No money to pay bribe, take radish! Farmers innovative protest against corruption of officials
x
ಮಧುಗಿರಿ ತಾಲೂಕು ಕಚೇರಿ ಎದುರು ಜಕ್ಕೇನಹಳ್ಳಿ ರೈತನ ವಿನೂತನ ಪ್ರತಿಭಟನೆ

ಗಾಂಧಿಗಿರಿ ಮಾದರಿ: ರಾಜ್ಯವ್ಯಾಪಿ ರೈತ ಹೋರಾಟಕ್ಕೆ ನೆಪವಾದ ಮೂಲಂಗಿ ಬೆಳೆಗಾರ

ಅಹಿಂಸಾತ್ಮಕ ಹೋರಾಟಕ್ಕೆ ಅನುಶಾಸನದಂತೆ ಇರುವ ಗಾಂಧಿಮಾರ್ಗದಿಂದಲೇ ರೈತ ಪ್ರಸನ್ನಕುಮಾರ್‌ ಅವರ ತಮ್ಮ ಎರಡು ವರ್ಷಗಳ ಬವಣೆಗೆ ಮುಕ್ತಿ ದೊರೆತಿದೆ. ಪ್ರಸನ್ನಕುಮಾರ್ ಅವರ ಈ ಗಾಂಧಿಗಿರಿಯೇ ರೈತ ಸಮೂಹಕ್ಕೆ ಪ್ರೇರಣೆಯಾಗಿದೆ.


Click the Play button to hear this message in audio format

ಲಂಚ ಕೇಳುವ ಅಧಿಕಾರಿಗಳಿಗೆ ಮಾನ ಮರ್ಯಾದೆ ಇಲ್ಲ, ಅವರಿಗೆ ಬೆಳೆಯನ್ನೇ ಲಂಚವನ್ನಾಗಿ ನೀಡುವ ಪರಿಸ್ಥಿತಿ ಬಂದಿದೆ. ರೈತರು ಸಿಡಿದೆದ್ದು ಅಧಿಕಾರಿಗಳಿಗೆ ಬುದ್ದಿ ಕಲಿಸಬೇಕು. ಪ್ರಸ್ತುತ, ಲಂಚಕೋರ ಅಧಿಕಾರಿಗಳು ಎಲ್ಲಾ ಹಂತಗಳಲ್ಲೂ ಇದ್ದಾರೆ. ರೈತರಿಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡಿಕೊಡುವುದಕ್ಕೂ ಲಂಚ ನೀಡಬೇಕು. ಇದನ್ನೇ ಅಧಿಕಾರಿಗಳು ವ್ಯಾಪಾರ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ಮಾಡಲು ಮೊದಲಿಗೆ ರೈತರು ವಿಚಾರವಂತರಾಗಬೇಕು, ಬದ್ಧತೆಯಿಂದ ಭ್ರಷ್ಟರಿಗೆ ಪಾಠ ಕಲಿಸಬೇಕು.

-ಕುರುಬೂರು ಶಾಂತಕುಮಾರ್‌(ಮಂಡ್ಯ), ಅಧ್ಯಕ್ಷರು, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ̇̇

ಮಧುಗಿರಿಯ ರೈತ ತನ್ನ ಅಹಾಯಕತೆಯನ್ನು ವ್ಯಕ್ತಪಡಿಸಲು ಆರಿಸಿಕೊಂಡ ಮಾರ್ಗ ಹಲವು ರೈತರಿಗೆ ಸ್ಫೂರ್ತಿಯಾಗಿದೆ. ಇಂತಹ ಪರಿಣಾಮಕಾರಿ ಹೋರಾಟಗಳೇ ಎಲ್ಲರಿಗೂ ಅಗತ್ಯ, ನಮ್ಮ ರೈತರಿಗೆ ವ್ಯವಸ್ಥೆಯನ್ನು ಪ್ರಶ್ನಿಸುವ ಧೈರ್ಯ ಬಂದಿದೆ ಎಂಬುದು ಹೆಮ್ಮೆಯ ಸಂಗತಿ. ನಾವೂ ಕೂಡ 1500 ದಿನಗಳಿಂದ ನಿರಂತರ ಹೋರಾಟ ಮಾಡಿದ್ದರ ಫಲವಾಗಿಯೇ ಕೈಗಾರಿಕೆಗಳಿಗೆ ಹೋಗುತ್ತಿದ್ದ ನಮ್ಮ ಭೂಮಿ ನಮಗೆ ಧಕ್ಕಿತು. ಮಧುಗಿರಿ ರೈತನ ಹೋರಾಟದ ಮಾದರಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ನಮ್ಮ ರೈತರಿಗೂ ಮಧುಗಿರಿ ರೈತನ ಹೋರಾಟದ ಬಗ್ಗೆ ವಿವರಿಸಿ ಹೇಳಿದ್ದೇವೆ.

-ಪಿ. ಪ್ರಮೋದ, ಪೋಲನಹಳ್ಳಿ ಯುವ ರೈತ, ದೇವನಹಳ್ಳಿ , ಬೆಂಗಳೂರು ಗ್ರಾಮಾಂತರ ಜಿಲ್ಲೆ

ಯಾವುದೇ ಹೋರಾಟದ ಗೆಲುವಿಗೆ ʼಗಾಂಧಿಗಿರಿʼಯೇ ಬುನಾದಿ. ಅಧಿಕಾರಿಗಳು ರಾಜಾರೋಷವಾಗಿ ಲಂಚ ಕೇಳುವ ಪರಿಸ್ಥಿತಿ ಇದೆ. ಅಧಿಕಾರಿಗಳಿಗೆ ಸರ್ಕಾರ ಹಾಗೂ ಸಚಿವರ ಭಯವಿಲ್ಲ. ಲಂಚಕೋರತನ ಸಾಮಾನ್ಯವಾಗಿದ್ದು, ಹಗಲು ದರೋಡೆ ನಡೆಯುತ್ತಿದೆ. ಮಧುಗಿರಿ ರೈತನ ಹೋರಾಟ ಮತ್ತೊಮ್ಮೆ ರಾಜ್ಯದಲ್ಲಿ 80 ರ ದಶಕದ ರೈತ ಚಳವಳಿ ಪುನರಾರಂಭಿಸುವ ಅಗತ್ಯತೆಯನ್ನು ಸೃಷ್ಟಿಸಿದೆ. ಈ ಬಗ್ಗೆ ರಾಜ್ಯವ್ಯಾಪಿ ಚರ್ಚೆ ಮಾಡಲಾಗುತ್ತಿದೆ.

-ಮುತ್ತಪ್ಪ ಕೋಮಾರ, ರಾಜ್ಯ ರೈತ ಸಂಘದ ಉಪಾಧ್ಯಕ್ಷ, ಬಾಗಲಕೋಟೆ ಜಿಲ್ಲೆ

ಬಿಡದಿಯಲ್ಲಿ ಎಐ ಸಿಟಿ ನಿರ್ಮಾಣಕ್ಕೆ 9600 ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. 200 ಕ್ಕೂ ಹೆಚ್ಚು ದಿನಗಳಿಂದ ಭೂಸ್ವಾಧೀನ ವಿರೋಧಿಸಿ ಧರಣಿ ನಡೆಯುತ್ತಿದೆ. ನಮ್ಮಲ್ಲಿ 8 ಲಕ್ಷ ತೆಂಗು, ತರಹೇವಾರಿ ತರಕಾರಿಗಳು, ರೇಷ್ಮೆ ಬೆಳೆ ಸಮೃದ್ಧವಾಗಿದೆ. ಯಾವುದೇ ಕೃಷಿ ಸವಲತ್ತು ಪಡೆಯಬೇಕಾದರೆ ಅಧಿಕಾರಿಗಳಿಗೆ ಲಂಚ ನೀಡಲೇಬೇಕು.ಈಗ ಮಧುಗಿರಿ ರೈತನ ಮಾದರಿಯಲ್ಲಿ ನಾವೂ ಕೂಡ ಬೆಳೆದ ಬೆಳೆಯನ್ನೇ ಲಂಚವಾಗಿ ನೀಡುತ್ತೇವೆ.

-ರಾಮಣ್ಣ, ಬೈರಮಂಗಲ, ಕಂಚಗಾರನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ, ಬಿಡದಿ, ಬೆಂಗಳೂರು ದಕ್ಷಿಣ ಜಿಲ್ಲೆ(ರಾಮನಗರ)

ಲಂಚ ಕೇಳಿದವರಿಗೆ ನೀವು ಬೆಳೆದ ಬೆಳೆಯನ್ನೇ ನೀಡಲು ಹೋಗಿದ್ದು ನಿಜಕ್ಕೂ ಅದ್ಭುತ. ಜಮೀನಿಗೆ ದಾರಿ ಮಾಡಿಕೊಡಲು ಲಂಚ ಕೇಳಿದ ಅಧಿಕಾರಿಗೆ ನೀವು ಕೊಟ್ಟ ಉತ್ತರ ಇಡೀ ರೈತ ಸಮುದಾಯಕ್ಕೆ ಮಾದರಿಯಾಗಿದೆ. ನಾವೂ ಕೂಡ ಅದೇ ಮಾರ್ಗ ಅನುಸರಿಸುತ್ತೇವೆ. ನಿಮಗೆ ನಮ್ಮ ಬೆಂಬಲವಿದೆ, ಒಳ್ಳೆಯದಾಗಲಿ.

(ರಿಶ್ವತ್ ಮಾಂಗ್ನೇ ವಾಲೋಂ ಕೋ ಆಪ್ನೇ ಅಪ್ನೀ ಮೆಹನತ್ ಸೇ ಉಗಾಯಿ ಫಸಲ್ ದೇನೆ ಕಾ ಜೋ ನಿರ್ಣಯ್ ಲಿಯಾ, ವಹ್ ವಾಕಯಿ ಕಾಬಿಲೇ-ತಾರೀಫ್ ಹೈ. ಜಮೀನ್ ಕೇ ರಾಸ್ತೇ ಕೇ ಬದಲೇ ಘೂಸ್ ಮಾಂಗ್ನೇ ವಾಲೇ ಅಧಿಕಾರೀ ಕೋ ಆಪ್ನೇ ಜೋ ಕರಾರಾ ಜವಾಬ್ ದಿಯಾ ಹೈ, ವಹ್ ಪೂರೇ ಕಿಸಾನ್ ಸಮುದಾಯ್ ಕೇ ಲಿಯೇ ಏಕ್ ಮಿಸಾಲ್ ಬನ್ ಗಯಾ ಹೈ. ಹಮ್ ಭೀ ಆಪ್ಕೇ ದಿಖಾಯೇ ಇಸೀ ರಾಸ್ತೇ ಪರ್ ಚಲೇಂಗೇ. ಹಮಾರಾ ಪೂರಾ ಸಮರ್ಥನ್ ಆಪ್ಕೇ ಸಾಥ್ ಹೈ, ಆಪ್ಕೋ ಢೇರ್ ಸಾರೀ ಶುಭ್ ಕಾಮ್ನಾಯೇ)

(ರೈತ ಪ್ರಸನ್ನಕುಮಾರ್‌ ಅವರೊಂದಿಗೆ ರಾಜಸ್ಥಾನದ ರೈತ ಮುಖಂಡ ಮಾತನಾಡಿರುವ ವಿವರ)

-ಭಜನ್‌ಲಾಲ್‌ ಮೀನಾ, ರೈತ ಮುಖಂಡ, ರಾಜಸ್ಥಾನ

...ರೈತರ ಈ ಆಕ್ರೋಶದ ನುಡಿಗಳು ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ. ಮಧುಗಿರಿಯಲ್ಲಿ ಫೆಬ್ರುವರಿಯಲ್ಲಿ ರೈತ ಪ್ರಸನ್ನಕುಮಾರ್‌ ನಡೆಸಿದ ʼಗಾಂಧಿಗಿರಿʼ ಮಾದರಿಯ ಅಸಹಕಾರ ಚಳವಳಿ ಇದೀಗ ರಾಷ್ಟ್ರವ್ಯಾಪಿ ರೈತರಿಗೆ ಸ್ಫೂರ್ತಿಯಾಗಿದೆ.

ಅನ್ನದಾತನಿಗೆ ಹಸಿವು ನೀಗಿಸುವ ಭೂಮಿಯೇ ಸರ್ವಸ್ವ. ಮಣ್ಣಿನೊಂದಿಗೆ ಅವಿನಾಭವ ನಂಟು ಹೊಂದಿರುವ ತನ್ನ ಭೂಮಿಗೆ ಅಪ್ಪಿತಪ್ಪಿಯೂ ಸಮಸ್ಯೆಯಾದರೆ ಸಹಿಸುವುದಿಲ್ಲ ಎಂಬುದಕ್ಕೆ ರೈತ ಪ್ರಸನ್ನ ಕುಮಾರ್ ಅವರ ವಿನೂತನ ಪ್ರತಿಭಟನೆ ಸಾಕ್ಷಿಯಾಗಿದೆ. ಜಮೀನಿನ ದಾರಿಗಾಗಿ ವರ್ಷಗಳ ಕಾಲ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದ ರೈತನ ಮುಂದೆ ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಾಗ ಹೊಳೆದ ಏಕೈಕ ಮಾರ್ಗವೇ ಗಾಂಧಿ ಮಾರ್ಗ.

ಅಹಿಂಸಾತ್ಮಕ ಹೋರಾಟಕ್ಕೆ ಅನುಶಾಸನದಂತೆ ಇರುವ ಗಾಂಧಿಮಾರ್ಗದಿಂದಲೇ ರೈತ ಪ್ರಸನ್ನಕುಮಾರ್‌ ಅವರ ಎರಡು ವರ್ಷಗಳ ಬವಣೆಗೆ ಮುಕ್ತಿ ದೊರೆತಿದೆ. ರೈತನ ʼಗಾಂಧಿಗಿರಿʼಗೆ ಮಣಿದ ಆಡಳಿತವು ಎರಡನೇ ದಿನದಲ್ಲಿ ಮನೆ ಬಾಗಿಲಿಗೆ ಧಾವಿಸಿ ಸಮಸ್ಯೆ ಬಗೆಹರಿಸಿದೆ. ಪ್ರಸನ್ನಕುಮಾರ್ ಅವರ ಈ ಗಾಂಧಿಗಿರಿಯೇ ರೈತ ಸಮೂಹಕ್ಕೆ ಪ್ರೇರಣೆಯಾಗಿದೆ.

ರೈತನ ಹೋರಾಟದ ಕಥೆಯೇನು?

ಮಧುಗಿರಿ ತಾಲ್ಲೂಕಿನ ಜಕ್ಕೇನಹಳ್ಳಿಯ ರೈತ ಪ್ರಸನ್ನಕುಮಾರ್ ಅವರು ತಮ್ಮ ಜಮೀನಿಗೆ ನಕಾಶೆಯಲ್ಲಿರುವಂತೆ ರಸ್ತೆ ಮಾಡಿಕೊಡುವಂತೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದರೂ, ಲೋಕಾಯುಕ್ತರಿಂದ ಆದೇಶ ತಂದರೂ ಅಧಿಕಾರಿಗಳು ಕೆಲಸ ಮಾಡಿಕೊಟ್ಟಿರಲಿಲ್ಲ.

ನಕಾಶೆ ರಸ್ತೆ ಮಾಡಿಕೊಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. "ನನ್ನ ಬಳಿ ಹಣವಿಲ್ಲ, ನಾನು ಬೆಳೆದಿರುವ ಮೂಲಂಗಿ ಇದೆ, ಬೇಕಾದರೆ ತಿನ್ನಿ" ಎಂದು ಸರ್ಕಾರಿ ಕಚೇರಿ ಮುಂದೆ ನಿಂತು ಪ್ರಸನ್ನಕುಮಾರ್‌ ಅವರು ಮೈಕ್‌ನಲ್ಲಿ ಕೂಗಿದ ಮಾತುಗಳು ಕೇವಲ ಒಬ್ಬ ವ್ಯಕ್ತಿಯ ಕಿರುಚಾಟವಾಗಿರಲಿಲ್ಲ. ನ್ಯಾಯಕ್ಕಾಗಿ ಹಂಬಲಿಸುವ ಶ್ರೀಸಾಮಾನ್ಯರ ದನಿಯಾಗಿತ್ತು. ರೈತನ ಆ ಅಸಹಾಯಕತೆ ಅಧಿಕಾರಿಗಳ ಅಹಂಕಾರವನ್ನೇ ಮಣ್ಣು ಮುಕ್ಕಿಸಿತು.

"ಜಮೀನಿಗೆ ದಾರಿ ಮಾಡಿಕೊಡುವಂತೆ ಮನವಿ ಮಾಡಿದ್ದೆ. ತಹಶೀಲ್ದಾರ್ ಅವರು ಕೆಳ ಹಂತದ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಯಾವುದೇ ಕೆಲಸ ಮಾಡಿಕೊಟ್ಟಿರಲಿಲ್ಲ. ಎರಡು ತಿಂಗಳ ಹಿಂದೆ ಲೋಕಾಯುಕ್ತರು ಬಂದು, ತಿಂಗಳೊಳಗೆ ದಾರಿ ಮಾಡಿಕೊಡಲು ಸೂಚಿಸಿದ್ದರು. ಸ್ಥಳೀಯ ಅಧಿಕಾರಿಗಳನ್ನು ಕೇಳಿದರೆ ದಿನಕ್ಕೊಂದು ಸಬೂಬು ಹೇಳುತ್ತಿದ್ದರು. ಅಧಿಕಾರಿಗಳಿಗೆ ಹಣ ಕೊಡಲು ನನ್ನ ಬಳಿ ಇರಲಿಲ್ಲ. ನಾನೇ ತರಕಾರಿ ಬೆಳೆದು, ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದೆ. ಹೀಗಿರುವಾಗ ನಾನು ಬೆಳೆದ ಮೂಲಂಗಿಯನ್ನೇ ಲಂಚದ ರೂಪದಲ್ಲಿ ನೀಡಲು ನಿರ್ಧರಿಸಿದೆ" ಎಂದು ರೈತ ಪ್ರಸನ್ನಕುಮಾರ್ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಅಹಿಂಸಾ ಮಾರ್ಗದಲ್ಲಿ ನ್ಯಾಯಕ್ಕಾಗಿ ಪಟ್ಟು ಹಿಡಿದ ಪ್ರಸನ್ನಕುಮಾರ್ ಅವರ ಈ ಮೂಲಂಗಿ ಪ್ರತಿಭಟನೆ ತಮಾಷೆಯಾಗಿ ಕಂಡರೂ ಇಡೀ ರಾಜ್ಯದ ರೈತರನ್ನು ಗಮನ ಸೆಳೆಯಿತು. ಕೊನೆಗೂ ಗಾಂಧಿಗಿರಿಗೆ ಮಣಿದ ಅಧಿಕಾರಿಗಳು, ಎರಡೇ ದಿನದಲ್ಲಿ ಜಮೀನಿಗೆ ರಸ್ತೆ ಮಾಡಿಕೊಟ್ಟರು. ಪ್ರಸನ್ನ ಕುಮಾರ್‌ ಅವರ ʼಗಾಂಧಿಗಿರಿʼಯೇ ಇತರ ರೈತರ ಹೋರಾಟಕ್ಕೂ ಸ್ಫೂರ್ತಿಯಾಗಿದೆ.

ರೈತ ಕುಲಕ್ಕೆ ಪ್ರೇರಣೆಯಾದ ಹೋರಾಟ

ಭ್ರಷ್ಟ ಅಧಿಕಾರಿಗಳ ವಿರುದ್ಧ ʼಗಾಂಧಿಗಿರಿʼ ಅಸ್ತ್ರ ಪ್ರಯೋಗಿಸಿ ಜಯ ಗಳಿಸಿದ ರೈತ ಪ್ರಸನ್ನಕುಮಾರ್ ಇದೀಗ ರೈತರ ಪಾಲಿಗೆ ಹಿರೋ ಆಗಿದ್ದಾರೆ. ಪ್ರಸನ್ನಕುಮಾರ್ ಹೋರಾಟದ ಮಾದರಿಯಲ್ಲೇ ರೈತರು ʼಗಾಂಧಿಗಿರಿʼ ಚಳವಳಿ ಯೋಜನೆ ರೂಪಿಸಿದ್ದಾರೆ.

ಪ್ರಸನ್ನಕುಮಾರ್‌ ಅವರ ಗೆಲುವಿನ ವಿಚಾರ ತುಮಕೂರು ಜಿಲ್ಲೆ ಹಾಗೂ ರಾಜ್ಯಾದ್ಯಂತ ಪ್ರಚಾರ ಪಡೆದುಕೊಳ್ಳುತ್ತಿದ್ದಂತೆ ಬೇರೆ ಬೇರೆ ರೈತರು ಸಹ ಕರೆ ಮಾಡಿ ಒಳ್ಳೆಯ ಕೆಲಸ ಮಾಡಿದ್ದೀರಾ, ನಾವು ನಿಮ್ಮಂತೆಯೇ ಮಾಡುತ್ತೇವೆ ಎಂದು ಚರ್ಚೆ ನಡೆಸಿರುವುದು ಚಳವಳಿಯ ಸ್ವರೂಪದ ಪಡೆದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ರಾಜ್ಯ ಸರ್ಕಾರ ಕೃಷಿ ಕ್ಷೇತ್ರದ ಅಭಿವೃದ್ಧಿ, ರೈತರ ಅಭ್ಯುದಯಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರೂ ಅನುಷ್ಠಾನದ ಹಂತದಲ್ಲಿ ವಿಫಲವಾಗುತ್ತಿದೆ. ಇದರಿಂದ ರೈತರು ಸಂಕಷ್ಟಗಳ ಸಂಕೋಲೆಗಳಲ್ಲೇ ಬದುಕುವಂತಾಗಿದೆ. ಈಗ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗಾಂಧಿ ಮಾರ್ಗವನ್ನೇ ಪರಿಣಾಮಕಾರಿಯಾಗಿ ಅನುಸರಿಸಲು ರೈತ ಸಮೂಹ ಮುಂದಾಗಿದೆ.

ಸಂಘಟನೆಗೆ ರೈತರ ಸಲಹೆ

ಅಧಿಕಾರಿಗಳ ಬಳಿ ರೈತರು ಅಲೆದರೂ ಕೆಲಸ ಮಾಡಿಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾವು ಕೂಡ ಪ್ರಸನ್ನಕುಮಾರ್‌ ಮಾದರಿಯಲ್ಲೇ ಹೋರಾಟ ಮಾಡುತ್ತೇವೆ. ಬೆಂಬಲ ಕೊಡಿ ಎಂದು ಅನೇಕರು ರೈತ ಪ್ರಸನ್ನಕುಮಾರ್‌ ಅವರಿಗೆ ಮನವಿ ಮಾಡಿದ್ದಾರೆ.

ಅಧಿಕಾರಿಗಳ ಭ್ರಷ್ಟಾಚಾರದಿಂದ ನೊಂದ ರೈತರೇ ಸೇರಿ ಸಂಘ ಕಟ್ಟುವ ಬಗ್ಗೆ ತೀರ್ಮಾನಿಸಿದ್ದಾರೆ. ಆ ಸಂಘದ ಮೂಲಕವೇ ಲಂಚ ಕೇಳುವ ಅಧಿಕಾರಿಗಳಿಗೆ ಫಸಲನ್ನೇ ಕೊಡಲು ನಿರ್ಧರಿಸಿದ್ದಾರೆ.

ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿಯ ಜಕ್ಕೇನಹಳ್ಳಿ ರೈತ ಪ್ರಸನ್ನಕುಮಾರ್‌ ಅವರ ಹೊಲಕ್ಕೆ ತಾತ್ಕಾಲಿಕ ರಸ್ತೆ ಮಾಡಿರುವುದು

ನೂರಾರು ರೈತರಿಂದ ಕರೆ

‌ಭ್ರಷ್ಟ ಅಧಿಕಾರಿಗಳಿಗೆ ʼಗಾಂಧಿಗಿರಿʼ ಮೂಲಕ ಪಾಠ ಕಲಿಸಿದ ರೈತ ಪ್ರಸನ್ನಕುಮಾರ್ ಅವರ ಧೈರ್ಯ ಮೆಚ್ಚಿ ರಾಜ್ಯದ ವಿವಿಧೆಡೆಯಿಂದ ರೈತರು ಕರೆ ಮಾಡಿ ಬೆಂಬಲ ತುಂಬಿದ್ದಾರೆ. ಅಲ್ಲದೇ ಪ್ರಸನ್ನಕುಮಾರ್‌ ಅವರ ಅಹಿಂಸಾ ಮಾರ್ಗವನ್ನೇ ತಾವೂ ಅನುಸರಿಸುವುದಾಗಿ ಹೇಳುತ್ತಿದ್ದಾರೆ.

ರಾಜಸ್ಥಾನದ ರೈತ ಮುಖಂಡ ಭಜನ್‌ಲಾಲ್‌ ಮೀನಾ ಎಂಬುವರು ಕರೆ ಮಾಡಿ, ವಿನೂತನ ಹೋರಾಟಕ್ಕೆ ಶಹಬ್ಬಾಷ್‌ ಗಿರಿ ಹೇಳಿದ್ದಾರೆ. ಇದಲ್ಲದೇ ‌ಕೋಲಾರ, ತುಮಕೂರು, ಬಾಗಲಕೋಟೆ, ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಇಲ್ಲಿಯವರೆಗೆ ಸುಮಾರು 150 ಕ್ಕೂ ಹೆಚ್ಚು ರೈತರು ಕರೆ ಮಾಡಿ, ಹೋರಾಟ ಸಂಘಟಿಸುವ ಕುರಿತು ಮಾತನಾಡಿದ್ದಾರೆ. ರೈತರೆಲ್ಲರೂ ಗಾಂಧಿ ಮಾರ್ಗದ ಮೂಲಕವೇ ಹೋರಾಟ ಮಾಡಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಒಂದು ಸಭೆ ಸೇರಿ ಚರ್ಚಿಸಬೇಕು ಎಂದು ಹಲವರು ಸಲಹೆ ನೀಡಿದ್ದಾರೆ.

ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿದ ಪ್ರಸನ್ನಕುಮಾರ್, “ನ್ಯಾಯಯುತವಾದ ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸಬೇಕು. ಆದರೆ, ವರ್ಷಗಟ್ಟಲೇ ರೈತರನ್ನು ಅಲೆದಾಡಿಸಲಾಗುತ್ತಿದೆ. ರೈತರು ರಾಜಕೀಯ ಪುಢಾರಿಗಳ ಜತೆ ಸೇರಿ ಸಂಘಟನೆ ಮಾಡದೇ ಪಕ್ಷಾತೀತವಾದ ಹೋರಾಟ ಸಂಘಟಿಸಬೇಕು. ಈಗಾಗಲೇ ಅನೇಕ ರೈತರು ನನ್ನ ರೀತಿಯಲ್ಲೇ ʼಗಾಂಧಿಗಿರಿʼ ಮಾದರಿ ಹೋರಾಟ ಮಾಡುವ ಬಗ್ಗೆ ಚರ್ಚಿಸಿದ್ದಾರೆ. ನಾವೆಲ್ಲಾ ಸೇರಿ ಒಂದು ಸಂಘ ಕಟ್ಟಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.

“ವಾರದೊಳಗಾಗಿ ರಸ್ತೆ ಮಾಡಿಕೊಡದಿದ್ದರೆ ತಹಶಿಲ್ದಾರ್ ಕಚೇರಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಎಚ್ಚರಿಸಿದ್ದೆ. ಇದರಿಂದ ಎಚ್ಚೆತ್ತುಕೊಂಡ ಕಂದಾಯ ಇಲಾಖೆ ಅಧಿಕಾರಿ ಜಯಪ್ರಕಾಶ್, ಗ್ರಾಮ ಲೆಕ್ಕಿಗ ಶರಣು ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಒಂದೇ ದಿನದಲ್ಲಿ ಜಮೀನಿಗೆ ರಸ್ತೆ ಮಾಡಿಕೊಟ್ಟರು ಎಂದು ಹೇಳಿದರು.

ಮಧುಗಿರಿ ರೈತ ಪ್ರಸನ್ನಕುಮಾರ್‌ ಅವರ ಹೋರಾಟ ಬೆಂಬಲಿಸಿ ಮಾತನಾಡಿದ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಬಾಗಲಕೋಟೆಯ ಮುತ್ತಪ್ಪ ಕೋಮಾರ, “ರೈತರಿಗೆ ಅಧಿಕಾರಿಗಳಿಂದ ಕಿರುಕುಳ ಹೆಚ್ಚಾಗುತ್ತಿದೆ. ರೈತರು ನಿರಂತರ ಹೋರಾಟ ಮಾಡಿದರೂ ಆಡಳಿತ ವರ್ಗ ಕ್ಯಾರೆ ಎನ್ನುತ್ತಿಲ್ಲ. ಸರ್ಕಾರಗಳ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳು, ಕೃಷಿ ಒಪ್ಪಂದಗಳಿಗೆ ಇತಿಶ್ರೀ ಹಾಡಲೇಬೇಕಿದೆ. ರೈತ ಚಳವಳಿಯನ್ನು ಮತ್ತೆ ಆರಂಭಿಸಬೇಕಾಗಿದೆ” ಎಂದು ತಿಳಿಸಿದರು.

ಸಾಲ ಪಡೆದ ರೈತರ ಜಮೀನನ್ನು ಬ್ಯಾಂಕ್‌ಗಳು ಹರಾಜಿಗಿಡುತ್ತಿವೆ. ರಾಜಕೀಯ ಪಕ್ಷಗಳು ಕಾರ್ಪೊರೇಟ್‌ ಉದ್ಯಮದಾರರಿಗೆ ಅನುಕೂಲಕರವಾದ ನೀತಿಗಳನ್ನು ತರುತ್ತಿವೆ ಎಂದು ದೂರಿದರು.

ರೈತರ ಬೆಳೆಗೆ ಬೆಂಬಲ ಬೆಲೆ ನೀಡುತ್ತಿಲ್ಲ, ಕೃಷಿಕರಿಗೆ ಭದ್ರತೆ ಇಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೃಷಿಕರ ಬಗ್ಗೆ ಕಿಂಚಿತ್ತೂ ಕಾಳಜಿಇಲ್ಲ, ಕೃಷಿ ನೀತಿಗಳನ್ನು ರೂಪಿಸುವವರು ಅಧಿಕಾರಿಗಳೇ ಆಗಿದ್ದಾರೆ, ರೈತರನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ದೊಡ್ಡ ದುರಂತ. ಜನ ಸಾಮಾನ್ಯರ ಪರವಾದ ಆಡಳಿತ ಎಂಬ ಸರ್ಕಾರದ ಘೋಷವಾಕ್ಯಗಳೇ ದೊಡ್ಡ ಜೋಕ್‌, ದುಡಿಯುವ ವರ್ಗಕ್ಕೆ ಇಂದಿಗೂ ಸ್ವಾತಂತ್ರ್ಯವಿಲ್ಲ, ಬ್ರಿಟೀಷರ ಗುಲಾಮಗಿರಿಯ ಪರಿಸ್ಥಿತಿಯೇ ಇದೆ ಎಂದು ಹೇಳಿದರು.

ನಕಾಶೆ ರಸ್ತೆ ಇರಲಿಲ್ಲ

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ʼದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿದ ಮಧುಗಿರಿ ತಹಶೀಲ್ದಾರ್‌ ಎಚ್‌. ಶ್ರೀನಿವಾಸ್‌, 2024ರಲ್ಲೇ ಹಿಂದಿನ ತಹಶೀಲ್ದಾರ್‌ ಅವರು ಜಕ್ಕೇನಹಳ್ಳಿಯಲ್ಲಿ ನಕಾಶೆ ದಾರಿ ಸಮಸ್ಯೆ ಬಗೆಹರಿಸಿದ್ದರು. ಆದರೆ, ಪ್ರಸನ್ನಕುಮಾರ್‌ ಅವರ ಜಮೀನು ನಕಾಶೆ ರಸ್ತೆಯ ಹಿಂಭಾಗದಲ್ಲಿತ್ತು. ಆ ಜಮೀನಿಗೆ ಸಂಬಂಧಿಕರೇ ದಾರಿ ಬಿಟ್ಟಿರಲಿಲ್ಲ. ಈ ವೇಳೆ ಹಳ್ಳ ಒತ್ತುವರಿಯಾಗಿದೆ ಎಂದು ಪ್ರಸನ್ನಕುಮಾರ್‌ ಸಂಬಂಧಿಕರು ತಹಶೀಲ್ದಾರ್‌ ಕಚೇರಿಗೆ ಅರ್ಜಿ ಹಾಕಿದ್ದರು. ಆ ಪ್ರಕಾರ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ಜಾಗ ತೆರವು ಮಾಡಿಕೊಟ್ಟಿದ್ದೆವು. 2026 ಜನವರಿಯಲ್ಲಿ ಪ್ರಸನ್ನಕುಮಾರ್‌ ಅವರು ನಕಾಶೆ ರಸ್ತೆ ಮಾಡಿಕೊಡುವಂತೆ ಅರ್ಜಿ ಹಾಕಿದ್ದರು. ಆದರೆ, ನಮ್ಮ ಸಿಬ್ಬಂದಿ ಸರಿಯಾಗಿ ಪರಿಶೀಲಿಸಿರಲಿಲ್ಲ. ಆಗೊಮ್ಮೆ ಪರಿಶೀಲನೆ ನಡೆಸಿದ್ದರೆ ಜಮೀನಿಗೆ ನಕಾಶೆ ರಸ್ತೆ ಇಲ್ಲವೆಂದು ಹಿಂಬರಹ ಕೊಡಬಹುದಾಗಿತ್ತು ಎಂದು ವಿವರಿಸಿದರು.

ರೈತ ಪ್ರಸನ್ನಕುಮಾರ್‌ ಅವರು ನಕಾಶೆಯಲ್ಲಿ 8 ಅಡಿ ರಸ್ತೆ ಇದೆ ಎಂದು ಹೇಳಿದ್ದರು, ವಾಸ್ತವದಲ್ಲಿ ರಸ್ತೆ ಇರಲಿಲ್ಲ. ಪ್ರತಿಭಟನೆ ನಂತರ ಅಣ್ಣ ತಮ್ಮಂದಿರೇ ಮಾತನಾಡಿಕೊಂಡು ರಸ್ತೆ ಬಿಟ್ಟುಕೊಂಡಿದ್ದಾರೆ. ಘಟನೆ ವರದಿಯಾದ ಬಳಿಕ ಲೋಕಾಯುಕ್ತ ಪೊಲೀಸರು ಬಂದು ಸ್ಥಳ ಪರಿಶೀಲಿಸಿದಾಗಲೂ ಪ್ರಸನ್ನಕುಮಾರ್‌ ಜಮೀನಿಗೆ ನಕಾಶೆ ರಸ್ತೆ ಇರಲಿಲ್ಲ. ಅವರಿಗೂ ವಾಸ್ತವ ಅರ್ಥವಾಯಿತು. ದಾಖಲೆ ತೋರಿಸಿ ರೈತನಿಗೆ ನಾವೇ ಮನವರಿಕೆ ಮಾಡಿಕೊಟ್ಟೆವು. ಈಗ ಅವರವರೇ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ರೈತನ ವಿನೂತನ ಧರಣಿಗೆ ಸೋತ ಆಡಳಿತ

ರಾಜ್ಯದಲ್ಲಿ ರೈತ ಸಂಘಟನೆಗಳು ಸಾಕಷ್ಟಿವೆ. 1980 ರಲ್ಲಿ ರೈತ ನಾಯಕ ಎಂ.ಡಿ. ನಂಜುಂಡಸ್ವಾಮಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಹುಟ್ಟಿಕೊಂಡಿತು. ಗಾಂಧಿವಾದಿ ನಂಜುಂಡಸ್ವಾಮಿ ಅವರು ರೈತರ ಹಕ್ಕುಗಳಿಗಾಗಿ ಅವಿರತ ಶ್ರಮಿಸಿದರು. ಜಾಗತೀಕರಣ ವಿರೋಧಿ ಅಭಿಯಾನದ ರೂವಾರಿಯಾಗಿದ್ದರು.

ಸಮಾಜವಾದಿ ನಾಯಕ ರಾಮ ಮನೋಹರ್‌ ಲೋಹಿಯಾ ಹಾಗೂ ಶಾಂತವೇರಿ ಗೋಪಾಲಗೌಡ ಅವರೊಂದಿಗೆ ನಂಜುಂಡಸ್ವಾಮಿ ಅವರು ನಿಕಟವಾಗಿ ಕೆಲಸ ಮಾಡಿದ್ದರು. 1975 ರಲ್ಲಿ ಕರ್ನಾಟಕದಲ್ಲಿ ಜೆಪಿ ಚಳವಳಿ ಆರಂಭಿಸಿದ್ದು, ಕೃಷಿ ಪೇಟೆಂಟ್ ಪಡೆಯುವುದರ ವಿರುದ್ಧ ಅಭಿಯಾನ ಮುನ್ನಡೆಸಿದ್ದರು. ಅಂದಿನ ಕಾಲಘಟ್ಟದಲ್ಲಿ ರೈತ ಸಂಘಟನೆಗಳೆಂದರೆ ಅಧಿಕಾರಿಗಳು, ರಾಜಕಾರಣಿಗಳು ಹೆದರುತ್ತಿದ್ದರು. ನಂಜುಂಡಸ್ವಾಮಿ ಅವರ ಬಳಿಕ ರೈತ ಸಂಘ ಬಣಗಳಾಯಿತು.

ರೈತರ ಸಮಸ್ಯೆಗಳನ್ನು ಇಟ್ಟುಕೊಂಡು ಸಂಘಟನೆಗಳು ಎಷ್ಟೇ ಹೋರಾಟ ನಡೆಸಿದರೂ ಸರ್ಕಾರ ಹಾಗೂ ಅಧಿಕಾರಿಗಳು ಸೊಪ್ಪು ಹಾಕುತ್ತಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ಮಧುಗಿರಿ ರೈತನ ವಿನೂತನ ಶೈಲಿಯ ಮೂಲಂಗಿ ಚಳವಳಿಗೆ ಅಧಿಕಾರಿಗಳು ಬೆಚ್ಚಿ ಬಿದ್ದಿರುವುದು ರೈತ ಹೋರಾಟಕ್ಕೆ ಹೊಸ ಆಯಾಮ ನೀಡಿದೆ.

Read More
Next Story