
ಜೀರ್ಣವಾಗಿದೆ ನೇತಾಜಿಗೆ ಆತಿಥ್ಯ ನೀಡಿದ್ದ ವಿಯಟ್ನಾಮ್‌ನ ಭವ್ಯ ಬಂಗಲೆ: ಸ್ಮರಣೀಯ ತಾಣಕ್ಕೆ ಸಿಗದ ಮನ್ನಣೆ
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಆತಿಥ್ಯ ನೀಡಿದ್ದ ವಿಯಟ್ನಾಮಿನಲ್ಲಿರುವ ತಮಿಳು ಉದ್ಯಮಿಯ ಭವ್ಯ ಬಂಗಲೆ ಇಂದು ಸಂಪೂರ್ಣ ಕೃಶವಾಗಿ ಹೋಗಿದೆ.
ಅಲ್ಲಲ್ಲಿ ಬಿರುಕು ಬಿಟ್ಟ ಗೋಡೆಗಳು, ನೇತಾಡುತ್ತಿರುವ ಜೇಡರ ಬಲೆಗಳು ಮತ್ತು ಸೋರುವ ಮೇಲ್ಛಾವಣಿ…. ಗತಕಾಲದ ವೈಭವವನ್ನು ಬಿಂಬಿಸುವ ಈ ಬೃಹತ್ ಕಟ್ಟಡ ಇಂದು ಚಿಂದಿಯಾದ ಕನಸುಗಳ ಗೂಡಿನಂತೆ ಕಾಣುತ್ತಿದೆ. ಇಟಾಲಿಯನ್ ಮಾರ್ಬಲ್ ನೆಲ ಅನೇಕ ದಶಕಗಳ ಕೊಳೆಯಿಂದ ಅಂದಗೆಟ್ಟಿದೆ. ಮಳೆ ಸುರಿಯಿತೆಂದರೆ ಕಾಲಿಡಲೂ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗುತ್ತದೆ. ಈ ಮುರಿದು ಬಿದ್ದ ಮಂದಿರದೊಳಗೆ, ವ್ಯಾಪಾರಿಗಳ ಗುಂಪೊಂದು ತಾತ್ಕಾಲಿಕ ಮಳಿಗೆಗಳನ್ನು ಹಾಕಿಕೊಂಡು ಯಾವತ್ತೂ ಲಘು ಆಹಾರ ಮತ್ತು ಜ್ಯೂಸ್ ಮಾರಾಟ ಮಾಡುತ್ತಿರುತ್ತದೆ.
ಈ ಎರಡು ಅಂತಸ್ತಿನ ಕಟ್ಟಡವಿರುವುದು ವಿಯೆಟ್ನಾಮಿನ ಹೋ ಚಿ ಮಿನ್ ಸಿಟಿಯ ಹೃದಯಭಾಗದಲ್ಲಿ. ಇಂದು ಇದನ್ನು ನೋಡುವ ಯಾರಿಗೂ ಒಂದು ಕಾಲದಲ್ಲಿ ಇದು ಭಾರತದ ಸ್ವಾತಂತ್ರ್ಯ ಹೋರಾಟಗಾರ, ನಾವು ಪ್ರೀತಿಯಿಂದ 'ನೇತಾಜಿ' ಎಂದು ಯಾವತ್ತೂ ಸ್ಮರಿಸುವ ಸುಭಾಷ್ ಚಂದ್ರ ಬೋಸ್ ಅವರಿಗೆ ಆತಿಥ್ಯ ನೀಡಿತ್ತು ಎಂದು ಊಹಿಸಲು ಸಾಧ್ಯವಿಲ್ಲ.
ಜಪಾನ್ನಲ್ಲಿ ಕ್ರಾಂತಿಕಾರಿ ರಾಶ್ಬಿಹಾರಿ ಬೋಸ್ ಅವರು ರೂಪಿಸಿದ ಮತ್ತು ನಂತರ ನೇತಾಜಿಯವರಿಗೆ ಹಸ್ತಾಂತರಿಸಿದ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ನ ಸಚಿವಾಲಯವಾಗಿ ಈ ಕಟ್ಟಡವು ಅಲ್ಪಕಾಲ ಸೇವೆ ಸಲ್ಲಿಸಿತ್ತು ಎಂಬುದನ್ನು ಇತಿಹಾಸಕಾರರು ಉಲ್ಲೇಖಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ವಕೀಲ ಜಾಯ್ದೀಪ್ ಮುಖರ್ಜಿ ವಿಶ್ಲೇಷಿಸಿದ್ದಾರೆ.
ಬೋಸ್ ಅವರ ನಿಧನದ ಸುತ್ತಲಿನ ನಿಗೂಢತೆಯ ಬಗ್ಗೆ ಬರೆದ 'ಚೆಕಾ ಎ ರೋಡ್ ಆಫ್ ಬೋನ್ಸ್' ಪುಸ್ತಕದ ಲೇಖಕರೂ ಆಗಿರುವ ಮುಖರ್ಜಿ ಅವರು ಇತ್ತೀಚೆಗೆ ವಿಯೆಟ್ನಾಂಗೆ ಭೇಟಿ ನೀಡಿದ್ದರು. ನಾಯಕನಿಗೆ ಪುಷ್ಪ ನಮನ ಸಲ್ಲಿಸಲು ತಾವು ಆ ಭವನಕ್ಕೆ ಭೇಟಿ ನೀಡಿದ್ದಾಗಿಯೂ, ಆದರೆ ಅದರ ದುಸ್ಥಿತಿಯನ್ನು ಕಂಡು ತಮಗೆ ತೀರಾ ವಿಷಾದವಾಯಿತು ಎಂದೂ ಅವರು ಹೇಳುತ್ತಾರೆ.
ವಿಯಟ್ನಾಮಿನ ಹೊ ಚಿ ಮಿನ್ ನಗರದಲ್ಲಿರುವ ಭವ್ಯ ಮ್ಯಾನ್ಷನ್. 1945ರ ಸಂದರ್ಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಈ ಬಂಗಲೆ ಆಶ್ರಯ ನೀಡಿತ್ತು.
"ಆರೈಕೆ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಈ ಭವನವು ಶೋಚನೀಯ ಸ್ಥಿತಿಯಲ್ಲಿದೆ. ಕಟ್ಟಡದ ಕೆಲವು ಭಾಗಗಳನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಈ ಕಟ್ಟಡವನ್ನು ನೇತಾಜಿಯವರ ಸ್ಮಾರಕವಾಗಿ ಪರಿವರ್ತಿಸುವಂತೆ ನಾನು ವಿಯೆಟ್ನಾಂ ಮತ್ತು ಭಾರತ ಸರ್ಕಾರಗಳಿಗೆ ಪತ್ರ ಬರೆದಿದ್ದರೂ, ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ತಕ್ಷಣದ ಕ್ರಮಗಳನ್ನು ಕೈಗೊಳ್ಳದಿದ್ದರೆ, ಈ ಐತಿಹಾಸಿಕ ಕಟ್ಟಡವನ್ನು ನಾವು ಶೀಘ್ರದಲ್ಲೇ ಕಳೆದುಕೊಳ್ಳಲಿದ್ದೇವೆ," ಎಂದು ಮುಖರ್ಜಿ ಅತ್ಯಂತ ವಿಷಾದದಿಂದ ನುಡಿಯುತ್ತಾರೆ.
ಪಾಂಡಿಚೇರಿಯ ಉದ್ಯಮಿ ಆಶ್ರಯ
ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸುವ ಬೋಸ್ ಅವರ ಪ್ರಯತ್ನಗಳಿಗೆ ಬೆಂಬಲವಾಗಿ ನಿಂತವರಲ್ಲಿ ಪಾಂಡಿಚೇರಿಯ ತಮಿಳು ಉದ್ಯಮಿ ಲೀನ್ ಪ್ರೊಚಾಂಡಿ ಕೂಡ ಒಬ್ಬರು ಎಂಬ ಕಥೆಯಿದೆ. ಪ್ರುಚಾಂಡಿ ಅವರು ಈ ಚಳವಳಿಗೆ ಕೇವಲ ಆರ್ಥಿಕ ನೆರವು ನೀಡಿದ್ದಲ್ಲದೆ, ಸೈಗಾನ್ನಲ್ಲಿರುವ (ಈಗಿನ ಹೋ ಚಿ ಮಿನ್ ಸಿಟಿ) ತಮ್ಮ ಭವನವನ್ನು ಬೋಸ್ ಅವರಿಗೆ ಬಿಟ್ಟುಕೊಟ್ಟಿದ್ದರು ಎಂದು ಹೇಳಲಾಗುತ್ತದೆ. ಇತಿಹಾಸಕಾರರ ಪ್ರಕಾರ, ಜುಲೈ 1945ರಲ್ಲಿ ಎರಡನೇ ಮಹಾಯುದ್ಧದಲ್ಲಿ ಜಪಾನ್ ಶರಣಾದ ನಂತರ, 76, ರೂ ಪಾಲ್ ಬ್ಲಾಂಚಿ (ಈಗ ಹೈ ಭಾ ಟ್ರಂಗ್ ಎಂದು ಕರೆಯಲ್ಪಡುವ) ವಿಳಾಸದಲ್ಲಿರುವ ಈ ಕಟ್ಟಡವು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ನ ಸಚಿವಾಲಯವಾಗಿ ಕಾರ್ಯನಿರ್ವಹಿಸಿತು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಜೀವ ತುಂಬುವ ಪ್ರಯತ್ನದಲ್ಲಿ, ಬೋಸ್ ಅವರು ಬ್ರಿಟನ್, ಫ್ರಾನ್ಸ್, ರಷ್ಯಾ ಮತ್ತು ಚೀನಾ ಒಳಗೊಂಡ ಮಿತ್ರ ಪಡೆಗಳ ವಿರುದ್ಧ ಜರ್ಮನಿ, ಇಟಲಿ ಮತ್ತು ಜಪಾನ್ಗಳನ್ನೊಳಗೊಂಡ 'ಆಕ್ಸಿಸ್' ಗುಂಪಿನ ಸದಸ್ಯ ರಾಷ್ಟ್ರವಾದ ಜಪಾನ್ನೊಂದಿಗೆ ಕೈಜೋಡಿಸಿದ್ದರು.
ವಿಮಾನ ಅಪಘಾತದಲ್ಲಿ ಮರಣ ಹೊಂದಿದ್ದಾರೆ ಎಂದು ಹೇಳಲಾಗುವ ಕೇವಲ ಒಂದು ದಿನಕ್ಕೂ ಮೊದಲು, ಅಂದರೆ ಆಗಸ್ಟ್ 17, 1945ರಂದು ಬೋಸ್ ಅವರು ಅಂದಿನ ಫ್ರೆಂಚ್ ವಸಾಹತು ಆಗಿದ್ದ ವಿಯೆಟ್ನಾಂನ ಈ ಕಟ್ಟಡಕ್ಕೆ ಭೇಟಿ ನೀಡಿದ್ದರು ಎಂದು ನಂಬಲಾಗಿದೆ. ಆದಾಗ್ಯೂ, ಈ ಸ್ವಾತಂತ್ರ್ಯ ಹೋರಾಟಗಾರ ನಿಜವಾಗಿಯೂ ಅಪಘಾತದಲ್ಲಿ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಅನುಮಾನಗಳು ಉಳಿದಿವೆ ಮತ್ತು ಅವರ ಕಣ್ಮರೆಯ ರಹಸ್ಯವು ವರ್ಷಗಳಿಂದ ಅನೇಕರನ್ನು ನಿರಂತರವಾಗಿ ಕಾಡುತ್ತಿದೆ.
"ನಾನು ಎರಡು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಮೇಲ್ ಕಳುಹಿಸಿದ್ದೇನೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೂ 76, ಹೈ ಭಾ ಟ್ರಂಗ್ ರಸ್ತೆಯಲ್ಲಿರುವ ಕಟ್ಟಡದ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುವ ಛಾಯಾಚಿತ್ರಗಳೊಂದಿಗೆ ಇಮೇಲ್ ಮಾಡಿದ್ದೇನೆ. ಆ ಆಸ್ತಿಯನ್ನು ವಶಕ್ಕೆ ಪಡೆದು ನೇತಾಜಿ ಮತ್ತು ಅವರ ಅನುಯಾಯಿಗಳ ಸ್ಮರಣಾರ್ಥವಾಗಿ ಪರಿವರ್ತಿಸುವಂತೆ ನಾನು ಅವರನ್ನು ಕೇಳಿಕೊಂಡಿದ್ದೇನೆ," ಎಂದು ಪ್ಯಾರಿಸ್ ಮೂಲದ ಇತಿಹಾಸಕಾರ ಮತ್ತು ಪ್ರೊಚಾಂಡಿ ಅವರ ಮೊಮ್ಮಗ ಜೆಬಿ ಪ್ರಶಾಂತ್ ಮೋರೆ 'ದಿ ಫೆಡರಲ್'ಗೆ ತಿಳಿಸಿದ್ದಾರೆ.
'ಬೋಸ್ ಅಂಡ್ ಹಿಸ್ ಮೂವ್ಮೆಂಟ್: ಫ್ರಮ್ ನಾಸಿ ಜರ್ಮನಿ ಟು ಫ್ರೆಂಚ್ ಇಂಡೋಚೈನಾ' ಅಂತಹ ಕೃತಿಗಳನ್ನು ರಚಿಸಿರುವ ಮೋರ್ ಅವರು, ಇದಕ್ಕೂ ಮೊದಲು 2017ರಲ್ಲಿ ವಿಯೆಟ್ನಾಂ ಪ್ರಧಾನಿಗೆ ಮನವಿ ಸಲ್ಲಿಸಿ, ಕಟ್ಟಡವನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವಿನಂತಿಸಿದ್ದರು. ಇದರಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಬೋಸ್ ಅವರು ನಡೆಸಿದ ಹೋರಾಟದ ಸಂಕೇತವಾಗಿ ಅದನ್ನು ಸಂರಕ್ಷಿಸಬಹುದು ಎಂಬುದು ಅವರ ಆಶಯವಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಆ ರಚನೆಯು “ಇಂದಿಗೂ ಶಿಥಿಲಾವಸ್ಥೆಯಲ್ಲಿದೆ" ಎಂದು ಇತಿಹಾಸಕಾರರು ಆರೋಪಿಸುತ್ತಾರೆ.
ಅಪರೂಪದ ಬೋಸ್ ಛಾಯಾಚಿತ್ರಗಳು
1945ರ ಆಗಸ್ಟ್ 18ರಂದು ಸೈಗಾನ್ನ '76, ರೂ ಪಾಲ್ ಬ್ಲಾಂಚಿ' ಎಂಬಲ್ಲಿ ತೆಗೆಯಲಾದ ಕಪ್ಪು-ಬಿಳುಪು ಛಾಯಾಚಿತ್ರಗಳು ಜೆ.ಬಿ.ಪಿ. ಮೋರೆ ಅವರ ಬಳಿ ಇವೆ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ಪ್ರೊಚಾಂಡಿ ಅವರು ಬೋಸ್ಗೆ ಬೀಳ್ಕೊಡುಗೆ ನೀಡುತ್ತಿರುವುದು ಮತ್ತು ಬೋಸ್ ಅವರ ಆಪ್ತ ಸಹಾಯಕ ಕರ್ನಲ್ ಹಬೀಬುರ್ ರೆಹಮಾನ್ ಜಪಾನಿ ಸೈನಿಕರ ನಡುವೆ ಮೆಟ್ಟಿಲುಗಳ ಮೂಲಕ ಕೆಳಗೆ ಬರುತ್ತಿರುವುದು ಕಂಡುಬರುತ್ತದೆ. ವಿಮಾನ ಅಪಘಾತದಲ್ಲಿ ಮರಣ ಹೊಂದುವ ಮುನ್ನ ಬೋಸ್ ಭೇಟಿ ನೀಡಿದ ಕೊನೆಯ ಕಟ್ಟಡ ಇದೇ ಎನ್ನಲಾದ ಕಾರಣ ಈ ಸ್ಥಳವು ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಆದಾಗ್ಯೂ, ಮುಖರ್ಜಿ ಅಥವಾ ಮೋರೆ ಇಬ್ಬರೂ ಈ ವಿಮಾನ ಅಪಘಾತದ ಸಿದ್ಧಾಂತವನ್ನು ನಂಬುವುದಿಲ್ಲ.
“ಸದ್ಯ ಪಾಳುಬಿದ್ದಿರುವ ಈ ಕಟ್ಟಡವನ್ನು ಸಂರಕ್ಷಿಸಲು ನಾನು ಶ್ರಮಿಸುತ್ತಿದ್ದೇನೆ. ಇದು ಮೂಲತಃ ಪಾಂಡಿಚೇರಿಯ ಪ್ರೊಚಾಂಡಿ ಕುಟುಂಬಕ್ಕೆ ಸೇರಿದ್ದಾಗಿತ್ತು. ಪ್ರಸ್ತುತ ಕೆಲವು ಬೀದಿ ಬದಿ ವ್ಯಾಪಾರಿಗಳು ಈ ಕಟ್ಟಡದ ಬಹುಭಾಗವನ್ನು ಆಕ್ರಮಿಸಿಕೊಂಡಿದ್ದರೂ, ವಿಯೆಟ್ನಾಂ ಸರ್ಕಾರವೇ ಈ ಆಸ್ತಿಯ ಸಂಪೂರ್ಣ ಅಧಿಕಾರ ಹೊಂದಿದೆ. ಕೆಲವು ಸಮಯದ ಹಿಂದೆ ನವದೆಹಲಿಯಲ್ಲಿರುವ ವಿಯೆಟ್ನಾಂ ರಾಯಭಾರ ಕಚೇರಿಗೆ ಈ ಬಗ್ಗೆ ಅರ್ಜಿ ಸಲ್ಲಿಸಿದ್ದೆ. ಭಾರತ ಸರ್ಕಾರವು ಈ ಕುರಿತು ಪ್ರಸ್ತಾವನೆ ಸಲ್ಲಿಸಿದರೆ ತಾವು ಈ ವಿಷಯವನ್ನು ಪರಿಶೀಲಿಸುವುದಾಗಿ ಅವರು ತಿಳಿಸಿದರು. ಆದರೆ ಭಾರತ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ," ಎಂದು ಮೋರೆ ಹೇಳುತ್ತಾರೆ.
ಬೋಸ್ ಅವರು ವಿಯೆಟ್ನಾಂನ ಈ ಬಂಗಲೆಗೆ ಬಂದಾಗ, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಾವು ಸಂಗ್ರಹಿಸಿದ್ದ ಅಪಾರ ಪ್ರಮಾಣದ ನಿಧಿಯನ್ನು ಹೊಂದಿದ್ದರು ಎಂದೂ ಮೋರೆ ಪ್ರತಿಪಾದಿಸುತ್ತಾರೆ.
ಮುಖರ್ಜಿ ಅವರ ಪ್ರಕಾರ, ಬೋಸ್ ಅವರು ವಿಯೆಟ್ನಾಂನ ಆ ಬಂಗಲೆಗೆ ಭೇಟಿ ನೀಡಿದ್ದಕ್ಕೆ ಪ್ರತ್ಯಕ್ಷದರ್ಶಿಗಳಿದ್ದರೂ ಕೂಡ, ಆ ಘಟನೆಯ ನಂತರದ ಸಂದರ್ಭಗಳಿಂದಾಗಿ ಅದರ ವಿವರಗಳು ಎಂದಿಗೂ ಬಹಿರಂಗವಾಗಲಿಲ್ಲ.
ತಪ್ಪಿಸಿಕೊಂಡ ನೇತಾಜಿ
"ಆ ಸಮಯದಲ್ಲಿ ವಿಯೆಟ್ನಾಂ ಫ್ರೆಂಚ್ ವಸಾಹತುಶಾಹಿ ಆಳ್ವಿಕೆಯಲ್ಲಿತ್ತು ಮತ್ತು ಹೋ ಚಿ ಮಿನ್ ಅವರು ಫ್ರೆಂಚರ ವಿರುದ್ಧ ಹೋರಾಟದಲ್ಲಿ ನಿರತರಾಗಿದ್ದರು. ಬೋಸ್ ಅವರು ಈ ಮನೆಯಲ್ಲಿದ್ದಾರೆ ಎಂಬ ಮಾಹಿತಿ ಫ್ರೆಂಚ್ ಗುಪ್ತಚರ ಸಂಸ್ಥೆಗೆ ಲಭ್ಯವಾಗಿತ್ತು. ನೇತಾಜಿಯವರು ಅಲ್ಲಿಂದ ತಪ್ಪಿಸಿಕೊಂಡರು. ಪ್ರೊಚಾಂಡಿ ಅವರನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಯಿತು. ಅವರು ನಂತರ ಪಾಂಡಿಚೇರಿಗೆ ಮರಳಿ ಅಲ್ಲೇ ನಿಧನರಾದರು. ಬಂಧಿತರಾದ ಮತ್ತೊಬ್ಬ ವ್ಯಕ್ತಿ ಎಂದರೆ ಐ.ಎನ್.ಎ (IIL ನ ಸಶಸ್ತ್ರ ವಿಭಾಗವಾದ ಇಂಡಿಯನ್ ನ್ಯಾಷನಲ್ ಆರ್ಮಿ) ಹಣಕಾಸು ಸಚಿವರಾಗಿದ್ದ ಎ.ಸಿ. ಚಟರ್ಜಿ. ಚಟರ್ಜಿ ಅವರು 'ಇಂಡಿಯಾಸ್ ಸ್ಟ್ರಗಲ್ ಫಾರ್ ಫ್ರೀಡಂ' ಎಂಬ ಶೀರ್ಷಿಕೆಯ ಆತ್ಮಕಥೆಯನ್ನು ಬರೆದಿದ್ದರೂ, ಅದರಲ್ಲಿ ಅವರು ಪ್ರೊಚಾಂಡಿ ಮನೆಯ ಬಗ್ಗೆ ಉಲ್ಲೇಖಿಸಿಲ್ಲ," ಎಂದು ಮುಖರ್ಜಿ ಹೇಳುತ್ತಾರೆ.
"ಬೋಸ್ ಭೇಟಿಯ ಸಮಯದಲ್ಲಿ ಆ ಬಂಗಲೆಯಲ್ಲಿ ಇದ್ದರೆನ್ನಲಾದ ಮತ್ತೊಬ್ಬ ಪ್ರಮುಖ ವ್ಯಕ್ತಿ ಎಂದರೆ ಹಬೀಬುರ್ ರೆಹಮಾನ್. 1947-48ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಅವರು ಪಾಕಿಸ್ತಾನಕ್ಕೆ ವಲಸೆ ಹೋದರು. ಇದರಿಂದಾಗಿ ಪ್ರೊಚಾಂಡಿ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಸಾಕ್ಷಿಗಳಿಂದ ಸಮಗ್ರ ವಿವರವನ್ನು ಪಡೆಯಲು ಭಾರತ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ,” ಎಂದು ಅವರು ಮುಂದುವರಿದು ಹೇಳುತ್ತಾರೆ.
ಒಂದು ಕಾಲದಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ನ ಸಚಿವಾಲಯವಾಗಿ ಕಾರ್ಯನಿರ್ವಹಿಸಿದ್ದ ಕಟ್ಟಡದ ಒಳಭಾಗದಲ್ಲಿ ಜೋಯ್ದೀಪ್ ಮುಖರ್ಜಿ.
ಕಟ್ಟಡದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡುತ್ತಾ ಮುಖರ್ಜಿ ಹೀಗೆ ಆರೋಪಿಸುತ್ತಾರೆ: "ಆ ಕಟ್ಟಡವನ್ನು ಶೀಘ್ರದಲ್ಲೇ ಕೆಡವಲಾಗುತ್ತದೆ ಎಂಬ ಬಗ್ಗೆ ನನಗೆ ವಿವಿಧ ಮೂಲಗಳಿಂದ ಕೇಳಿ ತಿಳಿದುಕೊಂಡಿದ್ದೇನೆ. ಆ ಪ್ರದೇಶದಲ್ಲಿ ಹಲವಾರು ಹೊಸ ಕಟ್ಟಡಗಳು ತಲೆಎತ್ತಿವೆ ಮತ್ತು ಸ್ಥಳೀಯ ಅಧಿಕಾರಿಗಳು ಈ ಹಳೆಯ ರಚನೆಯು ಅಲ್ಲಿಗೆ ಅಪ್ರಸ್ತುತ ಎಂದು ಭಾವಿಸಿದ್ದಾರೆಂದು ತಿಳಿದುಬಂದಿದೆ. ಅವರು ಅದನ್ನು ನೆಲಸಮ ಮಾಡಲು ಉದ್ದೇಶಿಸಿದ್ದಾರೆನ್ನಲಾಗಿದೆ. ಒಂದು ವೇಳೆ ಅದು ಸಂಭವಿಸಿದರೆ, ನಾವು ಒಂದು ಮಹತ್ವದ ಐತಿಹಾಸಿಕ ಸ್ಮಾರಕವನ್ನು ಕಳೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ,”
ಇಚ್ಛಾಶಕ್ತಿ ಇಲ್ಲದ ಸರ್ಕಾರ
“ನೇತಾಜಿಯವರು ಸ್ಥಾಪಿಸಿದ ಮೊದಲ ಐಎನ್ಎ ತರಬೇತಿ ಶಿಬಿರದ ತಾಣವಾದ ಥೈಲ್ಯಾಂಡ್ನ ಚಾನ್ಬುರಿಗೆ ನಾನು ಭೇಟಿ ನೀಡಿದ್ದೆ. ಸಿಂಗಾಪುರದ ಎಸ್ಪ್ಲನೇಡ್ನ ಹೃದಯಭಾಗದಲ್ಲಿರುವ ಐಎನ್ಎ ಸ್ಮಾರಕಕ್ಕೂ ಹೋಗಿದ್ದೆ. ಅನೇಕ ರಾಷ್ಟ್ರಗಳು ನೇತಾಜಿ ಮತ್ತು ಅವರ ಸಹವರ್ತಿಗಳಿಗೆ ಗೌರವ ಸಲ್ಲಿಸಲು ಐಎನ್ಎ ಸ್ಮಾರಕಗಳನ್ನು ಸಂರಕ್ಷಿಸಿವೆ. ವಿಯೆಟ್ನಾಂ ಸರ್ಕಾರಕ್ಕೆ ಇದನ್ನು ಏಕೆ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ?" ಎಂದು ಅವರು ಪ್ರಶ್ನಿಸುತ್ತಾರೆ.
ಪ್ರೊಚಾಂಡಿ ವಿಲ್ಲಾವು ಒಂದು ಕಾಲದಲ್ಲಿ ತೋಟ, ಹೊರಮನೆ ಮತ್ತು ಅಪಾರ್ಟ್ಮೆಂಟ್ಗಳನ್ನು ಒಳಗೊಂಡಿದ್ದ 2533 ಚದರ ಮೀಟರ್ ವಿಸ್ತೀರ್ಣದ ಆವರಣದಲ್ಲಿತ್ತು ಎಂದು ಹೇಳಲಾಗುತ್ತದೆ. "ಪ್ರಸ್ತುತ, ಸರಿಸುಮಾರು 1000 ಚದರ ಮೀಟರ್ಗಳಷ್ಟು ವಿಸ್ತೀರ್ಣದಲ್ಲಿ ಹಳೆಯ ವಿಲ್ಲಾ ಮತ್ತು ಅದರ ಸುತ್ತಲೂ ಗುಡಿಸಲುಗಳಿಂದ ಕೂಡಿದ ಆವರಣ ಮಾತ್ರ ಉಳಿದಿದೆ," ಎಂದು ಮೋರೆ ಹೇಳುತ್ತಾರೆ.
ಮುಖರ್ಜಿ ಮತ್ತು ಮೋರೆ ಇಬ್ಬರೂ ಈಗ ಭಾರತದ ರಾಷ್ಟ್ರಪತಿಯವರಿಗೆ ಪತ್ರ ಬರೆದು, ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿ ಪರಿಹಾರ ಒದಗಿಸುವಂತೆ ಕೋರಲು ಯೋಜಿಸುತ್ತಿರುವುದಾಗಿ ತಿಳಿಸಿದ್ದಾರೆ.
ಆದಾಗ್ಯೂ, ಈ ಕಟ್ಟಡದ ಪರಂಪರೆಯ ಬಗ್ಗೆ ಇರುವ ಅರಿವಿನ ಕೊರತೆಯೇ ಅದರ ಸಂರಕ್ಷಣೆಯಲ್ಲಿನ ನಿರ್ಲಕ್ಷ್ಯಕ್ಕೆ ಕಾರಣ ಎಂದು ಇತಿಹಾಸಕಾರರು ನಂಬಿದ್ದಾರೆ.
ವಿಯೆಟ್ನಾಂಗೆ ಪದೇ ಪದೇ ಪ್ರಯಾಣಿಸುವ ಚೆನ್ನೈನ ಉದ್ಯಮಿ ಮತ್ತು ಪರಂಪರೆಯ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಎಸ್ ಆನಂದ್ ಕುಮಾರ್ ಅವರು 'ದ ಫೆಡರಲ್' ಜೊತೆ ಮಾತನಾಡಿ, "ಅನೇಕ
ಅನಿಶ್ಚಿತ ಭವಿಷ್ಯ
ಇತಿಹಾಸಕಾರರು ದೀರ್ಘಕಾಲದಿಂದ ಈ ಕಟ್ಟಡದ ಶೋಚನೀಯ ಸ್ಥಿತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತ ಬಂದಿದ್ದಾರೆ. ಇಂತಹ ಪ್ರಯತ್ನಗಳಿಂದ ಅನುಕೂಲವಾಗುತ್ತದೆ ಎಂದು ನನಗೆ ಅನಿಸುವುದಿಲ್ಲ. ನಾವು ಮೊದಲು ಈ ಕಟ್ಟಡದ ಪ್ರಾಮುಖ್ಯತೆಯ ಬಗ್ಗೆ ನಮ್ಮ ಸ್ವಂತ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಆಗ ಮಾತ್ರ ಅವರು ತಕ್ಷಣ ಸ್ಪಂದಿಸುತ್ತಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ರಚನೆಯೊಂದು ಇಂದು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿರುವುದು ವಿಷಾದನೀಯ." ಎಂದು ಹೇಳಿದ್ದಾರೆ.
ವಿಯೆಟ್ನಾಂ ಭವನದ ಸುತ್ತಲಿನ ಈ ಅನುಮಾನಗಳು ದಶಕಗಳಿಂದ ನೇತಾಜಿಯವರ ಪರಂಪರೆಯನ್ನು ಆವರಿಸಿರುವ ಅವರ ಸಾವಿನ ದೊಡ್ಡ ರಹಸ್ಯದ ಒಂದು ಭಾಗವಷ್ಟೇ. ಜಪಾನ್ನ ರೆಂಕೋಜಿ ದೇವಾಲಯದಲ್ಲಿ ಇರಿಸಲಾಗಿರುವ ಸುಭಾಷ್ ಚಂದ್ರ ಬೋಸ್ ಅವರದ್ದೆಂದು ನಂಬಲಾದ ಚಿತಾಭಸ್ಮವನ್ನು ಮರಳಿ ತರುವಂತೆ ಇತ್ತೀಚೆಗೆ ಸಲ್ಲಿಕೆಯಾದ ಅರ್ಜಿಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠವು ಹೀಗೆ ಪ್ರಶ್ನಿಸಿದೆ: "ಮೊದಲನೆಯದಾಗಿ, ಚಿತಾಭಸ್ಮ ಎಲ್ಲಿದೆ? ಅದಕ್ಕೆ ಪುರಾವೆ ಎಲ್ಲಿದೆ?"

