
Agumbe Ghat|ಕಿಂಗ್ ಕೋಬ್ರಾ, ಸಿಂಹ ಬಾಲದ ಸಿಂಗಳೀಕದ ತವರು ಆಗುಂಬೆಗೆ ಸುರಂಗ ಕೊರೆಯಲು ಸಜ್ಜು!
ದಕ್ಷಿಣದ ಚಿರಾಪುಂಜಿ ಆಗುಂಬೆಯ ಘಾಟ್ ರಸ್ತೆಯಲ್ಲಿ ತಿರುವುಗಳೇ ಹೆಚ್ಚಿರುವುದರಿಂದ ಅಪಘಾತಗಳು ಹೆಚ್ಚಿವೆ ಎನ್ನುವುದು ಯೋಜನೆ ಪರ ವಕಾಲತು ಮಾಡುವ ಜನಪ್ರತಿನಿಧಿಗಳಿಗೆ ವಿರೋಧ ವ್ಯಕ್ತವಾಗಿದೆ.
ಪಶ್ಚಿಮಘಟ್ಟದ ಶರಾವತಿ ಕಣಿವೆಯಲ್ಲಿ ನಿರಂತರ ಅಭಿವೃದ್ಧಿ ಕಾರ್ಯಗಳ ಪ್ರಯತ್ನವು ಮಲೆನಾಡಿಗರಲ್ಲಿ ಕಿಚ್ಚು ಹೊತ್ತಿಸುತ್ತಿದೆ. ಇತ್ತೀಚೆಗೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತೀವ್ರ ಪ್ರತಿರೋಧ ವ್ಯಕ್ತವಾದ ಬೆನ್ನಲ್ಲೇ ವಿವಾದ ತಾತ್ಕಾಲಿಕವಾಗಿ ತಣ್ಣಗಾಗಿದೆ. ಹೀಗಿರುವಾಗಲೇ ಮತ್ತೊಂದು ಹೊಸ ಯೋಜನೆಗೆ ಮುಂದಡಿ ಇಟ್ಟಿರುವುದು ಮಲೆನಾಡು ಜಿಲ್ಲೆಗಳ ಜನರ ನಿದ್ದೆಗೆಡಿಸಿದೆ.
ದಕ್ಷಿಣದ ಚಿರಾಪುಂಜಿ ಎಂದೇ ಖ್ಯಾತವಾಗಿರುವ ಘಾಟ್‌ನಲ್ಲಿ ಹಾದು ಹೋಗಿರುವ ʼರಾಷ್ಟ್ರೀಯ ಹೆದ್ದಾರಿ-169ಎʼ ರಸ್ತೆ ವಿಸ್ತರಣೆ ಹಾಗೂ ಟನಲ್ ರಸ್ತೆ ನಿರ್ಮಿಸುವ ವಿಚಾರ ಇದೀಗ ಹೊಸ ವಿವಾದ ಸೃಷ್ಟಿಸಿದೆ. ಕಾಳಿಂಗ ಸರ್ಪ(ಕಿಂಗ್ ಕೋಬ್ರಾ)ದ ತವರು, ಸಿಂಹ ಬಾಲದ ಸಿಂಗಳೀಕ(ಲಯನ್ ಟೇಲ್ಡ್ ಮೆಕಾಕ್')ನ ಆಡುಂಬೊಲಕ್ಕೆ ಈ ಯೋಜನೆ ಧಕ್ಕೆ ತರಲಿದೆ ಎಂಬುದು ಪರಿಸರ ಪ್ರಿಯ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವಾಲಯವು ಟನಲ್ ಮಾರ್ಗ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ತಯಾರಿಸಲು ಟೆಂಡರ್ ಕರೆದಿರುವುದು ಕಿಚ್ಚು ಹೊತ್ತಿಕೊಳ್ಳಲು ಕಾರಣ.
ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜೀವ ವೈವಿದ್ಯತೆಯ ತಾಣ ಆಗುಂಬೆ. ಕೆಲ ವರ್ಷಗಳ ಮೊದಲು ಪ್ರಪಂಚದಲ್ಲೇ ಅತಿ ಹೆಚ್ಚು ಮಳೆ ಆಕರ್ಷಿಸುತ್ತಿತ್ತು. ಈಗ ಮಳೆ ಪ್ರಮಾಣ ಕಡಿಮೆಯಾದರೂ ಜೀವವೈದ್ಯತೆಗೇನು ಕೊರತೆಯಿಲ್ಲ. ಸುರಂಗ ಮಾರ್ಗ ನಿರ್ಮಾಣದಿಂದ ಪಕ್ಷಿ, ಪ್ರಾಣಿ ಹಾಗೂ ಸಸ್ಯ ಪ್ರಬೇಧಗಳಿಗೆ ಸಂಚಕಾರ ಎದುರಾಗಲಿದೆ ಎಂಬುದು ಪರಿಸರವಾದಿಗಳ ಆತಂಕವಾಗಿದೆ.
ಆಗುಂಬೆಯು ಹಲವು ನದಿಗಳ ಉಗಮಸ್ಥಾನ. ಸುರಂಗ ರಸ್ತೆಗಾಗಿ ಭೂಮಿ ಕೊರೆಯುವುದರಿಂದ ಅಂತರ್ಜಲದ ಹರಿವಿಗೆ ಅಡ್ಡಿಯಾಗಲಿದೆ. ಕ್ರಮೇಣ ನದಿ ತೊರೆಗಳು ಬತ್ತಿಹೋಗುವ ಆತಂಕ ಎದುರಾಗಿದೆ. ಆಗುಂಬೆಯ ಭೌಗೋಳಿಕ ರಚನೆ ಅತ್ಯಂತ ಸೂಕ್ಷ್ಮವಾಗಿದ್ದು, ಭಾರೀ ಯಂತ್ರೋಪಕರಣಗಳ ಬಳಕೆ ಮತ್ತು ಸ್ಫೋಟಗಳಿಂದ ಭೂಕುಸಿತ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಕಾಡು ಪ್ರಾಣಿಗಳ ಆವಾಸಸ್ಥಾನಕ್ಕೆ ಧಕ್ಕೆಯಾದರೆ ಸಹಜವಾಗಿ ಪ್ರಾಣಿ ಹಾಗೂ ಮಾನವ ಸಂಘರ್ಷ ಹೆಚ್ಚಾಗಲಿದೆ ಎಂಬುದು ಹೋರಾಟಗಾರರ ಆತಂಕವಾಗಿದೆ.
ಎಷ್ಟು ದೂರ ಟನಲ್ ನಿರ್ಮಾಣ?
ರಾಷ್ಟ್ರೀಯ ಹೆದ್ದಾರಿ-169A ರಲ್ಲಿ 30.75 ಕಿ.ಮೀ.ನಿಂದ 51.60 ಕಿ.ಮೀ.ಗೆ ಪಾದಚಾರಿ ಮಾರ್ಗ ಒಳಗೊಂಡಂತೆ ದ್ವಿಪಥ ರಸ್ತೆ ಹಾಗೂ ಅಲ್ಲಲ್ಲಿ ಟನಲ್ ನಿರ್ಮಿಸಲು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಟೆಂಡರ್ ಆಹ್ವಾನಿಸಿದೆ.
2.33ಕೋಟಿ ವೆಚ್ಚದಲ್ಲಿ ತಾಂತ್ರಿಕ ತಜ್ಞರನ್ನು ಒಳಗೊಂಡಂತೆ ಕಾರ್ಯಸಾಧ್ಯತಾ ವರದಿ ತಯಾರಿಸಬೇಕು. ಆರು ತಿಂಗಳಲ್ಲಿ ವರದಿ ನೀಡಬೇಕು. ಸುರಂಗ ವಿನ್ಯಾಸ ತಜ್ಞರು, ಹಿರಿಯ ಭೂ-ತಾಂತ್ರಿಕ ಎಂಜಿನಿಯರ್‌ಗಳನ್ನು ತೊಡಗಿಸಿಕೊಳ್ಳಬೇಕು ಎಂದು ಟೆಂಡರ್ ನಿಯಮಗಳಲ್ಲಿ ಹೇಳಿದೆ. ಆಗುಂಬೆ ಘಾಟ್‌ನಲ್ಲಿ ಸುರಂಗ ನಿರ್ಮಿಸುವಾಗ ಕಾರ್ಯಸಾಧ್ಯತೆ ಮೌಲ್ಯಮಾಪನ ಮಾಡಲು ವಿವರವಾದ ಭೂ ತಾಂತ್ರಿಕ ತನಿಖೆ ನಡೆಸಬೇಕು ಎಂದೂ ಸೂಚಿಸಿದೆ.
ಆಗುಂಬೆ ಘಾಟ್ ರಸ್ತೆಯಲ್ಲಿ ತಿರುವುಗಳೇ ಹೆಚ್ಚಿರುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ. ಹಾಗಾಗಿ ಟನಲ್ ರಸ್ತೆ ಅನಿವಾರ್ಯ ಎಂಬುದು ಮಲೆನಾಡು ಭಾಗದ ಜನಪ್ರತಿನಿಧಿಗಳ ವಾದವಾಗಿದೆ.
ಟನಲ್ ರಸ್ತೆಯ ಪ್ರಯೋಜನವೇನು?
ಆಗುಂಬೆ ಘಾಟ್‌ನಲ್ಲಿ ಸುರಂಗ ರಸ್ತೆ ನಿರ್ಮಿಸುವುದರಿಂದ ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಸುಲಭವಾಗಲಿದೆ. ಮಲೆನಾಡಿನಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲ. ತುರ್ತು ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಹಾಗೂ ಮಂಗಳೂರು ಆಸ್ಪತ್ರೆಗಳಿಗೆ ತೆರಳಬೇಕು, ಆದರೆ, ಆಗುಂಬೆ ಘಾಟ್ ಮೂಲಕ ಕರಾವಳಿಗೆ ತೆರಳಬೇಕಾದರೆ ತಿರುವು ಹಾಗೂ ಕಡಿದಾದ ರಸ್ತೆಗಳಲ್ಲಿ ಸಾಗಬೇಕು. ಇದರಿಂದ ಪ್ರಯಾಣ ವಿಳಂಬವಾಗಲಿದೆ. ಟನಲ್ ರಸ್ತೆಯಿಂದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಪ್ರಗತಿಗೂ ಸಹಾಯವಾಗಲಿದೆ ಎಂಬುದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ವಾದ.
ಸುರಂಗ ರಸ್ತೆ ನಿರ್ಮಾಣದ ಕಾರ್ಯಸಾಧ್ಯತೆ ಅಧ್ಯಯನ ಮಾಡಲು ಕೇಂದ್ರ ಸರ್ಕಾರ ಟೆಂಡರ್ ಆಹ್ವಾನಿಸಿದೆ. ಆಗುಂಬೆ ಘಾಟ್ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಯು ದಶಕಗಳ ಕೂಗಾಗಿತ್ತು. ಪ್ರಯಾಣಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆಯು ಮೊದಲ ಹೆಜ್ಜೆಯಾಗಿದೆ ಎಂದು ಅವರು ಹೇಳುತ್ತಾರೆ.
“ಆಗುಂಬೆಯಲ್ಲಿ ದ್ವಿಪಥ ರಸ್ತೆ ಮತ್ತು ಸುರಂಗ ರಸ್ತೆ ಯೋಜನೆ ಸಂಪೂರ್ಣ ಅವೈಜ್ಞಾನಿಕ. ಆಗುಂಬೆ ಘಾಟ್ ಪ್ರದೇಶವು ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಭಾಗವಾಗಿದೆ. ದಟ್ಟ ಕಾಡಿನಲ್ಲಿ ರಸ್ತೆ ಹಾದು ಹೋಗಲಿದೆ. ಇಲ್ಲಿ ಟನಲ್ ನಿರ್ಮಿಸಿದರೆ ಅಪರೂಪದ ಜೀವವೈವಿಧ್ಯತೆಗಳಾದ ಕಾಳಿಂಗ ಸರ್ಪ, ಸಿಂಹ ಬಾಲದ ಮಕಾಕ್‌ಗಳ ನೆಲೆಯಾಗಿದೆ. ಅಲ್ಲದೇ ಅನೇಕ ನದಿಗಳಿಗೆ ಉಗಮ ಸ್ಥಾನವಾಗಿದ್ದು, ಹೊಳೆಗಳು ಹರಿಯಲಿವೆ. ಆದರೆ, ಉದ್ದೇಶಿತ ಯೋಜನೆಯು ಪರಿಸರಕ್ಕೆ ಹಾನಿ ಮಾಡಲಿದೆ” ಎಂದು ಚಿಕ್ಕಮಗಳೂರಿನ ಪರಿಸರವಾದಿ ನಾಗರಾಜ್ ಕೂವೆ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ದುಡ್ಡು ಹೊಡೆಯುವ ಯೋಜನೆ!
ಸೂಕ್ಷ್ಮ ಪರಿಸರ ವಲಯ ಆಗುಂಬೆ ಘಾಟ್‌ನಲ್ಲಿ ಟನಲ್ ರಸ್ತೆ ನಿರ್ಮಿಸುವುದರಿಂದ ದೊಡ್ಡ ಆಪತ್ತು ಎದುರಾಗಲಿದೆ. ಬೃಹತ್ ಯಂತ್ರಗಳಿಂದ ಭೂ ಅಗೆತ, ಬಂಡೆ ಕೊರೆಯಲು ಸ್ಫೋಟಕಗಳನ್ನು ಬಳಸುವುದರಿಂದ ಜೀವವೈವಿಧ್ಯತೆಗೆ ಸಮಸ್ಯೆಯಾಗಲಿದೆ. ಆಗುಂಬೆ ಘಾಟ್ ಮೊದಲೇ ಭೂ ಕುಸಿತದ ಪ್ರದೇಶವಾಗಿದೆ. ಮಣಿಪಾಲಕ್ಕೆ ರೋಗಿಗಳನ್ನು ಕರೆದೊಯ್ಯುವ ಸಲುವಾಗಿ ಅಂದಾಜು 8 ಸಾವಿರ ಕೋಟಿ ವೆಚ್ಚದ ಯೋಜನೆ ರೂಪಿಸುವುದಕ್ಕಿಂತ 100ಕೋಟಿ ರೂ. ವೆಚ್ಚದಲ್ಲಿ ಸಾಗರ ತಾಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬಹುದು. ಜನಪ್ರತಿನಿಧಿಗಳಿಗೆ ಮೆಗಾ ಯೋಜನೆಗಳು ದುಡ್ಡು ಹೊಡೆಯುವ ಯೋಜನೆಗಳಂತಾಗಿವೆ. ಈಗಾಗಲೇ ಎತ್ತಿನಹೊಳೆ ಯೋಜನೆಯ ವೆಚ್ಚ ಏರಿಕೆಯಿಂದ ಅದು ಸಾಬೀತಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಖಿಲೇಶ್ ಚಿಪ್ಪಳಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಪಶ್ಚಿಮ ಘಟ್ಟಗಳ ಸಂರಕ್ಷಿತ ಅರಣ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು. ಟನಲ್ ರಸ್ತೆ ನಿರ್ಮಿಸುವ ಯೋಜನೆ ಸಂಪೂರ್ಣ ಅವೈಜ್ಞಾನಿಕ. ಯೋಜನೆ ಜಾರಿಯ ಬಗ್ಗೆ ಮತ್ತೊಮ್ಮೆ ಸರ್ಕಾರ ಯೋಚನೆ ಮಾಡಬೇಕಾಗಿದೆ. ಪ್ರಾಥಮಿಕ ಹಂತದಲ್ಲೇ 8ಸಾವಿರ ಕೋಟಿ ಯೋಜನಾ ವೆಚ್ಚ ಅಂದಾಜಿಸಲಾಗಿದೆ. ಇದು ಇನ್ನಷ್ಟು ಬೆಳೆಯುವ ಸಾಧ್ಯತೆ ಇದೆ. ಸರ್ಕಾರದ ಬಹುತೇಕ ಯೋಜನೆಗಳು 'COWʼ ಆಧರಿತವಾಗಿವೆ (ಗುತ್ತಿಗೆದಾರರ ಅವಲಂಬಿತ ಕಾಮಗಾರಿಗಳು). ಯಾವುದೇ ಸರ್ಕಾರ ಬಂದರೂ ಇಂತಹ ಯೋಜನೆಗಳಿಗೆ ಒತ್ತು ನೀಡಲಾಗುತ್ತದೆ ಎಂದು ಚಿಪ್ಪಳಿ ಆಕ್ರೋಶ ವ್ಯಕ್ತಪಡಿಸಿದರು.
ವನ್ಯಧಾಮಗಳಿಗೆ ಧಕ್ಕೆ
ಆಗುಂಬೆ ಘಾಟ್‌ನಲ್ಲಿ ಸೋಮೇಶ್ವರ ಹಾಗೂ ಮೂಕಾಂಬಿಕಾ ವನ್ಯಧಾಮಗಳಿವೆ. ಅದರಲ್ಲಿ ಸೋಮೇಶ್ವರ ವನ್ಯಜೀವಿ ಧಾಮವು ಆಗುಂಬೆ ಘಾಟ್‌ನ ಪಾದದ ಭಾಗದಲ್ಲಿ ಹರಡಿಕೊಂಡಿದೆ. ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳಿಗೆ ಅಂಟಿಕೊಂಡಿದೆ. ಇಲ್ಲಿ ಸೀತಾ ನದಿ ಉಗಮವಾಗಲಿದ್ದು, ಹುಲಿ, ಚಿರತೆ, ಕಾಟಿ, ಕಾಡು ಹಂದಿ ಮತ್ತು ಅಪರೂಪದ 'ಲಯನ್ ಟೇಲ್ಡ್ ಮೆಕಾಕ್' ಇವೆ. ಆಗುಂಬೆಯು ಕಾಳಿಂಗ ಸರ್ಪಗಳ ನೈಸರ್ಗಿಕ ವಾಸಸ್ಥಾನವೂ ಹೌದು.
ಇನ್ನು ಮೂಕಾಂಬಿಕಾ ವನ್ಯಜೀವಿ ಧಾಮದಲ್ಲಿ ಜೀವವೈವಿಧ್ಯ ಹೇರಳವಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸುತ್ತಮುತ್ತಲಿನ ಕಾಡು ಒಳಗೊಂಡಿದೆ. ಇದು ಪಶ್ಚಿಮ ಘಟ್ಟದ 'ಜೀವವೈವಿಧ್ಯದ ಹಾಟ್‌ಸ್ಪಾಟ್ʼ ಗಳಲ್ಲಿ ಒಂದು. ಚಕ್ರ ಮತ್ತು ಸೌಪರ್ಣಿಕಾ ನದಿಗಳು ಇಲ್ಲಿ ಹರಿಯುತ್ತವೆ. ಅರೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮಲಬಾರ್ ದೈತ್ಯ ಅಳಿಲು, ಸ್ಲಾತ್ ಬೇರ್ ಮತ್ತು ವಿವಿಧ ಜಾತಿಯ ಹಕ್ಕಿಗಳು ಕಂಡುಬರುಲಿದೆ. ಈ ಭಾಗದಲ್ಲಿ ಟನಲ್ ರಸ್ತೆ ಹಾದು ಹೋದರೆ ಪ್ರಾಣಿ ಸಂಪತ್ತಿಗೆ ಅಪಾಯ ಎದುರಾಗಲಿದೆ ಎನ್ನಲಾಗಿದೆ.

