
Bangalore STRR| ಉಪನಗರ ವರ್ತುಲ ರಸ್ತೆಗೆ ಮರುಜೀವ: ತಮಿಳುನಾಡು, ಆಂಧ್ರಕ್ಕೂ ಸುಲಭ ಸಂಪರ್ಕ
ಎಸ್‌ಟಿಆರ್‌ಆರ್ ಯೋಜನೆ 7 ರಾಷ್ಟ್ರೀಯ ಹಾಗೂ 15 ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸಲಿದ್ದು, ರಾಜಧಾನಿ ಸಂಚಾರ ಒತ್ತಡ ಕಡಿಮೆ ಮಾಡಲಿದೆ. ಜತೆಗೆ 12 ಉಪನಗರಗಳ ಅಭಿವೃದ್ಧಿಗೆ ವೇಗ ನೀಡಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಮೇಲಿನ ಸಂಚಾರ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಿದ್ದಉಪನಗರ ವರ್ತುಲ ರಸ್ತೆ (ಎಸ್‌ಟಿಆರ್‌ಆರ್ -ಸ್ಯಾಟಲೈಟ್ ಟೌನ್ ರಿಂಗ್ ರೋಡ್) ಯೋಜನೆ ಮರುಜೀವ ಪಡೆದಿದೆ.
ಈಗಾಗಲೇ ಪೂರ್ಣಗೊಂಡಿರುವ 2 ರಾಷ್ಟ್ರೀಯ ಹೆದ್ದಾರಿಗಳೊಂದಿಗೆ, ಇನ್ನುಳಿದ ಐದು ಹೆದ್ದಾರಿ ಕಾಮಗಾರಿಗಳು ಆದಷ್ಟು ಶೀಘ್ರದಲೇ ಪ್ರಾರಂಭಗೊಳ್ಳಲಿವೆ. 7 ರಾಷ್ಟ್ರೀಯ, 15 ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗಳು ಬೆಂಗಳೂರು ರಸ್ತೆಗಳಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡುವುದರೊಂದಿಗೆ, ರಾಜಧಾನಿಗೆ ಸಂಪರ್ಕ ಸೇತುವೆಯಾಗಲಿದೆ ಎಂಬ ಆಶಾಭಾವನೆ ಇದೆ.
20 ವರ್ಷಗಳ ಬಳಿಕ ನನಸು
ಬೆಂಗಳೂರು ನಗರದ ಸುತ್ತಲಿನ 11 ನಗರಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಎಸ್‌ಟಿಆರ್‌ಆರ್ ಯೋಜನೆಗೆ 2005 ರಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, 2017ರವರೆಗೂ ಇದು ಕೇವಲ ಪ್ರಸ್ತಾವನೆ ಹಂತದಲ್ಲೇ ಉಳಿದಿತ್ತು. 2017ರಲ್ಲಿ ಭಾರತ್‌ಮಾಲಾ ಯೋಜನೆಯಡಿ ಮತ್ತೆ ಈ ರಸ್ತೆಯ ನಿರ್ಮಾಣಕ್ಕೆ ಜೀವ ಬಂದಿತ್ತು. 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಹಂತದ ಎಸ್‌ಟಿಆರ್‌ಆರ್ ರಸ್ತೆಗೆ ಚಾಲನೆ ನೀಡಿದರು. 2024ರ ಮಾರ್ಚ್ ತಿಂಗಳಿನಲ್ಲಿ ಒಟ್ಟು 80 ಕಿಮೀ ದೂರದ ದಾಬಸ್ ಪೇಟೆ-ದೊಡ್ಡಬಳ್ಳಾಪುರ ರಿಂಗ್ ರಸ್ತೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು.
ಕೆಲ ಯೋಜನೆಗಳಿಗೆ 2021ರಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪೂರ್ಣಪ್ರಮಾಣದ ಪರಿಹಾರ ವಿತರಣೆ ನಡೆದಿಲ್ಲ. 2024 ರ ಸೆ.5 ರಂದು 144 ಕಿ.ಮೀ ದೂರದ ಮತ್ತೊಂದು ಕಾಮಗಾರಿಗೆ ಎನ್‌ಎಚ್‌ಎಐ ಟೆಂಡರ್ ಕರೆದಿದ್ದು, ಕೇಂದ್ರ ಸಂಪುಟದ ಅನುಮೋದನೆಗಾಗಿ ಕಾಯುತ್ತಿದೆ. ಇನ್ನುಳಿದ ಹೆದ್ದಾರಿ ಕಾಮಗಾರಿಗಳಿಗಾಗಿ ಸ್ವಾಧೀನ ಪಡಿಸಿಕೊಳ್ಳಬೇಕಿರುವ ಭೂಮಿ ಗುರುತಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೈತರಿಗೆ ಪರಿಹಾರ ನೀಡಿರಲಿಲ್ಲ. ಕೇಂದ್ರದ ಹಂತದಲ್ಲಿಯೇ ಯೋಜನೆ ಹಳ್ಳ ಹಿಡಿದಿತ್ತು. ಆದರೀಗ ಮತ್ತೆ ಯೋಜನೆ ಪ್ರಾರಂಭಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವರು ಹಾಗೂ ಹಣಕಾಸು ಸಚಿವರು ಭರಸವೆ ನೀಡಿದ್ದಾರೆ.
ಇತ್ತೀಚೆಗೆ ರಾಮನಗರದ ಗ್ರಾಮವೊಂದರಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು, ಎಸ್‌ಟಿಆರ್‌ಆರ್ ಯೋಜನೆಗೆ ಈಗಾಗಲೇ ಹೆದ್ದಾರಿ ಮತ್ತು ಭೂಸಾರಿಗೆ ಸಚಿವಾಲಯ ಮತ್ತು ಹಣಕಾಸು ಸಚಿವಾಲಯ ಅನುಮೊದನೆ ನೀಡಿದೆ. ಕ್ಯಾಬಿನೆಟ್ ಅನುಮತಿ ಮಾತ್ರ ಬಾಕಿ ಉಳಿದಿದೆ. ಸಚಿವಾಲಯಗಳಿಂದ ಅನುಮೋದನೆ ದೊರೆತಿರುವ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದಿದ್ದರು. ಇದರೊಂದಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಹ ಈ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಹಾಗೂ ಭೂಮಿ ಕಳೆದುಕೊಂಡಿರುವ ರೈತರಿಗೆ ತ್ವರಿತವಾಗಿ ಪರಿಹಾರ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಗೂ ಕೇಂದ್ರದ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ವಿನಂತಿಸಿದ್ದರು.
ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಗಡ್ಕರಿ, ನಿಮ್ಮ ಮನವಿಯನ್ನು, ಅದರ ಸಾಧಕ ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಭೂ ಪರಿಹಾರ ನೀಡುವ ಬಗ್ಗೆ ಸಂಪುಟದ ಅನುಮೋದನೆ ಅಗತ್ಯವಾಗಿದ್ದು, ಅದಕ್ಕಾಗಿ ತಮ್ಮ ಮನವಿ ಪತ್ರ ಹಾಗೂ ಅದಕ್ಕೆ ಸಂಬಂಧಿತ ಪ್ರಸ್ತಾವನೆಯನ್ನು ಪ್ರಧಾನಿಗಳ ಕಾರ್ಯಾಲಯಕ್ಕೆ ರವಾನಿಸಿದ್ದೇನೆ ಎಂದು ಉತ್ತರ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 948Aಗೆ ಸಂಪರ್ಕ ಕಲ್ಪಿಸುವ ನೆಲಮಂಗಲ ತಾಲೂಕಿನ ತಾಲೂಕಿನ ಓಬಳಾಪುರದಿಂದ ರಾಮನಗರ ತಾಲೂಕಿನ ಕುಣಗಾಲುವರೆಗೆ ಹಾಗೂ ರಾಮನಗರದ ಕುಣಗಾಲು ನಿಂದ ಹೊಸೂರು ತಾಲೂಕಿನ ಎಸ್. ಮುದುಗದಪಲ್ಲಿವರೆಗೆ ಉಪನಗರ ವರ್ತುಲ ರಸ್ತೆ ನಿರ್ಮಾಣ ಯೋಜನೆ ಸಂಬಂಧ 2023ರವರೆಗೆ ಈ ಎರಡು ವಿಭಾಗಗಳಲ್ಲಿ 216.92 ಕೋಟಿ ಹಾಗೂ 52.70 ಕೋಟಿ ಭೂ ಪರಿಹಾರವನ್ನು ವಿತರಣೆ ಮಾಡಲಾಗಿದೆ. ಹೀಗಾಗಿ ಕಾಮಗಾರಿ ಸ್ಥಗಿತಗೊಳ್ಳುವ ಆತಂಕಗಳಿಲ್ಲಎಂದು ಕೇಂದ್ರ ಸಚಿವಾಲಯ ಉತ್ತರಿಸುವ ಬೆನ್ನಲೆ, ಯೋಜನೆ ಮರು ಆರಂಭಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ
ಏನಿದು ಯೋಜನೆ ? ರಾಜ್ಯದಿಂದ -ಕೇಂದ್ರಕ್ಕೆ ?
ಬೆಂಗಳೂರಿನ ಬೆಳವಣಿಗೆಯನ್ನು ವಿಕೇಂದ್ರೀಕರಣಗೊಳಿಸಿ ಬೆಂಗಳೂರು ಸುತ್ತಲಿನ 12 ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದಿಮದ 288 ಕಿಮೀ ಉದ್ದದ ಸ್ಯಾಟಲೈಟ್ ಟೌನ್ ರಿಂಗ್ ರೋಡ್(ಎಸ್‌ಟಿಆರ್‌ಆರ್) ಯೋಜನೆಯನ್ನು 2005ರಲ್ಲಿ ರಾಜ್ಯ ಸರ್ಕಾರ ರೂಪಿಸಿತ್ತು. ಆದರೆ, ಈ ಯೋಜನೆ ಕಾರ್ಯಗತಗೊಳ್ಳುವುದು ವಿಳಂಬವಾಗಿತ್ತು.
2017ರಲ್ಲಿ ಈ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭಾರತಮಾಲಾ ಯೋಜನೆಯಡಿ ಕೈಗೆತ್ತಿಕೊಂಡು ಬೆಂಗಳೂರಿನ ಹೊರಭಾಗದಲ್ಲಿ ಹಾದು ಹೋಗುವ ಎನ್‌ಎಚ್ 648 ಮತ್ತು ಎನ್‌ಎಚ್ 648ಎ ಅನ್ನು ದಾಬಸ್‌ಪೇಟೆಯಿಂದ ದೊಡ್ಡಬಳ್ಳಾಪುರ ಬೈಪಾಸ್‌ವರೆಗೆ (42 ಕಿಮೀ 1 ,438 ಕೋಟಿ ರೂ. ಅಂದಾಜು ವೆಚ್ಚ), ದೊಡ್ಡಬಳ್ಳಾಪುರ ಬೈಪಾಸ್‌ನಿಂದ ಹೊಸಕೋಟೆ ವರೆಗೆ (37.6 ಕಿಮೀ 1 ,317 ಕೋಟಿ ರೂ. ಅಂದಾಜು ವೆಚ್ಚ) ನಿರ್ಮಾಣ ಮಾಡಿದ್ದು, 2024ರ ಮಾರ್ಚ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ರಸ್ತೆಯನ್ನು ಉದ್ಘಾಟಿಸಿದ್ದರು. ಆದರೆ, ಎಸ್‌ಟಿಆರ್‌ಆರ್ ಉಳಿದ ರಸ್ತೆಯ ಅಭಿವೃದ್ಧಿ ಹಾಗೇ ಉಳಿದಿತ್ತು.
ಬೆಂಗಳೂರು ನಗರದ ಸುತ್ತಲಿನ ಜಿಲ್ಲೆಗಳಲ್ಲಿ ನಿರ್ಮಾಣಗೊಳ್ಳಲಿರುವ ಎಸ್‌ಟಿಆರ್‌ಆರ್ ರಸ್ತೆ
ಐದು ಪ್ಯಾಕೆಜ್‌ನಲ್ಲಿ ಕಾಮಗಾರಿ
ಎಸ್‌ಟಿಆರ್‌ಆರ್ ಯೋಜನೆಗೆ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಒಟ್ಟು 5 ಹಂತದ ಪ್ಯಾಕೇಜ್‌ನಲ್ಲಿ ಕಾಮಗಾರಿ ನಡೆಸಲು ಉದ್ದೇಶಿಸಿ ಅಂದಾಜು ಪಟ್ಟಿಯನ್ನು ಸಿದ್ದಪಡಿಸಿದೆ. ಈ ಯೋಜನೆ ಈಗಾಗಲೇ 80 ಕಿ.ಮೀ ನಷ್ಟು ಕಾಮಗಾರಿ ನಡೆದಿದ್ದು, ಮುಂದಿವರೆದ ಭಾಗವಾಗಿ 144 ಕಿ.ಮೀ ನಿರ್ಮಾಣಕ್ಕೆ 5 ಪ್ಯಾಕೇಜ್‌ನಲ್ಲಿ ಹೆದ್ದಾರಿ ಪ್ರಾಧಿಕಾರ ಟೆಂಡರ್ ಕರೆದಿದ್ದು, ಈ ಯೋಜನೆಗೆ ಈಗಾಗಲೇ ಕೇಂದ್ರ ಹಣಕಾಸು ಸಚಿವಾಲಯ, ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವಾಲಯ ಅನುಮೋದನೆ ನೀಡಿದ್ದು, ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಈ ಕಡತ ಇದೆ. ಪ್ರಧಾನಮಂತ್ರಿ ಕಾರ್ಯಾಲಯದಿಂದ ಕ್ಯಾಬಿನೆಟ್ ಸಭೆಗೆ ತಂದು ಯೋಜನೆಗೆ ಅನುಮೋದನೆ ಪಡೆಯುವುದು ಮಾತ್ರ ಬಾಕಿ ಉಳಿದಿದೆ.
2 ,200 ಎಕರೆ ಭೂಸ್ವಾಧೀನ
144 ಕಿ.ಮೀ ಉದ್ದದ ಎಸ್‌ಟಿಆರ್‌ಆರ್ ಯೋಜನೆಗೆ 2 ,200 ಎಕರೆಯಷ್ಟು ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದ್ದು, ಯೋಜನೆಗೆ ಒಳಪಡಲಿರುವ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಆದರೇ ಗುರುತು ಮಾಡಿರುವ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳುವ ಕಾರ್ಯಕ್ಕೆ ಇನ್ನೂ ಪ್ರಾಧಿಕಾರ ಮುಂದಾಗಿಲ್ಲ. ಎನ್‌ಎಚ್‌ಎಐ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಮೂಲಗಳ ಪ್ರಕಾರ ಈ ಯೋಜನೆಗೆ 1 ,600 ಕೋಟಿ ರೂ. ನಷ್ಟು ಪರಿಹಾರ ಬೇಕಿದ್ದು, ಪರಿಹಾರದ ಹಣದಲ್ಲಿ ಕೇಂದ್ರ ಸರ್ಕಾರ ಶೇ.70 ರಷ್ಟು ನೀಡಲಿದ್ದು ಉಳಿದ ಶೇ.30 ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡಬೇಕಿದೆ.
ರಾಷ್ಟ್ರೀಯಯ ಹೆದ್ದಾರಿ ಪ್ರಾಧಿಕಾರ ಸ್ಯಾಟ್‌ಲೈಟ್ ರಿಂಗ್ ರಸ್ತೆ 144 ಕಿ.ಮೀ ನಿರ್ಮಾಣಕ್ಕೆ 4 ,750 ಕೋಟಿ ರೂ. ಅಂದಾಜು ವೆಚ್ಚದಲ್ಲಿ 5 ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆದಿದೆ. ಇದರಲ್ಲಿ ಮೂರು ಪ್ಯಾಕೇಜ್‌ಗಳು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಹಾಯ್ದು ಹೋಗಲಿದ್ದು, ಮಾಗಡಿಯಿಂದ ರಾಮನಗರ ಮೂಲಕ ಕನಕಪುರ ತಾಲೂಕಿನ ವರೆಗೆ ಸುಮಾರು 70 ಕಿಮೀ ದೂರು ರಾಮನಗರ ಜಿಲ್ಲೆಯಲ್ಲಿ ಎಸ್‌ಟಿಆರ್‌ಆರ್ ರಸ್ತೆಯ ಎನ್‌ಎಚ್ 948 ಎ ಹಾದು ಹೋಗಲಿದೆ.
ಅನುಕೂಲಗಳೇನು?
ಈ ಯೋಜನೆಯಿಂದಾಗಿ ಬೆಂಗಳೂರು ದಕ್ಷಿಣ(ರಾಮಗರ), ಮಂಡ್ಯ, ಮೈಸೂರು, ಮಡಿಕೇರಿ ಭಾಗದಿಂದ ಬರುವ ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯಯ ವಿಮಾನ ನಿಲ್ದಾಣಕ್ಕೆ ಹೋಗಲು, ಕೋಲಾರ, ಚಿಕ್ಕಬಳ್ಳಾಪುರ ಕಡೆಗೆ ಹೋಗಲು ಹಾಗೂ ಹೊಸೂರು ರಸ್ತೆ ಸಂಪರ್ಕಿಸಲು ಬೆಂಗಳೂರು ನಗರವನ್ನು ಪ್ರವೇಶಿಸುವುದು ತಪ್ಪಲಿದೆ. ಇದರಿಂದಾಗಿ ಪ್ರಯಾಣಿಕರು ಅನವಶ್ಯಕವಾಗಿ ಬೆಂಗಳೂರು ನಗರದ ಸಂಚಾರ ಕಿರಿಕಿರಿ ಅನುಭವಿಸುವುದನ್ನು ತಪ್ಪಿಸಲಿದೆ.
ಹೊಸದಾಗಿ ನಿರ್ಮಾಣವಾಗುತ್ತಿರುವ ಎಸ್‌ಟಿಆರ್‌ಆರ್ ರಸ್ತೆ ರಾಷ್ಟ್ರೀಯಯ ಹೆದ್ದಾರಿಗಳು 7 ರಾಷ್ಟ್ರೀಯ, 15 ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸಲಿದೆ. ಹೀಗಾಗಿ ಬೆಂಗಳೂರು ಸುತ್ತಲಿನ ಜಿಲ್ಲೆಗಳೊಂದಿಗೆ ಆಂಧ್ರಪ್ರದೇಶ, ತಮಿಳುನಾಡಿಗೂ ಸಂಪರ್ಕ ಕಲ್ಪಿಸಲಿದೆ.
ಎನ್‌ಎಚ್ 48, 75, 275, 648, 844, 44, 75 ಗಳಿಗೆ ಲಿಂಕ್ ಆಗಲಿದೆ. ಇದರೊಂದಿಗೆ ರಾಜ್ಯ ಹೆದ್ದಾರಿಗಳಾದ 3/94,112, 03, 35,178, 85,17,95, 05, 99, 82, 104, 96,09, 74 ಗೆ ಸಂಪರ್ಕ ಕಲ್ಪಿಸಲಿದೆ. ಇಷ್ಟೂ ರಸ್ತೆಗಳ ವ್ಯಾಪ್ತಿಗೆ ಬರುವ ಪಟ್ಟಣಗಳಿಗೆ ಸುತ್ತಿ ಬಳಸಿ ಹೋಗುವುದು ತಪ್ಪಲಿದ್ದು, ಹಲವು ನಗರಗಳಿಗೆ ನೇರವಾಗಿ ಸಂಪರ್ಕ ಮಾಡಲು ಎಸ್‌ಟಿಆರ್‌ಆರ್ ಸಹಕಾರಿಯಾಗಲಿದೆ.
ನಿರ್ಮಾಣಗೊಳ್ಳಲಿರುವ ಎಸ್‌ಟಿಆರ್‌ಆರ್ ರಸ್ತೆಯ ನೀಲನಕ್ಷೆ
6 ಲೇನ್ ರಸ್ತೆ ಆಕ್ಸೆಸ್ ಕಂಟ್ರೋಲ್ ರಸ್ತೆ
ಹೊಸದಾಗಿ ನಿರ್ಮಾಣವಾಗಲಿರುವ ಎಸ್‌ಟಿಆರ್‌ಆರ್ ರಸ್ತೆ 6 ಪಥಗಳ ಆಕ್ಸೆಸ್ ಕಂಟ್ರೋಲ್ ರಸ್ತೆಯಾಗಿದ್ದು, 100 ಕಿ.ಮೀ ವೇಗದ ಗರಿಷ್ಟ ಮಿತಿಯನ್ನು ಒಳಗೊಂಡಿದೆ. ಕನಕಪುರ ತಾಲೂಕಿನ ತಟ್ಟೆಕೆರೆ ಗ್ರಾಮದಿಂದ ಆನೇಕಲ್ ತಾಲೂಕಿನ ಬಗ್ಗನದೊಡ್ಡಿ ವರೆಗೆ ಬನ್ನೇರುಘಟ್ಟ ರಾಷ್ಟ್ರೀಯಯ ಉದ್ಯಾನವನದಲ್ಲಿ ರಸ್ತೆ ಸಾಗುವ ಹಿನ್ನೆಲೆಯಲ್ಲಿ 8.34 ಕಿಮೀ ದೂರ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲಾಗುವುದು.
ಎರಡು ರಾಷ್ಟ್ರೀಯ ಹೆದ್ದಾರಿಗಳ ಜೋಡಣೆ
ಬೆಂಗಳೂರು ಸ್ಯಾಟಲೈಟ್ ಸಿಟಿ ಔಟರ್ ರಿಂಗ್‌ರೋಡ್ ಯೋಜನೆಗೆ ಎರಡು ಹಾಲಿ ರಾಷ್ಟ್ರೀಯ ಹೆದ್ದಾರಿಯನ್ನು ಜೋಡಣೆ ಮಾಡಲು ಎನ್‌ಎಚ್‌ಎಐ ಮುಂದಾಗಿದೆ. ಬೆಂಗಳೂರು ಸುತ್ತಲೂ ನಿರ್ಮಿಸಿರುವ ದಾಬಸ್‌ಪೇಟೆ ಯಿಂದ ಹೊಸೂರು ವರೆಗೆ ಎನ್‌ಎಚ್ 207 ಹೊಸದಾಗಿ ಎನ್‌ಎಚ್ 648 ಆಗಿಬದಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಿದ್ದು, ಇದರೊಂದಿಗೆ ಈ ರಸ್ತೆಗೆ ದಾಬಸ್‌ಪೇಟೆಯಿಂದ ಮಾಗಡಿ, ಕನಕಪುರ ಮೂಲಕ ಆನೇಕಲ್ ಮಾರ್ಗವಾಗಿ ಹೊಸೂರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 948ಎ ಹೊಸ ರಾಷ್ಟ್ರೀಯಯ ಹೆದ್ದಾರಿಯನ್ನು ನಿರ್ಮಿಸಿದೆ.( ಹಿಂದೆ ಎನ್‌ಎಚ್205 ಬೆಂಗಳೂರು-ದಿಂಡಿಗಲ್ ರಸ್ತೆಯನ್ನು ಎನ್‌ಎಚ್948 ಆಗಿ ಬದಲಾಯಿಸಲಾಗಿದೆ.) ಈ ಎರಡೂ ರಸ್ತೆಗಳು ಬೆಂಗಳೂರು ಸುತ್ತಾ ಹಾಯ್ದು ಹೋಗುವ ಎಸ್‌ಟಿಆರ್‌ಆರ್ ರಸ್ತೆಯಲ್ಲಿ ಸೇರ್ಪಡೆಯಾಗಿದೆ.
ಎಲ್ಲಿ, ಎಷ್ಟೆಷ್ಟು ದೂರ ?
ಎಸ್‌ಟಿಆರ್‌ಆರ್ ರಸ್ತೆಯ ಒಟ್ಟು ಉದ್ದ 288 ಕಿಮೀ ಇದ್ದು ನಮ್ಮ ರಾಜ್ಯದಲ್ಲಿ 243 ಕಿಮೀ, ತಮಿಳುನಾಡಿನಲ್ಲಿ 45 ಕಿಮೀ ಉದ್ದ ಈ ರಸ್ತೆ ಇರಲಿದೆ. ಪ್ರಸ್ತುತ ರಸ್ತೆ ಕಾಮಗಾರಿ ನಮ್ಮ ರಾಜ್ಯದಲ್ಲಿ 80 ಕಿಮೀ (ದಾಬಸ್‌ಪೇಟೆ-ಹೊಸಕೋಟೆ) ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ಸಂಚಾರ ಮುಕ್ತಗೊಂಡಿದೆ. ಇದೀಗ ಕೈಗೊಂಡಿರುವ 144 ಕಿಮೀ ಕಾಮಗಾರಿ ಪೂರ್ಣಗೊಂಡರೆ ಶೇ.95 ರಷ್ಟು ಎಸ್‌ಟಿಆರ್‌ಆರ್ ಕಾಮಗಾರಿ ಕರ್ನಾಟದಲ್ಲಿ ಪೂರ್ಣವಾಗಲಿದೆ.
ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, "ಎಸ್‌ಟಿಆರ್‌ಆರ್ ಯೋಜನೆ ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವ ಜೊತೆಗೆ ಸುತ್ತಲಿನ ಪಟ್ಟಣಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಯೋಜನೆಗೆ ಈಗಾಗಲೇ ಕೇಂದ್ರ ಸಾರಿಗೆ ಸಚಿವಾಲಯ, ಹಣಕಾಸು ಸಚಿವಾಲಯ ಅನುಮೋದನೆ ನೀಡಿದ್ದು, ಪ್ರಧಾನಮಂತ್ರಿ ಕಾರ್ಯಾಲಯದಿಂದ ಅನುಮೋದನೆ ಬೇಕಿದೆ. ಇದಕ್ಕಾಗಿ ಪ್ರಧಾನಮಂತ್ರಿ ಕಾರ್ಯಾಲಯದೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ" ಎಂದರು.

