
ಸೂಪರ್ ಪವರ್ ಸಾರಿದ ಸಮರ: ಕ್ಷಿಪಣಿಗಳ ಸುರಿಮಳೆ, ಸುಪ್ರೀಂ ಲೀಡರ್ ಹತ್ಯೆ- ಕದನ ಕಣದ ಕಂಪ್ಲೀಟ್ ಡಿಟೇಲ್
ಕ್ಷಿಪಣಿಗಳು, ಬಾಂಬುಗಳ ಸುರಿಮಳೆ, ತೈಲ ಬಿಕ್ಕಟ್ಟು, ಬಂದ್ ಆದ ವಾಯುಮಾರ್ಗಗಳು, ಪರಮೋಚ್ಚ ನಾಯಕನ ಹತ್ಯೆ… ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಸಾರಿರುವ ಯುದ್ಧದ ಪರಿಣಾಮಗಳು!
2026ರ ಫೆಬ್ರವರಿ 28ರ ಶನಿವಾರ ಬೆಳಕು ಹರಿಯುವ ಹೊತ್ತಿಗೆ ಮಧ್ಯಪ್ರಾಚ್ಯದ ದಿಕ್ಕು-ದೆಸೆಗಳೆಲ್ಲವೂ ಬದಲಾಗಿ ಹೋಗಿದ್ದವು. ಅದು ಯಾವ ಮಟ್ಟಿಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇನ್ನು ಹಲವು ವರ್ಷಗಳೇ ಬೇಕಾದೀತು.
ಇದಕ್ಕೆ ಕಾರಣ ಇರಾನ್ ಮಹಾಕದನ. ಫೆ. 28ರ ಮುಂಜಾನೆಯ ವೇಳೆಗೆ ಅಮೆರಿಕ ಮತ್ತು ಇಸ್ರೇಲ್ ಸೇರಿಕೊಂಡು ಏಕಾಏಕಿ ದಾಳಿ ನಡೆಸಿದೆ. ಇರಾನಿನ ರಾಜಧಾನಿ ಟೆಹ್ರಾನ್ ಮತ್ತು ಇನ್ನೂ ಹಲವು ಪ್ರಮುಖ ನಗರಗಳು ಕ್ಷಿಪಣಿ ದಾಳಿಗೆ ಒಳಗಾಗಿವೆ. ಜನ ತತ್ತರಿಸಿಹೋಗಿದ್ದಾರೆ. ಇರಾನಿನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಇರಾನ್ ಪರಮಾಣು ಒಪ್ಪಂದಕ್ಕೆ ಬರುತ್ತಿಲ್ಲ ಎಂಬುದೇ ಈ ದಾಳಿಗೆ ಕಾರಣವೆಂದು ಅಮೆರಿಕ ಹೇಳಿಕೊಂಡಿದೆ. ಇದೊಂದು ನೆವವನ್ನು ಮುಂದಿಟ್ಟುಕೊಂಡು ಇಡೀ ಮಧ್ಯಪ್ರಾಚ್ಯವನ್ನು ಕದನ ಕಣವನ್ನಾಗಿ ಮಾಡಿಕೊಳ್ಳಲಾಗಿದೆ. ಇರಾನ್-ನಲ್ಲಿರುವ ಪರಮಾಣು ಕೇಂದ್ರಗಳ ಮೇಲೆ ಎರಡೂ ರಾಷ್ಟ್ರಗಳ ಯುದ್ಧ ಕ್ಷಿಪಣಿಗಳು ಕಣ್ಣು ನೆಟ್ಟಿವೆ ಎಂದು ಹೇಳಲಾಗುತ್ತಿದೆ.
ಇದೆಲ್ಲಕ್ಕೆ ಪ್ರತಿಯಾಗಿ ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದೆ. ಸದ್ಯ ಆ ವಲಯದಾದ್ಯಂತ ವಾಯುಮಾರ್ಗವನ್ನು ಬಂದ್ ಮಾಡಲಾಗಿದೆ. ಯುದ್ಧದ ಪರಿಣಾಮವಾಗಿ ತೈಲ ಮಾರುಕಟ್ಟೆಗಳು ಲಗಾಟಿ ಹೊಡೆದಿವೆ. ಈ ಮಹಾಕದನದಿಂದ ಆಗುವ ಘಾತಕ ಪರಿಣಾಮಗಳ ಅಂದಾಜು ಮಾಡುವುದು ಕಷ್ಟ. ಇದು ಎಷ್ಟ್ರ ಮಟ್ಟಿಗೆ ವಿಕೋಪಕ್ಕೆ ಹೋದೀತು ಎಂದು ಇಡೀ ಜಗತ್ತು ಕಾತರ-ಆತಂಕ-ಭಯದಿಂದ ಕಾಯುತ್ತಿದೆ.
ಈ ಹಿನ್ನೆಲೆಯಲ್ಲಿ ಈ ಕದನ ಕಣದ ಘಟನೆಗಳು, ಅದಕ್ಕೆ ಕಾರಣಗಳು ಮತ್ತು ಮುಂದಿನ ಸಾಧ್ಯತೆಗಳು ಏನೇನು ಎಂಬುದನ್ನು ಅರಿಯುವ ಪ್ರಯತ್ನ ಇಲ್ಲಿದೆ:
ಅಸಲಿಗೆ ಏನು ನಡೆಯಿತು?
ಅಮೆರಿಕ ಮತ್ತು ಇಸ್ರೇಲ್ ಪರಸ್ಪರ ಸಮನ್ವಯದೊಂದಿಗೆ ಫೆಬ್ರವರಿ 28ರ ಬೆಳಗಿನ ಜಾವ ಹಠಾತ್ ದಾಳಿ ಆರಂಭಿಸಿದವು. ಇಸ್ರೇಲ್ ಈ ಆಕ್ರಮಣಕ್ಕೆ ʼಆಪರೇಷನ್ ರೋರಿಂಗ್ ಲಯನ್ʼ ಎಂದು ಹೆಸರಿಟ್ಟಿದೆ. ಅಮೆರಿಕ ಇದನ್ನು ʼಆಪರೇಷನ್ ಎಪಿಕ್ ಫ್ಯೂರಿʼ ಎಂದು ಕರೆದಿದೆ.
ಈ ಎರಡೂ ರಾಷ್ಟ್ರಗಳ ಯುದ್ಧ ಕ್ಷಿಪಣಿಗಳು, ಡ್ರೋಣ್-ಗಳು ಮುಗಿಬಿದ್ದಿದ್ದು ಇರಾನಿನ ಪ್ರಮುಖ ನಗರಗಳಾದ ಟೆಹರಾನ್, ಇಸ್ಫಹಾನ್, ಕೋಮ್, ಕರಜ್ ಮತ್ತು ಕೆರ್ಮನ್ಶಾ ಮೇಲೆ.
ಇಷ್ಟಾಗುವ ಹೊತ್ತಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಸಾರ್ವಜನಿಕವಾಗಿ ಕಾಣಿಸಿಕೊಂಡು ʼಇರಾನ್ ಮೇಲೆ ನಾವು ಯುದ್ಧ ಸಾರಿದ್ದೇವೆʼ ಎಂದು ಘೋಷಿಸಿದರು. ಇರಾನಿನ ಪರಮಾಣ ಕಾರ್ಯಕ್ರಮಗಳನ್ನು ನಾಶಮಾಡುವುದೇ ನಮ್ಮ ಗುರಿ ಎಂದೂ ಹೇಳಿದ ಅವರು, ಇಸ್ಲಾಮಿಕ್ ಸರ್ಕಾರವನ್ನು ಕಿತ್ತೊಗೆಯುವಂತೆ ಅಲ್ಲಿನ ನಾಗರಿಕರಿಗೆ ಕರೆಕೊಟ್ಟರು. ಯುದ್ಧದ ಸುದ್ದಿಗಳು ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಹೊತ್ತಿನಲ್ಲೇ ಮಾರ್ಚ್ ಒಂದನೇ ತಾರೀಕು ಭಾನುವಾರ ಬೆಳಗಿನ ಜಾವ ಇನ್ನೊಂದು ಸುದ್ದಿ ಹೊರಬಿತ್ತು. ಅದು ಇರಾನಿನ ಪರಮೋಚ್ಛ ನಾಯಕ ಅಯತೊಲ್ಲ ಖಮೇನಿ ಅವರ ಹತ್ಯೆಯಾಗಿದೆ ಎಂಬ ವರದಿ.
ಇರಾನ್ ಕೂಡ ಪ್ರತಿದಾಳಿ ನಡೆಸಿತು. ಎಲ್ಲೆಲ್ಲಿ ಅಮೆರಿಕದ ವಾಯುನೆಲೆಗಳಿವೆ ಅಲ್ಲೆಲ್ಲ ದಾಳಿ ಕೈಗೊಂಡಿತು. ಹಾಗಾಗಿ ಬಹರೇನ್, ಸೌದಿ ಅರೇಬಿಯಾ, ಕತಾರ್, ಇರಾಕ್ ಮತ್ತು ಯುಎಇ ನಲ್ಲಿರುವ ಪ್ರಮುಖ ತಾಣಗಳು ದಾಳಿಗೆ ಗುರಿಯಾದವು. ಅದಾಗಿ ಕೆಲವೇ ತಾಸುಗಳಲ್ಲಿ ಆ ವಲಯದ ವಾಯುಪ್ರದೇಶವನ್ನು ಮುಚ್ಚಲಾಯಿತು. ಒಂದು ವರದಿಯ ಪ್ರಕಾರ ಇರಾನ್ ಈಗ ಹಾರ್ಮುಜಾ ಜಲಸಂದಿಯನ್ನು ಬಂದ್ ಮಾಡಿದೆ.
ಇದರಿಂದ ಬಹುದೊಡ್ಡ ತೈಲ ಬಿಕ್ಕಟ್ಟು ಉಂಟಾಗಲಿದೆ ಎಂದು ಊಹಿಸಲಾಗಿದೆ. ಯಾಕೆಂದರೆ ಈ ಮಾರ್ಗದ ಮೂಲಕ ವಿಶ್ವದ ಒಟ್ಟು ತೈಲ ಪೂರೈಕೆಯ ಸುಮಾರು ಐದನೇ ಒಂದು ಭಾಗದಷ್ಟು ಸಾಗಣೆಯಾಗುತ್ತದೆ.
ಈಗಲೇ ಯುದ್ಧ ಸಂಭವಿಸಿದ್ದರ ಕಾರಣ
ಇದಕ್ಕೆ ಅಮೆರಿಕ ಮತ್ತು ಇರಾನ್ ನೀಡುವ ಉತ್ತರಗಳು ಸಂಪೂರ್ಣ ತದ್ವಿರುದ್ಧವಾಗಿವೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಮಾಡುವುದನ್ನು ತಡೆಯಲೇಬೇಕಾಗಿತ್ತು. ಹಾಗಾಗಿ ದಾಳಿ ಅನಿವಾರ್ಯವಾಯಿತು ಎಂದು ಅಮೆರಿಕ ಮತ್ತು ಇಸ್ರೇಲ್ ಮುಂದಿಡುವ ವಾದ. ಶಸ್ತ್ರಾಸ್ತ್ರ ದರ್ಜೆಯ ಪರಮಾಣು ಸಾಮಗ್ರಿಗಳನ್ನು ಸಿದ್ಧಪಡಿಸಲು ಇರಾನ್ ಎಲ್ಲ ತಯಾರಿ ಮಾಡಿಕೊಂಡಿತ್ತು. ಅದಕ್ಕೆ ಕೆಲವೇ ವಾರಗಳು ಮಾತ್ರ ಬಾಕಿ ಇದ್ದವು ಎಂಬುದು ಟ್ರಂಪ್ ಆಡಳಿತದ ವಾದ.
ಇಷ್ಟು ಮಾತ್ರವಲ್ಲದೆ ಗಾಜಾದಲ್ಲಿನ ಹಮಾಸ್ ಮತ್ತು ಲೆಬನಾನಿನ ಹಿಜ್ಬುಲ್ಲಾ ಸೇರಿದಂತೆ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ದೀರ್ಘಕಾಲದ ಭದ್ರತಾ ಬೆದರಿಕೆಗಳಾಗಿವೆ ಎಂದೂ ಟ್ರಂಪ್-ನೆತನ್ಯಾಹು ಬೊಟ್ಟು ಮಾಡುತ್ತಾರೆ. ಯಾವತ್ತು ಜಿನಿವಾದಲ್ಲಿ ನಡೆದ ಪರಮಾಣು ಮಾತುಕತೆಗಳು ನಿಷ್ಫಲವಾದವೋ ಆಗಲೇ ದಾಳಿಯ ಸೂಚನೆ ದೊರೆತು ಹೋಗಿತ್ತು.
ಆದರೆ ಶತ್ರು ರಾಷ್ಟ್ರಗಳ ವಾದಗಳನ್ನು ಸಾರಾಸಗಟಾಗಿ ತಿರಸ್ಕರಿಸುವ ಇರಾನ್ ದೃಷ್ಟಿಕೋನ ಸಂಪೂರ್ಣ ಭಿನ್ನವಾಗಿದೆ. ತಾನು ನಡೆಸುವ ಪರಮಾಣು ಕಾರ್ಯಕ್ರಮವು ನಾಗರಿಕ ಉದ್ದೇಶಕ್ಕಾಗಿಯೇ ಹೊರತು ವಿನಾಶಕ್ಕಾಗಿ ಅಲ್ಲ ಮತ್ತು ಅದು ಅಂತರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕಾನೂನುಬದ್ಧವಾಗಿದೆ ಎಂಬುದು ಇರಾನ್ ಪ್ರತಿಪಾದನೆ. ತನ್ನ ಪ್ರಾದೇಶಿಕ ಮೈತ್ರಿಗಳು ದಶಕಗಳ ಕಾಲದ ಪಾಶ್ಚಿಮಾತ್ಯ ಹಸ್ತಕ್ಷೇಪ ಮತ್ತು ಇಸ್ರೇಲಿ ಮಿಲಿಟರಿ ಆಕ್ರಮಣದ ವಿರುದ್ಧದ ನ್ಯಾಯಸಮ್ಮತ ಪ್ರತಿರೋಧ ಎಂದು ಅದು ಹೇಳುತ್ತದೆ.
ಯಾವುದೇ ಅಂತರಾಷ್ಟ್ರೀಯ ತಪಾಸಣೆಗೆ ಒಳಪಡದ, ಘೋಷಿತವಲ್ಲದ ಬೃಹತ್ ಪರಮಾಣು ಶಸ್ತ್ರಾಸ್ತ್ರ ಸಂಗ್ರಹವನ್ನು ಇಸ್ರೇಲ್ ಹೊಂದಿದ್ದರೂ ಸಹ, ಅದರ ಮೇಲೆ ಇಂತಹ ಯಾವುದೇ ಒತ್ತಡವಿಲ್ಲ ಎಂಬುದನ್ನು ಕೂಡ ಇರಾನ್ ಬೊಟ್ಟು ಮಾಡುತ್ತದೆ. ಟೆಹ್ರಾನ್ ದೃಷ್ಟಿಯಲ್ಲಿ, ಈ ದಾಳಿಗಳು ಒಂದು ಸಾರ್ವಭೌಮ ರಾಷ್ಟ್ರದ ವಿರುದ್ಧದ ಕಾನೂನುಬಾಹಿರ ಯುದ್ಧದ ಕೃತ್ಯಗಳಾಗಿವೆ.
ಯಾರು ಮುಖ್ಯ ಪಾತ್ರಧಾರಿಗಳು -ಅವರ ಗುರಿ ಏನು?
ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲ್, ಇರಾನ್ ಅನ್ನು ತನ್ನ ಪ್ರಮುಖ ವ್ಯೂಹಾತ್ಮಕ ಬೆದರಿಕೆ ಎಂದು ದೀರ್ಘಕಾಲದಿಂದ ಪರಿಗಣಿಸಿದೆ. ಇಸ್ರೇಲ್ನ ಅಸ್ತಿತ್ವಕ್ಕೆ ಇರಾನ್ನ ವಿರೋಧ, ಸಶಸ್ತ್ರ ಗುಂಪುಗಳಿಗೆ ಅದು ನೀಡುವ ಧನಸಹಾಯ ಮತ್ತು ಅದರ ಪರಮಾಣು ಮಹತ್ವಾಕಾಂಕ್ಷೆಗಳನ್ನು ಇಸ್ರೇಲ್ ಉಲ್ಲೇಖಿಸುತ್ತದೆ. ಇರಾನ್ನ ಪರಮಾಣು ಸಾಮರ್ಥ್ಯವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವುದು ಇಸ್ರೇಲ್ನ ಏಕೈಕ ಗುರಿ.
ಇರಾನ್ ಪರಮಾಣು ರಾಷ್ಟ್ರವಾಗುತ್ತದೆ ಎಂಬ ದಿಗಿಲಿಗೆ ಬಿದ್ದಿರುವ ಟ್ರಂಪ್ ಅದಕ್ಕೆ ಅಂಕುಶ ಹಾಕಲು ಬಯಸಿದೆ. ಹಲವು ವರ್ಷಗಳ ಹಿನ್ನಡೆಯ ನಂತರ ಮಧ್ಯಪ್ರಾಚ್ಯದಲ್ಲಿ ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸುವುದು ಮತ್ತು 1979ರ ಇಸ್ಲಾಮಿಕ್ ಕ್ರಾಂತಿ ಹಾಗೂ ಅದರ ನಂತರದ ಒತ್ತೆಯಾಳು ಬಿಕ್ಕಟ್ಟಿನಿಂದ ಆರಂಭವಾದ 47 ವರ್ಷಗಳ ಹಗೆತನವನ್ನು ಕೊನೆಗಾಣಿಸುವುದು ಅದರ ಗುರಿ.
ಇನ್ನೊಂದು ಕಡೆ ಇಸ್ಲಾಮಿಕ್ ರಿಪಬ್ಲಿಕ್ ಅಡಿಯಲ್ಲಿ ಇರಾನ್, ಐತಿಹಾಸಿಕವಾಗಿ ಅಮೆರಿಕ, ಬ್ರಿಟನ್ ಮತ್ತು ಇಸ್ರೇಲ್ನಂತಹ ಹೊರಗಿನ ಶಕ್ತಿಗಳಿಂದ ನಿಯಂತ್ರಿಸಲ್ಪಡುತ್ತಿರುವ ಈ ಪ್ರದೇಶದಲ್ಲಿ ತನ್ನನ್ನು ತಾನು ಪ್ರಬಲ ಶಕ್ತಿಯಾಗಿ ಗುರುತಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನ ನಡೆಸುತ್ತ ಬಂದಿದೆ. ಈ ಕಾರ್ಯತಂತ್ರದ ಲಾಭಕ್ಕಾಗಿ ವಿವಿಧ ಸಶಸ್ತ್ರ ಗುಂಪುಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈಗ ಖಮೇನಿ ಮೃತಪಟ್ಟಿರುವುದರಿಂದ, ತನ್ನ ಆಡಳಿತದ ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಅದರ ತಕ್ಷಣದ ಗುರಿಯಾಗಿದೆ.
ಆಳವಾಗಿದೆ ಬಿಕ್ಕಟ್ಟಿನ ಬೇರು
ಪ್ರಸ್ತುತ ಬಿಕ್ಕಟ್ಟಿನ ಬೇರು ಅತ್ಯಂತ ಆಳವಾಗಿದೆ. 1979ರಲ್ಲಿ ಸಂಭವಿಸಿದ ಕ್ರಾಂತಿಯ ಫಲವಾಗಿ ಇಸ್ಲಾಮಿಕ್ ರಿಪಬ್ಲಿಕ್ ಅಧಿಕಾರಕ್ಕೆ ಬಂತು ಮತ್ತು ಅಮೆರಿಕ ಬೆಂಬಲಿತ ಷಾ ಆಡಳಿತದೊಂದಿಗೆ ಇದ್ದ ನಿಕಟ ಸಂಬಂಧವನ್ನು ಅಂತ್ಯಗೊಳಿಸಿತು. ಅನೇಕ ಇರಾನಿಯನ್ನರು ಷಾ ಅವರನ್ನು ಕ್ರೂರ ಸರ್ವಾಧಿಕಾರಿ ಎಂದು ಪರಿಗಣಿಸಿದ್ದರು. ಅದರ ನಂತರ ನಡೆದ ಒತ್ತೆಯಾಳು ಬಿಕ್ಕಟ್ಟು ದಶಕಗಳ ಕಾಲ ಉಭಯ ದೇಶಗಳ ಸಂಬಂಧವನ್ನು ಹದಗೆಡಿಸಿ ಹೈರಾಣಾಗಿ ಮಾಡಿತ್ತು.
ದಶಕಗಳ ಕಾಲ ಅಮೆರಿಕ ಹೇರಿದ ನಿರ್ಬಂಧಗಳು ಇರಾನ್ ಆರ್ಥಿಕವಾಗಿ ಕಂಗೆಡುವಂತೆ ಮಾಡಿದೆ. ಇದು ತನ್ನ ನಾಗರಿಕರ ವಿರುದ್ಧ ನಡೆಸುತ್ತಿರುವ 'ಆರ್ಥಿಕ ಯುದ್ಧ' ಎಂದು ಇರಾನ್ ಹೇಳುತ್ತದೆ.
ತೀರಾ ಇತ್ತೀಚಿನ ಘಟನೆಗಳನ್ನು ನೋಡುವುದಾದರೆ, ಏಪ್ರಿಲ್ 2024ರಲ್ಲಿ ಇಸ್ರೇಲ್ ಮತ್ತು ಇರಾನ್ ದಶಕಗಳಲ್ಲೇ ಮೊದಲ ಬಾರಿಗೆ ನೇರ ಕ್ಷಿಪಣಿ ದಾಳಿಗಳನ್ನು ನಡೆಸಿದವು. ಜೂನ್ 2025ರಲ್ಲಿ, ಇರಾನ್ನ ಮಿಲಿಟರಿ ಮತ್ತು ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್ 'ಪೂರ್ವಭಾವಿ ದಾಳಿ' ನಡೆಸಿತು. ಇದು 'ಹನ್ನೆರಡು ದಿನಗಳ ಯುದ್ಧ' ಎಂದು ಕರೆಯಲ್ಪಟ್ಟಿತು ಮತ್ತು ಜೂನ್ 22ರಂದು ಅಮೆರಿಕ ಕೂಡ ಈ ಯುದ್ಧಕ್ಕೆ ಸೇರಿಕೊಂಡಿತು. ಅಲ್ಲಿಂದ ಇಲ್ಲಿಯವರೆಗೆ ಕದನ ವಿರಾಮ ಜಾರಿಯಲ್ಲಿತ್ತು.
ಆದರೆ ಅದರ ನಂತರದ ತಿಂಗಳುಗಳಲ್ಲಿ ಇರಾನ್ ಆರ್ಥಿಕವಾಗಿ ತೀವ್ರವಾಗಿ ಕುಸಿತಕ್ಕೆ ಒಳಗಾಯಿತು. 2025ರ ಅಂತ್ಯದ ವೇಳೆಗೆ 100ಕ್ಕೂ ಹೆಚ್ಚು ನಗರಗಳಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವು ಮತ್ತು ಅದರ ಪ್ರಾದೇಶಿಕ ಬೆಂಬಲಿತ ಜಾಲವು ಗಣನೀಯವಾಗಿ ದುರ್ಬಲಗೊಂಡಿತು. ಶನಿವಾರದ ದಾಳಿಗಳು ನಡೆದಾಗ ಇರಾನ್ ಈಗಾಗಲೇ ಆಂತರಿಕ ಮತ್ತು ಬಾಹ್ಯ ಒತ್ತಡಗಳಿಂದ ತತ್ತರಿಸಿಹೋಗಿತ್ತು.
ಈ ಯುದ್ಧದಿಂದ ಆಗಿರುವ ಮಾನವೀಯ ಹಾನಿ ಈಗಾಗಲೇ ದೊಡ್ಡ ಮಟ್ಟದಲ್ಲಿದೆ. ಇಸ್ರೇಲ್ ನಡೆಸಿದ ಒಂದು ದಾಳಿಯು ಮಿನಾಬ್ ನಗರದ ಹೆಣ್ಣು ಮಕ್ಕಳ ಶಾಲೆಯ ಮೇಲೆ ಬಿದ್ದಿದ್ದು, ಕನಿಷ್ಠ 108 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ.
ಗಗನಕ್ಕೇರದ ವಿಮಾನಗಳು
ಏರ್ ಇಂಡಿಯಾ, ಬ್ರಿಟಿಷ್ ಏರ್ವೇಸ್, ಲುಫ್ಥಾನ್ಸ ಮತ್ತು ಇಂಡಿಗೋ ಸೇರಿದಂತೆ ಪ್ರಮುಖ ವಿಮಾನಯಾನ ಸಂಸ್ಥೆಗಳು ಮಧ್ಯಪ್ರಾಚ್ಯದ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿವೆ. ಇರಾನ್ 'ಹಾರ್ಮುಜ್ ಜಲಸಂಧಿ'ಯನ್ನು ಬಂದ್ ಮಾಡಿದೆ ಎಂಬ ಸುದ್ದಿಯಿಂದಾಗಿ ತೈಲ ಮಾರುಕಟ್ಟೆಗಳು ತೀವ್ರ ವ್ಯತ್ಯಯವನ್ನು ಎದುರಿಸುತ್ತಿವೆ. ಜಾಗತಿಕ ಹಣಕಾಸು ಮಾರುಕಟ್ಟೆಗಳು ಆತಂಕದ ಪ್ರತಿಕ್ರಿಯೆ ನೀಡಿವೆ.
ಪರಿಹಾರದ ಹಾದಿಗಳು ಯಾವುವು?
ಒಂದು ವೇಳೆ ಪರಿಸ್ಥಿತಿ ತೀರಾ ಹದಗೆಟ್ಟರೆ, ಈ ಸಂಘರ್ಷವು ಮತ್ತಷ್ಟು ವಿಸ್ತರಿಸಬಹುದು. ಲೆಬನಾನ್ನ ಹಿಜ್ಬುಲ್ಲಾ, ಯೆಮನ್ನ ಹೂತಿಗಳು ಮತ್ತು ಇರಾಕ್ ಹಾಗೂ ಸಿರಿಯಾದಲ್ಲಿನ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ಯುದ್ಧಕ್ಕೆ ಧುಮುಕಬಹುದು. ತೈಲ ಪೂರೈಕೆ ಸ್ಥಗಿತಗೊಂಡು, ಇಡೀ ಪ್ರದೇಶವು ಸುದೀರ್ಘವಾದ ಮತ್ತು ಬಹುಮುಖಿ ಯುದ್ಧದ ಸುಳಿಗೆ ಸಿಲುಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ವಿಶ್ಲೇಷಕರು ಇದನ್ನು 2003ರ ಇರಾಕ್ ಆಕ್ರಮಣಕ್ಕೆ ಹೋಲಿಸುತ್ತಿದ್ದಾರೆ - ಅಲ್ಲಿ ಸರ್ಕಾರವನ್ನು ಉರುಳಿಸುವುದು ಸುಲಭವಾಗಿತ್ತು, ಆದರೆ ಅದರ ನಂತರದ ಪರಿಸ್ಥಿತಿಯನ್ನು ನಿಭಾಯಿಸುವುದು ದುಸ್ತರವಾಗಿ ಹೋಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.
ಒಂದು ವೇಳೆ ಆಶಾದಾಯಕ ಬೆಳವಣಿಗೆ ನಡೆದರೆ, ಈ ದಾಳಿಗಳು ಇರಾನ್ನ ಒಳಗೆ ಕ್ಷಿಪ್ರ ರಾಜಕೀಯ ಬದಲಾವಣೆಗೆ ದಾರಿಮಾಡಬಹುದು. ಹೊಸ ಸರ್ಕಾರವು ಮಾತುಕತೆಗೆ ಮುಂದಾಗಬಹುದು ಮತ್ತು ಅಂತಿಮವಾಗಿ ಹೊಸ ರಾಜತಾಂತ್ರಿಕ ಚೌಕಟ್ಟು ರೂಪುಗೊಳ್ಳಬಹುದು. ಇರಾನ್ನ ವಿದೇಶಾಂಗ ಸಚಿವರು ಟೆಹ್ರಾನ್ "ಉದ್ವಿಗ್ನತೆಯನ್ನು ಕಡಿಮೆ ಮಾಡುವ ಆಸಕ್ತಿಯನ್ನು ಹೊಂದಿದೆ" ಎಂಬ ಸುಳಿವನ್ನು ನೀಡಿದ್ದಾರೆ.
ವಿಫಲವಾದ ಜಿನೀವಾ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದ ಒಮಾನ್ ದೇಶವು ಸಂಯಮಕ್ಕೆ ಕರೆ ನೀಡಿದೆ. ಪರಿಸ್ಥಿತಿಯನ್ನು ನಿಯಂತ್ರಿಸದಿದ್ದರೆ "ಭಯಾನಕ ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ" ಉಂಟಾಗಬಹುದು ಎಂದು ಯುರೋಪ್ ಎಚ್ಚರಿಸಿದೆ.
ಸದ್ಯಕ್ಕೆ ಎರಡೂ ಕಡೆಯವರು ಯುದ್ಧ ನಿಲ್ಲಿಸುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ. ರಾಜತಾಂತ್ರಿಕ ಮಾತುಕತೆಯ ಬಾಗಿಲು ಸ್ವಲ್ಪ ಮಟ್ಟಿಗೆ ತೆರೆದಿದೆಯಾದರೂ, ಯಾರೂ ಇನ್ನೂ ಆ ಕಡೆ ಹೆಜ್ಜೆ ಇಟ್ಟಿಲ್ಲ.
ಭಾರತದ ಮೇಲೆ ಪರಿಣಾಮವೇನು?
ಮಧ್ಯಪ್ರಾಚ್ಯದ ಈ ಯುದ್ಧದ ಪರಿಣಾಮ ಭಾರತದ ಮೇಲೆ ಉಂಟಾಗುವ ಬಹಳಷ್ಟಿದೆ. ಈ ಸಂಘರ್ಷದಲ್ಲಿ ತೊಡಗಿರುವ ಎಲ್ಲಾ ಪಕ್ಷಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಭಾರತ, ಈಗ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದೆ ಮತ್ತು ಹಲವು ರಂಗಗಳಲ್ಲಿ ನೇರವಾದ ಹೊಡೆತವನ್ನು ಅನುಭವಿಸುವ ಸಾಧ್ಯತೆಯಿದೆ.
ಅವುಗಳಲ್ಲಿ ಮೊದಲನೆಯದೆಂದರೆ ಇಂಧನ ಬಿಕ್ಕಟ್ಟು. ಭಾರತವು ಕೊಲ್ಲಿ ರಾಷ್ಟ್ರಗಳಿಂದ ಪ್ರತಿದಿನ ಸುಮಾರು 26 ಲಕ್ಷ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಭಾರತದ ಒಟ್ಟು ತೈಲ ಆಮದಿನ ಸುಮಾರು ಶೇ.50 ರಷ್ಟು ಪಾಲು 'ಹಾರ್ಮುಜ್ ಜಲಸಂಧಿ'ಯ ಮೂಲಕವೇ ಸಾಗುತ್ತದೆ. ಈ ಮಾರ್ಗವು ಬಂದ್ ಆದಲ್ಲಿ ಭಾರತದಲ್ಲಿ ಇಂಧನ ಬೆಲೆಗಳು ಗಗನಕ್ಕೇರಬಹುದು, ಇದರ ನೇರ ಪರಿಣಾಮ ಬೀರುವುದು ಹಣದುಬ್ಬರದ ಮೇಲೆ.
ಚಾಬಹಾರ್ ಬಂದರಿನ ಪ್ರಶ್ನೆ
ಭಾರತವು ಇರಾನ್ನ ಆಗ್ನೇಯ ಕರಾವಳಿಯಲ್ಲಿರುವ ಚಾಬಹಾರ್ ಬಂದರನ್ನು ಅಭಿವೃದ್ಧಿಪಡಿಸಲು ಭಾರಿ ಹೂಡಿಕೆ ಮಾಡಿದೆ. ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸಲು ಈ ಯೋಜನೆ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಇರಾನ್ ಸಹ ಈ ಬಂದರನ್ನು ನವದೆಹಲಿಯೊಂದಿಗಿನ ತನ್ನ ವ್ಯೂಹಾತ್ಮಕ ಸಂಬಂಧದ ಪ್ರಬಲ ಕೊಂಡಿ ಎಂದೇ ಪರಿಗಣಿಸಿತ್ತು. ಈಗ ಸುದೀರ್ಘ ಯುದ್ಧ ಅಥವಾ ಆ ಬಳಿಕ ಟೆಹ್ರಾನ್ನಲ್ಲಿ ಉಂಟಾಗಬಹುದಾದ ಆಡಳಿತ ಬದಲಾವಣೆಯು ಈ ಯೋಜನೆಯ ಭವಿಷ್ಯವೇನು ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ವಿಮಾನಯಾನ ತಾರುಮಾರು
ಕದನದ ತಕ್ಷಣದ ಪರಿಣಾಮವಾಗಿ ವಿಮಾನಯಾನ ಕ್ಷೇತ್ರವು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದೆ. ಇಸ್ರೇಲ್ ವಾಯುಪ್ರದೇಶ ಮುಚ್ಚಿದ ನಂತರ ಏರ್ ಇಂಡಿಯಾ ತನ್ನ ದೆಹಲಿ-ಟೆಲ್ ಅವಿವ್ ವಿಮಾನವನ್ನು ಭಾರತಕ್ಕೆ ವಾಪಸ್ ಕಳುಹಿಸಿದೆ. ಇಂಡಿಗೋ ಮತ್ತು ಸ್ಪೈಸ್ಜೆಟ್ ಸಂಸ್ಥೆಗಳೂ ಸಹ ಸಂಚಾರ ವ್ಯತ್ಯಯವನ್ನು ವರದಿ ಮಾಡಿವೆ. ಇಸ್ರೇಲ್, ಇರಾನ್, ಇರಾಕ್, ಯುಎಇ, ಜೋರ್ಡಾನ್ ಮತ್ತು ಸಿರಿಯಾದ ವಾಯುಪ್ರದೇಶಗಳನ್ನು ಮುಚ್ಚಿರುವುದು ವಿಮಾನಗಳ ರದ್ದತಿ ಮತ್ತು ಮಾರ್ಗ ಬದಲಾವಣೆಗೆ ಕಾರಣವಾಗಿದೆ.
ಭಾರತೀಯ ಪ್ರಯಾಣಿಕರಿಗೆ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಭಾರತೀಯರಿಗೆ ಪ್ರಮುಖ ಸಂಪರ್ಕ ಕೊಂಡಿಗಳಾಗಿರುವ ದುಬೈ ಮತ್ತು ದೋಹಾ ವಿಮಾನ ನಿಲ್ದಾಣಗಳ ಮೇಲೆ ಇದು ನೇರ ಪರಿಣಾಮ ಬೀರಿದೆ.
ರಾಜತಾಂತ್ರಿಕವಾಗಿ ಭಾರತ ಈಗ ನಡೆಸಬೇಕಾಗಿರುವುದು ಹಗ್ಗದ ಮೇಲಿನ ನಡಿಗೆ. ಭಾರತವು ಅಮೆರಿಕ ಮತ್ತು ಇಸ್ರೇಲ್ನೊಂದಿಗೆ ನಿಕಟವಾದ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಂದಿದ್ದರೂ, ಇರಾನ್ ಜೊತೆ ದೀರ್ಘಕಾಲದ ಸಂಬಂಧವನ್ನು ಉಳಿಸಿಕೊಂಡು ಬಂದಿದೆ. ಪ್ರಸ್ತುತ ಭಾರತ ಸರ್ಕಾರವು ರಾಜತಾಂತ್ರಿಕ ಮಾತುಕತೆಗೆ ಕರೆ ನೀಡಿದೆ ಮತ್ತು ಆ ಪ್ರದೇಶದಲ್ಲಿರುವ ಭಾರತೀಯ ನಾಗರಿಕರಿಗೆ ಮುನ್ನೆಚ್ಚರಿಕೆಗಳನ್ನು ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ದಾಳಿಗಳು ನಡೆಯುವ ಎರಡು ದಿನಗಳ ಮೊದಲು ಇಸ್ರೇಲ್ಗೆ ಭೇಟಿ ನೀಡಿದ್ದರು. ಈ ಭೇಟಿಯನ್ನು ಇರಾನ್ ಅಧಿಕಾರಿಗಳು ಈಗ ವಿಮರ್ಶಾತ್ಮಕವಾಗಿ ಉಲ್ಲೇಖಿಸುತ್ತಿದ್ದಾರೆ. ಕೆಲವು ವಿಶ್ಲೇಷಕರು ಭಾರತವು ಎಲ್ಲಾ ಪಕ್ಷಗಳೊಂದಿಗೆ ಹೊಂದಿರುವ ತನ್ನ ಉತ್ತಮ ಬಾಂಧವ್ಯವನ್ನು ಬಳಸಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು ಎಂದು ವಾದಿಸಿದರೆ, ಇನ್ನು ಕೆಲವರು ಭಾರತವು ಯಾವುದಾದರೂ ಒಂದು ಕಡೆ ಹೆಚ್ಚು ಒಲವು ತೋರಿದರೆ, ಅದರಿಂದ ಆಗುವ ಪ್ರತಿಕೂಲ ಪರಿಣಾಮಗಳು ದೊಡ್ಡದು.
ಸದ್ಯದ ಜಾಗತಿಕ ರಾಜಕೀಯ ಚಿತ್ರಣವೂ ವೇಗವಾಗಿ ಬದಲಾಗುತ್ತಿದೆ. ಅಮೆರಿಕವು ದೀರ್ಘಕಾಲದವರೆಗೆ ಮಧ್ಯಪ್ರಾಚ್ಯದ ಮಿಲಿಟರಿ ವ್ಯವಹಾರಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದರೆ, ಅದು ಏಷ್ಯಾದ ಮೇಲಿನ ತನ್ನ ಹಿಡಿತ ಮತ್ತು ಸಂಪನ್ಮೂಲಗಳನ್ನು ಕಡಿಮೆ ಮಾಡಬೇಕಾಗಬಹುದು. ಅಂತಹ ಬದಲಾವಣೆಯು ಚೀನಾಕ್ಕೆ ವರದಾನವಾದರೆ ಅಚ್ಚರಿಯಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. ಭಾರತವು ಏಷ್ಯಾದಲ್ಲಿ ತನ್ನ ಪ್ರಾದೇಶಿಕ ಪ್ರಭಾವವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ, ಅಮೆರಿಕದ ಈ ಬದಲಾವಣೆಯು ಭಾರತದ ಮೇಲೆ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ಭಾರತ ಈ ಬಿಕ್ಕಟ್ಟಿಗೆ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಇಡೀ ಜಗತ್ತು ಕುತೂಹಲದಿಂದ ಗಮನಿಸುತ್ತಿದೆ.

