ಬರೋಬ್ಬರಿ ಹನ್ನೊಂದು ಸಾವಿರ ಚದರ ಕಿ.ಮೀ. ತನಕ ವಿಸ್ತರಿಸಿರುವ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ವಿಭಿನ್ನ ವನ್ಯಜೀವಿಗಳ ಆವಾಸ ತಾಣ. ಈ ಕಾನನದೊಳಗಣ ಜೌಗು ಪ್ರದೇಶದಲ್ಲಿರುವ ವಿಶಿಷ್ಟ ಜೀವಿ-ಫಿಶಿಂಗ್ ಕ್ಯಾಟ್.

ಕಾಜಿರಂಗ ಉದ್ಯಾನವನದ ವ್ಯಾಪ್ತಿಯ ಜೌಗು ಪ್ರದೇಶವನ್ನೇ ನಂಬಿರುವ ನೀರು ಬೆಕ್ಕು ಅಳವಿನಂಚಿನ ಪ್ರಾಣಿ. ದಷ್ಟಪುಷ್ಟವಾಗಿ ಬೆಳೆಯುವ, ಹೊಳೆಯುವ ಕಣ್ಗಳ ಈ ನಿಶಾಚರಿ ಪರಭಕ್ಷಕ ಬೆಕ್ಕಿನ ಜಾಡು ಇಲ್ಲಿದೆ.


Click the Play button to hear this message in audio format

ಯುನೆಸ್ಕೊ ವಿಶ್ವ ಪರಂಪರೆಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಅಸ್ಸಾಂ ರಾಜ್ಯದ ಗೋಲಾಘಾಟ್, ಸೋನಿತ್ಪುರ, ಬಿಶ್ವನಾಥ್ ಮತ್ತು ನಗಾಂವ್ ಜಿಲ್ಲೆಗಳಲ್ಲಿ ಸುಮಾರು ಒಂದು ಸಾವಿರ ಚದರ ಕಿ.ಮೀ. ವ್ಯಾಪಿಸಿಕೊಂಡಿದೆ. ಇಲ್ಲಿರುವ ಒಂದೇ ಕೊಂಬಿನ ಖಡ್ಗಮೃಗ ಜಗತ್ತಿನಲ್ಲಿಯೇ ಜನಪ್ರಿಯ. ಇತ್ತೀಚಿನ ಒಂದು ಗಣತಿಯ ಪ್ರಕಾರ ಪ್ರಪಂಚದ ಒಟ್ಟು ಖಡ್ಗಮೃಗಗಳ ಸಂಖ್ಯೆಯ ಮೂರನೇ ಎರಡರಷ್ಟು ಭಾಗ, ಅಂದರೆ 2600ಕ್ಕೂ ಹೆಚ್ಚು ಖಡ್ಗಮೃಗಗಳು ಇಲ್ಲಿ ನೆಲೆ ಕಂಡುಕೊಂಡಿವೆ.

2006ರಲ್ಲಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ಇದು ಬಂಗಾಲದ ಹುಲಿಗಳು, ಜೌಗು ಜಿಂಕೆಗಳು, ಆನೆಗಳು ಮತ್ತು ಏಷ್ಯಾಟಿಕ್ ಕಾಡೆಮ್ಮೆಗಳಿಗೆ ಭದ್ರ ನೆಲೆಯನ್ನು ಒದಗಿಸಿದೆ. ಒಟ್ಟಾರೆ ಜಗತ್ತಿನ ಅತ್ಯಂತ ದಟ್ಟವಾಗಿರುವ ವನ್ಯಜೀವಿಗಳಿರುವ ತಾಣವೆಂಬ ಖ್ಯಾತಿಗೆ ಈ ಉದ್ಯಾನವನ ಒಳಗಾಗಿದೆ.

ಇಲ್ಲಿ ಪ್ರತಿ ವರ್ಷವೂ ಸಂಭವಿಸುವ ಪ್ರವಾಹವು ಈ ಉದ್ಯಾನವನಕ್ಕೆ ವರವಾಗಿ ಪರಿಣಮಿಸಿದೆ. ಪ್ರವಾಹದ ಕಾರಣದಿಂದ ಹರಿದುಬರುವ ಹೂಳು ಮಣ್ಣಿನ ಫಲವತ್ತತೆಯನ್ನು ಪೋಷಿಸುವಂತೆ ಮಾಡುತ್ತದೆ. ಇದರಿಂದ ಜೌಗು ಪ್ರದೇಶಗಳು ಮತ್ತು ಹುಲ್ಲುಗಾವಲುಗಳ ಸರಣಿಯನ್ನೇ ಸೃಷ್ಟಿಸುತ್ತದೆ. ಇದು ಕಾಲಕಾಲಕ್ಕೆ ಸಂಭವಿಸುವ ಸಂಕಷ್ಟವಾಗುವ ಬದಲು ಅಪಾರ ಜೀವವೈವಿಧ್ಯಕ್ಕೆ ಆಸರೆಯಾಗುವಂತೆ ಮಾಡಿದೆ.

ಹೊಸ ವೈಜ್ಞಾನಿಕ ಮೌಲ್ಯಮಾಪನದ ಪ್ರಕಾರ ಕಾಜಿರಂಗ ಉದ್ಯಾನವನವು ಭಾರತದ ಪ್ರಮುಖ ಸಿಹಿನೀರಿನ ಆಶ್ರಯ ತಾಣಗಳಲ್ಲಿ ಒಂದಾಗಿದೆ. ಇದು ಮೀನುಗಾರ ಬೆಕ್ಕು ಅಥವಾ ನೀರು ಬೆಕ್ಕು (ಫಿಶಿಂಗ್ ಕ್ಯಾಟ್) ಎಂಬ ಜೌಗು ಪ್ರದೇಶದ ಬೇಟೆಗಾರ ಪ್ರಾಣಿಗೆ ಪ್ರಮುಖ ನೆಲೆ ಒದಗಿಸಿದೆ. ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಘಟನೆ ಪಟ್ಟಿ ಮಾಡಿರುವ ಅಳಿವಿನಂಚಿನಲ್ಲಿರುವ ಜೀವಿಗಳ ಸಾಲಿನಲ್ಲಿ ಈ ಬೆಕ್ಕು ಕೂಡ ಸೇರಿದೆ. ಇದು ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ ಒಂದರ ಅಡಿಯಲ್ಲಿ ಸಂರಕ್ಷಿಸಲ್ಪಟ್ಟಿದೆ.

ಫಿಶಿಂಗ್ ಕ್ಯಾಟ್ ಪ್ರಾಜೆಕ್ಟ್

ಕಾಜಿರಂಗ ಉದ್ಯಾನವನದ ಒಳಗೆ ಈ ಪ್ರಭೇದದ ಬಗೆ ವ್ಯವಸ್ಥಿತವಾದ ಸಮೀಕ್ಷೆಯನ್ನು ನಡೆಸಲಾಗಿದೆ. ಅದರ ಪ್ರಕಾರ ಹುಲಿ ಸಂರಕ್ಷಿತ ಪ್ರದೇಶದ 450 ಚದರ ಕಿ.ಮೀ.ಗಿಂತಲೂ ಅಧಿಕ ಪ್ರದೇಶದಲ್ಲಿ ಇಂತಹ 57 ವಿಶಿಷ್ಟ ಜಾತಿಯ ಬೆಕ್ಕುಗಳು ಕಾಣಿಸಿಕೊಂಡಿವೆ. ಅಸ್ಸಾಮಿ ಭಾಷೆಯಲ್ಲಿ ಇವುಗಳನ್ನು ʼಮೆಸೆಕಾʼ ಎಂದು ಕರೆಯಲಾಗುತ್ತದೆ. ಕಾಜಿರಂಗದ ʼಟೈಗರ್ ಸೆಲ್ʼ ಮತ್ತು ʼಫಿಶಿಂಗ್ ಕ್ಯಾಟ್ ಪ್ರಾಜೆಕ್ಟ್ʼ ಸಹಯೋಗದೊಂದಿಗೆ ನಡೆದ ಈ ಅಧ್ಯಯನವು ಈ ಹಿಂದೆ ನಡೆದ ಅಖಿಲ ಭಾರತ ಹುಲಿ ಗಣತಿಯ ಸಮಯದಲ್ಲಿ ಸಂಗ್ರಹಿಸಲಾದ ಕ್ಯಾಮೆರಾ ಮೂಲಕ ಟ್ರಾಪ್ ಮಾಡಲಾದ ದತ್ತಾಂಶಗಳನ್ನು ಕೂಡ ವಿಶ್ಲೇಷಿಸಲಾಗಿದೆ.

ʼಫಿಶಿಂಗ್ ಕ್ಯಾಟ್‌ಗಳ ದಿನʼವಾದ ಫೆ.22ರಂದು ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯ ಸಮುದಾಯಗಳು, ವಿದ್ಯಾರ್ಥಿಗಳು ಮತ್ತು ಸಂರಕ್ಷಣಾ ತಜ್ಞರನ್ನು ಒಳಗೊಂಡ ಜಾಗೃತಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.

ಇತ್ತೀಚಿನ ದಶಕಗಳ ಅವಧಿಯಲ್ಲಿ ಆವಾಸ ಸ್ಥಾನಗಳ ಅತಿಯಾದ ನಾಶದ ಪರಿಣಾಮ ಈ ನೀರು ಬೆಕ್ಕುಗಳ ಜಾಗತಿಕ ಸಂಖ್ಯೆ ಶೇ.30ರಷ್ಟು ಕುಸಿದಿದೆ. ಈ ಬೆಕ್ಕುಗಳ ಪಾಲಿಗೆ ಜೀವನಾಡಿಯಾಗಿರುವ ಜೌಗು ಪ್ರದೇಶಗಳು ಆತಂಕಕಾರಿ ಎನ್ನುವಷ್ಟು ಕಣ್ಮರೆಯಾಗುತ್ತಿವೆ. ಕೃಷಿ, ನಗರೀಕರಣ ಮತ್ತು ಮಾಲಿನ್ಯದ ಕಾರಣಕ್ಕೆ ಏಷ್ಯಾದ ಜೌಗು ಪ್ರದೇಶಗಳ ಪೈಕಿ ಶೇ.50ಕ್ಕೂ ಹೆಚ್ಚು ಭಾಗ ನಾಶವಾಗಿದೆ. ಈ ಬೆಕ್ಕಿನ ತುಪ್ಪಳಕ್ಕಾಗಿ ಬೇಟೆಯಾಡುತ್ತಿರುವುದು ಮತ್ತು ಇವು ಜಾನುವಾರುಗಳಿಗೆ ಅಪಾಯಕಾರಿ ಎಂಬ ತಪ್ಪು ಕಲ್ಪನೆಯಿಂದ ಸಾಯಿಸುವುದು ಕೂಡ ಇನ್ನೊಂದು ಕಾರಣ. ವಿಯೆಟ್ನಾಂ ಮತ್ತು ಜಾವಾದಂತಹ ಸ್ಥಳಗಳಲ್ಲಿ ಈ ಪ್ರಭೇದವು ಈಗಾಗಲೇ ಅಳಿದುಹೋಗಿರಬಹುದು ಎಂದು ಶಂಕಿಸಲಾಗಿದೆ. ಸದ್ಯದ ಮಟ್ಟಿಗೆ ದಕ್ಷಿಣ ಏಷ್ಯಾದಲ್ಲಿ ಮಾತ್ರ ಇವುಗಳ ಸಂಖ್ಯೆ ಹೆಚ್ಚಾಗಿದೆ.

CITES ಅನುಬಂಧ II ರ ರಕ್ಷಣೆ ಮತ್ತು ವಿವಿಧ ದೇಶಗಳ ರಾಷ್ಟ್ರೀಯ ಕಾನೂನುಗಳು ಸೇರಿದಂತೆ ಅನೇಕ ಸಂರಕ್ಷಣಾ ಪ್ರಯತ್ನಗಳು ಇವುಗಳ ಸಂಖ್ಯೆಯಲ್ಲಿ ಆಗುತ್ತಿರುವ ಕುಸಿತವನ್ನು ತಡೆಯಲು ಶತಪ್ರಯತ್ನ ನಡೆಸುತ್ತಿವೆ. ಕಾಂಡ್ಲಾ ಮರು-ನಾಟಿ ಮತ್ತು ಬೇಟೆ ತಡೆಗಟ್ಟಲು ಗಸ್ತು ತಿರುಗುವುದು ಮುಂತಾದ ಸಮುದಾಯ ಆಧಾರಿತ ಉಪಕ್ರಮಗಳು ಈ ನಿಟ್ಟಿನಲ್ಲಿ ಯಶಸ್ಸು ಕಾಣುತ್ತಿವೆ.

ತನ್ನ ಪರಿಸರ ವ್ಯವಸ್ಥೆಯ ಪ್ರಮುಖ ಬೇಟೆಗಾರನಾಗಿರುವ ಈ ಫಿಶಿಂಗ್ ಕ್ಯಾಟ್ ಉಪಸ್ಥಿತಿಯು, ಆ ಭಾಗದ ಪರಿಸರ ಸಮತೋಲನಕ್ಕೆ ಅನುಗುಣವಾಗಿದೆ ಎಂಬುದನ್ನು ಸೂಚಿಸುತ್ತದೆ. ಅಂದರೆ ಅಲ್ಲಿನ ಶುದ್ಧ ನೀರು ಮತ್ತು ಹೇರಳವಾದ ಆಹಾರವು ಕೀಟಗಳಿಂದ ಹಿಡಿದು ದೊಡ್ಡ ಸಸ್ತನಿಗಳವರೆಗೆ ಸಂಪೂರ್ಣ ಜೀವಜಾಲವನ್ನು ಪೋಷಿಸುತ್ತಿದೆ ಎಂದರ್ಥ.

ದೂರ ದೂರಕ್ಕೆ ಈಜುವ ಪರಿ

ಅರೆ-ಜಾಲಪಾದಗಳು, ಸದೃಢವಾದ ಮೈಕಟ್ಟು, ದಟ್ಟವಾದ ನೀರು ನಿರೋಧಕ ತುಪ್ಪಳ ಮತ್ತು ಚುಕ್ಕಾಣಿಯಂತೆ ಕೆಲಸ ಮಾಡುವ ಗಿಡ್ಡನೆಯ ಬಲಿಷ್ಠ ಬಾಲವನ್ನು ಹೊಂದಿರುವ ಈ ಬೆಕ್ಕು ನೀರಿನ ಜೀವನಕ್ಕೆ ಅದ್ಭುತವಾಗಿ ಹೊಂದಿಕೊಂಡಿದೆ. ಮಧ್ಯಮ ಗಾತ್ರದ ಈ ಕಾಡು ಬೆಕ್ಕು ತನ್ನದೇ ಪ್ರಭೇದಕ್ಕೆ ಸೇರಿದ ದೊಡ್ಡ ಜಾತಿಯ ಸಂಬಂಧಿ ಪ್ರಾಣಿಗಳ (ಹುಲಿ, ಚಿರತೆ) ನೆರಳಿನಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳದಿದ್ದರೂ, ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿದೆ. ಇದು ಮೀನು, ಏಡಿ ಮತ್ತು ಹಾವಿನಂತಹ ಜೀವಿಗಳನ್ನು ಹಿಡಿಯಲು ಹಳ್ಳಗಳು ಮತ್ತು ಜೌಗು ಪ್ರದೇಶಗಳಲ್ಲಿ ತಲೆಕೆಳಗಾಗಿ ಧುಮುಕುವುದನ್ನು ನೋಡುವುದೇ ಅದ್ಭುತ.

ನೀರಿಗೆ ಹೆದರುವ ಸಾಮಾನ್ಯ ಬೆಕ್ಕುಗಳಿಗಿಂತ ಭಿನ್ನವಾಗಿ, ಈ ಬೆಕ್ಕಿಗೆ ನೀರೆಂದರೆ ಇಷ್ಟ. ಇದು ಬಹಳ ದೂರ ಈಜಬಲ್ಲದು ಮತ್ತು ಬೇಟೆಗಾಗಿ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಬಲ್ಲದು. ವಯಸ್ಕ ಬೆಕ್ಕುಗಳು 14 ಕೆಜಿ ವರೆಗೆ ತೂಕವಿರುತ್ತವೆ. ಇವುಗಳ ಆಲಿವ್-ಬೂದು ಬಣ್ಣದ ತುಪ್ಪಳದ ಮೇಲೆ ಕಪ್ಪು ಚುಕ್ಕೆಗಳು ಮತ್ತು ಪಟ್ಟೆಗಳಿದ್ದು, ಇವು ಜೌಗು ಪ್ರದೇಶದ ಪಾಚಿ ಮತ್ತು ಜೊಂಡುಗಳ ನಡುವೆ ಅಡಗಿಕೊಳ್ಳಲು ಸಹಾಯ ಮಾಡುತ್ತವೆ. ಇವುಗಳ ಗುಪ್ತ ಮತ್ತು ನಿಶಾಚರಿ (ರಾತ್ರಿ ಹೊತ್ತು ಸಂಚರಿಸುವ) ಸ್ವಭಾವವು ಇವುಗಳನ್ನು ಕಾಡಿನ ನಿಗೂಢ ಜೀವಿಯನ್ನಾಗಿ ಮಾಡಿದೆ.


“ನಮ್ಮ ಸಂಶೋಧನೆಗಳು ಬ್ರಹ್ಮಪುತ್ರಾ ನದಿಯ ಪ್ರವಾಹದಿಂದ ಸೃಷ್ಟಿಯಾದ ಬಯಲು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜೌಗು ಪ್ರದೇಶದ ಈ ವಿಶಿಷ್ಟ ಜೀವಿಗೆ ಕಾಜಿರಂಗ ಒಂದು ಪ್ರಮುಖ 'ಆಶ್ರಯ ದಾಣ'ವಾಗಿ ಮಾರ್ಪಟ್ಟಿದೆ," ಎಂದು ಕಾಜಿರಂಗ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ಸೋನಾಲಿ ಘೋಷ್ ಹೇಳುತ್ತಾರೆ.

2010ರಲ್ಲಿ ಪಾರ್ಥ ಡೇ ಅವರೊಂದಿಗೆ 'ಫಿಶಿಂಗ್ ಕ್ಯಾಟ್ ಪ್ರಾಜೆಕ್ಟ್' ಆರಂಭಿಸಿದ ತಿಯಾಸಾ ಅಧ್ಯಾ ಅವರು ಮಾತನಾಡಿ, “ಪ್ರವಾಹದಿಂದ ಉಂಟಾಗುವ ಬದಲಾವಣೆಗಳು ಜೌಗು ಪ್ರದೇಶಗಳಲ್ಲಿ ಹೇಗೆ ಪರಿವರ್ತನೆಯನ್ನು ತರಬಲ್ಲದು ಎಂಬುದನ್ನು ಪತ್ತೆಹಚ್ಚಲು ಈ ಅಧ್ಯಯನವು ಒಂದು ಮೂಲಾಧಾರವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಫಿಶಿಂಗ್ ಕ್ಯಾಟ್ಗಳಿರುವುದು ಕಾಜಿರಂಗದ ಪರಿಸರ ಸಮತೋಲನಕ್ಕೆ ರಕ್ಷಕನಾಗಿ ಕೆಲಸ ಮಾಡುತ್ತದೆ,” ಎಂದು ವಿವರಿಸುತ್ತಾರೆ. ನದಿಯು ಕಾಲಕಾಲಕ್ಕೆ ಜೌಗು ಪ್ರದೇಶಗಳನ್ನು ಪುನರ್ನಿರ್ಮಿಸುವ ಬ್ರಹ್ಮಪುತ್ರಾ ಕಣಿವೆಯ ಈ ವ್ಯವಸ್ಥೆಯು ಜೀವಂತಿಕೆಯಿಂದ ಕೂಡಿದೆ ಎಂದು ಅಧ್ಯಯನವು ಗಮನಿಸಿದೆ.

ಕಟ್ಟುನಿಟ್ಟಾದ ಬೇಟೆ ವಿರೋಧಿ ಕ್ರಮಗಳ ಮೂಲಕ ಅಳಿವಿನ ಅಂಚಿನಲ್ಲಿದ್ದ ಖಡ್ಗಮೃಗಗಳನ್ನು ಉಳಿಸಿ ಬೆಳೆಸುವಲ್ಲಿ ಈ ಉದ್ಯಾನವನವು ಈಗಾಗಲೇ ಯಶಸ್ಸಿನ ಕಥೆಯನ್ನು ಬರೆದಿದೆ. ನೀರು ಬೆಕ್ಕುಗಳ ವಿಷಯಕ್ಕೆ ಬಂದರೆ, ಒಮ್ಮೆ ಮೂಲಸೌಕರ್ಯಗಳಿಗೆ ಹಾನಿ ಮಾಡುತ್ತಿದ್ದ ವಾರ್ಷಿಕ ಪ್ರವಾಹಗಳನ್ನು ಈಗ ನೈಸರ್ಗಿಕ ಮಿತ್ರನನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

ಈ ಪ್ರವಾಹಗಳಿಂದಾಗಿಯೇ ಬೆಕ್ಕುಗಳು ಯಾವುದೇ ಅಡೆತಡೆಯಿಲ್ಲದೆ ಸಂತಾನೋತ್ಪತ್ತಿ ಮಾಡಲು ಮತ್ತು ಬೇಟೆಯಾಡಲು ಸೂಕ್ತವಾದ ಆವಾಸಸ್ಥಾನಗಳನ್ನು ಸೃಷ್ಟಿಸುತ್ತವೆ. ಆದಾಗ್ಯೂ, ಸವಾಲುಗಳು ಹಾಗೆಯೇ ಉಳಿದಿವೆ: ಹವಾಮಾನ ಬದಲಾವಣೆಯು ಪ್ರವಾಹದ ಮಾದರಿಯನ್ನು ಬದಲಿಸಬಹುದು ಮತ್ತು ಸುತ್ತಮುತ್ತಲಿನ ಮಾನವ ಒತ್ತಡಗಳು ನಿರಂತರ ಜಾಗರೂಕತೆಯನ್ನು ಬಯಸುತ್ತವೆ.

ನದಿಯ ದಂಡೆ ಸವೆತ, ಹೂಳು ಶೇಖರಣೆ ಮತ್ತು ಜಲಮೂಲಗಳ ನಿರಂತರ ನಿರ್ಮಾಣ ಹಾಗೂ ಕಣ್ಮರೆಯಾಗುವ ಕಾರಣಗಳಿಂದಾಗಿ ಈ ಪ್ರಭೇದವು ಅವಲಂಬಿಸಿರುವ ಆಳವಿಲ್ಲದ ಜೌಗು ಮತ್ತು ತೇವಾಂಶವುಳ್ಳ ಹುಲ್ಲುಗಾವಲುಗಳನ್ನು ಸೃಷ್ಟಿಸುತ್ತವೆ. ವಾರ್ಷಿಕ ಪ್ರವಾಹ ಮತ್ತು ನಿಯಂತ್ರಿತ ದಹನ ಕ್ರಿಯೆಯಿಂದಾಗಿ ಉದ್ಯಾನವನದ ಸುಮಾರು ಮೂರನೇ ಎರಡರಷ್ಟು ಭಾಗವು ತೇವಾಂಶವುಳ್ಳ ಅಲ್ಯೂವಿಯಲ್ ಹುಲ್ಲುಗಾವಲುಗಳಿಂದ ಆವೃತವಾಗಿದೆ.

ಕಾಜಿರಂಗದ ಕ್ಯಾಟ್‌ಗಳ ಜಾಡು ಹಿಡಿದು

ಮೀನುಗಾರ ಬೆಕ್ಕುಗಳು ಬಹಳ ಹಿಂದಿನಿಂದಲೂ ಹುಲಿಗಳಿಗಾಗಿ ಇರಿಸಲಾದ ಕ್ಯಾಮೆರಾ ಟ್ರ್ಯಾಪ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು, ಆದರೆ ಇಲ್ಲಿಯವರೆಗೆ ಅವುಗಳನ್ನು ಕೇವಲ ಸಾಂದರ್ಭಿಕ ದಾಖಲೆಗಳೆಂದು ಪರಿಗಣಿಸಲಾಗುತ್ತಿತ್ತು. ಈ ಹೊಸ ಮೌಲ್ಯಮಾಪನವು ತಲಾ 2 ಕಿ.ಮೀ ವಿಸ್ತೀರ್ಣದ 856 ಗ್ರಿಡ್ಗಳಲ್ಲಿನ ಫಲಿತಾಂಶಗಳನ್ನು ವಿಶ್ಲೇಷಿಸಲು 'ಸಿಂಗಲ್-ಸೀಸನ್ ಆಕ್ಯುಪೆನ್ಸಿ ಮಾಡೆಲಿಂಗ್' ವಿಧಾನವನ್ನು ಬಳಸಿದೆ. ಸಂಶೋಧಕರು ಎರಡು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮುಂದಾಗಿದ್ದರು: ಕಾಜಿರಂಗದಲ್ಲಿ ʼಫಿಶಿಂಗ್ ಕ್ಯಾಟ್ʼ ಅಪರೂಪವೇ ಅಥವಾ ಸಾಮಾನ್ಯವೇ? ಮತ್ತು ಲಭ್ಯವಿರುವ ದತ್ತಾಂಶದಿಂದ ಎಷ್ಟು ಬೆಕ್ಕುಗಳನ್ನು ಆತ್ಮವಿಶ್ವಾಸದಿಂದ ಗುರುತಿಸಬಹುದು?

ಇದರ ಫಲಿತಾಂಶವಾಗಿ 57 ವಿಶಿಷ್ಟ ಬೆಕ್ಕುಗಳು ಪತ್ತೆಯಾಗಿವೆ, ಆದರೆ ಇದು ನೈಜ ಸಂಖ್ಯೆಗಿಂತ ಕಡಿಮೆ ಇರಬಹುದು. ಏಕೆಂದರೆ ಕ್ಯಾಮೆರಾ ಗ್ರಿಡ್‌ಗಳನ್ನು ಹುಲಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆಯೇ ಹೊರತು ಸಣ್ಣ ಮಾಂಸಾಹಾರಿ ಪ್ರಾಣಿಗಳಿಗಾಗಿ ಅಲ್ಲ.

ಮೀನುಗಾರ ಬೆಕ್ಕುಗಳು ಪತ್ತೆಯಾಗುವ ಸಾಧ್ಯತೆ ಕಡಿಮೆ ಇರುವುದರಿಂದ, ಅವುಗಳು ಅಲ್ಲಿ ಇದ್ದರೂ ಕ್ಯಾಮೆರಾದಲ್ಲಿ ಸೆರೆಯಾಗದೇ ಇರುವ ಸಾಧ್ಯತೆಯಿದೆ. ಆದರೂ, ಈ ಸಂಖ್ಯೆಯು ಪ್ರವಾಹ ಬಯಲು ಪ್ರದೇಶದಾದ್ಯಂತ ಈ ಪ್ರಾಣಿಗಳು ವ್ಯಾಪಕವಾಗಿ ಹರಡಿಕೊಂಡಿವೆ ಮತ್ತು ಸಂತಾನೋತ್ಪತ್ತಿ ಮಾಡುತ್ತಿವೆ ಎಂಬುದು ಮಾತ್ರ ಸತ್ಯ.

ಭವಿಷ್ಯದ ಮೇಲ್ವಿಚಾರಣೆಗೆ ಆಧಾರಬಿಂದು

ರಾಷ್ಟ್ರಮಟ್ಟದಲ್ಲಿ, ಮೀನುಗಾರ ಬೆಕ್ಕುಗಳ ಜನಸಂಖ್ಯೆಯು ತಗ್ಗು ಪ್ರದೇಶದ ನದಿ ತೀರಗಳು ಮತ್ತು ಮುಖಜ ಭೂಮಿಯ ವ್ಯವಸ್ಥೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಇತ್ತೀಚಿನ IUCN ಕೆಂಪು ಪಟ್ಟಿಯ ಮೌಲ್ಯಮಾಪನಗಳ ಪ್ರಕಾರ:

ಸುಂದರಬನ್ ಹುಲಿ ಸಂರಕ್ಷಿತ ಪ್ರದೇಶ: ಅಂದಾಜು 385 ಬೆಕ್ಕುಗಳು.

ಒಡಿಶಾದ ಚಿಲ್ಕಾ ಸರೋವರ: ಸುಮಾರು 341 ಬೆಕ್ಕುಗಳು.

ಭಿತರ್ಕನಿಕಾ: 83-115 ಬೆಕ್ಕುಗಳು.

ಸಿಹಿನೀರಿನ ಭೂದೃಶ್ಯಗಳಲ್ಲಿ ಇವುಗಳ ಸಂಖ್ಯೆ ಸಾಮಾನ್ಯವಾಗಿ ಕಡಿಮೆ ಇರುತ್ತದೆ:

ದುಧ್ವಾ-ಕಿಶನ್ಪುರ: 35-51.

ಪಿಲಿಭಿತ್: 14-17.

ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶ: 6-7.

2026 ರಲ್ಲಿ ದಾಖಲಾದ 57 ಬೆಕ್ಕುಗಳೊಂದಿಗೆ, ಈ ಪ್ರಭೇದಗಳಿಗೆ ಕಾಜಿರಂಗ ಉದ್ಯಾನವನವು ಈಗ ಭಾರತದಲ್ಲಿ ಪ್ರಮುಖ ಸಿಹಿನೀರಿನ ಭದ್ರಕೋಟೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. 856 ಗ್ರಿಡ್ಗಳ ಉದ್ದಕ್ಕೂ ನಡೆಸಲಾದ ಸಮೀಕ್ಷೆಗಳ ಪ್ರಕಾರ ಇವು ವ್ಯಾಪಕವಾಗಿ ಹರಡಿರುವುದು ಕಂಡುಬರುತ್ತವೆ. ವಿಶೇಷವಾಗಿ ಜೌಗು ಪ್ರದೇಶಗಳು ಹೆಚ್ಚಿರುವ ವಲಯಗಳಲ್ಲಿ ಇವುಗಳ ಸಾಂದ್ರತೆಯೂ ಹೆಚ್ಚಿದೆ.


ಸಂಶೋಧಕರು 25 ಸ್ಥಳಗಳ ಪೈಕಿ 12 ಕಡೆಗಳಲ್ಲಿ ದೃಶ್ಯಗಳನ್ನು ಮರುದಾಖಲಿಸಿದ್ದು ಇದರಲ್ಲಿ ಕೆಲವು ಪತ್ತೆಯಾದ ಸ್ಥಳದಿಂದ ಸುಮಾರು 20 ಕಿ.ಮೀ.ಗೂ ಹೆಚ್ಚು ದೂರ ಚಲಿಸಿರುವುದು ಕಾಣುತ್ತದೆ. ಇದನ್ನು ಗಮನಿಸಿದರೆ ಈ ನೀರು ಬೆಕ್ಕುಗಳು ಇಷ್ಟೊಂದು ದೂರ ಸಂಚಾರದ ಮೂಲಕ ಈ ಪ್ರದೇಶದಾದ್ಯಂತ ಇರುವ ನಾನಾ ಜೌಗು ಪ್ರದೇಶಗಳನ್ನು ಬಳಸಿಕೊಳ್ಳುತ್ತವೆ ಎಂಬುದು ಸಾಬೀತಾಗುತ್ತದೆ. ಆಗಾಗ ಪ್ರವಾಹಕ್ಕೆ ಒಳಗಾಗುವ ಈ ಬೃಹತ್ ಕಾನನದಲ್ಲಿ ಪ್ರಾಣಿಗಳ ಸಂಚಾರ ಅಥವಾ ವಲಸೆ ಸಾಮಾನ್ಯ ವಿದ್ಯಮಾನ. ಅದು ನಿರ್ಣಾಯಕವೂ ಹೌದು. ಪ್ರವಾಹ ಜೋರಾಗಿದ್ದಾಗ ಪ್ರಾಣಿಗಳು ಎತ್ತರದ ಪ್ರದೇಶದಲ್ಲಿ ಅಥವಾ ಕಾಡುಗಳಲ್ಲಿ ಆಶ್ರಯ ಪಡೆಯುತ್ತವೆ. ನೀರು ಇಳಿಯುತ್ತಿದ್ದಂತೆ ಪ್ರಾಣಿಗಳೂ ಬೆಟ್ಟವಿಳಿದು ಬರುತ್ತವೆ ಮತ್ತು ಜೌಗು ಪ್ರದೇಶದಲ್ಲಿ ಆಶ್ರಯಪಡೆಯುತ್ತವೆ.

ಸಂರಕ್ಷಿತ ಪ್ರದೇಶಗಳ ಹೊರಗೆ, ಬ್ರಹ್ಮಪುತ್ರಾ ನದಿ ಪಾತ್ರದ ಪ್ರವಾಹ ಪೀಡಿತ ಪ್ರದೇಶಗಳು ತೀವ್ರ ಒತ್ತಡವನ್ನು ಎದುರಿಸುತ್ತಿವೆ. ಅದಕ್ಕೆ ನದಿಯ ಏರಿಳಿತಗಳು, ಅಣೆಕಟ್ಟು/ಬದುಗಳ ನಿರ್ಮಾಣ, ಮರಳು ಗಣಿಗಾರಿಕೆ, ಮೂಲಸೌಕರ್ಯ ವಿಸ್ತರಣೆ ಕಾರಣ. ಜೊತೆಗೆ ಬದಲಾದ ನದಿಯ ಗತಿಶೀಲತೆಯಿಂದಾಗಿ ಹವಾಮಾನ ವೈವಿಧ್ಯತೆಯು ಪ್ರವಾಹದ ತೀವ್ರತೆ ಮತ್ತು ಅವಧಿಯ ಮೇಲೆ ಪ್ರಭಾವ ಬೀರುತ್ತಿದೆ. "ಹವಾಮಾನ ಬದಲಾವಣೆ ಮತ್ತು ನದಿ ಮಾರ್ಪಾಡುಗಳು ಸಿಹಿನೀರಿನ ಜೀವವೈವಿಧ್ಯದ ಮೇಲೆ ಪರಿಣಾಮ ಬೀರುತ್ತಿರುವ ಈ ಸಮಯದಲ್ಲಿ, ಮೀನು ಹಿಡಿಯುವ ಬೆಕ್ಕುಗಳಂತಹ ಜೌಗು ಪ್ರದೇಶದ ಮಾಂಸಾಹಾರಿಗಳನ್ನು ಪತ್ತೆಹಚ್ಚುವುದು ಅತ್ಯಗತ್ಯ" ಎಂದು IUCN SSC ಸಿಹಿನೀರು ಸಂರಕ್ಷಣಾ ಸಮಿತಿಯ ಸಹ-ಅಧ್ಯಕ್ಷರಾದ ಇಯಾನ್ ಹ್ಯಾರಿಸನ್ ಹೇಳುತ್ತಾರೆ.

ಈ ಬೆಕ್ಕುಗಳ ಉಪಸ್ಥಿತಿಯು ಜೌಗು ಪ್ರದೇಶಗಳು ಬಹುತೇಕ ಸುಸ್ಥಿತಿಯಲ್ಲಿವೆ ಎಂಬುದರ ಸೂಚನೆ. ಕಾಜಿರಂಗದ ಜೌಗು ಪ್ರದೇಶಗಳು ಮತ್ತು 'ಬೀಲ್ಗಳು' ಇಂದಿಗೂ ಫಲವತ್ತಾಗಿವೆ ಎಂಬುದಕ್ಕೆ ಇವುಗಳ ಗಣನೀಯ ಸಂಖ್ಯೆಯೇ ಸಾಕ್ಷಿ.

ಆದರೆ, ಜಲವಿಜ್ಞಾನದಲ್ಲಿ ಆಗುವ ಯಾವುದೇ ದೀರ್ಘಕಾಲೀನ ಬದಲಾವಣೆಗಳು ಈ ಪ್ರಾಣಿಗಳ ವಾಸಸ್ಥಾನದ ಸೂಕ್ತತೆಯನ್ನು ಬದಲಾಯಿಸಿ ಬಿಡಬಹುದು. 2026ರಲ್ಲಿ ಮೂಲಭೂತ ಹಂಚಿಕೆ ನಕ್ಷೆಯನ್ನು ಸ್ಥಾಪಿಸುವ ಮೂಲಕ, ಈ ಅಧ್ಯಯನವು ಭವಿಷ್ಯದ ಮೇಲ್ವಿಚಾರಣೆಗಾಗಿ ಒಂದು ಉಲ್ಲೇಖದ ಚೌಕಟ್ಟನ್ನು ಸಿದ್ಧಪಡಿಸಿದೆ. ಅಸ್ಸಾಂನಾದ್ಯಂತ ನದಿ ನಿರ್ವಹಣೆ ಮತ್ತು ಪ್ರವಾಹ ನಿಯಂತ್ರಣದ ಬಗ್ಗೆ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಈ ಮೌಲ್ಯಮಾಪನವು ಒಂದು ವಿಶಾಲವಾದ ಪರಿಸರ ವಾಸ್ತವವನ್ನು ಎತ್ತಿ ತೋರಿಸುತ್ತದೆ: ಅಂದರೆ, ಆರೋಗ್ಯಕರ ಜೌಗು ಪ್ರದೇಶಗಳ ಮೇಲೆ ನೇರವಾಗಿ ಅವಲಂಬಿತವಾಗಿರುವ ಪ್ರಭೇದಗಳನ್ನು ಪ್ರವಾಹ ಪೀಡಿತ ಪ್ರದೇಶಗಳು ಪೋಷಿಸುತ್ತವೆ. ಕಾಜಿರಂಗದ ಈ 'ಮೀನುಗಾರ' ಬೆಕ್ಕುಗಳ ಭವಿಷ್ಯವು ಆ ಜೌಗು ಪ್ರದೇಶಗಳು ಎಷ್ಟು ಕಾಲ ಸುಸ್ಥಿರವಾಗಿ ಉಳಿಯುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ.

Next Story