
ಗಗನಚುಂಬಿ ಮರ ಏರುವ ‘ಬೈದ್ಯ’ರು ಇಂದು ಸುಶಿಕ್ಷಿತರು; ಅಳಿವಿನಂಚಿನಲ್ಲಿ ತುಳುನಾಡಿನ ʻಮೂರ್ತೆʼ
ಸೂರ್ಯೋದಯಕ್ಕೂ ಮುನ್ನ ಇಳಿಸುವ ತಾಜಾ 'ಶೇಂದಿ' ದೇಹಕ್ಕೆ ತಂಪು ನೀಡುತ್ತದೆ. ಉಷ್ಣ ಶರೀರ ಇರುವವರಿಗೆ ಮತ್ತು ಹೊಟ್ಟೆಯುರಿ ಸಮಸ್ಯೆಯಿಂದ ಬಳಲುವವರಿಗೆ ಇದು ರಾಮಬಾಣವಾಗಿತ್ತು.
ಸೊಂಟಕ್ಕೆ ತಾರ್ಕತ್ತಿ(ಕತ್ತಿ), ತೊಡಂಕು ಮತ್ತು ಕುಜುಲಿ(ಮಣ್ಣಿನ ಗಡಿಗೆ) ಕಟ್ಟಿಕೊಂಡು ಸುಮಾರು 50ರಿಂದ 100ಅಡಿ ಎತ್ತರ ತಾಳೆ ಮರ ಏರುವ ನುರಿತ ಕಲೆ… ಸುಮಾರು 30 ವರ್ಷಗಳ ಹಿಂದೆ ತುಳುನಾಡು ಅಥವಾ ಕರಾವಳಿ ಭಾಗಗಳಲ್ಲಿ ಕಂಡು ಬರುತ್ತಿದ್ದ ಸರ್ವೇ ಸಾಮಾನ್ಯ ದೃಶ್ಯವಿದು. ಭಾರತದ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಕೃಷಿಯಷ್ಟೇ ಹಳೆಯದಾದ ಮತ್ತು ಶ್ರಮದಾಯಕವಾದ ಕಸುಬು ಎಂದರೆ ಅದು ಶೇಂದಿ ಇಳಿಸುವ ವೃತ್ತಿ ಅಥವಾ ಮೂರ್ತೆದಾರಿಕೆ. ಮಣ್ಣಿನ ವಾಸನೆ ಮತ್ತು ಪ್ರಕೃತಿಯ ಸಹಜ ಸಂಪನ್ಮೂಲಗಳನ್ನು ಆಧರಿಸಿರುವ ಈ ಕಸುಬು, ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ.
ಸೂರ್ಯೋದಯಕ್ಕೂ ಮುನ್ನವೇ ಬರಿಗೈಯಲ್ಲಿ ಗಗನಚುಂಬಿ ಮರಗಳನ್ನು ಏರಿ, ಮರದ ಹನಿಗಳನ್ನು ಗಡಿಗೆಯಲ್ಲಿ ಸಂಗ್ರಹಿಸುವ ಈ ಕಲೆ ಕೇವಲ ಒಂದು ವ್ಯಾಪಾರವಲ್ಲ; ಇದು ತಲೆಮಾರುಗಳಿಂದ ಹರಿದು ಬಂದಿರುವ ಒಂದು ಜೀವನಪದ್ಧತಿ. ಮೈ ಜಿನುಗುವ ಬೆವರು, ಅಪಾಯದ ಅರಿವಿದ್ದರೂ ಮರ ಏರುವ ಧೈರ್ಯ ಮತ್ತು ಪ್ರಕೃತಿಯ ಮೇಲೆ ಇಟ್ಟಿರುವ ಅಚಲ ನಂಬಿಕೆ ಈ ಕಸುಬಿನ ಮೂಲಾಧಾರವಾಗಿದೆ. ಆಧುನಿಕತೆಯ ಅಬ್ಬರದ ನಡುವೆಯೂ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಈ ಪಾರಂಪರಿಕ ವೃತ್ತಿಯು ಮನುಷ್ಯ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ.
ಮೂರ್ತೆಗಿದೆ ಅತ್ಯದ್ಬುತ ಐತಿಹ್ಯ
ಪುರಾಣಗಳ ಪ್ರಕಾರ, ಮೂರ್ತೆದಾರಿಕೆ ಕಸುಬು ಪ್ರಕೃತಿ ಆರಾಧನೆಯೊಂದಿಗೆ ಬೆಸೆದುಕೊಂಡಿದೆ. ಅಂದರೆ, ಮರಕ್ಕೆ ಗಾಯ ಮಾಡದೆ, ಸರಿಯಾದ ಸಮಯದಲ್ಲಿ (ಮುಹೂರ್ತದಲ್ಲಿ) ಅದರ ಸಾರವನ್ನು ತೆಗೆಯುವ ಕಲೆ ಇದಾಗಿತ್ತು. ಈಗಲೂ ಕೂಡ ಮೊದಲ ಬಾರಿಗೆ ಶೇಂದಿ ಇಳಿಸಲು ಮರ ಏರುವ ಮೂರ್ತೆದಾರ ದೈವ-ದೇವರ ಎದುರು ತನ್ನ ತಾರ್ಕತ್ತಿ, ತೊಡಂಕು ಇನ್ನಿತರ ಸಾಧನಗಳನ್ನು ಇಟ್ಟು ಭಕ್ತಿಯಿಂದ ಪ್ರಾರ್ಥಿಸುತ್ತಾನೆ. ಪ್ರತಿನಿತ್ಯ ಮರ ಏರುವ ಮುನ್ನ ಮರಕ್ಕೆ ನಮಿಸಿ ತನ್ನ ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಾನೆ.
ಕೋಟಿ-ಚೆನ್ನಯ್ಯರ ಪಾಡ್ದನಗಳಲ್ಲಿ ಇದರ ಸ್ಪಷ್ಟ ಚಿತ್ರಣವಿದೆ. ಆ ಕಾಲದಲ್ಲಿ ಮೂರ್ತೆದಾರರು ಕೇವಲ ಕಸುಬುದಾರರಲ್ಲ, ಅವರು ಗ್ರಾಮದ ರಕ್ಷಕರು ಮತ್ತು ಆಯುರ್ವೇದ ಪಂಡಿತರೂ ಆಗಿದ್ದರು. ಮರ ಹತ್ತುವ ಮೂಲಕ ಅವರು ಪಡೆಯುತ್ತಿದ್ದ ದೈಹಿಕ ಬಲವು ಅವರನ್ನು ಯುದ್ಧಕಲೆಗಳಲ್ಲೂ (ಗರೋಡಿ) ನಿಷ್ಣಾತರನ್ನಾಗಿ ಮಾಡಿತ್ತು. ಪಾಡ್ದನದಲ್ಲಿ ಕೋಟಿ-ಚೆನ್ನಯ್ಯರು ಮೂರ್ತೆ ಇಳಿಸಲು ಬಳಸುವ ಪರಿಕರಗಳಾದ 'ಏಣಿ' ಮತ್ತು ಸೊಂಟಕ್ಕೆ ಕಟ್ಟುವ 'ಮುಟ್ಟು' (ಪರಿಕರಗಳ ಚೀಲ) ಬಗ್ಗೆ ವಿವರವಾದ ವರ್ಣನೆ ಇದೆ. ಮರ ಹತ್ತುವಾಗ ಅವರು ತೋರುವ ಚಾಕಚಕ್ಯತೆ ಅವರ ದೈಹಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಶೇಂದಿ ಇಳಿಸುವ ಪ್ರಕ್ರಿಯೆ(ಸಂಗ್ರಹ ಚಿತ್ರ)
ಶೇಂದಿ ಮದ್ಯವಲ್ಲ, ಅದೊಂದು ನೈಸರ್ಗಿಕ ಔಷಧ
ಕರಾವಳಿ ಭಾಗದಲ್ಲಿ ಬಿಲ್ಲವ ಅಥವಾ ಈಡಿಗ ಸಮುದಾಯಕ್ಕೆ ಸೇರಿದವರ ಮೂಲ ಕಸುಬು ಇದು. ಆದರೆ ಶೇಂದಿ ಕಸುಬಿನ ಮೂಲ ಉದ್ದೇಶ ಕೇವಲ ಮದ್ಯಪಾನವಾಗಿರಲಿಲ್ಲ. ಹಳೆಯ ಕಾಲದಲ್ಲಿ ಹಿರಿಯರು ಇದನ್ನು ನಾಟಿ ಔಷಧದ ದೃಷ್ಟಿಯಿಂದ ಮತ್ತು ದೇಹದ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಳಸುತ್ತಿದ್ದರು. ಅದರ ಮೂಲ ಉದ್ದೇಶ ಅಷ್ಟೇ ಆಗಿತ್ತು.
“ಸೂರ್ಯೋದಯಕ್ಕೂ ಮುನ್ನ ಇಳಿಸುವ ತಾಜಾ 'ಶೇಂದಿ' ದೇಹಕ್ಕೆ ತಂಪು ನೀಡುತ್ತದೆ. ಉಷ್ಣ ಶರೀರ ಇರುವವರಿಗೆ ಮತ್ತು ಹೊಟ್ಟೆಯುರಿ ಸಮಸ್ಯೆಯಿಂದ ಬಳಲುವವರಿಗೆ ಇದು ರಾಮಬಾಣವಾಗಿತ್ತು. ಇದರಲ್ಲಿ ನೈಸರ್ಗಿಕವಾದ ಕಿಣ್ವಗಳು ಇರುವುದರಿಂದ ಜೀರ್ಣಶಕ್ತಿ ಹೆಚ್ಚಿಸಲು ಇದನ್ನು ಬಳಸಲಾಗುತ್ತಿತ್ತು.
ಮೂತ್ರಪಿಂಡದ ಸಮಸ್ಯೆ ಅಥವಾ ಕಿಡ್ನಿಯಲ್ಲಿ ಕಲ್ಲು ಇರುವವರಿಗೆ ಹಳೆಯ ಕಾಲದ ನಾಟಿ ವೈದ್ಯರು ಶೇಂದಿಯನ್ನು ಕುಡಿಯಲು ಸಲಹೆ ನೀಡುತ್ತಿದ್ದರು. ಈಗ ಪರಿಶುದ್ಧ ಶೇಂದಿ ಸಿಗುವುದೇ ಅಪರೂಪವಾಗಿರುವ ಕಾರಣ ಆ ಪದ್ಧತಿ ಚಾಲ್ತಿಯಲ್ಲಿಲ್ಲ” ಎಂದು ಹೇಳುತ್ತಾರೆ ಮುರ ಗ್ರಾಮದ ನಾಟಿ ವೈದ್ಯರಾಗಿರುವ ಮರಕೂರು ಗ್ರಾಮದ ನಾರ್ಣಪ್ಪ ಸಾಲಿಯಾನ್.
ದೈವದ ಉಪಾಸನೆಗೂ ಬೇಕು ಶೇಂದಿ
ತುಳುನಾಡಿನಲ್ಲಿ ದೇವರಷ್ಟೇ ಪ್ರಾಮುಖ್ಯತೆ ಪಡೆದ ಮತ್ತೊಂದು ಸಂಗತಿ ದೈವಗಳು. ಈ ದೈವಗಳ ಉಪಾಸನೆಯ ವೇಳೆ ಶೇಂದಿ ಬೇಕೇ ಬೇಕು. ಶೇಂದಿ ಕೇವಲ ಔಷಧಕ್ಕೆ ಮಾತ್ರವಲ್ಲ ಬದಲಾಗಿ ದೈವದ ಉಪಾಸನೆಗೂ ಬೇಕಾಗಿತ್ತು ಮತ್ತು ಈಗಲೂ ಬೇಕಾಗಿದೆ. ತುಳುನಾಡಿನ ದೈವಾರಾಧನೆ ಅಥವಾ 'ನೇಮ-ಕೋಲ'ಗಳಲ್ಲಿ ಶೇಂದಿಗೆ ಅತ್ಯುನ್ನತ ಸ್ಥಾನವಿದೆ. ಇಲ್ಲಿ ಶೇಂದಿ ಕೇವಲ ಅಮಲೇರಿಸುವ ವಸ್ತುವಲ್ಲ, ಬದಲಾಗಿ ದೈವಕ್ಕೆ ಅರ್ಪಿಸುವ ಪವಿತ್ರ ನೈವೇದ್ಯ.
ಈ ಬಗ್ಗೆ ದೈವಾರಾಧಕರಾಗಿರುವ ಪುತ್ತೂರಿನ ಪ್ರಜ್ವಲ್ ರೈ ಮಾತನಾಡಿದ್ದು, “ತುಳುನಾಡಿನ ಕಾರ್ಣಿಕದ ದೈವಗಳಾದ ಕೋಟಿ-ಚೆನ್ನಯ, ಪಂಜುರ್ಲಿ, ಜುಮಾದಿ, ಬಬ್ಬುಸ್ವಾಮಿ ಸೇರಿದಂತೆ ಅನೇಕ ದೈವಗಳ ನೇಮೋತ್ಸವದ ಸಂದರ್ಭದಲ್ಲಿ ಶೇಂದಿ ಅತ್ಯಗತ್ಯ. ದೈವದ ಮುಂದೆ 'ಬಲಸುವ' (ಬಡಿಸುವ) ಸಂದರ್ಭದಲ್ಲಿ ಮಾಂಸಾಹಾರದ ಜೊತೆಗೆ ಶೇಂದಿಯನ್ನು ಅರ್ಪಿಸುವುದು ಅನಾದಿಕಾಲದಿಂದ ನಡೆದುಬಂದ ಸಂಪ್ರದಾಯ. ದೈವದ ಕೋಲಕ್ಕೆ ಶೇಂದಿ ನೀಡುವವರು ಅತ್ಯಂತ ಭಕ್ತಿ ಮತ್ತು ಶಿಸ್ತಿನಿಂದ ಇರಬೇಕಾಗುತ್ತದೆ. ಮರ ಹತ್ತುವವರು ಮಡಿಯಿಂದಿದ್ದು, ದೈವದ ಹೆಸರಿನಲ್ಲಿ ತೆಗೆದ ಮೊದಲ ಪಾಲನ್ನು ಪವಿತ್ರವೆಂದು ಭಾವಿಸಿ ದೈವಸ್ಥಾನಕ್ಕೆ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಆ ಕಾರ್ಯಕ್ಕೂ ಶೇಂದಿ ಸಿಗದಂತಹ ಸ್ಥಿತಿ ಇದೆ. ಹೀಗಾಗಿ ಓಲೆ ಬೆಲ್ಲವನ್ನು ನೀರಿನಲ್ಲಿ ಕಲಕಿ ಇಡಲಾಗುತ್ತದೆ” ಎಂದಿದ್ದಾರೆ.
ಸಂಗ್ರಹಿಸಲಾದ ಶೇಂದಿ(ಸಂಗ್ರಹ ಚಿತ್ರ)
ಶೇಂದಿ ಇಳಿಸುವುದೇ ವೃತ್ತಿಯಾಗಿ ಬದಲಾಯ್ತು
ಶೇಂದಿ ಇಳಿಸುವ ಕಸುಬು ಮಾಡುವ ಬಿಲ್ಲವ ಸಮುದಾಯದ ಮೂಲದ ವೃತ್ತಿ ಇದಾಗಿರಲಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಬೇರೆ ವಿಧಿಯಿಲ್ಲದೇ ಬಿಲ್ಲವ ಸಮುದಾಯ ಅದನ್ನೇ ವೃತ್ತಿಯನ್ನಾಗಿ ಅಳವಡಿಸಿಕೊಂಡಿತು. ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನಲ್ಲಿರುವ ಗೆಜ್ಜೆಗಿರಿ ಪುಣ್ಯಕ್ಷೇತ್ರದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, “ಬಿಲ್ಲವ ಸಮಾಜದ ಈ ಮೂರ್ತೆ ಕಟ್ಟುವುದು ಅಥವಾ ಶೇಂದಿ ಇಳಿಸುತ್ತಾದರೂ ಅದು ಅದ ಜೀವನೋಪಾಯದ ಕಸುಬು ಆಗಿರಲಿಲ್ಲ. ಬಿಲ್ಲವರನ್ನು ತುಳುನಾಡಿನಲ್ಲಿ ʻಬೈದ್ಯೆರ್ʼ ಎಂದು ಕರೆಯುತ್ತಾರೆ.
ಬೈದ್ಯೆ ಅಂದರೆ ವೈದ್ಯ ಎಂದರ್ಥ. ಅಂದರೆ ಅವರು ನಾಟಿ ಔಷಧಿಗಳನ್ನು ಕೊಡುವುದರಲ್ಲಿ ಪರಿಣತರು. ಹೀಗಾಗಿ ಈ ನಾಟಿ ಔಷಧಿಗಳ ತಯಾರಿಕೆಗೆ ಬೇಕಾಗಿದಿದ್ದು ಈ ಶೇಂದಿ. ಆ ಒಂದು ಉದ್ದೇಶದಿಂದಾಗಿಯೇ ಶೇಂದಿ ಇಳಿಸುವ ಕಾರ್ಯ ನಡೆಯುತ್ತಿತ್ತು. ಬರು ಬರುತ್ತಾ ಮೇಲ್ವರ್ಗದವರ ದಬ್ಬಾಳಿಕೆ ಅಥವಾ ಬ್ರಿಟೀಷರು ಆಡಳಿತ ಆರಂಭವಾದ ನಂತರ ಈ ವೈದ್ಯ ವೃತ್ತಿಗೆ ವಿರೋಧ ವ್ಯಕ್ತವಾಗಿತ್ತು. ಈ ವೃತ್ತಿಯನ್ನು ಮಾಡದಂತೆ ನಿರ್ಬಂಧಗಳು ಹೇರಲಾಯಿತು. ಕೊನೆಗೆ ವಿಧಿಯಿಲ್ಲದೇ ಈ ಸಮುದಾಯ ಬದುಕು ಸಾಗಿಸಲು ಮೊರೆ ಹೋಗಿದ್ದು ಮೂರ್ತೆದಾರಿಕೆ ಕಡೆಗೆ. ಕೊನೆಗೆ ಅದುವೇ ಅವರ ಕುಲ ಕಸುಬು ಎಂಬಂತಾಯಿತು” ಎನ್ನುತ್ತಾರೆ.
ವೃತ್ತಿಗೆ ಅಂಟಿಕೊಂಡ ಸಾಮಾಜಿಕ ಕಳಂಕ
“ಶೇಂದಿ ಇಳಿಸುವ ವೃತ್ತಿಯು ಕೇವಲ ಆರ್ಥಿಕ ಚಟುವಟಿಕೆಯಾಗಿರದೆ, ಬರು ಬರುತ್ತಾ ಅದು ಹೇಗೆ ಸಮಾಜದ ಕೆಳಹಂತದ ಮಹಿಳೆಯರ ಮೇಲಿನ ಶೋಷಣೆಗೆ ಕಾರಣವಾಯಿತು. ಪುರುಷರು ಮರ ಹತ್ತಿ ಶೇಂದಿ ಇಳಿಸಿದರೆ, ಮಹಿಳೆಯರು ಅದನ್ನು ಮಾರಾಟ ಮಾಡುವ ಅಥವಾ ಶೇಖರಿಸುವ ಕೆಲಸದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದರು. ಅಲ್ಲಿ ಕೆಲಸ ಮಾಡುವ ಮಹಿಳೆಯರು ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಸುಲಭವಾಗಿ ತುತ್ತಾಗುತ್ತಿದ್ದರು” ಎಂದು ಹೇಳುತ್ತಾರೆ ಉಲ್ಲಾಸ್ ಕೋಟ್ಯಾನ್.
“ಶೇಂದಿ ಅಥವಾ ಮದ್ಯದ ವ್ಯವಹಾರಕ್ಕೆ ಸಂಬಂಧಿಸಿದ ವೃತ್ತಿಯಲ್ಲಿ ತೊಡಗಿಕೊಂಡ ಮಹಿಳೆಯರನ್ನು ಸಮಾಜವು ಗೌರವದಿಂದ ನೋಡುತ್ತಿರಲಿಲ್ಲ. ಈ ಸಾಮಾಜಿಕ ಕಳಂಕವೇ ಅವರನ್ನು ಅಸಹಾಯಕರನ್ನಾಗಿ ಮಾಡಿ, ಇತರರಿಂದ ಶೋಷಣೆಗೆ ಒಳಗಾಗುವಂತೆ ಮಾಡಿತು. ಶೇಂದಿ ಮಾರಾಟ ಮಾಡುವ ಸ್ಥಳಗಳಲ್ಲಿ ಮದ್ಯಪಾನ ಮಾಡಿ ವಿವೇಚನೆ ಕಳೆದುಕೊಂಡ ವ್ಯಕ್ತಿಗಳಿಂದ ಮಹಿಳೆಯರು ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳವನ್ನು ಅನುಭವಿಸಬೇಕಾದ ಪರಿಸ್ಥಿತಿ ಇತ್ತು. ಇದನ್ನು ತಡೆಯುವ ಕಾನೂನು ರಕ್ಷಣೆ ಕೂಡ ಅಂದು ಅವರಿಗೆ ಅಷ್ಟಾಗಿ ಸಿಗುತ್ತಿರಲಿಲ್ಲ. ಹೀಗೆ ಮೂರ್ತೆದಾರಿಕೆ ಎಂಬ ಪವಿತ್ರವಾದ ಕಾರ್ಯಕ್ಕೆ ಇಂತಹ ಸಾಮಾಜಿಕ ಕಳಂಕ ಅಂಟಿಕೊಂಡಿತ್ತು” ಎಂಬುದು ಅವರ ಅಭಿಪ್ರಾಯ.
ಇಡ್ಲಿಗೂ ಬೇಕು ಶೇಂದಿ
ನಮ್ಮ ಆಹಾರ ಪದ್ಧತಿಯಲ್ಲಿ ಕಾಲಕ್ಕೆ ತಕ್ಕಂತೆ ಅನೇಕ ಬದಲಾವಣೆಗಳಾಗಿವೆ. ಹಿಂದೆ ಇಡ್ಲಿ ಹುದುಗು ಮತ್ತು ಮೃದುವಾಗಲು ನೈಸರ್ಗಿಕವಾಗಿ ಸಿಗುತ್ತಿದ್ದ 'ಶೇಂದಿ'ಯನ್ನು ಬಳಸಲಾಗುತ್ತಿತ್ತು. ಇದು ಇಡ್ಲಿಗೆ ವಿಶಿಷ್ಟ ರುಚಿ ಮತ್ತು ಆರೋಗ್ಯಕರ ಗುಣಗಳನ್ನು ನೀಡುತ್ತಿತ್ತು. ಆದರೆ ಇಂದು ಅದರ ಜಾಗವನ್ನು ರಾಸಾಯನಿಕಯುಕ್ತ ಯೀಸ್ಟ್ ಆಕ್ರಮಿಸಿಕೊಂಡಿದೆ.
ಔಷಧೀಯ ಗುಣಗಳಿರುವ ಅಪರೂಪದ ಓಲೆ ಬೆಲ್ಲ
ಅಷ್ಟೇ ಅಲ್ಲದೆ, ಶೇಂದಿಯಿಂದ ತಯಾರಿಸಲಾಗುತ್ತಿದ್ದ 'ಓಲೆ ಬೆಲ್ಲ' (Palm Jaggery) ಇಂದು ಬಹಳ ಅಪರೂಪವಾಗುತ್ತಿದೆ. ಓಲೆ ಬೆಲ್ಲದ ವಿಶೇಷತೆ ಎಂದರೆ ಶೇಂದಿ ಅಥವಾ ತಾಳೆ ಮರದ ಹಾಲಿನಿಂದ ತಯಾರಿಸುವ ಓಲೆ ಬೆಲ್ಲ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಕಬ್ಬಿಣದ ಅಂಶ ಮತ್ತು ಖನಿಜಗಳು ಹೇರಳವಾಗಿರುತ್ತವೆ. ಇಂದಿನ ವೇಗದ ಬದುಕಿನಲ್ಲಿ ನೈಸರ್ಗಿಕ ಪದ್ಧತಿಗಳು ಮರೆಯಾಗಿ, ಸುಲಭವಾಗಿ ಸಿಗುವ ಯೀಸ್ಟ್ ಮತ್ತು ಸಕ್ಕರೆ ಮಿಶ್ರಿತ ಬೆಲ್ಲಗಳು ಮಾರುಕಟ್ಟೆಯನ್ನು ಆವರಿಸಿವೆ. ಈ ಬೆಲ್ಲವನ್ನು ಬಾಣಂತಿಯರಿಗೆ ಮನೆಯಲ್ಲೇ ಕೊಡುವ ಮದ್ದಿನಲ್ಲೂ ಬಳಸಲಾಗುತ್ತದೆ.
ಈ ಬಗ್ಗೆ ಪುತ್ತೂರು ತಾಲೂಕಿನ 83ವರ್ಷದ ಮೀನಾಕ್ಷಿ.ಕೆ ಅವರು ಮಾಹಿತಿ ನೀಡಿದ್ದು, “ಬಾಣಂತಿಯರಿಗೆ ನೀಡುವ 'ಬಾಣಂತಿ ಮದ್ದು' ಕೇವಲ ಆಹಾರವಲ್ಲ, ಅದು ದೇಹವನ್ನು ಪುನಶ್ಚೇತನಗೊಳಿಸುವ ಒಂದು ಔಷಧೀಯ ಪದ್ಧತಿ. ಇದನ್ನು ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಭಾಗಗಳಲ್ಲಿ ಇಂದಿಗೂ ಬಹಳ ಶ್ರದ್ಧೆಯಿಂದ ಪಾಲಿಸಲಾಗುತ್ತದೆ. ಈ ಮದ್ದಿಗೆ ಓಲೆ ಬೆಲ್ಲ ಬೇಕೇ ಬೇಕು. ಒಂದು ಕಟ್ಟು ಓಲೆ ಬೆಲ್ಲ ತಯಾರಿಸಲು 10ಲೀಟರ್ ಶೇಂದಿ ಬೇಕು. ಇತ್ತೀಚಿನ ವರ್ಷಗಳಲ್ಲಿ ಶೇಂದಿ ಸಿಗುತ್ತಿರುವ ಪ್ರಮಾಣ ಕಡಿಮೆಯಾಗಿದ್ದು, ಬಾಣಂತಿಯರ ಮದ್ದಿಗೂ ಬೆಲ್ಲ ಸಿಗದಂತಾಗಿದೆ” ಎಂದು ತಿಳಿಸಿದ್ದಾರೆ.
ಶೇಂದಿ ನಿಷೇಧ ಮಾಡಿತ್ತು ಕರ್ನಾಟಕ ಸರ್ಕಾರ
1989-90ರ ಅವಧಿಯಲ್ಲಿ ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದಾಗ, ರಾಜ್ಯದಲ್ಲಿ ಮದ್ಯಪಾನದಿಂದ ಹದಗೆಡುತ್ತಿದ್ದ ಬಡವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಶೇಂದಿ ಮಾರಾಟದ ಮೇಲೆ ನಿಷೇಧ ಹೇರಲು ಮುಂದಾದರು. “ವೀರೇಂದ್ರ ಪಾಟೀಲ್ ಮದ್ಯಪಾನದ ಚಟದಿಂದಾಗಿ ಹಳ್ಳಿಗಳಲ್ಲಿ ಬಡ ಕುಟುಂಬಗಳು ಬೀದಿಗೆ ಬರುತ್ತಿವೆ ಎಂಬ ಸಾಮಾಜಿಕ ಕಾಳಜಿಯಿಂದ ಈ ಕಠಿಣ ನಿರ್ಧಾರ ಕೈಗೊಂಡರು. ಶೇಂದಿ ಮುಕ್ತ ಕರ್ನಾಟಕ ನಿರ್ಮಿಸುವುದು ಅವರ ಕನಸಾಗಿತ್ತು. ಆದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಕರಾವಳಿ ಜಿಲ್ಲೆಯಾದ ಅವಿಭಕ್ತ ದಕ್ಷಿಣ ಕನ್ನಡ ವಿನಾಯಿತಿ ನೀಡಲಾಗಿತ್ತು” ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಮಾಹಿತಿ ನೀಡಿದ್ದಾರೆ.
ಮೂರ್ತೆದಾರರಿಗೆ ಮರುಜೀವ ಕೊಟ್ಟ ಬಂಗಾರಪ್ಪ ಸರ್ಕಾರ
“ವೀರೇಂದ್ರ ಪಾಟೀಲ್ ಅವರ ಸರ್ಕಾರವು ಶೇಂದಿ ನಿಷೇಧಿಸಿದಾಗ, ಶ್ರಮಿಕ ವರ್ಗದವರು ಮತ್ತು ಮೂರ್ತೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಬಂಗಾರಪ್ಪ ಅವರು ಮುಖ್ಯಮಂತ್ರಿಯಾದ ನಂತರ, ಈ ನಿಷೇಧದಲ್ಲಿ ಬೇರೆಯಲ್ಲಿ ರೀತಿಯಲ್ಲಿ ಸುಧಾರಣೆ ತಂದು ಸೊಸೈಟಿ ಮಾದರಿಯನ್ನು ಜಾರಿಗೆ ತಂದರು.
ಶೇಂದಿ ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಬಂಡವಾಳಶಾಹಿಗಳ ಬದಲಿಗೆ, ಆಯಾ ಭಾಗದ ಸ್ಥಳೀಯ ಮೂರ್ತೆದಾರರೇ ಸೇರಿ ಸಹಕಾರ ಸಂಘಗಳನ್ನು ರಚಿಸಿಕೊಳ್ಳಲು ಅವಕಾಶ ನೀಡಿದರು. ಇದರಿಂದ ವ್ಯಾಪಾರದ ಲಾಭವು ನೇರವಾಗಿ ಕಸುಬುದಾರರಿಗೆ ತಲುಪುವಂತಾಯಿತು” ಎಂದು ಉಪ್ಪಿನಂಗಡಿ ಮೂರ್ತೆದಾರರ ಸಹಕಾರಿ ಸೇವಾ ಸಂಘದ ಸದಸ್ಯರಾಗಿರುವ ರಾಮಚಂದ್ರ ಪೂಜಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ಅವನತಿಯತ್ತ ಸಾಗುತ್ತಿರುವ ಮೂರ್ತೆ
ಇಷ್ಟೆಲ್ಲಾ ಭವ್ಯ ಇತಿಹಾಸ ಇರುವ ಮೂರ್ತೆದಾರಿಕೆ ಅಂದರೆ ಸಾಕು ಮೂಗು ಮುರಿಯುವವರೇ ಹೆಚ್ಚು. ಹಿರಿಯರಿಗೆ ಮೂರ್ತೆ ಮಾಡುವ ಶಕ್ತಿ ದೇಹದಲ್ಲಿಲ್ಲ. ಯುವಕರಿಗೆ ಆಸಕ್ತಿ ಇಲ್ಲ. ಒಟ್ಟಿನಲ್ಲಿ ಮೂರ್ತೆ ಅವನತಿಯತ್ತ ಸಾಗುತ್ತಿರುವುದಂತೂ ನಿಜ. 80ರ ಹರೆಯದ ಮಂಗಳೂರಿನ ಗಿರಿಯಪ್ಪ ಪೂಜಾರಿ ಅವರು ಹೇಳುವಂತೆ, “ನನಗೆ ಈ ವೃತ್ತಿ ತುಂಬಾ ಕಷ್ಟದ್ದಾಗಿತ್ತು. ಹಾಗಾಗಿ ನನ್ನ ಮಕ್ಕಳನ್ನು ನಾನು ಇದೇ ವೃತ್ತಿಗೆ ಬರಬೇಕೆಂದು ಭಾವಿಸಲಿಲ್ಲ. ಹಾಗಾಗಿ ನನ್ನ ಮಕ್ಕಳು ಬೇರೆ ವೃತ್ತಿಗೆ ಹೋದರು. ಇದೀಗ ತಂತ್ರಜ್ಞಾನ ಮುಂದುವರೆದರೂ ಶೇಂದಿ ಇಳಿಸುವಿಕೆಯ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿಲ್ಲ, ಇದೊಂದು ಆರೋಗ್ಯಕರ ಪೇಯ ಎಂದು ಎಲ್ಲಿಯೂ ಪ್ರಚಾರದಲ್ಲಿಲ್ಲ” ಎಂದರು.
ಶೇಂದಿಗೆ ಮದ್ಯಪಾನದ ಲೇಬಲ್
ಶಾಲಾ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿರುವ ಸಂಜೀವ ಸುವರ್ಣ ಅವರು ʼದ ಫೆಡರಲ್ʼ ಕರ್ನಾಟಕದ ಜೊತೆ ಮಾತನಾಡಿ “ನಮಗೆ ಶೇಂದಿ ಇಳಿಸುವ ಕೆಲಸದಲ್ಲಿ ಅಷ್ಟೊಂದು ಆಸಕ್ತಿ ಹುಟ್ಟಿರಲಿಲ್ಲ. ಏಕೆಂದರೆ ಇದೊಂದು ಶಾಲೆ ಕಲಿಯದವರ ವೃತ್ತಿಯಾಗಿತ್ತು. ನಾವು ಶಾಲೆ ಕಲಿತು ನಮ್ಮದೇ ಆದ ರೀತಿಯಲ್ಲಿ ಉದ್ಯೋಗ ಹುಡುಕಿಕೊಂಡೆವು. ಮುಖ್ಯವಾಗಿ ಶೇಂದಿ ಮದ್ಯಪಾನದ ವರ್ಗದಲ್ಲಿ ಬರುವ ಕಾರಣ ನಮಗೆ ಇದು ಇಷ್ಟವಾಗುತ್ತಿರಲಿಲ್ಲ” ಎಂದು ತಿಳಿಸಿದರು.
ಶೇಂದಿ ಇಳಿಸುವ ಪ್ರಕ್ರಿಯೆ(ಸಂಗ್ರಹ ಚಿತ್ರ)
ಮೂರ್ತೆ ಮಾಡುವವನಿಗೆ ಹೆಣ್ಣು ಕೊಡುತ್ತಿರಲಿಲ್ಲ
ಇನ್ನು ಸಾಮಾಜಿಕ ಕಳಂಕ ಅಂಟಿಕೊಂಡಿದ್ದ ಈ ಮೂರ್ತೆದಾರಿಕೆಗೆ ಮಾಡುವವರಿಗೆ ಮದುವೆ ಆಗಲು ಹೆಣ್ಣು ಕೊಡಲು ಯಾರೂ ಒಪ್ಪುತ್ತಿರಲಿಲ್ಲ. ಈ ಬಗ್ಗೆ ಬ್ಯಾಂಕ್ ಉದ್ಯೋಗಿ ಗಣೇಶ್ ಪೂಜಾರಿ ಅವರು ಮಾತನಾಡಿ “ಇದು ನಮ್ಮ ಕುಲಕಸುಬು ಎಂಬ ಹೆಮ್ಮೆ ಇದೆ. ಆದರೆ ಅದೇ ವೃತ್ತಿಯಲ್ಲಿ ಮುಂದುವರೆಯುವುದು ಕಷ್ಟ. ಯಾಕೆಂದರೆ ಬಿಲ್ಲವ ಹುಡುಗಿಯರು ಒಳ್ಳೆಯ ವಿದ್ಯಾಭ್ಯಾಸ ಪಡೆಯುವ ಕಾರಣ ಶೇಂದಿ ಇಳಿಸುವ ಕೆಲಸದಲ್ಲಿ ಇರುವವನ್ನು ಮದುವೆಯಾಗಲು ಬಯಸುವುದಿಲ್ಲ'' ಎನ್ನುತ್ತಾರೆ.
ಮಕ್ಕಳಿಗೆ ಶಿಕ್ಷಣ ಸಿಕ್ತು… ಕಸುಬು ಬೇಡವಾಯ್ತು
ಸಾಮಾಜಿಕ ಬದಲಾವಣೆಗಳಾಗುತ್ತಿದ್ದಂತೆ ಬಿಲ್ಲವ ಸಮುದಾಯದ ಮೇಲೂ ಬಹಳಷ್ಟು ಪರಿಣಾಮ ಬೀರಿತು. ತಾವು ಮಾಡುತ್ತಿರುವ ಈ ಕುಲ ಕಸುಬು ಮಕ್ಕಳಿಗೂ ಬೇಡ ಎಂಬ ಭಾವನೆ ಪೋಷಕರಲ್ಲಿ ಮೂಡಲು ಶುರುವಾಯಿತು. ಕ್ರಮೇಣವಾಗಿ ಒಂದು ಪೀಳಿಗೆಯೇ ಶೇಂದಿ ಇಳಿಸುವ ಕಾಯಕದಿಂದ ವಿಮುಖವಾಯಿತು. ಈ ಬಗ್ಗೆ ಮಾತನಾಡಿದ ಪುತ್ತೂರು ತಾಲೂಕಿನ ಈಶ್ವರಮಂಗಳದ 63 ವರ್ಷದ ಮೂರ್ತೆದಾರ ರಾಮಣ್ಣ ಪೂಜಾರಿ ಕರ್ನೂಲ್,”ನಾನು ಈಗಲೂ ಶೇಂದಿ ಇಳಿಸುತ್ತೇನೆ. ಮಕ್ಕಳು ತಕ್ಕ ಮಟ್ಟಿಗೆ ಸುಶಿಕ್ಷಿತರಾಗಿದ್ದು, ಅವರಿಗೆ ಇದರ ಬಗ್ಗೆ ಆಸಕ್ತಿ ಇಲ್ಲ. ಅವರು ಮೂರ್ತೆ ಮಾಡಲಿ ಎಂದು ನಾನೂ ಬಯಸುವುದಿಲ್ಲ. ಆದರೂ ಕುಲಕಸುಬು ಅವನತಿಯಾಗುತ್ತಿರುವ ಬಗ್ಗೆ ಮತ್ತೊಂದು ಕಡೆ ನೋವಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಗೌರವವೂ ಸಿಗುತ್ತಿಲ್ಲ
ಬಿಲ್ಲವ ಸಂಘಟನೆ ಸದಸ್ಯರಾಗಿರುವ ಯತೀಶ್ ಪೂಜಾರಿ ಅವರು ಹೇಳುವಂತೆ “ಶೇಂದಿ ಇಳಿಸುವ ವೃತ್ತಿ ಕಷ್ಟವಾಗಿದೆ. ಇದರ ಕಾರಣ ಎಲ್ಲರೂ ಬೇರೆ ಉದ್ಯೋಗ ಆಶ್ರಯಿಸುತ್ತಾರೆ. ಇದು ಹೆಚ್ಚಾಗಿ ಅಮಲು ಪದಾರ್ಥವಾಗಿ ಹೆಸರಾಗಿದೆ. ಹಾಗಾಗಿ ಬೇಡಿಕೆ ಇದ್ದರೂ ಸಮಾಜದಲ್ಲಿ ಗೌರವ ಕಡಿಮೆ ಇದೆ. ಹೀಗಾಗಿ ಆ ವೃತ್ತಿ ಮಾಡುವ ಬಗ್ಗೆ ಅಳುಕು ಯುವಕರಲ್ಲಿದೆ” ಎಂದರು.
ಬದಲಾದ ಸಾಮಾಜಿಕ ಸ್ಥಾನಮಾನ
ಒಂದು ಕಾಲದಲ್ಲಿ ದೇವಸ್ಥಾನದ ಪ್ರವೇಶಕ್ಕೂ ನಿರ್ಬಂಧ ಎದುರಿಸಿದ್ದ ಬಿಲ್ಲವ ಸಮುದಾಯ ಇಂದು ಸ್ವತಃ ಭವ್ಯ ದೇವಸ್ಥಾನಗಳನ್ನು ನಿರ್ಮಿಸಿ, ನಿರ್ವಹಿಸುವ ಮಟ್ಟಕ್ಕೆ ಬೆಳೆದಿದೆ. ಅದಕ್ಕೆ ಪ್ರಮುಖ ಉದಾಹರಣೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ.
ಬಿಲ್ಲವ ಸಮುದಾಯದ ಪ್ರತಿಯೊಬ್ಬರಿಗೂ ಶಿಕ್ಷಣ ಲಭ್ಯವಾದ ಕಾರಣ, ಇಂದು ಅವರು ಕೇವಲ ಸಾಂಪ್ರದಾಯಿಕ ಕಸುಬಿಗೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಜನಾರ್ದನ ಪೂಜಾರಿಯವರಂತಹ ನಾಯಕರು ಕೇಂದ್ರ ಸಚಿವರಾಗಿ ದೇಶದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಸಮುದಾಯದ ರಾಜಕೀಯ ಬೆಳವಣಿಗೆಗೆ ಸಾಕ್ಷಿ.
ಭೂ ಸುಧಾರಣೆಯೂ ಪ್ರಮುಖ ಕಾರಣವಾಯಿತು
ಇನ್ನು 1974ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಜಾರಿಗೊಳಿಸಿದ ಭೂ ಸುಧಾರಣಾ ಕಾಯ್ದೆ ಮೂರ್ತೆದಾರಿಕೆ ಕಸುಬಿನ ಅವನತಿಗೆ ಮತ್ತು ಬಿಲ್ಲವ/ಈಡಿಗ ಸಮುದಾಯದ ಸಾಮಾಜಿಕ ಬದಲಾವಣೆಗೆ ಅತ್ಯಂತ ಪ್ರಮುಖ ಕಾರಣಗಳಲ್ಲೊಂದು.
“ಹಿಂದೆ ಹೆಚ್ಚಿನ ಈಚಲು ಮತ್ತು ತಾಳೆ ಮರಗಳು ಮೇಲ್ವರ್ಗದ ಜಮೀನ್ದಾರರ ಅಥವಾ ಬಲ್ಲಾಳರ ಭೂಮಿಯಲ್ಲಿದ್ದವು. ಮೂರ್ತೆದಾರರು ಆ ಮರಗಳನ್ನು ಏರಲು ಜಮೀನ್ದಾರರಿಗೆ 'ಗೇಣಿ' ನೀಡಬೇಕಿತ್ತು ಅಥವಾ ಅವರ ಅಧೀನದಲ್ಲಿ ಕೆಲಸ ಮಾಡಬೇಕಿತ್ತು. 1974ರಲ್ಲಿ ಡಿ. ದೇವರಾಜ ಅರಸು ಅವರು ತಂದ ಭೂ ಸುಧಾರಣಾ ಕಾಯ್ದೆಯಿಂದಾಗಿ, ತಲತಲಾಂತರದಿಂದ ಭೂಮಿಯಲ್ಲಿ ದುಡಿಯುತ್ತಿದ್ದ ಬಿಲ್ಲವ ಮತ್ತು ಈಡಿಗ ಸಮುದಾಯದವರಿಗೆ ಆ ಮಣ್ಣಿನ ಹಕ್ಕು ಸಿಕ್ಕಿತು” ಎಂದು ಹೇಳುತ್ತಾರೆ ಹಿರಿಯ ಪತ್ರಕರ್ತ ಸಿ. ರುದ್ರಪ್ಪ.
“ಯಾವಾಗ ತಾನು ಮರ ಹತ್ತುವ ಭೂಮಿ ತನ್ನದೇ ಆಯಿತೋ, ಆಗ ಮೂರ್ತೆದಾರರಲ್ಲಿ ಹೊಸ ಭರವಸೆ ಮೂಡಿತು. ಕೇವಲ ಮರ ಹತ್ತುವ ಬದಲು, ಆ ಭೂಮಿಯಲ್ಲಿ ಕೃಷಿ ಮಾಡಲು ಆರಂಭಿಸಿದರು. ಭತ್ತ, ಅಡಿಕೆ ಮತ್ತು ತೆಂಗಿನ ತೋಟಗಳನ್ನು ಮಾಡುವ ಮೂಲಕ ಅವರು ಆರ್ಥಿಕ ಸ್ವಾವಲಂಬನೆ ಸಾಧಿಸಿದರು. ಇದು ಅವರನ್ನು ಅಪಾಯಕಾರಿ ಮೂರ್ತೆ ವೃತ್ತಿಯಿಂದ ದೂರ ಕರೆತಂದಿತು” ಎಂದು ಅವರು ತಿಳಿಸಿದರು.
ಬೀಡಿ ಉದ್ದಿಮೆಯೂ ಪರಿಣಾಮ ಬೀರಿತು
ತುಳುನಾಡು ಮತ್ತು ಕರಾವಳಿ ಭಾಗದಲ್ಲಿ ಮೂರ್ತೆದಾರಿಕೆ ಕಸುಬು ಅವನತಿಯತ್ತ ಸಾಗಲು ಕೇವಲ ಶಿಕ್ಷಣವಷ್ಟೇ ಕಾರಣವಲ್ಲ, ಬೀಡಿ ಉದ್ದಿಮೆಯ ಬೆಳವಣಿಗೆ ಕೂಡ ಒಂದು ಪ್ರಮುಖ ಕಾರಣ. ಮೂರ್ತೆದಾರಿಕೆ ಎಂದರೆ ಪ್ರತಿ ಕ್ಷಣವೂ ಜೀವವನ್ನು ಪಣಕ್ಕಿಟ್ಟು 100 ಅಡಿ ಎತ್ತರದ ಮರ ಏರುವ ಸಾಹಸ. ಆದರೆ ಬೀಡಿ ಉದ್ದಿಮೆಯು ಮನೆಮಂದಿಯೆಲ್ಲಾ ಕುಳಿತು ಮಾಡಬಹುದಾದ ಸುಲಭದ ಕೆಲಸವಾಗಿತ್ತು. ಮರ ಹತ್ತುವ ಅಪಾಯಕ್ಕೆ ಹೆದರಿದ ಅನೇಕ ಯುವಕರು ಮತ್ತು ಕುಟುಂಬಗಳು ಸುರಕ್ಷಿತವಾದ ಬೀಡಿ ಕಟ್ಟುವ ಕಸುಬಿನತ್ತ ಮುಖ ಮಾಡಿದರು.
ಬೀಡಿ ಉದ್ದಿಮೆಯು ಒಂದು ಸಂಘಟಿತ ವಲಯವಾಗಿ ಬೆಳೆಯಿತು. ಇದರಲ್ಲಿ ಪಿಎಫ್ (PF), ಬೋನಸ್ ಮತ್ತು ವೈದ್ಯಕೀಯ ಸೌಲಭ್ಯಗಳು ಸಿಗಲಾರಂಭಿಸಿದವು. ಆದರೆ ಮೂರ್ತೆದಾರಿಕೆ ಒಂದು ಅಸಂಘಟಿತ ವಲಯವಾಗಿಯೇ ಉಳಿಯಿತು. ಸೌಲಭ್ಯಗಳ ಆಸೆಯಿಂದ ಮೂರ್ತೆದಾರ ಕುಟುಂಬಗಳ ಮುಂದಿನ ಪೀಳಿಗೆ ಬೀಡಿ ಕಂಪನಿಗಳ ಕಡೆಗೆ ಆಕರ್ಷಿತವಾಯಿತು. ಅಷ್ಟೇ ಅಲ್ಲದೇ ಮಕ್ಕಳಿಗ ಶಿಕ್ಷಣವೂ ಸಿಗುವಂತೆ ಮಾಡಿತು.
ಕೆಲವೇ ಕೆಲವು ಸಾವಿರ ಜನರಿಂದ ಮೂರ್ತೆ
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ತಾರನಾಥ್ ಗಟ್ಟಿ ಕಾಪಿಕಾಡ್ ಅವರು ನೀಡಿದ ಮಾಹಿತಿ ಪ್ರಕಾರ ಪ್ರಸ್ತುತ ಕೆಲವೇ ಕೆಲವು ಸಾವಿರ ಜನ ಶೇಂದಿ ಇಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಒಟ್ಟು ಜನಸಂಖ್ಯೆ ಸುಮಾರು 37 ಲಕ್ಷ. ಅದರಲ್ಲಿ ಬಿಲ್ಲವ ಸಮುದಾಯಕ್ಕೆ ಸೇರಿದವರ ಸಂಖ್ಯೆ ಸುಮಾರು 9-10ಲಕ್ಷ. ಅವರಲ್ಲಿ ಕೇವಲ 2000ದಿಂದ 3000ಜನ ಮಾತ್ರ ಈ ಮೂರ್ತೆದಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
“ಹಳ್ಳಿಗೂ ಹರಡಿದ್ದ ಮೂರ್ತೆದಾರರ ಸಹಕಾರಿ ಸಂಘಗಳು ಸಾವಿರಾರು ಜನರಿಗೆ ಉದ್ಯೋಗ ಭದ್ರತೆಯನ್ನು ನೀಡಿದ್ದವು. ಆದರೆ 30ರಿಂದ 35 ವರ್ಷಗಳಿಂದ ಈಚೆಗೆ ವೈನ್ ಶಾಪ್‌ಗಳು ಮತ್ತು ಬಾರ್‌ಗಳ ಹಾವಳಿ ಹೆಚ್ಚಾದಂತೆ ಶೇಂದಿಯ (ಕಲಿ) ಬೇಡಿಕೆ ಕುಸಿಯಿತು. ಸುಲಭವಾಗಿ ಲಭ್ಯವಾಗುವ ಕೃತಕ ಮದ್ಯದ ಅಮಲಿಗೆ ಜನರು ಮಾರುಹೋಗಿದ್ದರಿಂದ, ಶೇಂದಿ ಕುಡಿಯುವವರನ್ನು ಸಮಾಜವು 'ಲೋ ಸ್ಟ್ಯಾಂಡರ್ಡ್' ಎಂಬ ದೃಷ್ಟಿಯಿಂದ ನೋಡಲಾರಂಭಿಸಿತು. ಇದು ಕುಡಿಯುವವರ ಅಭ್ಯಾಸ ಮತ್ತು ಶೇಂದಿ ಸಂಗ್ರಹಣೆಯ ಪ್ರಮಾಣ ಎರಡನ್ನೂ ಕುಗ್ಗಿಸಿತು. ಇದೇ ಸಮಯದಲ್ಲಿ ಅಡಿಕೆ ಬೆಳೆಗೆ ಉತ್ತಮಧಾರಣೆ ಸಿಕ್ಕಿದ್ದರಿಂದ, ಮೂರ್ತೆದಾರಿಕೆಯನ್ನು ನಂಬಿದ್ದ ಕುಟುಂಬಗಳು ಆರ್ಥಿಕ ರೂಪಾಂತರಗೊಂಡು ಕೃಷಿಯತ್ತ ಮುಖ ಮಾಡಿದವು. ಇಂದು ಮದ್ಯದ ಅಮಲು ಬೇಕಾದವರು ಬಾರ್‌ಗಳಿಗೆ ಮೊರೆಹೋಗುತ್ತಿದ್ದು,ಶೇಂದಿ ಎಂಬುದು ಕೇವಲ ವಿನೋದಕ್ಕಾಗಿ ಅಥವಾ ವರ್ಷಕ್ಕೊಮ್ಮೆ ದೈವದ ನೇಮ-ಕೋಲಗಳ ಸಂದರ್ಭದಲ್ಲಿ ಬಳಸುವ ಪಾನೀಯವಾಗಿ ಮಾತ್ರ ಉಳಿದಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ತುಳುನಾಡಿನ ಮೂರ್ತೆದಾರಿಕೆ ಎಂಬುದು ಕೇವಲ ಒಂದು ವೃತ್ತಿಯಾಗಿರದೆ, ಈ ಮಣ್ಣಿನ ಸಾಂಸ್ಕೃತಿಕ ಮತ್ತು ಆರ್ಥಿಕ ಇತಿಹಾಸದ ಅವಿಭಾಜ್ಯ ಅಂಗವಾಗಿತ್ತು. ಸುಮಾರು 40 ವರ್ಷಗಳ ಹಿಂದೆ ಹಳ್ಳಿ ಹಳ್ಳಿಗೂ ಹರಡಿದ್ದ ಮೂರ್ತೆದಾರರ ಸಹಕಾರಿ ಸಂಘಗಳು ಸಾವಿರಾರು ಕುಟುಂಬಗಳಿಗೆ ಆಧಾರವಾಗಿದ್ದವು. ಆದರೆ, ಕಾಲಚಕ್ರ ಉರುಳಿದಂತೆ ಈ ಕಸುಬು ಅನೇಕ ಆಯಾಮಗಳಲ್ಲಿ ರೂಪಾಂತರಗೊಂಡಿದೆ. ಬದಲಾದ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಪ್ರಗತಿಯ ನಡುವೆ, ಮೂರ್ತೆದಾರಿಕೆಯು ತುಳುನಾಡಿನ ಮಣ್ಣಿನ ವಾಸನೆಯನ್ನು ಹೊತ್ತ ಒಂದು ಮಧುರ ನೆನಪಾಗಿ ಇತಿಹಾಸದ ಪುಟಗಳನ್ನು ಸೇರುತ್ತಿದೆ.

