Darshan Case: ನಟ ದರ್ಶನ್‌ಗೆ ವರದಾನವಾಗಲಿದೆಯೇ ಪೊಲೀಸರ ಸಾಕ್ಷ್ಯ ತಿರುಚುವಿಕೆ ಲೋಪ?
x
ಕೊಲೆಯಾದ ರೇಣುಕಾಸ್ವಾಮಿ ಮತ್ತು ಕೊಲೆ ಅರೋಪಿ ನಟ ದರ್ಶನ್‌

Darshan Case: ನಟ ದರ್ಶನ್‌ಗೆ ವರದಾನವಾಗಲಿದೆಯೇ ಪೊಲೀಸರ 'ಸಾಕ್ಷ್ಯ ತಿರುಚುವಿಕೆ' ಲೋಪ?

ದರ್ಶನ್ ಭವಿಷ್ಯ ನ್ಯಾಯಾಲಯದ ಕೈಯಲ್ಲಿದೆ. ಕ್ರಿಮಿನಲ್ ಪ್ರಕರಣದಲ್ಲಿ ಜಾಮೀನು ನೀಡುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಷಯ. ಆದರೆ ಪೊಲೀಸರ ತನಿಖೆ ಲೋಪಗಳು ಸಹಕಾರಿಯಾಗುವ ಸಾಧ್ಯತೆ ಇದೆ.


Click the Play button to hear this message in audio format

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಪಡೆದುಕೊಂಡ ಸಾಕ್ಷ್ಯಗಳ ತಿರುಚಿವಿಕೆ ಘಟನೆ ಬಳಿಕ ನಟ ದರ್ಶನ್‌ ವಿಚಾರದಲ್ಲಿಯೂ ಪೊಲೀಸರ ಲೋಪಗಳು ಲಭ್ಯವಾಗಬಹುದೇ ಎಂಬ ಚರ್ಚೆಗಳು ಪ್ರಾರಂಭವಾಗಿವೆ. ಆ ಮೂಲಕ ದರ್ಶನ್‌ ಜಾಮೀನು ಪಡೆಯಲು ಅವಕಾಶವಿದೆಯೇ ಎಂಬ ಕಾನೂನಾತ್ಮಕ ಚರ್ಚೆಗಳೂ ನಡೆದಿವೆ.

ಮೂರನೇ ಆರೋಪಿ ಪುಟ್ಟಸ್ವಾಮಿ ಸೇರಿದಂತೆ ಇತರೆ ಆರೋಪಿಗಳಿಂದ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡ ಸ್ಥಳದ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿರುವ ಆರೋಪ ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡಿದೆ. ಇದೇ ರೀತಿಯಲ್ಲಿ ಯಾವುದಾದರೂ ಲೋಪಗಳು ಲಭ್ಯವಾಗುವುದೇ ಎಂಬುದನ್ನು ದರ್ಶನ್‌ ಪರ ವಕೀಲರು ಹುಡುಕಾಟ ಆರಂಭಿಸಿದ್ದಾರೆ. ಇದು ದರ್ಶನ್‌ಗೆ ಜಾಮೀನು ದೊರಕಿಸಿಕೊಡಲು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಪ್ರಕರಣದಲ್ಲಿ ಎಡನೇ ಆರೋಪಿಯಾಗಿರುವ ದರ್ಶನ್ ಭವಿಷ್ಯ ನ್ಯಾಯಾಲಯದ ಕೈಯಲ್ಲಿದೆ. ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಜಾಮೀನು ನೀಡುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಷಯವಾಗಿರುತ್ತದೆ. ಆದರೆ, ಕೊಲೆಯಂತಹ ಗಂಭೀರ ಪ್ರಕರಣಗಳಲ್ಲಿ ಜಾಮೀನು ಸಿಗುವುದು ಅಷ್ಟು ಸುಲಭವಲ್ಲ. ಇಲ್ಲಿ ನೇರ ಭಾಗವಹಿಸುವಿಕೆ" ಮತ್ತು ಕೊಲೆಯ ಉದ್ದೇಶ ಎಂಬ ಅಂಶಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ. ಇದೇ ವಿಚಾರವನ್ನು ಪ್ರಬಲವಾಗಿ ವಕೀಲರು ವಾದಿಸುತ್ತಿದ್ದಾರೆ. ಇದಲ್ಲದೇ, ಪೊಲೀಸರ ಲೋಪಗಳ ಬಗ್ಗೆ ಹುಡುಕಾಟ ನಡೆಸಲಾಗುತ್ತಿದೆ. ಆದರೆ ಹುಡುಕಾಟವು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಪೊಲೀಸರು ಸಲ್ಲಿಸುವ ಆರೋಪಪಟ್ಟಿಯಲ್ಲಿ ವಕೀಲರು ಲೋಪಗಳನ್ನು ಹುಡುಕುವುದು ಸಹಜ. ಹೀಗಾಗಿ ಪ್ರಕರಣದಲ್ಲಿ ನೇರ ಸಾಕ್ಷಿಗಳಿಗಿಂತ ಸಾಂದರ್ಭಿಕ ಸಾಕ್ಷ್ಯಗಳೇ ಹೆಚ್ಚಿವೆ ಎಂದು ವಾದಿಸಲಾಗುತ್ತಿದೆ. ಒಂದು ವೇಳೆ ಪೊಲೀಸರು ಈ ಸಾಕ್ಷ್ಯಗಳನ್ನು ಸರಿಯಾಗಿ ಜೋಡಿಸದಿದ್ದರೆ ಅದು ಆರೋಪಿಗಳಿಗೆ ವರದಾನವಾಗಬಹುದು. ಕೆಲವು ಪ್ರಮುಖ ಸಾಕ್ಷಿಗಳ ಹೇಳಿಕೆಯನ್ನು ಘಟನೆ ನಡೆದ ಹಲವು ದಿನಗಳ ನಂತರ ದಾಖಲಿಸಲಾಗಿದೆ ಎಂಬುದು ದರ್ಶನ್ ಪರ ವಕೀಲರ ವಾದವಾಗಿದೆ ಎಂದು ಹೇಳಲಾಗಿದೆ.

ನೇರವಾಗಿ ಭಾಗಿಯಾಗಿಲ್ಲ ಎಂಬುದು ವರವಾಗುವ ಸಾಧ್ಯತೆ?

ದರ್ಶನ್ ನೇರವಾಗಿ ಕೊಲೆ ಮಾಡಿಲ್ಲ ಎಂಬ ವಾದವನ್ನು ಮಾಡಲಾಗುತ್ತಿದೆ. ಆದರೆ, ಭಾರತೀಯ ನ್ಯಾಯ ಸಂಹಿತೆ ಪ್ರಕಾರ, ಕೇವಲ ನೇರವಾಗಿ ಭಾಗಿಯಾದವರು ಮಾತ್ರವಲ್ಲದೆ, ಆ ಕೃತ್ಯಕ್ಕೆ ಸಂಚು ರೂಪಿಸಿದವರು ಮತ್ತು ಪ್ರಚೋದನೆ ನೀಡಿದವರು ಸಮಾನ ಅಪರಾಧಿಗಳಾಗುತ್ತಾರೆ. ಹೀಗಾಗಿ ದರ್ಶನ್‌ ವಿರುದ್ಧ ಈ ವಾದವೇ ಪ್ರಬಲವಾಗಿ ಕೇಳಿ ಬರುತ್ತಿದೆ. ಪೊಲೀಸರು ಸಲ್ಲಿಸಿರುವ ಸುಮಾರು 3,900 ಪುಟಗಳ ದೋಷಾರೋಪ ಪಟ್ಟಿಯಲ್ಲಿ ದರ್ಶನ್ ಘಟನಾ ಸ್ಥಳದಲ್ಲಿದ್ದರು ಎಂಬುದಕ್ಕೆ ತಾಂತ್ರಿಕ ಸಾಕ್ಷ್ಯಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಉಲ್ಲೇಖಿಸಲಾಗಿದೆ. ಸ್ಥಳದಲ್ಲಿದ್ದರು ಎಂದು ಹೇಳಲಾಗುತ್ತಿದ್ದರೂ ಹತ್ಯೆ ನಡೆಯುವ ವೇಳೆ ಇರಲಿಲ್ಲ. ಒಂದು ವೇಳೆ ದರ್ಶನ್ ಕೇವಲ ಬೆದರಿಕೆ ಹಾಕಲು ಹೇಳಿದ್ದರು. ಅಲ್ಲಿ ನಡೆದ ಕೊಲೆ ಅವರ ಅರಿವಿಗೆ ಬಂದಿರಲಿಲ್ಲ ಎಂದು ಸಾಬೀತುಪಡಿಸಿದರೆ, ಜಾಮೀನು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಆರೋಪಿಗಳ ಜತೆ ಮಹಜರು ಮಾಡಿದ ಸ್ಥಳ ಅದಲು ಬದಲಾಗಿದೆ ಎಂಬ ವಾದ ಆರೋಪಿ ಪರ ವಕೀಲರದ್ದು.

ಉದ್ದೇಶ ಪ್ರಮುಖವಾದ ಅಂಶ

ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಉದ್ದೇಶವಾಗಿದೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿ ದರ್ಶನ್ ಕೋಪಗೊಂಡಿದ್ದರು. ಆತನಿಗೆ ಪಾಠ ಕಲಿಸಲು ಚಿತ್ರದುರ್ಗದಿಂದ ಅಪಹರಿಸಿ ತರಲಾಗಿತ್ತು ಎಂಬುದು ಪೊಲೀಸರ ವಾದವಾಗಿದೆ. ಇದು ಪೂರ್ವ ನಿಯೋಜಿತ ಕೃತ್ಯ ಎಂದು ಪೊಲೀಸರ ಪರ ವಕೀಲರು ಬಿಂಬಿಸಿಸಿದ್ದಾರೆ. ಆದರೆ, ದರ್ಶನ್‌ ಪರ ವಕೀಲರು, ದರ್ಶನ್ ಉದ್ದೇಶ ಕೇವಲ ಬುದ್ಧಿ ಕಲಿಸುವುದಾಗಿತ್ತು, ಕೊಲೆ ಮಾಡುವುದಾಗಿರಲಿಲ್ಲ ಎಂದು ಹೇಳಿದ್ದಾರೆ.ಒಂದು ವೇಳೆ ನ್ಯಾಯಾಲಯಕ್ಕೆ ಇದು ಉದ್ದೇಶಪೂರ್ವಕ ಕೊಲೆ ಅಲ್ಲ, ಬದಲಿಗೆ ಕೋಪದಲ್ಲಿ ನಡೆದ ಆಕಸ್ಮಿಕ ಘಟನೆ ಎಂದು ಅಭಿಪ್ರಾಯಪಟ್ಟರೆ ಜಾಮೀನು ಪ್ರಕ್ರಿಯೆ ಸುಲಭವಾಗವುದು ಎಂದು ಹೇಳಲಾಗಿದೆ.

ಪ್ರಕರಣ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ವಕೀಲ ಎ.ನಾಗೇಶ್‌, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯವು ಜಾಮೀನು ನೀಡಿತ್ತು. ಆದರೆ, ಅದರಲ್ಲಿನ ಲೋಪಗಳನ್ನು ಸುಪ್ರೀಂಕೋರ್ಟ್‌ ಪರಿಗಣಿಸಿ ಜಾಮೀನು ರದ್ದು ಮಾಡಿದೆ. ಪ್ರಕರಣವು ನ್ಯಾಯಾಲಯದಲ್ಲಿರುವ ಕಾರಣ ಏನಾಗಲಿದೆ ಎಂಬುದು ಹೇಳಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್‌ ಈಗಾಗಲೇ ಯಾವುದೇ ಪ್ರಕರಣದಲ್ಲಿ ಜಾಮೀನು ನೀಡುವಾಗ ನ್ಯಾಯಾಲಯವು ತನ್ನ ವಿವೇಚನಾ ಅಧಿಕಾರವನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಎಂದು ಆಭಿಪ್ರಾಯಪಟ್ಟಿದ್ದಾರೆ.

" ಆದರೆ, ಈ ಪ್ರಕರಣದಲ್ಲಿ ಹೈಕೋರ್ಟ್ ಈ ಅಧಿಕಾರವನ್ನು ಸರಿಯಾದ ರೀತಿಯಲ್ಲಿ ಅನ್ವಯಿಸಿಲ್ಲ ಮತ್ತು ಅಗತ್ಯ ಕಾನೂನು ಅಂಶಗಳನ್ನು ಪರಿಗಣಿಸಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದೆ. ಜಾಮೀನು ಮಂಜೂರು ಮಾಡುವಾಗ ಗಮನಿಸಬೇಕಾದ ಗಂಭೀರ ಕಾನೂನು ಅಂಶಗಳನ್ನು ಹೈಕೋರ್ಟ್ ಸರಿಯಾಗಿ ಪಾಲಿಸಿಲ್ಲ. ಸಾಕ್ಷ್ಯಾಧಾರಗಳ ಗಂಭೀರತೆಯನ್ನು ಗಮನಿಸದೆ ಕೇವಲ ತಾಂತ್ರಿಕ ಕಾರಣಗಳನ್ನು ನೀಡಿ ಜಾಮೀನು ನೀಡಿರುವುದು ಸರಿಯಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ. ವಿಚಾರಣೆಯಲ್ಲಿ ನ್ಯಾಯಾಲಯ ಯಾವ ಅಂಶಗಳನ್ನು ಪರಿಗಣಿಸಲಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಯಾವುದೋ ಒಂದು ಪೊಲೀಸರ ಲೋಪವನ್ನು ದರ್ಶನ್‌ ವಿಚಾರದಲ್ಲಿ ಪರಿಗಣಿಸಬೇಕು ಎಂಬುದಿಲ್ಲ," ಎಂದವರು ಹೇಳಿದರು.

ಹಿರಿಯ ವಕೀಲರಾದ ಸ್ವಾಮಿನಿ ಗಣೇಶನ್‌ ಮಾತನಾಡಿ, "ಪ್ರಕರಣ ಸಂಬಂಧ ದರ್ಶನ್‌ ಸಹ ಆರೋಪಿ ವಿಚಾರದಲ್ಲಿ ಪೊಲೀಸರ ಲೋಪವಾಗಿರಬಹುದು. ಆದರೆ, ಅದೇ ವಿಷಯ ದರ್ಶನ್‌ ವಿಚಾರದಲ್ಲಿಯೂ ಹೇಗೆ ಬಳಕೆ ಮಾಡಲಾಗುತ್ತದೆ ಎಂದು ಹೇಳಲಾಗುವುದು. ಪೊಲೀಸರ ಲೋಪವನ್ನು ಸಹಜವಾಗಿ ಅವರ ಪರ ವಕೀಲರು ನ್ಯಾಯಾಲಯಕ್ಕೆ ಪ್ರಸ್ತಾಪಿಸುತ್ತಾರೆ. ಆದರೆ, ಅದು ಎಷ್ಟರ ಮಟ್ಟಿಗೆ ವಾಸ್ತವ ಎಂಬುದನ್ನು ಸಹ ಪರಿಗಣಿಸಲಾಗುತ್ತದೆ. ಹೀಗಾಗಿ ಯಾವುದನ್ನು ವಿಚಾರಣೆ ಹಂತದಲ್ಲಿ ಊಹಿಸಲು ಬರುವುದಿಲ್ಲ. ಎರಡು ಕಡೆಯ ವಕೀಲರ ವಾದ, ಸಾಕ್ಷ್ಯಗಳು ಎಷ್ಟರ ಮಟ್ಟಿಗೆ ನಿಖರವಾಗಿವೆ, ಸಾಕ್ಷ್ಯಾಧಾರರ ಹೇಳಿಕೆಗಳು ಸೇರಿದಂತೆ ಹಲವು ಅಂಶಗಳನ್ನು ಗಮನಿಸಲಾಗುತ್ತದೆ," ಎಂದರು.

ಹೈಕೋರ್ಟ್‌ನಿಂದ ಮಧ್ಯಂತರ ತಡೆ ಆದೇಶ

ದರ್ಶನ್​ಗೆ ಮಂಜೂರಾಗಿದ್ದ ಶಸ್ತ್ರಾಸ್ತ್ರ ಪರವಾನಗಿಯನ್ನು ಅಮಾನತಿನಲ್ಲಿಟ್ಟ ಪೊಲೀಸ್‌ ಇಲಾಖೆ ಕ್ರಮಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ಅರ್ಜಿದಾರರು ಶಸ್ತ್ರಾಸ್ತ್ರ ಕಾಯಿದೆಯ ಅಡಿಯಲ್ಲಿ 2008ರಲ್ಲಿ ಪಿಸ್ತೂಲ್ ಹೊಂದಲು ಪರವಾನಗಿಯನ್ನು ಪಡೆದುಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜಾಮೀನು ಪಡೆದುಕೊಂಡಿದ್ದ ಸಂದರ್ಭದಲ್ಲಿ ಪರವಾನಗಿ ಅಮಾನತು ಮಾಡಲಾಗಿದೆ. ಶಸ್ತ್ರಾಸ್ತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬ ಕಾರಣದಿಂದ ಈ ಆದೇಶ ಮಾಡಿದೆ. ಆದರೆ, ಅರ್ಜಿದಾರರಿಗೆ ಇದೀಗ ಜಾಮೀನು ರದ್ದಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ತಮ್ಮ ಬಳಿಯಿದ್ದ ಶಸ್ತ್ರಾಸ್ತ್ರವನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ ಎಂಬುದಾಗಿ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಆದ್ದರಿಂದ ಮುಂದಿನ ವಿಚಾರಣೆಯವರೆಗೂ ಆಡಳಿತ ವಿಭಾಗದ ಡಿಸಿಪಿ ಆದೇಶಕ್ಕೆ ತಡೆ ನೀಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ದರ್ಶನ್‌ ಅವರು 2008ರಿಂದ ಶಸ್ತ್ರಾಸ್ತ್ರ ಹೊಂದಲು ಪರವಾನಗಿ ಪಡೆದುಕೊಂಡಿದ್ದರು. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಸಂದರ್ಭದಲ್ಲಿ ಶಸ್ತ್ರಾಸ್ತ್ರವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂಬ ಕಾರಣ ನೀಡಿ ಪರವಾನಗಿಯನ್ನು 2025ರ ಜನವರಿ 20ರಂದು ಅಮಾನತುಪಡಿಸಿ ಆದೇಶಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ದರ್ಶನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಸುಪ್ರೀಂಕೋರ್ಟ್‌ ಯಾಕೆ ಜಾಮೀನು ರದ್ದುಗೊಳಿಸಿತ್ತು?

* ನಟ ದರ್ಶನ ಸಾಮಾನ್ಯ ವ್ಯಕ್ತಿಯಲ್ಲ, ಜನಪ್ರಿಯತೆ ಹೊಂದಿದ್ದು, ರಾಜಕೀಯ, ಆರ್ಥಿಕವಾಗಿ ಸದೃಢವಾಗಿದ್ದಾರೆ.

* ಜೈಲಿನಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದರೂ ಹೈಕೋರ್ಟ್ ಜಾಮೀನು ನೀಡಿದೆ. ನ್ಯಾಯಾಲಯವು ತನ್ನ ವಿಚೇಚನೆ ಬಳಸಿಲ್ಲ ಎನ್ನುವುದಕ್ಕೆ ಪೂರಕವಾಗಿವೆ

* ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣವಂತ, ಶಕ್ತಿವಂತ ಅಥಾವ ಖ್ಯಾತ ವ್ಯಕ್ತಿಯೂ ನ್ಯಾಯಾಂಗದ ಮುಂದೆ ಸಾಮಾನ್ಯ ವ್ಯಕ್ತಿಯೇ ಆಗಿರುತ್ತಾನೆ

* ಸಿಸಿಟವಿ, ಕಾಲ್ ರೆಕಾರ್ಡ್, ಕೃತ್ಯಕ್ಕೆ ಬಳಸಿದ ವಸ್ತುಗಳ ಸೇರಿ ಪ್ರಮುಖ ಸಾಕ್ಷ್ಯಧಾರಗಳ ನಾಶಕ್ಕೆ ಆರೋಪ ಪ್ರಯತ್ನ ಪಟ್ಟಿದ್ದಾರೆ

* ಪವಿತ್ರಾಗೌಡ, ದರ್ಶನ ನಿರಂತರ ಸಂಪರ್ಕದಲ್ಲಿದ್ದರು, ಕೊಲೆ ನಡೆದಾಗ ಘಟನಾ ಸ್ಥಳದಲ್ಲಿ ಹಾಜರಿದ್ದರು.

* ಘಟನೆ ನಡೆದ ಸ್ಥಳದಲ್ಲಿ ದರ್ಶನ್‌ ಇರಲಿಲ್ಲ ಎಂದು ವಾದಿಸಿದ್ದರೂ ಸಹ ಕೊಲೆಗೂ ಮೊದಲು ಇತರೆ ಆರೋಪಿಗಳೊಂದಿಗೆ ಸಂಪರ್ಕದಲ್ಲಿರುವುದು ಸಾಬೀತಾಗಿದೆ. ಹೀಗಾಗಿ ಕೊಲೆಗೆ ಇವರ ಪ್ರೇರಣೆ ಇದ್ದಂತಿದೆ

* ಬಂಧನದಲ್ಲಿದ್ದರೂ ಜೈಲಿನ ವ್ಯವಸ್ಥೆ ಮೀರಿ ರಾಜಾತಿಥ್ಯ ಪಡೆದ ವ್ಯಕ್ತಿ ಸಾಕ್ಷ್ಯಗಳನ್ನು ನಾಶ ಮಾಡುವ, ಅವರ ಮೇಲೆ ಬೆದರಿಕೆ ಹಾಕುವ ಸಾಧ್ಯತೆಗಳಿವೆ

* ಅರೋಪಿಗೆ ಐಷರಾಮಿ ವ್ಯವಸ್ಥೆ ಮಾಡಲಾಗಿತ್ತು. ಜೈಲು ಅಧೀಕ್ಷಕರನ್ನು ಅಮಾನತು ಮಾಡಬೇಕಿತ್ತು.

* ವೈದ್ಯರು ನೀಡಿದ ವರದಿ ಪ್ರಕಾರ ದರ್ಶನಗೆ ಸಕ್ಕರೆ ಖಾಯಿಲೆ, ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಅಗತ್ಯ ಇದೆ. ಆದರೆ, ತುರ್ತಾಗಿ ಅಗತ್ಯ ಇಲ್ಲ

* ಜಾಮೀನು ಪಡೆದ ಬಳಿಕ ಸೂಕ್ತ ವೈದ್ಯಕೀಯ ಸೌಲಭ್ಯ ಪಡೆದಿಲ್ಲ

Read More
Next Story