Oscar Award 2026| ಯಾರ ಮುಡಿಗೇರಲಿದೆ ಆಸ್ಕರ್‌ ಟ್ರೋಫಿ? ಕಾರ್ಯಕ್ರಮದ ವೀಕ್ಷಣೆ ಎಲ್ಲಿ ಮತ್ತು ಯಾವಾಗ?
x

98ನೇ ಆಸ್ಕರ್ ಪ್ರಶಸ್ತಿ ರೇಸ್‌ಗೆ ಕ್ಷಣಗಣನೆ ಆರಂಭವಾಗಿದೆ. 

Oscar Award 2026| ಯಾರ ಮುಡಿಗೇರಲಿದೆ ಆಸ್ಕರ್‌ ಟ್ರೋಫಿ? ಕಾರ್ಯಕ್ರಮದ ವೀಕ್ಷಣೆ ಎಲ್ಲಿ ಮತ್ತು ಯಾವಾಗ?

ಮೊದಲ ಆಸ್ಕರ್ ಪ್ರಶಸ್ತಿ ನಾಯಿಗೆ ಸಿಗಬೇಕಿತ್ತೇ? 'ಆಸ್ಕರ್' ಎಂಬ ಹೆಸರು ಬಂದಿದ್ದು ಹೇಗೆ? 2026ರ ನಾಮನಿರ್ದೇಶಿತ ಚಿತ್ರಗಳು ಮತ್ತು ಭಾರತದ ಹೆಮ್ಮೆಯ ಸಾಕ್ಷ್ಯಚಿತ್ರಗಳ ಬಗ್ಗೆ ತಿಳಿಯಿರಿ.


Click the Play button to hear this message in audio format

ವಿಶ್ವದ ಅತ್ಯಂತ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಎಂದೇ ಪರಿಗಣಿಸಲ್ಪಟ್ಟಿರುವ ಆಸ್ಕರ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ವರ್ಷದ 'ಅತ್ಯುತ್ತಮ ಚಿತ್ರ' ವಿಭಾಗದಲ್ಲಿ ಒಟ್ಟು ಹತ್ತು ಸಿನಿಮಾಗಳು ಅಂತಿಮ ಸುತ್ತಿನಲ್ಲಿ ಸ್ಪರ್ಧಿಸುತ್ತಿದ್ದು, ಭಾನುವಾರ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ.

ಈ ಬಾರಿಯ ಪ್ರಶಸ್ತಿ ರೇಸ್‌ನಲ್ಲಿ ರಿಯಾನ್ ಕೂಗ್ಲರ್ ನಿರ್ದೇಶನದ 'ಸಿನ್ನರ್ಸ್' ಮತ್ತು ಪಾಲ್ ಥಾಮಸ್ ಆಂಡರ್ಸನ್ ಅವರ 'ಬ್ಯಾಟಲ್ ಆಫ್ಟರ್ ಬ್ಯಾಟಲ್' ಚಿತ್ರಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ 'ಹ್ಯಾಮ್ನೆಟ್' ಅಥವಾ 'ದ ಸೀಕ್ರೆಟ್ ಏಜೆಂಟ್' ಸಿನಿಮಾಗಳೂ ರೇಸ್‌ನಲ್ಲಿರುವುದು ಗಮನಾರ್ಹ.

ಅಂತಿಮ ನಾಮನಿರ್ದೇಶನಗೊಂಡಿರುವ ಚಿತ್ರಗಳಿವು..

ಯೋರ್ಗೊಸ್ ಲಾಂಟಿಮೋಸ್ ನಿರ್ದೇಶನದ 'ಬೊಗೈನ್ವಿಲ್ಲಾ' ಒಂದು ವಿಲಕ್ಷಣ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದರೆ, ಬ್ರಾಡ್ ಪಿಟ್ ನಟನೆಯ 'F1: ದಿ ಫಿಲ್ಮ್' ಫಾರ್ಮುಲಾ 1 ರೇಸಿಂಗ್ ಜಗತ್ತನ್ನು ತೆರೆಯ ಮೇಲೆ ತಂದಿದೆ. ಖ್ಯಾತ ನಿರ್ದೇಶಕ ಗಿಲ್ಲೆರ್ಮೊ ಡೆಲ್ ಟೊರೊ ಅವರ ಕನಸಿನ ಪ್ರಾಜೆಕ್ಟ್ 'ಫ್ರಾಂಕೆನ್‌ಸ್ಟೈನ್' ಸಿನಿಮಾವು ತನ್ನ ಅದ್ಭುತ ಸೆಟ್‌ಗಳು ಮತ್ತು ಕಾಸ್ಟ್ಯೂಮ್‌ಗಳ ಮೂಲಕ ಗಮನ ಸೆಳೆದಿದೆ. ವಿಲಿಯಂ ಶೇಕ್ಸ್‌ಪಿಯರ್ ಮತ್ತು ಅವರ ಪತ್ನಿಯ ಜೀವನದಿಂದ ಪ್ರೇರಿತವಾದ 'ಹ್ಯಾಮ್ನೆಟ್' ಚಿತ್ರಕ್ಕೆ ಆಸ್ಕರ್ ವಿಜೇತೆ ಕ್ಲೋಯ್ ಝಾವೊ ನಿರ್ದೇಶನವಿದೆ.

'ಸಿನ್ನರ್ಸ್' ನಂತಹ ಚಲನಚಿತ್ರಗಳು ಪ್ರಮುಖ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡು ಕುತೂಹಲ ಮೂಡಿಸಿವೆ.

ಯುವ ನಟ ತಿಮೋತಿ ಚಾಲಮೆಟ್ ನಟನೆಯ 'ಸುಪ್ರೀಂ ಮಾರ್ಟಿ' ಒಬ್ಬ ಅಂತಾರಾಷ್ಟ್ರೀಯ ಪಿಂಗ್-ಪಾಂಗ್ ಚಾಂಪಿಯನ್‌ನ ಕಥೆಯನ್ನು ಹೇಳುತ್ತದೆ. ಸ್ಟಾರ್ ನಟರಾದ ಲಿಯೊನಾರ್ಡೊ ಡಿಕಾಪ್ರಿಯೊ ಮತ್ತು ಬೆನಿಸಿಯೊ ಡೆಲ್ ಟೊರೊ ಅಭಿನಯದ 'ಬ್ಯಾಟಲ್ ಆಫ್ಟರ್ ಬ್ಯಾಟಲ್' ಸದ್ಯ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಕೌಟುಂಬಿಕ ಹಿನ್ನೆಲೆಯ 'ಸೆಂಟಿಮೆಂಟಲ್ ವ್ಯಾಲ್ಯೂ', ಜನಾಂಗೀಯ ಸಂಘರ್ಷಗಳನ್ನು ವಿಭಿನ್ನವಾಗಿ ಚಿತ್ರಿಸಿರುವ 'ಸಿನ್ನರ್ಸ್', ಬ್ರೆಜಿಲ್‌ನ ಜಾನಪದ ಸೊಗಡಿನ 'ದ ಸೀಕ್ರೆಟ್ ಏಜೆಂಟ್' ಮತ್ತು ಐತಿಹಾಸಿಕ ಕಥಾಹಂದರದ 'ಡ್ರೀಮ್ ಟ್ರೈನ್' ಚಿತ್ರಗಳು ಸಹ ಅಂತಿಮ ಕಣದಲ್ಲಿವೆ. ಇಡೀ ಚಿತ್ರರಂಗದ ಕಣ್ಣು ಈಗ ಭಾನುವಾರದ ಫಲಿತಾಂಶದತ್ತ ನೆಟ್ಟಿದೆ. ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 16ರಂದು ಮುಂಜಾನೆ 4:30ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ವಿಶ್ವದಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ನಾಮನಿರ್ದೇಶನಗಳಲ್ಲಿ ಭಾರತೀಯ ಚಲನಚಿತ್ರವಿದೆಯೇ?

ಭಾರತೀಯ ಚಿತ್ರರಂಗದ ವಿಚಾರಕ್ಕೆ ಬರುವುದಾದರೆ, ಈ ವರ್ಷ ಯಾವುದೇ ಭಾರತೀಯ ಸಿನಿಮಾ ಅಂತಿಮ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಇಶಾನ್ ಖಟ್ಟರ್ ಮತ್ತು ಜಾನ್ವಿ ಕಪೂರ್ ಅಭಿನಯದ, ನೀರಜ್ ಘೈವಾನ್ ನಿರ್ದೇಶನದ ‘ಹೋಮ್‌ಬೌಂಡ್’ ಸಿನಿಮಾ ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತ್ತಾದರೂ ಅಂತಿಮ ಹಂತ ತಲುಪುವಲ್ಲಿ ವಿಫಲವಾಗಿತ್ತು. ಆದರೆ ಭಾರತೀಯ ಮೂಲದ ಗೀತಾ ಗಾಂಧ್ಬೀರ್ ನಿರ್ದೇಶಿಸಿದ ‘ದಿ ಡೆವಿಲ್ ಈಸ್ ಬಿಸಿ’ ಮತ್ತು ‘ದಿ ಪರ್ಫೆಕ್ಟ್ ನೇಬರ್’ ಎಂಬ ಎರಡು ಸಾಕ್ಷ್ಯಚಿತ್ರಗಳು ನಾಮನಿರ್ದೇಶನಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ.

ಆಸ್ಕರ್ ರೇಸ್​​ನಲ್ಲಿ ಭಾರತದ ಐದು ಚಿತ್ರಗಳ ಪೈಕಿ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ 'ಕಾಂತಾರ: ಚಾಪ್ಟರ್ 1' ಮತ್ತು 'ಮಹಾವತಾರ ನರಸಿಂಹ' ನಾಮಿನೇಷನ್​ ರೇಸ್​ನಲ್ಲಿದ್ದವು. ಆದರೆ ಫೈನಲ್​​ ನಾಮಿನೇಷನ್‌ನಲ್ಲಿ ಈ ಎರಡೂ ಕನ್ನಡದ ಸಿನಿಮಾಗಳು ಹಿನ್ನಡೆ ಕಂಡಿತ್ತು.

ಪ್ರಶಸ್ತಿಗೆ 'ಆಸ್ಕರ್' ಎಂಬ ಹೆಸರು ಹೇಗೆ ಬಂತು?

1927 ರಲ್ಲಿ ಎಂಜಿಎಂ ಸ್ಟುಡಿಯೋಸ್‌ನ ಮುಖ್ಯಸ್ಥರಾದ ಲೂಯಿಸ್ ಬಿ. ಮೇಯರ್ ಅವರು ನಟ ಕಾನ್ರಾಡ್ ನಾಗೆಲ್, ನಿರ್ದೇಶಕ ಫ್ರೆಡ್ ನಿಬ್ಲೊ ಮತ್ತು ಚಲನಚಿತ್ರ ನಿರ್ಮಾಪಕ ಫ್ರೆಡ್ ಬೀಟ್ಸನ್ ಸೇರಿದಂತೆ ಇತರ ಪ್ರಮುಖರೊಂದಿಗೆ ಮಹತ್ವದ ಚರ್ಚೆ ನಡೆಸಿದರು. ಚಲನಚಿತ್ರೋದ್ಯಮವನ್ನು ಬಲಪಡಿಸಲು ಮತ್ತು ಕಲಾವಿದರ ಹಾಗೂ ತಾಂತ್ರಿಕ ವರ್ಗದ ಸಾಧನೆಯನ್ನು ಗುರುತಿಸಿ ಗೌರವಿಸಲು ಒಂದು ವಿಶೇಷ ಗುಂಪನ್ನು ರಚಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು.

ಈ ಆಲೋಚನೆಯು ಲಾಸ್ ಏಂಜಲೀಸ್‌ನ ಬಿಲ್ಟ್‌ಮೋರ್ ಹೋಟೆಲ್‌ನಲ್ಲಿ ನಡೆದ ಒಂದು ಔತಣಕೂಟದಲ್ಲಿ ಕಾರ್ಯರೂಪಕ್ಕೆ ಬಂದಿತು. ಆ ಸಭೆಯಲ್ಲಿ ಹಾಲಿವುಡ್‌ನ 36 ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು. ಅದೇ ಸಂದರ್ಭದಲ್ಲಿ 'ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್' (AMPAS) ಎಂಬ ಸಂಸ್ಥೆಯನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮಂಡಿಸಲಾಯಿತು. ಅಲ್ಲಿದ್ದವರೆಲ್ಲರೂ ಈ ಪ್ರಸ್ತಾಪಕ್ಕೆ ಸರ್ವಾನುಮತದ ಒಪ್ಪಿಗೆ ನೀಡಿದ ನಂತರ ಮಾರ್ಚ್ ತಿಂಗಳಿನಲ್ಲಿ ಅಕಾಡೆಮಿಯ ಸ್ಥಾಪನೆಯನ್ನು ಅಧಿಕೃತವಾಗಿ ದೃಢೀಕರಿಸಲಾಗಿತ್ತು. ಹಾಲಿವುಡ್‌ನ ಖ್ಯಾತ ನಟ ಮತ್ತು ನಿರ್ಮಾಪಕರಾದ ಡೌಗ್ಲಾಸ್ ಫೇರ್‌ಬ್ಯಾಂಕ್ಸ್ ಅವರು ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಆದರೆ ಈ ಪ್ರಶಸ್ತಿಗೆ 'ಆಸ್ಕರ್' ಎಂಬ ಹೆಸರು ಬಂದಿದ್ದು ಅಧಿಕೃತ ದಾಖಲೆಗಳಿಂದಲ್ಲ, ಬದಲಾಗಿ ಅಕಾಡೆಮಿಯ ಲೈಬ್ರೇರಿಯನ್ ಮಾರ್ಗರೆಟ್ ಹೆರಿಕ್ ಅವರು ಈ ಪ್ರತಿಮೆಯನ್ನು ನೋಡಿ "ಇದು ನನ್ನ ಅಂಕಲ್ ಆಸ್ಕರ್ ತರಹವೇ ಇದೆ" ಎಂದು ಹೇಳಿದ್ದರಿಂದ ಈ ಹೆಸರು ಜನಪ್ರಿಯವಾಯಿತು ಎಂದು ಹೇಳಲಾಗುತ್ತದೆ.

ಮೊದಲ ಆಸ್ಕರ್ ಅವಾರ್ಡ್ ಒಬ್ಬ ನಾಯಿಗೆ ಸಿಗಬೇಕಿತ್ತು

1929ರ ಮೇ 16ರಂದು ಮೊದಲ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭವು ಕೇವಲ 15 ನಿಮಿಷಗಳ ಕಾಲ ನಡೆದಿತ್ತು. ಅಚ್ಚರಿಯ ವಿಷಯವೆಂದರೆ ಮೊದಲ ಸಮಾರಂಭದಲ್ಲಿ ‘ರಿನ್ ಟಿನ್ ಟಿನ್’ ಎಂಬ ಜರ್ಮನ್ ಶೆಫರ್ಡ್ ನಾಯಿ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತಾದರೂ, ಪ್ರಶಸ್ತಿಯ ಘನತೆ ಉಳಿಸಲು ಅಕಾಡೆಮಿ ಅದನ್ನು ನಿರಾಕರಿಸಿ ಎಮಿಲ್ ಜಾನಿಂಗ್ಸ್‌ಗೆ ಪ್ರಶಸ್ತಿ ನೀಡಿತ್ತು.

`ಶ್ವಾಸ್' ಪ್ರಚಾರಕ್ಕಾಗಿ ನಿಧಿ ಸಂಗ್ರಹಿಸಿದ ಶಾಲಾ ಮಕ್ಕಳು

ಆಸ್ಕರ್ ಪಯಣದಲ್ಲಿ ಇದುವರೆಗೆ ಭಾರತದ ಕೇವಲ ನಾಲ್ಕು ಸಿನಿಮಾಗಳು ಅಂತಿಮ ನಾಮನಿರ್ದೇಶನ ಪಡೆದಿತ್ತು. 1957ರಲ್ಲಿ ‘ಮದರ್ ಇಂಡಿಯಾ’ ಒಂದು ಮತದ ಅಂತರದಲ್ಲಿ ಪ್ರಶಸ್ತಿ ಕಳೆದುಕೊಂಡಿತ್ತು. ಬಳಿಕ ಸಲಾಮ್ ಬಾಂಬೆ (1989), ಲಗಾನ್ (2003), ಮತ್ತು ಶ್ವಾಸ್ (2004) ನಾಮನಿರ್ದೇಶನಗಳನ್ನು ಗಳಿಸಿದವು ಆದರೆ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಲಿಲ್ಲ. ವಿಶೇಷವೆಂದರೆ ಮರಾಠಿ ಸಿನಿಮಾ ‘ಶ್ವಾಸ್’ ಆಸ್ಕರ್‌ಗೆ ಹೋದಾಗ, ಶಾಲಾ ಮಕ್ಕಳು ನಿಧಿ ಸಂಗ್ರಹಿಸಲು ಸಹಾಯ ಮಾಡಿದರು. ಪ್ರಚಾರಕ್ಕಾಗಿ ಭಾರತದ ಶಾಲಾ ಮಕ್ಕಳು ದೀಪಗಳನ್ನು ತಯಾರಿಸಿ ಹಣ ಸಂಗ್ರಹಿಸಿದ್ದರು. ಸಚಿನ್ ತೆಂಡೂಲ್ಕರ್ ತಮ್ಮ ಬ್ಯಾಟ್ ಅನ್ನು ಹರಾಜಿನಲ್ಲಿ ಹಾಕಿದರು, ಅಮಿತಾಬ್ ಬಚ್ಚನ್ 1 ಲಕ್ಷ ರೂ. ದೇಣಿಗೆ ನೀಡಿದರು ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳು ಸಹಾಯ ಮಾಡಿದ್ದವು. ದೇಶಾದ್ಯಂತ ಬೆಂಬಲವಿದ್ದರೂ ಈ ಚಿತ್ರ ಗೆಲ್ಲಲಿಲ್ಲ.

ವಿಶೇಷವೆಂದರೆ ಮರಾಠಿ ಸಿನಿಮಾ ‘ಶ್ವಾಸ್’ ಆಸ್ಕರ್‌ಗೆ ಹೋದಾಗ, ಶಾಲಾ ಮಕ್ಕಳು ನಿಧಿ ಸಂಗ್ರಹಿಸಲು ಸಹಾಯ ಮಾಡಿದರು.

ಆಸ್ಕರ್ ಗೆದ್ದ ಭಾರತದ ಪ್ರತಿಭೆಗಳು

ಆಸ್ಕರ್ ಪ್ರಶಸ್ತಿಯ ಇತಿಹಾಸದಲ್ಲಿ ಭಾರತೀಯ ಕಲಾವಿದರು ತಮ್ಮದೇ ಆದ ಅಳಿಸಲಾಗದ ಮುದ್ರೆ ಒತ್ತಿದ್ದಾರೆ. ದಶಕಗಳ ಹಿಂದೆಯೇ ಭಾರತಕ್ಕೆ ಮೊದಲ ಆಸ್ಕರ್ ತಂದುಕೊಟ್ಟ ಕೀರ್ತಿ ಭಾನು ಅಥೈಯಾ ಅವರಿಗೆ ಸಲ್ಲುತ್ತದೆ. 1983ರಲ್ಲಿ ತೆರೆಕಂಡ 'ಗಾಂಧಿ' ಚಿತ್ರದ ಅದ್ಭುತ ವಸ್ತ್ರ ವಿನ್ಯಾಸಕ್ಕಾಗಿ ಅವರು ಈ ಗೌರವಕ್ಕೆ ಪಾತ್ರರಾಗುವ ಮೂಲಕ ಭಾರತೀಯ ಚಿತ್ರರಂಗದ ಹೊಸ ಮೈಲಿಗಲ್ಲಿಗೆ ನಾಂದಿ ಹಾಡಿದ್ದರು. ಇದಾದ ನಂತರ 1992ರಲ್ಲಿ ಭಾರತೀಯ ಚಿತ್ರರಂಗದ ದೃಶ್ಯ ವೈಭವವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ನಿರ್ದೇಶಕ ಸತ್ಯಜಿತ್ ರೇ ಅವರಿಗೆ ಅವರ ಜೀವಮಾನದ ಸಾಧನೆಯನ್ನು ಗುರುತಿಸಿ ಗೌರವ ಆಸ್ಕರ್ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು. ಇದು ಭಾರತೀಯ ಸಿನೆಮಾ ಜಗತ್ತಿಗೆ ಸಂದ ದೊಡ್ಡ ಗೌರವವಾಗಿ ಇಂದಿಗೂ ಸ್ಮರಿಸಲ್ಪಡುತ್ತದೆ.

2009ರಲ್ಲಿ 'ಸ್ಲಮ್‌ಡಾಗ್ ಮಿಲಿಯನೇರ್' ಸಿನಿಮಾ ಆಸ್ಕರ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಈ ಚಿತ್ರ ಎರಡು ಆಸ್ಕರ್ ಪ್ರಶಸ್ತಿಗಳನ್ನು ಪಡೆದು ಇತಿಹಾಸ ಬರೆದಿತ್ತು. ಇದೇ ಚಿತ್ರದ 'ಜೈ ಹೋ' ಹಾಡಿನ ಅರ್ಥಪೂರ್ಣ ಸಾಹಿತ್ಯಕ್ಕಾಗಿ ಗುಲ್ಜಾರ್ ಅವರು ಹಾಗೂ ಅತ್ಯುತ್ತಮ ಸೌಂಡ್ ಮಿಕ್ಸಿಂಗ್ ವಿಭಾಗದಲ್ಲಿ ರೆಸೂಲ್ ಪೂಕುಟ್ಟಿ ಅವರು ಆಸ್ಕರ್ ಟ್ರೋಫಿಯನ್ನು ಎತ್ತಿ ಹಿಡಿದರು. ಇನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದ ಕೀರ್ತಿ ಮತ್ತಷ್ಟು ಎತ್ತರಕ್ಕೆ ಏರಿದ್ದು, 2023ರಲ್ಲಿ ರಾಜಮೌಳಿ ನಿರ್ದೇಶನದ 'RRR' ಚಿತ್ರದ 'ನಾಟು ನಾಟು' ಹಾಡಿಗೆ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಹಾಗೂ ಸಾಹಿತಿ ಚಂದ್ರಬೋಸ್ ಆಸ್ಕರ್ ಗೆದ್ದು ವಿಶ್ವವನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದರು. ಇದೇ ವೇಳೆ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ಗುನೀತ್ ಮೋಂಗಾ ಅವರ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರವು ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಗೊಂಡಿತ್ತು.

ಆಸ್ಕರ್‌ ಟ್ರೋಫಿ ವಿನ್ಯಾಸ ಹೇಗಿದೆ?

ಆಸ್ಕರ್ ಟ್ರೋಫಿಯ ವಿನ್ಯಾಸವು ಒಬ್ಬ ಯೋಧ ಐದು ಫಿಲ್ಮ್ ರೀಲ್‌ಗಳ ಮೇಲೆ ನಿಂತು ಕತ್ತಿಯನ್ನು ಹಿಡಿದಿರುವಂತಿದೆ. ಇದು ನಟರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಮತ್ತು ಬರಹಗಾರರನ್ನು ಪ್ರತಿನಿಧಿಸುತ್ತದೆ. 13.5 ಇಂಚು ಎತ್ತರವಿರುವ ಈ ಪ್ರತಿಮೆಯನ್ನು 24 ಕ್ಯಾರೆಟ್ ಚಿನ್ನದ ಲೇಪನದಿಂದ ತಯಾರಿಸಲಾಗುತ್ತದೆ. ಈ ಬಾರಿಯ 98ನೇ ಅವಾರ್ಡ್ಸ್ ಯಾರ ಪಾಲಾಗಲಿದೆ ಎಂಬ ಕುತೂಹಲಕ್ಕೆ ಮಾರ್ಚ್ 16ರಂದು ತೆರೆ ಬೀಳಲಿದೆ.

ಪ್ರದರ್ಶನ ನೀಡಲಿರುವ ಕಲಾವಿದರು ಯಾರು?

ಈ ಭವ್ಯ ಸಂಜೆ ಮತ್ತಷ್ಟು ವಿದ್ಯುನ್ಮಾನಗೊಳ್ಳಲಿದ್ದು, ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಎರಡು ಹಾಡುಗಳ ಪ್ರದರ್ಶನ ಇರಲಿದೆ. ಅವುಗಳೆಂದರೆ 'ಕೆ-ಪಾಪ್ ಡೆಮನ್ ಹಂಟರ್ಸ್' ಚಿತ್ರದ “Golden” ಮತ್ತು 'ಸಿನ್ನರ್ಸ್' ಚಿತ್ರದ “I Lied to You”. ಇವುಗಳೊಂದಿಗೆ ಮೈಲ್ಸ್ ಕೇಟನ್ಕೂಡ ಪ್ರದರ್ಶನ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಅಲ್ಲದೆ, 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ರಾಫೆಲ್ ಸಾದಿಕ್, ಮಿಸ್ಟಿ ಕೋಪ್ಲ್ಯಾಂಡ್ ಮತ್ತು ಗಾಯಕ ಜೋಶ್ ಗ್ರೋಬನ್ ಅವರು ಕೂಡ ಪ್ರದರ್ಶನ ನೀಡಲಿದ್ದಾರೆ.

ಆಸ್ಕರ್ 2026: ಗೌರವ ನಮನ

ಕಳೆದ ವರ್ಷದ ಆಘಾತಕಾರಿ ನಿಧನಗಳ ಹಿನ್ನೆಲೆಯಲ್ಲಿ, ಅಕಾಡೆಮಿ ತಂಡವು ದಂತಕಥೆಯಾದ ಕಲಾವಿದ ರಾಬ್ ರೈನರ್ ಅವರಿಗೆ ಗೌರವ ಸಲ್ಲಿಸುವುದಾಗಿ ಘೋಷಿಸಿದೆ. ಖ್ಯಾತ ನಿರ್ದೇಶಕ ರಾಬ್ ರೈನರ್ ಅವರಿಗೆ ಬಿಲ್ಲಿ ಕ್ರಿಸ್ಟಲ್ ಮತ್ತು ಮೆಗ್ ರಯಾನ್ ಗೌರವ ನಮನ ಸಲ್ಲಿಸಲಿದ್ದಾರೆ. ವರದಿಗಳ ಪ್ರಕಾರ, ಬಾರ್ಬರಾ ಸ್ಟ್ರೈಸಾಂಡ್ ಅವರು ಕೂಡ ರಾಬರ್ಟ್ ರೆಡ್‌ಫೋರ್ಡ್ ಅವರಿಗೆ ಗೌರವಪೂರ್ವಕವಾಗಿ ಪ್ರದರ್ಶನ ನೀಡಲಿದ್ದಾರೆ.

ಪ್ರಶಸ್ತಿ ಪ್ರದಾನ ಮಾಡಲಿರುವ ಪ್ರಿಯಾಂಕಾ ಚೋಪ್ರಾ

2026ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಅಕಾಡೆಮಿಯು ಖ್ಯಾತ ತಾರೆಯರನ್ನೊಳಗೊಂಡ ನಿರೂಪಕರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್, ಜೊಯಿ ಸಲ್ಡಾನಾ, ರಾಬರ್ಟ್ ಡೌನಿ ಜೂನಿಯರ್, ಅನ್ನೆ ಹ್ಯಾಥ್‌ವೇ, ನಿಕೋಲ್ ಕಿಡ್ಮನ್, ಪೆಡ್ರೊ ಪ್ಯಾಸ್ಕಲ್, ಪಾಲ್ ಮೆಸ್ಕಲ್, ಗ್ವಿನೆತ್ ಪಾಲ್ಟ್ರೋ, ಜಿಮ್ಮಿ ಕಿಮ್ಮೆಲ್, ಚೇಸ್ ಇನ್ಫಿನಿಟಿ, ಡೆಮಿ ಮೂರ್, ಕುಮೈಲ್ ನಂಜಿಯಾನಿ, ಡೆಲ್ರಾಯ್ ಲಿಂಡೋ, ಇವಾನ್ ಮೆಕ್‌ಗ್ರೆಗರ್, ವ್ಯಾಗ್ನರ್ ಮೌರಾ, ಬಿಲ್ ಪುಲ್‌ಮನ್, ಲೂಯಿಸ್ ಪುಲ್‌ಮನ್, ಚಾನಿಂಗ್ ಟಾಟಮ್ ಮತ್ತು ಸಿಗೌರ್ನಿ ವೀವರ್ ಸೇರಿದಂತೆ ಹಲವರು ಇದ್ದಾರೆ.

ಭಾರತದಲ್ಲಿ ಆಸ್ಕರ್‌ ಪ್ರಶಸ್ತಿ ಕಾರ್ಯಕ್ರಮ ಎಲ್ಲಿ ನೋಡಬಹುದು?

ಮಾರ್ಚ್ 16ರಂದು ನಡೆಯಲಿರುವ 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭವನ್ನು ಭಾರತದ ವೀಕ್ಷಕರು ಜಿಯೋಹಾಟ್‌ಸ್ಟಾರ್ ಮತ್ತು ಸ್ಟಾರ್ ಮೂವೀಸ್ ಚಾನೆಲ್‌ಗಳಲ್ಲಿ ಬೆಳಗ್ಗೆ ೪:೩೦ಕ್ಕೆ ವೀಕ್ಷಿಸಬಹುದು. ಒಂದು ವೇಳೆ ನೇರಪ್ರಸಾರವನ್ನು ನೋಡಲು ಸಾಧ್ಯವಾಗದಿದ್ದರೆ ಅಂದು ರಾತ್ರಿ 9 ಗಂಟೆಗೆ ಸ್ಟಾರ್ ಮೂವೀಸ್‌ನಲ್ಲಿ ಇದರ ಮರುಪ್ರಸಾರವನ್ನು ನೋಡಲು ಅವಕಾಶವಿದೆ. ಜಾಗತಿಕವಾಗಿ ಅಮೆರಿಕದಲ್ಲಿ ಎಬಿಸಿ ವಾಹಿನಿಯು ಈ ಸಮಾರಂಭವನ್ನು ಬಿತ್ತರಿಸಲಿದ್ದು, ಹೂಲು ಪ್ಲಸ್ ಲೈವ್ ಟಿವಿ, ಯೂಟ್ಯೂಬ್ ಟಿವಿ ಮತ್ತು ಫ್ಯೂಬೋ ಅಪ್ಲಿಕೇಶನ್‌ಗಳ ಮೂಲಕವೂ ಜಗತ್ತಿನಾದ್ಯಂತ ಜನರು ಇದನ್ನು ಲೈವ್ ಸ್ಟ್ರೀಮ್ ಮಾಡಬಹುದಾಗಿದೆ.

Read More
Next Story