Arkavathi River Pollution| ವಿಷದ ಬಟ್ಟಲಾಗಿ ಅಳಿವಿನಂಚಿಗೆ ಸಾಗಿದ ʻಅರ್ಕಾವತಿʼ
x

ಅರ್ಕಾವತಿಗೆ ಸೇರುವ ವೃಷಭಾವತಿಯ ಕೊಳಚೆ ನೀರು  ಚಿತ್ರ ಕೃಪೆ: ಪಾನಿ ಡಾಟ್‌ ಅರ್ಥ್

Arkavathi River Pollution| ವಿಷದ ಬಟ್ಟಲಾಗಿ ಅಳಿವಿನಂಚಿಗೆ ಸಾಗಿದ ʻಅರ್ಕಾವತಿʼ

ಸರ್ಕಾರೇತರ ಸಂಸ್ಥೆ ʼಪಾನಿ ಡಾಟ್‌ ಅರ್ಥ್ʼ ನಡೆಸಿದ ಅಧ್ಯಯನದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅರ್ಕಾವತಿ ನದಿಯು ಕೈಗಾರಿಕೆ ಹಾಗೂ ನಗರಗಳ ತ್ಯಾಜ್ಯ ನೀರಿನಿಂದ ಸಂಪೂರ್ಣ ವಿಷವಾಗಿದೆ.


ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳ ಜೀವನಾಡಿಯಾಗಿದ್ದ ಅರ್ಕಾವತಿ ನದಿ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ. ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟದಲ್ಲಿ ಉಗಮಿಸಿ, ಕನಕಪುರದ ಮೇಕೆದಾಟು ಬಳಿ ಕಾವೇರಿ ಸೇರುವ ನದಿಯು ಮನುಷ್ಯನ ಅತಿಯಾದ ಹಸ್ತಕ್ಷೇಪ ಮತ್ತು ಕೈಗಾರಿಕೆಗಳ ತ್ಯಾಜ್ಯದಿಂದ ವಿಷದ ಬಟ್ಟಲಾಗಿದೆ.

'ಪಾನಿ ಡಾಟ್ ಅರ್ಥ್' ಎಂಬ ಸರ್ಕಾರೇತರ ಸಂಸ್ಥೆ ಸಿದ್ಧಪಡಿಸಿರುವ ನಕ್ಷೆ ಮತ್ತು ವರದಿಯು ಅರ್ಕಾವತಿಯ ಒಡಲು ಅನುಭವಿಸುತ್ತಿರುವ ನರಳಾಟವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದೆ. 170 ಕಿ.ಮೀ. ಉದ್ದದ ನದಿ ಪಾತ್ರವು ನಗರಗಳ ಮಲಿನ ನೀರು, ಕಲ್ಲು ಗಣಿಗಾರಿಕೆಯ ಆರ್ಭಟ ಹಾಗೂ ಒತ್ತುವರಿದಾರರ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿದೆ. ರಾಷ್ಟ್ರೀಯ ಹಸಿರುಪೀಠ (ಎನ್‌ಜಿಟಿ) ಆದೇಶದ ಬಳಿಕ ಅರ್ಕಾವತಿ ನದಿ ಪುನಶ್ಚೇತನದ ಪ್ರಯತ್ನ ಗರಿಗೆದರಿದರೂ ನದಿ ಪಾತ್ರದ ವಸ್ತುಸ್ಥಿತಿ, ತಲ್ಲಣಗಳ ಮಾಹಿತಿ ಸಂಗ್ರಹಿಸದಿರುವುದು ಪರಿಸರಾಸಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಅರ್ಕಾವತಿ ಶೋಷಣೆಯ ಪರಿ ಬಿಚ್ಚಿಟ್ಟ ಎನ್‌ಜಿಒ

ಸರ್ಕಾರೇತರ ಸಂಸ್ಥೆ ʼಪಾನಿ ಡಾಟ್‌ ಅರ್ಥ್ʼ ನಡೆಸಿದ ಅಧ್ಯಯನದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅರ್ಕಾವತಿ ನದಿಯು ಕೈಗಾರಿಕೆ ಹಾಗೂ ನಗರಗಳ ತ್ಯಾಜ್ಯ ನೀರಿನಿಂದ ಸಂಪೂರ್ಣ ವಿಷವಾಗಿದೆ.

ಅರ್ಕಾವತಿ ನದಿ ಪಾತ್ರದಲ್ಲಿ ಶೋಷಣೆಯ ರೂಪಗಳನ್ನು ನಕ್ಷೆಯ ಮೂಲಕ ಚಿತ್ರಿಸಿದೆ. ಈ ನಕ್ಷೆ ಹಾಗೂ ವರದಿಯನ್ನು ʼಪಾನಿ ಡಾಟ್ ಅರ್ಥ್ʼ ಸಂಸ್ಥೆಯು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಹಂಚಿಕೊಂಡಿದೆ.

ಸುಮಾರು 170 ಕಿ.ಮೀ. ಉದ್ದದ ನದಿ ಪಾತ್ರದಲ್ಲಿ ಹಲವೆಡೆ ಚರಂಡಿ ಹಾಗೂ ಕೈಗಾರಿಕಾ ತ್ಯಾಜ್ಯದಿಂದ ನದಿ ನೀರು ಸಂಪೂರ್ಣ ಕಲುಷಿತವಾಗಿದೆ. ವಿಪರೀತ ಕಲ್ಲು ಗಣಿಗಾರಿಕೆಯಿಂದ ನದಿಯ ಹರಿವಿಗೂ ಧಕ್ಕೆಯಾಗಿದೆ. ನದಿ ಪಾತ್ರದುದ್ದಕ್ಕೂ ಅಣೆಕಟ್ಟುಗಳು, ಕೈಗಾರಿಕಾ ವಲಯಗಳು, ಒಳಚರಂಡಿ ಸಂಸ್ಕರಣಾ ಘಟಕಗಳು, ತ್ಯಾಜ್ಯ ವಿಲೇವಾರಿ ಘಟಕಗಳು, ತೆರೆದ ಗುಂಡಿಗಳು, ಜಲವಿದ್ಯುತ್ ಘಟಕಗಳಿಂದಾಗಿ ನದಿಯ ಪಾತ್ರದ ಮೇಲೆ ಅಪರಿಮಿತ ಒತ್ತಡ ಸೃಷ್ಟಿಯಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿರುವ 351 ಕಲುಷಿತ ನದಿ ಹರವುಗಳನ್ನು ಪುನಶ್ಚೇತನ ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ. ಈ ಹರವುಗಳಲ್ಲಿ ಅರ್ಕಾವತಿ ನದಿ ಪಾತ್ರದ ಚಾಮರಾಜಸಾಗರ ಜಲಾಶಯದಿಂದ ಕನಕಪುರ ಪಟ್ಟಣದವರೆಗಿನ 51 ಕಿ.ಮೀ. ಪುನಶ್ಚೇತನವೂ ಸೇರಿದೆ.

ಕಲುಷಿತ ಹರವುಗಳು, ಉಪನದಿಗಳು, ಚರಂಡಿಗಳು, ಪ್ರಮುಖ ಪಟ್ಟಣಗಳು, ಕೈಗಾರಿಕಾ ಪ್ರದೇಶಗಳು ಮತ್ತು ಎಸ್ಟಿಪಿ ಸ್ಥಳಗಳನ್ನು ತೋರಿಸುವ ನದಿ ನಕ್ಷೆ ತಯಾರಿಸಲು ಎ‌ನ್‌ಜಿಟಿಯು ಸರ್ಕಾರಕ್ಕೆ ಆದೇಶಿಸಿದರೂ ಈವರೆಗೆ ಕಾರ್ಯಪ್ರವೃತ್ತರಾಗದಿರುವುದು ವಿಳಂಬಕ್ಕೆ ಕಾರಣವಾಗಲಿದೆ.

ಅರ್ಕಾವತಿ ನದಿ ಪಾತ್ರದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಕೆರೆಯ ದ್ರೋಣ್‌ ಚಿತ್ರ. ಚಿತ್ರ ಕೃಪೆ: ಪಾನಿ ಡಾಟ್‌ ಅರ್ಥ್

ಅರ್ಕಾವತಿ ನದಿ ಪಾತ್ರವು ಕರ್ನಾಟಕದಲ್ಲಿ ಶೇ 96, ತಮಿಳುನಾಡಿನಲ್ಲಿ ಶೇ 4 ರಷ್ಟು ಪ್ರದೇಶದಲ್ಲಿ ಹರಡಿದ್ದು, 4150 ಚದರ ಕಿ.ಮೀ. ಪ್ರದೇಶದಲ್ಲಿ ಆವರಿಸಿದೆ. ಚಿಕ್ಕಬಳ್ಳಾಪುರದಲ್ಲಿ ಶೇ 0.2 ರಷ್ಟು, ಬೆಂಗಳೂರು ಗ್ರಾಮಾಂತರದಲ್ಲಿ ಶೇ 21, ಬೆಂಗಳೂರು ನಗರದಲ್ಲಿ ಶೇ 25 ಮತ್ತು ರಾಮನಗರದಲ್ಲಿ ಶೇ 50 ರಷ್ಟು ಪ್ರದೇಶದಲ್ಲಿ ನದಿ ಪಾತ್ರವಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲೇ ಅರ್ಕಾವತಿ ಜಲಾನಯನದ ಶೇ 6 ರಷ್ಟು ಪ್ರದೇಶ ಒತ್ತುವರಿಯಾಗಿದೆ. ಪ್ರಸ್ತುತ, ಒತ್ತುವರಿ ಪ್ರದೇಶವು ಕಾಂಕ್ರೀಟ್ಮಯವಾಗಿದ್ದು, ಮಾಲಿನ್ಯದ ಪ್ರಮುಖ ಮೂಲವಾಗಿದೆ.

ನಂದಿಬೆಟ್ಟದಲ್ಲಿ ಉಗಮ, ಮೇಕೆದಾಟಿನಲ್ಲಿ ಸಂಗಮ

ಅರ್ಕಾವತಿ ನದಿಯು ನಂದಿ ಬೆಟ್ಟದಲ್ಲಿ ಉಗಮವಾಗಿ ಕನಕಪುರ ತಾಲೂಕಿನ ಮೇಕೆದಾಟುವಿನಲ್ಲಿ ಕಾವೇರಿಯೊಂದಿಗೆ ಸಂಗಮವಾಗಲಿದೆ. ಅರ್ಕಾವತಿಯು ವೃಷಭಾವತಿ, ಕುಮುದ್ವತಿ ಹಾಗೂ ಸುವರ್ಣಮುಖಿ ಎಂಬ ಮೂರು ಉಪನದಿಗಳನ್ನು ಒಳಗೊಂಡಿದೆ. ದೊಡ್ಡ ಹಳ್ಳ, ಬಂಡೆ ಹಳ್ಳ, ಕುತ್ಲೆಹೊಳೆ, ರಾಯಮಾಲ ಹೊಳೆ, ಮುತ್ತಿಯಾಲಮ್ಮ ಹೊಳೆ, ಅಂತರಗಂಗೆ ಹೊಳೆ ಮತ್ತು ಚಿಕ್ಕತೊರೆಯಂತಹ ಇತರ ತೊರೆಗಳು ಅರ್ಕಾವತಿ ನದಿ ಪಾತ್ರದಲ್ಲಿವೆ.

ಅರ್ಕಾವತಿ ನದಿ ಪಥದಲ್ಲಿ ಹದಿಮೂರು ಅಣೆಕಟ್ಟುಗಳಿವೆ. ಹೆಸರಘಟ್ಟ, ಚಾಮರಾಜಸಾಗರವು ಬೆಂಗಳೂರು ಜಲಮಂಡಳಿಯ ನಿರ್ವಹಣೆಯಲ್ಲಿದೆ. ಮಂಚನಬೆಲೆ ಹಾಗೂ ಅರ್ಕಾವತಿ ಜಲಾಶಯವು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ವಹಣೆಯಲ್ಲಿದೆ. ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ 64 ಟಿಎಂಸಿ ಸಾಮರ್ಥ್ಯದ ಅಣೆಕಟ್ಟನ್ನು ಮೇಕೆದಾಟು ಬಳಿ ನಿರ್ಮಿಸಲು ಡಿಪಿಆರ್ ತಯಾರಿಸಲಾಗಿದೆ.

ನದಿ ಪಾತ್ರವು ಸಣ್ಣ ನೀರಾವರಿ ಇಲಾಖೆಯಿಂದ ನಿರ್ವಹಿಸುವ ಸುಮಾರು 110 ಜಲಮೂಲಗಳನ್ನು ಹೊಂದಿದೆ. ಇವುಗಳಲ್ಲಿ ಬೈರಮಂಗಲ, ನೆಲ್ಲಿಗುಡ್ಡ, ಮಾರಲವಾಡಿ, ದೊಡ್ಡಾಲದಹಳ್ಳಿ, ನೀರಲಹಟ್ಟಿ, ಚಿಕ್ಕಗೊಂಡನಹಳ್ಳಿ, ರವುತನಹಳ್ಳಿ, ತಟ್ಟೆಕೆರೆ, ಮುನಿನಗರ, ವಡೇರಹಳ್ಳಿ, ಅಗ್ರ, ಬೆಳಗುಂಬ, ಬೇಗೂರು, ಬಿಲ್ಲನಕೋಟೆ, ಮಧುರೆ, ದೊಡ್ಡತುಮಕೂರು, ನಾಗರಕೆರೆಗಳು ಪ್ರಮುಖವಾಗಿವೆ. ಅರ್ಕಾವತಿ, ಬೈರಮಂಗಲ ಮತ್ತು ಸುವರ್ಣಮುಖಿ ಅಣೆಕಟ್ಟನ್ನು ನೀರಾವರಿಗೆ ಮೀಸಲಿಡಲಾಗಿದೆ. ಮಂಚನಬೆಲೆ ಅಣೆಕಟ್ಟನ್ನು ಕುಡಿಯುವ ನೀರು ಮತ್ತು ಮೀನುಗಾರಿಕೆಗೆ ಬಳಸಲಾಗುತ್ತಿದೆ.

ಅರ್ಕಾವತಿ ನದಿ ಪಾತ್ರದ ಹೆಸರುಘಟ್ಟ ಕೆರೆಯ ಚಿತ್ರಣ. ಚಿತ್ರ ಕೃಪೆ : ಪಾನಿ ಡಾಟ್‌ ಅರ್ಥ್

ವನ್ಯಜೀವಿಗಳಿಗೆ ಮಾರಕದಂತಿವೆ ಅಣೆಕಟ್ಟುಗಳು

170 ಕಿ.ಮೀ. ಉದ್ದದ ನದಿ ಪಾತ್ರದಲ್ಲಿ 76ನೇ ಕಿ.ಮೀ ಬಳಿ ಚಾಮರಾಜಸಾಗರ ಅಣೆಕಟ್ಟು ಮತ್ತು 86ನೇ ಕಿ.ಮೀ ಬಳಿ ಮಂಚನಬೆಲೆ ಅಣೆಕಟ್ಟು ಇದೆ. ಕೇವಲ 10ಕಿ.ಮೀ. ಅಂತರದಲ್ಲೇ ಅಣೆಕಟ್ಟು ನಿರ್ಮಿಸಿರುವುದರಿಂದ ನದಿ ಮತ್ತು ವನ್ಯಜೀವಿಗಳಿಗೆ ಮಾರಕವಾಗಿವೆ ಎನ್ನಲಾಗಿದೆ. 64ನೇ ಕಿ.ಮೀ ಬಳಿ ಬೃಹತ್ ವಿಷಕಾರಿ ಗಣಿ ತ್ಯಾಜ್ಯದ ರಾಶಿಯಿದೆ. ಇದರಿಂದ ನದಿಗೆ ವಿಷಕಾರಿ ಮಾಲಿನ್ಯಕಾರಕಗಳು ಸೇರುತ್ತಿವೆ. 61ನೇ ಕಿ.ಮೀ ನಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದ ತ್ಯಾಜ್ಯವು ನದಿ ಸೇರುತ್ತಿದೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದಡಿ ಎರಡು ಜಲವಿದ್ಯುತ್ ಘಟಕಗಳನ್ನು ಹೊಂದಿದೆ. ವೃಷಭಾವತಿ ನದಿಯ ಮೇಲೆ 2 ಮೆಗಾವ್ಯಾಟ್‌ ಸಾಮರ್ಥ್ಯದ ರೈಸಿಂಗ್ ಸನ್ ಪವರ್, ಅರ್ಕಾವತಿಯ ಮೇಲೆ 10.25 ಮೆಗಾವ್ಯಾಟ್‌ ಸಾಮರ್ಥ್ಯದ ಸಾಯಿ ಸ್ಫೂರ್ತಿ ಎಂಬ ಘಟಕಗಳು ತಲೆ ಎತ್ತಿವೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅರ್ಕಾವತಿ ನದಿಯನ್ನು 6 ಸ್ಥಳಗಳಲ್ಲಿ ಮತ್ತು ವೃಷಭಾವತಿ ನದಿಯನ್ನು 13 ಸ್ಥಳಗಳಲ್ಲಿ ಮೇಲ್ವಿಚಾರಣೆ ಮಾಡುತ್ತಿದೆ.

ಒಳಚರಂಡಿಯೇ ನದಿಗೆ ನೀರಿನ ಮೂಲ

2018 ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಚಾಮರಾಜಸಾಗರ ಜಲಾಶಯದಿಂದ ಕನಕಪುರದವರೆಗೆ ಅರ್ಕಾವತಿ ನದಿಯ ಸುಮಾರು 51 ಕಿ.ಮೀ. ಹರವನ್ನು ಕಲುಷಿತ ಎಂದು ಗುರುತಿಸಿದೆ. ಅರ್ಕಾವತಿ ನದಿ ದಡದಲ್ಲಿರುವ ದೊಡ್ಡಬಳ್ಳಾಪುರ, ರಾಮನಗರ ಮತ್ತು ಕನಕಪುರ ಪಟ್ಟಣಗಳು ಮಾಲಿನ್ಯದ ಮೂಲಗಳಾಗಿವೆ. ಈ ಪಟ್ಟಣಗಳಿಂದ ಹರಿದು ಬರುವ ಚರಂಡಿ ಹಾಗೂ ಕೈಗಾರಿಕಾ ತ್ಯಾಜ್ಯವೇ ಅರ್ಕಾವತಿಗೆ ನೀರಿನ ಮೂಲವಾಗಿ ಬದಲಾಗಿದೆ.

ಕೇಂದ್ರ ಅಂತರ್ಜಲ ಮಂಡಳಿಯು ತಾಲೂಕುವಾರು ಅಂತರ್ಜಲ ಅಭಿವೃದ್ಧಿ ಮತ್ತು ಬಳಕೆಯನ್ನು ಸುರಕ್ಷಿತ, ಅರೆ-ಗಂಭೀರ, ಗಂಭೀರ ಮತ್ತು ಅತಿ ಹೆಚ್ಚು ಬಳಸಲ್ಪಟ್ಟ ಎಂಬ ನಾಲ್ಕು ಹಂತಗಳಲ್ಲಿ ವರ್ಗೀಕರಿಸಿದೆ. ಅರ್ಕಾವತಿ ಜಲಾನಯನ ಪ್ರದೇಶಕ್ಕೆ ಬಂದು ಸೇರುವ ಹತ್ತು ತಾಲ್ಲೂಕುಗಳಲ್ಲಿ ಏಳು 'ಅತಿ ಹೆಚ್ಚು ಬಳಸಲ್ಪಟ್ಟ' ಅಂತರ್ಜಲ ವಿಭಾಗದಲ್ಲಿದ್ದರೆ, ಮೂರು 'ಗಂಭೀರ' ಹಂತದಲ್ಲಿವೆ.

ಗಣಿಗಾರಿಕೆಯಿಂದಲೂ ನದಿಗೆ ಅಪಾಯ

ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಚಾಮರಾಜಸಾಗರ, ಮಂಚನಬೆಲೆ ಮತ್ತು ಅರ್ಕಾವತಿ ಅಣೆಕಟ್ಟುಗಳ ಸಮೀಪವೇ ಕಲ್ಲು ಗಣಿಗಾರಿಗೆ ಅವ್ಯಾಹತವಾಗಿದ್ದು, ನದಿಗೆ ಅಪಾಯ ತಂದೊಡ್ಡುವ ಭೀತಿ ಸೃಷ್ಟಿಸಿದೆ.

ಅಣೆಕಟ್ಟುಗಳ ಸಮೀಪವೇ ಗಣಿಗಾರಿಕೆ, ಬಂಡೆ ಸ್ಫೋಟದಂತಹ ಚಟುವಟಿಕೆಗಳು ಅಣೆಕಟ್ಟಿನ ರಚನೆಗೂ ಅಪಾಯ ಉಂಟು ಮಾಡುವಂತಿವೆ. ಅಲ್ಲದೇ ಹೆಚ್ಚುವರಿಯಾಗಿ ಗಣಿಗಳಿಂದ ಹೊರಬರುವ ವಿಷಕಾರಿ ಭಾರೀ ಲೋಹದ ತ್ಯಾಜ್ಯವು ನದಿ ಮತ್ತು ಜಲಾಶಯವನ್ನು ಸಂಪೂರ್ಣ ಕಲುಷಿತ ಮಾಡಿದೆ ಎಂಬ ಸ್ಫೋಟಕ ಸಂಗತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೈಗಾರಿಕಾ ತ್ಯಾಜ್ಯದಿಂದ ನದಿ ಕಲುಷಿತ

ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಎರಡು ಸಾಮಾನ್ಯ ಕೈಗಾರಿಕಾ ತ್ಯಾಜ್ಯ ಸಂಸ್ಕರಣಾ ಘಟಕಗಳಿದ್ದರೂ ಸರಿಯಾದ ಸಂಸ್ಕರಣೆ ಇಲ್ಲದೇ ನದಿ ಪಾತ್ರವನ್ನು ಮಲಿನ ಮಾಡಿವೆ. ಜಲಾನಯನ ಪ್ರದೇಶದ ಒಳಗಿನ ಮತ್ತು ಹೊರಗಿನ ವಿವಿಧ ಕೈಗಾರಿಕೆಗಳಾದ ಜವಳಿ, ಔಷಧ ಇತ್ಯಾದಿಗಳಿಂದ ವಿಷಕಾರಿ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಅರ್ಕಾವತಿಯ ಒಡಲು ಸೇರುತ್ತಿದೆ.

ಬಿಬಿಎಂಪಿ ವ್ಯಾಪ್ತಿಯ ಪೀಣ್ಯ ಕೈಗಾರಿಕಾ ಪ್ರದೇಶವು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ 'ತೀವ್ರ ಕಲುಷಿತಗೊಂಡ ಕೈಗಾರಿಕಾ ಪ್ರದೇಶ' ಎಂದು ಗುರುತಿಸಲಾಗಿದೆ. ಇದು ಅರ್ಕಾವತಿ ಮತ್ತು ವೃಷಭಾವತಿ ಎರಡೂ ನದಿಗಳನ್ನು ಮಲಿನ ಮಾಡಿದೆ.

ಕುಮುದ್ವತಿ ಜಲಾನಯನ ಪ್ರದೇಶದ ದಾಬಸ್‌ ಪೇಟೆ ಕೈಗಾರಿಕಾ ಪ್ರದೇಶವು ಕೆಐಎಡಿಬಿ ವ್ಯಾಪ್ತಿಗೆ ಬರುತ್ತದೆ. ಇದು ರಾಮ್ಕಿ ಗ್ರೂಪ್ ನಿರ್ವಹಿಸುವ 93 ಎಕರೆ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಭೂಮಿ ಹೊಂದಿದೆ. ಬೆಂಗಳೂರು ಎಕೋ ಪಾರ್ಕ್ ಎಂಬ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕ ಹೊಂದಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯೇ ಇಲ್ಲಿ ಭೂ ಭರ್ತಿ ಹಾಗೂ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ವಹಿಸುತ್ತಿದೆ.

ವೃಷಭಾವತಿ ನದಿಯ ದಂಡೆ ಮೇಲಿರುವ ಕುಂಬಳಗೋಡು ಕೈಗಾರಿಕಾ ಪ್ರದೇಶದಲ್ಲಿ ಜವಳಿ ಡೈಯಿಂಗ್, ಕೆಮಿಕಲ್ಸ್, ಫಾರ್ಮಾ ಕೈಗಾರಿಕೆಗಳು ಮತ್ತು ಎರಡು ಸಿಇಟಿಪಿ ಘಟಕಗಳು ಕೂಡ ಮಾಲಿನ್ಯದ ಮೂಲಗಳಾಗಿವೆ. ಟೊಯೋಟಾ-ಕಿರ್ಲೋಸ್ಕರ್ ಮತ್ತು ಹಿಂದೂಸ್ತಾನ್ ಪೆಪ್ಸಿಕೋದಂತಹ ದೊಡ್ಡ ಕೈಗಾರಿಕೆ ಹೊಂದಿರುವ ಬಿಡದಿ ಕೈಗಾರಿಕಾ ಪ್ರದೇಶವು ವೃಷಭಾವತಿ ನದಿಯ ದಂಡೆಯ ಮೇಲಿದ್ದು, ನದಿಗೆ ಕಲುಷಿತ ನೀರು ಸೇರಲು ಕಾರಣವಾಗಿದೆ.

ಹಾರೋಹಳ್ಳಿ ಕೈಗಾರಿಕಾ ಪ್ರದೇಶವು ಸುವರ್ಣಮುಖಿ ನದಿಯ ದಂಡೆಯಲ್ಲಿದೆ. ಇಲ್ಲಿ ಜವಳಿ ಡೈಯಿಂಗ್, ಪೇಪರ್ ಮಿಲ್ಗಳು, ಔಷಧ ಕೈಗಾರಿಕೆಗಳಿಂದ ರಸಾಯನಿಕ ತ್ಯಾಜ್ಯ ನದಿಗೆ ಸೇರುತ್ತಿದೆ. ಇಲ್ಲಿಯೂ ಎರಡು ಅಪಾಯಕಾರಿ ತ್ಯಾಜ್ಯ ವಿಲೇವಾರಿ ಘಟಕಗಳಿವೆ.

(ಮಾಹಿತಿ ಕೃಪೆ- ಪಾನಿ ಡಾಟ್ ಅರ್ಥ್)

Read More
Next Story