ಇಲ್ಲಿನ ಬಹುತ್ವದ ಸಂಸ್ಕೃತಿ ʼಹಿಮಾಚಲಿಯತ್ʼ ಬದಲಿಸುವ ತೀವ್ರ ಪ್ರಯತ್ನಗಳು ಜಾರಿಯಲ್ಲಿವೆ. ಅದನ್ನು ʼಹಿಂದುತ್ವದ ಪಾಪ್ʼ ಎಂದು ಹೊಸ ರೂಪ ಕೊಟ್ಟು ಪ್ರಚಾರ ನೀಡಲಾಗುತ್ತಿದೆ.
ʼಎಲ್ಲರನ್ನೂ ಒಳಗೊಳ್ಳುತ್ತೇವೆʼ ಎನ್ನುವ ಘೋಷವಾಕ್ಯವೇ ಹೇಗೆ ಒಂದು ರಾಜಕೀಯ ಅಸ್ತ್ರವಾಗಿ ಬದಲಾಗುತ್ತದೆ ಮತ್ತು ಅದು ಕ್ರಮೇಣ ಹೇಗೆ ಸರ್ವೇಸಾಮಾನ್ಯವಾಗುತ್ತದೆ ಎಂದರೆ ನಾವು ಅದನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದನ್ನೇ ಬಿಟ್ಟುಬಿಡುತ್ತೇವೆ. ಇಂತಹ ವಿದ್ಯಮಾನವನ್ನು ನೀವು ಎಂದಾದರೂ ಗಮನಿಸಿದ್ದೀರಾ?
ಈ ವರ್ಷ ʼBooking̤comʼ ಎಂಬ ವೆಬ್-ತಾಣದ ʼಟ್ರಾವೆಲರ್ ರಿವ್ಯೂ ಅವಾರ್ಡ್ʼನಲ್ಲಿ ವಿಶ್ವದ ಹತ್ತು ಅತ್ಯಂತ ಸ್ವಾಗತಾರ್ಹ ಪ್ರವಾಸಿ ತಾಣಗಳಲ್ಲಿ ಒಂದೆಂದು ಕೀರ್ತಿಗೆ ಭಾಜನವಾದ ಹಿಮಾಚಲ ಪ್ರದೇಶವು ಈ ಪಟ್ಟಿಯಲ್ಲಿ ಸ್ಥಾನ ಪಡೆದ ದಕ್ಷಿಣ ಏಷ್ಯಾದ ಏಕೈಕ ತಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಷ್ಟುಮಾತ್ರವಲ್ಲದೆ ʼHappyplus consultinǵ ಎಂಬ ಸಮೀಕ್ಷೆಯಲ್ಲಿ ಭಾರತದ ಅತ್ಯಂತ ಸಂತೋಷದಾಯಕ ರಾಜ್ಯವಾಗಿಯೂ ಅಗ್ರಗಣ್ಯ ಸ್ಥಾನವನ್ನು ಮುಂದುವರಿಸಿಕೊಂಡು ಬಂದಿದೆ.
ಇದಕ್ಕೆ ಮುಖ್ಯ ಕಾರಣ ಈ ರಾಜ್ಯದಲ್ಲಿರುವ ಅನ್ಯೋನ್ಯತೆ, ಸಹಬಾಳ್ವೆ, ಆತಿಥ್ಯ, ಪ್ರಾದೇಶಿಕ ಹೆಮ್ಮೆ ಮತ್ತು ಹಬ್ಬಗಳ ಸಡಗರವನ್ನು ಹಂಚಿಕೊಳ್ಳುವ ಸಹಜ ಸಂಸ್ಕೃತಿ. ಇಂತಹ ಜೀವನ ಶೈಲಿಯನ್ನು ʼಹಿಮಾಚಲಿಯತ್ʼ ಎಂದು ಗೌರವದಿಂದ ಕರೆಯುತ್ತೇವೆ. ಪಶ್ಚಿಮ ಹಿಮಾಲಯದ ರಾಜ್ಯವು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಒಳಗಾಗಿದ್ದರೂ ಇಂತಹ ಚೈತನ್ಯಕ್ಕೆ ಆಧಾರವಾಗಿರುವ ಪರಂಪರೆಯು ಕ್ರಮೇಣ ದುರ್ಬಲಗೊಳ್ಳುತ್ತ ಸಾಗಿದೆ ಎಂಬ ಭಾವನೆ ಮೂಡುತ್ತಿದೆ. ಹಿಮಾಲಯದ ಎಲ್ಲರನ್ನೂ ಒಳಗೊಳ್ಳುವ ಗುಣವೇ ಕಾಲಕ್ರಮೇಣ ಉಳಿಯಬಲ್ಲುದೆ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ.
ಇಂತಹ ನಮ್ಮ ಸಾಂಸ್ಕೃತಿಕ ಅಸ್ಮಿತೆಗಳು, ಅಸ್ತಿತ್ವಗಳಿಗೆ ರಾಜಕೀಯದ ಬಣ್ಣವನ್ನು ಲೇಪಿಸಿ ರಾಜಕೀಯ ಅಧಿಕಾರವೆಂಬ ಅಸ್ತ್ರದಿಂದ ಮರುರೂಪಿಸಲು ಹೊರಟಾಗ ಅವು ಜನರ ಸಹಬಾಳ್ವೆ ವಿಧಾನವನ್ನೇ ಬದಲಾಯಿಸಿಬಿಡುತ್ತದೆ. ಯಾರನ್ನು ಸ್ವಾಗತಿಸಲಾಗುತ್ತದೆ, ಯಾರನ್ನು ಅನುಮಾನದಿಂದ ನೋಡಲಾಗುತ್ತದೆ ಎಂಬುದು ತಿಳಿಯುವುದಿಲ್ಲ ಮತ್ತು ನಮ್ಮ ಭೂಮಿ, ನಮ್ಮ ಸುತ್ತಲಿನ ಸಂಪನ್ಮೂಲದ ಹಕ್ಕು ಚಲಾಯಿಸುವ ವಿಧಾನವೇ ಬದಲಾಗಿಬಿಡುತ್ತದೆ. ಸಾಮಾಜಿಕ ಜೀವನದ ಮೇಲೆ ಸಾಮಾನ್ಯ ನಾಗರಿಕರು ಯಾವ ಹಕ್ಕುಗಳನ್ನು ನಿರೀಕ್ಷಿಸಬೇಕು ಎಂಬ ಚಿಂತನೆ ಅರ್ಥ ಕಳೆದುಕೊಳ್ಳುತ್ತದೆ.
ಬಹುತ್ವದ ಸಂಸ್ಕೃತಿಗೆ ತಿಲಾಂಜಲಿ
ಇದಕ್ಕೆ ಕೊಡಬಹುದಾದ ಸ್ಪಷ್ಟ ಉದಾಹರಣೆ ಈ ʼಹಿಮಾಚಲಿಯತ್ʼ ಸಂಸ್ಕೃತಿ. ಇಂದು ಹಿಮಾಲಯದ ಬಹುತ್ವದ ಸಂಸ್ಕೃತಿಯಾದ ಇದನ್ನು ಬದಲಿಸುವ ತೀವ್ರ ಪ್ರಯತ್ನಗಳು ಜಾರಿಯಲ್ಲಿವೆ. ಅದನ್ನು ತಮ್ಮ ಕಬ್ಜಾ ಮಾಡಿಕೊಂಡು ʼಹಿಂದುತ್ವದ ಪಾಪ್ʼ ಎಂಬ ಹೆಸರಿನ ಹೊಸ ರೂಪ ಕೊಟ್ಟು ಪ್ರಚಾರ ನೀಡಲಾಗುತ್ತಿದೆ. ಅದೀಗ ದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ. ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಇದರ ಪರಿಣಾಮಗಳು ತೀವ್ರವಾಗಿ ಕಾಣಿಸಲು ಆರಂಭಿಸಿದೆ.
ಅಷ್ಟಕ್ಕೂ ಈ ʼಹಿಂದುತ್ವ ಪಾಪ್ʼ ಎಂದರೆ ನಿಖರವಾಗಿ ಏನು? ದೈನಂದಿನ ಜೀವನದಲ್ಲಿ ಅದು ಹಾಸುಹೊಕ್ಕಾಗಿದೆ ಎಂದು ನೋಡುವ ತನಕವೂ ಅದು ಕೇವಲ ಒಂದು ಅಮೂರ್ತ ಅಥವಾ ಶೈಕ್ಷಣಿಕ ಪದದಂತೆ ನಮಗೆ ಕೇಳಿಸಬಹುದು.
ಈ ಪ್ರಕ್ರಿಯೆ ಹೇಗೆ ಆರಂಭವಾಗುತ್ತದೆ ಎಂದರೆ ಕ್ರಮೇಣ ಅದು ನಮ್ಮೊಳಗೆ ಹಾಸುಹೊಕ್ಕಾಗಿ ಬೇರುಬಿಡುವಂತೆ ಮಾಡುತ್ತದೆ. ಒಂದು ಅಧಿಕೃತ ಸಂದೇಶ ಹರಿದು ಬರುತ್ತದೆ. ಅದು ನಮ್ಮನ್ನು ಆಲೋಚಿಸುವಂತೆ, ಚಿಂತಿಸುವಂತೆ ಮಾಡುತ್ತದೆ. ನಿಧಾನಕ್ಕೆ ನಮ್ಮ ನಡವಳಿಕೆಯನ್ನು ನಿಯಂತ್ರಿಸುತ್ತದೆ. ಒಂದು ಹಾಡು, ಘೋಷಣೆ ಅಥವಾ ವೈರಲ್ ವಿಡಿಯೋ ಯಾವುದೇ ಕಿರಿಕಿರಿ ಇಲ್ಲದೆ ನಮ್ಮ ದಿನಚರಿಯೊಳಗೆ ನುಸುಳಿಕೊಳ್ಳುತ್ತದೆ. ನೆರೆಹೊರೆಯಲ್ಲಿ ಸಾಗುವ ಮೆರವಣಿಗೆಯಲ್ಲಿ, ಹಬ್ಬದಲ್ಲಿ ಮೊಳಗುವ ಧ್ವನಿವರ್ಧಕಗಳಲ್ಲಿ, ವಾಟ್ಸಾಪ್ ಮೂಲಕ ಮುಂದೊತ್ತಿ ಬರುವ ಸಂದೇಶಗಳಲ್ಲಿ ಅಥವಾ ಚಹಾ ಅಂಗಡಿಯಲ್ಲಿ ಯಾರೋ ಒಬ್ಬರ ಫೋನಿನಲ್ಲಿ ನೀವು ಅದರ ಧ್ವನಿಗಳನ್ನು ಕೇಳುತ್ತೀರಿ. ನಿಮಗೆ ಅರಿವೇ ಇಲ್ಲದಂತೆ ಅದನ್ನು ಗುನುಗಲು ಶುರುಮಾಡಿಕೊಳ್ಳುತ್ತೀರಿ. ಒಂದು ಚರ್ಚೆ, ವಾದ, ತಕರಾರು ಇಲ್ಲದೇ ನಿಧಾನವಾಗಿ ಆ ಸಂದೇಶವು ನಿಮ್ಮೊಳಗೆ ಬೇರುಬಿಡಲು ಶುರುಮಾಡಿಕೊಳ್ಳುತ್ತದೆ.
ಮರೆಮಾಚುವ ಸರ್ಕಾರದ ವೈಫಲ್ಯಗಳು
ಇದು ʼಹಿಂದುತ್ವ ಪಾಪ್ʼ ಕೆಲಸ ಮಾಡುವ ವೈಖರಿ. ಇದು ಪಕ್ಕಾ ಸಂಸ್ಕೃತಿಯ ಮುಖವಾಡ ಧರಿಸಿದ ರಾಜಕೀಯ. ಈಗ ನಿಮ್ಮನ್ನೇ ನೀವು ಕೇಳಿಕೊಳ್ಳಿ, ಕೊನೆಯದಾಗಿ ನೀವು ಒಂದು ಹಾಡಿನ ಬಗ್ಗೆ ಯಾವಾಗ ಚರ್ಚೆ ಮಾಡಿದ್ದೀರಿ? ಅದರ ಉದ್ದೇಶವೂ ಅದೇ ಆಗಿದೆ. ಅದು ನಮ್ಮನ್ನು ಆವರಿಸಿಕೊಳ್ಳುವ ಪರಿ. ಒಂದು ಸಂಸ್ಕೃತಿಯಲ್ಲಿ ರಾಜಕೀಯವು ಲೀನವಾಗಿ ಹೋದಾಗ ಅದು ಯಾರನ್ನೂ ಒಪ್ಪಿಸುವ ಅಗತ್ಯವೂ ಇರುವುದಿಲ್ಲ. ಒಂದು ಸಿದ್ಧ ಮಾದರಿಯ ಭಾವನೆಗಳನ್ನು ಉಣಬಡಿಸುತ್ತ ಅಸಮಾನತೆ ಅಥವಾ ಸರ್ಕಾರದ ವೈಫಲಗಳನ್ನೆಲ್ಲ ನುಂಗಿಹಾಕುತ್ತ ಹೋಗುತ್ತದೆ.
ಇಂತಹ ಹಿನ್ನೆಲೆಯಲ್ಲಿ ಮಾನವ ಸುರಕ್ಷತೆಯಂತಹ ಮೂಲಭೂತ ವಿಷಯಗಳನ್ನೇ ಮೂಲೆಗುಂಪು ಮಾಡಿ ಜನರ ಗಮನವನ್ನು ಬೇರೆಡೆಗೆ ಸೆಳೆದು ಸಾಂಸ್ಕೃತಿಕ ಆತಂಕ ಮತ್ತು ಅಸುರಕ್ಷತೆಯೇ ಮುಖ್ಯವಾಗುವಂತೆ ಮಾಡುತ್ತದೆ. ಹಾಗೆ ಮಾಡುತ್ತ ಮಾಡುತ್ತ ಜನರ ಬದುಕನ್ನು ರೂಪಿಸುವ ದೈನಂದಿನ ಕಾಳಜಿಗಳೇ ತೆರೆಮರೆಗೆ ಸರಿಯುವಂತೆ ಮಾಡುತ್ತದೆ.
ಬಹುತ್ವದ ನಾಗರಿಕತೆಯನ್ನು ನಂಬುವ ಪ್ರತಿಯೊಬ್ಬರೂ ಗಮನಿಸಬೇಕಾದ ಸಂಗತಿ ಎಂದರೆ, ಕಳೆದ ರಾಷ್ಟ್ರೀಯ ಜನಗಣತಿಯ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಶೇ.95ಕ್ಕೂ ಹೆಚ್ಚು ಮಂದಿ ಹಿಂದುಗಳಿದ್ದಾರೆ. ಆದರೆ ಈ ಸಂಖ್ಯಾಬಲವು ಆ ರಾಜ್ಯದ ವೈವಿಧ್ಯಮಯ ಸಂಸ್ಕೃತಿ, ಭಾಷಾ ಪರಂಪರೆ, ಜಾತಿ ಸಂರಚನೆಗಳು, ಪ್ರಾದೇಶಿಕ ಆಚರಣೆಗಳು ಮತ್ತು ಸಹಬಾಳ್ವೆಯ ಇತಿಹಾಸವನ್ನೇನೂ ಇಲ್ಲವಾಗಿಸುವುದಿಲ್ಲ. ಆದರೆ ಇದೇ ಸಂಖ್ಯೆಯನ್ನು ಬಳಸಿಕೊಂಡು ಬಹುಸಂಖ್ಯಾತ ರಾಜಕೀಯವು ತನ್ನನ್ನು ʼಜನಪ್ರಿಯ ಸಂಸ್ಕೃತಿʼ ಎಂದು ಬಿಂಬಿಸಿಕೊಳ್ಳುತ್ತದೆ. ಹಿಮಾಚಲದಲ್ಲಿ ಆಗಿರುವುದೇ ಇದು. ಜನರ ನಿಜವಾದ ಜೀವನ ಸಂಸ್ಕೃತಿಯು ಸಂಕೀರ್ಣ ಮತ್ತು ಸಮನ್ವಯತೆಯಿಂದ ಕೂಡಿದ್ದರೂ ಕೂಡ ಕೇವಲ ಧಾರ್ಮಿಕ ಬಹುಸಂಖ್ಯಾತ ವಾದವನ್ನೇ ರಾಜ್ಯದ ಏಕೈಕ ಮಾನ್ಯ ಗುರುತಾಗಿ ಬಿಂಬಿಸಲಾಗುತ್ತದೆ.
“ಹಿಮಾಚಲಿಯತ್ ಔರ್ ಹಮ್"
2022ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷವು ಪ್ರಾದೇಶಿಕ ಅಸ್ಮಿತೆಯ ಸ್ಪಷ್ಟ ಕಲ್ಪನೆಯೊಂದಿಗೆ ತನ್ನ ನೆಲೆಯನ್ನು ಮರಳಿ ಪಡೆಯುವ ಪ್ರಯತ್ನವನ್ನು ನಡೆಸಿತು. "ಹಿಮಾಚಲ್, ಹಿಮಾಚಲಿಯತ್ ಔರ್ ಹಮ್" ಎಂಬ ಶೀರ್ಷಿಕೆಯ ಅದರ ಪ್ರಣಾಳಿಕೆಯು, ಕೇವಲ ಸಂಕುಚಿತ ಧಾರ್ಮಿಕ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ರಾಜ್ಯದ ಗುರುತನ್ನು ಬಹುಮುಖಿ ಇತಿಹಾಸ, ಪರಿಸರ ಸಂಬಂಧಗಳು ಮತ್ತು ಸ್ಥಳೀಯ ಒಗ್ಗಟ್ಟಿನ ಆಧಾರದ ಮೇಲೆ ರೂಪಿಸಲು ಪ್ರಯತ್ನಪಟ್ಟಿತು. ಇದು ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಭಾರತದ ಉತ್ತರ ಭಾಗದ ಪ್ರದೇಶಗಳಲ್ಲಿ—ಪಂಜಾಬ್‌ನಲ್ಲಿ 'ಪಂಜಾಬಿಯತ್' ಅಥವಾ ಕಾಶ್ಮೀರದಲ್ಲಿ 'ಕಾಶ್ಮೀರಿಯತ್' ಮೂಲಕ—ಚುನಾವಣಾ ನಿರೂಪಣೆಗಳನ್ನು ರೂಪಿಸಿದ ವಿಧಾನದಲ್ಲಿಯೇ ಇತ್ತು. ಈ ಸಂದರ್ಭದಲ್ಲಿ, ಸ್ಥಳೀಯ ರಾಜಕಾರಣವು 'ಹಿಮಾಚಲಿಯತ್'ಯನ್ನು ಬಿಜೆಪಿಯ ಅತೀವ-ರಾಷ್ಟ್ರೀಯವಾದಿ ಮತ್ತು ಧಾರ್ಮಿಕವಾಗಿ ಪ್ರಾಬಲ್ಯ ಹೊಂದಿರುವ ಹಿಂದುತ್ವ ನಿರೂಪಣೆಗೆ ಒಂದು ಅಂತರ್ಗತ ಮತ್ತು ಸಮನ್ವಯದ ಪ್ರತಿತಂತ್ರವಾಗಿ ನಿಲ್ಲಿಸಿತು.
ಈ ಪ್ರತಿ-ನಿರೂಪಣೆಯು ಮಹತ್ವದ ಪರಿಣಾಮ ಬೀರಿತು. 2022ರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆಯಿತು, ಇದು ಹಿಮಾಚಲದಲ್ಲಿ ಪ್ರಾದೇಶಿಕ ಬಹುತ್ವದ ಆಕರ್ಷಣೆಯು ಇಂದಿಗೂ ಮತದಾರರನ್ನು ಸೆಳೆಯಬಲ್ಲದು ಎಂಬುದನ್ನು ಸಾಬೀತುಪಡಿಸಿತು. ಆದರೆ ಚುನಾವಣಾ ಯಶಸ್ಸು ಸೈದ್ಧಾಂತಿಕ ಹೋರಾಟವನ್ನು ಕೊನೆಗೊಳಿಸುವುದಿಲ್ಲ. 'ಹಿಮಾಚಲಿಯತ್'ನ ಈ ಪ್ರಭಾವವೇ ಅದನ್ನು ಗುರಿಯಾಗಿಸಿತು.
ಸಾಂಸ್ಕೃತಿಕ ಸಂಘಟನೆಯಲ್ಲಿ ಪರಿಣತಿ ಹೊಂದಿರುವ ಹಿಂದುತ್ವ ವ್ಯವಸ್ಥೆಯು, ಹಿಂದುತ್ವ ರಾಷ್ಟ್ರೀಯವಾದಕ್ಕೆ ಎದುರಾದ ಈ ಸವಾಲಿಗೆ ಪ್ರತಿಯಾಗಿ 'ಹಿಮಾಚಲಿಯತ್'ಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮತ್ತು ಅದಕ್ಕೆ 'ಕೇಸರೀ ಬಣ್ಣʼವನ್ನು ಮೆತ್ತಲು ಪ್ರಯತ್ನಿಸಿತು. ಆಯ್ದ ಧಾರ್ಮಿಕ ಸಂಕೇತಗಳು ಮತ್ತು ಬಹುಸಂಖ್ಯಾತ ಕಲ್ಪನೆಗಳ ಮೂಲಕ ʼಹಿಮಾಚಲಿಯತ್ʼಗೆ ಹೊಸ ರೂಪ ಕೊಡಲಾಯಿತು. ಪ್ರಾಯೋಗಿಕವಾಗಿ, ಈ ಕಾರ್ಯತಂತ್ರವು ಸಾಂಸ್ಕೃತಿಕವಾಗಿ ಕಾಣುವ ಆದರೆ ರಾಜಕೀಯವಾಗಿ ಕಾರ್ಯನಿರ್ವಹಿಸುವ ಘೋಷಣೆಗಳು ಮತ್ತು ಚಿಹ್ನೆಗಳನ್ನು ಮುನ್ನೆಲೆಗೆ ತರುತ್ತದೆ. ಜೊತೆಗೆ, ಸ್ಥಳೀಯ ಪ್ರಸಾರಕರು ಮತ್ತು ಪ್ರಭಾವಿಗಳ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಹಿಂದುತ್ವ ಕೇಂದ್ರಿತ ಹಿಮಾಚಲಿಯತ್ ದೃಷ್ಟಿಕೋನವನ್ನು ವ್ಯವಸ್ಥಿತವಾಗಿ ಹರಡಲಾಗುತ್ತಿದೆ.
ಇದಕ್ಕೆ ಪ್ರಮುಖ ಉದಾಹರಣೆ ಉಪದೇಶ್ ವಾತ್ಸಾಯನ್, ಇವರು 'ದಿ ಹಿಮಾಚಲಿ ಪಾಡ್ಕಾಸ್ಟರ್' ವೇದಿಕೆಯನ್ನು ನಡೆಸುತ್ತಾರೆ. ಹಿಮಾಚಲ ಪ್ರದೇಶದ ಪ್ರಾದೇಶಿಕ ಸಂಸ್ಕೃತಿಗೆ ಒತ್ತು ನೀಡುವ ಮೂಲಕ ಇವರು ಮೊದಲು ಮನ್ನಣೆ ಗಳಿಸಿದರು. ಹಿಮಾಚಲದ ಆರಂಭಿಕ ವೃತ್ತಿಪರ ಪಾಡ್ಕಾಸ್ಟರ್ಗಳಲ್ಲಿ ಒಬ್ಬರಾದ ವಾತ್ಸಾಯನ್, ಸಾಂಪ್ರದಾಯಿಕ ಪಹಾರಿ ಟೋಪಿ ಧರಿಸುವುದು ಮತ್ತು ಪ್ರಾದೇಶಿಕ ಭಾಷೆ ಹಾಗೂ ಸಂಗೀತದ ಬಗ್ಗೆ ಚರ್ಚಿಸುವ ಮೂಲಕ ಸಾಂಪ್ರದಾಯಿಕ ಸಂಕೇತಗಳನ್ನು ಬಳಸಿಕೊಂಡರು. ಆದರೆ ಈ ವೇದಿಕೆಯು ಬೆಳೆದಂತೆ, ಅದರ ಗಮನವು ಹಿಂದೂ ಏಕತೆ ಮತ್ತು ಆರ್ಎಸ್ಎಸ್ನ ಪ್ರಾಮುಖ್ಯತೆಯ ಸೈದ್ಧಾಂತಿಕ ಚರ್ಚೆಗಳತ್ತ ವಿಸ್ತರಿಸಿತು. ಧ್ರುವೀಕೃತ ಧಾರ್ಮಿಕ ಭಾಷಣಗಳಿಗೆ ಹೆಸರಾದ ಕಂಗನಾ ರಣಾವತ್ ಅವರಂತಹ ಬಿಜೆಪಿ ನಾಯಕರು ಈ ಪಾಡ್ಕಾಸ್ಟ್ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭಿಸಿದರು.
ಅದೇ ರೀತಿ ರಾಜ್ಯದಲ್ಲಿ 'ನ್ಯೂಸ್ 4 ಹಿಮಾಲಯನ್' ಎಂಬ ಸಾಮಾಜಿಕ ಮಾಧ್ಯಮ ವೇದಿಕೆಯ ಬೆಳವಣಿಗೆಗೆ ಅದರ "ಹಿಮಾಚಲಿಯತ್" ಎಂಬ ಕಿರು-ವಿಡಿಯೋ (reel) ಸರಣಿಯ ಸಾಂಸ್ಕೃತಿಕ ಕಥೆ ಹೇಳುವ ಶೈಲಿಯೇ ಕಾರಣವಾಗಿತ್ತು. ಇದು ಮೂಲತಃ ಜಾನಪದ ಸಂಪ್ರದಾಯಗಳು ಮತ್ತು ಪ್ರಾದೇಶಿಕ ಹಬ್ಬಗಳ ಮೇಲೆ ಕೇಂದ್ರೀಕೃತವಾಗಿತ್ತು. ಯಾವಾಗ ವೇದಿಕೆಯುತ್ತ ಹೋಯಿತೋ, ಆಗ ಅದರ ವಿಷಯಗಳಲ್ಲಿ ಹಿಂದೂ ಬಹುಸಂಖ್ಯಾತ ದೃಷ್ಟಿಕೋನವು ಹೆಚ್ಚಾಗಿ ಪ್ರತಿಫಲಿಸಲು ಪ್ರಾರಂಭಿಸಿತು. ಈ ಮಾಧ್ಯಮದಲ್ಲಿ ಚಾಲ್ತಿಗೆ ಬಂದ ಮುಖ ಮತ್ತು "ಹಿಮಾಚಲಿಯತ್" ಸರಣಿಯ ಸತತ ನಿರೂಪಕಿಯಾಗಿರುವ ಗೀತಾ ಠಾಕೂರ್ ಅವರು, ಸೆಪ್ಟೆಂಬರ್ 2024 ರಲ್ಲಿ ವಿವಾದಿತ ಸಂಜೌಲಿ ಮಸೀದಿ ಪ್ರತಿಭಟನೆಗಳಿಗೆ ಎಕ್ಸ್ (X) ಮೂಲಕ ಬೆಂಬಲ ವ್ಯಕ್ತಪಡಿಸಿದ್ದರು. ಹತ್ತು ಹಲವು ವೀಕ್ಷಕರು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಹಿಂದೂತ್ವ ಪರ ಬಲಪಂಥೀಯ ಗುಂಪುಗಳನ್ನು ಒಳಗೊಂಡಿದ್ದ ಈ ಪ್ರತಿಭಟನೆಗಳು ಮಸೀದಿಯನ್ನು ಕೆಡವಲು ಕರೆ ನೀಡಿದ್ದವು.
ಧರ್ಮದ ಆಧಾರದಲ್ಲಿ ಧ್ರುವೀಕರಣ
ನಂತರ, “ವಿ ಆರ್ ಹಿಮಾಚಲ್” ಎಂಬ ಜನಪ್ರಿಯ ಫೇಸ್ಬುಕ್ ಪುಟವನ್ನು ನಡೆಸುತ್ತಿರುವ ಪ್ರಭಾವಿ ರೋಹಿತ್ ಕಟ್ವಾಲ್, ಆರಂಭದಲ್ಲಿ ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಯಂತಹ ಪರಿಸರ ಸಮಸ್ಯೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ಇಂತಹ ಘಟನೆಗಳನ್ನು ಹಿಮಾಚಲಿಯತ್ ಮತ್ತು ರಾಜ್ಯದ ಪರಿಸರ ಪರಂಪರೆಯನ್ನು ಸಂರಕ್ಷಿಸುವಲ್ಲಿ ಹೆಚ್ಚಿನ ನಾಗರಿಕ ಸಹಭಾಗಿತ್ವ ಅಗತ್ಯವಿದೆ ಎಂದು ಸಾರಿ ಹೇಳುತ್ತಿದ್ದರು. ಕಾಲಾಕ್ರಮೇಣ, ಅವರ ಸಂದೇಶಗಳು ʼಹಿಮಾಚಲಿಯತ್ʼಯನ್ನು ಹಿಂದೂ ಬಹುಸಂಖ್ಯಾತ ಮೌಲ್ಯಗಳು ಮತ್ತು ಸನಾತನ ತತ್ವಗಳೊಂದಿಗೆ ಜೋಡಿಸುವ ರೀತಿಯಲ್ಲಿ ಬದಲಾದವು. ಕಟ್ವಾಲ್ ಅವರು ಬಲಪಂಥೀಯ 'ದೇವಭೂಮಿ ಸಂಘರ್ಷ ಸಮಿತಿ' ಮತ್ತು 'ರಾಷ್ಟ್ರೀಯ ದೇವಭೂಮಿ ಪಾರ್ಟಿ'ಗೆ ಪದೇ ಪದೇ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂಸ್ಥೆಗಳು ಇತ್ತೀಚಿನ ವರ್ಷಗಳಲ್ಲಿ ಸಂಜೌಲಿ ಮಸೀದಿ ಪ್ರತಿಭಟನೆ ಮತ್ತು ಮೇಲ್ಜಾತಿಗಳಿಗಾಗಿ ಆಯೋಗವನ್ನು ಪ್ರತಿಪಾದಿಸಿದ 'ಸ್ವರ್ಣ ಆಯೋಗ' ಚಳವಳಿಯ ಮೂಲಕ ರಾಜ್ಯವನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಧ್ರುವೀಕರಿಸಿವೆ.
ಈ ಸಾಂಸ್ಕೃತಿಕ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಯಾಕೆ ಇಷ್ಟು ಮುಖ್ಯವಾಗುತ್ತದೆ? ಯಾಕೆಂದರೆ ಇಂದು ಸಂಸ್ಕೃತಿಯು ಪ್ರಸಾರವಾಗುವ ರೀತಿಯೇ ಹಾಗಿದೆ. ಒಂದು ಕಾಲದಲ್ಲಿ ಪುರಾಣವಾಗಿದ್ದದ್ದು ಪ್ರಾರ್ಥನೆಯಾಯಿತು, ಪ್ರಾರ್ಥನೆಗಳು ಭರವಸೆಗಳಾದವು, ಮತ್ತು ಸಹಜವಾಗಿಯೇ ಆ ಭರವಸೆಗಳು ಅಸುರಕ್ಷತೆಯ ದ್ವೇಷವನ್ನು ಮೈಗೂಡಿಸಿಕೊಂಡವು. ಬಾವುಟಗಳ ಮೇಲೆ, ರ‍್ಯಾಲಿಗಳಲ್ಲಿ ಕಾಣಿಸಿಕೊಂಡವು. ಅಂತಿಮವಾಗಿ ಇದು ಯಾವ ಭೇದ-ಭಾವವೂ ಇಲ್ಲದೆ ಎಲ್ಲಾ ಕಡೆಯ ನಾಯಕರಿಂದಲೂ ಹೊರಹೊಮ್ಮಲು ಶುರುವಾಯಿತು. ಅದೇ ಸಮಯದಲ್ಲಿ, ಜನಸಮೂಹವು ಅದನ್ನು ಬಲವಂತವಾಗಿ ಪಠಿಸುವಂತೆ ಮಾಡಲಾಗುತ್ತಿದೆ. ಭಕ್ತಿಯು ಒಂದು ಪಕ್ಷಪಾತಿ ಆಯುಧವಾಗಿ ಬದಲಾದಾಗ ಏನಾಗುತ್ತದೆ?
ಈಗ ನಾವು 'ಹಿಂದೂತ್ವ ಪಾಪ್' ಎಂದು ಕರೆಯಬಹುದಾದ ಬೆಳವಣಿಗೆಯ ಕಾಲದಲ್ಲಿ ಬದುಕುತ್ತಿದ್ದೇವೆ - ಅಂದರೆ ಒಂದು ಸೈದ್ಧಾಂತಿಕ ಯೋಜನೆಯನ್ನು ಜನಪ್ರಿಯ ಸಂಸ್ಕೃತಿಯ ಚೌಕಟ್ಟಿನೊಳಗೆ ಪ್ಯಾಕೇಜ್ ಮಾಡುವುದು. ಇದು ಅತ್ಯಂತ ಸರಳವಾ. ʼಜೈ ಶ್ರೀ ರಾಮ್ʼ ಎಂಬ ಘೋಷಣೆಯು ಅದರ ಮೂಲ ಅರ್ಥವನ್ನು ಮೀರಿ ಬೆಳೆದಿದೆ. ಇದು ಭಾರತದ ಜಾತ್ಯತೀತ, ಬಹುತ್ವದ ಆದರ್ಶಗಳು ಮತ್ತು ಪ್ರಾದೇಶಿಕ ವೈವಿಧ್ಯತೆಗೆ ಅಪಾಯಕಾರಿ ಪರಿಣಾಮಗಳನ್ನು ಬೀರುವ 'ಹಿಂದೂತ್ವ ವಿಜಯೋತ್ಸವ'ದ ಸಂಕೇತವಾಗಿ ಮಾರ್ಪಟ್ಟಿದೆ. ಇಂತಹ ಘೋಷಣೆಗಳು ಈಗ ಕೇವಲ ಬೀದಿಗಳಲ್ಲಿ ಮೊಳಗುವ ಕೂಗುಗಳಾಗಿ ಉಳಿದಿಲ್ಲ; ಅವು ಸಾಂಸ್ಕೃತಿಕ ಸಂಕೇತಗಳಾಗಿ, ಒಂದು ಪದವಾಗಿ, ಇನ್ಸ್ಟಾಗ್ರಾಮ್ ಪೋಸ್ಟ್ ಆಗಿ ಅಥವಾ ಒಬ್ಬರ ಗುಂಪನ್ನು ಗುರುತಿಸುವ ಸಾಧಾರಣ ಶುಭಾಶಯವಾಗಿ ಬದಲಾಗಿವೆ.
ಸಾರ್ವತ್ರಿಕವಾಗುವ ರಾಜಕೀಯ ವ್ಯಾಕರಣ
ಹೀಗೆ ಒಂದು ರಾಜಕೀಯ ಘೋಷಣೆಯು ದೈನಂದಿನ ಸಂಸ್ಕೃತಿಯ ಭಾಗವಾಗಿ ಬದಲಾದಾಗ, ಅದು ತನ್ನ ಬಹಿರಂಗ ರಾಜಕೀಯ ತೀಕ್ಷ್ಣತೆಯನ್ನು ಕಳೆದುಕೊಂಡು 'ಇವೆಲ್ಲ ಸಹಜ-ಸಾಮಾನ್ಯ' ಎಂಬ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಇನ್ನೂ ಕೆಟ್ಟ ಸಂಗತಿ ಎಂದರೆ, ಸ್ವಯಂ ಘೋಷಿತ ʼಪ್ರಗತಿಪರʼ ನಾಯಕರು ಅಥವಾ ʼತಟಸ್ಥʼ ಅಧಿಕಾರಿಗಳು ಇಂತಹ ಘೋಷಣೆಗಳನ್ನು ಹಾನಿಕಾರಕವಲ್ಲದ ಸಾಂಸ್ಕೃತಿಕ ಚಲಾವಣೆ ಎಂದು ಪರಿಗಣಿಸಿ ಬಿಡುತ್ತಾರೆ. ಅವುಗಳನ್ನು ಸಾಂದರ್ಭಿಕವಾಗಿ ಪುನರಾವರ್ತಿಸುತ್ತಾರೆ, ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ ಅಥವಾ ಅವುಗಳ ಒಳಾರ್ಥಗಳ ಬಗ್ಗೆ ಚರ್ಚಿಸಲು ನಿರಾಕರಿಸುತ್ತಾರೆ. ಹಾಗೆ ಮಾಡುತ್ತಲೇ ಅವರು ಒಂದು ರಾಜಕೀಯ ವ್ಯಾಕರಣವನ್ನು ಸಾರ್ವತ್ರಿಕಗೊಳಿಸಲು ಸಹಾಯ ಮಾಡುತ್ತ ಹೋಗುತ್ತಾರೆ. ನಂತರ ಅದಕ್ಕೆ ಯಾವುದೇ ಸವಾಲು ಉಳಿಯುವುದಿಲ್ಲ. ಸಹಜ-ಸಾಮಾನ್ಯವಾಗಿ ಮುಂದುವರಿಯುತ್ತದೆ.
ಸಾಮಾಜಿಕ ಮಾಧ್ಯಮ ಮತ್ತು ಪ್ರಾದೇಶಿಕ ಮಾಧ್ಯಮಗಳು ಅಸ್ಮಿತೆಯನ್ನು ಸುಲಭವಾಗಿ ಬಳಸಬಲ್ಲ, ವೈರಲ್ ಆಗುವ ಕಥನಗಳನ್ನಾಗಿ ರೂಪಿಸಿದಾಗ, ಸಾಂಸ್ಕೃತಿಕ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಮತ್ತು ನಿಯಂತ್ರಕ ಬದಲಾವಣೆಗಳು ವಿಷಕಾರಿ ರೀತಿಯಲ್ಲಿ ಒಂದಾಗುತ್ತವೆ. ಸ್ಥಳೀಯ ಕಾರ್ಯಕ್ರಮಗಳು ಮತ್ತು ಇನ್ಫ್ಲುಯೆನ್ಸರ್ಗಳು ಪಹಾರಿ ಟೋಪಿ, ಪ್ರಾದೇಶಿಕ ಹಬ್ಬಗಳು ಅಥವಾ ಪರಿಚಿತ ನುಡಿಗಟ್ಟುಗಳಂತಹ ಹಿಮಾಚಲಿ ಸಂಕೇತಗಳನ್ನು ಬಳಸಿ, ʼಸಾಂಸ್ಕೃತಿಕʼ ಮುಖವಾಡದ ಅಡಿಯಲ್ಲಿ ಹೊರಗಿಡುವ ರಾಜಕೀಯವನ್ನು ಪ್ರಚಾರ ಮಾಡಬಹುದು.
ಇನ್ಫ್ಲುಯೆನ್ಸರ್ಗಳು ಮತ್ತು ಸ್ಥಳೀಯ ಪ್ರಸಾರಕರು ನಿರ್ದಿಷ್ಟ ರಾಜಕೀಯ ವ್ಯಕ್ತಿಗಳು ಅಥವಾ ನೀತಿಗಳ ವಿರುದ್ಧ ಜನಭಾವನೆಯನ್ನು ಪ್ರಚೋದಿಸಲು ಈ ಸಂಕೇತಗಳನ್ನು ಬಳಸಿಕೊಂಡಾಗ, ಅದು ಒಂದು 'ಫೀಡ್ಬ್ಯಾಕ್ ಲೂಪ್' ಅನ್ನು ಸೃಷ್ಟಿಸುತ್ತದೆ: ಸಾಂಸ್ಕೃತಿಕ ಭಾವನೆಯು ರಾಜಕೀಯ ಹಕ್ಕುಗಳಿಗೆ ಇಂಧನವಾಗುತ್ತದೆ, ಇದು ಪ್ರತಿಯಾಗಿ ಮತ್ತಷ್ಟು ಸಾಂಸ್ಕೃತಿಕ ಪೊಲೀಸ್ಗಿರಿಯನ್ನು ಸಮರ್ಥಿಸುತ್ತದೆ. ಇದರ ಒಟ್ಟಾರೆ ಪರಿಣಾಮವೆಂದರೆ ಸಾರ್ವಜನಿಕ ಚರ್ಚೆಯ ವ್ಯಾಪ್ತಿ ಕಿರಿದಾಗುವುದು; ಭಿನ್ನಾಭಿಪ್ರಾಯವು ಸಾಂಸ್ಕೃತಿಕವಾಗಿ ಸಂಶಯಾಸ್ಪದವಾಗಿ ಕಾಣುತ್ತದೆ ಮತ್ತು ನೀತಿ ನಿರೂಪಣೆಯ ಚರ್ಚೆಗಳು ಕೇವಲ ಅಸ್ಮಿತೆಯ ಪ್ರಶ್ನೆಗಳಾಗಿ ಕುಸಿಯುತ್ತವೆ. ಇದು ಕೇವಲ ಕಾಲ್ಪನಿಕ ಭಯವಲ್ಲ. ಸಾಮಾಜಿಕ ಮಾಧ್ಯಮದ ಪುಟಗಳು ಮತ್ತು ವೇದಿಕೆಗಳು ತಮ್ಮ ವಿಷಯದ ಆಯ್ಕೆಯಲ್ಲಿ ಸಾಂಸ್ಕೃತಿಕ ಹೆಮ್ಮೆಯನ್ನು ರಾಜಕೀಯ ಪಕ್ಷಪಾತದೊಂದಿಗೆ ಪದೇ ಪದೇ ಬೆರೆಸುತ್ತಿರುವುದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ; ಕೆಲವೊಮ್ಮೆ ಬಹಿರಂಗವಾಗಿ, ಇನ್ನು ಕೆಲವೊಮ್ಮೆ ಸೂಚ್ಯವಾಗಿ. ಈ ಪ್ರವೃತ್ತಿಯನ್ನು ಸಂಶಯದಿಂದ ಗಮನಿಸುವವರು ತಮ್ಮನ್ನು ತಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ: ಸಂಸ್ಕೃತಿಯು ಯಾವಾಗ ಸಂಸ್ಕೃತಿಯಾಗಿ ಉಳಿಯುವುದನ್ನು ನಿಲ್ಲಿಸಿ, ಹೊರಗಿಡುವ ಕಾರ್ಯವಿಧಾನವಾಗಿ ಬದಲಾಗುತ್ತದೆ?
ನಾಶವಾಗುವ ಅವಿನಾಶಿ ಸಂಸ್ಕೃತಿ
ಇದರಲ್ಲಿ ಒಂದು ನೈತಿಕ ಆಯಾಮವೂ ಇದೆ. ಬಹುಸಂಖ್ಯಾತವಾದವನ್ನು 'ಸಾಂಸ್ಕೃತಿಕ ಸಾಮಾನ್ಯ ಜ್ಞಾನ' ಎಂಬಂತೆ ಸರಳೀಕರಿಸುವುದು ನೈತಿಕ ಕಲ್ಪನೆಯನ್ನೇ ಬದಲಾಯಿಸುತ್ತದೆ. ಇದು ಬಹುಸಂಖ್ಯಾತರ ಐತಿಹಾಸಿಕ ಹಕ್ಕುಗಳಿಗೆ ಆದ್ಯತೆ ನೀಡುತ್ತದೆ ಮತ್ತು ಪರಸ್ಪರ ಅವಲಂಬನೆ ಹಾಗೂ ಹಂಚಿಕೊಂಡ ಸಂಕಷ್ಟಗಳ ಮೂಲಕವೇ ಬೆಸೆದುಕೊಂಡಿದ್ದ ಇತರ ಬಗೆಯ ಸೌಹಾರ್ದದ ಅಸ್ತಿತ್ವಗಳನ್ನು ಮೂಲೆಗುಂಪು ಮಾಡುತ್ತದೆ. ಸಮಾಜದ ನೈತಿಕ ಭಾಷೆಯು ಕೇವಲ ಒಂದು ಏಕಮುಖ ನಿರೂಪಣೆಗೆ ಸೀಮಿತಗೊಂಡಾಗ, ಬಹುತ್ವದ ಹಿತಾಸಕ್ತಿಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಸಂಸ್ಥೆಗಳು—ಸ್ಥಳೀಯ ಮಂಡಳಿಗಳು, ಸಹಕಾರಿ ಭೂ ನಿರ್ವಹಣೆ, ಎಲ್ಲರನ್ನೂ ಒಳಗೊಳ್ಳುವ ಸಾಂಸ್ಕೃತಿಕ ಕ್ಯಾಲೆಂಡರ್ಗಳು—ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತವೆ. ಪ್ರಜಾಪ್ರಭುತ್ವದ ನೈತಿಕ ತಿರುಳೆಂದರೆ ಭಿನ್ನಾಭಿಪ್ರಾಯಗಳಿಗೆ ಮತ್ತು ವೈವಿಧ್ಯತೆಗೆ ಅವಕಾಶ ಮಾಡಿಕೊಡುವುದು; ಆದರೆ ಯಾವಾಗ ಸಂಸ್ಕೃತಿಯು ರಾಜಕೀಯ ನಿಷ್ಠೆಯ ಪರೀಕ್ಷೆಯಾಗಿ ಬದಲಾಗುತ್ತದೆಯೋ, ಆಗ ಆ ಅವಿನಾಶಿಯಾದ ನೈತಿಕ ಅಭ್ಯಾಸವು ನಾಶವಾಗುತ್ತ ಹೋಗುತ್ತದೆ.
ಅಂತಿಮವಾಗಿ, ಇಲ್ಲಿ ರಾಷ್ಟ್ರೀಯ ಮಟ್ಟದ ಅಪಾಯವೂ ಇದೆ. ಹಿಮಾಚಲ ಪ್ರದೇಶವು ಕೇವಲ ಒಂದು ಪ್ರತ್ಯೇಕ ಪ್ರಯೋಗ ಶಾಲೆಯಲ್ಲ. ಒಂದು ಪುಟ್ಟ ಹಿಮಾಲಯ ರಾಜ್ಯದಲ್ಲಿ ಪ್ರಾದೇಶಿಕ ಬಹುತ್ವವನ್ನು ಈ ರೀತಿಯಲ್ಲಿ ಮರುರೂಪಿಸಿ ವಶಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಅನ್ನುವುದೇ ಹೌದಾದರೆ ಈ ಮಾದರಿಯನ್ನು ಬೇರೆ ಕಡೆಗೂ ವರ್ಗಾಯಿಸುವುದು ಕಷ್ಟವೇನೂ ಅಲ್ಲ ಮತ್ತು ಹಾಗೆ ಮಾಡಲಾಗುತ್ತಿದೆ ಕೂಡ. ಇಲ್ಲಿನ ಇನ್ನೂ ದೊಡ್ಡ ಅಪಾಯವೆಂದರೆ ಇದು ಕೇವಲ ಬಹುಸಂಖ್ಯಾತ ನೀತಿಗಳ ಗೆಲುವಲ್ಲ, ಬದಲಿಗೆ 'ಅಸ್ತಿತ್ವ'ದ ಸಾಮಾನ್ಯ ನಿಯಮಗಳು ನಿಧಾನವಾಗಿ ಮತ್ತು ಸದ್ದಿಲ್ಲದೆ ಬದಲಾಗುತ್ತಿರುವುದರ ಸಂಕೇತ. ಈ ಬದಲಾವಣೆಗೆ ತಡೆಯೊಡ್ಡಿ ಮೊದಲಿನಂತೆ ಮಾಡುವುದು ಯಾವುದೇ ಒಂದು ಮಸೂದೆ ಅಥವಾ ಚುನಾವಣಾ ಸೋಲಿಗಿಂತ ಕಷ್ಟಕರ. ಏಕೆಂದರೆ ಇದು ದೈನಂದಿನ ಜೀವನದಲ್ಲಿ, ಶುಭಾಶಯಗಳಲ್ಲಿ, ಶಾಲಾ ಪ್ರಾರ್ಥನೆಗಳಲ್ಲಿ, ಸ್ಥಳೀಯ ಮಾಧ್ಯಮಗಳಲ್ಲಿ ಮತ್ತು ನಾವು ʼಸಂಸ್ಕೃತಿʼ ಎಂದು ಪರಿಗಣಿಸುವ ಸಾಮಾನ್ಯ ಆಯ್ಕೆಗಳಲ್ಲಿ ಹಾಸುಹೊಕ್ಕಾಗಿದೆ.
ಮುಂದಿನ ಹೆಜ್ಜೆಯಾದರೂ ಏನು?
ಹಾಗಾದರೆ, ಇಲ್ಲಿಂದ ಮುಂದೆ ನಾವು ಎತ್ತ ಸಾಗಬೇಕು? ಮೊದಲನೆಯದಾಗಿ, ಸಂಸ್ಕೃತಿ ಮತ್ತು ಬಲವಂತದ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸ್ಪಷ್ಟ ನಾಗರಿಕ ವ್ಯಾಕರಣ ನಮಗೆ ಬೇಕಾಗಿದೆ. ಸ್ಥಳೀಯ ಉಪಭಾಷೆಗಳು, ಹಬ್ಬಗಳು ಅಥವಾ ಆಹಾರವನ್ನು ಆಚರಿಸುವುದು ಸೈದ್ಧಾಂತಿಕ ಅನುಸರಣೆಯ ಸಂಕೇತವಾಗಬಾರದು. ಎರಡನೆಯದಾಗಿ, ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಸೌಕರ್ಯಕ್ಕಾಗಿ ಬಹುಸಂಖ್ಯಾತ ಸಾಂಸ್ಕೃತಿಕ ಚಿಹ್ನೆಗಳನ್ನು ಅಳವಡಿಸಿಕೊಳ್ಳುವುದು ಅಲ್ಪಾವಧಿಯ ಲಾಭ ತರಬಹುದು, ಆದರೆ ಇದು ದೀರ್ಘಕಾಲೀನ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದನ್ನು ಗುರುತಿಸಬೇಕು. ಮೌನ ಅಥವಾ ಅನುಕರಣೆಯ ಮೂಲಕ ವಿರೋಧ ಪಕ್ಷಗಳ ಪಾಲುದಾರಿಕೆಯೂ ಈ ಸಮಸ್ಯೆಯ ಭಾಗವಾಗಿದೆ. ಮೂರನೆಯದಾಗಿ, ಭೂಮಿ, ಅಭಿವೃದ್ಧಿ ಮತ್ತು ಆಡಳಿತದ ಬಗ್ಗೆ ನೀತಿ ಚರ್ಚೆಗಳನ್ನು ಮುಕ್ತಗೊಳಿಸಬೇಕು; ಅಲ್ಲಿ ಸ್ಥಳೀಯ ಸಮುದಾಯಗಳು, ಪಂಚಾಯತ್ಗಳು ಮತ್ತು ತಳವರ್ಗದ ಗುಂಪುಗಳು ನಿರ್ಣಾಯಕ ಧ್ವನಿಯನ್ನು ಹೊಂದಿರಬೇಕು.
ನಾವು ಒಳಗೊಳ್ಳುವ ಪ್ರಕ್ರಿಯೆಯ ಘೋಷಣೆಯ ಬಗ್ಗೆ ಒಂದು ಪ್ರಶ್ನೆಯೊಂದಿಗೆ ಆರಂಭಿಸಿದ್ದೆವು. ಇನ್ನೊಂದು ಪ್ರಶ್ನೆಯೊಂದಿಗೆ ಇದನ್ನು ಮುಗಿಸೋಣ: ನಮ್ಮ ಸಮುದಾಯಗಳು ಹೇಗಿರಬೇಕೆಂದು ನಾವು ಬಯಸುತ್ತೇವೆ? ಸಂಸ್ಕೃತಿಯು ಜೀವಂತವಾಗಿರುವ, ಚರ್ಚೆಗೊಳಪಡುವ ಮತ್ತು ಪ್ರಜಾಸತ್ತಾತ್ಮಕವಾಗಿರುವ ತಾಣಗಳಾಗಬೇಕೆ ಅಥವಾ ರಾಜಕೀಯ ಸೇಡು ತೀರಿಸಿಕೊಳ್ಳಲು ಬಳಸುವ ಅನುಕೂಲಕರ ಸಾಧನವಾಗಬೇಕೆ? 'ಹಿಮಾಚಲಿಯತ್' ಎನ್ನುವುದಕ್ಕೆ ಏನಾದರೂ ಅರ್ಥವಿದ್ದರೆ, ಅದು ದೈನಂದಿನ ಜೀವನದ ನೀಡುವಿಕೆ ಮತ್ತು ಪಡೆದುಕೊಳ್ಳುವಿಕೆಯ ಮೂಲಕ ರೂಪುಗೊಂಡ ಅಸ್ತಿತ್ವವಾಗಿದೆ; ಇದು ಯಾವುದೇ ಹೇರಿಕೆಯಲ್ಲ. ಬದಲಾಗಿ ಹಿಮಾಚಲದ ಕಲ್ಪನೆಯನ್ನು ರೂಪಿಸುವ ಪ್ರಕ್ರಿಯೆಯಾಗಿದೆ. ಈ ಮೌಲ್ಯವನ್ನು ಎತ್ತಿಹಿಡಿಯುವುದು ಕೇವಲ ಸ್ಥಳೀಯ ಕೆಲಸವಲ್ಲ, ಇದು ಭಾರತದ ಕಲ್ಪನೆಯನ್ನು ಮತ್ತು ಅದು ಒಮ್ಮೆ ಭರವಸೆ ನೀಡಿದ್ದ ಪ್ರಜಾಸತ್ತಾತ್ಮಕ ಬಹುತ್ವವನ್ನು ರಕ್ಷಿಸುವ ಕಾರ್ಯವಾಗಿದೆ.

