
ಸಂಗಾತಿಯ ಸಾವಿನ ನಂತರವೂ ವಿರಹದಲ್ಲೇ ಬದುಕುವ ಅದ್ಭುತ ಜೀವಿಗಳಿವು!
ಸಂಗಾತಿಯ ಸಾವಿನ ನಂತರವೂ ವಿರಹದಲ್ಲಿ ಬದುಕುವ ಅಥವಾ ಪ್ರಾಣ ಬಿಡುವ ಜೀವಿಗಳ ಕುರಿತಾದ ವಿಶೇಷ ಲೇಖನ ಇಲ್ಲಿದೆ.
ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್ ಆದ ಒಂದು ಪೆಂಗ್ವಿನ್ ವಿಡಿಯೋ, ಪ್ರಾಣಿ ಪ್ರಪಂಚದಲ್ಲಿ ಪ್ರೀತಿ ಮತ್ತು ನಿಷ್ಠೆಗೆ ಇರುವ ಪ್ರಾಮುಖ್ಯತೆಯನ್ನು ಜಗತ್ತಿಗೆ ಸಾರಿದೆ. ಮನುಷ್ಯರಲ್ಲಿ ಮಾತ್ರ ಸಂಗಾತಿಗೆ ನಿಷ್ಠರಾಗಿರುವ ಗುಣವಿರುತ್ತದೆ ಎಂದುಕೊಂಡವರಿಗೆ ಈ ಪೆಂಗ್ವಿನ್ ಕಥೆ ಅಚ್ಚರಿ ಮೂಡಿಸಿದೆ. ಜೀವನದುದ್ದಕ್ಕೂ ಒಂದೇ ಸಂಗಾತಿಯೊಂದಿಗೆ ಬದುಕುವ ಈ ಜೀವಿಗಳ ನಿಷ್ಠೆ ನಿಜಕ್ಕೂ ಅಪಾರ. ಆದರೆ, ಕೇವಲ ಪೆಂಗ್ವಿನ್ ಮಾತ್ರವಲ್ಲ, ಪ್ರಾಣಿ ಸಾಮ್ರಾಜ್ಯದಲ್ಲಿ ಇನ್ನೂ ಹಲವು ಜೀವಿಗಳು ಮರಣದವರೆಗೂ ತಮ್ಮ ಸಂಗಾತಿಯನ್ನು ಬಿಟ್ಟುಕೊಡುವುದಿಲ್ಲ. ಅಂತಹ 15 ಅದ್ಭುತ ಜೀವಿಗಳ ವಿವರ ಇಲ್ಲಿದೆ.
ಪೆಂಗ್ವಿನ್
ಪೆಂಗ್ವಿನ್‌ಗಳು ಬೃಹತ್ ಸಮೂಹಗಳಲ್ಲಿ ವಾಸಿಸುತ್ತವೆ ಮತ್ತು ಅಲ್ಲಿಯೇ ತಮ್ಮ ಸಂಗಾತಿಯನ್ನು ಆರಿಸಿಕೊಳ್ಳುತ್ತವೆ. ಇವುಗಳ ಪ್ರೇಮ ಕಥೆ ತುಂಬಾ ವಿಶಿಷ್ಟ.ಹೆಣ್ಣು ಪೆಂಗ್ವಿನ್ ಮೊಟ್ಟೆಯಿಟ್ಟ ನಂತರ ಆಹಾರದ ಹುಡುಕಾಟದಲ್ಲಿ ಸಮುದ್ರಕ್ಕೆ ಹೋಗುತ್ತದೆ. ಆ ಸಮಯದಲ್ಲಿ ವಿಪರೀತ ಚಳಿಯಲ್ಲಿ ಆಹಾರವಿಲ್ಲದೆ, ಮೊಟ್ಟೆಯನ್ನು ಕಾಪಾಡುವ ಜವಾಬ್ದಾರಿ ಗಂಡು ಪೆಂಗ್ವಿನ್‌ನದ್ದು.
ಹೆಣ್ಣು ಪೆಂಗ್ವಿನ್ ತಿಂಗಳ ನಂತರ ಮರಳಿ ಬರುವಾಗ ತನ್ನ ಸಂಗಾತಿಯನ್ನು ಕೇವಲ ಅವನ ಧ್ವನಿಯ ಮೂಲಕ ಗುರುತಿಸುತ್ತದೆ. ಒಂದು ವೇಳೆ ಸಂಗಾತಿ ಸಾವನ್ನಪ್ಪಿದರೆ, ಉಳಿದ ಪೆಂಗ್ವಿನ್ ಸಮೂಹದಿಂದ ದೂರ ಹೋಗಿ ಆಹಾರ ತ್ಯಜಿಸಿ (ನಿರಾಹಾರ ದೀಕ್ಷೆ) ಮರಣವನ್ನಪ್ಪುತ್ತದೆ. ಈ ವಿಡಿಯೋವೇ ಇತ್ತೀಚೆಗೆ ವೈರಲ್ ಆಗಿತ್ತು.
ತೋಳಗಳು
ತೋಳಗಳಲ್ಲಿ ಪ್ರೇಮಕ್ಕಿಂತ ಹೆಚ್ಚಾಗಿ ಕಟ್ಟುನಿಟ್ಟಾದ ಕುಟುಂಬ ವ್ಯವಸ್ಥೆ ಇರುತ್ತದೆ. ಬೇಟೆಯಾಡುವುದು, ತಮ್ಮ ಪ್ರದೇಶವನ್ನು ರಕ್ಷಿಸುವುದು ಮತ್ತು ಮರಿಗಳನ್ನು ಸಾಕುವ ಜವಾಬ್ದಾರಿಯನ್ನು ಹಿಂಡಿನ ಎಲ್ಲಾ ಸದಸ್ಯರು ಹಂಚಿಕೊಳ್ಳುತ್ತಾರೆ. ಸಂಗಾತಿ ಸತ್ತರೆ ಇವು ಮತ್ತೊಂದು ಸಂಗಾತಿಯನ್ನು ಸ್ವೀಕರಿಸದೆ ಏಕಾಂಗಿಯಾಗಿ ಇರುತ್ತವೆ.
ಬಾರ್ನ್ ಔಲ್ಸ್ ಅಥವಾ ಗೂಬೆಗಳು
ಇವುಗಳು ರಾತ್ರಿಯ ವೇಳೆ ಬೇಟೆಯಾಡುವ ಪಕ್ಷಿಗಳು. ಇವು ಸಂಗಾತಿಯನ್ನು ಆರಿಸಿಕೊಂಡ ನಂತರ ಒಂದು ನಿರ್ದಿಷ್ಟ ಪ್ರದೇಶದಲ್ಲಿ ನೆಲೆಸುತ್ತವೆ. ಗಂಡು ಗೂಬೆ ಆಹಾರವನ್ನು ತಂದರೆ, ಹೆಣ್ಣು ಗೂಬೆ ಗೂಡಿನಲ್ಲಿ ಮರಿಗಳನ್ನು ರಕ್ಷಿಸುತ್ತದೆ. ಇವುಗಳ ನಡುವಿನ ಬಲವಾದ ಸಹಕಾರದಿಂದಲೇ ಮರಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಕ್ಕಾಗಿಯೇ ಇವು ದೀರ್ಘಕಾಲದವರೆಗೆ ಜೊತೆಯಾಗಿರುತ್ತವೆ.
ಬಕಪಕ್ಷಿಗಳು
ಬಕಪಕ್ಷಿಗಳು ತಮ್ಮ ವಿಶೇಷ ನೃತ್ಯಗಳ ಮೂಲಕ ಸಂಗಾತಿಯನ್ನು ಆಕರ್ಷಿಸುತ್ತವೆ ಮತ್ತು ಒಮ್ಮೆ ಜೊತೆಯಾದರೆ ಸಾವಿನವರೆಗೂ ಬೇರೆಯಾಗುವುದಿಲ್ಲ. ಮೊಟ್ಟೆಯಿಟ್ಟ ನಂತರ ತಂದೆ ಮತ್ತು ತಾಯಿ ಇಬ್ಬರೂ ಸಮಾನವಾಗಿ ಗೂಡನ್ನು ಕಾಯುವ ಮತ್ತು ಮರಿಗಳನ್ನು ಸಾಕಿ ಸಲಹುವ ಜವಾಬ್ದಾರಿಯನ್ನು ನಿರ್ವಹಿಸುತ್ತವೆ. ಒಂದು ವೇಳೆ ಸಂಗಾತಿ ಸತ್ತರೆ ಮರಿಗಳ ರಕ್ಷಣೆಗಾಗಿ ಅಪರೂಪಕ್ಕೊಮ್ಮೆ ಹೊಸ ಸಂಗಾತಿಯನ್ನು ಹುಡುಕಬಹುದು, ಆದರೆ ಇದು ಬಹಳ ಕಡಿಮೆ ಎನ್ನುತ್ತಾರೆ ತಜ್ಞರು.
ಬ್ಲ್ಯಾಕ್ ವಲ್ಚರ್ಸ್
ಇವು ಗುಂಪುಗಳಲ್ಲಿ ಜೀವಿಸಿದರೂ ತಮ್ಮ ಸಂಗಾತಿಯನ್ನು ಎಂದಿಗೂ ಮರೆಯುವುದಿಲ್ಲ. ಮರಿಗಳಿಗೆ ಆಹಾರ ತರುವುದರಲ್ಲಿ ಮತ್ತು ಅವುಗಳನ್ನು ಬೆಳೆಸುವಲ್ಲಿ ಇಬ್ಬರ ಪಾತ್ರವೂ ಮುಖ್ಯವಾಗಿರುತ್ತದೆ. ಅಧ್ಯಯನಗಳ ಪ್ರಕಾರ ಇವುಗಳಲ್ಲಿ ಸಂಗಾತಿ ಸತ್ತ ನಂತರ ಮತ್ತೊಂದು ಜತೆ ಸೇರುವುದು ಬಹಳ ಅಪರೂಪ. ಅನೇಕ ಹದ್ದುಗಳು ಸಂಗಾತಿಯ ಸಾವಿನ ನಂತರ ಒಂಟಿಯಾಗಿಯೇ ಉಳಿದುಬಿಡುತ್ತವೆ.

