
ಎಐ ಆಧಾರಿತ ಚಿತ್ರ
ಪಾಸ್‌ಪೋರ್ಟ್ ಪೌರತ್ವದ ದಾಖಲೆ ಅಲ್ಲ? ಕೇಂದ್ರದ ಸ್ಪಷ್ಟನೆಯಿಂದ ಹೊಸ ಗೊಂದಲ
2014ರಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ಪ್ರತಿಯೊಬ್ಬ ಸಾರ್ವಜನಿಕರಿಗೂ ತೊಂದರೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪಾಸ್‌ಪೋರ್ಟ್‌ನ್ನು ಪೌರತ್ವದ ಸಾಕ್ಷ್ಯವಾಗಿ ಅಥವಾ ಸರ್ಕಾರಿ ಸೌಲಭ್ಯಗಳ ಅರ್ಹತೆಯ ದಾಖಲೆ ಎಂದು ಪರಿಗಣಿಸಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸ್ಪಷ್ಟಪಡಿಸಿತ್ತು. ಭಾರತೀಯ ಪಾಸ್‌ಪೋರ್ಟ್ ಕೇವಲ ವಿದೇಶ ಪ್ರಯಾಣಕ್ಕೆ ಬಳಸುವ ಅಧಿಕೃತ ದಾಖಲೆಯಾಗಿದ್ದು, ಅದನ್ನು ಅಂತಿಮ ಪೌರತ್ವದ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಇತ್ತೀಚೆಗೆ ತಿಳಿಸಿದ್ದರು.
ಪಾಸ್‌ಪೋರ್ಟ್ ಎಂಬುದು ನಾಗರಿತ್ವದ ದಾಖಲೆಯೇ ಅಥವಾ ವಿದೇಶಿ ಪ್ರವಾಸಕ್ಕಿರುವ ಗುರುತಿನ ಚೀಟಿಯಷ್ಟೇಯೇ ಎಂಬುದರ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಕಾಮನ್ವೆಲ್ತ್ ದೇಶಗಳಲ್ಲಿ ಅಥವಾ ಸಾಮಾನ್ಯವಾಗಿ ವಿವಿಧ ದೇಶಗಳಲ್ಲಿ ಪಾಸ್‌ಪೋರ್ಟ್‌ನ್ನು ನಾಗರಿಕತ್ವದ ಪ್ರಮುಖ ಪುರಾವೆ ಎಂದು ಪರಿಗಣಿಸಲಾಗುತ್ತದೆಯಾದರೂ, ಇತ್ತೀಚಿನ ವರ್ಷಗಳಲ್ಲಿ ಭಾರತದ ಉನ್ನತ ನ್ಯಾಯಾಲಯಗಳು ಮತ್ತು ವಿದೇಶಾಂಗ ಸಚಿವಾಲಯ ನೀಡಿದ ಕೆಲವು ಹೇಳಿಕೆಗಳು "ಪಾಸ್‌ಪೋರ್ಟ್ ಕೇವಲ ಪ್ರಯಾಣದ ದಾಖಲೆಯಾಗಿದೆ, ಅದು ನಾಗರಿಕತ್ವದ ಅಂತಿಮ ಅಥವಾ ನಿರ್ಣಾಯಕ ದಾಖಲೆಯಲ್ಲ" ಎಂಬುದನ್ನು ಒತ್ತಿ ಹೇಳಿದೆ.
ಪೌರತ್ವದ ದಾಖಲೆ; ಕೇಂದ್ರ ಸರ್ಕಾರದ ವೈಫಲ್ಯ
ಹೈಕೋರ್ಟ್ ವಕೀಲ ಉಮಾಪತಿ ಎಸ್, ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ,"ಪಾಸ್‌ಪೋರ್ಟ್ ಒಂದೇ ಭಾರತೀಯ ಪೌರತ್ವದ ದಾಖಲೆಯಲ್ಲ. 1955 ರ ಪೌರತ್ವದ ಕಾಯ್ದೆಯ ಅನ್ವಯ ಜನನ ಪ್ರಮಾಣ ಪತ್ರ, ತಂದೆ-ತಾಯಿ ಭಾರತೀಯರೇ ಆಗಿದ್ದರೆ ಸ್ವಾಭಾವಿಕವಾಗಿ ಮಕ್ಕಳು ಭಾರತೀಯರೇ ಆಗಿರುತ್ತಾರೆ. ಸೆಕ್ಷನ್ 5(1)(ಎ) ಪ್ರಕಾರ ಹೊರದೇಶಗಳ ಪ್ರಜೆಗಳು ಅಥವಾ ಅವರ ಪೋಷಕರಲ್ಲಿ ಒಬ್ಬರು ಭಾರತದಲ್ಲಿ ಜನಿಸಿದ್ದರೆ ಮತ್ತು ಕನಿಷ್ಠ ಏಳು ವರ್ಷಗಳಿಂದ ಭಾರತದ ನಿವಾಸಿಯಾಗಿದ್ದವರು ಅರ್ಜಿ ಹಾಕಿ ಪೌರತ್ವ ಪಡೆದುಕೊಳ್ಳಬಹುದು" ಎಂದು ತಿಳಿಸಿದರು.
ಎಐ ಆಧಾರಿತ ಚಿತ್ರ
ಹಕ್ಕುಗಳ ಮೊಟಕು ಅಸಾಧ್ಯ
ಮುಂದುವರಿದು, ವಿದೇಶಾಂಗ ಇಲಾಖೆ ಇತ್ತೀಚೆಗೆ ನೀಡಿರುವ ಹೇಳಿಕೆ ಕಾನೂನಲ್ಲ. ಕೆಲವೊಮ್ಮೆ ಭಾರತೀಯ ಪ್ರಜೆಗಳಲ್ಲದವರಿಗೂ ಪಾಸ್‌ಪೋರ್ಟ್ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಅವರು ಮುಂದಿನ ದಿನಗಳಲ್ಲಿ ಭಾರತೀಯ ಪೌರತ್ವ ನೀಡಬೇಕು ಎಂದು ಕೇಳಬಹುದು. ಆದ್ದರಿಂದಲೇ ಇತ್ತೀಚಿನ ಕೆಲವೊಂದು ಪ್ರಕರಣಗಳಲ್ಲಿ ಕೋರ್ಟ್ ಸ್ಪಷ್ಟನೆ ನೀಡಿದ್ದು, ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ. ಜನನ ಪ್ರಮಾಣಪತ್ರ, ಸ್ವಾಭಾವಿಕವಾಗಿ ಪೌರತ್ವ ಸಿಕ್ಕಿದ್ದರೆ ಅಗತ್ಯ ದಾಖಲೆಗಳನ್ನು ನೀಡಬೇಕು ಎಂದು ತಿಳಿಸಿದೆ. ಕೇಂದ್ರ ಸರ್ಕಾರವೂ ಪೌರತ್ವ ದಾಖಲೆ ಎಂದು ಯಾವುದೇ ಪ್ರಮಾಣ ಪತ್ರಗಳನ್ನು ಪರಿಗಣಿಸಿಲ್ಲ. ಸರ್ಕಾರದ ಯೋಜನೆಗಳನ್ನು ಹಾಗೂ ಸೌಲಭ್ಯಗಳನ್ನು ಪಡೆಯಲು ಆಧಾರ್ ಕರ್ಡ್, ಪಾನ್ ಕಾರ್ಡ್, ಪಡಿತರ ಚೀಟಿಗಳನ್ನು ಕೇಳಲಾಗುತ್ತದೆ. ಆದರೆ ಇದುವರೆಗೂ ಯಾವುವೂ ಪೌರತ್ವ ದಾಖಲೆ ಎಂದು ಅಂತಿಮವಾಗಿಲ್ಲ. ಇದು ಕೇಂದ್ರ ಸರ್ಕಾರದ ಬಹು ದೊಡ್ಡ ವೈಫಲ್ಯ. ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ, ಶಾಲಾ ದಾಖಲಾತಿಗಳು, ಆಧಾರ್‌ಕಾರ್ಡ್ ಸೇರಿದಂತೆ ಹಲವು ದಾಖಲೆಗಳಿದ್ದರೆ, ಮತದಾನದ ಹಕ್ಕು ಸೇರಿದಂತೆ ನಿಮ್ಮ ಯಾವುದೇ ಹಕ್ಕುಗಳನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದರು.
1955 ರ ಪೌರತ್ವದ ಕಾಯ್ದೆಯೇ ಅಂತಿಮ
ಒಬ್ಬ ವ್ಯಕ್ತಿಯ ಬಳಿ ಭಾರತೀಯ ಪಾಸ್‌ಪೋರ್ಟ್ ಇದ್ದ ತಕ್ಷಣ ಆತ ಕಾನೂನುಬದ್ಧವಾಗಿ ಭಾರತದ ನಾಗರಿಕ ಎಂದು ಸಂಪೂರ್ಣವಾಗಿ ಸಾಬೀತಾಗುವುದಿಲ್ಲ. ನಾಗರಿಕತ್ವ ಕಾಯ್ದೆ 1955 ರ ಅಡಿಯಲ್ಲಿ ನಾಗರಿಕತ್ವದ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ವ್ಯಕ್ತಿಯೊಬ್ಬರು ವಂಚನೆ ಅಥವಾ ತಪ್ಪು ಮಾಹಿತಿ ನೀಡಿ ಪಾಸ್‌ಪೋರ್ಟ್ ಪಡೆದಿದ್ದರೆ, ಅದನ್ನು ನಾಗರಿಕತ್ವದ ದಾಖಲೆ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯಗಳು ಹೇಳಿವೆ.
ಕೆಲವು ಮಹತ್ವದ ಪ್ರಕರಣಗಳಲ್ಲಿ, "ಒಬ್ಬ ವ್ಯಕ್ತಿಯು ಭಾರತದ ಪಾಸ್‌ಪೋರ್ಟ್ ಹೊಂದಿದ್ದರೂ, ಆತನ ನಾಗರಿಕತ್ವದ ಬಗ್ಗೆ ಗಂಭೀರ ಪ್ರಶ್ನೆಗಳು ಅಥವಾ ಕಾನೂನು ವಿವಾದಗಳು ಉದ್ಭವಿಸಿದಾಗ, ಕೇವಲ ಪಾಸ್‌ಪೋರ್ಟ್ ತೋರಿಸಿ ತಾನು ಭಾರತದ ಪ್ರಜೆ ಎಂದು ವಾದಿಸಲು ಸಾಧ್ಯವಿಲ್ಲ. ಸಂಬಂಧಪಟ್ಟ ಪ್ರಾಧಿಕಾರಗಳು ಆತನ ಜನ್ಮ ದಾಖಲೆ ಅಥವಾ ನಾಗರಿಕತ್ವದ ಇತರ ಮೂಲ ದಾಖಲೆಗಳನ್ನು ಪರಿಶೀಲಿಸುವ ಹಕ್ಕನ್ನು ಹೊಂದಿವೆ" ಎಂದು ನ್ಯಾಯಾಲಯಗಳು ಸ್ಪಷ್ಟಪಡಿಸಿವೆ. ಒಬ್ಬ ವ್ಯಕ್ತಿಯು ಭಾರತದ ನಾಗರಿಕತ್ವವನ್ನು ಕಳೆದುಕೊಂಡರೆ ಅಥವಾ ಬೇರೆ ದೇಶದ ಪೌರತ್ವ ಪಡೆದರೆ, ಆತನ ಭಾರತೀಯ ಪಾಸ್‌ಪೋರ್ಟ್ ತಾನಾಗಿಯೇ ಅಸಿಂಧುವಾಗುತ್ತದೆ. ಪಾಸ್‌ಪೋರ್ಟ್ ಕೇವಲ ನಾಗರಿಕತ್ವದ ಸ್ಥಿತಿಯನ್ನು ಪ್ರತಿಬಿಂಬಿಸುವ ಒಂದು ತಾತ್ಕಾಲಿಕ ದಾಖಲೆಯಷ್ಟೇ ಹೊರತು, ನಾಗರಿಕತ್ವವನ್ನು ಸೃಷ್ಟಿಸುವ ದಾಖಲೆಯಲ್ಲ ಎಂದು ಕೋರ್ಟ್ ತಿಳಿಸಿತ್ತು.
ಎಐ ಆಧಾರಿತ ಚಿತ್ರ
ನಾಗರಿಕತ್ವಕ್ಕೆ ನಿಜವಾದ ದಾಖಲೆಗಳು ಯಾವುವು?
ಭಾರತದಲ್ಲಿ ನಾಗರಿಕತ್ವವನ್ನು ಸಾಬೀತುಪಡಿಸಲು ನಾಗರಿಕತ್ವ ಕಾಯ್ದೆ 1955 ರ ಅಡಿಯ ನಿಯಮಗಳ ಪ್ರಕಾರ ಜನನ ಪ್ರಮಾಣ ಪತ್ರ ಹಾಗೂ ಮೂಲ ದಾಖಲೆಗಳೇ ಮುಖ್ಯವಾಗುತ್ತವೆ. ವಿದೇಶಾಂಗ ಇಲಾಖೆ ಅಧಿಕಾರಿಗಳು ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ ಎಂಬ ಹೇಳಿಕೆ ನೀಡಿದ ನಂತರ ರಾಜ್ಯದಲ್ಲಿ ರಾಜಕೀಯವಾಗಿಯೂ ಹಲವು ಅಪಸ್ವರ ಕೇಳಿ ಬರುತ್ತಿವೆ.
ಎನ್‌ಡಿಎ ಸರ್ಕಾರದಿಂದ ಕಿರುಕುಳ
ಈ ಕುರಿತು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, "2014ರಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ಪ್ರತಿಯೊಬ್ಬ ಸಾರ್ವಜನಿಕರಿಗೂ ತೊಂದರೆ ನೀಡಲಾಗುತ್ತಿದೆ. ಪಾಸ್‌ಪೋರ್ಟ್ ಎಂಬುದು ವಿದೇಶಗಳಿಗೆ ತೆರಳಲು ಇರುವ ರಹದಾರಿ. ಭಾರತೀಯ ಪ್ರಜೆಗಳು ಎಂದು ದೃಢಿಕೃತವಾದಮೇಲೆಯೇ ಪಾಸ್‌ಪೋರ್ಟ್ ನೀಡಲಾಗುತ್ತದೆ. ಆ ದಾಖಲೆಯನ್ನೇ ನೀವು ಪರಿಗಣಿಸಲಿಲ್ಲ ಎಂದರೇ ಮತ್ಯಾವ ದಾಖಲೆಯನ್ನು ನೀವು ಪರಿಗಣಿಸುತ್ತೀರಿ? ಆಧಾರ್, ಮತದಾನದ ಚೀಟಿ, ಪಾನ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಗಳಲ್ಲಿ ಹೆಸರುಗಳಿದ್ದರೆ ಅವರು ಭಾರತೀಯ ಎಂದು ಅರ್ಥ ನೀಡುತ್ತದೆ ಎಂದರು.
ಮತದಾನದ ಹಕ್ಕು ಕಸಿಯುವ ತಂತ್ರ
ಮುಂದುವರಿದು, "ಪ್ರವಾಸ ಅಥವಾ ಇನ್ನಿತರ ಉದ್ದೇಶಗಳಿಗಾಗಿ ವಿದೇಶಕ್ಕೆ ತೆರಳಿದಾಗ ನೀವು ಭಾರತೀಯರು ಎನ್ನುವುದಕ್ಕೆ ಪೌರತ್ವದ ದಾಖಲೆ ನೀಡಿ ಎಂದು ಕೇಳಿ ಅಲ್ಲಿನ ಸರ್ಕಾರ ಜೈಲಿಗೆ ಕಳುಹಿಸಿದರೆ ಯಾರು ಹೊಣೆ? ವಿದೇಶಿಗರು ಭಾರತಕ್ಕೆ ಆಗಮಿಸಿ ಪೌರತ್ವ ಪಡೆಯಬೇಕಾದರೆ ಕೆಲವೊಂದು ಮಾನದಂಡಗಳನ್ನು ಪೂರ್ಣಗೊಳಿಸಬೇಕು. ಭಾರತದಲ್ಲೇ ಜನಿಸಿದವರಿಗೆ ಅದರ ಅಗತ್ಯವಿಲ್ಲ. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ಚುನಾವಣಾ ಆಯೋಗ ಪಾಸ್‌ಪೋರ್ಟ್ ಕೂಡ ಒಂದು ದಾಖಲೆಯಾಗಿ ನೀಡಬಹುದು ಎಂದು ಹೇಳಿದೆ. ಆದರೆ ವಿದೇಶಾಂಗ ಇಲಾಖೆ ವ್ಯತಿರಿಕ್ತ ಹೇಳಿಕೆ ನೀಡುತ್ತಿದೆ. ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುವ ಮೂಲಕ ಮತದಾನದ ಹಕ್ಕನ್ನು ಕಸಿದುಕೊಂಡು ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯಬೇಕು ಎಂಬುದು ಎನ್‌ಡಿಎ ಉದ್ದೇಶವಾಗಿದೆ" ಎಂದು ತಿಳಿಸಿದರು.
ರಾಜ್ಯದಲ್ಲಿ ಪಾಸ್‌ಪೋರ್ಟ್ ಹೊಂದಿರುವವರು ಎಷ್ಟು?
ದಕ್ಷಿಣ ಭಾರತದ ರಾಜ್ಯಗಳಲ್ಲಿ ಪಾಸ್‌ಪೋರ್ಟ್‌ಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಕರ್ನಾಟಕದಲ್ಲಿ ಅಂದಾಜು 70 ರಿಂದ 80 ಲಕ್ಷಕ್ಕೂ ಹೆಚ್ಚು ಜನರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ. ಪ್ರತಿ ವರ್ಷ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ (RPO) ಬೆಂಗಳೂರು ಮೂಲಕ ಲಕ್ಷಾಂತರ ಹೊಸ ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗುತ್ತಿದೆ. ರಾಜ್ಯದಲ್ಲಿ ಪಾಸ್‌ಪೋರ್ಟ್ ಹೊಂದಿರುವವರ ಸಂಖ್ಯೆಯಲ್ಲಿ ಐಟಿ ಹಬ್ ಹಾಗೂ ರಾಜಧಾನಿಯಾಗಿರುವ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಸಾಫ್ಟ್‌ವೇರ್ ಉದ್ಯೋಗಿಗಳು, ಜಾಗತಿಕ ಕಂಪನಿಗಳು ಮತ್ತು ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಇಲ್ಲಿ ಅತಿ ಹೆಚ್ಚು ಪಾಸ್‌ಪೋರ್ಟ್‌ಗಳಿವೆ.
ಹೆಚ್ಚು ಪಾಸ್‌ಪೋರ್ಟ್; ಬೆಂಗಳೂರು ಪ್ರಥಮ
ಗಲ್ಫ್ ದೇಶಗಳಲ್ಲಿ ಉದ್ಯೋಗ ಮಾಡುವವರ ಸಂಖ್ಯೆ ಹೆಚ್ಚಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಪ್ರಮುಖ ಸ್ಥಾನದಲ್ಲಿದೆ. ಪ್ರವಾಸೋದ್ಯಮ, ಐಟಿ ಪ್ರಗತಿ ಮತ್ತು ಶಿಕ್ಷಣಕ್ಕಾಗಿ ಮೈಸೂರು ಜನರಿಗೆ ಪಾಸ್‌ಪೋರ್ಟ್ ಬೇಡಿಕೆ ಹೆಚ್ಚಿದೆ. ಕರಾವಳಿ ಭಾಗದಿಂದ ಉದ್ಯೋಗಕ್ಕಾಗಿ ವಿದೇಶಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಿರುವುದರಿಂದ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಪಾಸ್‌ಪೋರ್ಟ್ ಅಗತ್ಯವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಲ್ಲಿ ಹೆಚ್ಚು ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿದೆ.
ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಲಿ
ವಿದೇಶಗಳಿಗೆ ತೆರಳಲು ಹಾಗೂ ಅಲ್ಲಿಯೂ ಭಾರತೀಯ ಎಂದು ಗುರುತಿಸಿಕೊಳ್ಳಲು ಪಾಸ್‌ಪೋರ್ಟ್ ಹೊಂದಿದ್ದರೆ ಸಾಕು ಎಂಬ ಭಾವನೆ ಇತ್ತು. ಆದರೆ ಇದೀಗ ವಿದೇಶಾಂಗ ಇಲಾಖೆ ಪಾಸ್‌ಪೋರ್ಟ್‌ನ್ನು ಭಾರತೀಯ ಪೌರತ್ವದ ಗುರುತು ಎಂದು ಪರಿಗಣಿಸಲಾಗದು ಎಂದು ಹೇಳಿರುವುದು ಬಹಳ ಗೊಂದಲ ಮೂಡಿಸಿದೆ. ಕೇಂದ್ರ ಸರ್ಕಾರ ಯಾವ ದಾಖಲೆಗಳನ್ನೂ ಪೌರತ್ವದ ಗುರುತು ಎಂದು ಪರಿಗಣಿದಿದ್ದರೆ ಮತ್ಯಾವ ದಾಖಲೆಯನ್ನು ನಮ್ಮ ಪೌರತ್ವದ ಗುರುತಾಗಿ ತೋರಿಸಬೇಕು? ಆಧಾರ್ ಕಾರ್ಡ್‌ನ್ನು ಪೌರತ್ವದ ದಾಖಲೆಯಾಗಿ ಪರಿಗಣಿಸಲಾಗದು ಎಂದು ಕೋರ್ಟ್ ಈಗಾಗಲೇ ಹೇಳಿದೆ. ಸರ್ಕಾರ ಈ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಉದ್ಯಮಿ ಮಂಜುನಾಥ್ ಸಿ.ಎನ್. ತಿಳಿಸಿದ್ದಾರೆ.
ಉದ್ಯೋಗ ಪಾಸ್‌ಪೋರ್ಟ್‌ಗೆ ಹೆಚ್ಚು ಬೇಡಿಕೆ
ವಿದೇಶಾಂಗ ಸಚಿವಾಲಯದ (MEA) ಸಾಮಾನ್ಯ ಟ್ರೆಂಡ್ ಮತ್ತು ವಲಸೆ ದತ್ತಾಂಶಗಳ ಪ್ರಕಾರ ಕರ್ನಾಟಕದಲ್ಲಿ ಪಾಸ್‌ಪೋರ್ಟ್ ಬಳಕೆಯ ಪೈಕಿ ಶೇ.45 - 50 ಬೆಂಗಳೂರಿನ ಸಾಫ್ಟ್‌ವೇರ್ ಹಾಗೂ ಟೆಕ್ ಉದ್ಯೋಗಿಗಳು ಅಮೆರಿಕ, ಬ್ರಿಟನ್ ಹಾಗೂ ಯುರೋಪ್‌ನ ಹಲವು ದೇಶಗಳಿಗೆ ವಲಸೆ ಹೋಗುತ್ತಾರೆ. ಕರಾವಳಿ ಭಾಗದಿಂದ ಕೊಲ್ಲಿ ರಾಷ್ಟ್ರಗಳಾದ ದುಬೈ, ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ತೆರಳುತ್ತಾರೆ.
ಉನ್ನತ ಶಿಕ್ಷಣಕ್ಕೆ ಶೇ.25 ಪಾಸ್‌ಪೋರ್ಟ್
ವಿಶೇಷವಾಗಿ ಬೆಂಗಳೂರು, ಮೈಸೂರು, ಮಂಗಳೂರಿನಿಂದ ಉನ್ನತ ಶಿಕ್ಷಣಕ್ಕಾಗಿ ಶೇ.20 - 25 ವಿದ್ಯಾರ್ಥಿಗಳು ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಮತ್ತು ಜರ್ಮನಿಗೆ ತೆರಳುತ್ತಾರೆ. ಮಧ್ಯಮ ಮತ್ತು ಉನ್ನತ ವರ್ಗದ ಜನರು ರಜೆ ಕಳೆಯಲು (ಆಗ್ನೇಯ ಏಷ್ಯಾ, ಯುರೋಪ್ ರಾಷ್ಟ್ರಗಳಿಗೆ) ಹಾಗೂ ವಿದೇಶದಲ್ಲಿ ನೆಲೆಸಿರುವ ತಮ್ಮ ಮಕ್ಕಳನ್ನು ನೋಡಲು ಹೋಗುವ ಪೋಷಕರು, ವಿಶೇಷವಾಗಿ ಹಿರಿಯ ನಾಗರಿಕರು ಶೇ. 30 ಜನರು ಪ್ರವಾಸದ ಉದ್ದೇಶಕ್ಕೆ ಪಾಸ್‌ಪೋರ್ಟ್ ಬಳಸುತ್ತಾರೆ.
ವಿದೇಶಾಂಗ ಇಲಾಖೆ ಹೇಳಿಕೆ ಆಶ್ಚರ್ಯಕರ
"ಭಾರತೀಯ ಪಾಸ್‌ಪೋರ್ಟ್ ಕೇವಲ ಪ್ರಯಾಣ ದಾಖಲೆಯಾಗಿದ್ದು, ಪೌರತ್ವದ ನಿರ್ಣಾಯಕ ಪುರಾವೆಯಲ್ಲ ಎಂದು ಕೇಂದ್ರ ವಿದೇಶಾಂಗ ಇಲಾಖೆಯ ಹೇಳಿಕೆಯು ಆಶ್ಚರ್ಯಕರವಾದುದು. ಪಾಸ್‌ಪೋರ್ಟ್ ಕೊಡುವುದು ಭಾರತೀಯರಿಗೆ ತಾನೇ. ಅದೇನು ಹೊರದೇಶಗರಿಗೆ ಕೊಡುತ್ತಾರೆಯೇ? ಬೇರೆ ದಾಖಲೆಯನ್ನು ಪೌರತ್ವದ ದಾಖಲೆ ಎಂದು ಪ್ರಕಟಿಸುವ ಸಾಧ್ಯತೆ ಇರಬಹುದು. ಪಾಸ್‌ಪೋರ್ಟ್‌ನ್ನು ಪೌರತ್ವದ ದಾಖಲೆ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಪಾಸ್‌ಪೋರ್ಟ್ ಸೇರಿ ಯಾವ ದಾಖಲೆಯನ್ನೂ ಪೌರತ್ವ ದಾಖಲೆ ಎಂದು ಪರಿಗಣಿಸುತ್ತಿಲ್ಲ. ಹಾಗಾದರೆ ಕೇಂದ್ರ ಸರ್ಕಾರ ನಾಗರಿಕರು ಯಾವ ದಾಖಲೆಯ ಆಧಾರದ ಮೇಲೆ ಪೌರತ್ವ ಎಂಬುದನ್ನು ಪರಿಗಣಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು". ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಜೈನ್ ತಿಳಿಸಿದ್ದಾರೆ.
ಪರಿಣಾಮಗಳೇನು ?
"ಪಾಸ್‌ಪೋರ್ಟ್ ನಾಗರಿಕತ್ವದ ದಾಖಲೆಯಲ್ಲ" ಎಂದು ವಿದೇಶಾಂಗ ಇಲಾಖೆ ನೀಡಿರುವ ಹೇಳಿಕೆಯಿಂದ ಕರ್ನಾಟಕದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಅಥವಾ ವಿದೇಶದಲ್ಲಿರುವ ಕನ್ನಡಿಗರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ವಿದೇಶದಲ್ಲಿ ಓದುತ್ತಿರುವ ಕನ್ನಡಿಗರು, ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರು ಅಥವಾ ಪ್ರವಾಸದಲ್ಲಿರುವವರು ಎಂದಿನಂತೆ ತಮ್ಮ ಪಾಸ್‌ಪೋರ್ಟ್ ಬಳಸಿ ಪ್ರಯಾಣಿಸಬಹುದು. ಅವರ ವೀಸಾ, ಉದ್ಯೋಗ ಅಥವಾ ವಾಸ್ತವ್ಯದ ಹಕ್ಕುಗಳಿಗೆ ಇದರಿಂದ ಯಾವುದೇ ಧಕ್ಕೆ ಬರುವುದಿಲ್ಲ. ಅಂತರರಾಷ್ಟ್ರೀಯ ಕಾನೂನುಗಳ ಪ್ರಕಾರ, ವಿದೇಶ ಪ್ರಯಾಣಕ್ಕೆ ಪಾಸ್‌ಪೋರ್ಟ್ ಅತ್ಯಗತ್ಯ ಮತ್ತು ಅಧಿಕೃತ ಪ್ರಯಾಣ ದಾಖಲೆಯಾಗಿಯೇ ಮುಂದುವರಿಯುತ್ತದೆ.
ಹೊಸ ಬದಲಾವಣೆ ಇಲ್ಲ
ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಹೊಸ ಪಾಸ್‌ಪೋರ್ಟ್ ಪಡೆಯಲು ಅಥವಾ ನವೀಕರಿಸಲು ಈಗಿರುವ ನಿಯಮಗಳೇ ಅನ್ವಯಿಸುತ್ತವೆ. ನೀವು ಎಂದಿನಂತೆ ನಿಗದಿತ ಗುರುತಿನ ಚೀಟಿ, ವಿಳಾಸದ ಪುರಾವೆ ಮತ್ತು ಜನ್ಮ ದಿನಾಂಕದ ದಾಖಲೆಗಳನ್ನು ನೀಡಿ ಪಾಸ್‌ಪೋರ್ಟ್ ಪಡೆಯಬಹುದು. ವಿಮಾನ ನಿಲ್ದಾಣಗಳಲ್ಲಿ, ವಲಸೆ ವಿಭಾಗಗಳಲ್ಲಿ ಅಥವಾ ವಿದೇಶಿ ರಾಯಭಾರ ಕಚೇರಿಗಳಲ್ಲಿ ಪಾಸ್‌ಪೋರ್ಟ್ ಬಳಸುವ ನಿಯಮಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಭಾರತೀಯ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿಯು ಭಾರತದ ನಾಗರಿಕ ಹಕ್ಕುಗಳನ್ನು ಹೊಂದಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು 'ನಾಗರಿಕತ್ವ ಕಾಯ್ದೆ'ಯಡಿ ಪ್ರತ್ಯೇಕ ನಿಯಮಗಳಿವೆ. ಪಾಸ್‌ಪೋರ್ಟ್ ಕೇವಲ ವಿದೇಶ ಪ್ರಯಾಣಕ್ಕಾಗಿ ನೀಡಲಾಗುವ ʼಪ್ರಯಾಣ ದಾಖಲೆʼ ಮಾತ್ರ. ಒಬ್ಬ ವ್ಯಕ್ತಿಯ ನಾಗರಿಕತ್ವದ ಬಗ್ಗೆ ದೊಡ್ಡ ಮಟ್ಟದ ಕಾನೂನು ವಿವಾದ ಉಂಟಾದಾಗ ʼಅವನ ಬಳಿ ಭಾರತದ ಪಾಸ್‌ಪೋರ್ಟ್ ಇದೆ ಎಂದ ಮಾತ್ರಕ್ಕೆ ಅವನು ಭಾರತದ ನಾಗರಿಕ ಎಂದು ಸ್ವಯಂಚಾಲಿತವಾಗಿ ಸಾಬೀತಾಗುವುದಿಲ್ಲʼ ಎಂದು ನ್ಯಾಯಾಲಯಗಳು ಈಗಾಗಲೇ ವ್ಯಾಖ್ಯಾನಿಸಿವೆ.

