ಬೆಂಗಳೂರು ಕರಗ| ಭಾವೈಕ್ಯತೆಯ ಐತಿಹ್ಯ ಸಾರುವ ದ್ರೌಪದಿ ಕರಗ!
x

ಬೆಂಗಳೂರು ಕರಗ ಉತ್ಸವ

ಬೆಂಗಳೂರು ಕರಗ| ಭಾವೈಕ್ಯತೆಯ ಐತಿಹ್ಯ ಸಾರುವ ದ್ರೌಪದಿ ಕರಗ!

ಏ.1 ಹಾಗೂ 2 ರಂದು ಚೈತ್ರ ಮಾಸದ ಹುಣ್ಣಿಮೆ ಅಂಗವಾಗಿ ಆಚರಿಸುವ ಬೆಂಗಳೂರು ಕರಗ ಮಹೋತ್ಸವದಲ್ಲಿ ಅರ್ಚಕ ಜ್ಞಾನೇಂದ್ರ ಅವರು ದ್ರೌಪದಿ ದೇವಿಯ ಸಂಕೇತವಾಗಿ ತಲೆಯ ಮೇಲೆ ಹೂವಿನ ಕರಗ ಹೊತ್ತು ನೃತ್ಯ ಮಾಡಲಿದ್ದಾರೆ.


Click the Play button to hear this message in audio format

ಸಿಲಿಕಾನ್‌ ಸಿಟಿ ಬೆಂಗಳೂರು ನಗರವು ಅಭಿವೃದ್ಧಿ ಹಾಗೂ ತಂತ್ರಜ್ಞಾನದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡರೂ ತನ್ನ ಮೂಲ ಸಂಸ್ಕೃತಿಯನ್ನು ಇಂದಿಗೂ ಹಲವು ಆಚರಣೆಗಳ ಮೂಲಕ ಉಳಿಸಿಕೊಂಡಿದೆ. ಸುಮಾರು 800 ವರ್ಷಗಳಿಗೂ ಅಧಿಕ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸವವು ಮತ್ತೊಮ್ಮೆ ಎಲ್ಲರ ಗಮನ ಸೆಳೆಯುತ್ತಿದೆ.

ಚೈತ್ರಮಾಸದ ಹುಣ್ಣಿಮೆ ಅಂಗವಾಗಿ ಏ.1 ಹಾಗೂ 2 ರಂದು ಹಳೆಯ ಪೇಟೆಯ ತಿಗಳ (ವಹ್ನಿಕುಲ ಕ್ಷತ್ರಿಯ) ಸಮುದಾಯ ಆಚರಿಸುವ ಐತಿಹಾಸಿಕ ಮತ್ತು ಧಾರ್ಮಿಕ ಹಬ್ಬದಲ್ಲಿ ದ್ರೌಪದಿ ದೇವಿಯನ್ನು ಆದಿಶಕ್ತಿಯಾಗಿ ಆರಾಧಿಸಲಾಗುತ್ತದೆ. ದ್ರೌಪದಿಯ ಶಕ್ತಿ ಮತ್ತು ವಹ್ನಿಕುಲ ಕ್ಷತ್ರಿಯರ ವೀರಗಾಥೆಗೂ ನಿಕಟ ಸಂಬಂಧವಿದೆ. ಏ.1 ರಂದು ರಾತ್ರಿ ಅದ್ಧೂರಿಯಾದ ಹೂವಿನ ಕರಗ ನಡೆಯಲಿದೆ.

ಶ್ರೀ ಧರ್ಮರಾಯಸ್ವಾಮಿ ದೇವಾಲಯ

ಬೆಂಗಳೂರು ಕರಗದ ಐತಿಹ್ಯ

ಕುರುಕ್ಷೇತ್ರ ಯುದ್ಧದ ನಂತರ ದ್ರೌಪದಿಯು ಆದಿಶಕ್ತಿಯ ರೂಪ ತಳೆದು 'ತಿಮಿರಾಸುರ' ಎಂಬ ರಾಕ್ಷಸನನ್ನು ಸಂಹರಿಸಿದ ಕಥೆಯನ್ನು ಕರಗ ಆಚರಣೆ ಮೂಲಕ ಸ್ಮರಿಸಲಾಗುತ್ತದೆ. ಪಾಂಡವರು ಸ್ವರ್ಗಾರೋಹಣ ಮಾಡುವಾಗ ದ್ರೌಪದಿಯನ್ನು ಭೂಮಿಯ ಮೇಲೆ ಬಿಟ್ಟು ಹೋಗುತ್ತಾರೆ. ಆಗ ತಿಮಿರಾಸುರನನ್ನು ಕೊಲ್ಲಲು ದ್ರೌಪದಿ ತನ್ನ ತಲೆಯಿಂದ 'ಯಜಮಾನ'ರನ್ನು, ಹಣೆಯಿಂದ 'ಗಣಾಚಾರಿ'ಗಳನ್ನು, ಕಿವಿಗಳಿಂದ 'ಗೌಡ'ರನ್ನು, ಬಾಯಿಯಿಂದ 'ಗಂಟೆಪೂಜಾರಿ'ಗಳನ್ನು ಮತ್ತು ಹೆಗಲಿನಿಂದ 'ವೀರಕುಮಾರ'ರನ್ನು ಸೃಷ್ಟಿಸಿದ್ದರು ಎಂಬುದು ಪ್ರತೀತಿ.

ದ್ರೌಪದಿಯು ಕೈಲಾಸಕ್ಕೆ ಮರಳುವಾಗ ಆಕೆಯನ್ನು ತಡೆಯಲು ಆಕೆಯ ಮಕ್ಕಳು (ವೀರಕುಮಾರರು) ತಮ್ಮ ಕೈಯಲ್ಲಿರುವ ಕತ್ತಿಯಿಂದ ಎದೆಗೆ ತಿವಿದುಕೊಳ್ಳುವ 'ಅಲಗುಸೇವೆ' ಮಾಡುತ್ತಾರೆ. ಇದನ್ನು ನೋಡಿ ದ್ರೌಪದಿಯು ಪ್ರತಿ ವರ್ಷ ಮೂರು ದಿನ ಭೂಮಿಗೆ ಬಂದು ಮಕ್ಕಳೊಂದಿಗೆ ನೆಲೆಸುವ ಮಾತು ನೀಡುತ್ತಾಳೆ. ಇದರ ನೆನಪಿಗೆ ಈಗಲೂ ಕರಗ ಆಚರಿಸಲಾಗುತ್ತಿದೆ. ಈ ಕರಗವನ್ನು ಮುಖ್ಯವಾಗಿ ತಮಿಳು ಮಿಶ್ರಿತ ಭಾಷೆ ಮಾತನಾಡುವ ತೋಟಗಾರ ಸಮುದಾಯವಾದ ತಿಗಳರು (ವಹ್ನಿಕುಲ ಕ್ಷತ್ರಿಯರು) ಆಚರಿಸುತ್ತಾರೆ.

ಉತ್ಸವದಲ್ಲಿ ಕರಗಕ್ಕೆ ಆರತಿ ಬೆಳಗಿದ ಮಹಿಳೆಯರು

ಅದ್ದೂರಿ ಆಚರಣೆ, ಕಠಿಣ ವ್ರತ

ಚೈತ್ರ ಮಾಸದ ಹುಣ್ಣಿಮೆಯಂದು ಅದ್ದೂರಿಯಾಗಿ ನಡೆಯುವ ಈ ಹಬ್ಬದಲ್ಲಿ ಕರಗ ಪೂಜಾರಿಯು ದ್ರೌಪದಿ ದೇವಿಯ ಸಂಕೇತವಾಗಿ ತಲೆಯ ಮೇಲೆ ಹೂವಿನ ಮಡಕೆಯನ್ನು (ಕರಗ) ಹೊತ್ತು ನೃತ್ಯ ಮಾಡುತ್ತಾರೆ. ದೀರ್ಘಕಾಲದಿಂದ ಪೂಜಾರಿ ಜ್ಞಾನೇಂದ್ರ ಅವರು ಹೂವಿನ ಕರಗವನ್ನು ಹೊರುತ್ತಿದ್ದು, ಸುಮಾರು 16ಕ್ಕೂ ಹೆಚ್ಚು ಬಾರಿ ಹೊತ್ತಿದ್ದಾರೆ. ಇವರು ದ್ರೌಪದಿ ದೇವಿಯ ಆರಾಧಕರು. ಕರಗ ಹೊರುವುದಕ್ಕೂ ಮುನ್ನ 11 ದಿನಗಳ ಕಾಲ ಕಠಿಣ ವ್ರತ ಆಚರಿಸಲಾಗುತ್ತದೆ. ಕೈಯಿಂದ ಮುಟ್ಟದೆ, ತಲೆಯ ಮೇಲೆ ಅಲಂಕರಿಸಿದ ಹೂವಿನ ಕರಗ (ಕಳಸ) ಹೊತ್ತು ವೀರಕುಮಾರರ ರಕ್ಷಣೆಯಲ್ಲಿ ಬೆಂಗಳೂರಿನ ಹಳೆಯ ಪೇಟೆಗಳಲ್ಲಿ ಸಂಚರಿಸುತ್ತಾರೆ.

ಕರಗದಲ್ಲಿ ದ್ರೌಪದಿಯನ್ನು ಆದಿಶಕ್ತಿಯಾಗಿ ಆರಾಧಿಸಲಾಗುತ್ತದೆ. ಪಾಂಡವರ ಅಜ್ಞಾತವಾಸ ಮತ್ತು ಮಹಾಭಾರತದ ಕಥೆಯೊಂದಿಗೆ ಬೆಸೆದಿರುವ ಈ ಉತ್ಸವವು, ಸ್ತ್ರೀಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಕರಗವು 9 ದಿನಗಳ ಕಾಲ ನಡೆಯಲಿದೆ. ಧ್ವಜಾರೋಹಣದಿಂದ ಹಿಡಿದು ದ್ರೌಪದಿ ದೇವಿಯ ಆರಾಧನೆ, ಹಸಿ ಕರಗ, ಹುಕ್ಕಾ ಕರಗ, ಮತ್ತು ಕೇವಲ ಹೂವಿನಿಂದ ಅಲಂಕರಿಸಿದ ಕರಗವನ್ನು (ಹೂ ಕರಗ) ತಲೆಯ ಮೇಲೆ ಹೊತ್ತು ಪೂಜಾರಿ ನರ್ತಿಸುವ ವಿಶಿಷ್ಟ ಆಚರಣೆಯಾಗಿದೆ.

ಧಾರ್ಮಿಕ ಸೌಹಾರ್ದತೆ

ಕರಗ ಮೆರವಣಿಗೆಯು ಬೆಂಗಳೂರಿನ ಹಳೆಯ ಪೇಟೆ ಪ್ರದೇಶಗಳಾದ ನಗರ್ತಪೇಟೆ, ತಿಗಳರಪೇಟೆಗಳಲ್ಲಿ ಸಾಗುತ್ತಾ, ದರ್ಗಾ-ಎ-ಹಜರತ್ ತವಕಲ್ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡುವ ಮೂಲಕ ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಎತ್ತಿ ಹಿಡಿಯುತ್ತದೆ. ಮಧ್ಯರಾತ್ರಿ ಸುಮಾರು 2 ರಿಂದ 3ರ ನಡುವೆ ಕರಗವು ಕುಂಬಾರಪೇಟೆ ಮೂಲಕ ದರ್ಗಾಕ್ಕೆ ಬರುತ್ತದೆ. ಕರಗ ಹೊತ್ತ ಪೂಜಾರಿ ದರ್ಗಾದ ಒಳಗೆ ತೆರಳಿ, ಅಲ್ಲಿನ ಧೂಪಾರತಿ ಸ್ವೀಕರಿಸಿ, ದರ್ಗಾದ ಮುಜಾವರ್ ಅವರಿಂದ ಆಶೀರ್ವಾದ ಪಡೆಯುತ್ತದೆ.

ದರ್ಗಾ-ಎ-ಹಜರತ್ ತವಕಲ್ ಮಸ್ತಾನ್ ದರ್ಗಾ

ಹೈದರಾಲಿ ಆಡಳಿತದ ವೇಳೆ ದರ್ಗಾ ನಿರ್ಮಾಣದ ಸಮಯದಲ್ಲಿ ನಡೆದ ಘಟನೆಯೊಂದರ ನೆನಪಿಗಾಗಿ, ತವಕ್ಕಲ್ ಮಸ್ತಾನ್ ಅವರ ಆಶೀರ್ವಾದ ಪಡೆಯುವ ವಾಡಿಕೆ ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ. ಮೆರವಣಿಗೆಯು ಹಳೇ ಬೆಂಗಳೂರಿನ ನಗರ್ತಪೇಟೆ, ಅಕ್ಕಿಪೇಟೆ, ಕುಂಬಾರಪೇಟೆಯಂತಹ ವಿವಿಧ ಬಡಾವಣೆಗಳ ಮೂಲಕ ಸಾಗುವಾಗ, ಆಯಾ ಭಾಗದ ಜೈನ, ವೈಶ್ಯ ಮತ್ತು ಇತರ ಸಮುದಾಯದ ವರ್ತಕರು ಮತ್ತು ನಿವಾಸಿಗಳು ಪೂಜೆ ಸಲ್ಲಿಸುತ್ತಾರೆ.

ಕರಗಕ್ಕೆ ರಾಜಾಶ್ರಯ

ಬೆಂಗಳೂರು ಕರಗ ಉತ್ಸವವು ಶತಮಾನಗಳಿಂದ ವಿವಿಧ ರಾಜವಂಶಗಳ ಬೆಂಬಲ ಮತ್ತು ರಾಜಾಶ್ರಯದೊಂದಿಗೆ ಬೆಳೆದು ಬಂದಿದೆ. ವಿಜಯನಗರ ಸಾಮ್ರಾಜ್ಯದಿಂದ ಹಿಡಿದು ಮೈಸೂರು ಒಡೆಯರ ಕಾಲದವರೆಗೆ ಈ ಹಬ್ಬಕ್ಕೆ ಬೆಂಬಲ ದೊರೆತಿದೆ. ಬೆಂಗಳೂರು ನಿರ್ಮಾತೃ ಒಂದನೇ ಕೆಂಪೇಗೌಡರ ಆಳ್ವಿಕೆಯಲ್ಲಿ ಕರಗ ಉತ್ಸವಕ್ಕೆ ಹೆಚ್ಚಿನ ಪ್ರಾಮುಖ್ಯತೆ ಲಭಿಸಿತು. ಇವರ ಕಾಲದಲ್ಲಿ ನೆರೆಯ ರಾಜ್ಯಗಳಿಂದ ತಿಗಳ ಸಮುದಾಯದವರು (ವಹ್ನಿಕುಲ ಕ್ಷತ್ರಿಯರು) ಬೆಂಗಳೂರಿಗೆ ವಲಸೆ ಬಂದು ನೆಲೆಸಿದರು. ಇದು ಕರಗ ಆಚರಣೆ ಮತ್ತಷ್ಟು ವಿಸ್ತಾರಗೊಳ್ಳಲು ಕಾರಣವಾಯಿತು. ಇದಲ್ಲದೇ ಮೈಸೂರು ರಾಜರು ಕರಗ ಉತ್ಸವ ಮತ್ತು ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಉದಾರ ದೇಣಿಗೆ ನೀಡುತ್ತಿದ್ದರು. ಹಬ್ಬದ ನಿರ್ವಹಣೆ ಮತ್ತು ದೇವಸ್ಥಾನದ ಪಾಲನೆಗಾಗಿ ರಾಜಾಶ್ರಯ ನಿರಂತರವಾಗಿತ್ತು ಎಂಬುದು ಇತಿಹಾಸದಿಂದ ತಿಳಿದುಬರಲಿದೆ.

1811ರ ಸುಮಾರಿಗೆ ಮೈಸೂರು ಒಡೆಯರ ಕಾಲದಲ್ಲಿಯೇ ಈ ಉತ್ಸವದ ಬಗ್ಗೆ ಆರಂಭಿಕ ಅಧಿಕೃತ ದಾಖಲೀಕರಣಗಳು ನಡೆದವು. ಇದು ಹಬ್ಬದ ಸಾಂಪ್ರದಾಯಿಕ ಕ್ರಮಗಳನ್ನು ಉಳಿಸಿಕೊಳ್ಳಲು ಸಹಕಾರಿಯಾಯಿತು. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕಾಲದಲ್ಲೂ ತಿಗಳ ಸಮುದಾಯದವರಿಗೆ ಆರ್ಥಿಕ ಅವಕಾಶಗಳನ್ನು ನೀಡುವ ಮೂಲಕ ಪರೋಕ್ಷವಾಗಿ ಕರಗ ಆಚರಣೆಯು ಮುಂದುವರಿಯಲು ಪ್ರೋತ್ಸಾಹ ಸಿಕ್ಕಿತು.

ಬೆಂಗಳೂರಿನ 'ಪೇಟೆ' ಪ್ರದೇಶದಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನವು ಕರಗ ಉತ್ಸವದ ಕೇಂದ್ರಬಿಂದುವಾಗಿದ್ದು, ಇದನ್ನು ರಾಜರು ಕಾಲಕಾಲಕ್ಕೆ ಜೀರ್ಣೋದ್ಧಾರ ಮಾಡಿ ಪೋಷಿಸಿದ್ದರು.

ಸರ್ಕಾರದಿಂದ ಅನುದಾನ

ಲಕ್ಷಾಂತರ ಭಕ್ತರು ಸೇರುವ ಈ ಉತ್ಸವಕ್ಕೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರವು ವಿಶೇಷ ಅನುದಾನ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸುತ್ತಿದ್ದು, ಈ ವರ್ಷ 1.70 ಕೋಟಿ ರೂ. ಅನುದಾನ ನೀಡಿದೆ. ಪ್ರತಿವರ್ಷ ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ವಿವಿಧ ಭಾಗಗಳಿಂದ ಬಂದು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸಮುದಾಯದ ನೂರಾರು 'ವೀರಕುಮಾರರು' ಕರಗದ ರಕ್ಷಣೆ ಮತ್ತು ಮೆರವಣಿಗೆಯ ಶಿಸ್ತಿಗಾಗಿ ಸೇವೆ ಸಲ್ಲಿಸುತ್ತಾರೆ, ಇದು ಅವರ ಸಮುದಾಯದ ಒಗ್ಗಟ್ಟು ತೋರಿಸುತ್ತದೆ

ವಿವಾದ ಮೆತ್ತಿಕೊಂಡ ಕರಗ ಮಹೋತ್ಸವ

ಕರಗ ಹೊರುವ ವಿಚಾರವಾಗಿ ತಿಗಳ ಸಮುದಾಯದ ಅರ್ಚಕರ ಮಧ್ಯೆ ಹಲವು ಬಾರಿ ಸಂಘರ್ಷ ನಡೆದಿದೆ. 2023ರ ಕರಗ ಉತ್ಸವದ ಸಂದರ್ಭದಲ್ಲಿ ಕರಗ ಹೊರುವ ಅರ್ಚಕ ಎ. ಜ್ಞಾನೇಂದ್ರ ಅವರ ಮೇಲೆ ಹೂವು ಎಸೆಯುವ ನೆಪದಲ್ಲಿ ರಾಸಾಯನಿಕ (ಸಿಲ್ವರ್ ಸೈನೈಡ್) ಸಿಂಪಡಿಸಿ ಹತ್ಯೆ ಮಾಡಲು ಯತ್ನಿಸಿದ ಗಂಭೀರ ಆರೋಪ ಕೇಳಿಬಂದಿತ್ತು. ಈ ಸಂಬಂಧ ಹಲಸೂರು ಗೇಟ್ ಪೊಲೀಸರು ಆದಿನಾರಾಯಣ ಎಂಬುವವರನ್ನು ಬಂಧಿಸಿದ್ದರು. ಕರಗ ಹೊರಲು ಇವರ ನಡುವೆ ದೀರ್ಘಕಾಲದ ಪೈಪೋಟಿ ಇದ್ದುದೇ ಈ ಕೃತ್ಯಕ್ಕೆ ಕಾರಣ ಎಂದು ಹೇಳಲಾಗಿತ್ತು.

2016ರಲ್ಲಿ ಅರ್ಚಕ ಲಕ್ಷ್ಮೀಶ ಅವರು 'ಖಾಸಗಿ ಕರಗ' ಆಚರಿಸಿದ್ದಾರೆಂಬ ವಿವಾದದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕಾಗಿ ಬಂದಿತ್ತು. 2000ರಿಂದ ಈ ಜವಾಬ್ದಾರಿಯನ್ನು ಜ್ಞಾನೇಂದ್ರ ಮತ್ತು ಲೋಕೇಶ್ ಅವರು ನಿಭಾಯಿಸುತ್ತಿದ್ದರು, ಆದರೆ ನ್ಯಾಯಾಲಯದ ಆದೇಶದಂತೆ ಇತರರಿಗೂ ಅವಕಾಶ ನೀಡಬೇಕಾದಾಗ ಅರ್ಚಕರ ನಡುವೆ ಅಸಮಾಧಾನ ಮೂಡಿತ್ತು.

ಬೆಂಗಳೂರಿನಲ್ಲೇಕೆ ಕರಗ ಪ್ರಸಿದ್ದಿ

ಹದಿನಾರನೇ ಶತಮಾನದಲ್ಲಿ ವಹ್ನಿಕುಲ (ತಿಗಳರು) ದವರು ಬೆಂಗಳೂರಿಗೆ ಬಂದು ನೆಲೆಸಿದರು ಎಂದು ಹೇಳಲಾಗಿದೆ. ಅವರು ಮೂಲತಃ ತಮಿಳುನಾಡು ಮೂಲದವರು. ಹದಿನಾರನೇ ಶತಮಾನದಲ್ಲಿ ಹೈದರಾಲಿ ದಂಡಯಾತ್ರೆ ನಡೆಸುತ್ತಿದ್ದ ವೇಳೆ, ವಹ್ನಿಕುಲ ಕ್ಷತ್ರಿಯರಲ್ಲಿನ ಧೈರ್ಯ ಹಾಗೂ ಅವರ ತೋಟಗಾರಿಕೆಯನ್ನು ಕೌಶಲ್ಯವನ್ನು ನೋಡಿ, ಅವರಲ್ಲಿ ಕೆಲವರನ್ನು ಮೈಸೂರು ಸಂಸ್ಥಾನಕ್ಕೆ ಕರೆತಂದರು. ಇವರೆಲ್ಲರೂ, ಬೆಂಗಳೂರಿನ ತಿಗಳಪೇಟೆ, ಶ್ರೀರಂಗಪಟ್ಟಣದ ಗಂಜಾಂನಲ್ಲಿ ನೆಲೆಯೂರಿದರು. ಇವರೆಲ್ಲರೂ ಮೂಲದಿಂದಲೂ ದ್ರೌಪದಿಯ ಆರಾಧಕರಾಗಿದ್ದು, ತಾವು ಬೆಂಗಳೂರಿನಲ್ಲಿ ನೆಲೆಸಿದ ನಂತರ, ತಿಗಳರಪೇಟೆಯಲ್ಲಿ ತಮ್ಮ ಆರಾಧ್ಯ ದೈವ ದ್ರೌಪದಿ ಮತ್ತು ಧರ್ಮರಾಯ ಸ್ವಾಮಿಯ ದೇವಾಲಯವನ್ನು ನಿರ್ಮಿಸಿಕೊಂಡು ಹಬ್ಬ ಆರಂಭಿಸಿದರು. ಕರಗ ಉತ್ಸವವನ್ನು ವರ್ಷಗಳುರುಳಿದಂತೆ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿತು. ಇದು ಈಗ ಜಾತಿ-ಧರ್ಮಗಳನ್ನು ಮೀರಿ ಎಲ್ಲರ ಹಬ್ಬ ಉತ್ಸವವಾಗಿ ಮಾರ್ಪಟ್ಟಿದೆ. ಇದು ಬೆಂಗಳೂರು ನೆಲದ ಹಬ್ಬ ಎಂಬಂತಾಗಿದೆ.

Read More
Next Story