Anganwadi Workers| ಅಂಗನವಾಡಿ ಹುದ್ದೆಗಿಲ್ಲ ಕನಿಷ್ಠ ವೇತನ; ಕಾರ್ಯಕರ್ತರಲ್ಲಿ ಕಿಡಿ ಹೊತ್ತಿಸಿದೆ ಸರ್ಕಾರದ ಹೇಳಿಕೆ
x
ಅಂಗನವಾಡಿಯಲ್ಲಿ ಮಕ್ಕಳಿಗೆ ಕಲಿಸುತ್ತಿರುವ ಕಾರ್ಯಕರ್ತೆ ಸಂಗ್ರಹ ಚಿತ್ರ

Anganwadi Workers| ಅಂಗನವಾಡಿ ಹುದ್ದೆಗಿಲ್ಲ ಕನಿಷ್ಠ ವೇತನ; ಕಾರ್ಯಕರ್ತರಲ್ಲಿ ಕಿಡಿ ಹೊತ್ತಿಸಿದೆ ಸರ್ಕಾರದ ಹೇಳಿಕೆ

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ʼಗುಜರಾತ್‌ ಮಾದರಿʼ ಗೌರವಧನ ಹೆಚ್ಚಿಸಲು ಸರ್ಕಾರಕ್ಕೆ ನಿರ್ದೇಶನ ಕೋರಿ 292 ಕ್ಕೂ ಹೆಚ್ಚು ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಧಾರವಾಡದ ಹೈಕೋರ್ಟ್‌ ಪೀಠದ ಮೊರೆ ಹೋಗಿದ್ದಾರೆ.


Click the Play button to hear this message in audio format

ಮಕ್ಕಳ ಯೋಗಕ್ಷೇಮದ ಜತೆಗೆ ಸರ್ಕಾರ ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಮರೀಚಿಕೆಯಾಗಿದೆ. ಸರ್ಕಾರ ನೀಡುವ ಅತ್ಯಲ್ಪ ಗೌರವಧನದಿಂದ ಜೀವನ‌ ನಿರ್ವಹಣೆ ಕಷ್ಟವಾಗಿದೆ. ಕನಿಷ್ಠ ವೇತನ ಕಾಯ್ದೆಯಡಿ ಸೂಕ್ತ ವೇತನ ನೀಡಿ, ಸೇವೆ ಕಾಯಂ ಮಾಡುವಂತೆ ಒತ್ತಾಯಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ರಾಜ್ಯ ಸರ್ಕಾರದ ಹೇಳಿಕೆ ಆತಂಕ ಮೂಡಿಸಿದೆ.

ಚುನಾವಣಾ ಪೂರ್ವದಲ್ಲಿ ಗೌರವಧನ ಹೆಚ್ಚಳದ ಆಶ್ವಾಸನೆ ನೀಡಿ ಬಜೆಟ್‌ನಲ್ಲಿ ಮಾತು ತಪ್ಪಿದ ಕಾಂಗ್ರೆಸ್‌ ಸರ್ಕಾರ ಇದೀಗ ಗೌರವಧನ ಹುದ್ದೆಗೆ ಕನಿಷ್ಠ ವೇತನ ನೀಡಲಾಗದು ಎಂದು ಘಂಟಾಘೋಷವಾಗಿ ಹೇಳಿರುವುದು ಅಂಗನವಾಡಿ ನೌಕರರನ್ನು ಇನ್ನಷ್ಟು ಹೋರಾಟಕ್ಕೆ ಇಳಿಯುವಂತೆ‌ ಉದ್ದೀಪಿಸಿದೆ. ಈಗಾಗಲೇ ಗೌರವಧನ ಹೆಚ್ಚಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಕಾನೂನು ಸಮರವನ್ನೂ ಆರಂಭಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ʼಗುಜರಾತ್‌ ಮಾದರಿʼ ಗೌರವಧನ ಹೆಚ್ಚಿಸಲು ಸರ್ಕಾರಕ್ಕೆ ನಿರ್ದೇಶನ ಕೋರಿ 292 ಕ್ಕೂ ಹೆಚ್ಚು ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಧಾರವಾಡದ ಹೈಕೋರ್ಟ್‌ ಪೀಠದ ಮೊರೆ ಹೋಗಿದ್ದಾರೆ. ನ್ಯಾಯಪೀಠವು ರಾಜ್ಯ ಹಾಗೂ ಕೇಂದ್ರಕ್ಕೆ ನೋಟಿಸ್‌ ನೀಡಿದರೂ ಗೊತ್ತೇ ಇಲ್ಲದಂತೆ ಸರ್ಕಾರ ವರ್ತಿಸುತ್ತಿದೆ.

ವಿಧಾನ ಪರಿಷತ್‌ ಕಲಾಪದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರು, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಮಾಹಿತಿಯೇ ಇಲ್ಲ, ಏನೇ ಮಾಡಿದರೂ ಗೌರವಧನದ ಹುದ್ದೆಗೆ ಕನಿಷ್ಠ ವೇತನ ನೀಡಲು ಅವಕಾಶ ಇಲ್ಲ ಎಂದು ಹೇಳಿರುವುದು ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶಕ್ಕೆ ಕಾರಣವಾಗಿದೆ.

ಗೌರವಧನದ ಹುದ್ದೆಗೆ ಕನಿಷ್ಠ ವೇತನ ಇಲ್ಲ

"ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳು ಗೌರವಧನ ಆಧಾರಿತ ಹುದ್ದೆಗಳಾಗಿವೆ. ಹೀಗಾಗಿ ಇವುಗಳಿಗೆ ಕನಿಷ್ಠ ವೇತನ ನಿಯಮ ಅನ್ವಯಿಸುವುದಿಲ್ಲ" ಎಂದು‌ ಲಕ್ಷ್ಮಿ ಹೆಬ್ಬಾಳಕರ್‌ ವಿಧಾನ ಪರಿಷತ್‌ನಲ್ಲಿ ಹೇಳಿದ್ದಾರೆ.

ಪ್ರಸ್ತುತ ಜಾರಿಯಲ್ಲಿರುವ ಗೌರವಧನದ ವಿವರಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಸೇವಾ ಹಿರಿತನಕ್ಕೆ ಅನುಗುಣವಾಗಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮಾಸಿಕ ಸಂಭಾವನೆ ನೀಡಲಾಗುತ್ತಿದೆ. ಐಸಿಎಸ್‌ಡಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಶೇ 60 ಹಾಗೂ ರಾಜ್ಯ ಸರ್ಕಾರ ಶೇ 40 ರಷ್ಟು ಭರಿಸಲಿದೆ. ಈ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ನಿಗದಿತ ಗೌರವಧನವು 4500 ರೂ. ಇದೆ. ಇದರಲ್ಲಿ ಕೇಂದ್ರ ಸರ್ಕಾರ 2700, ರಾಜ್ಯ ಸರ್ಕಾರ 1800 ರೂ. ನೀಡಲಿದೆ. ಹೆಚ್ಚುವರಿಯಾಗಿ ರಾಜ್ಯವೇ 6500 ಸೇರಿಸಿ ಒಟ್ಟು 11 ಸಾವಿರ ರೂ. ಪಾವತಿಸಲಿದೆ. ಅದೇ ರೀತಿ ಅಂಗನವಾಡಿ ಸಹಾಯಕಿಯರಿಗೆ 2250 ರೂ., ಗೌರವಧನ ನಿಗದಿಯಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರ 1350 ರೂ, ರಾಜ್ಯ ಸರ್ಕಾರ 900 ರೂ., ಕರ್ನಾಟಕ ಹೆಚ್ಚುವರಿಯಾಗಿ 3750 ರೂ. ಸೇರಿ ಒಟ್ಟು 6000 ಸಾವಿರ ಗೌರವಧನ ಸಿಗಲಿದೆ.

ಸೇವಾ ಹಿರಿತನದ ಆಧರಿಸಿ ಬೋನಸ್

ದೀರ್ಘಕಾಲ ಸೇವೆ ಸಲ್ಲಿಸಿದವರಿಗೆ ಹೆಚ್ಚಿನ ಪ್ರೋತ್ಸಾಹ ಧನ ನಿಗದಿಪಡಿಸಲಾಗಿದೆ. 10 ವರ್ಷಗಳ ಕಾಲ ಸೇವೆ ಸಲ್ಲಿಸಿರುವ 1,000 ರೂ. ಪ್ರೋತ್ಸಾಹಧನ ಸಿಗಲಿದೆ. ಆ ಮೂಲಕ ಕಾರ್ಯಕರ್ತೆಯರಿಗೆ ಒಟ್ಟು ಗೌರವಧನ 12 ಸಾವಿರ, ಸಹಾಯಕಿಯರಿಗೆ 7 ಸಾವಿರ ಗೌರವಧನ ಆಗಲಿದೆ.

10-20 ವರ್ಷ ಸೇವೆ ಸಲ್ಲಿಸಿರುವವರಿಗೆ 1,250 ರೂ. ಪ್ರೋತ್ಸಾಹಧನ ಸಿಗಲಿದೆ. 20 ವರ್ಷಕ್ಕಿಂತ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ 1,500 ರೂ. ಪ್ರೋತ್ಸಾಹಧನ ಸಿಗಲಿದೆ.

ಕಾನೂನು ಸಮರಕ್ಕಿಳಿದ ಕಾರ್ಯಕರ್ತೆಯರು

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಕೆಲಸವನ್ನು ಸರ್ಕಾರಿ ಸೇವೆಯನ್ನಾಗಿ ಪರಿಗಣಿಸಬೇಕು. ಅಲ್ಲಿಯವರೆಗೂ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಕವಿತಾ ನಾಯಕ್. ನೀಲಾ ನಾಯಕ್ ಮತ್ತಿತರರು 2 ಪ್ರತ್ಯೇಕ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಲೇಖಾ ನೇತೃತ್ವದ ಪೀಠವು, ಪ್ರತಿವಾದಿಗಳಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಕರ್ನಾಟಕ ಸರ್ಕಾರದ ಹೊಸ ಅಧಿಸೂಚನೆಯ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ 25,714 ರೂ., ಸಹಾಯಕಿಯರಿಗೆ 21,251 ರೂ. ಕನಿಷ್ಠ ವೇತನ ನೀಡಬೇಕು. ಸೇವಾ ಕಾಯಮಾತಿ ಕೋರಿದ ಅರ್ಜಿ ವಿಚಾರಣೆ ಮುಗಿಯುವ ತನಕ ರಾಜ್ಯ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ನೀಡುವಂತೆ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ರಿಟ್ ಅರ್ಜಿಗಳ ಮುಂದುವರಿದ ವಿಚಾರಣೆ ಜ.21ರಂದು ನಿಗದಿಯಾಗಿದೆ.

ಗುಜರಾತ್ ಹೈಕೋರ್ಟ್ ತೀರ್ಪು ಏನು?

ಗುಜರಾತ್ ಹೈಕೋರ್ಟ್ ನ್ಯಾ.ನಿಖಿಲ್ ಕರೀಲ್ ನೇತೃತ್ವದ ಏಕಸದಸ್ಯ ಪೀಠವು 2024ರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೇವಲ ಸ್ವಯಂಸೇವಕರಲ್ಲ, ಅವರನ್ನು ಕಾಯಂ ಸರ್ಕಾರಿ ನೌಕರರು ಎಂದು ಪರಿಗಣಿಸಲು ಅರ್ಹರಿದ್ದಾರೆ ಎಂದು ತೀರ್ಪು ನೀಡಿತ್ತು. ಈ ತೀರ್ಪು ಗುಜರಾತ್‌ ರಾಜ್ಯಕ್ಕೆ ಸಂಬಂಧಿಸಿದ್ದರೂ ಅಂಗನವಾಡಿ ವ್ಯವಸ್ಥೆಯ ಮೇಲೆ ದೊಡ್ಡ ಪ್ರಭಾವ ಬೀರಿತ್ತು.

ಅಂಗನವಾಡಿ ಕಾರ್ಯಕರ್ತೆಯರನ್ನು ಸಿ ದರ್ಜೆ ಹಾಗೂ ಸಹಾಯಕಿಯರನ್ನು ಡಿ ದರ್ಜೆ ಹುದ್ದೆಗಳಿಗೆ ಸಮನಾಗಿ ಪರಿಗಣಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿತ್ತು. ಆದರೆ, 2025 ಆಗಸ್ಟ್‌ ತಿಂಗಳಲ್ಲಿ ಗುಜರಾತ್‌ ಹೈಕೋರ್ಟ್‌ನ ವಿಭಾಗೀಯ ಪೀಠವು ಆ ಆದೇಶವನ್ನು ಬದಲಾಯಿಸಿ, ಅಂಗನವಾಡಿ ಕಾರ್ಯಕರ್ತೆಯರು "ಕಾಯಂ ಸರ್ಕಾರಿ ನೌಕರರು" ಅಲ್ಲದಿದ್ದರೂ, ಅವರ ಕೆಲಸದ ಸ್ವರೂಪಕ್ಕೆ ತಕ್ಕಂತೆ ಕನಿಷ್ಠ ವೇತನಕ್ಕಿಂತ ಹೆಚ್ಚಿನ ವೇತನ ಪಡೆಯಲು ಅರ್ಹರು ಎಂದು ಸ್ಪಷ್ಟಪಡಿಸಿತ್ತು.

ಆ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 24,800 ರೂ, ಸಹಾಯಕಿಯರಿಗೆ ಮಾಸಿಕ 20,300 ರೂ. ಕನಿಷ್ಠ ವೇತನ ನೀಡಬೇಕು ಎಂದು ಆದೇಶಿಸಿತ್ತು. 2025 ಏಪ್ರಿಲ್ 1 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಬೇಕು ಎಂದು ಆದೇಶಿಸಿತ್ತು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಕೆಲಸದ ಸ್ವರೂಪ ಮತ್ತು ಜವಾಬ್ದಾರಿ ಪರಿಗಣಿಸಿ ಹೈಕೋರ್ಟ್ ಈ ತೀರ್ಪು ನೀಡಿತ್ತು. ಒಂದು ವೇಳೆ ಕನಿಷ್ಠ ವೇತನ ನೀಡದೇ ಹೋದರೆ ಸಂವಿಧಾನದ ವಿಧಿ 21ರ ಅಡಿ 'ಬದುಕುವ ಹಕ್ಕಿನ' ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು.

ಗೌರವಧನ ಹೆಚ್ಚಳ, ಕಾಯಮಾತಿಗೆ ನಿಲ್ಲದ ಹೋರಾಟ

ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ಗೌರವಧನ ಹೆಚ್ಚಳ ಘೋಷಿಸದ ಹಿನ್ನೆಲೆ ಅಂಗನವಾಡಿ ನೌಕರರು ಮೇ 2 ರಂದು ಬೆಂಗಳೂರು ಚಲೋ ನಡೆಸಿದ್ದರು. ಬಜೆಟ್‌ನಲ್ಲಿ ಹೆಚ್ಚುವರಿ ಸಮವಸ್ತ್ರ ಘೋಷಿಸಲಾಗಿದೆ. ನಮಗೆ ಸಮವಸ್ತ್ರ ಬೇಡ, ಗೌರವಧನ ಬೇಕು ಎಂದು ಆಗ್ರಹಿಸಿದ್ದರು.

ಐಸಿಡಿಎಸ್‌ ಯೋಜನೆಗೆ 50 ವರ್ಷ ತುಂಬಿದೆ. ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರಿ ನೌಕರರಂತೆ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದರೂ ರಾಜ್ಯದ ಸರ್ಕಾರದ ಸಚಿವರು, ಅಧಿಕಾರಿಗಳು ಕಿವಿಗೊಡುತ್ತಿಲ್ಲ. ನೌಕರರ ಸಮಸ್ಯೆಗಳ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರು ಚರ್ಚಿಸುತ್ತಿಲ್ಲ. ಎರಡು ವರ್ಷದಲ್ಲಿ ಒಂದೇ ಒಂದು ಸಭೆ ಮಾಡಲಾಗಿದೆ. ಬಜೆಟ್‌ಗೂ ಮುನ್ನ ಸಂಘಟನೆಗಳ ಜತೆ ಚರ್ಚಿಸಿಲ್ಲ, ಕೇಂದ್ರ ಸರ್ಕಾರವಂತೂ ಅಂಗನವಾಡಿಗಳನ್ನೇ ಮರೆತಿದೆ, ನಮನ್ಮ ಕೆಲಸಕ್ಕೆ ತಕ್ಕಂತೆ ಕೂಲಿ ನೀಡಿ ಎಂದು ಆಗ್ರಹಿಸಿದರೂ ಯಾರೂ ಸ್ಪಂದಿಸುತ್ತಿಲ್ಲ, ನಮಗೆ ಹೋರಾಟವೇ ಜೀವನೌಾಗಿದೆ ಎಂದು ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಎಂ.ಜಯಮ್ಮ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕಾರ್ಮಿಕರಿಗೆ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಇಲ್ಲ, ಸುಪ್ರೀಂಕೋರ್ಟ್ ಆದೇಶದಂತೆ ಗ್ರಾಚ್ಯುಟಿ ಮತ್ತು ಸೇವೆ ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಚ್ಯುಟಿ ಕುರಿತ ಸುಪ್ರೀಂ ಆದೇಶ ಏನು?

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 1972 ರ ಗ್ರಾಚ್ಯುಟಿ ಪಾವತಿ ಕಾಯ್ದೆಯಡಿ ಗ್ರಾಚ್ಯುಟಿ ಪಡೆಯಲು ಅರ್ಹರು ಎಂದು 2022 ಏಪ್ರಿಲ್ರ ತಿಂಗಳಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕ್ ಮತ್ತು ಅಜಯ್ ರಾಸ್ತೋಗಿ ನೇತೃತ್ವದ ಪೀಠವು, ಅಂಗನವಾಡಿ ಕಾರ್ಯಕರ್ತೆಯರು ಕೇವಲ ಸ್ವಯಂಸೇವಕರಲ್ಲ, ಶೋಷಣೆಗೆ ಒಳಗಾಗುತ್ತಿರುವ ಕಾರ್ಮಿಕರಾಗಿದ್ದಾರೆ. ಅವರ ಸೇವಾ ಪರಿಸ್ಥಿತಿ ಸುಧಾರಿಸುವ ಕೆಲಸವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಾಡಬೇಕು ಎಂದು ಸೂಚಿಸಿತ್ತು.

ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ನೀಡಿದರೂ ಇನ್ನೂ 20 ಸಾವಿರ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಬಾಕಿ ಉಳಿಸಿಕೊಂಡಿದೆ. ಇದಕ್ಕಾಗಿ ಸುಮಾರು 200 ಕೋಟಿ ರೂ. ಅಗತ್ಯವಿದ್ದು, ಕೂಡಲೇ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಬೇಕು ಎಂದು ಅಂಗನವಾಡಿ ನೌಕರರ ಸಂಘದ ಜಯಮ್ಮ ಹೇಳಿದರು.

Read More
Next Story