
Ramadevarabetta Vulture Sanctuary| ಅತ್ಯಪರೂಪದ ರಣಹದ್ದು ಜೋಡಿಗೆ ಇನ್ನೊಂದು ಪುಟಾಣಿ
ರಾಮದೇವರ ಬೆಟ್ಟದಲ್ಲಿ ರಣಹದ್ದೊಂದು ಸತತ ಐದನೇ ಭಾರಿಗೆ ಮರಿಯೊಂದಕ್ಕೆ ಜನ್ಮ ನೀಡಿದೆ. ಈ ಮೂಲಕ ಈಗ ಬೆಟ್ಟದಲ್ಲಿ ಉದ್ದಕೊಕ್ಕಿನ ರಣಹದ್ದಿನ ಸಂತತಿ ವೃದ್ಧಿಯಾಗಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.
ದೇಶದ ಮೊದಲ ಹಾಗೂ ಎಕೈಕ ರಣಹದ್ದು ಅಭಯಾರಣ್ಯದಲ್ಲಿಈಗ ಮರಿ ರಣಹದ್ದಿನ ಕಲರವ ಕೇಳುತ್ತಿದೆ. ಸತತ ಐದನೇ ವರ್ಷ ರಣಹದ್ದೊಂದು ಮರಿಯೊಂದಕ್ಕೆ ಜನ್ಮ ನೀಡಿದೆ.
ನವೆಂಬರ್ -ಡಿಸೆಂಬರ್ ತಿಂಗಳಿನಲ್ಲಿ ಉದ್ದಕೊಕ್ಕಿನ ರಣಹದ್ದು ರಾಮದೇವರ ಬೆಟ್ಟದಲ್ಲಿ ಮೊಟ್ಟೆ ಇಟ್ಟಿದೆ. ಮೊಟ್ಟೆಯಿಟ್ಟ ಸುಮಾರು 55 ರಿಂದ 60 ದಿನಗಳಿಗೆ ಮೊಟ್ಟೆಯೊಡೆದು ಮರಿ ಆಚೆ ಬರುತ್ತದೆ. ಹೀಗಾಗಿ ಎರಡು -ಮೂರು ದಿನಗಳಿಂದ ರಾಮದೇವರ ಬೆಟ್ಟದಲ್ಲಿ ಕಾಣಿಸಿಕೊಳ್ಳುತ್ತಿರುವ ಮರಿ ರಣಹದ್ದು ಈಗ ಎಲ್ಲರನ್ನು ಆಕರ್ಷಿಸುತ್ತಿದೆ.
ರಣಹದ್ದು ಸಾಮಾನ್ಯವಾಗಿ ವರ್ಷಕ್ಕೆ ಒಂದೇ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಸಾಮಾನ್ಯವಾಗಿ ನವೆಂಬರ್ ನಿಂದ ಮಾರ್ಚ್ ಅಂತ್ಯದವರೆಗೆ ಮೊಟ್ಟೆ ಇಟ್ಟು ಮರಿ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆಹಾರ ಹುಡುಕುತ್ತಾ ನೂರಾರು ಮೈಲಿಗಳನ್ನು ಕ್ರಮಿಸುವ ಸಾಮರ್ಥ್ಯ ಹೊಂದಿರುವ ಪಕ್ಷಿ ಇದಾಗಿದ್ದು, ತನ್ನ ಮೂಲ ನೆಲೆಯಲ್ಲಿಯೇ ಬಂದು ತನ್ನ ಸಂಗಾತಿಯೊಂದಿಗೆ ಜನ್ಮ ನೀಡುವ ಪರಿಪಾಠ ಬೆಳೆಸಿಕೊಂಡಿವೆ.
ರಣಹದ್ದುಗಳ ತಾಣ
ಅಳಿವಿನಂಚಿಲ್ಲಿರುವ ಉದ್ದಕೊಕ್ಕಿನ ರಣಹದ್ದುಗಳ ನೆಚ್ಚಿನ ತಾಣವಾಗಿರುವ ರಾಮದೇವರ ಬೆಟ್ಟಕ್ಕೆ ವರ್ಷಕ್ಕೊಮ್ಮೆ ರಣಹದ್ದುಗಳು ದೇಶ ವಿದೇಶದಿಂದ ವಲಸೆ ಬರುತ್ತವೆ. ಇಲ್ಲಿ ದಕ್ಷಿಣ ಭಾರತದ ರಣಹದ್ದುಗಳ ಎರಡನೇ ಸಂತಾನೋತ್ಪತ್ತಿ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗಿತ್ತು. ಈ ರಣಹದ್ದುಗಳನ್ನು ರಕ್ಷಿಸಲು 346 ಹೆಕ್ಟೇರ್ ಪ್ರದೇಶದ ಅರಣ್ಯವನ್ನು 2012ರಲ್ಲಿರಣಹದ್ದುಗಳ ಅಭಯಾರಣ್ಯವನ್ನಾಗಿ ಸರಕಾರ ಘೋಷಿಸಿತ್ತು.
ಇಲ್ಲಿ ಮುಖ್ಯವಾಗಿ ಉದ್ದ ಕೊಕ್ಕಿನ ರಣಹದ್ದು (Long-billed Vulture), ಬಿಳಿ ಬೆನ್ನಿನ ರಣಹದ್ದು (White-backed Vulture) ಮತ್ತು ಈಜಿಪ್ಟಿಯನ್ ರಣಹದ್ದು (Egyptian Vulture) ಪ್ರಭೇದಗಳು ಕಂಡುಬರುತ್ತವೆ.
ರಾಮದೇವರ ಬೆಟ್ಟದಲ್ಲಿ ಈ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ರಣಹದ್ದುಗಳು ಕಾಣಿಸಿಕೊಳ್ಳುತ್ತಿದ್ದವು. ಆದರೀಗ ಇವುಗಳ ಸಂತತಿ ಕ್ಷೀಣಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮೊಟ್ಟೆಯಿಟ್ಟು ಮರಿ ಮಾಡುವ ಪ್ರಕ್ರಿಯೆಯೂ ಸಹ ಅಪರೂಪದ ಘಟನೆಯೇ ಆಗಿತ್ತು. 2015-16ರಲ್ಲಿ ರಣಹದ್ದೊಂದು ಮರಿ ಮಾಡಿತ್ತು ಎನ್ನುವುದು ಬಿಟ್ಟರೆ ಅಂದಿನಿಂದ ಪ್ರತಿ ವರ್ಷ ಮೊಟ್ಟೆ ಇಟ್ಟರೂ ವಿವಿಧ ಕಾರಣಗಳಿಗಾಗಿ ಮರಿ ಮಾಡಿಸುವುದಲ್ಲಿ ಅವು ವಿಫಲವಾಗಿದ್ದವು.
ಆದರೆ, ಕಳೆದ 2021-22ನೇ ಸಾಲಿನಿಂದಲೂ ಸತತವಾಗಿ ಪ್ರತಿ ವರ್ಷವು ಮರಿಗೆ ಜನ್ಮ ನೀಡುತ್ತಲೇ ಇರುವುದು ಹಣಹದ್ದುಗಳ ಸಂತತಿ ವೃದ್ಧಿಗೆ ಪೂರಕವಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ನ ಕಾರ್ಯದರ್ಶಿ ಬಿ. ಶಶಿಕುಮಾರ್ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, ಉದ್ದಕ್ಕೊಕ್ಕಿನ ರಣಹದ್ದು 5ನೇ ವರ್ಷ ಮರಿಗೆ ಜನ್ಮ ನೀಡಿರುವುದು ಖುಷಿ ತಂದಿದೆ. ಆದರೆ ಇಲ್ಲಿ ಕಾಣುವ ಹದ್ದುಗಳ ಸಂಖ್ಯೆ 5 ರಿಂದ 6ರ ಗಡಿ ದಾಟುತ್ತಿಲ್ಲ. ಈ ಕುರಿತಂತೆ ಸಮಗ್ರ ಅಧ್ಯಯನ ನಡೆಸಬೇಕಿದೆ. ಜತೆಗೆ ಈ ಪ್ರದೇಶವನ್ನು ಮತ್ತಷ್ಟು ರಣಹದ್ದು ಸ್ನೇಹಿ ತಾಣವನ್ನಾಗಿ ಮಾಡುವ ಮೂಲಕ ಅವುಗಳ ರಕ್ಷಣೆ ಮಾಡಬೇಕಿದೆ ಎಂದರು.
"ಉದ್ದಕ್ಕೊಕಿನ ರಣಹದ್ದುಗಳಿಗೆ ಹೇಳಿ ಮಾಡಿಸಿದಂತಹ ಆವಾಸ ಸ್ಥಾನ, ರಾಮದೇವರ ಬೆಟ್ಟ. ಈ ಕಾರಣಕ್ಕಾಗಿಯೇ ಇದನ್ನು ರಣಹದ್ದುಧಾಮವಾಗಿದೆ. ಆದರೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣದೇ ಇರುವುದು ಪಕ್ಷಿ ಪ್ರಿಯರಲ್ಲಿ ಆತಂಕವನ್ನು ಮೂಡಿಸಿದೆ. ಜನ್ಮ ಪಡೆದ ಮರಿಗಳು ಏನಾಗಿವೆ? ಕೇವಲ ಒಂದೇ ರಣಹದ್ದು ಮಾತ್ರ ಸಂತಾನೋತ್ಪತ್ತಿ ಮಾಡುತ್ತಿದೆಯೇ? ಇವುಗಳಿಗೆ ಆಹಾರದ ಕೊರತೆ ಎದುರಾಗಿದೆಯೇ? ರಣಹದ್ದು ಧಾಮದಲ್ಲಿ ಮತ್ತಷ್ಟು ಸುರಕ್ಷತಾ ಕ್ರಮ ಕೈಗೊಳ್ಳಬೇಕಿದೆಯೇ ಎನ್ನುವ ಬಗ್ಗೆಯೂ ತಜ್ಞರಿಂದ ಅಧ್ಯಯನ ನಡೆಸುವ ಮೂಲಕ ಇವುಗಳ ಸಂತಾನೋತ್ಪತ್ತಿಗೆ ಮತ್ತಷ್ಟು ಬಲ ತುಂಬ ಬೇಕಿದೆ," ಎಂದವರು ಹೇಳಿದ್ದಾರೆ.

