ಚೀನಾ ಸೇನೆಯ ಜಮಾವಣೆ ಕುರಿತಾದ ಗುಪ್ತಚರ ಇಲಾಖೆಯ ಅಂದಾಜುಗಳ ವಿವರ: ನರವಾಣೆ ಬರೆದಿದ್ದೇನು?
x
ನಿವೃತ್ತ ಸೇನಾಧಿಕಾರಿ ನರವಾಣೆ ಅವರು ಬರೆದ ಚೊಚ್ಚಲ ಕಾದಂಬರಿ 'ದಿ ಕ್ಯಾಂಟೋನ್ಮೆಂಟ್ ಕಾನ್ಸ್ಪಿರಸಿ' ಉತ್ತರ ಪ್ರದೇಶದ ಪಶ್ಚಿಮಭಾಗದ ಹಿನ್ನೆಲೆಯನ್ನು ಹೊಂದಿದೆ. ಕಥೆಯು ಇಬ್ಬರು ಯುವ ಲೆಫ್ಟಿನೆಂಟ್ಗಳಾದ ರೋಹಿತ್ ವರ್ಮಾ ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಮಹಿಳಾ ಕೆಡೆಟ್ಗಳ ಮೊದಲ ತಂಡದ ರೇಣುಕಾ ಖತ್ರಿ ಅವರ ಸುತ್ತ ಸುತ್ತುತ್ತದೆ. ನರವಾಣೆ ಅವರು ಆತ್ಮಕಥೆ ವಿವಾದಕ್ಕೆ ಸಿಲುಕಿದ ಕಾರಣಕ್ಕೆ ಈ ಥ್ರಿಲ್ಲರ್ ಕಾದಂಬರಿಗೆ ಭಾರಿ ಬೇಡಿಕೆ ಬಂದಿದೆ.

ಚೀನಾ ಸೇನೆಯ ಜಮಾವಣೆ ಕುರಿತಾದ ಗುಪ್ತಚರ ಇಲಾಖೆಯ ಅಂದಾಜುಗಳ ವಿವರ: ನರವಾಣೆ ಬರೆದಿದ್ದೇನು?

ನಿವೃತ್ತ ಜನರಲ್ ಎಂ.ಎಂ.ನರವಾಣೆ ಅವರ ಆತ್ಮಕಥೆ ದೇಶಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ಅವರ ಮೊಟ್ಟಮೊದಲ ಕಾದಂಬರಿಗೆ ಅಪಾರ ಬೇಡಿಕೆ ಬಂದಿದೆ.


Click the Play button to hear this message in audio format

ಜನರಲ್ (ನಿವೃತ್ತ) ಮನೋಜ್ ಮುಕುಂದ್ ನರವಾಣೆ ಅವರ ಚೊಚ್ಚಲ ಕಾದಂಬರಿ 'ದಿ ಕ್ಯಾಂಟೋನ್ಮೆಂಟ್ ಕಾನ್ಸ್ಪಿರಸಿ' (The Cantonment Conspiracy) ಇದೀಗ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಇತ್ತೀಚೆಗೆ ಸಂಸತ್ತಿನಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿದ್ದ ಅವರ ಆತ್ಮಕಥೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' (Four Stars of Destiny) ಬಿಡುಗಡೆಯನ್ನು ತಡೆಹಿಡಿದ ಹಿನ್ನೆಲೆಯಲ್ಲಿ ಉಂಟಾದ ಸಾರ್ವಜನಿಕ ಕುತೂಹಲದ ಲಾಭ ಈ ಕಾದಂಬರಿಗೆ ಸಿಕ್ಕಿದೆ. ಒಂದು ಕಡೆ ಪ್ರಕಟವಾಗದ ಆತ್ಮಕಥೆಯ ಅನಧಿಕೃತ ಪಿಡಿಎಫ್ ಮತ್ತು ಇ-ಪಬ್ ಆವೃತ್ತಿಗಳು ಹರಡುವುದನ್ನು ತಡೆಯಲು ಅಧಿಕಾರಿಗಳು ಮತ್ತು ಪ್ರಕಾಶಕರು ಯತ್ನಿಸುತ್ತಿದ್ದರೆ, ಇತ್ತ ಈ ಕಾದಂಬರಿಯು ಆನ್ಲೈನ್ ಸರ್ಚ್ ಹಾಗೂ ಅಲ್ಗಾರಿದಮ್ಗಳ ಸಹಾಯದಿಂದ ಹೆಚ್ಚು ಜನಪ್ರಿಯವಾಗುತ್ತಿದೆ.

ಅಮೆಜಾನ್ ಇಂಡಿಯಾದ ಅಂಕಿಅಂಶಗಳ ಪ್ರಕಾರ, ಈ ಪುಸ್ತಕವು ವಿವಿಧ ವಿಭಾಗಗಳಲ್ಲಿ ಮುಂಚೂಣಿಯಲ್ಲಿದೆ: ಮಿಲಿಟರಿ ಹಿಸ್ಟರಿ: 2ನೇ ಸ್ಥಾನ, ಮಿಸ್ಟರೀಸ್: 5ನೇ ಸ್ಥಾನ, ಕ್ರೈಮ್ ಫಿಕ್ಷನ್: 5ನೇ ಸ್ಥಾನ, ಇನ್ನು ಕಿಂಡಲ್ ಸ್ಟೋರ್ನಲ್ಲಿ ಇದು ಮಿಲಿಟರಿ ಹಿಸ್ಟರಿ ವಿಭಾಗದಲ್ಲಿ 3ನೇ ಸ್ಥಾನದಲ್ಲಿದ್ದರೆ, ಕ್ರೈಮ್ ಮತ್ತು ಥ್ರಿಲ್ಲರ್ ವಿಭಾಗದಲ್ಲಿ 12ನೇ ಸ್ಥಾನ ಹಾಗೂ ಇತಿಹಾಸ ವಿಭಾಗದಲ್ಲಿ 14ನೇ ಸ್ಥಾನದಲ್ಲಿದೆ. ಸುಮಾರು 149 ಓದುಗರಿಂದ ಇದು 5ಕ್ಕೆ 4.4 ರೇಟಿಂಗ್ ಪಡೆದಿದ್ದು, ಮಿಲಿಟರಿ ಜೀವನದ ಅಧಿಕೃತ ವಿವರಗಳು ಮತ್ತು ರೋಚಕ ಕಥಾಹಂದರಕ್ಕಾಗಿ ಮೆಚ್ಚುಗೆ ವ್ಯಕ್ತವಾಗಿದೆ.

ಕಾದಂಬರಿಯ ಸಂಕ್ಷಿಪ್ತ ವಿವರ: ಎಬರಿ ಪ್ರೆಸ್ (ಪೆಂಗ್ವಿನ್ ರಾಂಡಮ್ ಹೌಸ್) ವತಿಯಿಂದ ಮಾರ್ಚ್ 2025 ರಲ್ಲಿ ಬಿಡುಗಡೆಯಾದ ಈ 288 ಪುಟಗಳ ಥ್ರಿಲ್ಲರ್ ಕಾದಂಬರಿಯು ಉತ್ತರ ಪ್ರದೇಶದ ಪಶ್ಚಿಮಭಾಗದ ಹಿನ್ನೆಲೆಯ ಕಥಾಹಂದರವನ್ನು ಹೊಂದಿದೆ. ಕಥೆಯು ಇಬ್ಬರು ಯುವ ಲೆಫ್ಟಿನೆಂಟ್ಗಳಾದ ರೋಹಿತ್ ವರ್ಮಾ ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಮಹಿಳಾ ಕೆಡೆಟ್ಗಳ ಮೊದಲ ತಂಡದ ರೇಣುಕಾ ಖತ್ರಿ ಅವರ ಸುತ್ತ ಸುತ್ತುತ್ತದೆ. ಆಫೀಸರ್ಸ್ ಮೆಸ್ನಲ್ಲಿ ನಡೆದ ಹಲ್ಲೆಯ ಪ್ರಕರಣವನ್ನು ತನಿಖೆ ಮಾಡುವ ಈ ಇಬ್ಬರು ಅಧಿಕಾರಿಗಳು, ಮುಂದೆ ಸರಣಿ ಕೊಲೆಗಳ ರಹಸ್ಯವನ್ನು ಹೇಗೆ ಭೇದಿಸುತ್ತಾರೆ ಎಂಬುದು ಈ ಕಾದಂಬರಿಯ ತಿರುಳು.

ರೆಹ್ಮತ್ ಎಂಬ ಸ್ಥಳೀಯ ಹಳ್ಳಿಯ ಹುಡುಗಿಯ ಸಹಾಯದೊಂದಿಗೆ, ಈ ಜೋಡಿಯು ಹಳೆಯ ಘಟನೆಗಳಿಗೆ ಸಂಬಂಧಪಟ್ಟಂತೆ ಹುದುಗಿ ಹೋಗಿರುವ ಪಿತೂರಿಯನ್ನು ಭೇದಿಸುತ್ತದೆ. ಇದರ ಜೊತೆಗೆ ಆಧುನಿಕ ಮಿಲಿಟರಿ ಜೀವನದ ಸಂಕೀರ್ಣತೆಗಳು ಮತ್ತು ಮಿಲಿಟರಿ ವಿಚಾರಣೆಯ ಕಠಿಣ ಸವಾಲುಗಳನ್ನು ಎದುರಿಸುವ ಕಥೆ ಕಾದಂಬರಿಯ ನಿಜವಾದ ಜೀವಾಳ. 399 ರೂ. ಮುಖಬೆಲೆಯ ಈ ಪೇಪರ್ಬ್ಯಾಕ್ ಪುಸ್ತಕಕ್ಕೆ ಇತ್ತೀಚೆಗೆ ಯಾವುದೇ ದೊಡ್ಡ ಪ್ರಚಾರ ನೀಡಿಲ್ಲ. ಆದರೂ ಓದುಗರು ಕುತೂಹಲದಿಂದ 'ಜನರಲ್ ನರವಾಣೆ ಬುಕ್' ಎಂದು ಹುಡುಕಿದಾಗ, ಲಭ್ಯವಿಲ್ಲದ ಅವರ ಆತ್ಮಕಥೆಯ ಬದಲಿಗೆ ಅಲ್ಗಾರಿದಮ್ಗಳ ಮೂಲಕ ಈ ಪುಸ್ತಕವೇ ಕಾಣಿಸಿಕೊಳ್ಳುತ್ತಿರುವುದರಿಂದ ಇದರ ಮಾರಾಟ ಹೆಚ್ಚಾಗಲು ಕಾರಣವಾಗಿದೆ. ಪ್ರಸ್ತುತ ಪೆಂಗ್ವಿನ್, ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ಗಳ ಪಟ್ಟಿಯಿಂದ ಆತ್ಮಕಥೆಯನ್ನು ತೆಗೆದುಹಾಕಲಾಗಿದೆ.


ನರವಾಣೆ ಆತ್ಮಕಥೆ: ಪೆಂಗ್ವಿನ್ ಹೇಳಿದ್ದೇನು

ಆತ್ಮಕಥೆಯ ಕುರಿತು ಸೋಷಿಯಲ್ ಮೀಡಿಯಾ ಮೂಲಕ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ, 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕದ ಸಂಪೂರ್ಣ ಪ್ರಕಾಶನ ಹಕ್ಕುಗಳನ್ನು ತಾವು ಹೊಂದಿರುವುದಾಗಿ ಮತ್ತು ಈ ಪುಸ್ತಕವು ಇನ್ನೂ "ಪ್ರಕಟಣೆಗೊಂಡಿಲ್ಲ" ಎಂದು ಸ್ಪಷ್ಟಪಡಿಸಿದೆ. ಮುದ್ರಣ, ಡಿಜಿಟಲ್ ಅಥವಾ ಪಿಡಿಎಫ್ ರೂಪದ ಯಾವುದೇ ಪ್ರತಿಗಳನ್ನು ಪ್ರಕಾಶಕರು ಬಿಡುಗಡೆ ಮಾಡಿಲ್ಲ ಅಥವಾ ಮಾರಾಟ ಮಾಡಿಲ್ಲ ಎಂದು ಸಮಜಾಯಿಷಿ ಕೊಟ್ಟಿದೆ.

ಈ ಕುರಿತಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತನಾಡಿ, ಆತ್ಮಕಥೆ ಪ್ರಕಟವಾಗಿಲ್ಲ ಎಂಬ ಪೆಂಗ್ವಿನ್ ಪ್ರಕಾಶನದ ಹೇಳಿಕೆ ಸುಳ್ಳು ಎಂದು ಆರೋಪಿಸಿದ್ದರು. 2023ರಲ್ಲಿ ಜನರಲ್ ನರವಾಣೆ ಅವರು "ಪುಸ್ತಕ ಈಗ ಲಭ್ಯವಿದೆ” ಎಂದು ಎಕ್ಸ್ (X) ನಲ್ಲಿ ಮಾಡಿದ್ದ ಪೋಸ್ಟ್ ಅನ್ನು ಅವರು ಉಲ್ಲೇಖಿಸಿದ್ದರು. ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾಹುಲ್, "ಈ ಪುಸ್ತಕ ಅಮೆಜಾನ್ನಲ್ಲಿ ಕಾಣಿಸಿಕೊಂಡಿತ್ತು. ನಾನು ಪ್ರಕಾಶಕರಿಗಿಂತ ಮಾಜಿ ಸೇನಾ ಮುಖ್ಯಸ್ಥರನ್ನು ನಂಬುತ್ತೇನೆ. ಇಲ್ಲಿ ನರವಾಣೆ ಅಥವಾ ಪೆಂಗ್ವಿನ್ ಸಂಸ್ಥೆ.. ಇಬ್ಬರಲ್ಲಿ ಒಬ್ಬರು ಸುಳ್ಳು ಹೇಳುತ್ತಿದ್ದಾರೆ" ಎಂದು ಹೇಳಿದ್ದರು.

“ನಾನು ಈಗಲೂ ನಂಬುವುದು ಸೇನಾ ಮುಖ್ಯಸ್ಥರನ್ನು, ಅವರು ಸುಳ್ಳು ಹೇಳುವುದು ಸಾಧ್ಯವಿಲ್ಲ,” ಎಂದೂ ರಾಹುಲ್ ಗಾಂಧಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೊರಬಂದಿರುವ ಯಾವುದೇ ಮಾಹಿತಿ ಅಥವಾ ಸಾಮಗ್ರಿಗಳು ಕೃತಿಸ್ವಾಮ್ಯದ ಉಲ್ಲಂಘನೆ ಎಂದು ಪೆಂಗ್ವಿನ್ ಸಂಸ್ಥೆ ಹೇಳಿದೆ. ಅಲ್ಲದೆ, ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಲು ಮತ್ತು ಅನಧಿಕೃತವಾಗಿ ಮಾಹಿತಿಯನ್ನು ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಪುಸ್ತಕದ ಪ್ರಕಟಣೆಗಿಂತ ಮುಂಚಿತವಾಗಿ ಸೋರಿಕೆಯಾದ ಆಯ್ದ ಭಾಗಗಳು ಅಥವಾ ಸಂಪೂರ್ಣ ಹಸ್ತಪ್ರತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ದೆಹಲಿ ಪೊಲೀಸರ ವಿಶೇಷ ಘಟಕ ಎಫ್ಐಆರ್ ದಾಖಲಿಸಿದೆ. ಹಂಚಿಕೆಯಾಗಿರುವ ಪಿಡಿಎಫ್ಗಳು ಮತ್ತು ಟೈಪ್ಸೆಟ್ ಆವೃತ್ತಿಗಳೂ ಸೇರಿದಂತೆ ಸಂಭವನೀಯ ನಿಯಮಗಳ ಉಲ್ಲಂಘನೆಯ ಬಗ್ಗೆ ತನಿಖೆ ನಡೆಯುತ್ತಿದೆ.

ಆ ದಿನ ರಾಹುಲ್ ಗಾಂಧಿಯವರು ಸಂಸತ್ತಿನ ಕಲಾಪದ ವೇಳೆ 'ದಿ ಕ್ಯಾರವಾನ್' ಪತ್ರಿಕೆಯಲ್ಲಿ ವ್ಯೂಹಾತ್ಮಕ ವ್ಯವಹಾರಗಳ ವಿಶ್ಲೇಷಕ ಸುಶಾಂತ್ ಸಿಂಗ್ ಬರೆದ ಲೇಖನದಿಂದ ಕೆಲವು ಸಾಲುಗಳನ್ನು ಉಲ್ಲೇಖಿಸಲು ಪ್ರಯತ್ನಿಸಿದ್ದರು. ಆ ಲೇಖನವು ನರವಾಣೆ ಅವರ ಹಸ್ತಪ್ರತಿಯ ಪ್ರಮುಖ ಭಾಗಗಳನ್ನು ಒಳಗೊಂಡಿತ್ತು.

ವರದಿಗಳ ಪ್ರಕಾರ, ಆ ಆಯ್ದ ಭಾಗಗಳಲ್ಲಿ 2020ರ ಪೂರ್ವ ಲಡಾಖ್‌ನಲ್ಲಿ ಚೀನಾ ಜೊತೆಗಿನ ಸಂಘರ್ಷದ ಆರಂಭಿಕ ದಿನಗಳ ಗೊಂದಲಮಯ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಅವುಗಳಲ್ಲಿನ ಪ್ರಮುಖ ಅಂಶಗಳೆಂದರೆ:

ಪಿಎಲ್ಎ ಸಿದ್ಧತೆ: ಚೀನಾ ಸೇನೆಯ ಜಮಾವಣೆ ಕುರಿತಾದ ಗುಪ್ತಚರ ಇಲಾಖೆಯ ಅಂದಾಜುಗಳು

2020ರ ಆಗಸ್ಟ್ 31ರ ರಾತ್ರಿ: ರೇಚಿನ್ ಲಾ ಬಳಿ ಚೀನಾ ಟ್ಯಾಂಕ್‌ಗಳ ಚಲನೆಯ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ನಡೆದ ಮಾತುಕತೆ.

ಪ್ರಧಾನಿ ಮೋದಿಯವರ ಸೂಚನೆ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಯಾವುದೇ ಸ್ಪಷ್ಟ ರಾಜಕೀಯ ನಿರ್ದೇಶನ ಸಿಗದಿರುವುದು (ಅವರು "ಜೋ ಉಚಿತ್ ಸಂಝೋ ಕರೋ" - ಅಂದರೆ "ನಿಮಗೆ ಯಾವುದು ಸರಿ ಎನಿಸುತ್ತದೋ ಅದನ್ನು ಮಾಡಿ" ಎಂದು ಹೇಳಿದ್ದರೆನ್ನಲಾಗಿದೆ).

ನಿರ್ಬಂಧಗಳು: ಗುಂಡು ಹಾರಿಸುವುದನ್ನು ನಿರ್ಬಂಧಿಸುವ ನಿಯಮಗಳು.

ಕೈಲಾಶ್ ಶ್ರೇಣಿ: ಕೈಲಾಶ್ ಶ್ರೇಣಿಯ ಎತ್ತರದ ಪ್ರದೇಶಗಳನ್ನು ಭಾರತ ವಶಪಡಿಸಿಕೊಂಡಿದ್ದು ಒಂದು ಪ್ರತಿಕ್ರಿಯಾತ್ಮಕ ಕ್ರಮವಾಗಿತ್ತು ಎಂಬ ಅಂಶ.

ಬಫರ್ ಜೋನ್ಗಳು: ಬಫರ್ ಜೋನ್ಗಳ ನಿರ್ಮಾಣ ಮತ್ತು ಸಮನ್ವಯದ ಗಸ್ತು ತಿರುಗುವಿಕೆ. ಇದನ್ನು ಕೆಲವರು ಚೀನಾಕ್ಕೆ ನೀಡಿದ ರಿಯಾಯಿತಿಗಳು ಎಂದು ಭಾವಿಸಿದ್ದಾರೆ.

1962ರ ಭಾರತ-ಚೀನಾ ಯುದ್ಧದ ನಂತರ ಗಲ್ವಾನ್‌ನಲ್ಲಿ 20 ಸೈನಿಕರು ಹುತಾತ್ಮರಾಗಿದ್ದು ಮೊದಲನೇ ಸಂಘರ್ಷವಾಗಿದೆ. ಇದು ಸರ್ಕಾರದ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕ-ಸೇನಾ ಸಂಬಂಧಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ.

ನರವಾಣೆ ಅವರ ಆತ್ಮಕಥೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಕೃತಿಯನ್ನು ಸಂಸತ್ತಿನ ಹೊರಗಡೆ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.

ದಿಢೀರ್ ಮಾಯವಾದ ʼಡೆಸ್ಟಿನಿʼ

ದೇಶಭಕ್ತಿಯ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಗಳಿಗೆ ಪ್ರತಿರೋಧ ಒಡ್ಡಿದ ರಾಹುಲ್ ಗಾಂಧಿ, ಮ್ಯಾಗಜೀನ್‌ನ ಮುದ್ರಿತ ಪುಟಗಳನ್ನು ಹಿಡಿದು ಲೇಖನವನ್ನು ಉಲ್ಲೇಖಿಸಲು ಪ್ರಯತ್ನಿಸಿದರು ಮತ್ತು ನಂತರ ಸದನದ ಹೊರಗೆ ಪುಸ್ತಕದ ಪ್ರತಿಯನ್ನು ಪ್ರದರ್ಶಿಸಿದರು. ಈ ಪುಸ್ತಕವು ವಿದೇಶಗಳಲ್ಲಿ ಲಭ್ಯವಿದ್ದರೂ, ಸರ್ಕಾರವು ದೇಶದೊಳಗೆ ಅದನ್ನು ಹತ್ತಿಕ್ಕುತ್ತಿದೆ ಎಂದು ಅವರು ಆರೋಪಿಸಿದರು. ಅಲ್ಲದೆ, ಪುಸ್ತಕದ ಪ್ರತಿಯೊಂದನ್ನು ವೈಯಕ್ತಿಕವಾಗಿ ಪ್ರಧಾನಿ ಮೋದಿಯವರಿಗೆ ನೀಡುವುದಾಗಿ ಶಪಥ ಮಾಡಿದರು. ಇದಕ್ಕೆ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಇತರರು ಆಕ್ಷೇಪ ವ್ಯಕ್ತಪಡಿಸಿ, ಸಂಸತ್ತಿನ ನಿಯಮಗಳನ್ನು (ದೃಢೀಕರಿಸದ ಅಥವಾ ಆಧಾರರಹಿತ ಉಲ್ಲೇಖಗಳನ್ನು ನಿಷೇಧಿಸುವ ನಿಯಮ 349 ಮತ್ತು 353) ಉಲ್ಲೇಖಿಸಿದರು. ಸ್ಪೀಕರ್ ಈ ಉಲ್ಲೇಖಗಳನ್ನು ಅನುಮತಿಸದ ಕಾರಣ ಸದನದಲ್ಲಿ ಗದ್ದಲ ಉಂಟಾಗಿತ್ತು. ಈ ಆಯ್ದ ಭಾಗಗಳು ಅಪ್ರಮಾಣಿತ ಮತ್ತು ಆಯ್ದು ಮಂಡಿಸಿದಂತಿವೆ ಎಂದು ಸರ್ಕಾರದ ಸದಸ್ಯರು ವಾದಿಸಿದರು.

ಅಧಿವೇಶನದ ಕೆಲವೇ ಗಂಟೆಗಳ ನಂತರ, 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕವು ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು ಪೆಂಗ್ವಿನ್ ವೆಬ್ಸೈಟ್‌ಗಳಿಂದ ಕಣ್ಮರೆಯಾಯಿತು. ಈ ಹಠಾತ್ ಬದಲಾವಣೆಗೆ ಪ್ರಕಾಶಕರ ಕ್ರಮವೋ ಅಥವಾ ಸರ್ಕಾರದ ಒತ್ತಡವೋ ಎಂಬ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಆದರೆ, ನಿವೃತ್ತ ಅಧಿಕಾರಿಗಳು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಕಟಿಸುವ ಮೊದಲು ರಕ್ಷಣಾ ಸಚಿವಾಲಯದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಸಚಿವಾಲಯವು ಈ ಬಗ್ಗೆ ಮೌನ ತಾಳಿದೆ.

ವಿಳಂಬವಾಗುತ್ತಿರುವ ಆತ್ಮಕಥೆ

ಡಿಸೆಂಬರ್ 2019 ರಿಂದ ಏಪ್ರಿಲ್ 2022 ರವರೆಗೆ ಭೂಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಜನರಲ್ ನರವಾಣೆ ಅವರು, ತಮ್ಮ ಹಸ್ತಪ್ರತಿಯನ್ನು 2024ರಲ್ಲಿ ಕಡ್ಡಾಯ ಭದ್ರತಾ ತಪಾಸಣೆಗಾಗಿ ರಕ್ಷಣಾ ಸಚಿವಾಲಯಕ್ಕೆ ಸಲ್ಲಿಸಿದ್ದರು. ಏಪ್ರಿಲ್ 2024ರ ಸುಮಾರಿಗೆ ಈ ಪುಸ್ತಕ ಬಿಡುಗಡೆಯಾಗಬೇಕಿತ್ತು (ಪ್ರೀ-ಆರ್ಡರ್ಗಳೂ ಲಭ್ಯವಿದ್ದವು), ಆದರೆ ಅಂದಿನಿಂದ ಇದು ಅನುಮತಿ ಸಿಗದೆ ಬಾಕಿ ಉಳಿದಿದೆ.

ಜನರಲ್ ನರವಾಣೆ ಅವರು ಈ ಇತ್ತೀಚಿನ ವಿವಾದದ ಬಗ್ಗೆ ನೇರವಾಗಿ ಪ್ರತಿಕ್ರಿಯಿಸಿಲ್ಲ. ಅಕ್ಟೋಬರ್ 2025 ರಲ್ಲಿ ಕಸೌಲಿಯಲ್ಲಿ ನಡೆದ ಖುಷ್ವಂತ್ ಸಿಂಗ್ ಸಾಹಿತ್ಯ ಹಬ್ಬದಲ್ಲಿ ಮಾತನಾಡುತ್ತಾ, ತಮ್ಮ ಹಸ್ತಪ್ರತಿಯು ಒಂದು ವರ್ಷದಿಂದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದರು. ತಮ್ಮ ವಿಶಿಷ್ಟ ಹಾಸ್ಯ ಪ್ರವೃತ್ತಿಯೊಂದಿಗೆ, "ಇದು ಹಳೆಯ ವೈನ್‌ನಂತೆ ಪಕ್ವವಾಗುತ್ತಿದೆ - ಅದು ಎಷ್ಟು ಕಾಲ ಇರುತ್ತದೆಯೋ ಅಷ್ಟು ಮೌಲ್ಯಯುತವಾಗುತ್ತದೆ" ಎಂದು ಮಾರ್ಮಿಕವಾಗಿ ನುಡಿದಿದ್ದರು. ಹಸ್ತಪ್ರತಿ ಸಲ್ಲಿಸುವುದು ಮಾತ್ರ ತಮ್ಮ ಜವಾಬ್ದಾರಿ, ಅನುಮತಿ ಪಡೆಯುವುದು ಪ್ರಕಾಶಕರಿಗೆ ಸೇರಿದ್ದು ಎಂದು ಅವರು ಸ್ಪಷ್ಟಪಡಿಸಿದ್ದರು. ಅವರ ಆತ್ಮಕಥೆಯು ಸದ್ಯಕ್ಕೆ ಬೆಳಕು ಕಾಣುವ ಲಕ್ಷಣಗಳಿಲ್ಲದಿದ್ದರೂ, ಅವರ ಕಾಲ್ಪನಿಕ ಕಾದಂಬರಿ (The Cantonment Conspiracy) ಮಾತ್ರ ಈ ವಿವಾದದಿಂದಾಗಿ ಅನಿರೀಕ್ಷಿತವಾಗಿ ಹೆಚ್ಚಿನ ಪ್ರಸಿದ್ಧಿ ಪಡೆಯುತ್ತಿದೆ ಎಂಬುದು ಮಾತ್ರ ಸತ್ಯ.

Read More
Next Story