
Women's Reservation Act | 2029ಕ್ಕೂ ಮುನ್ನವೇ ಮಹಿಳಾ ಮೀಸಲಾತಿ ಕಾಯ್ದೆ ಜಾರಿ? ಸರ್ಕಾರದ ಮಾಸ್ಟರ್ ಪ್ಲಾನ್ ಬೆನ್ನಲ್ಲೇ ವಿಪಕ್ಷಗಳು ಕಿಡಿ!
2029ರೊಳಗೆ ಮಹಿಳಾ ಮೀಸಲಾತಿ ಜಾರಿಗೆ ಪ್ರಧಾನಿ ಮೋದಿ ಗಡುವು ನಿಗದಿಪಡಿಸಿದ್ದಾರೆ. ಮತ್ತೊಂದೆಡೆ ಈ ಪ್ರತಿಪಕ್ಷಗಳು ಕೇಂದ್ರದ ನಡೆಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ದೂರಿವೆ.
ಭಾರತೀಯ ರಾಜಕಾರಣದ ದಶಕಗಳ ಕನಸಾದ '(ಮಹಿಳಾ ಮೀಸಲಾತಿ ಕಾಯ್ದೆ' ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಈಗ 'ಬುಲೆಟ್' ವೇಗದ ಚಾಲನೆ ನೀಡಿದೆ. 2029ರ ಲೋಕಸಭಾ ಚುನಾವಣೆಗೂ ಮುನ್ನವೇ 'ನಾರಿ ಶಕ್ತಿ ವಂದನ್ ಅಧಿನಿಯಮ'ವನ್ನು ಹಳಿಗೆ ತರಲು ಸಜ್ಜಾಗಿರುವ ಮೋದಿ ಸರ್ಕಾರ, ಈ ನಿಟ್ಟಿನಲ್ಲಿ ಬಜೆಟ್ ಅಧಿವೇಶನವನ್ನು ವಿಸ್ತರಿಸುವ ಮೂಲಕ ಸಂಸತ್ತಿನಲ್ಲಿ ಸಂಚಲನ ಮೂಡಿಸಿದೆ.ನಾರಿ ಶಕ್ತಿ ವಂದನ್ ಅಧಿನಿಯಮವನ್ನು 2029ರ ಲೋಕಸಭಾ ಚುನಾವಣೆಗೂ ಮುನ್ನವೇ ಜಾರಿಗೆ ತರಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನವನ್ನು ಇನ್ನೂ ಮೂರು ದಿನಗಳ ಕಾಲ (ಏಪ್ರಿಲ್ 16 ರಿಂದ 18 ರವರೆಗೆ) ವಿಸ್ತರಿಸಲಾಗಿದೆ. ಅಲ್ಲದೇ ಅಂದು ನಡೆಯಲಿರುವ ಕಲಾಪದಲ್ಲಿ ಎನ್ಡಿಎ ಮೈತ್ರಿಕೂಟದ ಎಲ್ಲಾ ಸಂಸದರು ತಪ್ಪದೇ ಹಾಜರಿರುವಂತೆ ವಿಪ್ ಜಾರಿಗೊಳಿಸಲಾಗಿದೆ.
2011ರ ಜನಗಣತಿ ಆಧಾರದ ಮೇಲೆ ಜಾರಿ?
ಮೂಲ ಕಾಯ್ದೆಯ ಪ್ರಕಾರ, ಮಹಿಳಾ ಮೀಸಲಾತಿಯು 2027ರ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯ ನಂತರ ಜಾರಿಗೆ ಬರಬೇಕಿತ್ತು. ಆದರೆ, ಈ ಪ್ರಕ್ರಿಯೆಯು ವಿಳಂಬವಾದರೆ ಮೀಸಲಾತಿ ಜಾರಿಯು 2034ರವರೆಗೆ ಹೋಗಬಹುದು ಎಂಬ ಆತಂಕವಿತ್ತು. ಈ ವಿಳಂಬವನ್ನು ತಪ್ಪಿಸಲು, ಕೇಂದ್ರ ಸರ್ಕಾರವು 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ನಡೆಸಿ, ಶೇ. 33ರಷ್ಟು ಮೀಸಲಾತಿಯನ್ನು ಶೀಘ್ರವಾಗಿ ಜಾರಿಗೆ ತರಲು ಯೋಜಿಸಿದೆ.
ಸಂಸತ್ ಅಧಿವೇಶನ ವಿಸ್ತರಣೆ ಮತ್ತು ಸರ್ಕಾರದ ಗುರಿ
ಬಜೆಟ್ ಅಧಿವೇಶನವನ್ನು ಏಪ್ರಿಲ್ 16 ರಿಂದ 18 ರವರೆಗೆ ಮೂರು ದಿನಗಳ ಕಾಲ ವಿಸ್ತರಿಸಲಾಗಿದೆ. ಈ ವಿಶೇಷ ಅವಧಿಯಲ್ಲಿ 'ನಾರಿ ಶಕ್ತಿ ವಂದನ್ ಅಧಿನಿಯಮ ತಿದ್ದುಪಡಿ ಮಸೂದೆ'ಯನ್ನು ಮಂಡಿಸಿ ಅಂಗೀಕರಿಸುವುದು ಸರ್ಕಾರದ ಉದ್ದೇಶವಾಗಿದೆ. 2023ರಲ್ಲಿ ಅಂಗೀಕಾರಗೊಂಡಿದ್ದ ಮೂಲ ಕಾಯ್ದೆಯ ಪ್ರಕಾರ, ಹೊಸ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯ ನಂತರವಷ್ಟೇ ಮೀಸಲಾತಿ ಜಾರಿಯಾಗಬೇಕಿತ್ತು. ಆದರೆ 2027ರ ಜನಗಣತಿ ವಿಳಂಬವಾದರೆ, ಮೀಸಲಾತಿ ಜಾರಿಯು 2034ಕ್ಕೆ ತಳ್ಳಲ್ಪಡುವ ಸಾಧ್ಯತೆಯಿತ್ತು.
ಈಗಿನ ತಿದ್ದುಪಡಿಯ ಮೂಲಕ 2011ರ ಜನಗಣತಿ ದತ್ತಾಂಶವನ್ನೇ ಆಧಾರವಾಗಿಟ್ಟುಕೊಂಡು ಕ್ಷೇತ್ರ ಮರುವಿಂಗಡಣೆ ನಡೆಸಿ, 2029ರ ಚುನಾವಣೆಗೆ ಮೀಸಲಾತಿ ಸಿದ್ಧಪಡಿಸುವುದು ಸರ್ಕಾರದ ಪ್ಲಾನ್.
ಲೋಕಸಭೆಯ ಸ್ವರೂಪದಲ್ಲಿ ಭಾರಿ ಬದಲಾವಣೆ
ಈ ತಿದ್ದುಪಡಿಯು ಕೇವಲ ಮಹಿಳೆಯರಿಗೆ 33% ಮೀಸಲಾತಿ ನೀಡುವುದಲ್ಲದೆ, ಸಂಸತ್ತಿನ ಸ್ಥಾನಗಳ ಸಂಖ್ಯೆಯಲ್ಲೂ ದೊಡ್ಡ ಬದಲಾವಣೆ ತರಲಿದೆ. ಈ ಸಂವಿಧಾನ ತಿದ್ದುಪಡಿಯು ಕೇವಲ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವುದಕ್ಕೆ ಸೀಮಿತವಾಗದೆ, ಸಂಸತ್ತಿನ ಸ್ವರೂಪದಲ್ಲೂ ಭಾರಿ ಬದಲಾವಣೆ ತರಲಿದೆ; ಇದರ ಅನ್ವಯ ಲೋಕಸಭೆಯ ಒಟ್ಟು ಸ್ಥಾನಗಳನ್ನು ಈಗಿರುವ 543 ರಿಂದ 816ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದ್ದು, ಅದರಲ್ಲಿ 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಈ ಕಾಯ್ದೆ ಅಂಗೀಕಾರವಾದರೆ, ಮೊಟ್ಟಮೊದಲ ಬಾರಿಗೆ ಉತ್ತರ ಪ್ರದೇಶ, ಪಂಜಾಬ್, ಗುಜರಾತ್ ಮತ್ತು ಉತ್ತರಾಖಂಡ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪ್ರಾಯೋಗಿಕವಾಗಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ಯೋಜಿಸಿದೆ.
ಉತ್ತರ ಪ್ರದೇಶದಲ್ಲಿ ಗರಿಷ್ಠ 40 ಸ್ಥಾನಗಳು ಹೆಚ್ಚಾಗುವ ನಿರೀಕ್ಷೆ
ಮಹಿಳಾ ಮೀಸಲಾತಿ ಕಾಯ್ದೆ ಮತ್ತು ಕ್ಷೇತ್ರ ಮರುವಿಂಗಡಣೆ ಜಾರಿಯಾದಲ್ಲಿ ದೇಶದ ವಿವಿಧ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಲಿದ್ದು, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಸ್ಥಾನಗಳ ಸಂಖ್ಯೆ 80 ರಿಂದ 120ಕ್ಕೆ ಏರಲಿದ್ದರೆ, ಮಹಾರಾಷ್ಟ್ರದಲ್ಲಿ 48 ರಿಂದ 72ಕ್ಕೆ ಹಾಗೂ ಬಿಹಾರದಲ್ಲಿ 40 ರಿಂದ 60ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಬದಲಾವಣೆಯಿಂದಾಗಿ ಉತ್ತರ ಪ್ರದೇಶದಲ್ಲಿ 40, ಮಹಾರಾಷ್ಟ್ರದಲ್ಲಿ 24 ಹಾಗೂ ಬಿಹಾರದಲ್ಲಿ 20 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿದ್ದು, ಅದೇ ರೀತಿ ತಮಿಳುನಾಡಿನಲ್ಲಿ 20, ಮಧ್ಯಪ್ರದೇಶದಲ್ಲಿ 15, ಜಾರ್ಖಂಡ್ನಲ್ಲಿ 7 ಮತ್ತು ದೆಹಲಿಯಲ್ಲಿ 4 ಮಹಿಳಾ ಮೀಸಲು ಸ್ಥಾನಗಳು ಲಭ್ಯವಾಗುವ ಮೂಲಕ ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿ ದೇಶದ ರಾಜಕೀಯ ಚಿತ್ರಣವೇ ಬದಲಾಗಲಿದೆ.
ವಿರೋಧ ಪಕ್ಷಗಳ ತೀವ್ರ ಆಕ್ಷೇಪ ಮತ್ತು 'ಜಾತಿ ಜನಗಣತಿ' ವಿವಾದ
ಕೇಂದ್ರದ ಈ 'ದಿಢೀರ್' ನಡೆಯನ್ನು ವಿರೋಧ ಪಕ್ಷಗಳು ಸಂಶಯದಿಂದ ನೋಡುತ್ತಿವೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ನಾಯಕ ಜೈರಾಮ್ ರಮೇಶ್ ಮತ್ತು ಆರ್ಜೆಡಿ ನಾಯಕರು ಈ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 2027ರ ಜನಗಣತಿಯಲ್ಲಿ ಜಾತಿವಾರು ಅಂಕಿಅಂಶಗಳನ್ನು ಸಂಗ್ರಹಿಸುವುದಾಗಿ ಸರ್ಕಾರ ಈ ಹಿಂದೆ ಒಪ್ಪಿಕೊಂಡಿತ್ತು. ಆದರೆ ಈಗ 2011ರ ಹಳೆಯ ಜನಗಣತಿಯನ್ನೇ ಬಳಸಲು ಹೊರಟಿರುವುದು ಜಾತಿ ಜನಗಣತಿಯನ್ನು ಮೂಲೆಗುಂಪು ಮಾಡುವ ತಂತ್ರ ಎಂದು ವಿಪಕ್ಷಗಳು ಆರೋಪಿಸಿವೆ.
ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೩೩ರಷ್ಟು ಮೀಸಲಾತಿ ಕಲ್ಪಿಸುವ 'ನಾರಿ ಶಕ್ತಿ ವಂದನ್ ಅಧಿನಿಯಮ'ದ ವಿಚಾರವನ್ನು ಮುಂದಿಟ್ಟುಕೊಂಡು, ರಾಜಕೀಯ ಲಾಭ ಪಡೆಯುವ ಉದ್ದೇಶದಿಂದಲೇ ಕೇಂದ್ರ ಸರ್ಕಾರವು ದಿಢೀರ್ ಆಗಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ ಎಂದು ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರವು ತಾರಕಕ್ಕೇರಿರುವ ಹೊತ್ತಿನಲ್ಲೇ ಏಪ್ರಿಲ್ 16 ರಿಂದ ಈ ಅಧಿವೇಶನ ಕರೆಯುವ ಮೂಲಕ, ಉದ್ದೇಶಪೂರ್ವಕವಾಗಿ ಪ್ರತಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದು ಸರ್ಕಾರದ ತಂತ್ರವಾಗಿದೆ. ಇದಲ್ಲದೆ, ಮಹಿಳಾ ಮೀಸಲಾತಿ ಕೇವಲ ನೆಪ ಮಾತ್ರವಾಗಿದ್ದು, ಇದರ ಹಿಂದಿರುವ ಸರ್ಕಾರದ ಅಸಲಿ ಉದ್ದೇಶವೇ ಕ್ಷೇತ್ರ ಮರು ವಿಂಗಡಣೆ (ಡಿಲಿಮಿಟೇಶನ್) ಮಾಡುವುದಾಗಿದೆ. ಇದು ಸಂವಿಧಾನದ ಮೇಲಿನ ನೇರ ಪ್ರಹಾರವಾಗಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
'ದಿ ಹಿಂದೂ' ರಾಷ್ಟ್ರೀಯ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ತಮ್ಮ ವಿಶೇಷ ಲೇಖನದಲ್ಲಿ ಕೇಂದ್ರದ ನೈಜ ಉದ್ದೇಶಗಳನ್ನು ಸೋನಿಯಾ ಗಾಂಧಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. “2023ರಲ್ಲೇ ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿ ತರಲು ಬೆಂಬಲ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಪಕ್ಷಗಳಿಗೆ ಇತ್ತೀಚೆಗೆ ಪತ್ರ ಬರೆದಿದ್ದಾರೆ. ಈ ಮಸೂದೆಯನ್ನು 2027ರ ಜನಗಣತಿಗೆ ಜೋಡಿಸುವ ಬದಲು 2011ರ ಜನಗಣತಿಯ ಆಧಾರದ ಮೇಲೆಯೇ 2029ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ” ಎಂದಿದ್ದಾರೆ.
ಈ ಹಿಂದೆ ಇದೇ ಮಸೂದೆಯನ್ನು ಮುಂದಿನ ಜನಗಣತಿಗೆ ಜೋಡಿಸಿದ್ದು ಇದೇ ಕೇಂದ್ರ ಸರ್ಕಾರವಾಗಿತ್ತು. ಅಂದೇ ಈ ಮೀಸಲಾತಿಯನ್ನು 2024ರ ಲೋಕಸಭಾ ಚುನಾವಣೆಯಿಂದಲೇ ಜಾರಿಗೆ ತರಬೇಕು ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಲವಾಗಿ ಆಗ್ರಹಿಸಿದ್ದರು. ಆಗ ಮೌನ ವಹಿಸಿದ್ದ ಸರ್ಕಾರ, ಈಗ ಏಕಾಏಕಿ 334-ಎ ಪರಿಚ್ಛೇದಕ್ಕೆ ತಿದ್ದುಪಡಿ ತಂದು 2029ರಿಂದಲೇ ಅನ್ವಯವಾಗುವಂತೆ ಮಾಡಲು ಹೊರಟಿದೆ. ಪ್ರಧಾನಿಯವರ ಈ 30 ತಿಂಗಳ ಹಿಂದಿನ ನಿಲುವಿನ ಬದಲಾವಣೆಯ (ಯು-ಟರ್ನ್) ಹಿಂದಿನ ಮರ್ಮವೇನು ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಒಬಿಸಿ ಕೋಟಾಕ್ಕೆ ಆಗ್ರಹ:
ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಮಹಿಳಾ ಮೀಸಲಾತಿಯೊಳಗೆ ಎಸ್ಸಿ/ಎಸ್ಟಿ ಮಹಿಳೆಯರಿಗೆ ಇರುವಂತೆ ಒಬಿಸಿ (OBC) ಮಹಿಳೆಯರಿಗೂ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂಬುದು ಇಂಡಿಯಾ (INDIA) ಒಕ್ಕೂಟದ ಪ್ರಮುಖ ಬೇಡಿಕೆಯಾಗಿದೆ. ಈ ದತ್ತಾಂಶ ಲಭ್ಯವಾಗದಂತೆ ಮಾಡಲು ಸರ್ಕಾರ ಹಳೆಯ ಜನಗಣತಿ ಬಳಸುತ್ತಿದೆ ಎಂಬುದು ಇವರ ವಾದ. ಅಷ್ಟೇ ಅಲ್ಲದೇ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳ ನಡುವೆಯೇ ಈ ಅಧಿವೇಶನ ಕರೆದಿರುವುದು ವಿರೋಧ ಪಕ್ಷದ ನಾಯಕರ ಹಾಜರಾತಿಯನ್ನು ಕುಂಠಿತಗೊಳಿಸಲು ಮಾಡಿದ ಪ್ಲಾನ್” ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
2029ರ ಗಡುವು ನೀಡಿದ ಪ್ರಧಾನಿ ಮೋದಿ
ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರವು 2029ರ ಗಡುವನ್ನು ನಿಗದಿಪಡಿಸಿದೆ. ಈ ಕಾಲಮಿತಿಯೊಳಗೆ ಆ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಏಪ್ರಿಲ್ 13) ಪ್ರತಿಪಾದಿಸಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 'ನಾರಿ ಶಕ್ತಿ ವಂದನ್ ಸಮ್ಮೇಳನ' ಉದ್ದೇಶಿಸಿ ಮಾತನಾಡಿದ ಅವರು, ಈ ಐತಿಹಾಸಿಕ ನಿರ್ಧಾರದ ಬಗ್ಗೆ ಏಪ್ರಿಲ್ 16 ರಿಂದ ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
"2029ರ ವೇಳೆಗೆ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂಬುದು ಸರ್ವಾನುಮತದ ಬೇಡಿಕೆಯಾಗಿದೆ. ನಾವು 2029ರ ಗಡುವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ. ಏಪ್ರಿಲ್ 16 ರಿಂದ ಸಂಸತ್ತಿನಲ್ಲಿ ಈ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ. ಪರಸ್ಪರ ಸಹಕಾರ ಮತ್ತು ಭಾಗವಹಿಸುವಿಕೆಯೊಂದಿಗೆ ಈ ಕಾರ್ಯ ಯಶಸ್ವಿಯಾಗಲಿ ಎಂಬುದು ನಮ್ಮ ಆಶಯ," ಎಂದು ಪ್ರಧಾನಿ ಮೋದಿ ಹೇಳಿದರು.
ವಿಪ್ ಜಾರಿ
ಈ ಮೂರು ದಿನಗಳ ಕಾಲ ಎಲ್ಲಾ ಬಿಜೆಪಿ ಸಂಸದರು ಕಡ್ಡಾಯವಾಗಿ ಹಾಜರಿರಬೇಕು ಮತ್ತು ಮಸೂದೆಯ ಪರವಾಗಿ ಮತ ಹಾಕಬೇಕು ಎಂದು 'ವಿಪ್' (Whip) ಜಾರಿಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ರಜೆ ನೀಡಲಾಗುವುದಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ. ಲೋಕಸಭೆಯ ಘನತೆಯನ್ನು ಕಾಪಾಡಲು ಸದನದ ಒಳಗೆ ಬ್ಯಾನರ್, ಪ್ಲಕಾರ್ಡ್ ತರುವುದು ಅಥವಾ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.
ದೇಶದ ರಾಜಕಾರಣದ ಮೇಲೆ ಬೀರುವ ಪರಿಣಾಮ
ಒಂದು ವೇಳೆ ಸರ್ಕಾರವು 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ನಡೆಸಿ ಮೀಸಲಾತಿ ಜಾರಿಗೆ ತಂದರೆ, ಅದು ಆಡಳಿತಾರೂಢ ಬಿಜೆಪಿಗೆ 2029ರ ಚುನಾವಣೆಯಲ್ಲಿ ದೊಡ್ಡ ಲಾಭ ತಂದುಕೊಡಬಹುದು. ಆದರೆ, ಜಾತಿ ಜನಗಣತಿಯನ್ನು ಕೈಬಿಟ್ಟರೆ ಅದು ಹಿಂದುಳಿದ ವರ್ಗಗಳ ಆಕ್ರೋಶಕ್ಕೆ ಕಾರಣವಾಗಿ, ದೇಶಾದ್ಯಂತ ಮತ್ತೆ ದೊಡ್ಡ ಮಟ್ಟದ ಚಳವಳಿ ಅಥವಾ ಕಾನೂನು ಹೋರಾಟಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯೂ ಇದೆ.

