಯ ಅಭಯ; 20 ವರ್ಷಗಳ ರೈತ ಹೋರಾಟಕ್ಕೆ ಕೊನೆಗೂ ಜಯ

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಿಂದ ಚಿತ್ರದುರ್ಗದ ಗೋನೂರು ಅಕ್ವಡಕ್ಟ್‌ವರೆಗಿನ ಸುಮಾರು 114 ಕಿ.ಮೀ. ದೂರದವರೆಗೆ ಪ್ರಾಯೋಗಿಕವಾಗಿ ನೀರು ಹರಿಸಲು ಸರ್ಕಾರ ಸಿದ್ಧತೆಗಳನ್ನು ಮಾಡಿಕೊಂಡಿದೆ.


ಮಳೆಯನ್ನೇ ನಂಬಿ ಬದುಕುತ್ತಿದ್ದ, ಅಂತರ್ಜಲ ಕುಸಿತದಿಂದ ತತ್ತರಿಸಿದ್ದ ಚಿತ್ರದುರ್ಗ ಜಿಲ್ಲೆಗೆ ಈಗ ಭದ್ರೆಯ ನೀರು ಹರಿಯುವ ಕಾಲ ಕೂಡಿಬಂದಿದೆ. ‘ಭದ್ರಾ ಮೇಲ್ದಂಡೆ ಯೋಜನೆ’ಯ ಜಾರಿಗಾಗಿ ಕಳೆದ ಎರಡು ದಶಕಗಳಿಂದ ನಡೆಯುತ್ತಿದ್ದ ರೈತರ ಸುದೀರ್ಘ ಹೋರಾಟಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಗುವ ಕಾಲ ಸನ್ನಿಹಿತವಾಗಿದೆ. ಚಿತ್ರದುರ್ಗ ಜಿಲ್ಲೆಯ ಕೆರೆಗಳಿಗೆ ಭದ್ರಾ ನದಿಯ ನೀರನ್ನು ಹರಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ನೀರು ಹರಿಯುವುದು ಖಚಿತವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ವೈ ಜಂಕ್ಷನ್‌ನಿಂದ ಚಿತ್ರದುರ್ಗ ಶಾಖಾ ಕಾಲುವೆಯ ಮೂಲಕ ನೀರನ್ನು ಹರಿಸಲಾಗುವುದು. ಅಜ್ಜಂಪುರದಿಂದ ಚಿತ್ರದುರ್ಗದ ಗೋನೂರು ಅಕ್ವಡಕ್ಟ್‌ವರೆಗಿನ ಸುಮಾರು 114 ಕಿ.ಮೀ. ದೂರದವರೆಗೆ ಪ್ರಾಯೋಗಿಕವಾಗಿ ನೀರು ಹರಿಸಲು ಸರ್ಕಾರ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಮೊದಲ ಹಂತದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಒಟ್ಟು 90 ಕೆರೆಗಳನ್ನು ಭದ್ರಾ ನೀರಿನಿಂದ ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಕೇವಲ ಕೃಷಿಗೆ ಮಾತ್ರವಲ್ಲದೆ, ಜಿಲ್ಲೆಯ ಅಂತರ್ಜಲ ಮಟ್ಟ ವೃದ್ಧಿಗೂ ಮತ್ತು ಕುಡಿಯುವ ನೀರಿನ ಸಮಸ್ಯೆಗೂ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ. 2018-2023 ರವರೆಗಿನ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದ್ದವು. ಭೂಸ್ವಾಧೀನ ಪ್ರಕ್ರಿಯೆ ಮತ್ತು ತಾಂತ್ರಿಕ ಅಡೆತಡೆಗಳಿಂದಾಗಿ ಯೋಜನೆಯು ಕುಂಟುತ್ತಾ ಸಾಗಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.

ಆದರೆ ಪ್ರಸ್ತುತ ಸರ್ಕಾರವು ಬಾಕಿ ಉಳಿದಿದ್ದ ಸಮಸ್ಯೆಗಳನ್ನು ಬಗೆಹರಿಸಿ, ಕಾಮಗಾರಿಗೆ ವೇಗ ನೀಡುವ ಮೂಲಕ ಈಗ ಪ್ರಾಯೋಗಿಕವಾಗಿ ನೀರು ಹರಿಸಲು ಸನ್ನದ್ಧವಾಗಿದೆ. ಕಾಲುವೆಯ ಕೊನೆಯ ಹಂತದ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಗೋನೂರು ಅಕ್ವಡಕ್ಟ್ ತಾಂತ್ರಿಕವಾಗಿ ಅತ್ಯಂತ ಪ್ರಮುಖವಾದ ಹಂತವಾಗಿದೆ.

ಪ್ರಯೋಗಿಕವಾಗಿ ನೀರು ಹರಿಸಲು ಸಿದ್ಧತೆ

ಯೋಜನೆಯ ಅತ್ಯಂತ ಪ್ರಮುಖ ಹಂತವೆಂದರೆ ಚಿಕ್ಕಮಗಳೂರಿನ ಅಜ್ಜಂಪುರ ವೈ-ಜಂಕ್ಷನ್‌ನಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿಸುವುದಾಗಿದೆ. ಅಜ್ಜಂಪುರದಿಂದ ಚಿತ್ರದುರ್ಗದ ಗೋನೂರು ಅಕ್ವಡಕ್ಟ್ ವರೆಗಿನ 114 ಕಿ.ಮೀ ದೂರದವರೆಗೆ ಪ್ರಾಯೋಗಿಕವಾಗಿ ನೀರು ಹರಿಸಲು ಸಿದ್ಧತೆ ನಡೆದಿದೆ. ಚಿತ್ರದುರ್ಗದ ಸಮೀಪವಿರುವ ಕಾಲುವೆ ಸುಮಾರು 120 ಅಡಿ ಎತ್ತರದಲ್ಲಿದೆ. ಇದನ್ನು ರಾಜ್ಯದ ಅತಿ ಎತ್ತರದ ಚಾನಲ್ ಡಕ್ಟ್ ಎಂದು ಗುರುತಿಸಲಾಗಿದೆ. ಈ ಎತ್ತರದಲ್ಲಿ ನೀರನ್ನು ಸಾಗಿಸುವುದು ತಾಂತ್ರಿಕವಾಗಿ ಸವಾಲಿನ ಕೆಲಸವಾಗಿದ್ದು, ಯೋಜನೆಯ ಯಶಸ್ಸಿನಲ್ಲಿ ಎಂಜಿನಿಯರ್‌ಗಳ ಪರಿಶ್ರಮ ಅಪಾರವಾಗಿದೆ.

ಯೋಜನೆಯ ಮೊದಲ ಹಂತದಲ್ಲಿ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಲಾಗಿದೆ. ಒಟ್ಟು 90 ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸುವ ಗುರಿ ಹೊಂದಲಾಗಿದ್ದು, ಹೊಸದುರ್ಗ ತಾಲ್ಲೂಕಿನ 32 ಕೆರೆಗಳು, ಹೊಳಲ್ಕೆರೆ ತಾಲ್ಲೂಕಿನ 30 ಕೆರೆಗಳು, ಹಿರಿಯೂರು ತಾಲ್ಲೂಕಿನ 3 ಕೆರೆಗಳು, ಚಿತ್ರದುರ್ಗದ 3 ಮತ್ತು ಕಡೂರು ತಾಲ್ಲೂಕಿನ 28 ಕೆರೆಗಳಿಗೆ ಆರಂಭಿಕ ಹಂತದಲ್ಲಿ ನೀರು ಸಿಗಲಿದೆ. ಆಗಸ್ಟ್ ತಿಂಗಳ ವೇಳೆಗೆ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು. ಇದರಿಂದ ಚಳ್ಳಕೆರೆ, ಮೊಳಕಾಲ್ಮೂರು, ಪಾವಗಡ ಮತ್ತು ಶಿರಾ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಯಲಿದೆ. ಇದು ಕೇವಲ ಕೃಷಿಗೆ ಮಾತ್ರವಲ್ಲದೆ, ಈ ಭಾಗದ ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ನೀಡಲಿದೆ ಎಂದು ಹೇಳಲಾಗಿದೆ.

ರಾಜ್ಯ ಹಾಗೂ ಕೇಂದ್ರದ ಪಾಲು

ಯೋಜನೆಯ ಒಟ್ಟು ವೆಚ್ಚ ಹಾಗೂ ಅನುದಾನದ ಲಭ್ಯತೆ ಈ ಯೋಜನೆಯ ವೇಗವನ್ನು ನಿರ್ಧರಿಸಲಿದೆ. 200-300 ಕೋಟಿ ರೂ. ಬಿಡುಗಡೆಗೆ ಸರ್ಕಾರ ಮುಂದಾಗಿದೆ. ಜೊತೆಗೆ, ಕೆರೆ ತುಂಬಿಸುವ ಮತ್ತು ಹನಿ ನೀರಾವರಿಗಾಗಿ 2,800 ಕೋಟಿ ರೂ. ಬೃಹತ್ ಟೆಂಡರ್ ಪ್ರಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ. 2022ರ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ‘ರಾಷ್ಟ್ರೀಯ ಯೋಜನೆ’ ಎಂಬ ಮಾನ್ಯತೆ ಸೂಚಿಸಿ 5,300 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಲಾಗಿತ್ತು. ಆದರೆ, ಈ ಹಣ ಇನ್ನೂ ರಾಜ್ಯಕ್ಕೆ ತಲುಪಿಲ್ಲ. ಈ ಬೃಹತ್ ಮೊತ್ತ ಬಿಡುಗಡೆಯಾದರೆ ಯೋಜನೆಯ ಉಳಿದ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳ್ಳಲಿವೆ. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ರಾಜ್ಯ ಸರ್ಕಾರವು ಈಗಾಗಲೇ ಹಲವಾರು ಬಾರಿ ಮನವಿ ಮಾಡಿದ್ದು, ಜಿಲ್ಲೆಯ ಜನರ ಪರವಾಗಿ ಒತ್ತಡ ಹೇರಲಾಗುತ್ತಿದೆ. ಆದರೆ ಕೇಂದ್ರದಿಂದ ಹಣ ಬಿಡುಗಡೆಯಾಗದಿರುವುದು ಜಿಲ್ಲೆಯ ಜನತೆಯಲ್ಲಿ ಬೇಸರ ತರಿಸಿದೆ.

ಯೋಜನೆಯ ವಿಶೇಷತೆಯೆಂದರೆ ಕೇವಲ ಕಾಲುವೆ ನೀರಾವರಿಯಲ್ಲ, ಆಧುನಿಕ ಹನಿ ನೀರಾವರಿ ಮಾದರಿಯನ್ನು ಹೊಂದಿದೆ. ಈ ಯೋಜನೆಯಿಂದ ಒಟ್ಟು 5,25,000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಇದೆ. ನೀರಿನ ಪೋಲನ್ನು ತಡೆಗಟ್ಟಲು ಮತ್ತು ಲಭ್ಯವಿರುವ ನೀರನ್ನು ಗರಿಷ್ಠ ಪ್ರಮಾಣದ ಭೂಮಿಗೆ ತಲುಪಿಸಲು ಹನಿ ಹಾಗೂ ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಲಾಗುತ್ತಿದೆ. ಇದು ಬಯಲು ಸೀಮೆಯ ಅಲ್ಪ ನೀರಿನ ಲಭ್ಯತೆಯಲ್ಲಿ ಬಂಪರ್ ಇಳುವರಿ ಪಡೆಯಲು ರೈತರಿಗೆ ಸಹಕಾರಿಯಾಗಲಿದೆ.

ಸಾಮಾಜಿಕ, ಆರ್ಥಿಕ ಪರಿಣಾಮಗಳು

ಈ ಯೋಜನೆ ಪೂರ್ಣಗೊಂಡರೆ ಚಿತ್ರದುರ್ಗ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ. ನೀರಿಲ್ಲದೆ ಕೃಷಿ ಬಿಟ್ಟು ನಗರಗಳಿಗೆ ವಲಸೆ ಹೋಗುತ್ತಿದ್ದ ರೈತರು ಮತ್ತು ಕಾರ್ಮಿಕರು ಮತ್ತೆ ಕೃಷಿಯತ್ತ ಮರಳುವಂತಾಗುತ್ತದೆ. ಕೇವಲ ಶೇಂಗಾ ಮತ್ತು ರಾಗಿಗೆ ಸೀಮಿತವಾಗಿದ್ದ ಈ ಭಾಗದಲ್ಲಿ ತೋಟಗಾರಿಕಾ ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳು ಹೊಸ ಆಯಾಮ ಪಡೆಯಲಿವೆ. ನೂರಾರು ಕೆರೆಗಳು ತುಂಬುವುದರಿಂದ ಸುತ್ತಮುತ್ತಲ ಬೋರ್‌ವೆಲ್‌ಗಳು ಪರಿಸರ ಸಮತೋಲನ ಕಾಯ್ದುಕೊಳ್ಳಬಹುದು. ಬರಗಾಲದಲ್ಲಿ ಮೇವು ಹಾಗೂ ನೀರಿಲ್ಲದೆ ಸಾಯುತ್ತಿದ್ದ ಜಾನುವಾರುಗಳಿಗೆ ಈ ಕೆರೆಗಳು ಜೀವಧಾರೆಯಾಗಲಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಇತ್ತೀಚೆಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ವೀಕ್ಷಿಸಿದರು. ಬಳಿಕ ಅವರು ಜಿಲ್ಲೆಗೆ ನೀರು ಹರಿಸುವ ಕಾರ್ಯವನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು. ಚಿಕ್ಕಮಗಳೂರಿನ ಅಜ್ಜಂಪುರ ವೈ ಜಂಕ್ಷನ್‌ನಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಗೋನೂರು ಅಕ್ವ ಡಕ್ಟ್‌ವರೆಗೂ ಪ್ರಯೋಗಿಕವಾಗಿ ನೀರು ಹರಿಸಲಾಗುವುದು ಎಂದು ಹೇಳಿದರು.

ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿದ ನೀರಾವರಿ ತಜ್ಞ ಕ್ಯಾಪ್ಟನ್‌ ರಾಜಾರಾವ್‌, "ಈ ಯೋಜನೆ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದೆ. ಸರ್ಕಾರ ಇದಕ್ಕೆ ವೇಗ ನೀಡಿರುವುದು ಸಂತಸದ ವಿಷಯ. ಸಾಂಪ್ರದಾಯಿಕ ಕಾಲುವೆ ನೀರಾವರಿಯಲ್ಲಿ ಶೇ. 40-50ರಷ್ಟು ನೀರು ಇಂಗುವಿಕೆ ಮತ್ತು ಆವಿಯಾಗುವಿಕೆಯಿಂದ ವ್ಯರ್ಥವಾಗುತ್ತದೆ," ಎಂದರು.

"ಹನಿ ನೀರಾವರಿಯಿಂದ ಶೇ. 90ರಷ್ಟು ನೀರು ನೇರವಾಗಿ ಬೆಳೆಗಳ ಬುಡಕ್ಕೆ ಸೇರುತ್ತದೆ. ಇದು ಚಿತ್ರದುರ್ಗದಂತಹ ಅಲ್ಪ ಮಳೆಯ ಜಿಲ್ಲೆಗಳಿಗೆ ವರದಾನ. ಹನಿ ನೀರಾವರಿ ವ್ಯವಸ್ಥೆಯನ್ನು ಲಕ್ಷಾಂತರ ಎಕರೆಗಳಲ್ಲಿ ಅಳವಡಿಸುವುದು ಮತ್ತು ಅದರ ಪೈಪ್‌ಲೈನ್‌ಗಳನ್ನು ರೈತರು ಸಮರ್ಪಕವಾಗಿ ನಿರ್ವಹಿಸುವಂತೆ ತರಬೇತಿ ನೀಡುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲು," ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

Read More
Next Story