
ವಿಧಾನಪರಿಷತ್ ಸಭಾಪತಿ ಪೀಠ ಅಲಂಕರಿಸಿರುವ ಶಾಂತರಾಮ ಸಿದ್ದಿ
ಶಾಂತಾರಾಮರಿಗೆ ʼಸಿದ್ಧಿʼಸಿದ ವಿಧಾನ ಪರಿಷತ್ ಸಭಾಪತಿ ಪೀಠ!
ವಿಧಾನ ಪರಿಷತ್ ಕಲಾಪದ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿರಮಿಸಿದ್ದ ವೇಳೆ, ಶಾಂತರಾಮ ಸಿದ್ದಿಯವರಿಗೆ ಕೆಲಕಾಲ ಕಲಾಪ ನೋಡಿಕೊಳ್ಳುವ ಅವಕಾಶ ಸಿಕ್ಕಿತು.
ಕರಾವಳಿ ಕರ್ನಾಟಕದ ಅತ್ಯಂತ ಹಿಂದುಳಿದ ಸಿದ್ದಿ ಜನಾಂಗದ ವ್ಯಕ್ತಿಯೊಬ್ಬರು ರಾಜ್ಯ ವಿಧಾನಪರಿಷತ್‌ನ ಅತ್ಯುನ್ನತ ಸ್ಥಾನವಾದ ʼಸಭಾಪತಿ ಪೀಠʼವನ್ನು ಕೆಲ ಕಾಲ ಅಲಂಕರಿಸಿದ್ದಾರೆ. ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ತುಳಿತಕ್ಕೊಳಗಾದ, ಈಗಲೂ ಸಂಕಷ್ಟ ಪರಿಸ್ಥಿತಿಯಲ್ಲೇ ಇರುವ ಸಿದ್ದಿ ಸಮುದಾಯದ ವ್ಯಕ್ತಿಯೊಬ್ಬರು ಪೀಠದಲ್ಲಿ ಆಸೀನರಾಗಿರುವುದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲುಗಲ್ಲಾಗಿದೆ.
ಹಾಗೆಂದು ಅವರು ಶಾಶ್ವತವಾಗಿ ಆ ಪೀಠ ಅಲಂಕರಿಸಿಲ್ಲ. ವಿಧಾನ ಪರಿಷತ್ ಕಲಾಪದ ವೇಳೆ ಪರಿಷತ್ ಸಭಾಪತಿ ವಿರಮಿಸುವ ವೇಳೆ, ಸದನದಲ್ಲಿರುವ ಹಿರಿಯ ಸದಸ್ಯರಿಗೆ ಕೆಲವು ಬಾರಿ ಕಲಾಪ ನಡೆಸಲು ಅವಕಾಶ ನೀಡಲಾಗುತ್ತದೆ. ಹಾಗೆಯೇ ಬುಧವಾರ ವಿಧಾನ ಪರಿಷತ್ ಕಲಾಪದ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿರಮಿಸಿದ್ದ ವೇಳೆ, ಶಾಂತರಾಮ ಸಿದ್ದಿಯವರಿಗೆ ಕೆಲಕಾಲ ಕಲಾಪ ನೋಡಿಕೊಳ್ಳುವ ಅವಕಾಶ ಸಿಕ್ಕಿತು. ಅದನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದರು.
ಶಾಂತಾರಾಮ ಬುಡ್ನಾ ಸಿದ್ದಿ ಬಿಜೆಪಿಯಿಂದ 2020ರಲ್ಲಿ ವಿಧಾನ ಪರಿಷತ್ತಿಗೆ ನಾಮನಿರ್ದೇಶಿತರಾಗಿದ್ದರು. ಸಿದ್ದಿ ಬುಡಕಟ್ಟು ಜನಾಂಗದವರಾದ ಇವರು ಆಫ್ರಿಕನ್ ಮೂಲದ ಮೊದಲ ಭಾರತೀಯ ಶಾಸಕ ಎಂಬ ದಾಖಲೆಯನ್ನು ಬರೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ 'ಹಿತ್ತಲಕೈ' ಎಂಬ ಪುಟ್ಟ ಗ್ರಾಮದವರಾದ ಇವರು, ಕಾಡಿನ ನಡುವೆ ಪ್ಲಾಸ್ಟಿಕ್ ಹೊದಿಸಿದ ಹಂಚಿನ ಮನೆಯಲ್ಲಿ ವಾಸವಾಗಿದ್ದರು. ಇಂದಿಗೂ ಇವರು ತಮ್ಮ ಸರಳ ಜೀವನಕ್ಕೆ ಹೆಸರಾಗಿದ್ದಾರೆ.
ಸಿದ್ದಿ ಶಿಕ್ಷಣಕ್ಕೆ ಶ್ರಮ
ಸಿದ್ಧಿ ಜನಾಂಗವು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಬಹಳ ಹಿಂದುಳಿದಿದೆ. ಶಾಂತರಾಮ ಸಿದ್ಧಿ ಅವರು ತಮ್ಮ ಜನಾಂಗದಲ್ಲಿ ಪದವಿ (ಬಿಎ) ಪಡೆದ ಮೊದಲ ಕೆಲವು ವ್ಯಕ್ತಿಗಳಲ್ಲಿ ಇವರೂ ಒಬ್ಬರು. ವಿದ್ಯಾರ್ಥಿದೆಸೆಯಿಂದಲೇ ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಹೊಂದಿದ್ದ ಇವರು, ನಂತರ ಸಂಘಟನಾತ್ಮಕವಾಗಿ ಬೆಳೆದರು.1989 ರಿಂದಲೇ ಆರ್‌ಎಸ್‌ಎಸ್‌ನ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ವನವಾಸಿ ಕಲ್ಯಾಣ ಆಶ್ರಮದ ಮೂಲಕ ಅರಣ್ಯವಾಸಿಗಳ, ಬುಡಕಟ್ಟು ಜನರ ಹಕ್ಕುಗಳಿಗಾಗಿ ಮತ್ತು ಅವರ ಶಿಕ್ಷಣಕ್ಕಾಗಿ ದಶಕಗಳ ಕಾಲ ಶ್ರಮಿಸಿದ್ದಾರೆ. ಕಾಡಿನ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವುದು ಮತ್ತು ಅರಣ್ಯ ಹಕ್ಕು ಕಾಯ್ದೆಯಡಿ ಅವರಿಗೆ ನ್ಯಾಯ ಕೊಡಿಸುವ ಕೆಲಸದಲ್ಲಿ ಮುಂಚೂಣಿಯಲ್ಲಿದ್ದಾರೆ.
ಸಭಾಪತಿ ಪೀಠದಲ್ಲಿ ಶಾಂತರಾಮ ಸಿದ್ದಿ
ವಿಧಾನಪರಿಷತ್‌ನ ಸಭಾಪತಿ ಪೀಠದಲ್ಲಿ ಆಸೀನರಾಗಿದ್ದನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, "ಯಾರಿಗೆ ತನ್ನ ಜಾತಿ, ಧರ್ಮಕ್ಕಿಂತ ದೇಶವೇ ಮೊದಲು ಎಂಬ ನಿಲುವಿತ್ತೋ, ಯಾರ ಕಣ್ಣುಗಳಲ್ಲಿ ಮುಗ್ಧತೆ ಮನೆ ಮಾಡಿತ್ತೋ, ಅಂತಹ ಅಪ್ಪಟ ಸಂಘದ ಕಾರ್ಯಕರ್ತ, ವನವಾಸಿ ಪ್ರತಿನಿಧಿ ಶಾಂತರಾಮ ಸಿದ್ಧಿ ಇಂದು ಮೇಲ್ಮನೆಯ ಸಭಾಪತಿ ಪೀಠವನ್ನು ಅಲಂಕರಿಸಿರುವುದು ಐತಿಹಾಸಿಕ ಕ್ಷಣ," ಎಂದು ಸಂಭ್ರಮಿಸಿದ್ದಾರೆ.
ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಿಂದ ಸಭಾಪತಿ ಪೀಠದವರೆಗೆ!
ಮುಂದುವರಿದು, ಆರು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಾಡಂಚಿನ ಪ್ಲಾಸ್ಟಿಕ್ ಹೊದಿಸಿದ ಹಳೆಯ ಹಂಚಿನ ಮನೆಯಲ್ಲಿದ್ದ ಶಾಂತರಾಮ ಸಿದ್ಧಿ ಅವರನ್ನು ಭೇಟಿ ಮಾಡಿದ್ದ ಕ್ಷಣಗಳನ್ನು ಸ್ಮರಿಸಿದ್ದಾರೆ. "ಅಂದು ಅವರ ಮನೆಗೆ ಹೋಗಿ ನೀವು ಶಾಸಕರಾಗಿ ಆಯ್ಕೆಯಾಗಿದ್ದೀರಿ ಎಂದು ಹೇಳಿದಾಗ, ಭಾವುಕರಾಗಿ ನಿಂತಿದ್ದರು. ಇಂದು ಅವರು ಸಭಾಪತಿ ಸ್ಥಾನದಲ್ಲಿ ಕುಳಿತಿರುವುದು ಸಂವಿಧಾನದ ಆಶಯಕ್ಕೆ ಸಂದ ಜಯ," ಎಂದು ಅವರು ಬಣ್ಣಿಸಿದ್ದಾರೆ.
ಆಫ್ರಿಕಾ ಮೂಲದ ಕನ್ನಡಿಗರು
ಸಿದ್ಧಿ ಜನಾಂಗದ ಮೂಲ ಇರುವುದು ಆಫ್ರಿಕಾದಲ್ಲಿ . ಮುಖ್ಯವಾಗಿ ಆಗ್ನೇಯ ಆಫ್ರಿಕಾದ ಇಥಿಯೋಪಿಯಾ, ಮೊಜಾಂಬಿಕ್ ಮತ್ತು ಟಾಂಜಾನಿಯಾ ಭಾಗಗಳಲ್ಲಿ ಈ ಜನಾಂಗದವರಿದ್ದಾರೆ. ಸುಮಾರು 300 ರಿಂದ 500 ವರ್ಷಗಳ ಹಿಂದೆ ಪೋರ್ಚುಗೀಸರು ಇವರನ್ನು ಗುಲಾಮರನ್ನಾಗಿ ಭಾರತಕ್ಕೆ ಕರೆತಂದರು. ಗೋವಾದಲ್ಲಿದ್ದ ಪೋರ್ಚುಗೀಸರ ದಾಸ್ಯದಿಂದ ತಪ್ಪಿಸಿಕೊಂಡ ಸಿದ್ಧಿಗಳು ಪಶ್ಚಿಮ ಘಟ್ಟಗಳ ದಟ್ಟಾರಣ್ಯಕ್ಕೆ ಬಂದು ಆಶ್ರಯ ಪಡೆದರು. ಕರ್ನಾಟಕದ ಉತ್ತರ ಕನ್ನಡ (ಯಲ್ಲಾಪುರ, ಹಳಿಯಾಳ, ಅಂಕೋಲಾ, ಶಿರಸಿ), ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ನೆಲೆಸಿದ್ದಾರೆ.
ಸಂಸ್ಕೃತಿ ಮತ್ತು ಭಾಷೆ
ಸಿದ್ಧಿಗಳು ತಾವು ನೆಲೆಸಿರುವ ಪ್ರದೇಶದ ಭಾಷೆಯನ್ನೇ ಅಪ್ಪಿಕೊಂಡಿದ್ದಾರೆ. ಇವರು ಕನ್ನಡ ಮತ್ತು ಕೊಂಕಣಿಯ ಮಿಶ್ರಣದ ವಿಶಿಷ್ಟ ಶೈಲಿಯಲ್ಲಿ ಮಾತನಾಡುತ್ತಾರೆ. ಇವರಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುವವರಿದ್ದಾರೆ. ಆದರೆ ಎಲ್ಲರೂ ತಮ್ಮ ಮೂಲ ಆಫ್ರಿಕನ್ ಸಂಸ್ಕೃತಿಯ ಕುರುಹುಗಳನ್ನು ಉಳಿಸಿಕೊಂಡಿದ್ದಾರೆ. 'ಡಮ್ಮಾಮಿ' ಕುಣಿತ ಇವರ ವಿಶಿಷ್ಟ ಜಾನಪದ ಕಲೆಯಾಗಿದ್ದು, ಇಂದಿಗೂ ಸಿದ್ಧಿಗಳ ಸಾಂಸ್ಕೃತಿಕ ಗುರುತಾಗಿ ಉಳಿದಿದೆ. ಹಲವು ದಶಕಗಳ ಕಾಲ ಮುಖ್ಯವಾಹಿನಿಯಿಂದ ದೂರವಿದ್ದ ಈ ಜನಾಂಗಕ್ಕೆ 2003ರಲ್ಲಿ ಕೇಂದ್ರ ಸರ್ಕಾರ 'ಪರಿಶಿಷ್ಟ ಪಂಗಡ' (ST) ಸ್ಥಾನಮಾನ ನೀಡಿತು. ಅರಣ್ಯ ಉತ್ಪನ್ನಗಳನ್ನು ನಂಬಿ ಬದುಕುವ ಇವರು ಈಗ ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳುತ್ತಿದ್ದಾರೆ.

