
ಮರಿಯೊಂದಿಗೆ ನೀರಾನೆ (ಚಿತ್ರ- ಫ್ರೀಪಿಕ್)
ಶಿವಮೊಗ್ಗದಲ್ಲಿ ನೀರಾನೆ ದಾಳಿಗೆ ವೈದ್ಯೆ ಸಾವು: ನೋಡಲು ಸಾಧು ಪ್ರಾಣಿ.. ಆದರೆ ಯಾಕೆ ಎಷ್ಟು ಅಪಾಯಕಾರಿ?
ಶಿವಮೊಗ್ಗದ ಹುಲಿಧಾಮದಲ್ಲಿ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ, ಗರ್ಭಿಣಿ ನೀರಾನೆ ದಾಳಿಗೆ ಬಲಿಯಾದ ಘಟನೆ ಆಘಾತಕಾರಿ. ಈ ಘಟನೆ ಕಾಡುಪ್ರಾಣಿಗಳ ನಿರ್ವಹಣೆ ಅಪಾಯವನ್ನು ವಿವರಿಸಿದೆ.
ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿಧಾಮದಲ್ಲಿ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ಗರ್ಭಿಣಿ ನೀರಾನೆಯ (Hippopotamus) ದಾಳಿಗೆ ಬಲಿಯಾದ ಘಟನೆ ಅತ್ಯಂತ ಆಘಾತಕಾರಿ. ಈ ಘಟನೆಯು ಕಾಡುಪ್ರಾಣಿಗಳ ನಿರ್ವಹಣೆ ವೃತ್ತಿಯಲ್ಲಿನ ಅಪಾಯಗಳನ್ನು ಮತ್ತು ಅವುಗಳ ಮೂಲ ಪ್ರವೃತ್ತಿಯನ್ನು ನೆನಪಿಸುವಂತಿದೆ. ವನ್ಯಜೀವಿಗಳ ನಿರ್ವಹಣೆ ಎನ್ನುವುದು ಎರಡು ಅಲಗಿನ ಕತ್ತಿಯ ಮೇಲಿನ ನಡಿಗೆಯಿದ್ದಂತೆ ಎಂಬುದನ್ನು ಈ ದುರಂತ ಸಾಬೀತುಪಡಿಸಿದೆ. ಹಿನ್ನೆಲೆಯಲ್ಲಿ ನೀರಾನೆಗಳ ನೈಜ ಗುಣಲಕ್ಷಣಗಳು ಹಾಗೂ ಮೃಗಾಲಯದಲ್ಲಿ ಅವುಗಳ ನಿರ್ವಹಣೆಯ ಕುರಿತಾದ ವಿವರವಾದ ವರದಿ ಇಲ್ಲಿದೆ.
ನೋಡಲು ಸಾಧು, ಆದರೆ ಅತ್ಯಂತ ಅಪಾಯಕಾರಿ
ನೀರಾನೆಗಳು ಮೇಲ್ನೋಟಕ್ಕೆ ಸೋಮಾರಿಗಳಂತೆ ಮತ್ತು ಸಾಧು ಪ್ರಾಣಿಗಳಂತೆ ಕಂಡರೂ, ವಾಸ್ತವದಲ್ಲಿ ಅವು ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಸಸ್ತನಿಗಳಲ್ಲಿ ಒಂದು. ಆಫ್ರಿಕಾ ಖಂಡದಲ್ಲಿ ಸಿಂಹ, ಹುಲಿ, ಚಿರತೆ ಅಥವಾ ಆನೆಗಳಿಗಿಂತ ಹೆಚ್ಚು ಮನುಷ್ಯರನ್ನು ಬಲಿಪಡೆಯುವುದು ಇದೇ ನೀರಾನೆಗಳು. ಅಂಕಿಅಂಶಗಳ ಪ್ರಕಾರ ವರ್ಷಕ್ಕೆ ಸರಾಸರಿ 500ಕ್ಕೂ ಹೆಚ್ಚು ಮಂದಿ ಜಾಗತಿಕವಾಗಿ ಇವುಗಳ ದಾಳಿಗೆ ಬಲಿಯಾಗುತ್ತಾರೆ. ಇವುಗಳ ದವಡೆ ಮತ್ತು ಕೋರೆಹಲ್ಲುಗಳು ಎಷ್ಟೊಂದು ಬಲಿಷ್ಠವಾಗಿರುತ್ತವೆ ಎಂದರೆ, ನೀರಿನಲ್ಲಿರುವ ಒಂದು ಸಣ್ಣ ದೋಣಿಯನ್ನು ಒಂದೇ ಕಡಿತಕ್ಕೆ ಎರಡು ತುಂಡು ಮಾಡಬಲ್ಲ ಸಾಮರ್ಥ್ಯ ಹೊಂದಿವೆ. ಭಾರಿ ಗಾತ್ರದ ದೇಹವಿದ್ದರೂ, ನೀರಾನೆಗಳು ಗಂಟೆಗೆ ಸುಮಾರು 30 ಕಿಲೋಮೀಟರ್ ವೇಗದಲ್ಲಿ ಓಡಬಲ್ಲವು. ಹೀಗಾಗಿ ಒಮ್ಮೆ ಇವು ಮನುಷ್ಯರನ್ನು ಅಟ್ಟಿಸಿಕೊಂಡು ಬಂದರೆ ಅವರಿಂದ ತಪ್ಪಿಸಿಕೊಳ್ಳುವುದು ಬಹುತೇಕ ಅಸಾಧ್ಯ ಎನ್ನುತ್ತಾರೆ ವನ್ಯ ಜೀವಿ ತಜ್ಱರು.
ಚಿತ್ರ ಫ್ರೀಪಿಕ್
ವಿಶಿಷ್ಟ ಗುಣಲಕ್ಷಣಗಳು, ಆಕ್ರಮಣಶೀಲ
ಡಾ. ಸಮೀಕ್ಷಾ ಅವರ ಮೇಲೆ ದಾಳಿ ಮಾಡಿದ ನೀರಾನೆ ಗರ್ಭಿಣಿ ಆಗಿತ್ತು ಎಂಬುದು ಈ ಘಟನೆಯಲ್ಲಿ ಗಮನಿಸಬೇಕಾದ ಅತ್ಯಂತ ಪ್ರಮುಖ ಅಂಶ. ನೀರಾನೆಗಳು ತಮ್ಮ ಪ್ರಾಂತ್ಯದ ಬಗ್ಗೆ, ವಿಶೇಷವಾಗಿ ನೀರಿನಲ್ಲಿರುವಾಗ ಅತಿ ಹೆಚ್ಚು ರಕ್ಷಣಾತ್ಮಕ ಭಾವನೆ ಹೊಂದಿರುತ್ತವೆ. ತಮ್ಮ ಜಾಗಕ್ಕೆ ಬೇರೆ ಪ್ರಾಣಿ ಅಥವಾ ಮನುಷ್ಯರು ಬಂದರೆ ಅವು ತಕ್ಷಣವೇ ಆಕ್ರಮಣಕಾರಿ ಆಗುತ್ತವೆ. ಅದರಲ್ಲೂ ಗರ್ಭಿಣಿಯಾಗಿರುವಾಗ ಅಥವಾ ಮರಿಗಳಿದ್ದಾಗ ಹೆಣ್ಣು ನೀರಾನೆಗಳ ಆಕ್ರಮಣಶೀಲತೆ ನೂರ್ಮಡಿಯಾಗುತ್ತದೆ. ಹತ್ತಿರ ಬರುವವರನ್ನು ತಮ್ಮ ಮರಿಗೆ ಅಪಾಯ ತಂದೊಡ್ಡುವ ಶತ್ರುಗಳೆಂದೇ ಅವು ಭಾವಿಸುತ್ತವೆ. ನೀರಾನೆಗಳು ಹಗಲಿನಲ್ಲಿ ನೀರಿನಲ್ಲಿ ವಿಶ್ರಾಂತಿ ಪಡೆದು, ರಾತ್ರಿ ವೇಳೆ ಆಹಾರ ಹುಡುಕಲು ಮತ್ತು ಓಡಾಡಲು ಸಕ್ರಿಯವಾಗುತ್ತವೆ. ಡಾ. ಸಮೀಕ್ಷಾ ಅವರು ರಾತ್ರಿ 11.45 ರ ಸುಮಾರಿಗೆ ತಾಪಮಾನ ತಪಾಸಣೆಗೆ ಹೋದದ್ದು ಕೂಡ ಪ್ರಾಣಿಯ ಕೋಪಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
ನೀರಾನೆ ದಾಳಿಯಿಂದ ಮೃತರಾದ ಪ್ರಾಣಿವೈದ್ಯೆ ಡಾ. ಸಮೀಕ್ಷಾ ರೆಡ್ಡಿ
"ನೀರಾನೆಗಳು ನೋಡಲು ಸಾಧುವಾಗಿ ಕಂಡರೂ, ವಾಸ್ತವದಲ್ಲಿ ಅವು ಮೃದು ಸ್ವಭಾವದ ಪ್ರಾಣಿಗಳಲ್ಲ; ಬದಲಾಗಿ ಅತ್ಯಂತ ಆಕ್ರಮಣಕಾರಿ ಪ್ರವೃತ್ತಿಯನ್ನು ಹೊಂದಿರುತ್ತವೆ. ಇತರ ಕಾಡುಪ್ರಾಣಿಗಳಿಗೆ ಚಿಕಿತ್ಸೆ ನೀಡುವಂತೆ ಇವುಗಳಿಗೆ ಸುಲಭವಾಗಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಇವುಗಳ ಆಕ್ರಮಣಶೀಲತೆ ಎಷ್ಟಿರುತ್ತದೆಂದರೆ, ತಮ್ಮ ವ್ಯಾಪ್ತಿಯ ನೀರಿನಲ್ಲಿ ಸಾಗುವ ಬೋಟ್‌ಗಳನ್ನು ಸಹ ಇವು ಬಿಡದೆ ಬೆನ್ನಟ್ಟುತ್ತವೆ. ಸುಮಾರು ಒಂದು ಅಡಿಯಷ್ಟು ಉದ್ದದ ಬೃಹತ್ ಹಾಗೂ ಹರಿತವಾದ ಹಲ್ಲುಗಳನ್ನು ಹೊಂದಿರುವ ನೀರಾನೆಗಳು, ಜಲಚರಗಳ ಬೇಟೆಗಾರನಾದ ಮೊಸಳೆಗಳನ್ನೇ ಕಚ್ಚಿ ಸಾಯಿಸುವಷ್ಟು ಬಲಿಷ್ಠವಾಗಿರುತ್ತವೆ. ಅದರಲ್ಲೂ ಹೆಣ್ಣು ನೀರಾನೆ ಗರ್ಭಿಣಿಯಾಗಿರುವಾಗ ಮತ್ತಷ್ಟು ಅಪಾಯಕಾರಿ ಹಾಗೂ ತೀವ್ರ ಆಕ್ರಮಣಕಾರಿಯಾಗಿ ವರ್ತಿಸುತ್ತದೆ." ವನ್ಯಜೀವಿ ತಜ್ಞರಾದ ಜೋಸೆಫ್ ಹೂವರ್ ಹೇಳಿದ್ದಾರೆ.
ಹಿಂದೆಯೂ ಪಾಲಕರನ್ನು ಕೊಂದಿದ್ದವು ನೀರಾನೆಗಳು
ಸಮೀಕ್ಷಾ ರೆಡ್ಡಿ ಪ್ರಕರಣಕ್ಕಿಂತ ಹಿಂದೆಯೂ ಇಂಥದ್ದೇ ಘಟನೆಗಳು ಭಾರತದಲ್ಲಿ ವರದಿಯಾಗಿವೆ. 2024ರಲ್ಲಿ ಜಾರ್ಖಂಡ್ನ ರಾಂಚಿಯ ಬಿರ್ಸಾ ಜೈವಿಕ ಉದ್ಯಾನವನದಲ್ಲಿ ಸಂತೋಷ್ ಕುಮಾರ್ ಮಹತೋ ಎಂಬ ಮೃಗಾಲಯದ ಸಿಬ್ಬಂದಿ, ನೀರಾನೆಯ ಮರಿಯೊಂದನ್ನು ಬೇರೆಡೆಗೆ ಸ್ಥಳಾಂತರಿಸಲು ಯತ್ನಿಸುತ್ತಿದ್ದಾಗ, ತಾಯಿ ನೀರಾನೆ ಏಕಾಏಕಿ ದಾಳಿ ಮಾಡಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರು ಕೆಲ ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಉತ್ತರ ಪ್ರದೇಶದ ಲಕ್ನೋದ ನವಾಬ್ ವಾಜಿದ್ ಅಲಿ ಷಾ ಮೃಗಾಲಯದಲ್ಲಿ 2023ರ ಡಿಸೆಂಬರ್ನಲ್ಲಿ ಸೂರಜ್ ಎಂಬ ಸ್ವಚ್ಛತಾ ಸಿಬ್ಬಂದಿ, ನೀರಾನೆಯ ಆವರಣವನ್ನು ಸ್ವಚ್ಛಗೊಳಿಸಲು ಒಳಹೋದಾಗ, ನೀರಾನೆ ಅವರ ಮೇಲೆ ದಾಳಿ ಮಾಡಿ ಬಲಿಪಡೆದಿತ್ತು. ಅಂದ ಹಾಗೆ ಭಾರತದಲ್ಲಿ ನೀರಾನೆಗಳು ಕೇವಲ ಮೃಗಾಲಯಗಳಲ್ಲಿ ಮಾತ್ರ ಇರುವುದರಿಂದ, ಈ ಎಲ್ಲಾ ದಾಳಿಗಳು ಮೃಗಾಲಯದ ಸಿಬ್ಬಂದಿ ಅಥವಾ ವೈದ್ಯರ ಮೇಲೆಯೇ ನಡೆದಿವೆ ಹೊರತು, ಸಾಮಾನ್ಯ ಜನರ ಮೇಲೆ ಆಗಿಲ್ಲ.
ಕಾಡುಪ್ರಾಣಿಗಳು ಎಷ್ಟೇ ವರ್ಷ ಮನುಷ್ಯರೊಡನೆ ಮೃಗಾಲಯದಲ್ಲಿದ್ದರೂ ಅವುಗಳ ಮೂಲ ಕಾಡು ಪ್ರವೃತ್ತಿ ಎಂದಿಗೂ ಬದಲಾಗುವುದಿಲ್ಲ. ಅಮೆರಿಕ ಮತ್ತು ಯುರೋಪ್ ಮೃಗಾಲಯಗಳಲ್ಲಿ ಜಗತ್ತಿನಾದ್ಯಂತ ಅತ್ಯುತ್ತಮ ತರಬೇತಿ ಪಡೆದ ಪ್ರಾಣಿ ಪಾಲಕರು ಮತ್ತು ಪಶುವೈದ್ಯರೇ ನೀರಾನೆಗಳ ದಾಳಿಗೆ ತುತ್ತಾದ ಹಲವು ಉದಾಹರಣೆಗಳಿವೆ. ಸಣ್ಣ ನಿರ್ಲಕ್ಷ್ಯ ಅಥವಾ ಪ್ರಾಣಿಯ ಮನಸ್ಥಿತಿಯ ಬದಲಾವಣೆಯನ್ನು ಅರಿಯಲು ವಿಫಲವಾದಾಗ ಇಂತಹ ಘಟನೆಗಳು ಸಂಭವಿಸಿವೆ. ಆಫ್ರಿಕಾದ ರಕ್ಷಿತಾರಣ್ಯಗಳಲ್ಲಿ ಪ್ರಾಣಿಗಳಿಗೆ ರೇಡಿಯೋ ಕಾಲರ್ ಅಳವಡಿಸುವಾಗ ಅಥವಾ ಚಿಕಿತ್ಸೆ ನೀಡಲು ಹೋದಾಗ ಅರಿವಳಿಕೆ ಸರಿಯಾಗಿ ಕೆಲಸ ಮಾಡದೆ ವೈದ್ಯರ ಮೇಲೆ ನೀರಾನೆಗಳು ಎರಗಿದ ಪ್ರಕರಣಗಳು ಸಾಕಷ್ಟಿವೆ. ಚೀನಾ ಮತ್ತು ತೈವಾನ್‌ನಂತಹ ಏಷ್ಯನ್ ಮೃಗಾಲಯಗಳಲ್ಲೂ ಪ್ರಾಣಿಗಳ ಸ್ವಚ್ಛತೆ ಅಥವಾ ತಪಾಸಣೆ ವೇಳೆ ನೀರಾನೆಗಳು ದಿಢೀರ್ ರೊಚ್ಚಿಗೆದ್ದು ಸಿಬ್ಬಂದಿಯನ್ನು ಕೊಂದ ಅಥವಾ ಗಂಭೀರವಾಗಿ ಗಾಯಗೊಳಿಸಿದ ವರದಿಗಳಿವೆ.
ಸಂಗ್ರಹ ಚಿತ್ರ (ಫ್ರೀಪಿಕ್)
ಭಾರತದಲ್ಲಿ ಎಷ್ಟು ನಿರಾನೆಗಳಿವೆ?
ಭಾರತದ ಮೃಗಾಲಯಗಳಲ್ಲಿ ಒಟ್ಟು ಎಷ್ಟು ನೀರಾನೆಗಳಿವೆ ಎಂಬುದರ ನಿಖರವಾದ ಮತ್ತು ಪ್ರಸ್ತುತ ಒಟ್ಟು ಸಂಖ್ಯೆ ಲಭ್ಯವಿಲ್ಲ, ಏಕೆಂದರೆ ಹೊಸ ಜನನಗಳು, ಸಾವುಗಳು ಮತ್ತು ಪ್ರಾಣಿ ವಿನಿಮಯ ಕಾರ್ಯಕ್ರಮಗಳಿಂದಾಗಿ ಈ ಸಂಖ್ಯೆ ಆಗಾಗ್ಗೆ ಬದಲಾಗುತ್ತಿರುತ್ತದೆ. ಕೇಂದ್ರೀಯ ಮೃಗಾಲಯ ಪ್ರಾಧಿಕಾರವು ಇದರ ನಿರ್ವಹಣೆ ಮತ್ತು ವಾರ್ಷಿಕ ಗಣತಿಯನ್ನು ಮಾಡುತ್ತದೆ. ಆದಾಗ್ಯೂದೇಶಾದ್ಯಂತ 50ಕ್ಕೂ ಹೆಚ್ಚು ನೀರಾನೆಗಳಿವೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಸಮೀಪದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇತ್ತೀಚಿನ ವರದಿಗಳ ಪ್ರಕಾರ ಸುಮಾರು 8 ನೀರಾನೆಗಳಿವೆ. ಚೆನ್ನೈನ ವಂಡಲೂರ್ ಮೃಗಾಲಯದಲ್ಲಿ ಕೂಡ ಸುಮಾರು 8 ನೀರಾನೆಗಳಿವೆ. ಜಮ್ಮುವಿನ ಜಂಬು ಮೃಗಾಲಯಕ್ಕೆ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಚೆನ್ನೈನಿಂದ 2 ನೀರಾನೆಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಅದೇ ರೀತಿ ಮೈಸೂರು ಮೃಗಾಲಯ, ನವದೆಹಲಿ, ಹೈದರಾಬಾದ್, ತಿರುವನಂತಪುರಂ, ಶಿವಮೊಗ್ಗ ಸೇರಿದಂತೆ ಹಲವು ದೇಶದ ಹಲವು ದೊಡ್ಡ ಮೃಗಾಲಯಗಳಲ್ಲಿ ನೀರಾನೆಗಳಿವೆ.
ಮೃಗಾಲಯಗಳಲ್ಲಿ ನೀರಾನೆಗಳ ನಿರ್ವಹಣಾ ವಿಧಾನ
ಮೃಗಾಲಯಗಳಲ್ಲಿ ಇಂತಹ ಬೃಹತ್ ಮತ್ತು ಅಪಾಯಕಾರಿ ಪ್ರಾಣಿಗಳ ನಿರ್ವಹಣೆಗೆ ಕಟ್ಟುನಿಟ್ಟಾದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು ಇರುತ್ತವೆ. ಪ್ರಾಣಿ ಪಾಲಕರು ಅಥವಾ ವೈದ್ಯರು ನೀರಾನೆಯಿರುವ ಆವರಣದ ಒಳಗೆ ಪ್ರಾಣಿಯೊಂದಿಗೆ ನೇರ ಸಂಪರ್ಕಕ್ಕೆ ಬರುವಂತಿಲ್ಲ. ಪ್ರಾಣಿಗಳಿಗೆ ಆಹಾರ ನೀಡುವುದು ಮತ್ತು ಚಿಕಿತ್ಸೆ ಮಾಡುವುದು ಪ್ರತ್ಯೇಕ ಗೇಟ್, ಕಬ್ಬಿಣದ ಸರಳುಗಳು ಅಥವಾ ತಡೆಗೋಡೆಗಳ ಮೂಲಕವೇ ನಡೆಯಬೇಕು. ಪ್ರಾಣಿಯನ್ನು ಒಂದು ಕಡೆ ಕೂಡಿಹಾಕಿ, ಸುರಕ್ಷಿತ ಅಂತರದಿಂದಲೇ ತಪಾಸಣೆ ಮಾಡಬೇಕಾಗುತ್ತದೆ. ಥರ್ಮಲ್ ಕ್ಯಾಮೆರಾ ಹಾಗೂ ಸಿಸಿಟಿವಿ ಮೂಲಕ ದೂರದಿಂದಲೇ ನಿಗಾ ವಹಿಸುವ ತಂತ್ರಜ್ಞಾನದ ಬಳಕೆಯ ನಿಯಮಗಳಿವೆ. ಆದರೆ, ಈ ದುರಂತ ಘಟನೆಯಲ್ಲಿ ವೈದ್ಯರು ಥರ್ಮಲ್ ಕ್ಯಾಮೆರಾ ಬಳಸಲು ನೇರವಾಗಿ ಆವರಣದೊಳಗೆ ಪ್ರವೇಶಿಸಿದ್ದು ಭಾರಿ ಅನಾಹುತಕ್ಕೆ ಕಾರಣವಾಯಿತು.
"ಯುವ ಪಶುವೈದ್ಯೆಯ ದಾರುಣ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಕಾರಣ. ಘಟನೆ ನಡೆದಾಗ ವೈದ್ಯೆಯ ಜೊತೆ ಅಗತ್ಯವಿದ್ದಷ್ಟು ಅರಣ್ಯ ಸಿಬ್ಬಂದಿ ಇರಲಿಲ್ಲ; ಕೇವಲ ಒಂದಿಬ್ಬರು ಕೆಳಹಂತದ ಸಿಬ್ಬಂದಿಯಷ್ಟೇ ಇದ್ದರು ಎಂಬ ಮಾಹಿತಿ ನಮಗಿದೆ. ಅರಣ್ಯ ಇಲಾಖೆಗೆ ತನ್ನದೇ ಆದ ಕಾಯಂ ಪಶುವೈದ್ಯರನ್ನು ನೇಮಿಸಿಕೊಳ್ಳುವಂತೆ ನಾವು ಮೊದಲಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೂ, ಯಾವುದೇ ನೇಮಕಾತಿ ಮಾಡಿಕೊಳ್ಳದೆ ಪಶುಸಂಗೋಪನಾ ಇಲಾಖೆಯ ವೈದ್ಯರನ್ನು ಎರವಲು (Deputation) ಪಡೆದು ಕೆಲಸ ನಡೆಸಲಾಗುತ್ತಿದೆ. ಈ ದುರಂತದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಗೆ ಎರವಲು ಸೇವೆಗೆ ತೆರಳಿರುವ ನಮ್ಮ ಎಲ್ಲಾ ಪಶುವೈದ್ಯರನ್ನು ತಕ್ಷಣವೇ ಮಾತೃ ಇಲಾಖೆಗೆ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬರುವ ಸೋಮವಾರ ಸರ್ಕಾರಕ್ಕೆ ಅಧಿಕೃತ ಪತ್ರ ಬರೆಯಲಿದ್ದೇವೆ." ಎಂದು ಕರ್ನಾಟಕ ರಾಜ್ಯ ಪಶುವೈದ್ಯರ ಸಂಘದ ಅಧ್ಯಕ್ಷರಾದ ಡಾ. ಶಿವಶರಣಪ್ಪ ಯಲಗೋಡು 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡುತ್ತಾ ಅಭಿಪ್ರಾಯಪಟ್ಟಿದ್ದಾರೆ.
ಸಂಗ್ರಹ ಚಿತ್ರ (ಕೃಪೆ- ಫ್ರೀಪಿಕ್)
ನೀರಾನೆಗಳ ಮೂಲ ಎಲ್ಲಿ?
ನೀರಾನೆಗಳು ಮೂಲತಃ ಉಪ-ಸಹಾರನ್ ಆಫ್ರಿಕಾದ (Sub-Saharan Africa) ನದಿಗಳು ಮತ್ತು ಸರೋವರಗಳಲ್ಲಿ ವಾಸಿಸುವ ಬೃಹತ್ ಸಸ್ತನಿಗಳು. ಗ್ರೀಕ್ ಭಾಷೆಯಲ್ಲಿ ಇದರ ಅರ್ಥ 'ನದಿ ಕುದುರೆ' ಎಂದಾದರೂ, ಜೈವಿಕವಾಗಿ ಇವು ಕುದುರೆಗಳಿಗಿಂತ ಹೆಚ್ಚಾಗಿ ತಿಮಿಂಗಿಲಗಳು ಮತ್ತು ಡಾಲ್ಫಿನ್‌ಗಳಿಗೆ ಅತ್ಯಂತ ಹತ್ತಿರದ ಸಂಬಂಧಿಗಳಾಗಿವೆ. ವಿಜ್ಞಾನಿಗಳ ಪ್ರಕಾರ, ಸುಮಾರು 55 ದಶಲಕ್ಷ ವರ್ಷಗಳ ಹಿಂದೆ ನೀರಾನೆಗಳು ಮತ್ತು ತಿಮಿಂಗಿಲಗಳು ಒಂದೇ ಪೂರ್ವಜರಿಂದ ಕವಲೊಡೆದು ವಿಕಸನಗೊಂಡಿವೆ. ಆನೆ ಮತ್ತು ಬಿಳಿ ಘೇಂಡಾಮೃಗದ ನಂತರ ಭೂಮಿಯ ಮೇಲಿನ ಮೂರನೇ ಅತಿದೊಡ್ಡ ಭೂ-ಸಸ್ತನಿಗಳಾಗಿರುವ ಇವು, ತಮ್ಮ ಸೂಕ್ಷ್ಮವಾದ ಚರ್ಮವನ್ನು ಸೂರ್ಯನ ಬಿಸಿಲಿನಿಂದ ರಕ್ಷಿಸಿಕೊಳ್ಳಲು ವಿಶಿಷ್ಟವಾದ ಕೆಂಪು ಬಣ್ಣದ ದ್ರವವನ್ನು ಸ್ರವಿಸುತ್ತವೆ. ಇದು ಬ್ಯಾಕ್ಟೀರಿಯಾ ನಿವಾರಕವಾಗಿ ಮತ್ತು ನೈಸರ್ಗಿಕ ಸನ್‌ಸ್ಕ್ರೀನ್ ಆಗಿ ಕೆಲಸ ಮಾಡುತ್ತದೆ.
ವರ್ತನೆಯ ದೃಷ್ಟಿಯಿಂದ ನೋಡಿದರೆ, ಸಾಧುವಾಗಿ ಕಾಣುವ ನೀರಾನೆಗಳು ವಾಸ್ತವದಲ್ಲಿ ಆಫ್ರಿಕಾದ ಅತ್ಯಂತ ಆಕ್ರಮಣಕಾರಿ ಮತ್ತು ಅಪಾಯಕಾರಿ ಪ್ರಾಣಿ. ಇವು ಅರೆ-ಜಲಚರಗಳಾಗಿದ್ದು , ಹಗಲಿನ ಬಹುಪಾಲು ಸಮಯವನ್ನು ನೀರು ಅಥವಾ ಕೆಸರಿನಲ್ಲಿ ಗುಂಪುಗುಂಪಾಗಿ ಕಳೆಯುವ ಮೂಲಕ ತಮ್ಮ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳುತ್ತವೆ. ನೀರಿನಲ್ಲಿ ತಮ್ಮ ಭೂಪ್ರದೇಶದ ಬಗ್ಗೆ ತೀವ್ರವಾದ ಸ್ವಾಮ್ಯವನ್ನು ಹೊಂದಿರುವ ಇವು, ತಮ್ಮ ಜಾಗಕ್ಕೆ ಬರುವ ದೋಣಿಗಳು ಅಥವಾ ಯಾವುದೇ ಜೀವಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ತಮ್ಮ ಬೃಹತ್ ದವಡೆಗಳಿಂದ ದಾಳಿ ಮಾಡುತ್ತವೆ. ಸಂಪೂರ್ಣ ಸಸ್ಯಾಹಾರಿಗಳಾದ ಈ ಪ್ರಾಣಿಗಳು, ನೀರಿನಾಚೆ ಬಂದು ಭೂಮಿಯ ಮೇಲೆ ಒಂಟಿಯಾಗಿ ಹುಲ್ಲು ಮೇಯುತ್ತವೆ.

