ಸೋಷಿಯಲ್ ಮೀಡಿಯಾದಲ್ಲಿ ಈ ಪುಟ್ಟ ಕೋತಿಯದ್ದೇ ಹವಾ! ಈ ಕ್ಯೂಟ್ ಮಕಾಕ್‌ಗೆ ಆ ಹೆಸರು ಬಂದಿದ್ದು ಹೇಗೆ? ಸಿಗರೇಟ್ ಸೇದೋ ಒಬ್ಬ ಕ್ರೇಜಿ ಮಂಗಾ ಆರ್ಟಿಸ್ಟ್‌ನ ಹೆಸರನ್ನೇ ಇದಕ್ಕೆ ಇಟ್ಟಿದ್ದಾರೆ!
ನೀವು ಇಂಟರ್ನೆಟ್‌ನಲ್ಲಿ ಬಹಳ ಸಮಯ ಕಳೆಯುವವರಾಗಿದ್ದರೆ, ಪೆಂಗ್ವಿನ್ ಒಂದು ಅಸ್ತಿತ್ವದ ಬಿಕ್ಕಟ್ಟಿನಲ್ಲಿದ್ದಂತೆ ಕಾಣುವ ದೃಶ್ಯವನ್ನು ನೀವು ನಿಶ್ಚಿತವಾಗಿ ನೋಡಿರುತ್ತೀರಿ. ಈ ವರ್ಷದ ಜನವರಿಯಲ್ಲಿ ವೈರಲ್ ಆದ ಆ ವಿಡಿಯೋ ತುಣುಕು, ಶ್ರೇಷ್ಠ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಮತ್ತು 'ನ್ಯೂ ಜರ್ಮನ್ ಸಿನಿಮಾ' ಚಳವಳಿಯ ಪ್ರವರ್ತಕರಾದ ವರ್ನರ್ ಹರ್ಜಾಗ್ ಅವರ 'ಎನ್ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್' ಎಂಬ ಚಿಂತನಶೀಲ ಸಾಕ್ಷ್ಯಚಿತ್ರಕ್ಕೆ ಸೇರಿದ್ದಾಗಿದೆ.
ಆ ದೃಶ್ಯದಲ್ಲಿ, ಅಡೆಲಿ ಎಂಬ ಹೆಸರಿನ ಪೆಂಗ್ವಿನ್ ಒಂದು ತನ್ನ ಗುಂಪಿನಿಂದ ಹೊರಬಂದು, ವಿಶಾಲವಾದ ಹಿಮಪದರ ಪರ್ವತಗಳ ಕಡೆಗೆ ಏಕಾಂಗಿಯಾಗಿ ಹೆಜ್ಜೆ ಹಾಕುತ್ತದೆ. ಭೂಮಿಯ ಅತ್ಯಂತ ದಕ್ಷಿಣದ ಮತ್ತು ಐದನೇ ಅತಿದೊಡ್ಡ ಖಂಡವಾದ, ಹಾಗೂ ಅತ್ಯಂತ ಶೀತಲ, ಶುಷ್ಕ ಮತ್ತು ನಿರ್ಜನ ಪ್ರದೇಶವೆಂದು ಪರಿಗಣಿಸಲಾದ ಅಂಟಾರ್ಕ್ಟಿಕಾದ ಭೀಕರ ಹವಾಮಾನದಲ್ಲಿ ವಾಸಿಸುವ ವಿಲಕ್ಷಣ ವಿಜ್ಞಾನಿಗಳು ಮತ್ತು ಸಂಶೋಧಕರ ಕುರಿತಾದ ಈ ಸಾಕ್ಷ್ಯಚಿತ್ರವನ್ನು ಮತ್ತೊಮ್ಮೆ ನೋಡಿದಾಗ, ಹರ್ಜಾಗ್ ಅವರ ಕಥೆ ಹೇಳುವ ಶೈಲಿಗೆ ಫಿದಾ ಆಗಿ ಹೋದೆ.
ಇತ್ತೀಚೆಗೆ ಮತ್ತೊಂದು ಪ್ರಾಣಿ ಇಡೀ ಅಂತರಜಾಲ ವಲಯದಲ್ಲಿ ಸಹಾನುಭೂತಿಯನ್ನು ಗಳಿಸಿದೆ: ಜುಲೈ 2025ರಲ್ಲಿ ಇಚಿಕಾವಾ ಸಿಟಿ ಮೃಗಾಲಯದಲ್ಲಿ 'ಪಂಚ್ ಪಂಚ್' ಎಂಬ ಹೆಸರಿನ ಜಪಾನೀಸ್ ಮಕಾಕ್ (ಸಿಂಹ ಬಾಲದ ಸಿಂಗಳೀಕ-Macaque) ಮರಿ ಜನಿಸಿತು. ಹುಟ್ಟಿದ ಕೆಲವೇ ಗಂಟೆಗಳಲ್ಲಿ ಅದರ ತಾಯಿ ಅದನ್ನು ತಿರಸ್ಕರಿಸಿತು ಬಿಟ್ಟಿತು. ಪ್ರೈಮೇಟ್‌ಗಳಲ್ಲಿ (ಕೋತಿ ಜಾತಿಯ ಪ್ರಾಣಿಗಳು) ಇದು ಅಪರೂಪದ ನಡವಳಿಕೆಯಾದರೂ ಒತ್ತಡ, ಅನುಭವದ ಕೊರತೆ ಅಥವಾ ವೈದ್ಯಕೀಯ ತೊಡಕುಗಳಿಂದ ಹೀಗಾಗುತ್ತದೆ ಎಂಬುದೂ ಅಲ್ಲಲ್ಲಿ ದಾಖಲಾಗಿದೆ.
ಮೃಗಾಲಯದ ಸಿಬ್ಬಂದಿ ಕೂಡಲೇ ಮಧ್ಯಪ್ರವೇಶಿಸಿ, ಮರಿಗೆ ತಾಯಿಯ ಮಮತೆ ನೀಡಲು ಐಕಿಯಾ ಕಂಪನಿಯ ಓರಂಗುಟಾನ್ ಮೃದು ಆಟಿಕೆಯನ್ನು ಪರ್ಯಾಯ ತಾಯಿಯಾಗಿ ಒದಗಿಸಿದರು. ಆ ಆಟಿಕೆಗೆ "ಓರನ್-ಮಾಮಾ" ಎಂದು ಹೆಸರಿಡಲಾಯಿತು. ಪಂಚ್ ಪಂಚ್ ಆ ಆಟಿಕೆಯನ್ನು ಅಪ್ಪಿಕೊಂಡಿರುವ, ಅದರ ಮೇಲೆ ಮಲಗಿರುವ ಮತ್ತು ತನ್ನ ಪುಟ್ಟ ಪುಟಾಣಿ ಬೆರಳುಗಳಿಂದ ಆ ಕೃತಕ ತುಪ್ಪಳವನ್ನು ಪ್ರೀತಿಯಿಂದ ಹಿಡಿದುಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು.
ಇದರ ಪರಿಣಾಮವಾಗಿ, ಜಗತ್ತಿನಾದ್ಯಂತ ಈ ಓರಂಗುಟಾನ್ ಆಟಿಕೆಗೆ ಭಾರಿ ಬೇಡಿಕೆ ಉಂಟಾಯಿತು. ಪಂಚ್ ಪಂಚ್ ಬಳಸಿದಂತೆಯೇ ತಮಗೂ ಆಟಿಕೆ ಬೇಕೆಂದು ಅಭಿಮಾನಿಗಳು ಮುಗಿಬಿದ್ದು ಆರ್ಡರ್ ಮಾಡಿದ್ದರಿಂದ, ಪ್ರಸ್ತುತ ಜಾಗತಿಕವಾಗಿ ಈ ಆಟಿಕೆ ಸಂಪೂರ್ಣವಾಗಿ ಸೋಲ್ಡ್-ಔಟ್ ಆಗಿ ಹೋಗಿದೆ.
ಮಂಗಾ ದಂತಕಥೆ
'ಪಂಚ್' ಎಂಬ ಹೆಸರಿನ ಹಿಂದೆ ಒಂದು ಸಾಂಸ್ಕೃತಿಕ ಹಿನ್ನೆಲೆಯಿದೆ. ಈ ಮರಿ ಮಂಗನಿಗೆ 'ಮಂಕಿ ಪಂಚ್' ಎಂಬ ಪ್ರಖ್ಯಾತ ಮಂಗಾ (ಜಪಾನೀಸ್ ಕಾಮಿಕ್) ಕಲಾವಿದನ ಹೆಸರನ್ನು ಇಡಲಾಗಿದೆ. (ಕನ್ನಡದಲ್ಲಿ ಮಂಗ ಎಂದರೆ ಕೋತಿ ಎಂಬರ್ಥ). 1937 ರಲ್ಲಿ ಜನಿಸಿದ ಇವರ ಅಸಲಿ ಹೆಸರು ಕಾಜುಹಿಕೊ ಕಟೊ. ಹೊಕ್ಕೈಡೋದ ಮೀನುಗಾರರ ಮಗನಾಗಿದ್ದ ಕಟೊಗೆ ಶಾಲಾ ದಿನಗಳಿಂದಲೇ ಚಿತ್ರ ಬಿಡಿಸುವುದರಲ್ಲಿ ಆಸಕ್ತಿ. 1965 ರಲ್ಲಿ ವೃತ್ತಿಪರ ಮಂಗಾ ಕ್ಷೇತ್ರಕ್ಕೆ ಕಾಲಿಟ್ಟ ಆತ, 1967 ರಲ್ಲಿ ಜಪಾನ್ನ ಜನಪ್ರಿಯ ಸಂಸ್ಕೃತಿಯಲ್ಲಿ ಸಂಚಲನ ಮೂಡಿಸಿದ 'ಲುಪಿನ್ III' ಎಂಬ ಕೃತಿಯನ್ನು ರಚಿಸಿದರು.
'ಮಂಕಿ ಪಂಚ್' ಎಂಬುದು ಅವರ ಸಂಪಾದಕರೊಬ್ಬರು ಸೂಚಿಸಿದ ಕಲ್ಪಿತ ಹೆಸರು. ಇದು ಪಾಶ್ಚಾತ್ಯ ಶೈಲಿಯಲ್ಲಿ ತಮಾಷೆಯಾಗಿ ಕೇಳಿಸುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಕಟೊ ಅವರಿಗೆ ಈ ಹೆಸರು ಅಷ್ಟಾಗಿ ಇಷ್ಟವಿರಲಿಲ್ಲವಂತೆ, ಆದರೆ ಕಾಲಕ್ರಮೇಣ ಅದೇ ಹೆಸರು ಸ್ಥಿರವಾಯಿತು. 'ಲುಪಿನ್ III' ಫ್ರೆಂಚ್ ಕಳ್ಳ 'ಆರ್ಸೀನ್ ಲುಪಿನ್' ಪಾತ್ರವನ್ನು ಆಧರಿಸಿದ್ದಾಗಿದ್ದರೂ, ಕಟೊ ಅವರು ಇದಕ್ಕೆ 'ಟಾಮ್ ಅಂಡ್ ಜೆರ್ರಿ' ಶೈಲಿಯಲ್ಲಿ ಬೆನ್ನಟ್ಟುವ ಮೋಜಿನ ದೃಶ್ಯಗಳನ್ನು ಸೇರಿಸಿದರು. ಇದು ಆಟದಂತಿದ್ದರೂ ಗಂಭೀರವಾಗಿತ್ತು, ತುಂಟತನದಿಂದ ಕೂಡಿದ್ದರೂ ಅತ್ಯಂತ ಸ್ಟೈಲಿಶ್ ಆಗಿತ್ತು.
1970ರ ವೇಳೆಗೆ 'ಲುಪಿನ್ III' ಕೇವಲ ಕಾಮಿಕ್ ಆಗಿ ಉಳಿಯದೆ ಅನಿಮೆ ಚಿತ್ರಗಳು, ಟಿವಿ ಸರಣಿಗಳು ಮತ್ತು ವಿಡಿಯೋ ಗೇಮ್ಗಳ ಸಾಮ್ರಾಜ್ಯವನ್ನೇ ನಿರ್ಮಿಸಿತು. 2024ರಲ್ಲಿ ಜಗತ್ತಿನಾದ್ಯಂತ ಭಾರಿ ಸದ್ದು ಮಾಡಿದ ಸ್ಟುಡಿಯೋ ಗಿಬ್ಲಿ ಸಂಸ್ಥೆಯ ಸ್ಥಾಪಕ ಹಯಾವೊ ಮಿಯಾಝಾಕಿ ಅವರೂ ಸಹ ಇದರ ಆರಂಭಿಕ ಆವೃತ್ತಿಗಳಲ್ಲಿ ಕೆಲಸ ಮಾಡಿದ್ದರು. ವಿಶೇಷವಾಗಿ 1979ರ 'ದಿ ಕ್ಯಾಸಲ್ ಆಫ್ ಕಾಗ್ಲಿಯೊಸ್ಟ್ರೋ' ಅತ್ಯಂತ ಪ್ರಸಿದ್ಧವಾದುದು.
ಮಂಕಿ ಪಂಚ್ ರೂಪಿಸಿರುವ 'ಲುಪಿನ್ III' ತಾರಾಗಣ (Photo: Wikimedia Commons)
ಹೀಗೆ ಒಂದು ಪುಟ್ಟ ಕಾಮಿಕ್ ಪಟ್ಟಿ ಜಪಾನ್ನ ಸುದೀರ್ಘ ಇತಿಹಾಸವಿರುವ ಮನೋರಂಜನಾ ಆಸ್ತಿಯಾಗಿ ಬೆಳೆಯಿತು.
ಮಂಕಿ ಪಂಚ್ ಅವರು 2019ರಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ನಿಧನರಾದರು. ಅಷ್ಟರಲ್ಲಾಗಲೇ 'ಲುಪಿನ್ III' ಐದು ದಶಕಗಳನ್ನು ಪೂರೈಸಿತ್ತು. ಉದ್ದನೆಯ ಕೈಕಾಲುಗಳು ಮತ್ತು ಕುತಂತ್ರದ ನಗು ಹೊಂದಿದ್ದ ಅವರ ಚಿತ್ರಕಲಾ ಶೈಲಿಯು ಯುದ್ಧಾನಂತರದ ಜಪಾನೀಸ್ ಪಾಪ್ ಸಂಸ್ಕೃತಿಯನ್ನು ರೂಪಿಸಲು ಸಹಾಯ ಮಾಡಿತು. ಲುಪಿನ್ ಒಬ್ಬ ಕಳ್ಳನಾಗಿದ್ದರಿಂದ ಅವನು 'ಹೀರೋ' ಆಗಿರಲಿಲ್ಲ, ಆದರೆ ತನ್ನದೇ ಆದ ವಿಶಿಷ್ಟ ಆಕರ್ಷಣೆಯನ್ನು ಹೊಂದಿದ್ದ.
ವಿಪರ್ಯಾಸವೆಂದರೆ, ಇಂದು ಅದೇ 'ಮಂಕಿ ಪಂಚ್' ಎಂಬ ಹೆಸರು ಸುತ್ತಿ ಬಳಸಿ ಮತ್ತೆ 'ಪಂಚ್' ಎಂಬ ನಿಜವಾದ ಮಂಗನಿಗೆ ಬಂದು ತಲುಪಿದೆ!
ಮಾನವ ಸಹಜ ಗುಣ
ಮಕಾಕ್ ಮರಿಗಳ ತಲೆಬುರುಡೆಗೆ ಹೋಲಿಸಿದರೆ ಅವುಗಳ ಕಣ್ಣುಗಳು ವಿಶಾಕವಾಗಿರುತ್ತವೆ. ಇದು ಪ್ರಾಣಿ ನಡವಳಿಕೆ ಶಾಸ್ತ್ರಜ್ಞ ಕೊನ್ರಾಡ್ ಲೊರೆಂಜ್ ಅವರು ಗುರುತಿಸಿದ "ಕಿಂಡ್ಚೆನ್ ಸ್ಕೀಮಾ" ಅಥವಾ 'ಶಿಶು ಮಾದರಿ'ಯ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ: ದುಂಡಗಿನ ಮುಖ, ದೊಡ್ಡ ಕಣ್ಣುಗಳು ಮತ್ತು ಪುಟ್ಟ ಮೂಗು. ಇದು ಬೇರೆ ಬೇರೆ ಪ್ರಭೇದಗಳಲ್ಲಿಯೂ ಆರೈಕೆ ಮಾಡುವ ಪ್ರವೃತ್ತಿಯನ್ನು ಜಾಗೃತಗೊಳಿಸುತ್ತದೆ.
ಆದರೆ, ಪಂಚ್ನ ಕಥೆಯು ಕೇವಲ ಪಾಪ್ ಸಂಸ್ಕೃತಿಯನ್ನು ಮೀರಿದ ಕಾರಣಗಳಿಗಾಗಿ ನಮ್ಮನ್ನು ಕಾಡುತ್ತದೆ. 1950ರ ದಶಕದಲ್ಲಿ ಅಮೆರಿಕದ ಮನೋವಿಜ್ಞಾನಿ ಹ್ಯಾರಿ ಹಾರ್ಲೋ (1905-1981) ರೀಸಸ್ ಮಂಗಗಳ ಮೇಲೆ ಸರಣಿ ಪ್ರಯೋಗಗಳನ್ನು ನಡೆಸಿದ್ದರು, ಅದು ಇಂದಿಗೂ ವಿವಾದಾತ್ಮಕವಾಗಿದೆ. ಮಂಗದ ಮರಿಗಳಿಗೆ ಎರಡು 'ಪರ್ಯಾಯ ತಾಯಿ'ಗಳನ್ನು ನೀಡಲಾಗಿತ್ತು: ಒಂದು ಹಾಲು ನೀಡುವ ತಂತಿಗಳಿಂದ ಮಾಡಿದ ತಾಯಿ, ಮತ್ತೊಂದು ಮೃದುವಾದ ಬಟ್ಟೆಯಿಂದ ಸುತ್ತಲ್ಪಟ್ಟ ಹಾಲು ನೀಡದ ತಾಯಿ. ಆಶ್ಚರ್ಯವೆಂದರೆ, ಮರಿಗಳು ಆಹಾರ ನೀಡುವ ತಂತಿಯ ತಾಯಿಗಿಂತ ಮೃದುವಾದ ಬಟ್ಟೆಯ ತಾಯಿಯನ್ನೇ ಅಪ್ಪಿಕೊಂಡವು.
ಅಂದರೆ, ಅವು ಪೌಷ್ಟಿಕಾಂಶಕ್ಕಿಂತ ಹೆಚ್ಚಾಗಿ 'ಸ್ಪರ್ಶದ ಸಾಂತ್ವನ'ಕ್ಕೆ ಆದ್ಯತೆ ನೀಡಿದವು. ಈ ಅಧ್ಯಯನಗಳು ನೈತಿಕವಾಗಿ ಪ್ರಶ್ನಾರ್ಹವಾಗಿದ್ದರೂ, ಸಸ್ತನಿಗಳಿಗೆ ಕೇವಲ ಆಹಾರವಷ್ಟೇ ಅಲ್ಲ, ದೈಹಿಕ ಸಂಪರ್ಕ ಮತ್ತು ಉಷ್ಣತೆಯು ಎಷ್ಟು ಮುಖ್ಯ ಎಂಬ ಅರಿವನ್ನು ಮೂಡಿಸಿದವು.
ಬಹುಶಃ ಈ ಕಥೆಗಳ ಆಕರ್ಷಣೆ ಏನೆಂದರೆ ಗುಂಪಿನಿಂದ ದೂರ ಹೋದ ಪೆಂಗ್ವಿನ್ ಆಗಲಿ ಅಥವಾ ಆಟಿಕೆಯನ್ನು ಅಪ್ಪಿಕೊಂಡ ಅನಾಥ ಮಕಾಕ್ ಆಗಲಿ — ನಾವು ನಮ್ಮನ್ನೇ ಅವುಗಳಲ್ಲಿ ಸುಲಭವಾಗಿ ಕಂಡುಕೊಳ್ಳುವುದರಲ್ಲಿ ಅಡಗಿದೆ. ಮಾನವರು ಬಹಳ ಹಿಂದಿನಿಂದಲೂ ಪ್ರಾಣಿಗಳನ್ನು ತಮ್ಮ ಖಾಸಗಿ ಆತಂಕಗಳನ್ನು ಪ್ರತಿಬಿಂಬಿಸುವ ಕನ್ನಡಿಗಳನ್ನಾಗಿ ಬಳಸುತ್ತಾ ಬಂದಿದ್ದಾರೆ. ಫ್ರಾಂಜ್ ಕಾಫ್ಕಾ ಅವರ ಸಣ್ಣ ಕಥೆ 'ಎ ರಿಪೋರ್ಟ್ ಟು ಆನ್ ಅಕಾಡೆಮಿ'ಯಲ್ಲಿ, ಒಂದು ಮಂಗವು ಮಾನವ ಸಮಾಜಕ್ಕೆ ಹೊಂದಿಕೊಳ್ಳಲು ಪಟ್ಟ ಕಷ್ಟವನ್ನು ವಿವರಿಸುತ್ತದೆ. ಹಾಗೆಯೇ ಈಸೋಪನ ನೀತಿಕಥೆಗಳ ದಾರ್ಶನಿಕ ಪ್ರಾಣಿಗಳು ನಮ್ಮ ನೈತಿಕ ರೂಪಕಗಳ ಹೊರೆಯನ್ನು ಹೊತ್ತಿವೆ.
ಈ ಮಕಾಕ್ ಮರಿಯ ಮುದ್ದಾದ ರೂಪ ಮತ್ತು ಜನರ ಭಾವನಾತ್ಮಕ ಪ್ರತಿಕ್ರಿಯೆಯನ್ನು ಬದಿಗಿಟ್ಟು ನೋಡಿದರೆ, ನಮಗೊಂದು ಪರಿಚಿತ ಸಹಜಗುಣ ಕಾಣಿಸುತ್ತದೆ: ಪ್ರಾಣಿಗಳ ನಡವಳಿಕೆಯನ್ನು (ನಾವು ನಾಯಿ-ಬೆಕ್ಕುಗಳ ವಿಷಯದಲ್ಲಿ ಮಾಡುವಂತೆ) ನಮಗೆ ತಿಳಿದಿರುವ ಭಾವನಾತ್ಮಕ ಪರಿಭಾಷೆಯಲ್ಲಿ ಅರ್ಥೈಸಿಕೊಳ್ಳುವ ಹಂಬಲ.
ಪ್ರಾಣಿಗಳಲ್ಲಿ ನಮ್ಮನ್ನು ನಾವು ಕಾಣುವ ಪರಿ
ವರ್ನರ್ ಹರ್ಜಾಗ್ ಸ್ವತಃ ಇಂತಹ ಭಾವನಾತ್ಮಕ ಪ್ರವೃತ್ತಿಗಳ ಬಗ್ಗೆ ಯಾವತ್ತೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಅವರ ಚಲನಚಿತ್ರಗಳಲ್ಲಿ ಪ್ರಾಣಿಗಳು ಅಪರೂಪಕ್ಕೂ ಮುಗ್ಧತೆಯ ಅಥವಾ ಜ್ಞಾನದ ಸಂಕೇತಗಳಾಗಿ ಕಾಣಿಸಿಕೊಳ್ಳುವುದಿಲ್ಲ; ಅವು ಕೇವಲ ತಮ್ಮದೇ ಆದ ನಿಗೂಢ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುತ್ತವೆ. 'ಎನ್ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್' ಚಿತ್ರದಲ್ಲಿ ಗುಂಪಿನಿಂದ ಬೇರ್ಪಟ್ಟ ಪೆಂಗ್ವಿನ್ ಅನ್ನು ಅವರು ದುರಂತದ ಸಂಕೇತವಾಗಿ ತೋರಿಸುವ ಬದಲು, ಒಂದು ನಿಗೂಢ ಸಂಗತಿಯಾಗಿ ಚಿತ್ರಿಸುತ್ತಾರೆ. ಪ್ರೇಕ್ಷಕರು ಆ ದೃಶ್ಯದ ಮೇಲೆ ಹೇರಬಯಸುವ ಯಾವುದೇ ಭಾವನಾತ್ಮಕ ಅರ್ಥಗಳನ್ನು ನೀಡದೆ, ಹರ್ಜಾಗ್ ತಮ್ಮ ಹಿನ್ನೆಲೆ ಧ್ವನಿಯಲ್ಲಿ ಆ ಕ್ಷಣವನ್ನು ಅತ್ಯಂತ ಮಿತವಾಗಿ ವಿವರಿಸುತ್ತಾರೆ.
ಈ ನಿರಾಕರಣೆಯು ನನಗೆ ಜೆ.ಎಂ. ಕೂಟ್ಜಿ ಅವರಂತಹ ಬರಹಗಾರರ ಶೈಲಿಯನ್ನು ನೆನಪಿಸುತ್ತದೆ, ವಿಶೇಷವಾಗಿ ಅವರ 'ದಿ ಲೈವ್ಸ್ ಆಫ್ ಅನಿಮಲ್ಸ್' ಕೃತಿಯಲ್ಲಿ ಮಾನವ ಪ್ರಜ್ಞೆ ಮತ್ತು ಪ್ರಾಣಿ ಜೀವನದ ನಡುವಿನ ಅಂತರವು ಬಗೆಹರಿಯದಂತೆಯೇ ಉಳಿಯುತ್ತದೆ. ಪ್ರಾಣಿಗಳು ನಮ್ಮ ಬಗ್ಗೆ ಏನನ್ನಾದರೂ ಬಹಿರಂಗಪಡಿಸಬೇಕೆಂದು ನಾವು ಬಯಸುತ್ತೇವೆ, ಆದರೆ ಅವುಗಳ ಒಳಗಿನ ಜಗತ್ತು ನಮಗೆ ಬಹುಪಾಲು ನಿಲುಕದ ನಕ್ಷತ್ರವಾಗಿರುತ್ತದೆ.
'ಓರನ್-ಮಾಮಾ' ಎಂಬ ಓರಂಗುಟಾನ್ ಬೊಮ್ಮೆಯ ಮೇಲೆ ಪಂಚ್ ಇಟ್ಟಿರುವ ಮಮತೆಯು ವಿಜ್ಞಾನದ ಹಿನ್ನೆಲೆಯನ್ನು ಹೊಂದಿದೆ: ತಾಯಿಯ ಸಂಪರ್ಕದಿಂದ ವಂಚಿತರಾದ ಪ್ರೈಮೇಟ್‌ಗಳು ಉಷ್ಣತೆ, ಮೃದುತ್ವ ಮತ್ತು ತಾಯಿಯ ಅಸ್ತಿತ್ವದ ಭ್ರಮೆಯನ್ನು ನೀಡುವ ಯಾವುದೇ ವಸ್ತುವನ್ನು ಅಪ್ಪಿಕೊಳ್ಳುತ್ತವೆ.
ಆದರೆ, ಕಾರ್ಖಾನೆಯಲ್ಲಿ ತಯಾರಾದ ಒಂದು ಆಟಿಕೆಯನ್ನು ನವಜಾತ ಮಕಾಕ್ ಮರಿಯು ಅಪ್ಪಿಕೊಂಡಿರುವ ದೃಶ್ಯವು ಒಂದು ವಿಶಿಷ್ಟ ಸಾಹಿತ್ಯಿಕ ಅನುಭೂತಿಯನ್ನು ನೀಡುತ್ತದೆ. ಒಂದು ಜೀವಂತ ಪ್ರಾಣಿಯು ಕಾರ್ಖಾನೆಯಲ್ಲಿ ತಯಾರಾದ ವಸ್ತುವಿನಲ್ಲಿ ಸಾಂತ್ವನವನ್ನು ಹುಡುಕುತ್ತದೆ; ಆ ವಸ್ತುವಿನ ಅಸಲಿ ರೂಪ ಏನೆಂದು ಅದಕ್ಕೆ ತಿಳಿದಿಲ್ಲದಿದ್ದರೂ, ಅದು ನೀಡುವ ಭದ್ರತೆಯನ್ನು ಆ ಪ್ರಾಣಿ ಗುರುತಿಸುತ್ತದೆ.
ಆಧುನಿಕ ಸಾಹಿತ್ಯದಲ್ಲಿ ಇಂತಹ ವಸ್ತುಗಳು (ಭಾವನೆಗಳ ಮೂಕ ವಾಹಕಗಳು) ಮರುಕಳಿಸುವುದನ್ನು ನಾವು ಕಾಣಬಹುದು. ಕಾಜುವೊ ಇಶಿಗುರೊ ಅವರ ಕಾದಂಬರಿಗಳಲ್ಲಿ ನೆನಪುಗಳು ಇಂತಹ ಸಣ್ಣ ವಸ್ತುಗಳ ಸುತ್ತಲೇ ನೆಲೆಸಿರುತ್ತವೆ: ಒಂದು ಕ್ಯಾಸೆಟ್ ಟೇಪ್, ಮರೆತುಹೋದ ಉಡುಗೊರೆ ಅಥವಾ ಬಾಲ್ಯದ ಸಣ್ಣ ಪುಟ್ಟ ಅವಶೇಷಗಳು ಸಮಯ ಕಳೆದಂತೆ ಭಾವನಾತ್ಮಕವಾಗಿ ಭಾರವಾಗುತ್ತವೆ. ಹರುಕಿ ಮುರಕಮಿ ಅವರ ಕಾದಂಬರಿಗಳಲ್ಲೂ ಏಕಾಂಗಿತನ ಮತ್ತು ಹಂಬಲವನ್ನು ಹೀರಿಕೊಳ್ಳುವ ವಸ್ತುಗಳು ತುಂಬಿರುತ್ತವೆ — ಒಂದು ರೆಕಾರ್ಡ್, ಒಂದು ಬಾವಿ ಅಥವಾ ವರ್ಷಗಳಿಂದ ಯಾರೂ ಮುಟ್ಟದ ಒಂದು ಕೊಠಡಿ. ಈ ವಸ್ತುಗಳ ಪ್ರಾಯೋಗಿಕ ಉದ್ದೇಶ ಮುಗಿದ ನಂತರವೂ ಅವು ಭಾವನಾತ್ಮಕ ನೆನಪುಗಳನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಳ್ಳುವಲ್ಲಿ ಯಶಸ್ವಿಯಾಗಿರುತ್ತವೆ.
ಪಂಚ್ನ ಓರಂಗುಟಾನ್ ಆಟಿಕೆಯು ಅಂತಹದ್ದೇ ಒಂದು ವಿಚಿತ್ರ ವರ್ಗಕ್ಕೆ ಸೇರುತ್ತದೆ: ಅದರ ಮೇಲಿರುವ ಪ್ರೀತಿಯಿಂದಲೇ ಅದಕ್ಕೊಂದು ಅರ್ಥ ಬರುತ್ತದೆ. ಈ ಸಂದರ್ಭದಲ್ಲಿ, ಆ ಆತ್ಮೀಯತೆ ಅಕ್ಷರಶಃ ಜೀವಂತವಾಗಿದೆ. ಜಗತ್ತಿನಲ್ಲಿ ತನ್ನ ಮೊದಲ ಅನುಭವವೇ 'ತಾಯಿಯ ಅನುಪಸ್ಥಿತಿ'ಯಾಗಿರುವ ಮರಿ ಮಂಗನಿಗೆ ಈ ಆಟಿಕೆಯು ಸ್ಥಿರತೆಯನ್ನು ನೀಡುತ್ತದೆ. ಇದು ಒಂದು ಜೈವಿಕ ಸಮಸ್ಯೆಗೆ ಮಾಡಿಕೊಂಡ ತಾತ್ಕಾಲಿಕ ಪರಿಹಾರವೂ ಹೌದು.
ಹರ್ಜಾಗ್ ಅವರ ಅಂಟಾರ್ಕ್ಟಿಕಾದ ಪೆಂಗ್ವಿನ್ ಮತ್ತು ಪಂಚ್ ಎಂಬ ಹೆಸರಿನ ಮಕಾಕ್ ಮರಿಯ ನಡುವೆ ವಿಜ್ಞಾನ, ಕಲೆ ಮತ್ತು ಅಂತರಜಾಲದ ವೈರಲ್ ವಿಷಯಗಳ ಹಸಿವನ್ನು ಸಂಪರ್ಕಿಸುವ ಒಂದು ತೆಳುವಾದ ಎಳೆ ಇದೆ. ಕಥೆಗಾರರು ಅನಾದಿ ಕಾಲದಿಂದಲೂ ಮಾಡುತ್ತಾ ಬಂದಿದ್ದನ್ನೇ ನಾವೂ ಈಗ ಮಾಡುತ್ತಿದ್ದೇವೆ — ಪ್ರಾಣಿಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಮತ್ತು ಅವುಗಳ ಚಲನವಲನಗಳ ಮೂಲಕ ನಮ್ಮ ಬಗ್ಗೆಯೇ ಏನನ್ನಾದರೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು.

