
ಶೀಘ್ರದಲ್ಲೇ ಬೆಂಗಳೂರು-ಹೈದರಾಬಾದ್ ದಶಪಥ ಹೆದ್ದಾರಿ: ರಾಜಧಾನಿಗೆ ಇನ್ನಷ್ಟು ಹತ್ತಿರವಾಗಲಿದೆ ಕಲ್ಯಾಣ ಕರ್ನಾಟಕ
ನಾಲ್ಕು ತಿಂಗಳಲ್ಲಿ ಟೆಂಡರ್ ಕರೆಯಲಿದ್ದು, ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಗಣನೀಯವಾಗಿ ತಗ್ಗಲಿದೆ. ತಮಿಳುನಾಡಿನ ಹೊಸೂರು ಕಡೆಯಿಂದ ಬರುವ ವಾಹನಗಳಿಗೂ ಸಹಾಯವಾಗಲಿದೆ.
ರಾಜ್ಯ ರಾಜಧಾನಿ ಬೆಂಗಳೂರು- ಹಾಗೂ ತೆಲಂಗಾಣ ರಾಜಧಾನಿ ಹೈದರಾಬಾದ್ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 44ನ್ನು ದಶಪಥವನ್ನಾಗಿಸುವ ಪ್ರಕ್ರಿಯೆ ಭರದಿಂದ ಸಾಗಿದೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧತೆಗಳು ಬಿರುಸುಗೊಂಡಿದ್ದು, ಪ್ರಸ್ತುತ ಇರುವ ಷಟ್ಪಥ ರಸ್ತೆಯು ಅತಿ ಶೀಘ್ರದಲ್ಲಿಯೇ ದಶಪಥವಾಗಲಿದೆ.
ಈ ಮಹತ್ವಾಕಾಂಕ್ಷಿ ಯೋಜನೆಯು ಕೇವಲ ಸ್ಥಳೀಯ ಹಾಗೂ ಅಂತಾರಾಜ್ಯ ಸಂಚಾರವನ್ನಷ್ಟೇ ಸುಗಮಗೊಳಿಸದೆ, ಹೈದರಾಬಾದ್ ಮೇಲೆಯೇ ಹೆಚ್ಚು ಅವಲಂಬಿತವಾಗಿರುವ ರಾಜ್ಯದ ಗಡಿ ಜಿಲ್ಲೆ ಬೀದರ್ ಸೇರಿದಂತೆ ಇಡೀ ಕಲ್ಯಾಣ ಕರ್ನಾಟಕ ಭಾಗವನ್ನು ರಾಜಧಾನಿ ಬೆಂಗಳೂರಿಗೆ ಇನ್ನಷ್ಟು ಹತ್ತಿರವಾಗಿಸುವ ಮಹತ್ತರ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಆಂಧ್ರಪ್ರದೇಶದ ಗಡಿಯಲ್ಲಿರುವ ಅನಂತಪುರ ಜಿಲ್ಲೆಯ ಕೊಡಿಕೊಂಡವರೆಗೂ ಸುಮಾರು 90 ಕಿಲೋಮೀಟರ್ ಉದ್ದದ ಈ ಹೆದ್ದಾರಿಯನ್ನು ದಶಪಥ ರಸ್ತೆಯನ್ನಾಗಿ ವಿಸ್ತರಿಸಲಾಗುತ್ತಿದೆ. ಈ ಪೈಕಿ ಮಧ್ಯದ 6 ಪಥಗಳು ವೇಗದ ಹಾಗೂ ತಡೆರಹಿತ ಸಂಚಾರಕ್ಕೆ ಮೀಸಲಾದ ಮುಖ್ಯ ರಸ್ತೆಯಾಗಿದ್ದರೆ, ಎರಡೂ ಬದಿಗಳಲ್ಲಿ ತಲಾ 2 ಪಥಗಳಂತೆ ಒಟ್ಟು 4 ಪಥಗಳ ಸುಸಜ್ಜಿತ ಸರ್ವಿಸ್ ರಸ್ತೆಗಳು ನಿರ್ಮಾಣವಾಗಲಿವೆ. ಇದಕ್ಕಾಗಿ ಸುಮಾರು 2,580 ಕೋಟಿ ರೂ.,ಗಳ ಡಿಪಿಆರ್ ಸಿದ್ದಗೊಳ್ಳುತ್ತಿದೆ.
ಇದರಿಂದ ಹೆದ್ದಾರಿ ಬದಿಯ ಗ್ರಾಮಸ್ಥರಿಗೆ ಹಾಗೂ ಸ್ಥಳೀಯ ವಾಹನ ಸವಾರರಿಗೆ ಮುಖ್ಯ ರಸ್ತೆಯ ಅತಿವೇಗದ ವಾಹನಗಳ ಅಡ್ಡಿಯಿಲ್ಲದೆ ಸುರಕ್ಷಿತವಾಗಿ ಸಂಚರಿಸಲು ಅನುಕೂಲವಾಗಲಿದೆ. ಸುಮಾರು 60 ರಿಂದ 100 ಮೀಟರ್‌ವರೆಗೂ ಲಭ್ಯವಿರುವ ಭೂಮಿಗೆ ಅನುಗುಣವಾಗಿ ರಸ್ತೆ ಅಗಲೀಕರಣಗೊಳ್ಳಲಿದ್ದು, ಕೇಂದ್ರ ಸರ್ಕಾರದ 'ಭಾರತಮಾಲಾ ಪರಿಯೋಜನಾ'ದಡಿ ಬರುವ ಬೃಹತ್ ಬೆಂಗಳೂರು-ಕಡಪ-ವಿಜಯವಾಡ ಎಕ್ಸ್‌ಪ್ರೆಸ್‌ವೇಯ ಪ್ರಮುಖ ಭಾಗವಾಗಿ ಈ ದಶಪಥ ರೂಪುಗೊಳ್ಳುತ್ತಿದೆ. ಕೊಡಿಕೊಂಡದ ಬಳಿ ಈ ರಸ್ತೆಯು ಆಂಧ್ರಪ್ರದೇಶದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಜತೆ ನೇರವಾಗಿ ವಿಲೀನವಾಗಲಿದೆ.
ಬೀದರ್‌ಗೂ ಅನುಕೂಲ
ಈ ದಶಪಥ ಯೋಜನೆಯ ಅತ್ಯಂತ ಪ್ರಮುಖ ಆಯಾಮವೆಂದರೆ, ಇದು ರಾಜ್ಯದ ಉತ್ತರದ ತುದಿಯಲ್ಲಿರುವ ಬೀದರ್ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನ ನಡುವಿನ ಕೊಂಡಿಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಭೌಗೋಳಿಕವಾಗಿ ಬೆಂಗಳೂರಿನಿಂದ ಸಾಕಷ್ಟು ದೂರದಲ್ಲಿರುವ (675 ಕಿ.ಮೀ ದೂರ, 12 ಗಂಟೆ ಪ್ರಯಾಣ ) ಕಾರಣ ಬೀದರ್ ಭಾಗದ ಜನತೆ ವ್ಯಾಪಾರ, ವಹಿವಾಟು, ಉನ್ನತ ಶಿಕ್ಷಣ, ವೈದ್ಯಕೀಯ ಸೇರಿದಂತೆ ಬಹುತೇಕ ತಮ್ಮ ದೈನಂದಿನ ಹಾಗೂ ತುರ್ತು ಅಗತ್ಯಗಳಿಗಾಗಿ ಪಕ್ಕದ ತೆಲಂಗಾಣದ ರಾಜಧಾನಿ ಹೈದರಾಬಾದ್ ನಗರವನ್ನೇ ಅತಿಯಾಗಿ ಅವಲಂಬಿಸಿದ್ದಾರೆ.
ಆದರೆ, ರಾಷ್ಟ್ರೀಯ ಹೆದ್ದಾರಿ 44 ಅನ್ನು ದಶಪಥವಾಗಿ ಮೇಲ್ದರ್ಜೆಗೇರಿದರೆ, ಸಂಚಾರ ದಟ್ಟಣೆ ಇಲ್ಲದೆ ವಾಹನಗಳ ವೇಗ ಹೆಚ್ಚಾಗಿ ಪ್ರಯಾಣದ ಅವಧಿ ಗಣನೀಯವಾಗಿ ತಗ್ಗಲಿದೆ. ಹೀಗಾಗಿ ಬೀದರ್, ಕಲಬುರಗಿ ಸೇರಿದಂತೆ ಇಡೀ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ರಾಜಧಾನಿ ಬೆಂಗಳೂರು ಸುಲಭವಾಗಿ ಮತ್ತು ವೇಗವಾಗಿ ನಿಲುಕಲಿದ್ದು ಸುಮಾರು7 ಗಂಟೆಯೊಳಗೆ ತಲುಪಲು ಸಾಧ್ಯವಾಗಲಿದೆ. ಹಾಗಾಗಿ ಆ ಭಾಗದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಇದು ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ.
ಎಲ್ಲಿಂದ ಎಲ್ಲಿಗೆ?
ದೇವನಹಳ್ಳಿ ಸಮೀಪದ ಕನ್ನಮಂಗಲ ಗೇಟ್‌ನಿಂದ ರಸ್ತೆ ಅಗಲೀಕರಣ ಕಾರ್ಯ ಆರಂಭವಾಗಲಿದ್ದು, ಈ ರಸ್ತೆಯು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ತಮಿಳುನಾಡಿನ ಹೊಸೂರು ಕಡೆಯಿಂದ ಬಂದು ಮಾಗಡಿ, ತುಮಕೂರು, ದೊಡ್ಡಬಳ್ಳಾಪುರ ಕಡೆಗೆ ಸಾಗುವ ಬೃಹತ್ ವಾಹನಗಳು ಬೆಂಗಳೂರು ನಗರವನ್ನು ಪ್ರವೇಶಿಸದೆಯೇ ಹೊರವಲಯದಲ್ಲೇ ನೇರವಾಗಿ ಸಂಚರಿಸಲು ಸಾಧ್ಯವಾಗುತ್ತದೆ. ಇದು ಬೆಂಗಳೂರು ನಗರದ ಒಳಗಿನ ಟ್ರಾಫಿಕ್ ದಟ್ಟಣೆಯನ್ನು ಹತೋಟಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜತೆಗೆ ದೇವನಹಳ್ಳಿ ಹಾಗೂ ಚಿಕ್ಕಬಳ್ಳಾಪುರ ನಗರಗಳ ಬಳಿ ಉಂಟಾಗುವ ಟ್ರಾಫಿಕ್ ಜಾಮ್ ತಪ್ಪಿಸಲು ಅಗತ್ಯವಿರುವ ಕಡೆಗಳಲ್ಲಿ ಫ್ಲೈಓವರ್ ಹಾಗೂ ಬೈಪಾಸ್‌ಗಳ ನಿರ್ಮಾಣಕ್ಕೂ ನೀಲಿನಕ್ಷೆ ಸಿದ್ಧವಾಗಿದೆ. ನ್ನಮಂಗಲ ಗೇಟ್‌ನಿಂದ ಹೈದರಾಬಾದ್‌ವರೆಗೂ ರಸ್ತೆ ವಿಸ್ತರಣೆಯಾಗಲಿದೆ.
ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ರಸ್ತೆ ಅಗಲೀಕರಕ್ಕಾಗಿ ಅಧಿಕಾರಿಗಳು ಸರ್ವೆ ನಡೆಸುತ್ತಿರುವುದು
ಭೂ ಸ್ವಾಧೀನಕ್ಕಾಗಿ ಅಳತೆ ಕಾರ್ಯ
ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಬಹುಪಾಲು ಭೂಮಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಶದಲ್ಲೇ ಇದೆ. ರೈಲ್ವೆ ಮೇಲ್ಸೇತುವೆಗಳು, ಅಂಡರ್‌ಪಾಸ್ ಹಾಗೂ ಪ್ರಮುಖ ಜಂಕ್ಷನ್‌ಗಳ ನಿರ್ಮಾಣಕ್ಕಾಗಿ ಮಾತ್ರ ಕೆಲವು ಕಡೆಗಳಲ್ಲಿ ಹೆಚ್ಚುವರಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇದೇ ವೇಳೆ, ಈಗಿರುವ ರಸ್ತೆಗೆ ಹೊಂದಿಕೊಂಡಂತೆ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯೂ ನಡೆಯುತ್ತಿದ್ದು, ರಸ್ತೆಯುದ್ದಕ್ಕೂ ಅಳತೆ ಕಾರ್ಯ ಚುರುಕುಗೊಂಡಿದೆ.
ಈ ಹೆದ್ದಾರಿ ಅಭಿವೃದ್ಧಿಯಿಂದ ರಾಜ್ಯದ ಗಡಿ ಜಿಲ್ಲೆಯಾದ ಚಿಕ್ಕಬಳ್ಳಾಪುರ ಜಿಲ್ಲೆಗೂ ಭಾರಿ ಲಾಭವಾಗಲಿದ್ದು, ರಿಯಲ್ ಎಸ್ಟೇಟ್, ಕೈಗಾರಿಕೆ ಹಾಗೂ ಶೈಕ್ಷಣಿಕ ವಲಯಗಳಲ್ಲಿ ಹೂಡಿಕೆ ಹರಿದುಬರುವ ನಿರೀಕ್ಷೆಯಿದೆ. ಸುಗಮ ಸಂಚಾರದಿಂದಾಗಿ ವಿಶ್ವವಿಖ್ಯಾತ ನಂದಿಬೆಟ್ಟ, ಇಶಾ ಫೌಂಡೇಶನ್ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಲಿದೆ. ಒಟ್ಟಾರೆಯಾಗಿ ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 11 ರಿಂದ 12 ಗಂಟೆಗಳಿಂದ ಕೇವಲ 6ರಿಂದ 7 ಗಂಟೆಗಳಿಗೆ ಇಳಿಸುವ ಈ ಯೋಜನೆಯು ರಾಜ್ಯದ ಪ್ರಗತಿಯ ಹೆದ್ದಾರಿಯಾಗಲಿದೆ. ಜತೆಗೆ ಹೈದರಾಬಾದ್‌ನಿಂದ ಆಂಧ್ರದ ವಿಜಯವಾಡಕ್ಕೆ ರಿಂಗ್ ರಸ್ತೆ ಇರುವುದರಿಂದ ಈ ಮಾರ್ಗದ ಸಂಪರ್ಕವು ಇನ್ನಷ್ಟು ಸನಿಹಗೊಳ್ಳಲಿದೆ.
ಈ ಬಗ್ಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 44 ಈಗಿರುವ ರಸ್ತೆಯೇ ದಶಪಥವಾಗಿ ವಿಸ್ತಾರವಾಗಲಿದ್ದು, ಇದು ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂದು ಹೇಳಿದ್ದಾರೆ.
"ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಿ, ಆಂಧ್ರಪ್ರದೇಶ ಹಾಗೂ ನಮ್ಮ ರಾಜ್ಯದ ನಡುವಿನ ವ್ಯಾವಹಾರಿಕ ಸಂಬಂಧ ವೃದ್ಧಿಸಲಿದೆ. ಅಲ್ಲದೆ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೂ ಇದು ಸಾಕಷ್ಟು ಅನುಕೂಲ ಮಾಡಿಕೊಡಲಿದೆ. ಸುಮಾರು 2,500 ಕೋಟಿ ರೂ.,ಗಳ ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿಗೊಳ್ಳಲಿದೆ. ಇನ್ನು ನಾಲ್ಕು ತಿಂಗಳೊಳಗೆ ಟೆಂಡರ್ ನಡೆಯಲಿದೆ," ಎಂದು ಅವರು ವಿವರಿಸಿದ್ದಾರೆ.

