
Official Secrets Act| AI ಯುಗದ ಕಣ್ಗಾವಲಿಗೆ ಬ್ರಿಟಿಷರ ಕಾಲದ ರಹಸ್ಯ ಕಾನೂನು: ಶತಮಾನದ ಕಾಯ್ದೆಗೆ ಮರುರೂಪ
ರಹಸ್ಯಗಳೆಂದರೆ ಯಾವುವು ಎಂಬುದಕ್ಕೆ ಸ್ಪಷ್ಟ ವ್ಯಾಖ್ಯಾನ ಕೂಡ ಇಲ್ಲದ, ಪ್ರಕಟಿತ ಮಾನದಂಡಗಳೇ ಇಲ್ಲದ ಮತ್ತು ಯಾವುದೇ ಸಾವಿಂಧಾನಿಕ ರಕ್ಷಣೆಗಳಿಲ್ಲದ ಶತಮಾನದಷ್ಟು ಹಳೆಯದಾದ ಒಂದು ಕಾನೂನು ಇಂದು ಭಾರತದಲ್ಲಿ ಕೃತಕ ಬುದ್ಧಿಮತ್ತೆ ಕಣ್ಗಾವಲು ವ್ಯವಸ್ಥೆಯ ರಕ್ತಮಾಂಸವೇ ಆಗಿದೆ…)d
ಗೃಹ ಸಚಿವಾಲಯವು ಕಳೆದ ತಿಂಗಳು ಎಲ್ಲ ಸಚಿವಾಲಯಗಳು ಮತ್ತು ಇಲಾಖಾ ಕಾರ್ಯದರ್ಶಿಗಳಿಗೆ ಒಂದು ಗೌಪ್ಯ ಟಿಪ್ಪಣಿಯನ್ನು ರವಾನಿಸಿತ್ತು. ಅದೇನೂ ಹೊಸ ಟಿಪ್ಪಣಿ ಅಲ್ಲ. ಬದಲಾಗಿ 1998ರ ಡಿಸೆಂಬರ್ ತಿಂಗಳಿನಲ್ಲಿ ಹೊರಡಿಸಲಾಗಿದ್ದ ಸುತ್ತೋಲೆಯ ನವೀಕೃತ ಭಾಗ. ಈ ಸುತ್ತೋಲೆಯು ಬಹುತೇಕ ಸಲಹಾತ್ಮಕ ದಾಖಲೆಯಾಗಿತ್ತು. ಇದು ಅಧಿಕಾರಿಗಳಿಗೆ ʼಕೇಂದ್ರ ನಾಗರಿಕ ಸೇವೆಗಳ ನಡವಳಿಕೆ ನಿಯಮಗಳʼ ಅಡಿಯಲ್ಲಿ ಅವರ ಜವಾಬ್ದಾರಿಗಳನ್ನು ನೆನಪು ಮಾಡಿಕೊಡುವಂತಿತ್ತು.
ಆದರೆ ʼಹಿಂದುಸ್ತಾನ್ ಟೈಮ್ಸ್ʼ ಮಾಡಿರುವ ವರದಿಯ ಪ್ರಕಾರ, ಈ ನವೀಕೃತ ಆವೃತ್ತಿಯ 1998ರ ಸುತ್ತೋಲೆಯಲ್ಲಿ ಇಲ್ಲದೇ ಇರುವ ಒಂದು ಅಂಶವನ್ನು ಸೇರಿಸಿದೆ; ಒಂದು ವೇಳೆ ಸೂಕ್ಷ್ಮ ಅಥವಾ ವರ್ಗೀಕೃತ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದೇ ಆದರೆ ಸರ್ಕಾರಿ ರಹಸ್ಯ ಕಾಯ್ದೆ 1923ರ ಅಡಿಯಲ್ಲಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂಬ ನೇರ ಎಚ್ಚರಿಕೆಯನ್ನು ನೀಡಲಾಗಿದೆ.
“ಅನಪೇಕ್ಷಿತ ಅಥವಾ ಅನಧಿಕೃತ ವ್ಯಕ್ತಿಗಳಿಗೆ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗುತ್ತಿರುವ ಪ್ರಕರಣಗಳಲ್ಲಿ ಹಠಾತ್ ಏರಿಕೆಯಾಗಿರುವುದೇ ಇದಕ್ಕೆ ಪ್ರೇರಣೆ” ಎಂದು ಆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇಂತಹ ಸೋರಿಕೆಗಳು ಸರ್ಕಾರಕ್ಕೆ ಮುಜುಗರ ತರುವುದರ ಜೊತೆಗೆ ಒಟ್ಟಾರೆ ರಾಷ್ಟ್ರೀಯ ಹಿತಾಸಕ್ತಿ ಮತ್ತು ಭದ್ರತೆಗೆ ಧಕ್ಕೆ ತರುವ ಸಾಧ್ಯತೆಯನ್ನು ಹೊಂದಿವೆ ಎಂಬ ಉಲ್ಲೇಖವನ್ನೂ ಮಾಡಲಾಗಿದೆ.
ರಹಸ್ಯ ಕಾಯ್ದೆಗೆ ಗೌಪ್ಯ ಸುತ್ತೋಲೆ
ಸುತ್ತೋಲೆಯ ಕೊನೆಯಲ್ಲಿ ಪ್ರಸ್ತಾಪ ಮಾಡಲಾಗಿರುವ ʼಸರ್ಕಾರಕ್ಕೆ ಮುಜುಗರ ತರುವ ಮೂಲʼ ಎಂಬ ನುಡಿಗಟ್ಟನ್ನು ನಿಜಕ್ಕೂ ಗಮನಿಸಬೇಕಾದ ಸಂಗತಿ. ಸರ್ಕಾರಿ ರಹಸ್ಯಗಳ ಕಾಯ್ದೆ (ಓ.ಎಸ್.ಎ) ಎಂಬುದು ಮೂಲತಃ 1923ರಲ್ಲಿ ಗೂಢಚಾರರು ಮತ್ತು ವಿಧ್ವಂಸಕ ಕೃತ್ಯ ಎಸಗುವವರನ್ನು ಹದ್ದುಬಸ್ತಿನಲ್ಲಿಡುವ ಉದ್ದೇಶದಿಂದ ರೂಪಿಸಲಾದ ಶಾಸನ. ಆದರೆ ಇದನ್ನು ಇಂದು ಸರ್ಕಾರದ ಘನತೆಗೆ ಕುಂದು ತರುವ ವಿಷಯಗಳನ್ನು ನಿರ್ವಹಿಸುವ ಸಾಧನವಾಗಿ ಘೋಷಿಸಲಾಗಿದೆ. ಇನ್ನೂ ಒಂದು ವಿಶೇಷವೆಂದರೆ ಈ ಸುತ್ತೋಲೆಯನ್ನು ಕೂಡ ʼಗೌಪ್ಯʼ ರೂಪದಲ್ಲಿಯೇ ವಿತರಿಸಲಾಗಿರುವುದು. ಅಂದರೆ ಅಸಲಿಗೆ ಗೌಪ್ಯ ದಾಖಲೆಗಳ ಸೋರಿಕೆಯ ವಿರುದ್ಧ ಎಚ್ಚರಿಸುವ ಸುತ್ತೋಲೆಯೇ ಗೌಪ್ಯವಾಗಿದೆ! ಈ ಸ್ವಯಂ ಉಲ್ಲೇಖಿತ ತರ್ಕ ಅಕ್ಷರಶಃ ವಿಪರ್ಯಾಸದಂತಿದೆ.
ಈ ಸರ್ಕಾರಿ ರಹಸ್ಯಗಳ ಕಾಯ್ದೆಯು ತನ್ನ ಮೂಲ ಉದ್ದೇಶದ ವ್ಯಾಪ್ತಿಯನ್ನು ಮೀರಿ ವ್ಯಾಪಿಸುತ್ತಿರುವ ಸುದೀರ್ಘ ಇತಿಹಾಸಕ್ಕೆ ತೀರಾ ಇತ್ತೀಚಿನ ವಿದ್ಯಮಾನವಾಗಿದೆ. ಆದರೆ ಇದು ಕೇವಲ ಒಂದು ಸಣ್ಣ ಉದಾಹರಣೆಯಷ್ಟೇ. ಇದರ ಹಿಂದಿನ ಅಸಲಿ ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಒಂಭತ್ತು ತಿಂಗಳ ಹಿಂದಷ್ಟೇ ಇದೇ ಗೃಹ ಸಚಿವಾಲಯ ಹೊರಡಿಸಿದ ಮತ್ತೊಂದು ದಾಖಲೆಯನ್ನು ಪರಿಶೀಲಿಸುವುದು ಉತ್ತಮ.
ಈ ವರ್ಗೀಕರಣ ವ್ಯವಸ್ಥೆಯು ನಿಜಕ್ಕೂ ಯಾವುದನ್ನು ರಕ್ಷಿಸುತ್ತದೆ ಮತ್ತು ಯಾವುದನ್ನು ರಕ್ಷಿಸಲು ಅದರಿಂದ ಸಾಧ್ಯವಿಲ್ಲ ಎಂಬುದನ್ನು ಆ ದಾಖಲೆಯು ಅಸಾಮಾನ್ಯ ನಿಖರತೆಯ ಜೊತೆಗೆ ವಿವರಿಸುತ್ತದೆ.
2025ರ ಮೇ ತಿಂಗಳ 2ರಂದು ಗೃಹ ಸಚಿವಾಲಯದ ವಿದೇಶಿಯರ ವಿಭಾಗದ ಅಧೀನ ಕಾರ್ಯದರ್ಶಿ ಪ್ರತಾಪ್ ಸಿಂಗ್ ರಾವತ್ ಅವರು ಒಂದು ಸುತ್ತೋಲೆಯನ್ನು ಹೊರಡಿಸಿದ್ದರು. ಅದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಡಿಜಿಪಿ, ಮತ್ತು ಐಜಿಪಿಗಳು ಹಾಗೂ ಬಿ.ಎಸ್.ಎಫ್, ಅಸ್ಸಾಂ ರೈಫಲ್ಸ್ ಮತ್ತೂ ಕರಾವಳಿ ಪಡೆಗಳ ಮಹಾನಿರ್ದೇಶಕರನ್ನು ಉದ್ದೇಶಿಸಿದ ಸುತ್ತೋಲೆಯಾಗಿತ್ತು. ಅದರಲ್ಲಿ ಪ್ರಸ್ತಾಪವಾಗಿದ್ದ ವಿಷಯ ಇಷ್ಟೇ: ʼಅಕ್ರಮ ಬಾಂಗ್ಲಾದೇಶಿ ಪ್ರಜೆಗಳು ಮತ್ತು ರೋಹಿಂಗ್ಯಾಗಳ ಗಡಿಪಾರು ಮಾಡುವ ಪ್ರಕ್ರಿಯೆ.ʼ ಈ ಎಂಟು ಪುಟಗಳ ದಾಖಲೆಯ ಉದ್ದಕ್ಕೂ ದಪ್ಪ ಅಕ್ಷರಗಳಲ್ಲಿ ಕಾಣಿಸಿಕೊಂಡ ಪದವೆಂದರೆ ʼSECRETʼ (ರಹಸ್ಯ).
ಅಕ್ರಮ ವಲಸಿಗರ ಮೇಲೆ ನಿಗಾ
ಈ ಸುತ್ತೋಲೆಯ ಉದ್ದೇಶವೇನೆಂದರೆ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳು ಮತ್ತು ರೋಹಿಂಗ್ಯಾಗಳನ್ನು ಪತ್ತೆ ಮಾಡುವುದು, ಅವರ ಬಯೋಮೆಟ್ರಿಕ್ ಮಾಹಿತಿ ಸಂಗ್ರಹಿಸುವುದು, ಅವರನ್ನು ವಶದಲ್ಲಿ ಇಡುವುದು, ಬೆಂಗಾವಲಾಗಿ ಕರೆದೊಯ್ಯುವುದು ಮತ್ತು ಗಡಿಪಾರು ಮಾಡುವುದಕ್ಕೆ ಸಂಬಂಧಿಸಿದ ಶಿಷ್ಟಾಚಾರಗಳು ಏನು ಎಂಬುದನ್ನು ವಿವರಿಸುವುದು. ಪ್ರತಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆ ಮತ್ತು ಬಂಧನ ಕೇಂದ್ರಗಳನ್ನು ಸ್ಥಾಪನೆ ಮಾಡುವುದಕ್ಕೂ ಇದರಲ್ಲಿ ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ. 30 ದಿನಗಳ ಪರಿಶೀಲನಾ ಅವಧಿಯನ್ನು ಕೂಡ ಇದಕ್ಕೆ ನಿಗದಿಪಡಿಸಲಾಗಿತ್ತು. ಜೊತೆಗೆ ಅದನ್ನು ಓದುವವರಿಗೆ ಗೃಹ ಸಚಿವಾಲಯದ ವೆಬ್-ತಾಣವನ್ನು ಗಮನಿಸುವಂತೆಯೂ ಸೂಚಿಸಲಾಗಿದೆ. Foreigners Identification Portal ಎಂಬ ವೆಬ್ ತಾಣವು ಸಾರ್ವಜನಿಕವಾಗಿ ಲಭ್ಯವಿರುವ ವೆಬ್ ವಿಳಾಸವಾಗಿದೆ.
ಇದರಲ್ಲಿ ಗೂಢಚಾರಿಕೆ, ಕಾರ್ಯಾಚರಣೆಯ ಭದ್ರತಾ ಮಾಹಿತಿ ಅಥವಾ ವಿದೇಶಿ ಶತ್ರುಗಳಿಗೆ ಸಹಾಯವಾಗುವಂತಹ ಯಾವುದೇ ಅಂಶಗಳಿಲ್ಲ. ಇದು ಕೇವಲ ವಲಸೆ ಜಾರಿ ನಿರ್ವಹಣೆಗೆ ಸಂಬಂಧಿಸಿದ ಒಂದು ಆಡಳಿತಾತ್ಮಕ ಸುತ್ತೋಲೆ. ಆದರೆ, ಇದರ 12ನೇ ಪ್ಯಾರಾಗ್ರಾಫ್ನಲ್ಲಿ ಈ ಸಂಪೂರ್ಣ ಗೌಪ್ಯತೆಯ ರಚನೆಯೇ ಕುಸಿದು ಬೀಳುತ್ತದೆ. ಅಲ್ಲಿ ರಾಜ್ಯ ಸರ್ಕಾರಗಳಿಗೆ "ಗಡಿಪಾರು ಮಾಡುವ ವಿಷಯದಲ್ಲಿ ಅನಗತ್ಯ ಪ್ರಚಾರವನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳಿ" ಎಂದು ಅದು ವಿನಂತಿ ಮಾಡುತ್ತದೆ.
ʼರಹಸ್ಯʼದ ಅಸಲೀತನ
ಈ ದಾಖಲೆಯನ್ನು ಸ್ವತಃ ಭಾರತ ಸರ್ಕಾರವೇ ರೋಹಿಂಗ್ಯಾ ಗಡಿಪಾರು ಪ್ರಕ್ರಿಯೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ನಲ್ಲಿ ತನ್ನ ಅಫಿಡವಿಟ್-ನ ಭಾಗವಾಗಿ ಸಲ್ಲಿಸಿತ್ತು. ನಂತರ, ಮೇ 2025 ರಲ್ಲಿ ಐವರು ರೋಹಿಂಗ್ಯಾ ವ್ಯಕ್ತಿಗಳು ಕಸ್ಟಡಿಯಲ್ಲಿದ್ದಾಗ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆಯ ವೇಳೆ ಅರ್ಜಿದಾರರಾದ ರೀಟಾ ಮಂಚಂದಾ ಅವರು ಇದನ್ನು ಮರುಬಳಕೆ ಮಾಡಿದರು. ಪ್ರಚಾರವನ್ನು ಹತ್ತಿಕ್ಕಲು 'SECRET' (ರಹಸ್ಯ) ಎಂದು ಮುದ್ರೆ ಒತ್ತಲಾಗಿದ್ದ ಸುತ್ತೋಲೆಯು, ಸ್ವತಃ ಸರ್ಕಾರದ ಬಹಿರಂಗಪಡಿಸುವ ಪ್ರಕ್ರಿಯೆಯ ಮೂಲಕವೇ ಎರಡು ನ್ಯಾಯಾಲಯಗಳಲ್ಲಿ ಸಾರ್ವಜನಿಕವಾಗಿ ವಿಚಾರಣೆಗೆ ಒಳಪಟ್ಟಿದೆ ಎಂಬುದು ವಿಶೇಷ.
1923ರ ಓ.ಎಸ್.ಎ ಕಾಯ್ದೆಯು 15 ಕಲಮುಗಳನ್ನು ಹೊಂದಿರುವ ಒಂದು ಶಾಸನ. ಇದು ವಸಾಹತುಶಾಹಿ ಕಾಲದ ಎರಡು ಹಿಂದಿನ ಕಾಯ್ದೆಗಳನ್ನು ಬದಲಿಸಿತು: ಅವುಗಳೆಂದರೆ ರಾಷ್ಟ್ರೀಯತಾವಾದಿ ಪ್ರಕಟಣೆಗಳನ್ನು ಹತ್ತಿಕ್ಕಲು ರೂಪಿಸಲಾಗಿದ್ದ 1889ರ ಕಾಯ್ದೆ ಮತ್ತು ವೈಸ್ರಾಯ್ ಲಾರ್ಡ್ ಕರ್ಜನ್ ಅವಧಿಯಲ್ಲಿ ತರಲಾದ ಅದರ 1904ರ ಪರಿಷ್ಕೃತ ಆವೃತ್ತಿ. ಕಾನೂನು ವಿದ್ವಾಂಸ ಎ.ಜಿ. ನೂರಾನಿ ಅವರು ಗಮನಿಸಿದಂತೆ, ಇದು ಬ್ರಿಟನ್ನ 1911ರ ಅಧಿಕೃತ ರಹಸ್ಯಗಳ ಕಾಯ್ದೆಯ ಬಹುತೇಕ ಪಡಿಯಚ್ಚಿನಂತಿದೆ.
ಇದರ ಎರಡು ಪ್ರಮುಖ ಕಾರ್ಯಾಚರಣಾ ವಿಭಾಗಗಳೆಂದರೆ: ಸೆಕ್ಷನ್ 3, ಇದು ಬೇಹುಗಾರಿಕೆಗೆ ಸಂಬಂಧಿಸಿದ್ದು 14 ವರ್ಷಗಳವರೆಗೆ ಶಿಕ್ಷೆಯನ್ನು ವಿಧಿಸುತ್ತದೆ; ಮತ್ತು ಸೆಕ್ಷನ್ 5, ಇದು ಯಾವುದೇ ಅನಧಿಕೃತ ವ್ಯಕ್ತಿಗೆ ಅಧಿಕೃತ ಮಾಹಿತಿಯನ್ನು ತಪ್ಪು ರೀತಿಯಲ್ಲಿ ರವಾನಿಸುವುದನ್ನು ಅಪರಾಧವೆಂದು ಪರಿಗಣಿಸುತ್ತದೆ.
ಅಧಿಕೃತ ರಹಸ್ಯಗಳೆಂದರೆ ಯಾವುದು?
ಈ ಕಾಯ್ದೆಯಲ್ಲಿ ಇರುವ ರಚನಾತ್ಮಕ ಕೊರತೆಯೆಂದರೆ "ಅಧಿಕೃತ ರಹಸ್ಯಗಳು" ಎಂಬ ಪದವನ್ನು ಎಲ್ಲಿಯೂ ಕೂಡ ವ್ಯಾಖ್ಯಾನಿಸದೇ ಇರುವುದು. ಮಾಹಿತಿಯನ್ನು ರಹಸ್ಯ ಎಂದು ಗೊತ್ತುಪಡಿಸುವ ಅಧಿಕಾರ ಯಾರಿಗೆ ಇದೆ, ಅದು ಯಾವ ಪ್ರಕ್ರಿಯೆಯ ಮೂಲಕ ನಡೆಯುತ್ತದೆ ಮತ್ತು ಅದು ಯಾವ ರೀತಿಯ ಮರುಪರಿಶೀಲನೆಗೆ ಒಳಪಟ್ಟಿರುತ್ತದೆ ಎಂಬ ಯಾವ ವಿವರವೂ ಈ ಕಾಯ್ದೆಯಲ್ಲಿ ಇಲ್ಲ. ಪ್ರಾಯೋಗಿಕವಾಗಿ, ಈ ಕೊರತೆಯನ್ನು ಗೃಹ ಸಚಿವಾಲಯವು ಹೊರಡಿಸಿರುವ 'ಇಲಾಖಾ ಭದ್ರತಾ ಸೂಚನೆಗಳ ಕೈಪಿಡಿ'ಯ ಮೂಲಕ ತುಂಬಲಾಗುತ್ತದೆ. ಈ ಕೈಪಿಡಿಯು ಮಾಹಿತಿಯನ್ನು ಅತ್ಯಂತ ರಹಸ್ಯ/ರಹಸ್ಯ/ಗೌಪ್ಯ/ನಿರ್ಬಂಧಿತ ಎಂಬ ಶ್ರೇಣಿಗಳಾಗಿ ವರ್ಗೀಕರಿಸುತ್ತದೆ. ಈ ಕೈಪಿಡಿಯು ಇದುವರೆಗೆ ಅಧಿಕೃತವಾಗಿ ಪ್ರಕಟಗೊಂಡಿಲ್ಲ.
ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರು ಇದನ್ನು ಬಹಿರಂಗಪಡಿಸಲು ಕೋರಿಕೆ ಸಲ್ಲಿಸಿದಾಗ, ಕೇಂದ್ರ ಮಾಹಿತಿ ಆಯೋಗವು ಅದಕ್ಕೆ ಸಮ್ಮತಿ ನೀಡಲಿಲ್ಲ. ವರ್ಗೀಕರಣದ ಮಾನದಂಡಗಳನ್ನು ಪ್ರಕಟಿಸುವುದು ರಾಷ್ಟ್ರೀಯ ಭದ್ರತೆಗೆ ಹಾನಿಯುಂಟುಮಾಡುತ್ತದೆ ಎಂಬ ಸರ್ಕಾರದ ವಾದವನ್ನು ಆಯೋಗವು ಪ್ರತಿಪಾದಿಸಿತು. ಆದರೆ, ರಕ್ಷಣಾ ಉತ್ಪಾದನಾ ಇಲಾಖೆಯು ಖಾಸಗಿ ರಕ್ಷಣಾ ಉದ್ಯಮದ ಪರವಾನಗಿ ಹೊಂದಿರುವವರಿಗಾಗಿ ಇದೇ ರೀತಿಯ ಕೈಪಿಡಿಯನ್ನು ಪ್ರತ್ಯೇಕವಾಗಿ ಪ್ರಕಟಿಸಿದಾಗ, ಗೃಹ ಸಚಿವಾಲಯದ ನಿಲುವು ಎಷ್ಟು ಅಸಂಬದ್ಧ ಎಂಬುದು ಸ್ವಯಂ-ಸ್ಪಷ್ಟವಾಯಿತು.
ಇದರ ಪರಿಣಾಮವು ಕಟುವಾಗಿದೆ: ಒಬ್ಬ ಅಧೀನ ಕಾರ್ಯದರ್ಶಿ ಕಾಗದದ ಮೇಲೆ 'ರಹಸ್ಯ' (SECRET) ಎಂದು ಟೈಪ್ ಮಾಡಲು ಬಳಸುವ ಕಾನೂನು ಸಾಧನವೇ ರಹಸ್ಯವಾಗಿದೆ. ಸರ್ಕಾರವು ಯಾವ ಕೃತ್ಯಗಳನ್ನು ಅಪರಾಧವೆಂದು ಪರಿಗಣಿಸುತ್ತದೆ ಎಂಬುದು ನಾಗರಿಕರಿಗೆ ತಿಳಿಯಲು ಸಾಧ್ಯವಿಲ್ಲ.
14 ವರ್ಷಗಳವರೆಗೆ ಶಿಕ್ಷೆಯನ್ನು ವಿಧಿಸುವ OSA ಕಾಯ್ದೆಯು, ಯಾವುದೇ ನ್ಯಾಯಾಲಯವು ಪರಿಶೀಲಿಸದ ಮತ್ತು ಯಾವುದೇ ಸಂಸತ್ತು ಅನುಮೋದಿಸದ ವರ್ಗೀಕರಣ ಮಾನದಂಡಗಳ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತದೆ.
ಶತ್ರು ಪದದ ವ್ಯಾಪ್ತಿ
ಬೇಹುಗಾರಿಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ನ ನ್ಯಾಯಶಾಸ್ತ್ರವು ಬಹಳ ವಿಸ್ತಾರವಾಗಿದೆ. 1996ರ 'ಸಾಮಾ ಅಲಾನಾ ಅಬ್ದುಲ್ಲಾ ವರ್ಸಸ್ ಗುಜರಾತ್ ರಾಜ್ಯ' ಪ್ರಕರಣದಲ್ಲಿ, ಸೆಕ್ಷನ್ 3 ಅನ್ವಯಿಸಲು ಒಂದು ದಾಖಲೆಯ ಮೇಲೆ 'ರಹಸ್ಯ' ಎಂದು ಲೇಬಲ್ ಮಾಡಿರಬೇಕಾದ ಅಗತ್ಯವಿಲ್ಲ; ಅದು ಶತ್ರುವಿಗೆ ಉಪಯುಕ್ತವಾಗುವ ಸಾಧ್ಯತೆಯಿದ್ದರೆ ಸಾಕು ಎಂದು ನ್ಯಾಯಾಲಯ ಹೇಳಿದೆ. 2003ರ ಬಜೆಟ್ ಸೋರಿಕೆ ಪ್ರಕರಣದ ವಿಚಾರಣೆಯು "ಶತ್ರು" ಎಂಬ ಪದದ ವ್ಯಾಪ್ತಿಯನ್ನು ಭವಿಷ್ಯದ ಸಂಭಾವ್ಯ ಎದುರಾಳಿಗಳನ್ನೂ ಒಳಗೊಳ್ಳುವಂತೆ ವಿಸ್ತರಿಸಿತು. ಸೂಕ್ಷ್ಮ ದಾಖಲೆಯೊಂದನ್ನು ಪ್ರಜ್ಞಾಪೂರ್ವಕವಾಗಿ ಹೊಂದಿದ್ದು, ಅದಕ್ಕೆ ಸರಿಯಾದ ವಿವರಣೆ ನೀಡದೇ ಇದ್ದಲ್ಲಿ ಶಿಕ್ಷೆಗೆ ಗುರಿಪಡಿಸಬಹುದು.
ಆದರೆ ಇವು ಬೇಹುಗಾರಿಕೆ ಪ್ರಕರಣಗಳು. ಅಂತಹ ಸಂದರ್ಭಗಳನ್ನು ಹೊರತುಪಡಿಸಿ, ನ್ಯಾಯಾಲಯಗಳು ಹೆಚ್ಚು ರಕ್ಷಣಾತ್ಮಕವಾಗಿವೆ. 'ಫೈನಾನ್ಷಿಯಲ್ ಎಕ್ಸ್ಪ್ರೆಸ್'ನಲ್ಲಿ ಪ್ರಕಟವಾದ ಕ್ಯಾಬಿನೆಟ್ ಟಿಪ್ಪಣಿಗೆ ಸಂಬಂಧಿಸಿದ 2009ರ ಶಾಂತನು ಸೈಕಿಯಾ ಪ್ರಕರಣದಲ್ಲಿ ದೆಹಲಿ ವಿಚಾರಣಾ ನ್ಯಾಯಾಲಯವು ಒಂದು ತೀರ್ಪು ನೀಡಿತು—ಕೇವಲ 'ರಹಸ್ಯ' ಎಂದು ಲೇಬಲ್ ಮಾಡಿದ ದಾಖಲೆಯು OSA ಅಡಿಯಲ್ಲಿ ಹೊಣೆಗಾರಿಕೆಗೆ ಕಾರಣವಾಗುವುದಿಲ್ಲ, ಆ ಮಾಹಿತಿಯ ಸ್ವರೂಪವು ಮುಖ್ಯವಾಗುತ್ತದೆ ಎಂದು ಅದು ಹೇಳಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧಿಕಾರಿಗಳ ವಿರುದ್ಧದ ಮೊಕದ್ದಮೆಯನ್ನು ರದ್ದುಗೊಳಿಸಿದ ದೆಹಲಿ ಹೈಕೋರ್ಟ್ನ 2019ರ ತೀರ್ಪು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, 'ಸಾರ್ವಜನಿಕ ಡೊಮೇನ್ ತತ್ವ'ವನ್ನು ಪ್ರತಿಪಾದಿಸಿತು. ಒಮ್ಮೆ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾದರೆ, ಅದರ ಗೌಪ್ಯತೆ ನಷ್ಟವಾಗುತ್ತದೆ ಮತ್ತು ಅದರ ಮೇಲಿನ ಮೊಕದ್ದಮೆ ಬಿದ್ದುಹೋಗುತ್ತದೆ. ಈ ಎರಡೂ ತತ್ವಗಳು ಗೃಹ ಸಚಿವಾಲಯದ ಗಡಿಪಾರು ಸುತ್ತೋಲೆಗೆ ನೇರವಾಗಿ ಅನ್ವಯಿಸುತ್ತವೆ, ಏಕೆಂದರೆ ಅದು ಈಗ ಈಗಾಗಲೇ ಎರಡು ನ್ಯಾಯಾಲಯಗಳ ದಾಖಲೆಗಳಲ್ಲಿ ಸೇರಿ ಹೋಗಿದೆ.
2019ರ ರಫೇಲ್ ಪ್ರಕರಣವು ಇದೇ ಅಂಶವನ್ನು ಅತ್ಯುನ್ನತ ಮಟ್ಟದಲ್ಲಿ ಪುನರುಚ್ಚರಿಸಿತು. ಸರ್ಕಾರಿ ಕಡತಗಳಿಂದ ತೆಗೆಯಲಾದ ದಾಖಲೆಗಳನ್ನು ಪ್ರಕಟಿಸಿದ ಪತ್ರಕರ್ತರ ವಿರುದ್ಧ ಅಟಾರ್ನಿ ಜನರಲ್ ಅವರು OSA ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದಾಗ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಆ ದಾಖಲೆಗಳನ್ನು ಪರಿಶೀಲಿಸುವ ಹಕ್ಕು ತನಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು. ಆ ಬೆದರಿಕೆಯಿಂದ ಚಿಕ್ಕಾಸಿನ ಪ್ರಯೋಜನವೂ ಆಗಲಿಲ್ಲ.
ಇನ್ನು 1994ರಲ್ಲಿ ವರ್ಗೀಕೃತ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪಕ್ಕೆ ಗುರಿಯಾದ ಇಸ್ರೋ ವಿಜ್ಞಾನಿ, ನಂಬಿ ನಾರಾಯಣನ್ ಪ್ರಕರಣದಲ್ಲಿ—ಸುಪ್ರೀಂ ಕೋರ್ಟ್ ಈ ಮೊಕದ್ದಮೆಯನ್ನು ಸುಳ್ಳು ಎಂದು ಪತ್ತೆಹಚ್ಚುವ ಮೊದಲು ನಂಬಿ ನಾರಾಯಣನ್ ಅವರು 50 ದಿನಗಳ ಕಾಲ ಕಸ್ಟಡಿಯಲ್ಲಿದ್ದರು—ಈ ಬಗ್ಗೆ ಕೇಂದ್ರ ಮಾಹಿತಿ ಆಯುಕ್ತರು ನಂತರ ಗಮನಿಸಿದಂತೆ: "ವ್ಯಾಖ್ಯಾನವೇ ಮಾಡದ ರಹಸ್ಯ ಮತ್ತು ಮಿತಿಯಿಲ್ಲದ ಅಧಿಕೃತ ವಿವೇಚನೆಯನ್ನು ಹೊಂದಿರುವ OSA ಕಾಯ್ದೆಯು, ಕೇವಲ ಮಾಹಿತಿ ಸ್ವಾತಂತ್ರ್ಯಕ್ಕೆ ಮಾತ್ರವಲ್ಲದೆ ಮೂಲಭೂತ ನಾಗರಿಕ ಹಕ್ಕುಗಳಿಗೂ ಬೆದರಿಕೆಯಾಗಿದೆ." ಎಂದು ಹೇಳಿದೆ.
AI-ಆಧಾರಿತ ಕಣ್ಗಾವಲು
2025ರ ಮೇ ತಿಂಗಳ ಸುತ್ತೋಲೆಯು ಕೇವಲ ಗಡಿಪಾರು ಶಿಷ್ಟಾಚಾರ ಮಾತ್ರವಲ್ಲ. ಇದು ಸತತವಾಗಿ ಕಾರ್ಯನಿರ್ವಹಿಸುವ, AI-ಚಾಲಿತ ಬಯೋಮೆಟ್ರಿಕ್ ಕಣ್ಗಾವಲು ದತ್ತಸಂಚಯದ ಸ್ಥಾಪಕ ಕಾನೂನು ದಾಖಲೆಯಾಗಿದೆ. ಕ್ರೋಢೀಕರಿಸಿದ ಈ ಬಯೋಮೆಟ್ರಿಕ್ ಡೇಟಾವನ್ನು UIDAI (ಆಧಾರ್), ಚುನಾವಣಾ ಆಯೋಗ, ಪಾಸ್ಪೋರ್ಟ್ ವಿಭಾಗ ಮತ್ತು ಸರ್ಕಾರಿ ಗುರುತಿನ ಚೀಟಿಗಳನ್ನು ನೀಡುವ ಇತರ ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ - ಇದರ ಸ್ಪಷ್ಟ ಉದ್ದೇಶವೆಂದರೆ ಆ ಸೌಲಭ್ಯಗಳನ್ನು ರದ್ದುಗೊಳಿಸುವುದು.
OSA: ರಹಸ್ಯಗಳ ಮರೆಯಲ್ಲಿರುವ ರಹಸ್ಯ ಕಾನೂನು• 'ಸರ್ಕಾರಿ ರಹಸ್ಯ' ಎಂದರೇನು ಎಂಬ ಬಗ್ಗೆ ಕಾನೂನಿನಲ್ಲಿ ಯಾವುದೇ ಸ್ಪಷ್ಟ ವ್ಯಾಖ್ಯಾನವಿಲ್ಲ • ವರ್ಗೀಕರಣದ ಕೈಪಿಡಿಯೇ (Classification Manual) ಒಂದು ರಹಸ್ಯ • ರಹಸ್ಯ ದಾಖಲೆಗಳ ಸೋರಿಕೆಯ ವಿರುದ್ಧ ಇತ್ತೀಚಿನ 'ರಹಸ್ಯ ಸುತ್ತೋಲೆ' ಎಚ್ಚರಿಕೆ ನೀಡಿದೆ • ಇತ್ತೀಚಿನ ಸುತ್ತೋಲೆಯು ನಿರಂತರ, AI-ಚಾಲಿತ ಬಯೋಮೆಟ್ರಿಕ್ ಕಣ್ಗಾವಲು ಡೇಟಾಬೇಸ್‌ಗೆ ಅನುಮತಿ ನೀಡುತ್ತದೆ • ವ್ಯಾಖ್ಯಾನಿಸದ ಅಪರಾಧಗಳಿಗೆ 14 ವರ್ಷಗಳವರೆಗೆ ಶಿಕ್ಷೆ • ನ್ಯಾಯಾಲಯಗಳಲ್ಲ, ಪೊಲೀಸರೇ ಯಾವುದು ರಹಸ್ಯ ಎಂದು ನಿರ್ಧರಿಸುತ್ತಾರೆ. |
ಭಾರತದ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ, 2023 (DPDP Act), ರಾಷ್ಟ್ರೀಯ ಭದ್ರತೆ ಮತ್ತು ಕಾನೂನು ಜಾರಿಗಾಗಿ ಸರ್ಕಾರ ನಡೆಸುವ ಡೇಟಾ ಪ್ರಕ್ರಿಯೆಗೆ ವಿನಾಯಿತಿ ನೀಡುತ್ತದೆ. ರೋಹಿಂಗ್ಯಾಗಳು ಭಾರತೀಯ ನಾಗರಿಕರಲ್ಲದ ಕಾರಣ, ಅವರಿಗೆ ಯಾವುದೇ ಡೇಟಾ ಸಂರಕ್ಷಣಾ ಹಕ್ಕುಗಳಿಲ್ಲ. ಇದರಲ್ಲಿ OSA ಕಾಯ್ದೆಯ ಪಾತ್ರವು ರಚನಾತ್ಮಕವಾದುದು: ಬಯೋಮೆಟ್ರಿಕ್ ದತ್ತಸಂಚಯವನ್ನು ಅಧಿಕೃತಗೊಳಿಸುವ ಸುತ್ತೋಲೆಯನ್ನು ಬಹಿರಂಗಪಡಿಸದ ಮಾನದಂಡಗಳ ಅಡಿಯಲ್ಲಿ 'ರಹಸ್ಯ' (SECRET) ಎಂದು ವರ್ಗೀಕರಿಸಲಾಗಿದೆ.
ಹೀಗಾಗಿ, ಈ ವರ್ಗೀಕರಣದ ಔಚಿತ್ಯವನ್ನು ನ್ಯಾಯಾಲಯಗಳು ಪರಿಶೀಲಿಸಲು ಸಾಧ್ಯವಿಲ್ಲ ಮತ್ತು ದೇಶಹೀನ ವ್ಯಕ್ತಿಗಳ ವಿರುದ್ಧ ಕಾರ್ಯಾಂಗದ ಆದೇಶದ ಮೂಲಕ ರಹಸ್ಯವಾಗಿ ನಿರ್ಮಿಸಲಾದ ಕಣ್ಗಾವಲು ವ್ಯವಸ್ಥೆಯ ಕಾನೂನುಬದ್ಧತೆಯನ್ನು ನಾಗರಿಕರು ಪ್ರಶ್ನಿಸಲು ಸಾಧ್ಯವಿಲ್ಲ.
ಬಗೆಹರಿಯದ ಸಾಂವಿಧಾನಿಕ ಪ್ರಶ್ನೆ
1954ರ ಪತ್ರಿಕಾ ಆಯೋಗವು OSA ಕಾಯ್ದೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮವನ್ನು ಗುರುತಿಸಿತ್ತು. 1887ರಲ್ಲಿ ಎಚ್.ಡಿ. ಶೌರಿ ಸಮಿತಿಯು OSAನ ಸೆಕ್ಷನ್ 5 ಅನ್ನು ಕೇವಲ ನೈಜ ರಾಷ್ಟ್ರೀಯ ಭದ್ರತಾ ಉಲ್ಲಂಘನೆಗಳಿಗೆ ಸೀಮಿತಗೊಳಿಸಲು ಶಿಫಾರಸು ಮಾಡಿತು. 2006ರ ಎರಡನೇ ಆಡಳಿತ ಸುಧಾರಣಾ ಆಯೋಗವು ಈ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಅದರ ಬದಲಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಲ್ಲೇ (ಎನ್.ಎಸ್.ಎ) ಹೊಸ ನಿಬಂಧನೆಗಳನ್ನು ಸೇರಿಸಲು ಶಿಫಾರಸು ಮಾಡಿತು. ಗೃಹ ಸಚಿವಾಲಯವು 2017ರಲ್ಲಿ ಸಚಿವ ಸಂಪುಟ ಸಚಿವಾಲಯಕ್ಕೆ ಪರಿಶೀಲನಾ ವರದಿಯನ್ನು ಸಲ್ಲಿಸಿತು. ಆದರೆ ಇವುಗಳಿಂದ ಲಾಭವೇನೂ ಆಗಲಿಲ್ಲ.
ಬ್ರಿಟನ್‌ನಲ್ಲಿ, OSA ಅಡಿಯಲ್ಲಿ ಮೊಕದ್ದಮೆ ಹೂಡಲು ಅಟಾರ್ನಿ ಜನರಲ್ ಅವರ ವೈಯಕ್ತಿಕ ಅನುಮತಿ ಅಗತ್ಯವಿರುತ್ತದೆ ಮತ್ತು ಅವರು ಅರೆ-ನ್ಯಾಯಾಂಗ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಾರೆ. ಆದರೆ ಭಾರತದಲ್ಲಿ, ಮೊಕದ್ದಮೆ ಹೂಡುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ.
ವಸಾಹತುಶಾಹಿ ಭದ್ರತಾ ವಾತಾವರಣಕ್ಕಾಗಿ ವಿನ್ಯಾಸಗೊಳಿಸಲಾದ 1923ರ ಶಾಸನವನ್ನು, ಯಾವುದೇ ಸಾಂವಿಧಾನಿಕ ರಕ್ಷಣೆಗಳಿಲ್ಲದೆ, 2025ರ AI-ಚಾಲಿತ ಮತ್ತು ಡೇಟಾ-ತೀವ್ರ ಆಡಳಿತಕ್ಕೆ ಅನ್ವಯಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಈವರೆಗೆ ನೀಡದ ತೀರ್ಪೇನೆಂದರೆ—OSA ನ ಸೆಕ್ಷನ್ 5 ಅನ್ನು ಸಂವಿಧಾನದ ವಿಧಿ 19ರ (ವಾಕ್ ಸ್ವಾತಂತ್ರ್ಯ) ಅಡಿಯಲ್ಲಿ ಪರೀಕ್ಷಿಸುವುದು, ಅಥವಾ ಪ್ರಕಟವಾಗದ ಮತ್ತು ನ್ಯಾಯಾಂಗದ ಪರಿಶೀಲನೆಗೆ ಒಳಪಡದ 'ವರ್ಗೀಕರಣ ಕೈಪಿಡಿ'ಯು ಯಾವುದೇ ಕ್ರಿಮಿನಲ್ ಶಾಸನದ 'ಕಾನೂನಿನ ಆಡಳಿತ'ದ ಅಗತ್ಯತೆಗಳನ್ನು ಪೂರೈಸುತ್ತದೆಯೇ ಎಂದು ನಿರ್ಧರಿಸುವುದು.

