ಇರಾನ್-ಇಸ್ರೇಲ್ ಸಂಘರ್ಷ; ಬೀದಿಗೆ ಬಿದ್ದ ಗಿಗ್​ ಕಾರ್ಮಿಕರ ಬದುಕು
x

ಇರಾನ್-ಇಸ್ರೇಲ್ ಸಂಘರ್ಷ; ಬೀದಿಗೆ ಬಿದ್ದ ಗಿಗ್​ ಕಾರ್ಮಿಕರ ಬದುಕು

2019 ರಿಂದ 21 ರವರೆಗೆ ಕಾಡಿದ ಕೋವಿಡ್ ಮಹಾಮಾರಿ ಸಮಯದಲ್ಲಿ ಅಸಂಘಟಿತ ಕಾರ್ಮಿಕ ವರ್ಗ ಉದ್ಯೋಗ ನಷ್ಟದಿಂದ ನರಕಯಾತನೆ ಅನುಭವಿಸಿತ್ತು. ಮತ್ತೆ ಅದೇ ರೀತಿಯ ಪರಿಸ್ಥಿತಿ ಮರುಕಳುಹಿಸುವ ಭೀತಿ ಎದುರಾಗಿದೆ.


Click the Play button to hear this message in audio format

ಇರಾನ್-ಇಸ್ರೇಲ್ ಸಂಘರ್ಷದ ಕಿಚ್ಚು ಸಾವಿರಾರು ಅಸಂಘಟಿತ ಕಾರ್ಮಿಕರ ಬದುಕಿನ ಮೇಲೆ ಬರೆ ಎಳೆದಿದೆ. ಎಲ್‌ಪಿಜಿ ಪೂರೈಕೆಯಲ್ಲಿ ಎದುರಾಗಿರುವ ವ್ಯತ್ಯಯದಿಂದಾಗಿ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಬಾಗಿಲು ಮುಚ್ಚುತ್ತಿವೆ. ಇದರಿಂದ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವ ಅಡುಗೆಯವರು, ಸಪ್ಲೈಯರ್‌ಗಳು ಹಾಗೂ ಸ್ವಚ್ಛತಾಗಾರರು ಒಳಗೊಂಡು ಹೋಟೆಲ್‌ನಿಂದ ಮನೆಗಳಿಗೆ ಆಹಾರ ಡೆಲಿವರಿ ಕೊಡುವ ಗಿಗ್‌ ಕಾರ್ಮಿಕರ ಬದುಕು ಅತಂತ್ರವಾಗಿದೆ.

ಕೋವಿಡ್ ಕರಾಳ ನೆನಪು ಮರುಕಳುಹಿಸುವುದೇ?

2019 ರಿಂದ 21 ರವರೆಗೆ ಕಾಡಿದ ಕೋವಿಡ್ ಮಹಾಮಾರಿ ಸಮಯದಲ್ಲಿ ಅಸಂಘಟಿತ ಕಾರ್ಮಿಕ ವರ್ಗ ಉದ್ಯೋಗ ನಷ್ಟದಿಂದ ನರಕಯಾತನೆ ಅನುಭವಿಸಿತ್ತು. ಈಗ ಇಸ್ರೇಸ್‌-ಇರಾನ್ ಯುದ್ಧದಿಂದ ಎಲ್‌ಪಿಜಿ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿ ಮತ್ತೆ ಅದೇ ರೀತಿಯ ಪರಿಸ್ಥಿತಿ ಮರುಕಳುಹಿಸುವ ಭೀತಿ ಎದುರಾಗಿದೆ. ಅಂದು ಕೋವಿಡ್ ಸೋಂಕು ಭಯ ಮೂಡಿಸಿತ್ತು, ಇಂದು ಎಲ್‌ಪಿಜಿ ಬಿಕ್ಕಟ್ಟಿನಿಂದ ಹೊಟ್ಟೆಪಾಡಿನ ಭಯ ಶುರುವಾಗಿದೆ ಎಂದು ಅಸಂಘಟಿತ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಸಿಲಿಂಡರ್ ಪೂರೈಕೆ ಸ್ಥಗಿತವಾದ ನಂತರ ರೆಸ್ಟೋರೆಂಟ್‌ಗಳಲ್ಲಿ ಉರಿಯುತ್ತಿದ್ದ ಸ್ಟೌಗಳು ಆರಿವೆ. ಹೋಟೆಲ್‌ ಸ್ಥಗಿತದಿಂದ ಅಡುಗೆ ಸಿಬ್ಬಂದಿ, ಸರ್ವರ್‌ಗಳು ಹಾಗೂ ಸ್ವಚ್ಛತಾಗಾರರು ಪರಿತಪಿಸುತ್ತಿದ್ದು, ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಮುಳುಗಿದ್ದಾರೆ.

ಕಳೆದ ಒಂದು ವಾರದಿಂದ ಸಿಲಿಂಡರ್‌ ಸಮಸ್ಯೆ ಹೆಚ್ಚಾಗಿದೆ. ಪ್ರತಿ ನಿತ್ಯ 300 ಜನರಿಗೆ ಊಟ ಸಿದ್ಧಪಡಿಸುತ್ತಿದ್ದೆವು. ಈಗ ಸಿಲಿಂಡರ್ ಕೊರತೆಯಿಂದ 150 ಜನರಿಗೆ ಮಾತ್ರ ಊಟ ತಯಾರಿಸಲಾಗುತ್ತಿದೆ. ಶೀಘ್ರದಲ್ಲೇ ಅನಿಲ ಅಭಾವ ಸರಿಹೋಗುವ ಭರವಸೆ ನೀಡಲಾಗುತ್ತಿದೆ. ಸದ್ಯ, ಅಡುಗೆ ಸಿಬ್ಬಂದಿ, ಸಪ್ಲೈಯರ್‌ ಹಾಗೂ ಸ್ವಚ್ಛತೆ ಮಾಡುವವರಿಗೆ ತಿಂಗಳ ವೇತನ ನಿಗದಿ ಮಾಡಿರುವುದರಿಂದ ಯಾವುದೇ ಸಮಸ್ಯೆ ಕಾಣುತ್ತಿಲ್ಲ, ಒಂದು ವೇಳೆ ಅನಿಲ ಅಭಾವ ಮುಂದುವರಿದರೆ ನಮ್ಮ ಪರಿಸ್ಥಿತಿ ಏನಾಗಲಿದೆಯೋ ಎಂಬ ಆತಂಕ ಕಾಡುತ್ತಿದೆ ಎಂದು ರೆಸಿಡೆನ್ಸಿ ರಸ್ತೆಯಲ್ಲಿರುವ ಲಸ್ಸಿ ಶಾಪ್‌ ಅಂಡ್‌ ಹೋಟೆಲ್‌ ಸಿಬ್ಬಂದಿ ಪ್ರಕಾಶ್‌ 'ದ ಫೆಡರಲ್‌ ಕರ್ನಾಟಕ'ಕ್ಕೆ ತಿಳಿಸಿದರು.

ಗಿಗ್ ಕಾರ್ಮಿಕರ 'ಡೆಲಿವರಿ' ಕಷ್ಟ

ರೆಸ್ಟೋರೆಂಟ್‌ಗಳಲ್ಲಿ ಅಡುಗೆ ತಯಾರಾಗದಿದ್ದರೆ ಅದರ ಹೊಡೆತ ಕೇವಲ ಮಾಲೀಕರಿಗಷ್ಟೇ ಅಲ್ಲ, ಆಹಾರ ವಿತರಣೆ ಮಾಡುವ ಗಿಗ್ ಕಾರ್ಮಿಕರ ಮೇಲೂ ಬೀಳಲಿದೆ. ಹೋಟೆಲ್‌ಗಳು ಬಂದ್ ಆಗುತ್ತಿರುವುದರಿಂದ ಆನ್‌ಲೈನ್‌ ಆರ್ಡರ್‌ಗಳು ಇಳಿಮುಖವಾಗಿವೆ. ಇದರಿಂದ ದಿನವಿಡೀ ಬೈಕ್‌ನಲ್ಲಿ ಸಂಚರಿಸುವ ಗಿಗ್‌ ಕಾರ್ಮಿಕರ ಆದಾಯಕ್ಕೂ ಕತ್ತರಿ ಬಿದ್ದಿದೆ.

“ಎಲ್‌ಪಿಜಿ ಬಿಕ್ಕಟ್ಟು ಶುರುವಾದ ನಂತರ ದುಡಿಮೆಯೇ ಇಲ್ಲದಂತಾಗಿದೆ. ಶೇ 25 ರಷ್ಟು ಬುಕ್ಕಿಂಗ್‌ಗಳು ಬರುತ್ತಿಲ್ಲ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಮೊದಲಿನಂತೆ ಆನ್‌ಲೈನ್‌ ಬುಕ್ಕಿಂಗ್ ಸ್ವೀಕರಿಸುತ್ತಿಲ್ಲ, ನೇರವಾಗಿ ಬರುವ ಗ್ರಾಹಕರಿಗಷ್ಟೇ ಅವಕಾಶ ನೀಡಲಾಗುತ್ತಿದೆ,”ಎಂದು ಕರ್ನಾಟಕ ರಾಜ್ಯ ಗಿಗ್‌ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್‌ ಇನಾಯತ್‌ ಅಲಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕೋವಿಡ್‌ ಅವಧಿಯಲ್ಲಿ ಹೋಟೆಲ್‌ಗಳು ಮುಚ್ಚಿದ್ದರೂ ಆನ್‌ಲೈನ್ ಬುಕ್ಕಿಂಗ್‌ಗೆ ಹೆಚ್ಚು ಉತ್ತೇಜನ ನೀಡುತ್ತಿದ್ದರಿಂದ ಆದಾಯವೂ ಉತ್ತಮವಾಗಿತ್ತು. ಆದರೆ, ಈಗ ಅನಿಲ ಕೊರತೆಯಿಂದ ಹೋಟೆಲ್‌ಗಳು ಮುಚ್ಚುತ್ತಿವೆ. ಕಡಿಮೆ ಪ್ರಮಾಣ ಅಡುಗೆ ತಯಾರಿಸಿದರೂ ಆನ್‌ಲೈನ್‌ ಬುಕ್ಕಿಂಗ್‌ಗೆ ಅವಕಾಶ ನೀಡುತ್ತಿಲ್ಲ. ಏಕೆಂದರೆ, ನೇರವಾಗಿ ಬರುವ ಗ್ರಾಹಕರಿಂದ ರೆಸ್ಟೋರೆಂಟ್‌ಗಳಿಗೆ ಆದಾಯ ಹೆಚ್ಚು. ಅಗ್ರಿಗೇಟರ್‌ಗಳ ಮೂಲಕ ಹೋದರೆ ಕಮಿಷನ್‌ ಕೊಡಬೇಕಾಗುತ್ತದೆ. ಹಾಗಾಗಿ, ಆನ್‌ಲೈನ್‌ ಬುಕ್ಕಿಂಗ್‌ ಸ್ವೀಕರಿಸುತ್ತಿಲ್ಲ ಎಂದು ವಿವರಿಸಿದರು.

ಈ ಮೊದಲು ಯಾವುದೇ ವಸ್ತುವಿನ ಡೆಲಿವರಿಗಾಗಿ ಗಿಗ್‌ ಕಾರ್ಮಿಕರಿಗೆ 5 ಕಿ.ಮೀ.ಗೆ 50ರೂ ಸಿಗುತ್ತಿತ್ತು. ಆದರೆ, ಈಗ 20ರೂ.ಗಳಿಗೆ ಇಳಿಸಿದ್ದಾರೆ. ಹೋಟೆಲ್‌ ಉದ್ಯಮ ಹಾಗೂ ಆಟೊ ಚಾಲಕರನ್ನು ಒಳಗೊಂಡ ಗಿಗ್‌ ಕಾರ್ಮಿಕರು ಬೆಂಗಳೂರಿನಲ್ಲಿ 4.5ಲಕ್ಷ ಜನರಿದ್ದು, ಬವಣೆ ಅನುಭವಿಸುವಂತಾಗಿದೆ ಎಂದು ಅಲಿ ಹೇಳಿದರು.

ಸಂಕಷ್ಟದ ಸುಳಿಯಲ್ಲಿ ಹೋಟೆಲ್ ಉದ್ಯಮ

ಬಹುತೇಕ ಹೋಟೆಲ್‌ಗಳಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ ಸಾವಿರಾರು ಅಸಂಘಟಿತ ಕಾರ್ಮಿಕರಿಗೆ ಈಗ ಸಂಬಳದ ಭರವಸೆಯೇ ಇಲ್ಲದಂತಾಗಿದೆ. ನಗರ ಪ್ರದೇಶಗಳಲ್ಲಿ ಸೌದೆ ಒಲೆ ಬಳಸಲು ಸಾಧ್ಯವಾಗದ ಕಾರಣ ಅನಿಲ ಪೂರೈಕೆಯಾಗುವವರೆಗೂ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

“ನಾವು ನಿತ್ಯ ದುಡಿದರಷ್ಟೇ ಜೀವನ ಸಾಗಿಸಬಹುದು, ಹೋಟೆಲ್‌ನಲ್ಲಿ ಒಲೆ ಆರಿದರೆ ನಮ್ಮ ಮನೆಯ ಒಲೆಯೂ ಆರಲಿದೆ. ಎಲ್‌ಪಿಜಿ ಗ್ಯಾಸ್‌ ಪೂರೈಕೆ ಸ್ಥಗಿತವಾಗಿರುವ ಕಾರಣ ಹೋಟೆಲ್‌ಗಳು ಬಂದ್ ಆಗುತ್ತಿವೆ. ಈಗ ಏನು ಮಾಡಬೇಕು ಎಂಬುದೇ ತೋಚದಂತಾಗಿದೆ” ಎಂದು ಬೆಂಗಳೂರಿನ ಆರ್.ವಿ.ರಸ್ತೆಯ ಹೋಟೆಲ್ ಒಂದರಲ್ಲಿ ಸ್ವಚ್ಛತಾಗಾರರಾಗಿರುವ ಅನಸೂಯಮ್ಮ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ವಿಷ್ಣು ಗ್ರ್ಯಾಂಡ್ ಹೊಟೇಲ್ ವ್ಯವಸ್ಥಾಪಕ ವಿಜಯ್‌ಕುಮಾರ್‌ ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿ, "ಹೊಟೇಲ್‌ಗೆ ಪ್ರತಿದಿನ ನೂರಾರು ಗ್ರಾಹಕರು ಬರುತ್ತಾರೆ. ಅನಿಲ ಪೂರೈಕೆ ಕೊರತೆಯಿಂದ ಬೆಳಗಿನ ತಿಂಡಿಗಳನ್ನು ಕಡಿಮೆ ಮಾಡಲಾಗಿದೆ. ಕೇವಲ ಅನ್ನ ಸಾಂಬಾರ್ ಮಾತ್ರ ನೀಡಲಾಗುತ್ತಿದೆ. ಸಿಲಿಂಡರ್ ಖಾಲಿಯಾದ ತಕ್ಷಣ ಬಂದ್ ಮಾಡುತ್ತೇವೆ. ಸೌದೆ ಒಲೆಯಲ್ಲಿ ಅಡುಗೆ ಮಾಡುವ ವ್ಯವಸ್ಥೆ ನಮ್ಮಲ್ಲಿಲ್ಲ. ಕಾಳಸಂತೆಯಲ್ಲಿ ಸಿಲಿಂಡರ್ ಸಿಗುತ್ತದೆ. ಆದರೆ, ಅಲ್ಲಿ ಹೆಚ್ಚು ಹಣ ನೀಡಿ ತರಬೇಕು," ಎಂದು ಅಳಲು ತೋಡಿಕೊಂಡರು.

ಬೆಂಗಳೂರಿನಲ್ಲಿ ಅನಿಲ ಚಿತಾಗಾರಗಳಿಲ್ಲ, ವಿದ್ಯುತ್ ಚಿತಾಗಾರಗಳಲ್ಲಿ ಶವ ಸಂಸ್ಕಾರ ನಡೆಯುತ್ತಿರುವುದು ಯಾವುದೇ ಸಮಸ್ಯೆ ಎದುರಾಗಿಲ್ಲ.

Read More
Next Story