ಸಂಕೋಲೆಯ ಸಂಕಟವಿಲ್ಲ, ಕಠಿಣ ತಾಲೀಮಿಲ್ಲ: ಈ ಪುನರ್ವಸತಿ ಕೇಂದ್ರದಲ್ಲಿ ಆನೆಗಳು ಸರ್ವ ಸ್ವತಂತ್ರ
x
ಕೇರಳದ ತಿರುವನಂತಪುರದ ಕೊಟ್ಟೂರು ಬಳಿಯ ಕಪ್ಪುಕಾಡು ಆನೆ ಪುನರ್ವಸತಿ ಕೇಂದ್ರದಲ್ಲಿ ಇರುವ ಆನೆಗಳಿಗೆ ನೀರಿನ ಪೈಪ್-ಗಳ ಮೂಲಕ ಸ್ನಾನ ಮಾಡಿಸುತ್ತಿರುವ ಪರಿ. ಇಲ್ಲಿ 85 ವರ್ಷ ವಯಸ್ಸಿನ ಅತ್ಯಂತ ಹಿರಿಯ ಆನೆ ಸೋಮ ಸೇರಿದಂತೆ ಹದಿನೈದು ಆನೆಗಳಿವೆ. ಇವುಗಳಿಗೆ ಸಂಕೋಲೆ ತೊಡಿಸಿ ಹಿಂಸಿಸಿ ತರಬೇತಿ ನೀಡುವುದಿಲ್ಲ. ಬದಲಾಗಿ ಅವು ಈ ಕೇಂದ್ರದಲ್ಲಿ ಸರ್ವಸ್ವತಂತ್ರವಾಗಿ ಅಡ್ಡಾಡಿಕೊಂಡಿರಬಹುದು.

ಸಂಕೋಲೆಯ ಸಂಕಟವಿಲ್ಲ, ಕಠಿಣ ತಾಲೀಮಿಲ್ಲ: ಈ ಪುನರ್ವಸತಿ ಕೇಂದ್ರದಲ್ಲಿ ಆನೆಗಳು ಸರ್ವ ಸ್ವತಂತ್ರ

ಕೇರಳದ ಕಪ್ಪುಕಾಡು ಎಂಬಲ್ಲಿ ಒಂದು ಆನೆ ಪುನರ್ವಸತಿ ಕೇಂದ್ರವಿದೆ. ಇಲ್ಲಿರುವ ಆನೆಗಳ ಸಂಖ್ಯೆ ಹದಿನೈದು. ಇಲ್ಲಿ ಆನೆಗಳನ್ನುಅಕ್ಕರೆಯಿಂದ ಸಾಕಿ ಪಳಗಿಸಲಾಗುತ್ತದೆ.


Click the Play button to hear this message in audio format

ಆತನಿಗಿರುವುದು ನೀಳವಾದ ದಂತಗಳ ಜೋಡಿ. ಅವೋ ಅಂದವಾಗಿ ಕೆತ್ತಿದಂತಿವೆ. ಆತನ ಹೆಸರು ಸೋಮ. ನಿಧಾನವಾಗಿ ತನ್ನ ತಲೆಯನ್ನು ಅಲುಗಾಡಿಸುತ್ತ ಕಿವಿಗಳನ್ನು ಬಡಿಯುತ್ತ ಲಯಬದ್ಧವಾಗಿ, ದೀರ್ಘವಾಗಿ ನಿಟ್ಟುಸಿರು ಬಿಡುತ್ತಿದ್ದಾನೆ. ಆತನ ಮುಖದಲ್ಲಿ ವಯಸ್ಸಾದ ಕುರುಹುಗಳೇನೂ ಕಾಣದಿದ್ದರೂ, ಕಾಲುಗಳ ಮೇಲಿರುವ ಹಳೆಯ ಗಾಯದ ಗುರುತುಗಳು ದಶಕಗಳ ಕಾಲ ಆತ ಅನುಭವಿಸಿದ ಸಂಕೋಲೆಗಳ ಸಂಕಟದ ನೆನಪನ್ನು ಮತ್ತೆ ಮತ್ತೆ ಮರುಕಳಿಸುವಂತೆ ಮಾಡುತ್ತದೆ.

ಕೇರಳದ ತಿರುವನಂತಪುರದಿಂದ 35 ಕಿ.ಮೀ. ದೂರದ ಕೊಟ್ಟೂರು ಸಮೀಪದ ಕಪ್ಪುಕಾಡು ಎಂಬಲ್ಲಿರುವ ʼಆನೆ ಪುನರ್ವಸತಿ ಕೇಂದ್ರʼ (ಇ.ಆರ್.ಸಿ) ಮಾವುತರು ಮತ್ತು ಸಿಬ್ಬಂದಿ ಕೆಲವು ತಿಂಗಳ ಹಿಂದಷ್ಟೇ ಈ ನಿವೃತ್ತ ʼಕುಮ್ಕಿʼ (ಕಾಡಾನೆಗಳನ್ನು ಸೆರೆಹಿಡಿಯಲು ಅಥವಾ ಗಾಯಾಳು ಆನೆಗಳಿಗೆ ವೈದ್ಯಕೀಯ ನೆರವು ನೀಡಲು ಬಳಸುವ ತರಬೇತಿ ಪಡೆದ ಆನೆ)ಯ ಹುಟ್ಟುಹಬ್ಬ ಆಚರಿಸಿದರು. 85 ವರ್ಷ ವಯಸ್ಸಿನ ಸೋಮನಿಗೆ ಸದ್ಯ ಕೇರಳದಲ್ಲಿ ಜೀವಂತವಿರುವ ಅತ್ಯಂತ ಹಿರಿಯ ಸಾಕಾನೆ ಎಂಬ ಹೆಗ್ಗಳಿಕೆ.

ಸೋಮನನ್ನು ಸರಪಳಿಯಿಂದ ಕಟ್ಟಿಹಾಕಿರುವ ತಗಡಿನ ಛಾವಣಿಯ ಕೊಟ್ಟಿಗೆಯ ಮುಂದೆ ಕಾಂಕ್ರೀಟ್ ಕಂಬವಿದೆ. ಅದಕ್ಕೊಂದು ಹಳೆಯ ಬೋರ್ಡ್ ತೂಗುಹಾಕಲಾಗಿದೆ. ಅದರಲ್ಲಿ, “ಆನೆ ಮದವೇರಿದೆ… ಅದರಿಂದ ದೂರವಿರಿ” ಎಂಬ ಎಚ್ಚರಿಕೆಯ ಫಲಕವನ್ನು ನೇತುಹಾಕಲಾಗಿದೆ. ಸೋಮನನ್ನು ಸೆರೆಹಿಡಿದಿದ್ದು 1968ರಲ್ಲಿ –ರನ್ನಿ ಅರಣ್ಯ ವಲಯದಿಂದ ಎಂದು ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಮೂಲಗಳು ಹೇಳುತ್ತವೆ. ಕೇರಳದ ಪಟ್ಟನಂತಿಟ್ಟ ಜಿಲ್ಲೆಯ ಕೊನ್ನಿ ಆನೆ ಶಿಬಿರದಲ್ಲಿ ಸೋಮನಿಗೆ ತರಬೇತಿ ನೀಡಲಾಯಿತು. 1977ರಲ್ಲಿ ಭಾರತದಲ್ಲಿ ಕಾಡಾನೆಗಳನ್ನು ಸೆರೆಹಿಡಿಯುವುದನ್ನು ನಿಷೇಧಿಸಲಾಯಿತು. ಅಲ್ಲಿಯ ತನಕವೂ ಹೊಸದಾಗಿ ಸೆರೆಹಿಡಿಯಲಾದ ಆನೆಗಳಿಗೆ ತರಬೇತಿ ನೀಡುವ ಕುಮ್ಕಿಯಾಗಿ ಈತ ಸೇವೆ ಸಲ್ಲಿಸಿದ್ದಾನೆ.

ಕಪ್ಪುಕಾಡುವಿನ ಈ ಆನೆ ಪುನರ್ವಸತಿ ಕೇಂದ್ರವು ನಾನಾ ವಯಸ್ಸಿನ ಹದಿನೈದು ಆನೆಗಳಿಗೆ ಆಶ್ರಯ ತಾಣವಾಗಿದೆ. ಭಾರತದ ಇತರ ಆನೆ ತರಬೇತಿ ಕೇಂದ್ರಗಳಲ್ಲಿ ಕಂಡುಬರುವ ಕ್ರೂರ ತರಬೇತಿ ವಿಧಾನಗಳು ಇಲ್ಲಿ ಇಲ್ಲದೇ ಇರುವುದು ಈ ಕೇಂದ್ರದ ವಿಶೇಷತೆಯಾಗಿದೆ.

ಇಲ್ಲಿ ಆಶ್ರಯ ಪಡೆದಿರುವ ಪ್ರತಿಯೊಂದು ಆನೆಯೂ ನೋವಿನ ಹಿನ್ನೆಲೆಯನ್ನು ಹೊಂದಿದೆ. ಗಂಡಾನೆ ಮರಿ ರಾಣಾ ಕೇವಲ ಒಂದು ವರ್ಷದವನಿದ್ದಾಗ ಕೇರಳದ ಕಾಸರಗೋಡು ಜಿಲ್ಲೆಯ ಕಾಂಞಗಾಡ್ ವಲಯದ ಓಡಕೊಲ್ಲಿ ಎಂಬಲ್ಲಿ ಕೃಷಿ ಭೂಮಿಯ ಸುತ್ತ ಹಾಕಿದ್ದ ಮುಳ್ಳುತಂತಿ ಬೇಲಿಯಲ್ಲಿ ಸಿಲುಕಿ ಗಾಯಗೊಂಡಿದ್ದ. ಆತನನ್ನು ಈ ಪುನರ್ವಸತಿ ಕೇಂದ್ರಕ್ಕೆ ಕರೆತಂದಿದ್ದು 2013ರಲ್ಲಿ. ಆತನಿಗೆ ಕುಶಲ ಪಶುವೈದ್ಯರಿಂದ ಚಿಕಿತ್ಸೆ ನೀಡಲಾಯಿತು. ಇಂದು ರಾಣಾ 14 ವರ್ಷ ವಯಸ್ಸಿನ ಹದಿಹರಯದ ಆರೋಗ್ಯವಂತ ಆನೆಯಾಗಿ ಬೆಳೆದು ನಿಂತಿದ್ದಾನೆ. ಅದೇ ರೀತಿ 48 ವರ್ಷ ವಯಸ್ಸಿನ ರಾಜಕುಮಾರ್ ಎಂಬ ʼಮೋಳಾʼ (ದಂತವಿಲ್ಲದ ಗಂಡಾನೆ)ನನ್ನು ಸರ್ಕಸ್ ತಂಡದಿಂದ ರಕ್ಷಿಸಲಾಗಿತ್ತು. ಇನ್ನು 32 ವರ್ಷ ವಯಸ್ಸಿನ ಹರೀಶ್ ಎಂಬ ಆನೆ ದೇವಸ್ಥಾನದಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿತ್ತು. ಆತನಿಗೂ ಇಲ್ಲಿಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ಇಂದು ರಾಜಕುಮಾರ್ ಮತ್ತು ಹರೀಶ್ ಇಬ್ಬರೂ ಇತರ ಆನೆಗಳ ಜೊತೆಗೆ ಈ ಪುನರ್ವಸತಿ ಕೇಂದ್ರದಲ್ಲಿ ಸುಖವಾಗಿದ್ದಾರೆ. ಅವರಲ್ಲದೆ ಇಲ್ಲಿ ರಾಜು, ಪೊಡಿಚ್ಚಿ ಮತ್ತು ಮುನ್ನಾ ಎಂಬ ಇನ್ನೂ ಅನೇಕ ಆನೆಗಳಿವೆ. ಇವುಗಳಲ್ಲಿ ಹೆಚ್ಚಿನವು ಮರಿ ಆನೆಗಳು.

ನಿಸರ್ಗದತ್ತ ಪರಿಸರ ನಿರ್ಮಾಣ

ಕೇರಳ ಸರ್ಕಾರದ ಅರಣ್ಯ ಮತ್ತು ವನ್ಯಜೀವಿ ಇಲಾಖೆಯು 2008 ರಲ್ಲಿ ಸ್ಥಾಪಿಸಿದ ಈ ಕೇಂದ್ರದಲ್ಲಿ ಸದ್ಯ 15 ಆನೆಗಳಿವೆ. ಸಾಕು ಆನೆಗಳು, ಕಾಡಾನೆಗಳು ಹಾಗೂ ಅನಾಥ ಆನೆ ಮರಿಗಳನ್ನು ರಕ್ಷಿಸುವುದು, ಅವುಗಳಿಗೆ ಪುನರ್ವಸತಿ ಕಲ್ಪಿಸುವುದು ಮತ್ತು ರಕ್ಷಣೆ ನೀಡುವುದು ಈ ಕೇಂದ್ರದ ಮುಖ್ಯ ಉದ್ದೇಶ. ಆರಂಭದಲ್ಲಿ, ವಿವಿಧ ವಯೋಮಾನದ ಕೇವಲ ಮೂರು ಆನೆಗಳೊಂದಿಗೆ ಈ ಕೇಂದ್ರ ಕಾರ್ಯಾರಂಭ ಮಾಡಿತ್ತು.

ತದನಂತರ, ಕಾಡಿನಲ್ಲಿ ಸಿಕ್ಕ ಅನಾಥ ಮರಿಗಳು, ಮೃಗಾಲಯಗಳ ಸಾಕು ಆನೆಗಳು ಮತ್ತು ಅರಣ್ಯ ಇಲಾಖೆಯ ಇತರ ಶಿಬಿರಗಳ ಆನೆಗಳನ್ನು ಇಲ್ಲಿಗೆ ಸೇರಿಸಲಾಯಿತು. ಆರಂಭದಲ್ಲಿ, ತಿರುವನಂತಪುರಂ ವನ್ಯಜೀವಿ ವಿಭಾಗದ 'ಅಗಸ್ತ್ಯವನಂ ಬಯೋಲಾಜಿಕಲ್ ಪಾರ್ಕ್' ವ್ಯಾಪ್ತಿಯ ರಕ್ಷಿತಾರಣ್ಯದ ಹೊರವಲಯದ 56 ಹೆಕ್ಟೇರ್ ಪ್ರದೇಶದಲ್ಲಿ ಈ ಕೇಂದ್ರವು ಹರಡಿಕೊಂಡಿತ್ತು. ಕಾಲಾನಂತರದಲ್ಲಿ, ಇಲ್ಲಿನ ಆನೆಗಳ ಸಂಖ್ಯೆ 17 ಕ್ಕೆ ಏರಿತು. ಆದರೆ, ಅಷ್ಟು ದೊಡ್ಡ ಸಂಖ್ಯೆಯ ಆನೆಗಳನ್ನು ನಿರ್ವಹಿಸಲು ಕೇಂದ್ರದಲ್ಲಿ ಅಗತ್ಯ ಸೌಲಭ್ಯಗಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಒಂದು ಯೋಜನಾ ವರದಿಯನ್ನು ಸಿದ್ಧಪಡಿಸಲಾಯಿತು ಮತ್ತು ಅದರ ಮೊದಲ ಹಂತದ ಅನ್ವಯ 2024ರಲ್ಲಿ ಈ ಪುನರ್ವಸತಿ ಕೇಂದ್ರವನ್ನು ನವೀಕರಿಸಲಾಯಿತು.

ಇಲ್ಲಿ ಆನೆಗಳೆಂದರೆ ಮಾವುತರ ಪಾಲಿಗೆ ಸ್ನೇಹಿತರು. ಅವುಗಳನ್ನು ಪಳಗಿಸುವ ರೀತಿ ಸಹಜ ಮತ್ತು ಅತ್ಯಂತ ವಿಭಿನ್ನ.

ಮಾವುತರೊಂದಿಗೆ ಉತ್ತಮ ಗೆಳೆತನ

ಈಗ ಈ ಕೇಂದ್ರ 176 ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ವಿಸ್ತರಿಸಿದೆ. ಆನೆಗಳಿಗೆ ಸಂಕೋಲೆ ಮುಕ್ತವಾದ, ನೈಸರ್ಗಿಕ ಪರಿಸರ ಇಲ್ಲಿದೆ. ಇದೊಂದು ಪುನರ್ವಸತಿ ಕೇಂದ್ರವಾಗಿರುವುದರಿಂದ, ರಾಜ್ಯದ ಅಥವಾ ದೇಶದ ಇತರ ಆನೆ ತರಬೇತಿ ಕೇಂದ್ರಗಳಂತೆ ಇಲ್ಲಿ ಯಾವುದೇ ಕಠಿಣ ತರಬೇತಿ ವಿಧಾನಗಳನ್ನು ಬಳಸಲಾಗುವುದಿಲ್ಲ. ಇಲ್ಲಿನ ಆನೆಗಳಿಗೋ ಮಾವುತರೊಂದಿಗೆ ಉತ್ತಮ ಬಾಂಧವ್ಯ. ಇವುಗಳ ದಿನಚರಿ ಆರಂಭವಾಗುವುದು 'ವಾಟರ್ ಹೋಸ್' (ನೀರಿನಿಂದ ಪೈಪ್ ಮೂಲಕ) ಸ್ನಾನದೊಂದಿಗೆ. ನಂತರ ಪುನರ್ವಸತಿ ಕೇಂದ್ರದ ಒಳಗಿರುವ ನೆಯ್ಯಾರ್ ಜಲಾಶಯದಲ್ಲಿ ಸುದೀರ್ಘ ಜಳಕ.

"ಬೇಸಿಗೆಯ ಸಮಯದಲ್ಲಿ ನಾನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹೀಗೆ ಸ್ನಾನ ಮಾಡಿಸುತ್ತೇನೆ" ಎನ್ನುತ್ತಾರೆ ರಾಜು. ಕೇಂದ್ರದ ಒಳಗಿರುವ ಐದು ಎಕರೆ ವಿಸ್ತೀರ್ಣದ ಮುಖ್ಯ ಆವರಣದಲ್ಲಿ, ನಾಲ್ಕು ಹದಿಹರೆಯದ ಆನೆಗಳಿಗೆ ವಾಟರ್ ಹೋಸ್ ಸ್ನಾನ ಮಾಡುತ್ತಿರುವ ಹಿರಿಯ ಮಾವುತ ರಾಜು ಹೇಳುತ್ತಾರೆ. ಈ ಆನೆಗಳು ಬಹಳ ಚೇಷ್ಟೆ ಮಾಡುತ್ತಾ, ಮೈಮೇಲೆ ನೀರು ಚಿಮ್ಮುತ್ತಿರುವುದನ್ನು ಪೂರ್ಣವಾಗಿ ಆನಂದಿಸುತ್ತಿವೆ. ಆದರೂ, ಆನೆಗಳಿಗೆ ಸ್ನಾನ ಮಾಡಿಸುವಾಗ ಬಹಳ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ ಎನ್ನುತ್ತಾರೆ ಅವರು.

ಹೀಗೆ ಸ್ನಾನ ಮಾಡಿಸುವಾಗಲೇ ಒಮ್ಮೆ ಹದಿಹರೆಯದ ಆನೆಯೊಂದು ತನ್ನ ಸೊಂಡಿಲಿನಿಂದ ಹಠಾತ್ ಅವರ ಎಡಗೈಯನ್ನು ಎಳೆದಿತ್ತು. “ಎಳೆಯ ಆನೆಗಳು ತುಂಬಾ ತುಂಟ. ಅವು ವೇಗವಾಗಿ ಚಲಿಸುತ್ತವೆ ಮತ್ತು ಸ್ನಾನ ಮಾಡಿಸುವಾಗ ಪೈಪನ್ನು ತಮ್ಮ ಸೊಂಡಿಲಿನಿಂದ ಹಿಡಿದು ಎಳೆಯುತ್ತವೆ. ಆರು ತಿಂಗಳ ಹಿಂದೆ ನಾನು ಇಂತಹದ್ದೇ ಒಂದು ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದೆ; ಒಂದು ಆನೆ ಮರಿಯು ನನ್ನನ್ನು ಸೀದಾ ಆವರಣದ ಒಳಕ್ಕೇ ಎಳೆದುಕೊಂಡು ಹೋಗಿತ್ತು. ಆ ಘಟನೆಯಲ್ಲಿ ನನ್ನ ಎಡಗಾಲು ಮತ್ತು ಎಡಗೈ ಮೂಳೆ ಮುರಿದು ಸುಮಾರು ಆರು ತಿಂಗಳು ಹಾಸಿಗೆ ಹಿಡಿಯಬೇಕಾಯಿತು,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಪೌಷ್ಟಿಕ ಆಹಾರದ ಉಂಡೆಗಳು

ಬೆಳಗಿನ 'ವಾಟರ್ ಹೋಸ್' ಸ್ನಾನ ಮುಗಿದ ನಂತರ, ಆನೆಗಳಿಗೆ ಬೆಳಗಿನ ಉಪಹಾರ ಸಿಗುವುದು ಬೆಳಿಗ್ಗೆ 11 ಗಂಟೆಗೆ. ಬೇಯಿಸಿದ ಅಕ್ಕಿ, ಗೋಧಿ ಮತ್ತು ಬೆಲ್ಲದ ಪೌಷ್ಟಿಕ ಮಿಶ್ರಣದಿಂದ ತಯಾರಿಸಿದ ದೊಡ್ಡ ದೊಡ್ಡ ಉಂಡೆಗಳನ್ನು ಮಾಡಿ ಉಣಬಡಿಸಲಾಗುತ್ತದೆ. “ಪ್ರತಿ ಆನೆಯ ವಯಸ್ಸು ಮತ್ತು ಬೆಳವಣಿಗೆಗೆ ಅನುಗುಣವಾಗಿ ಆಹಾರದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಇದರ ಜೊತೆಗೆ, ಅವುಗಳ ಆಹಾರದ ಅಗತ್ಯತೆಗಳನ್ನು ಪೂರೈಸಲು ನಾವು ನೇಪಿಯರ್ ಹಸಿರು ಮೇವು, ತರಕಾರಿಗಳು ಮತ್ತು ಕಲ್ಲಂಗಡಿ ಹಣ್ಣುಗಳನ್ನು ಸಹ ನೀಡುತ್ತೇವೆ,” ಎನ್ನುತ್ತಾರೆ ಇವೆಲ್ಲವನ್ನೂ ನೋಡಿಕೊಳ್ಳುವ ಅನೀಶ್.

ಆದರೆ ಸೋಮನ ವಿಚಾರ ಬೇರೆ. ಆತನ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಆಹಾರ ಕ್ರಮವನ್ನು ಅನುಸರಿಸಲಾಗುತ್ತಿದೆ. “ಸೋಮನ ಹಲ್ಲುಗಳು ಸವೆದು ದುರ್ಬಲವಾಗಿವೆ. ಹಾಗಾಗಿ ನಾವು ಅವನಿಗೆ ಜೀರ್ಣಿಸಿಕೊಳ್ಳಲು ಸುಲಭವಾದ ಮತ್ತು ಹಗುರವಾದ ಆಹಾರ ಪದಾರ್ಥಗಳನ್ನು ನೀಡುತ್ತೇವೆ. ಅವನು ಬಾಳೆಹಣ್ಣು, ಕಲ್ಲಂಗಡಿ ಮತ್ತು ಎಳೆಯ ನೇಪಿಯರ್ ಹುಲ್ಲನ್ನು ಸುಲಭವಾಗಿ ಅಗಿಯಬಲ್ಲ. ಹೀಗಾಗಿ, ಪ್ರತಿಯೊಂದು ಆನೆಗೂ, ವಿಶೇಷವಾಗಿ ಸೋಮನಂತಹ ಹಿರಿಯ ಆನೆಗಳಿಗೆ ನಾವು ಪ್ರತ್ಯೇಕ ಆಹಾರ ಯೋಜನೆಯನ್ನು ರೂಪಿಸಿದ್ದೇವೆ," ಎಂದು ಅವರು ವಿವರಿಸುತ್ತಾರೆ.

ಕಪ್ಪುಕಾಡು ಅರಣ್ಯದ ಮಗ್ಗುಲಲ್ಲೇ ಇರುವ ನದಿಗೆ ಕರೆದೊಯ್ದು ಅವುಗಳು ಸ್ವಚ್ಛಂದವಾಗಿ ಸ್ನಾನ ಮಾಡಲು ಅವಕಾಶ ನೀಡಲಾಗುತ್ತದೆ.

ಗಜಪಡೆ ನೋಡಲು ಬರುವ ಮಕ್ಕಳು

ಮಧ್ಯಾಹ್ನ 2:30ಕ್ಕೆ ಸರಿಯಾಗಿ ಸ್ನಾನದ ಸಮಯ ಆರಂಭ. ಕೇಂದ್ರದ ಒಳಗಿರುವ ನೆಯ್ಯಾರ್ ಜಲಾಶಯದಲ್ಲಿ ಪ್ರತಿ ಆನೆಗೂ ನಿಗದಿತ ಜಾಗವಿರುತ್ತದೆ. ಮಾವುತರ ಜೊತೆಯಲ್ಲಿ ಒಂದರ ಹಿಂದೆ ಒಂದರಂತೆ ಆನೆಗಳ ಸಣ್ಣ ಮೆರವಣಿಗೆ ಜಲಾಶಯದ ದಂಡೆಯತ್ತ ಸಾಗುವ ದೃಶ್ಯವು ಪ್ರವಾಸಿಗರನ್ನು, ವಿಶೇಷವಾಗಿ ನಾನಾ ಶಾಲೆಗಳಿಂದ ಬಂದ ಮಕ್ಕಳನ್ನು ಬಹುವಾಗಿ ಆಕರ್ಷಿಸುತ್ತದೆ.

“ಜಲಾಶಯದ ತಳಭಾಗವು ಕೆಸರಿನಿಂದ ಕೂಡಿದೆ. ಹಾಗಾಗಿ ನಾವು ಆನೆಗಳನ್ನು ಜಲಾಶಯದ ಮಧ್ಯಭಾಗಕ್ಕೆ ಹೋಗಲು ಬಿಡುವುದಿಲ್ಲ. ಆನೆಗಳು ಆರಾಮವಾಗಿ ನೀರಿನಲ್ಲಿ ಮುಳುಗಿ ಸ್ನಾನವನ್ನು ಆನಂದಿಸಲು ಅನುವಾಗುವಂತೆ ಅವುಗಳ ಒಂದು ಕಾಲನ್ನು ಮರದ ದಿಮ್ಮಿಗೆ ಸಡಿಲವಾಗಿ ಕಟ್ಟುತ್ತೇವೆ,” ಎಂದು ಮತ್ತೊಬ್ಬ ಮಾವುತ ಮಧು ತಿಳಿಸುತ್ತಾರೆ. "ಹೀಗೆ ನಿರ್ಬಂಧಿಸದಿದ್ದರೆ, ಆನೆಗಳು, ಅದರಲ್ಲೂ ಮುಖ್ಯವಾಗಿ ಹದಿಹರೆಯದ ಆನೆಗಳು ಜಲಾಶಯದ ನೀರಿನಲ್ಲಿ ದೀರ್ಘಕಾಲ ಮುಳುಗಿರಲು ಇಷ್ಟಪಡುತ್ತವೆ,” ಎಂದು ಅವರು ಮಾತು ಮುಗಿಸುತ್ತಾರೆ.

"ನಮಗೆ ಇಲ್ಲಿ ಆನೆಗಳನ್ನು ಅತ್ಯಂತ ಹತ್ತಿರದಿಂದ ನೋಡುವ ಅವಕಾಶ ಸಿಗುತ್ತದೆ, ಇದೇ ಇಲ್ಲಿನ ದೊಡ್ಡ ವಿಶೇಷ. ಅಕ್ಕಿ ಮತ್ತು ಗೋಧಿಯ ಅಷ್ಟು ದೊಡ್ಡ ದೊಡ್ಡ ಉಂಡೆಗಳನ್ನು ಮಾಡಿ ಸತತವಾಗಿ ಉಣಬಡಿಸುವುದನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಇಲ್ಲಿನ ಗಜಪಡೆಗಳೊಂದಿಗೆ ಕಳೆದ ಈ ಸಮಯ ನಿಜಕ್ಕೂ ಅದ್ಭುತ ಅನುಭವ,” ಎನ್ನುತ್ತಾನೆ ಆನೆಗಳ ಸ್ನಾನ ಮತ್ತು ಆಹಾರ ನೀಡುವ ದೃಶ್ಯಗಳನ್ನು ನೋಡಲೆಂದೇ ಈ ಕೇಂದ್ರಕ್ಕೆ ಬಂದಿರುವ ಏಳನೇ ತರಗತಿಯ ವಿದ್ಯಾರ್ಥಿ ಆಶಿಷ್ ಎಂ. ಅವನ ಸಂತಸಕ್ಕೆ ಪಾರವೇ ಇರಲಿಲ್ಲ.

ಕರ್ನಾಟಕದಲ್ಲೇ ಅತಿ ಹೆಚ್ಚು ಆನೆಗಳು

ಭಾರತೀಯ ಆನೆಯನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ 'ಅನುಸೂಚಿ-1'ರ ಅಡಿಯಲ್ಲಿ ಸಂರಕ್ಷಿಸಲಾಗಿದೆ. ಅಂತರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಘವು ತನ್ನ ಅಳಿವಿನಂಚಿನಲ್ಲಿರುವ ಜೀವಿಗಳ ಕೆಂಪು ಪಟ್ಟಿಯಲ್ಲಿ ಆನೆಯನ್ನು "ಅಪಾಯದ ಅಂಚಿನಲ್ಲಿರುವ ಪ್ರಭೇದ" ಎಂದು ವರ್ಗೀಕರಿಸಿದೆ. 2025ರ ಅಕ್ಟೋಬರ್ 15ರಂದು ಬಿಡುಗಡೆಯಾದ 'ಸಿಂಕ್ರೋನಸ್ ಆಲ್-ಇಂಡಿಯಾ ಎಲಿಫೆಂಟ್ ಎಸ್ಟಿಮೇಷನ್' ವರದಿಯ ಪ್ರಕಾರ, ಭಾರತದಲ್ಲಿ ಒಟ್ಟು 22,446 ಕಾಡಾನೆಗಳಿವೆ. ಈ ಗಣತಿಯಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಡಿಎನ್ಎ ಆಧಾರಿತ ತಂತ್ರಜ್ಞಾನವನ್ನು ಬಳಸಲಾಗಿದೆ. 6,013 ಕಾಡಾನೆಗಳನ್ನು ಹೊಂದಿರುವ ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಆನೆಗಳಿರುವ ರಾಜ್ಯ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ. ನಂತರದ ಸ್ಥಾನಗಳಲ್ಲಿ ಅಸ್ಸಾಂ (4,159), ತಮಿಳುನಾಡು (3,136), ಕೇರಳ (2,785) ಮತ್ತು ಉತ್ತರಾಖಂಡ (1,792) ರಾಜ್ಯಗಳಿವೆ.

"ತಮಿಳುನಾಡು ಮೂಲದ ಪ್ರಾಣಿ ಕಲ್ಯಾಣ ಕಾರ್ಯಕರ್ತ ಆಂಟೋನಿ ಕ್ಲೆಮೆಂಟ್ ರೂಬಿನ್ ಅವರು ನವೆಂಬರ್ 2019ರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯ ಪ್ರಕಾರ, ಭಾರತದಲ್ಲಿ ಒಟ್ಟು 2,675 ಸಾಕಾನೆಗಳಿವೆ. ಇವುಗಳಲ್ಲಿ 1,821 ಆನೆಗಳು ಖಾಸಗಿ ವ್ಯಕ್ತಿಗಳ ವಶದಲ್ಲಿದ್ದರೆ, ಉಳಿದವು ನಾನಾ ರಾಜ್ಯಗಳ ಅರಣ್ಯ ಇಲಾಖೆಗಳ ಆರೈಕೆಯಲ್ಲಿವೆ. ಖಾಸಗಿ ವಶದಲ್ಲಿರುವ ಆನೆಗಳಲ್ಲಿ ಕೆಲವು ವ್ಯಕ್ತಿಗಳ ಮಾಲೀಕತ್ವದಲ್ಲಿದ್ದರೆ, ಇನ್ನು ಕೆಲವು ದೇವಸ್ಥಾನಗಳು ಮತ್ತು ಸರ್ಕಸ್ಗಳಂತಹ ಸಂಸ್ಥೆಗಳ ಅಧೀನದಲ್ಲಿವೆ," ಎಂದು ಮೊಗಾಬೇ ಇಂಡಿಯಾದಲ್ಲಿ ಪ್ರಕಟವಾಗಿರುವ ವರದಿ ತಿಳಿಸುತ್ತದೆ.

ಇದಲ್ಲದೆ, ಕೇರಳ ಅರಣ್ಯ ಇಲಾಖೆಯು ಇತ್ತೀಚೆಗೆ ನಡೆಸಿದ ಸಾಕಾನೆಗಳ ಗಣತಿಯ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ 389 ಸಾಕಾನೆಗಳಿವೆ. 2018ರ ರಾಜ್ಯಮಟ್ಟದ ಗಣತಿಯಲ್ಲಿ ಈ ಸಂಖ್ಯೆ 521 ಇತ್ತು, ಅಂದರೆ ಈಗ ಸಾಕಾನೆಗಳ ಸಂಖ್ಯೆಯಲ್ಲಿ ಇಳಿಕೆ ಉಂಟಾಗಿದೆ.

ಕೇರಳದಲ್ಲಿ ಇನ್ನು ಎರಡು ಆನೆ ತರಬೇತಿ ಮತ್ತು ಪುನರ್ವಸತಿ ಕೇಂದ್ರಗಳಿವೆ; ಒಂದು ಎರ್ನಾಕುಲಂ ಜಿಲ್ಲೆಯ ಕೋಡನಾಡಿನ ಪೆರಿಯಾರ್ ನದಿ ದಡದಲ್ಲಿದ್ದರೆ, ಮತ್ತೊಂದು ಪಟ್ಟನಂತಿಟ್ಟ ಜಿಲ್ಲೆಯ ಕೊನ್ನಿಯಲ್ಲಿದೆ. ಈ ಎರಡು ಕೇಂದ್ರಗಳಲ್ಲಿ ಆನೆಗಳನ್ನು 'ಕ್ರಾಲ್' (ಹೊಸದಾಗಿ ಸೆರೆಹಿಡಿದ ಅಥವಾ ರಕ್ಷಿಸಿದ ಆನೆಗಳನ್ನು ಪಳಗಿಸಲು ಇರಿಸುವ ಮರದ ಆವರಣ) ನಲ್ಲಿ ಇಟ್ಟು ತರಬೇತಿ ನೀಡಲಾಗುತ್ತದೆ. ಆದರೆ, ಕಪ್ಪುಕಾಡುವಿನ ಈ ಕೇಂದ್ರವು ಕೇವಲ ಪುನರ್ವಸತಿಯ ಮೇಲೆ ಮಾತ್ರ ಗಮನ ಹರಿಸುತ್ತದೆ.

ಗಜ ನಿರ್ವಹಣೆ ಸುಲಭದ ಕೆಲಸವಲ್ಲ

"ನಾವು ತರಬೇತಿಗಾಗಿ ಯಾವುದೇ ಕಠಿಣ ವಿಧಾನಗಳನ್ನು ಬಳಸುವುದಿಲ್ಲ. ಇದೊಂದು ಪುನರ್ವಸತಿ ಕೇಂದ್ರವಾದ ಕಾರಣ ಇಲ್ಲಿಗೆ ಬರುವ ಆನೆಗಳು ಸಾಮಾನ್ಯ ತರಬೇತಿ ಕೇಂದ್ರಗಳಲ್ಲಿ ಕಂಡುಬರುವ ಕಟ್ಟುನಿಟ್ಟಿನ ಶಿಕ್ಷೆ ಅಥವಾ ತರಬೇತಿಗೆ ಒಳಗಾಗುವುದಿಲ್ಲ," ಎನ್ನುತ್ತಾರೆ ಇನ್ನೊಬ್ಬರು ಮಾವುತ ಎಂ. ಕುಮಾರ್. ಅವರ ಪ್ರಕಾರ, ಆನೆಗಳನ್ನು ನಿರ್ವಹಿಸುವುದು ಇಲ್ಲಿ ಸವಾಲಿನ ಕೆಲಸ. “ನಾವು ಕಠಿಣ ವಿಧಾನಗಳನ್ನು ಬಳಸದ ಕಾರಣ, ಇಲ್ಲಿನ ಆನೆಗಳು ಹೆಚ್ಚಿನ ಸ್ವಾತಂತ್ರ್ಯವನ್ನು ಅನುಭವಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಅವುಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸ," ಎನ್ನುತ್ತಾರೆ ಅವರು.


ಕುಮಾರ್ ಅವರ ಮಾತು ನಿಜವೇ ಹೌದು. ಕೆಲವು ವಾರಗಳ ಹಿಂದೆ, 'ಮನು' ಎಂಬ ಹೆಸರಿನ ಆನೆಯು ಸ್ನಾನ ಮಾಡಿಸುವ ಸಮಯದಲ್ಲಿ ವಿಷ್ಣು ಎಂಬ ಮಾವುತನನ್ನು ತುಳಿದು ಸಾಯಿಸಿತ್ತು. ಆನೆಯು ಮೊದಲು ತನ್ನ ಸೊಂಡಿಲಿನಿಂದ ಆತನನ್ನು ಹೊಡೆದು ನಂತರ ಕಾಲಿನಿಂದ ಜಜ್ಜಿತು. ಅಲ್ಲಿಯೇ ಇದ್ದ ಇತರ ಮಾವುತರು ಮತ್ತು ವನ್ಯಜೀವಿ ವಾರ್ಡನ್-ಗಳು ಆತನನ್ನು ರಕ್ಷಿಸಲು ಪ್ರಯತ್ನಿಸಿದರೂ ಆನೆ ಪಟ್ಟು ಬಿಡಲಿಲ್ಲ. ಕಪ್ಪುಕಾಡು ಪುನರ್ವಸತಿ ಕೇಂದ್ರದ ಇತಿಹಾಸದಲ್ಲಿಯೇ ಇದು ಮೊದಲ ದುರಂತವಾದರೂ, ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ಇಂತಹ ಘಟನೆಗಳು ನಡೆಯದಂತೆ ತಡೆಯಲು ಸಾಧ್ಯವಿದೆ.

“ಆನೆಗಳಂತಹ ವನ್ಯಜೀವಿಗಳ ವರ್ತನೆಯನ್ನು ಊಹಿಸಲು ಸಾಧ್ಯವಿಲ್ಲ. ಇಲ್ಲಿನ ಮಾವುತರು ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸುವುದಿಲ್ಲ, ಅವರು ಕೇವಲ ಆಜ್ಞೆಗಳ ಮೇಲೆ ಅವಲಂಬಿತರು. ಅದು ಯಾವಾಗಲೂ ಪರಿಣಾಮಕಾರಿ ಎಂದು ಹೇಳಲು ಬರುವುದಿಲ್ಲ. ನಾನು ಈ ಕೇಂದ್ರಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ ಮತ್ತು ಆನೆಗಳನ್ನು ನಿರ್ವಹಿಸುವಾಗ ಸುರಕ್ಷತಾ ಕ್ರಮಗಳನ್ನು ಬಳಸುವಂತೆ ಮಾವುತರಿಗೆ ಸಲಹೆ ನೀಡಿದ್ದೇನೆ. ಆದರೆ ನನ್ನ ಕಾಳಜಿಯನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ,” ಎನ್ನುತ್ತಾರೆ ತಿರುವನಂತಪುರದ ಮಾನವ ಹಕ್ಕುಗಳ ಕಾರ್ಯಕರ್ತ ಉದಯಕುಮಾರ್ ಎಸ್. ಕೆ.

ಕೊಲ್ಲಂನ ಖಾಸಗಿ ಶಾಲಾ ಶಿಕ್ಷಕಿ ಶ್ರೀಜಾ ಅವರು, 2020ರ ನವೆಂಬರ್ನಲ್ಲಿ ತನ್ನ ಮೊದಲ ಹುಟ್ಟುಹಬ್ಬದ ಸಂಭ್ರಮದ ಮೂಲಕ ಎಲ್ಲರ ಗಮನ ಸೆಳೆದಿದ್ದ 'ಶ್ರೀಕುಟ್ಟಿ' ಎಂಬ ಹೆಣ್ಣು ಆನೆ ಮರಿಯನ್ನು ನೆನಪಿಸಿಕೊಳ್ಳುತ್ತಾರೆ. 2019ರಲ್ಲಿ ಕೊಲ್ಲಂ ಸಮೀಪದ ಎಸ್ಟೇಟ್ ಒಂದರಲ್ಲಿ ಸತ್ತಿದ್ದ ತನ್ನ ತಾಯಿಯ ಹತ್ತಿರ ಕಾಲಿಗೆ ಗಾಯವಾಗಿ ಬಿದ್ದಿದ್ದ ಈ ಮರಿಯನ್ನು ರಕ್ಷಿಸಲಾಗಿತ್ತು. ಅದು ಶೀಘ್ರ ಚೇತರಿಸಿಕೊಂಡು ಕೇಂದ್ರದ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಆದರೆ ಆ ಸಂತೋಷ ಬಹಳ ದಿನ ಉಳಿಯಲಿಲ್ಲ; 2021ರ ಜೂನ್ನಲ್ಲಿ ಶ್ರೀಕುಟ್ಟಿ ತೀವ್ರ ಜ್ವರದಿಂದ ಸಾವನ್ನಪ್ಪಿತು.

ಆನೆಗಳನ್ನು ಪ್ರೀತಿಸುವವರಿಗೆ, ಕಪ್ಪುಕಾಡು ಪುನರ್ವಸತಿ ಕೇಂದ್ರದ ಈ ಕಥೆಗಳು ಹೀಗೆಯೇ ಮುಂದುವರಿಯುತ್ತವೆ.

***

ಕ್ಯಾಪ್-1: ಕೇರಳದ ತಿರುವನಂತಪುರದ ಕೊಟ್ಟೂರು ಬಳಿಯ ಕಪ್ಪುಕಾಡು ಆನೆ ಪುನರ್ವಸತಿ ಕೇಂದ್ರದಲ್ಲಿ ಇರುವ ಆನೆಗಳಿಗೆ ನೀರಿನ ಪೈಪ್-ಗಳ ಮೂಲಕ ಸ್ನಾನ ಮಾಡಿಸುತ್ತಿರುವ ಪರಿ. ಇಲ್ಲಿ 85 ವರ್ಷ ವಯಸ್ಸಿನ ಅತ್ಯಂತ ಹಿರಿಯ ಆನೆ ಸೋಮ ಸೇರಿದಂತೆ ಹದಿನೈದು ಆನೆಗಳಿವೆ. ಇವುಗಳಿಗೆ ಸಂಕೋಲೆ ತೊಡಿಸಿ ಹಿಂಸಿಸಿ ತರಬೇತಿ ನೀಡುವುದಿಲ್ಲ. ಬದಲಾಗಿ ಅವು ಈ ಕೇಂದ್ರದಲ್ಲಿ ಸರ್ವಸ್ವತಂತ್ರವಾಗಿ ಅಡ್ಡಾಡಿಕೊಂಡಿರಬಹುದು.



Read More
Next Story