
ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್ ವೇ
ಮೈಸೂರು ಹೈವೇ 'ರೆಸ್ಟ್ ಏರಿಯಾ': ಬಿಡದಿ ಇಡ್ಲಿ, ಚನ್ನಪಟ್ಟಣ ಬೊಂಬೆ ಅಸ್ಮಿತೆ ಉಳಿಸಲು ಪ್ಲಾನ್!
ಈ ರಸ್ತೆಯ ಅಸ್ಮಿತೆಯಾಗಿದ್ದ ವೈವಿಧ್ಯಮಯ ತಿಂಡಿ-ತಿನಿಸುಗಳು ಕೇವಲ ಆಹಾರವಲ್ಲ, ಪ್ರವಾಸಿಗರ ಭಾವನೆಯೂ ಆಗಿತ್ತು. ಇಂತಹ ಭಾವನೆಗಳನ್ನು ಪುನರ್ ಬೆಸೆಯಲು ರೆಸ್ಟ್ ಏರಿಯಾದಲ್ಲಿ ಅಸ್ಮಿತೆಗಳ ಸೊಗಡು ಹೆಚ್ಚಾಗಬೇಕಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ವೇಗದ ಪ್ರಯಾಣವೇನೋ ಸಾಧ್ಯವಾಗಿದೆ, ಆದರೆ ಹಳೆ ಹೆದ್ದಾರಿಯ ಸೊಗಡು ಮತ್ತು ಸ್ಥಳೀಯ ಅಸ್ಮಿತೆಗಳು ಸಂಪೂರ್ಣ ಮರೆಯಾಗಿದೆ. ಬಿಡದಿಯ ತಟ್ಟೆ ಇಡ್ಲಿ, ಚನ್ನಪಟ್ಟಣದ ಗೊಂಬೆಗಳು ಮತ್ತು ಮದ್ದೂರು ವಡೆಯಂತಹ ಸ್ಥಳೀಯ ಆಕರ್ಷಣೆಗಳು ಪ್ರಯಾಣಿಕರ ಕಣ್ಣಿಂದ ಮಾಯವಾಗಿದೆ. ಈ ಹಿನ್ನೆಲೆಯಲ್ಲಿ, ವೇಗ ಮತ್ತು ಸಂಸ್ಕೃತಿಯ ನಡುವಿನ ಕಂದರವನ್ನು ಬೆಸೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಸ್ಥಳೀಯ ಸೊಗಡನ್ನು ಮತ್ತೆ ಹೆದ್ದಾರಿಗೆ ತರುವ ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಸಜ್ಜಿತ 'ರೆಸ್ಟ್ ಏರಿಯಾ' ನಿರ್ಮಿಸಲು ಯೋಜನೆ ರೂಪಿಸಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಮೀಪ ಜಿಲ್ಲಾಡಳಿತ ಗುರುತಿಸಿರುವ 8 ಎಕರೆ ಭೂಮಿಯಲ್ಲಿ ಈ ಯೋಜನೆ ಸ್ಥಾಪನೆಗೊಳ್ಳಲಿದೆ. ಇಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ನಂತರ ಮರೆಯಾಗಿದ್ದ ಸ್ಥಳೀಯ ಅಸ್ಮಿತೆಗಳನ್ನು ಉಳಿಸಿಕೊಳ್ಳುವ ಮತ್ತು ಪ್ರಯಾಣಿಕರಿಗೆ ಅನುಕೂಲವನ್ನೂ ಕಲ ಕಲ್ಪಿಸುವ ಉದ್ದೇಶದಿಂದ, ಈ ಜಾಗದಲ್ಲಿ 'ರೆಸ್ಟ್ ಏರಿಯಾ' ನಿರ್ಮಿಸುವ ಹೊಸ ಕನಸು ಚಿಗುರೊಡೆದಿದೆ
ಕಳೆದುಹೋದ ಸ್ಥಳೀಯ ಸೊಗಡಿನ ಮರುಸ್ಥಾಪನೆಗೆ ಮುನ್ನುಡಿ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೂ ಮೊದಲು, ಹಳೆಯ ಹೆದ್ದಾರಿಯ ಉದ್ದಕ್ಕೂ ಇದ್ದ ಸ್ಥಳೀಯ ವಿಶೇಷಗಳೇ ಈ ಭಾಗದ ಸಾಂಸ್ಕೃತಿಕ ರಾಯಭಾರಿಗಳಂತಿದ್ದವು. ಬಿಡದಿಯ ತಟ್ಟೆ ಇಡ್ಲಿ, ರಾಮನಗರದ ಜನಾರ್ಧನ ಹೋಟೆಲ್‌ನ ಮೈಸೂರು ಪಾಕ್ ಮತ್ತು ಮದ್ದೂರು ವಡೆಯ ರುಚಿ ಒಂದೆಡೆಯಾದರೆ; ಚನ್ನಪಟ್ಟಣದ ಬಣ್ಣದ ಬೊಂಬೆಗಳು, ಜಾನಪದ ಲೋಕ ಹಾಗೂ ಶ್ರೀರಂಗಪಟ್ಟಣದ ಐತಿಹಾಸಿಕ ತಾಣಗಳು ಪ್ರಯಾಣಿಕರಿಗೆ ವಿಶಿಷ್ಟ ಅನುಭವ ನೀಡುತ್ತಿದ್ದವು. ಆದರೆ, ಎಕ್ಸ್‌ಪ್ರೆಸ್‌ವೇ ನಿರ್ಮಾಣದ ನಂತರ ವೇಗದ ಭರಾಟೆಯಲ್ಲಿ ಪ್ರಯಾಣಿಕರು ಈ ಎಲ್ಲ ಅನುಭವಗಳಿಂದ ವಂಚಿತರಾಗಿದ್ದಾರೆ.
8 ಎಕರೆ ಜಾಗದಲ್ಲಿ 'ಮಿನಿ ಮೈಸೂರು' ಅನುಭವ!
ಈ ಹಿನ್ನೆಲೆಯಲ್ಲಿ, ಕಣ್ಮರೆಯಾಗಿರುವ ಸ್ಥಳೀಯ ಸೊಗಡನ್ನು ಒಂದೇ ಸೂರಿನಡಿ ಪ್ರಯಾಣಿಕರಿಗೆ ಉಣಬಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ಹೆಜ್ಜೆಯಿಟ್ಟಿದೆ. ಇದಕ್ಕಾಗಿ ಎಕ್ಸ್‌ಪ್ರೆಸ್‌ವೇ ಹಾದುಹೋಗುವ ಕಣ್ವ ರಸ್ತೆ ಬಳಿ ಬೆಂಗಳೂರು ದಕ್ಷಿಣ ಜಿಲ್ಲಾಡಳಿತವು 8 ಎಕರೆ ಭೂಮಿಯನ್ನು ಗುರುತಿಸಿದ್ದು, ಸದ್ಯದಲ್ಲೇ ಅದು NHAI ಗೆ ಹಸ್ತಾಂತರಗೊಳ್ಳಲಿದೆ. ಇಲ್ಲಿ ನಿರ್ಮಾಣವಾಗಲಿರುವ ಬೃಹತ್ 'ರೆಸ್ಟ್ ಏರಿಯಾ'ದಲ್ಲಿ ಟಾಯ್ಸ್ ಪಾರ್ಕ್, ಸಿಲ್ಕ್ ಮ್ಯೂಸಿಯಂ, ಚನ್ನಪಟ್ಟಣದ ಗೊಂಬೆಗಳ ಮಳಿಗೆಗಳು ತಲೆ ಎತ್ತಲಿವೆ. ಜೊತೆಗೆ ಬಿಡದಿ ಇಡ್ಲಿ, ಮದ್ದೂರು ವಡೆಯಂತಹ ಸ್ಥಳೀಯ ಖಾದ್ಯಗಳ ಫುಡ್ ಕೋರ್ಟ್‌ಗಳು, ಪೆಟ್ರೋಲ್ ಬಂಕ್, ಸರ್ವೀಸ್ ಸ್ಟೇಷನ್, ವಿಶ್ರಾಂತಿ ಕೊಠಡಿಗಳು ಮತ್ತು ಹೆಲಿಪ್ಯಾಡ್ ಸೌಲಭ್ಯಗಳನ್ನೂ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.
ಸಂಸದರ ಪ್ರಯತ್ನ ಮತ್ತು ಅನುದಾನದ ನಿರೀಕ್ಷೆ
ಈ ಯೋಜನೆಯ ಅನುಷ್ಠಾನಕ್ಕಾಗಿ ಸಿದ್ಧಪಡಿಸಲಾದ ವಿಸ್ತೃತ ಯೋಜನಾ ವರದಿಯಂತೆ (DPR), ಅಂದಾಜು 1,000 ಕೋಟಿ ರೂ. ಅನುದಾನದ ಅಗತ್ಯವಿದ್ದು, ಕೇಂದ್ರ ಸರ್ಕಾರ ಇದನ್ನು ಬಿಡುಗಡೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಡಾ. ಸಿ.ಎನ್. ಮಂಜುನಾಥ್ ಅವರು ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಟಾಯ್ಸ್ ಪಾರ್ಕ್ ಹಾಗೂ ರೆಸ್ಟ್ ಏರಿಯಾ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದಾರೆ.
ಭಾವನಾತ್ಮಕ ಪಯಣ!
ಹಳೆಯ ಮೈಸೂರು ರಸ್ತೆಯಲ್ಲಿನ ಪ್ರಯಾಣ ಕೇವಲ ಒಂದು ಊರಿನಿಂದ ಮತ್ತೊಂದು ಊರಿಗೆ ತಲುಪುವುದಾಗಿರಲಿಲ್ಲ; ಅದೊಂದು ಪ್ರಕೃತಿ, ಕಲೆ, ಇತಿಹಾಸ ಮತ್ತು ಸ್ವಾರಸ್ಯಕರ ಭೋಜನದ ಸಮ್ಮಿಲನವಾಗಿತ್ತು. ಅಂದು ರಸ್ತೆ ಬದಿಯ ಸಣ್ಣಪುಟ್ಟ ವ್ಯಾಪಾರಗಳನ್ನೇ ನಂಬಿ ಸಾವಿರಾರು ಕುಟುಂಬಗಳ ಜೀವನದ ಬಂಡಿ ಸುಗಮವಾಗಿ ಸಾಗುತ್ತಿತ್ತು. ಆದರೆ, ಇಂದಿನ ಎಕ್ಸ್‌ಪ್ರೆಸ್‌ವೇ ಕೇವಲ 'ನಾನ್-ಸ್ಟಾಪ್' (Non-stop) ಕಾರಿಡಾರ್ ಆಗಿ ಬದಲಾಗಿದೆ. ಇಲ್ಲಿ ವೇಗವಾಗಿ ಚಲಿಸುವ ವಾಹನಗಳ ಕರ್ಕಶ ಶಬ್ದವಿದೆಯೇ ಹೊರತು, ಹಳೆಯ ಜೀವಂತಿಕೆ ಇಲ್ಲ. ಹೆದ್ದಾರಿಯನ್ನೇ ನಂಬಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಇಲ್ಲಿನ ಸ್ಥಳೀಯ ಅಸ್ಮಿತೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಅಂದಿನ ವೈವಿಧ್ಯಮಯ ತಿಂಡಿ-ತಿನಿಸುಗಳು ಕೇವಲ ಆಹಾರವಾಗಿರದೆ, ಪ್ರವಾಸಿಗರ ಪಾಲಿಗೆ ಭಾವನಾತ್ಮಕ ನಂಟಾಗಿದ್ದವು.
ಮೂರು ಗಂಟೆಯ ಪ್ರಯಾಣವೂ ಆಯಾಸವಿಲ್ಲದ ಉಲ್ಲಾಸ!
ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೂ ಮುನ್ನ 141 ಕಿ.ಮೀ ದೂರದ ಈ ಪ್ರಯಾಣಕ್ಕೆ ಮೂರು ಗಂಟೆಗೂ ಹೆಚ್ಚು ಸಮಯ ಹಿಡಿಯುತ್ತಿತ್ತು. ಆದರೂ ಆ ಪ್ರಯಾಣ ಎಂದೂ ಬೇಸರ ತರಿಸುತ್ತಿರಲಿಲ್ಲ. ಬಿಡದಿಯ ತಟ್ಟೆ ಇಡ್ಲಿ, ರಾಮನಗರದ ಜನಾರ್ಧನ ಹೋಟೆಲ್‌ನ ಮೈಸೂರು ಪಾಕ್, ಮದ್ದೂರು ವಡೆ ಮತ್ತು ಮಂಡ್ಯದ ಸಿಹಿ ಕಬ್ಬಿನ ಹಾಲು ಪ್ರವಾಸಿಗರ ನಾಲಿಗೆ ತಣಿಸುತ್ತಿದ್ದವು. ಕಣ್ಣು ಹಾಯಿಸಿದಲ್ಲೆಲ್ಲಾ ಮಂಡ್ಯದ ಹಚ್ಚ ಹಸಿರು ಕಬ್ಬು ಮತ್ತು ಭತ್ತದ ಗದ್ದೆಗಳು, ಕಾವೇರಿ ನದಿಯ ಸಂಗಮ, ಜಾನಪದ ಲೋಕ ಹಾಗೂ ಶ್ರೀರಂಗಪಟ್ಟಣದ ಐತಿಹಾಸಿಕ ವೈಭವ ಕಣ್ಮನ ಸೆಳೆಯುತ್ತಿದ್ದವು. ರಸ್ತೆ ಬದಿಯ ಡಾಬಗಳಲ್ಲಿ ಸಿಗುತ್ತಿದ್ದ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರಿನ ರುಚಿ ಇಡೀ ಪ್ರಯಾಣದ ಆಯಾಸವನ್ನೇ ಮರೆಸಿಬಿಡುತ್ತಿತ್ತು.
ಬಿಡದಿ ತಟ್ಟೆ ಇಡ್ಲಿ
ಎಕ್ಸ್‌ಪ್ರೆಸ್‌ವೇ ನಿರ್ಮಾಣದ ನಂತರ ಪ್ರಯಾಣದ ದೂರ 119 ಕಿ.ಮೀ.ಗೆ ಇಳಿದಿದ್ದು, ಮೂರು ಗಂಟೆಯ ಪ್ರಯಾಣ ಈಗ ಕೇವಲ 90 ನಿಮಿಷಗಳಲ್ಲಿ ಮುಗಿಯುತ್ತಿದೆ. ಸಮಯ ಉಳಿತಾಯವಾಗುತ್ತಿರುವುದು ನಿಜವಾದರೂ, ದುಬಾರಿ ಟೋಲ್ ಪಾವತಿಸಿ ಮಾಡುವ ಈ ಪ್ರಯಾಣ ಒಂದು ರೀತಿ 'ಖಾಲಿ' ಅನುಭವ ನೀಡುತ್ತಿದೆ. ಹಳೆಯ ರುಚಿ, ಸೊಗಡು ಮಾಯವಾಗಿದ್ದು, ಕೇವಲ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳಲ್ಲಿ ಸಿಗುವ ಹೋಟೆಲ್‌ಗಳಲ್ಲಿಯೇ ಹೊಟ್ಟೆ ತುಂಬಿಸಿಕೊಂಡು ಮುಂದೆ ಸಾಗುವ ಅನಿವಾರ್ಯತೆ ಪ್ರಯಾಣಿಕರದ್ದಾಗಿದೆ.
ಸಮಸ್ಯೆಗಳ ಆಗರವಾದ ಹೈವೇ
2023ರಲ್ಲಿ ಸಂಚಾರಕ್ಕೆ ಮುಕ್ತಗೊಂಡ ಈ ಎಕ್ಸ್‌ಪ್ರೆಸ್‌ವೇಯಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ವಾಹನ ಸವಾರರಿಗೆ ಅಗತ್ಯವಿರುವ ರೆಸ್ಟ್ ಏರಿಯಾ, ಪೆಟ್ರೋಲ್ ಬಂಕ್, ಪಾರ್ಕಿಂಗ್ ವ್ಯವಸ್ಥೆ, ಟೋಯಿಂಗ್ ಸೇವೆ, ಟ್ರಾಮಾ ಸೆಂಟರ್ ಅಥವಾ ತುರ್ತು ನಿರ್ಗಮನ ದ್ವಾರಗಳು ಇಲ್ಲಿಲ್ಲ. ಅಷ್ಟೇ ಅಲ್ಲ, ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವುದೇ ಮಳಿಗೆಗಳೂ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ.
ನನಗೆಗುದಿಗೆ ಬಿದ್ದಿದ್ದ 1000 ಕೋಟಿ ರೂ. ಯೋಜನೆ
ಈ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆಯೇ ಹೆದ್ದಾರಿ ಪ್ರಾಧಿಕಾರವು 1,000 ಕೋಟಿ ರೂ. ವೆಚ್ಚದ ವಿಶೇಷ ಯೋಜನೆಯೊಂದನ್ನು ಸಿದ್ಧಪಡಿಸಿತ್ತು. ಹೆದ್ದಾರಿ ಬದಿಯಲ್ಲಿ ಸುಸಜ್ಜಿತ ರೆಸ್ಟ್ ಏರಿಯಾ ನಿರ್ಮಿಸಿ, ಅಲ್ಲಿ ಹೆಲಿಪ್ಯಾಡ್, ವಾಣಿಜ್ಯ ಮಳಿಗೆ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಕಲ್ಪಿಸುವುದು ಇದರ ಉದ್ದೇಶವಾಗಿತ್ತು. ಆದರೆ, ಸೂಕ್ತ ಜಾಗದ ಲಭ್ಯತೆ ಇಲ್ಲದ ಕಾರಣ ಈ ಮಹತ್ವಾಕಾಂಕ್ಷಿ ಯೋಜನೆ ಇಷ್ಟು ದಿನ 'ಟೇಕ್ ಆಫ್' (Take off) ಆಗದೆ ನೆನೆಗುದಿಗೆ ಬಿದ್ದಿತ್ತು.
ಜಾನಪದ ಲೋಕ
ನೆನಪಾಗುವ ಆ ಹಳೆಯ ರುಚಿ ಮತ್ತು ದೃಶ್ಯ ವೈಭವ
ಹಿಂದೆಲ್ಲಾ ಬೆಂಗಳೂರಿನಿಂದ ವಾಹನ ಹೊರತಂದರೆ ಸಾಕು, ಬಿಡದಿಯ ಬಿಸಿ ಬಿಸಿ ತಟ್ಟೆ ಇಡ್ಲಿಯನ್ನು ಬೆಣ್ಣೆ ಮತ್ತು ಕೆಂಪು ಚಟ್ನಿಯೊಂದಿಗೆ ಸವಿಯುವುದೇ ಒಂದು ಸಂಭ್ರಮವಾಗಿತ್ತು. ಅಲ್ಲಿಂದ ಮುಂದೆ ಸಾಗಿದರೆ, ರಾಮನಗರದ ಜನಾರ್ಧನ ಹೋಟೆಲ್‌ನ ಮೈಸೂರು ಪಾಕ್ ಬಾಯಲ್ಲಿ ನೀರೂರಿಸುತ್ತಿತ್ತು. ಅರ್ಚಕರಹಳ್ಳಿ ಬಳಿಯ ಯುನೆಸ್ಕೋ ಮಾನ್ಯತೆ ಪಡೆದ 'ಜಾನಪದ ಲೋಕ'ದಲ್ಲಿ ಒಂದು ಸುತ್ತು ಹಾಕಿದರೆ, ಇಡೀ ಗ್ರಾಮೀಣ ಬದುಕಿನ ಸೊಗಡು ಕಣ್ಣಮುಂದೆ ಅನಾವರಣಗೊಳ್ಳುತ್ತಿತ್ತು. ಅಲ್ಲಿಂದ ಮುಂದೆ ಸಾಗುತ್ತಿದ್ದಂತೆ, ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದ ವಿಶ್ವವಿಖ್ಯಾತ ಚನ್ನಪಟ್ಟಣದ ಬಣ್ಣ ಬಣ್ಣದ ಬೊಂಬೆಗಳು ಪ್ರಯಾಣಿಕರ ಮನಸೆಳೆಯುತ್ತಿದ್ದವು.
ಚನ್ನಪಟ್ಟಣದ ಗೊಂಬೆ
ಮದ್ದೂರು ವಡೆ
ಜೀವನಾಡಿಯಾಗಿದ್ದ ಹಳೆ ರಸ್ತೆ
ಬೆಂಗಳೂರು-ಮೈಸೂರು ನಡುವಿನ ಹಳೆ ರಸ್ತೆ ಕೇವಲ ಎರಡು ಮಹಾನಗರಗಳನ್ನು ಜೋಡಿಸುವ ಡಾಂಬರು ಪಟ್ಟಿಯಾಗಿರಲಿಲ್ಲ; ಬದಲಿಗೆ ಅದು ಹಳೆ ಮೈಸೂರು ಭಾಗದ ಸಂಸ್ಕೃತಿ, ಕೃಷಿ ಮತ್ತು ಜೀವನಶೈಲಿಯ ಜೀವನಾಡಿಯಾಗಿತ್ತು. ಏಷ್ಯಾದಲ್ಲೇ ಅತಿದೊಡ್ಡ ರೇಷ್ಮೆ ಗೂಡು ಮಾರುಕಟ್ಟೆ ಇರುವ ರಾಮನಗರದ ರೇಷ್ಮೆ ಬೆಳೆಗಾರರ ಬದುಕು ಈ ರಸ್ತೆಯೊಂದಿಗೆ ಹಾಸುಹೊಕ್ಕಾಗಿತ್ತು. ಇದೇ ಮಣ್ಣಿನ ರಾಮದೇವರ ಬೆಟ್ಟದಲ್ಲಿ ಬಾಲಿವುಡ್‌ನ ಐತಿಹಾಸಿಕ 'ಶೋಲೆ' ಸಿನಿಮಾ ಚಿತ್ರೀಕರಣಗೊಂಡಿದ್ದರೆ, ಅಪರೂಪದ ರಣಹದ್ದು ಧಾಮವೂ ಇಲ್ಲಿಯೇ ಇದೆ. ಇನ್ನು ಐತಿಹಾಸಿಕ ಶ್ರೀರಂಗಪಟ್ಟಣದ ಕಾವೇರಿ ನದಿ ತೀರ, ರಂಗನಾಥಸ್ವಾಮಿ ದೇವಾಲಯ ಮತ್ತು ಟಿಪ್ಪು ಸುಲ್ತಾನನ ಸ್ಮಾರಕಗಳು ಈ ರಸ್ತೆಯ ಗಾಂಭೀರ್ಯವನ್ನು ಹೆಚ್ಚಿಸಿದ್ದವು.
ನನ್ನ ಅವಧಿಯಲ್ಲೇ ಯೋಜನೆ ಪೂರ್ಣ: ಸಂಸದರ ಭರವಸೆ
ಈ ಬಗ್ಗೆ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿದ ಸಂಸದ ಡಾ. ಸಿ.ಎನ್. ಮಂಜುನಾಥ್, "ಎಕ್ಸ್‌ಪ್ರೆಸ್‌ವೇ ನಿರ್ಮಾಣದ ನಂತರ ಬೊಂಬೆ ಉದ್ಯಮವನ್ನೇ ನಂಬಿದ್ದವರ ಬದುಕು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಾರಿಗೆ ಸಚಿವರನ್ನು ಭೇಟಿ ಮಾಡಿ ಟಾಯ್ಸ್ ಪಾರ್ಕ್ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದೆ. ಇದಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ, ಕಣ್ವ ರಸ್ತೆಯಲ್ಲಿ 8 ಎಕರೆ ಜಾಗವನ್ನು ಗುರುತಿಸಿದೆ. ಸದ್ಯದಲ್ಲೇ ಈ ಜಾಗ ಎನ್‌ಎಚ್‌ಎಐಗೆ (NHAI) ಹಸ್ತಾಂತರಗೊಳ್ಳಲಿದ್ದು, ಪ್ರಾಧಿಕಾರದಿಂದಲೇ ಟಾಯ್ಸ್ ಪಾರ್ಕ್, ರೆಸ್ಟ್ ಏರಿಯಾ ಹಾಗೂ ಸಿಲ್ಕ್ ಮ್ಯೂಸಿಯಂ ನಿರ್ಮಾಣವಾಗಲಿವೆ. ಸ್ಥಳೀಯ ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ರೂಪಿಸಲಾಗಿರುವ ಈ ಯೋಜನೆಯನ್ನು ನನ್ನ ಅಧಿಕಾರಾವಧಿಯಲ್ಲೇ ಪೂರ್ಣಗೊಳಿಸಲಾಗುವುದು," ಎಂದು ಭರವಸೆ ನೀಡಿದ್ದಾರೆ.

