ಸುಪ್ರೀಂ ಕೋರ್ಟ್ ಪೀಠದ ಮುಂದೆ 1978ರ ಬೆಂಗಳೂರು ಜಲಮಂಡಳಿ ತೀರ್ಪು: ದೇಶದ ಕಾರ್ಮಿಕರ ಪಾಲಿಗೆ ನಿರ್ಣಾಯಕ
x

ಸುಪ್ರೀಂ ಕೋರ್ಟ್ ಪೀಠದ ಮುಂದೆ 1978ರ ಬೆಂಗಳೂರು ಜಲಮಂಡಳಿ ತೀರ್ಪು: ದೇಶದ ಕಾರ್ಮಿಕರ ಪಾಲಿಗೆ ನಿರ್ಣಾಯಕ

5 ದಶಕಗಳಿಗೂ ಹಿಂದೆ ಬೆಂಗಳೂರು ಜಲಮಂಡಳಿ ಪ್ರಕರಣದಲ್ಲಿ ನೀಡಿದ ತೀರ್ಪು ಮತ್ತೆ ಸುಪ್ರೀಂ ಕೋರ್ಟ್‌ ಮುಂದೆ ವಿಚಾರಣೆಗೆ ಬಂದಿದೆ. ಅದು ದೇಶಾದ್ಯಂತ ಇರುವ ಕಾರ್ಮಿಕರ ಪಾಲಿಗೆ ನಿರ್ಣಾಯಕವಾಗಿದೆ


Click the Play button to hear this message in audio format

ನ್ಯಾಯಾಂಗದ ಆ ಒಂದು ತೀರ್ಪು ಕಳೆದ ಸುಮಾರು ಅರ್ಧ ಶತಮಾನದಿಂದ ಲಕ್ಷಾಂತರ ಮಂದಿ ಭಾರತೀಯರ ವೃತ್ತಿಜೀವನವನ್ನು ಸದ್ದಿಲ್ಲದೇ ರೂಪಿಸುತ್ತ ಬಂದಿದೆ. 1978ರಲ್ಲಿ ಸುಪ್ರೀಂ ಕೋರ್ಟಿನ ಸಪ್ತ ನ್ಯಾಯಮೂರ್ತಿಗಳ ಪೀಠ ಆ ತೀರ್ಪನ್ನು ನೀಡಿತ್ತು. ಭಾರತೀಯ ಕಾರ್ಮಿಕ ಕಾನೂನಿನಲ್ಲಿರುವ ʼಉದ್ಯಮʼ ಎಂಬ ಪದವನ್ನು ಸಾಧ್ಯವಾದಷ್ಟು ರೀತಿಯಲ್ಲಿ ವಿಶಾಲ ದೃಷ್ಟಿಕೋನದಿಂದ ಅರ್ಥೈಸಬೇಕು ಎಂದು ತೀರ್ಮಾನಿಸಿತು. ಈ ಕಾರಣದಿಂದಾಗಿಯೇ ಆಸ್ಪತ್ರೆ, ಶಾಲೆ, ದತ್ತಿ ಸಂಸ್ಥೆಗಳು ಮತ್ತು ಕೆಲವು ಸರ್ಕಾರಿ ಇಲಾಖೆಗಳು ಕೂಡ ಕಾರ್ಮಿಕ ಹಕ್ಕುಗಳ ರಕ್ಷಣಾತ್ಮಕ ಚೌಕಟ್ಟಿನೊಳಗೆ ಬಂದವು.

ಇಷ್ಟೂ ವರ್ಷಗಳ ಬಳಿಕ ಈಗ ಆ ವ್ಯಾಖ್ಯಾನವು ಸಮರ್ಪಕವಾಗಿದೆಯೇ ಅಥವಾ ಅದು ಸಂಸತ್ತಿನ ಮೂಲ ಉದ್ದೇಶವನ್ನು ಮೀರಿ ಕಾನೂನನ್ನು ವಿಸ್ತರಿಸಿದೆಯೇ ಎಂಬುದನ್ನು ಪರಿಶೀಲಿಸುವ ಕೆಲಸವನ್ನು ಸುಪ್ರೀಂ ಕೋರ್ಟಿನ ಒಂಭತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಕೈಗೆತ್ತಿಕೊಂಡಿದೆ.

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠದ ಮುಂದೆ ಮಾರ್ಚ್ 17 ರಂದು ಈ ವಿಚಾರದ ವಿಚಾರಣೆ ಆರಂಭವಾಗಿದೆ. ಇದು ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಕಾರ್ಮಿಕ ಕಾನೂನು ಪ್ರಕ್ರಿಯೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ತೀರಾ ತಾಂತ್ರಿಕವಾಗಿ ಕಂಡುಬರುವ ಈ ಪ್ರಶ್ನೆಯು ಅತ್ಯಂತ ಮಾನವೀಯ ಪರಿಣಾಮಗಳನ್ನು ಹೊಂದಿದೆ: ಯಾವ ಕಾರ್ಮಿಕರು ತಮ್ಮ ವೇತನ, ವಜಾ ಅಥವಾ ಸೇವಾ ಸ್ಥಿತಿಗತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಬಹುದು? ಕಾನೂನು ನೀಡುವ ರಕ್ಷಣೆಗಳಿಗೆ ಯಾರು ಅರ್ಹತೆಯನ್ನು ಹೊಂದಿದ್ದಾರೆ ಮತ್ತು ಯಾರು ಅದರ ಚೌಕಟ್ಟಿನಿಂದ ಹೊರಗೆ ಉಳಿಯುತ್ತಾರೆ ಎಂಬುದು ಇಲ್ಲಿ ಪ್ರಶ್ನೆಗಳಾಗಿವೆ.

ಬೆಂಗಳೂರು ಜಲಮಂಡಳಿ ಪ್ರಕರಣ

ಈ ಕಥೆಯು ನಮ್ಮನ್ನು 1978ರ ಕಾಲದಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ಅಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ತನ್ನ ಕಾರ್ಮಿಕರ ಮೇಲಿನ ಕಾರ್ಮಿಕ ನ್ಯಾಯಮಂಡಳಿಯ ವ್ಯಾಪ್ತಿಯನ್ನು ಪ್ರಶ್ನಿಸಿತ್ತು. ಇದಕ್ಕೆ ಸಂಬಂಧಿಸಿದ್ದ ತೀರ್ಪನ್ನು ಬರೆದವರು ಅಂದಿನ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಅವರು. ಅವರನ್ನೂ ಒಳಗೊಂಡ ಏಳು ನ್ಯಾಯಮೂರ್ತಿಗಳ ಪೀಠವು ʼಉದ್ಯಮʼ ಎಂಬ ಪದಕ್ಕೆ ಅತ್ಯಂತ ವಿಶಾಲ ವ್ಯಾಖ್ಯಾನವನ್ನು ನೀಡಿತು.

ಇದನ್ನು ʼತ್ರಿವಳಿ ಪರೀಕ್ಷೆʼ ಎಂದು ಕರೆಯಲಾಯಿತು. ಇದರ ಪ್ರಕಾರ ಯಾವುದೇ ಸಂಸ್ಥೆಯು ಈ ಕೆಳಗಿನ ಲಕ್ಷಣಗಳನ್ನು ಹೊಂದಿದ್ದರೆ ಅದನ್ನು 1947ರ ಕೈಗಾರಿಕಾ ವಿವಾದಗಳ ಕಾಯ್ದೆಯಡಿ ʼಉದ್ಯಮʼ ಎಂದು ಪರಿಗಣಿಸಲಾಗುತ್ತದೆ:

1. ವ್ಯವಸ್ಥಿತ ಚಟುವಟಿಕೆಗಳಲ್ಲಿ ತೊಡಗಿರಬೇಕು.

2. ಕಾರ್ಮಿಕರ ನೇಮಕ ಮಾಡಿಕೊಂಡಿರಬೇಕು

3. ಸರಕು ಅಥವಾ ಸೇವೆಗಳನ್ನು ಉತ್ಪಾದಿಸುತ್ತಿರಬೇಕು (ಅದು ಲಾಭದ ಉದ್ದೇಶ ಹೊಂದಿರಲಿ ಅಥವಾ ಇಲ್ಲದಿರಲಿ).

ಇದು ಅತ್ಯಂತ ದೂರಗಾಮಿಯಾದ ಪರಿಣಾಮಗಳನ್ನು ಹೊಂದಿದ್ದವು. ಒಂದು ದತ್ತಿ ಆಸ್ಪತ್ರೆ, ಖಾಸಗಿ ವಿಶ್ವವಿದ್ಯಾಲಯ, ಸಂಶೋಧನಾ ಸಂಸ್ಥೆ, ಸಹಕಾರ ಸಂಘ- ಇವೆಲ್ಲವೂ ಕೂಡ ಈ ವ್ಯಾಖ್ಯಾನದ ಅಡಿಯಲ್ಲಿ ಬಂದಿದ್ದವು.

ದುರ್ಬಲರ ರಕ್ಷಣೆಯ ಕಾರ್ಮಿಕ ಕಾನೂನು

ಇದು ಉದ್ದೇಶಪೂರ್ವಕವಾದ ಸೈದ್ಧಾಂತಿಕ ಆಯ್ಕೆಯಾಗಿತ್ತು. ಉದ್ಯೋಗಕ್ಕೆ ಸಂಬಂಧಿಸಿದಂತೆ ದುರ್ಬಲ ವರ್ಗದವರನ್ನು ರಕ್ಷಿಸುವುದೇ ಕಾರ್ಮಿಕ ಕಾನೂನಿನ ಉದ್ದೇಶ ಎಂದು ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಅವರು ನಂಬಿದ್ದರು. ಜೊತೆಗೆ ಈ ರಕ್ಷಣೆಯನ್ನು ಕೇವಲ ಕಾರ್ಖಾನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಮಾತ್ರ ಸೀಮಿತಗೊಳಿಸುವುದು ಕಾನೂನಿನ ಮೂಲ ಆಶಯಕ್ಕೆ ದ್ರೋಹ ಬಗೆದಂತೆ ಎಂದೂ ಅಯ್ಯರ್ ಭಾವಿಸಿದ್ದರು.

ಆಗಿನ ಕಾಲಘಟ್ಟದಲ್ಲಿ ಈ ತೀರ್ಪನ್ನು ಕಾರ್ಮಿಕ ಸಂಘಟನೆಗಳು ಮತ್ತು ಕಾರ್ಮಿಕ ಪರ ವಕೀಲರು ಕಾರ್ಮಿಕ ವರ್ಗದ ದೊಡ್ಡ ವಿಜಯ ಎಂದು ಭಾವಿಸಿ ಸಂಭ್ರಮಿಸಿದ್ದರು. ಆದರೆ ಉದ್ಯೋಗದಾತರು ಇದನ್ನು ಭಿನ್ನ ದೃಷ್ಟಿಕೋನದಿಂದ ನೋಡಿದರು.

ಅದಾಗಿ ದಶಕಗಳು ಹಲವು ಕಳೆದಿವೆ. ಆ ಬಳಿಕ ಬಂದ ಅನೇಕ ಪ್ರಕರಣಗಳು 1978ರ ತೀರ್ಪು ನೀಡಿದ್ದ ಸ್ಪಷ್ಟತೆಯನ್ನು ಕುಂದಿಸಿದವು. ಕಲ್ಯಾಣ ಕಾರ್ಯಗಳನ್ನು ನಿರ್ವಹಿಸುವ ಸರ್ಕಾರಿ ಇಲಾಖೆಗಳು ʼಕೈಗಾರಿಕೆʼ ವ್ಯಾಪ್ತಿಗೆ ಬರುವುದೇ ಇಲ್ಲವೇ ಎನ್ನುವ ಬಗ್ಗೆ ಸಂಘರ್ಷದ ನಿರ್ಧಾರಗಳು ಹೊರಹೊಮ್ಮಿದವು. 2005ರಲ್ಲಿ ಐವರು ನ್ಯಾಯಾದೀಶರನ್ನು ಒಳಗೊಂಡ ಪೀಠ ʼಬೆಂಗಳೂರು ಜಲಮಂಡಳಿ ತೀರ್ಪುʼ ವಾಸ್ತವವಾಗಿ ಬಹುಮತವನ್ನು ಹೊಂದಿದೆಯೇ ಎಂಬ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿ ಅದನ್ನು ಮರುಪರಿಶೀಲನೆ ನಡೆಸುವಂತೆ ಶಿಫಾರಸು ಮಾಡಿತು. ಅಷ್ಟಾಗಿ 2017ರ ಹೊತ್ತಿಗೆ ಏಳು ನ್ಯಾಯಾಧೀಶರ ಪೀಠವು ಈ ತೀರ್ಪನ್ನು ಮರುಪರಿಶೀಲಿಸಲು ಮೂಲ ಪೀಠಕ್ಕಿಂತ ದೊಡ್ಡದಾದ ಒಂಭತ್ತು ನ್ಯಾಯಾಧೀಶರ ಪೀಠದಿಂದ ಮಾತ್ರ ಸಾಧ್ಯ ಎಂಬ ನಿರ್ಧಾರಕ್ಕೆ ಬಂದಿತು. ಅದೇ ಪೀಠ ಈಗ ಕೊನೆಗೂ ಸಮಾವೇಶಗೊಂಡಿದೆ.

ತೀರ್ಪು ಪೂರ್ವಗ್ರಹ ಪೀಡಿತವೇ?

1978ರ ತೀರ್ಪನ್ನು ನ್ಯಾಯಾಲಯವು ಮರುಪರಿಶೀಲನೆ ನಡೆಸಬೇಕು ಎಂದು ಬಯಸುವವರು ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು ನೀಡಿದ ತೀರ್ಪು ಸೈದ್ಧಾಂತಿಕವಾಗಿ ಪೂರ್ವಗ್ರಹ ಪೀಡಿತವಾಗಿದೆ ಎಂಬ ವಾದವನ್ನು ಮುಂಡಿಸುತ್ತಾರೆ. ಅದು ಶಾಸನ ನಿಗದಿಪಡಿಸಿದ್ದಕ್ಕಿಂತಲೂ ಮೀರಿದ ಕಾರ್ಮಿಕ ಪರವಾದ ಧೋರಣೆಯನ್ನು ಹೊಂದಿತ್ತು ಎಂಬುದು ಅವರ ವಾದವಾಗಿದೆ.

ʼವ್ಯಾಪಾರʼ, ʼವ್ಯವಹಾರʼ ಮತ್ತು ʼಉತ್ಪಾದನೆʼ ಎಂಬಂತಹ ಪದಗಳ ನೇರ ಅರ್ಥ ವ್ಯಾಖ್ಯಾನ ಮಾಡುವ ಸಮಯ ಈಗ ಬಂದಿದೆ ಎಂದು ಹಿರಿಯ ವಕೀಲ ಶೇಖರ್ ನಾಫಡೆ ಅವರು ಪೀಠಕ್ಕೆ ತಿಳಿಸಿದ್ದಾರೆ. ಬೋಧನೆ ಎನ್ನುವುದು ಬೌದ್ಧಿಕ ಜಾಗೃತಿಯೇ ಹೊರತು ಭೌತಿಕ ಸೇವೆಯಲ್ಲ, ಮತ್ತು ಈಗ 21A ಅಡಿಯಲ್ಲಿ ಮೂಲಭೂತ ಹಕ್ಕಾಗಿರುವ ಶಿಕ್ಷಣವನ್ನು ಕೇವಲ ಒಂದು ಕೈಗಾರಿಕೆ ಎಂದು ವರ್ಗೀಕರಿಸುವುದು ಸಾಧ್ಯವಿಲ್ಲದ ಮಾತು ಎಂಬ ವಾದವನ್ನು ಅವರು ಮಂಡಿಸಿದ್ದಾರೆ. ರಾಜ್ಯವು ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವ ಸಂದರ್ಭದಲ್ಲಿ ಅದನ್ನು ವಾಣಿಜ್ಯ ಉದ್ಯಮ ಎಂದು ಪರಿಗಣಿಸಬಾರದು ಎಂಬುದು ಇದರ ಹಿಂದಿನ ತರ್ಕವಾಗಿದೆ.

ವಿಚಾರಣೆಯ ಮೊದಲ ದಿನವೇ ಕೇಂದ್ರ ಸರ್ಕಾರವು ಅಟಾರ್ನಿ ಜನರಲ್ ಆರ್.ವೆಂಕಟರಮಣ ಅವರ ಮೂಲಕ ಅತ್ಯಂತ ನೇರ ಮತ್ತು ನಿಷ್ಠುರವಾದ ಮಂಡನೆಯನ್ನು ಮಾಡಿತು. ನ್ಯಾಯಾಲಯಗಳು ಶಾಸಕಾಂಗದ ತೀರ್ಮಾನದ ಬದಲಿಗೆ ತಮ್ಮದೇ ಆದ ಸಾಮಾಜಿಕ ಅಥವಾ ಆರ್ಥಿಕ ಸಿದ್ಧಾಂತಗಳ ಹೇರಿಕೆ ಮಾಡಬಾರದು ಎಂಬ ಎಚ್ಚರಿಕೆಯನ್ನು ನೀಡಿದರು.

ಅತಿಯಾದ ವಿಸ್ತಾರವನ್ನು ಒಳಗೊಂಡ ವ್ಯಾಖ್ಯಾನವು ಉದ್ಯೋಗದಾತರ ಮೇಲೆ ಹೊರೆಯಾಗಿ ಪರಿಣಮಿಸುತ್ತದೆ ಮತ್ತು ಉದ್ಯೋಗ ಸೃಷ್ಟಿಯು ರಾಷ್ಟ್ರೀಯ ಆದ್ಯತೆಯಾಗಿರುವ ಸಂದರ್ಭದಲ್ಲಿ ಇದು ಖಾಸಗಿ ಉದ್ಯಮಗಳ ಉತ್ಸಾಹವನ್ನು ಕುಂದಿಸುತ್ತದೆ ಎಂಬ ವಾದವನ್ನು ಅವರು ಮುಂದಿಟ್ಟರು.

ಇದೇ ಸಂದರ್ಭದಲ್ಲಿ ಕೈಗಾರಿಕಾ ವಿವಾದಗಳ ಕಾಯ್ದೆಯ ಬದಲಿಗೆ ʼಕೈಗಾರಿಕಾ ಸಂಬಂಧಗಳ ಸಂಹಿತೆ-2020ʼನ್ನು ಜಾರಿಗೆ ತರಲು ಸಂಸತ್ತು ನಿರ್ಧಾರ ಕೈಗೊಂಡಿರುವುದರ ಕಡೆಗೆ ಅವರು ಬೊಟ್ಟು ಮಾಡಿದರು. ಇದು ಅಸ್ತವ್ಯಸ್ತವಾಗಿದ್ದ ಹಾಗೂ ವಿಸ್ತಾರವಾದ ವ್ಯಾಖ್ಯಾನವನ್ನು ಪುನರ್ ರಚನೆ ಮಾಡಲು ಶಾಸಕಾಂಗವು ಈಗಾಗಲೇ ತೀರ್ಮಾನಿಸಿದೆ ಎಂಬುದರ ಸಂಕೇತವಾಗಿದೆ ಎಂದು ಅವರು ತಿಳಿಸಿದರು.

ʼಕೈಗಾರಿಕೆʼ ಎಂಬ ವ್ಯಾಖ್ಯಾನವನ್ನೇನಾದರೂ ನ್ಯಾಯಾಲಯವು ಕುಗ್ಗಿಸಿಬಿಟ್ಟರೆ ಆಸ್ಪತ್ರೆಗಳು, ಶಾಲೆ-ಎನ್ಜಿಓಗಳು ವೇತನಗಳು, ಕೆಲಸದ ಅವಧಿ ಮತ್ತು ವಿವಾದ ಪರಿಹಾರಗಳನ್ನು ನಿಯಂತ್ರಿಸುವ ಶಾಸನಬದ್ಧ ಚೌಕಟ್ಟಿನ ಆಚೆಗೆ ಉಳಿದುಬಿಡಬಹುದು.

ತಪ್ಪು ಕಲ್ಪನೆಗೆ ದಾರಿ

ಇನ್ನೊಂದು ಕಡೆ 1978ರ ತೀರ್ಪಿಗೆ ಯಾವುದೇ ಮರುಪರಿಶೀಲನೆಯ ಅಗತ್ಯವಿಲ್ಲ ಎಂದು ಬಲವಾಗಿ ವಾದ ಮಂಡಿಸಿದವರು ಹಿರಿಯ ವಕೀಲೆ ಇಂದಿರಾ ಜೈಸಿಂಗ್. ʼಬೆಂಗಳೂರು ಜಲಮಂಡಳಿʼ ಪ್ರಕರಣದಲ್ಲಿ ಪೀಠವು ವಿಭಜನೆಯಾಗಿತ್ತು ಎಂಬ ತಪ್ಪು ಕಲ್ಪನೆಯ ಮೇಲೆ ಈ ಸಂಪೂರ್ಣ ಉಲ್ಲೇಖವು ನಿಂತಿದೆ ಎಂದು ಅವರು ತಮ್ಮ ಮಂಡನೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಇತ್ಯೃಥವಾಗಿರುವ ಕಾನೂನನ್ನು ಮತ್ತೆ ತೆರೆಯುವುದಕ್ಕೆ ಬದಲಾಗಿ ನ್ಯಾಯಾಲಯವು ಈ ಉಲ್ಲೇಖವನ್ನು ತಿರಸ್ಕರಿಸಬೇಕು ಎಂಬುದು ಅವರ ವಾದವಾಗಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯಾಲಯವು ನೀಡುವ ಯಾವುದೇ ತೀರ್ಪು ವಿವಾದದ ಎರಡೂ ಕಡೆಯ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಇಂದಿರಾ ಜೈಸಿಂಗ್ ಅವರು ನೆನಪಿಸಿದರು. ಕಾರ್ಮಿಕ ವಿವಾದಗಳು ರಕ್ಷಣೆ ಕೋರುವ ಕಾರ್ಮಿಕರಿಂದ ಮಾತ್ರವಲ್ಲ, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಬಯಸುವ ಉದ್ಯೋಗದಾತರಿಂದಲೂ ಸಂಭವಿಸುತ್ತದೆ. ವ್ಯಾಖ್ಯಾನವನ್ನು ಸೀಮಿತಗೊಳಿಸುವುದರಿಂದ ವಿವಾದಗಳೇನೂ ಮಾಯವಾಗುವುದಿಲ್ಲ. ಬದಲಿಗೆ ಕಾರ್ಮಿಕರು ಪರಿಹಾರ ಪಡೆಯಬಹುದಾದ ವೇದಿಕೆಯನ್ನೇ ಅದು ಇಲ್ಲದಂತೆ ಮಾಡಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು.

ಕಡೆಗಣಿಸಲಾಗದ ಸಂಕೀರ್ಣತೆ

ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸಂಕೀರ್ಣತೆಯ ಮತ್ತೊಂದು ಪದರವಿರುವುದನ್ನೂ ಗಮನಿಸಬೇಕು. ʼಕೈಗಾರಿಕೆʼಯನ್ನು ವ್ಯಾಖ್ಯಾನಿಸುವ ʼಕೈಗಾರಿಕಾ ವಿವಾದಗಳ ಕಾಯ್ದೆಯ 2(ಜೆ) ಸೆಕ್ಷನ್ ಈಗಾಗಲೇ ರದ್ದಾಗಿದೆ. ಹಳೆಯ ಕಾನೂನಿನ ಬದಲಿಗೆ ʼಕೈಗಾರಿಕಾ ಸಂಬಂಧಗಳ ಸಂಹಿತೆ-2020ʼ 2025ರ ನವೆಂಬರ್ ತಿಂಗಳಲ್ಲಿ ಜಾರಿಗೆ ಬಂದಿದೆ. ಹಾಗಾಗಿ ಈಗ ಅಸ್ತಿತ್ವದಲ್ಲಿಯೇ ಇಲ್ಲದ ನಿಬಂಧನೆಯನ್ನು ನ್ಯಾಯಾಲಯವು ವ್ಯಾಖ್ಯಾನ ಮಾಡುತ್ತಿರುವುದರಿಂದ ಈ ಸಂಪೂರ್ಣ ಉಲ್ಲೇಖವು ತನ್ನ ಅರ್ಥವನ್ನು ಕಳೆದುಕೊಂಡಿದೆ ಎಂದು ಕೆಲವು ವಕೀಲರು ಪೀಠದ ಮುಂದೆ ವಾದ ಮಂಡಿಸಿದ್ದರು.

ಆದರೆ ಈ ವಾದವನ್ನು ಪೀಠವು ಒಪ್ಪಲಿಲ್ಲ. ನ್ಯಾಯಾಲಯವು ನೀಡುವ ಯಾವುದೇ ತೀರ್ಪು ಹಳೆಯ ಕಾನೂನಿನ ಅಡಿಯಲ್ಲಿ ದಾಖಲಾಗಿ ಬಾಕಿ ಉಳಿದಿರುವ ಹೆಚ್ಚಿನ ಸಂಖ್ಯೆಯ ಪ್ರಕರಣಗಳಿಗೆ ಅನ್ವಯವಾಗುತ್ತದೆ. ಈ ಪ್ರಕರಣವನ್ನು ಹೇಗಾದರಾಗಲಿ ಇತ್ಯರ್ಥಪಡಿಸಲೇಬೇಕು ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಅಭಿಪ್ರಾಯಪಟ್ಟರು.

ವ್ಯಾಖ್ಯಾನ ಸಂಕುಚಿತಗೊಂಡರೆ?

ಒಂದು ವೇಳೆ ಒಂಭತ್ತು ನ್ಯಾಯಾಧೀಶರನ್ನು ಒಳಗೊಂಡ ವಿಶಾಲ ನ್ಯಾಯಪೀಠವು ʼಕೈಗಾರಿಕೆʼ ಎಂಬ ವ್ಯಾಖ್ಯಾನವನ್ನು ಸಂಕುಚಿತಗೊಳಿಸಿದರೆ ಅಥವಾ ಕುಗ್ಗಿಸಿದರೆ ಅದರ ಪರಿಣಾಮಗಳು ನಿಶ್ಚಿತವಾಗಿ ಕಾರ್ಮಿಕ ವರ್ಗದ ದೊಡ್ಡ ವಿಭಾಗದ ಮೇಲೆ ತೀವ್ರವಾಗಿ ಉಂಟಾಗುತ್ತದೆ. ಆಸ್ಪತ್ರೆ, ಶಾಲೆ, ಎನ್ಜಿಓಗಳು, ಸರ್ಕಾರದ ಕಲ್ಯಾಣ ಇಲಾಖೆಗಳು ಮತ್ತು ವೃತ್ತಿಪರ ಸಂಸ್ಥೆಗಳಲ್ಲಿನ ಕಾರ್ಮಿಕ ವೇತನಗಳು, ಕೆಲಸದ ಅವಧಿ, ಲೇ-ಆಫ್ ಮತ್ತು ವಿವಾದ ಪರಿಹಾರಗಳನ್ನು ನಿಯಂತ್ರಿಸುವ ಶಾಸನಬದ್ಧ ಚೌಕಟ್ಟಿನ ಆಚೆಗೆ ಉಳಿದುಬಿಡಬಹುದು. ಹಾಗಾದಾಗ ಅವರನ್ನು ಸೇರಿಸಿಕೊಳ್ಳಲು ಯಾವುದೇ ಪರ್ಯಾಯ ವ್ಯವಸ್ಥೆ ಜಾರಿಯಲ್ಲಿ ಇಲ್ಲ.

1982ರ ʼಕೈಗಾರಿಕಾ ವಿವಾದಗಳ ಕಾಯ್ದೆʼಯ ತಿದ್ದುಪಡಿಯನ್ನು ಸಂಸತ್ತು ಅಂಗೀಕರಿಸಿತ್ತು. ಅದರಲ್ಲಿ ʼಕೈಗಾರಿಕೆʼಯನ್ನು ಹೆಚ್ಚು ನಿಖರವಾಗಿ ವ್ಯಾಖ್ಯಾನಿಸಲು ಪ್ರಯತ್ನಿಸಲಾಗಿತ್ತು. ಆದರೆ ಅದು ಇಂದಿಗೂ ಜಾರಿಗೆ ಬರಲೇ ಇಲ್ಲ. ಹಾಗಾಗಿ ಈ ಪ್ರಶ್ನೆಯು ರಾಜಕೀಯವಾಗಿ ಎಷ್ಟು ಸೂಕ್ಷ್ಮವಾಗಿದೆ ಎಂಬುದರ ಸಂಕೇತವಾಗಿದೆ. ಪರ್ಯಾಯ ಚೌಕಟ್ಟು ಇಲ್ಲದೆ ನಿರ್ಬಂಧಿತ ತೀರ್ಪು ಹೊರಬಂದರೆ ಅದು ಕಾನೂನಿನ ನಿರ್ವಾತವನ್ನು ಸೃಷ್ಟಿಸುತ್ತದೆ.

ನ್ಯಾಯಾಲಯವೇನಾದರೂ 1978ರ ತೀರ್ಪಿಗೆ ಯಾವುದೇ ಬದಲಾವಣೆ ಮಾಡದೇ ಹಾಗೇ ಉಳಿಸಿಕೊಂಡರೆ ಸಾರ್ವಭೌಮ ಕಾರ್ಯಗಳು ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ದೀರ್ಘಕಾಲದಿಂದ ಇರುವ ಅನಿಶ್ಚಿತತೆ ಹಾಗೇ ಮುಂದುವರಿಯುತ್ತದೆ. ʼಕೈಗಾರಿಕೆʼಯ ಈ ವಿಶಾಲವಾದ ವ್ಯಾಖ್ಯಾನದಿಂದಾಗಿ ಸಾರ್ವಜನಿಕ ಸೇವೆಗಳನ್ನು ಮರು ರಚನೆ ಮಾಡಲು, ಲಾಭದಾಯಕವಲ್ಲದ ಇಲಾಖೆಗಳನ್ನು ಮುಚ್ಚಲು ಅಥವಾ ವಾಣಿಜ್ಯ ಉದ್ಯಮಗಳಲ್ಲಿ ಸಾಮಾನ್ಯ ನಿರ್ವಹಣಾ ನಿರ್ಧಾರಗಳಂತೆ ಕಾಣುವ ನೀತಿಗಳನ್ನು ಜಾರಿಗೆ ತರುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಸರ್ಕಾರಗಳು ಮತ್ತು ಉದ್ಯೋಗದಾತ ಸಂಘಟನೆಗಳು ದಶಕಗಳಿಂದ ದೂರುತ್ತ ಬಂದಿವೆ. ಖಾಸಗೀಕರಣ ಮತ್ತು ಆರ್ಥಿಕ ಉದಾರೀಕರಣದತ್ತ ಒತ್ತು ನೀಡುತ್ತಿರುವ ಇಂದಿನ ದಿನಗಳಲ್ಲಿ ಈ ವಾದದ ಕಡೆಗೆ ತುರ್ತಾಗಿ ಗಮನಹರಿಸುವ ಅಗತ್ಯ ಹೆಚ್ಚಾಗಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಒಂಭತ್ತು ನ್ಯಾಯಾಧೀಶರ ಪೀಠವು ಒಂದು ಅಸಾಮಾನ್ಯ ಸಂದರ್ಭದಲ್ಲಿ ಈ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಹಳೆಯ ಕಾನೂನು ಇಂದು ಇಲ್ಲ. ಅದರ ಸ್ಥಾನದಲ್ಲಿ ಜಾರಿಗೆ ಬಂದಿರುವ ಹೊಸ ಸಂಹಿತೆಯ ನಿಬಂಧನೆಗಳು ತನ್ನದೇ ಆದ ಅಸ್ಪಷ್ಟತೆಗಳನ್ನು ಹೊಂದಿವೆ. ದೇಶದ ಉದ್ದಗಲಕ್ಕೂ ಇರುವ ಕಾರ್ಮಿಕ ನ್ಯಾಯಾಲಯಗಳಲ್ಲಿ ಹಳೆಯ ಕಾಯ್ದೆಯಡಿ ಲಕ್ಷಾಂತರ ಪ್ರಕರಣಗಳು ಇನ್ನೂ ಇತ್ಯರ್ಥ ಕಾಣದೆ ಕುಳಿತಿವೆ.

ಹಾಗಾಗಿ ಇಲ್ಲಿ ಕೈಗೊಳ್ಳುವ ನಿರ್ಧಾರವು ಕೇವಲ ಒಂದು ವ್ಯಾಖ್ಯಾನದ ವ್ಯಾಪ್ತಿಯ ಬಗ್ಗೆ ಇರುವ ಶೈಕ್ಷಣಿಕ ಚರ್ಚೆಯನ್ನು ಮಾತ್ರ ಇತ್ಯರ್ಥಪಡಿಸುವುದಿಲ್ಲ. ಬದಲಿಗೆ ಒಂದು ಆಸ್ಪತ್ರೆಯ ನರ್ಸ್, ಒಂದು ಶಾಲೆಯ ಶಿಕ್ಷಕ, ಕಲ್ಯಾಣಾಧಿಕಾರಿ ಅಥವಾ ಚಾರಿಟಬಲ್ ಟ್ರಸ್ಟಿನ ಉದ್ಯೋಗಿಗೆ ಕೆಲಸದ ಸ್ಥಳದಲ್ಲಿ ಅನ್ಯಾಯವಾದ ಸಂದರ್ಭದಲ್ಲಿ ನ್ಯಾಯಯುತ ವಿಚಾರಣೆಯ ಕಾನೂನು ಹಕ್ಕು ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪ್ರಾಯೋಗಿಕವಾಗಿ ನಿರ್ಧರಿಸುವ ಕೆಲಸವನ್ನು ಮಾಡುತ್ತದೆ. ಸಂವಿಧಾನತ್ಮಕ ಪ್ರಶ್ನೆಗಳು ಹೆಚ್ಚಾಗಿ ಶಾಸನಬದ್ಧವಾದ ವ್ಯಾಖ್ಯಾನದ ಭಾಷೆಯಲ್ಲಿ ಅಡಗಿರುತ್ತದೆ ಎಂಬುದು ನಿಜ. ಆದರೆ ಇದು ಮೂಲಭೂತವಾಗಿ ಭಾರತವು ಯಾವ ರೀತಿಯ ಸಮಾಜವಾಗಲು ಬಯಸಿದೆ ಎಂಬ ಪ್ರಶ್ನೆಯಾಗಿದೆ.

Read More
Next Story